ಎಡಿಟೋರಿಯಲ್

ಕುಷ್ಠರೋಗಿಗಳ ಸೇವೆಯೇ ಬದುಕಾಗಿರುವ ಡಾ.ರೇಣುಕಾ ರಾಮಕೃಷ್ಣನ್

ಮಿಳುನಾಡಿನ ಕುಂಭಕೋಣಂನ ಜನಪ್ರಿಯ ಡೆರ್ಮಾಟಾಲಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಲೆಪ್ರಲಾಜಿಸ್ಟ್ (ಕುಷ್ಠರೋಗ ತಜ್ಞೆ) 56 ವರ್ಷ ಪ್ರಾಯದ ಡಾ.ರೇಣುಕಾ ರಾಮಕೃಷ್ಣನ್ ಬಾಲ್ಯದಿಂದಲೂ ತಾನೊಬ್ಬಳು ವೈದ್ಯಾಳಾಗಬೇಕೆಂಬ ಕನಸು ಕಾಣುತ್ತಿದ್ದವರು. ಅವರ ಓರಗೆಯ ಇತರ ಮಕ್ಕಳು ಕುಂಟುಬಿಲ್ಲೆಯಾಡುವುದು, ಆಟಿಕೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವ ಆಟವಾಡುವುದು ಮಾಡುತ್ತಿದ್ದರೆ ರೇಣುಕಾ ರಾಮ ಕೃಷ್ಣನ್ ಪೆನ್ಸಿಲ್, ಕಡ್ಡಿ, ಸಿರಿಂಜ್‌ನಂತೆ ಕಾಣುವ ಬೇರೆ ಇನ್ನೇನನ್ನಾದರೂ ಹಿಡಿದು ಕೊಂಡು ಜೊತೆಗಾರ ಮಕ್ಕಳಿಗೆ, ಕುಟುಂಬದ ಸದಸ್ಯರಿಗೆ ಇಂಜೆಕ್ಷನ್ ಚುಚ್ಚುವ ಆಟವಾಡುತ್ತಿದ್ದರು. ಮುಂದೆ, ಅವರು 16 ವರ್ಷದವರಾಗಿದ್ದಾಗ ನಡೆದ ಒಂದು ಘಟನೆ ತಾನೊಬ್ಬಳು ವೈದ್ಯಳಾಗಬೇಕು ಎಂಬ ಹಂಬಲವನ್ನು ಅವರ ಬದುಕಿನ ಏಕಮೇವ ಗುರಿಯನ್ನಾಗಿ ಬದಲಾಯಿಸಿತು.

ಕುಂಭಕೋಣಂನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ‘ಮಹಾಮಾಘಂ ಮೇಳ’ದ ಸಮಯದಲ್ಲಿ ಅಲ್ಲಿನ ಶಿವ ದೇವಸ್ಥಾನದ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಜನ ಸೇರುತ್ತಾರೆ. ರೇಣುಕಾ ರಾಮಕೃಷ್ಣನ್ ಪ್ರತಿದಿನ ಶಾಲೆಗೆ ನಡೆದು ಹೋಗುವಾಗ ಆ ಕೆರೆಯನ್ನು ಹಾದು ಹೋಗಬೇಕಿತ್ತು. ಒಂದು ದಿನ ಹೀಗೇ ಶಾಲೆಗೆ ಹೋಗುವಾಗ ಕೆರೆಯ ದಂಡೆಯ ಮೇಲೆ ಒಂದಷ್ಟು ಜನ ಗುಂಪುಗೂಡಿ ಏನನ್ನೋ ನೋಡುತ್ತಿದ್ದುದು ಕಾಣಿಸಿತು. ರೇಣುಕಾ ರಾಮಕೃಷ್ಣನ್ ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ, ಕೆರೆಯ ದಂಡೆಯ ಮೇಲೊಂದು ಶವ ಬಿದ್ದಿತ್ತು. ಅದು ಕೈಕಾಲುಗಳು ವಿರೂಪಗೊಂಡ ಒಬ್ಬ ಪುರುಷ ಕುಷ್ಠ ರೋಗಿಯ ಶವ. ಅದರ ಒಂದು ಕೈ ಕೆರೆಯ ನೀರಲ್ಲಿದ್ದು, ದೇಹ ಸಂಪೂರ್ಣ ಬೆತ್ತಲಾಗಿತ್ತು. ನೆರೆದಿದ್ದವರು ಶವದಿಂದ ಆದಷ್ಟು ದೂರ ನಿಂತು ಮೂಗು, ಬಾಯಿ ಮುಚ್ಚಿಕೊಂಡು ಕೆರೆಯ ನೀರು ಅಪವಿತ್ರವಾಯಿತು ಅಂತ ಗೊಣಗುತ್ತಿದ್ದರೇ ವಿನಾ ಯಾರೊಬ್ಬರೂ ಶವದ ಮೇಲೆ ಒಂದು ಬಟ್ಟೆ ತುಂಡನ್ನು ಹಾಕಿ ಮುಚ್ಚುವ ಪ್ರಯತ್ನ ಮಾಡಲಿಲ್ಲ. ರೇಣುಕಾ ರಾಮಕೃಷ್ಣನ್ ಹಿಂದೆ ಮುಂದೆ ಆಲೋಚಿಸದೆ ತನ್ನ ದುಪ್ಪಟ್ಟವನ್ನು ತೆಗೆದು ಶವದ ಸೋಂಟದ ಭಾಗವನ್ನು ಮರೆ ಮಾಡಿದರು. ಶವವನ್ನು ಒಂದು ರಿಕ್ಷಾಕ್ಕೆ ಹಾಕಿ ಸ್ಮಶಾನಕ್ಕೆ ಸಾಗಿಸಲು ಸಹಾಯ ಮಾಡಿ ಎಂದು ಅಂಗಲಾ ಚಿದರೂ ನೆರೆದಿದ್ದವರಲ್ಲಿ ಒಬ್ಬರೂ ಮುಂದೆ ಬರಲಿಲ್ಲ. ಹಲವು ಜನರನ್ನು ಪರಿಪರಿಯಾಗಿ ಬೇಡಿಕೊಂಡಾಗ ಕೊನೆಗೆ ನಾಲ್ವರು ಸೈಕಲ್ ರಿಕ್ಷಾ ಚಾಲಕರು ಸಹಾಯ ಮಾಡಲು ಮುಂದೆ ಬಂದರು.

ರೇಣುಕಾ ರಾಮಕೃಷ್ಣನ್ ಅವರ ಸಹಾಯದಿಂದ ನೀರು ಕುಡಿದು ಕಲ್ಲಿನಂತೆ ಭಾರವಾಗಿದ್ದ ಹೆಣವನ್ನು ಎತ್ತಿಸಿ ತನ್ನ ತೊಡೆಗಳ ಮೇಲೆಯೇ ಅದನ್ನು ಇರಿಸಿಕೊಂಡು, ರಿಕ್ಷಾದಲ್ಲಿ ಕುಳಿತು ಸ್ಮಶಾನಕ್ಕೆ ತೆಗೆದುಕೊಂಡು ಹೋದರೆ ಸ್ಮಶಾನದ ಮೇಲ್ವಿಚಾರಕ ಕುಷ್ಠ ರೋಗಿಯ ಶವವೆಂಬ ಕಾರಣಕ್ಕೆ ಅವರನ್ನು ಸ್ಮಶಾನದೊಳಕ್ಕೆ ಬಿಡಲಿಲ್ಲ. ಆಗ ರೇಣುಕಾ ರಾಮಕೃಷ್ಣನ್ ಹೆಣವನ್ನು ಕುಂಭಕೋಣಂನಿಂದ 30 ಕಿ.ಮೀ. ದೂರದಲ್ಲಿದ್ದ ಇನ್ನೊಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ನಡು ಮಧ್ಯಾಹ್ನವಾಗಿತ್ತು. ಆ ಸ್ಮಶಾನದ ವಯಸ್ಸಾದ ಮೇಲ್ವಿಚಾರಕ, ತರುಣಿಯೊಬ್ಬಳು ಯಾರೂ ದಿಕ್ಕಿಲ್ಲದ ಅಪರಿಚಿತ ಕುಷ್ಠರೋಗಿಯ ಶವಕ್ಕೆ ಗೌರವಯುತ ಅಂತ್ಯ ಸಂಸ್ಕಾರ ನೀಡಲು ಕಷ್ಟಪಡುವುದನ್ನು ಕಂಡು, ಮೆಚ್ಚುಗೆಯ ಮಾತು ಹೇಳಿ, ಅವರ ಕಾಲಿಗೆ ಬೀಳಲು ಮುಂದಾದನು. ಆದರೆ, ರೇಣುಕಾ ರಾಮಕೃಷ್ಣನ್ ಅವನನ್ನು ತಡೆದು ತಂದೆ ತನಗೆ ಕೊಟ್ಟಿದ್ದ 10 ರೂ.ಗಳನ್ನು ಆತನಿಗೆ ಕೊಟ್ಟು, ಶವದ ಅಂತ್ಯಕ್ರಿಯೆ ನಡೆಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆದರೆ, ಆತ ಹಣ ತೆಗೆದುಕೊಳ್ಳಲು ನಿರಾಕರಿಸಿ, ತಾನೇ ಎಲ್ಲ ವಿಧಿವಿಧಾನಗಳನ್ನು ನೆರವೇರಿಸುತ್ತಾನೆ. ರೇಣುಕಾ ರಾಮಕೃಷ್ಣನ್ ಒಬ್ಬಳು ಸಂಬಂಧಿಕಳಂತೆ ಆ ಶವದ ಅಂತ್ಯ ಸಂಸ್ಕಾರದಲ್ಲಿ ತಾನೂ ಭಾಗಿಯಾಗುತ್ತಾರೆ.

ರೇಣುಕಾ ರಾಮಕೃಷ್ಣನ್ ಮನೆಗೆ ಬಂದು, ತಂದೆಗೆ ನಡೆದುದನ್ನೆಲ್ಲ ವಿವರಿಸಿದರು. ಅವರ ತಂದೆ ಭಾರತೀಯ ಸೇನೆಯಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್ ಆಗಿದ್ದವರು. ಅವರು, ‘ತುಂಬಾ ಒಳ್ಳೆಯ ಕೆಲಸ ಮಾಡಿದೆ. ಆ ಸ್ಮಶಾನದವನೇನು, ನನಗೇ ನಿನ್ನ ಕಾಲಿಗೆ ಬೀಳಬೇಕೆನಿಸುತ್ತದೆ. ಆದರೆ, ಸದ್ಯ ಈ ವಿಚಾರವನ್ನು ಮತ್ಯಾರಿಗೂ ಹೇಳಬೇಡ. ಹೇಳಿದರೆ ಅವರು ನಿನ್ನನ್ನು ಬಹಿಷ್ಕರಿಸುತ್ತಾರೆ. ನೀನು ನನಗೊಂದು ಭಾಷೆ ಕೊಡಬೇಕು. ಏನೆಂದರೆ, ಮುಂದೆ ನೀನು ಏನು ಬೇಕಾದರೂ ಆಗು, ಎಷ್ಟು ಡಿಗ್ರಿಗಳನ್ನು ಬೇಕಾದರೂ ಪಡೆ, ಆದರೆ, ನಿನ್ನ ಬದುಕನ್ನು ಕುಷ್ಠರೋಗಿಗಳ ಸೇವೆಗೆ ಮುಡುಪಾಗಿರಿಸುತ್ತೇನೆ ಅಂತ ಮಾತು ಕೊಡು’ ಎಂದು ಹೇಳುತ್ತಾರೆ. ಅದರಂತೆಯೇ ರೇಣುಕಾ ರಾಮಕೃಷ್ಣನ್ ಮುಂದೆ ತಾನೊಬ್ಬಳು ಡೆರ್ಮಾಟಾಲಜಿಸ್ಟ್ ಅಥವಾ ಲೆಪ್ರೋಲಾಜಿಸ್ಟ್ ಆಗಿ, ಕುಷ್ಠ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಕುಷ್ಠರೋಗದ ಬಗ್ಗೆ ಜನರಿಗಿರುವ ತಪ್ಪು ನಂಬಿಕೆಗಳನ್ನು ಹೋಗಲಾಡಿಸುವುದನ್ನೇ ತನ್ನ ಬದುಕಿನ ಉದೇಶವಾಗಿರಿಸಿಕೊಳ್ಳುತ್ತೇನೆಂದು ತಂದೆಗೆ ಮಾತು ಕೊಡುತ್ತಾರೆ.

ಮುಂದೆ, ರೇಣುಕಾ ರಾಮಕೃಷ್ಣನ್ ಪಾಂಡಿಚೇರಿಯ ಜೆಐಪಿಎಮ್‌ಇಆರ್‌ನಲ್ಲಿ ಪೋಸ್ಟ್ ಗ್ರ್ಯಾಜುಯೇಷನ್ ಮುಗಿಸಿ, ಒಂದು ಸರ್ಕಾರಿ ಉದ್ಯೋಗ ಸಿಕ್ಕರೂ ಅದನ್ನು ನಿರಾಕರಿಸಿ, ತಿರುವಣ್ಣಾಮಲೈ ಜಿಲ್ಲೆಯ ಚೇತ್ತುಪಟ್ಟು ಎಂಬ ಚಿಕ್ಕ ಗ್ರಾಮದಲ್ಲಿದ್ದ ‘ಸೇಂಟ್ ಥಾಮಸ್ ಹಾಸ್ಪಿಟಲ್ ಆಂಡ್ ಲೆಪ್ರಸಿ ಸೆಂಟರ್’ನಲ್ಲಿ ವೈದ್ಯಕೀಯ ಅಧಿಕಾರಿಯಾಗುತ್ತಾರೆ. ಅದು, ಹೆಚ್ಚಿನ ವೈದ್ಯರು ಕೆಲಸ ಮಾಡಲು ನಿರಾಕರಿಸುವಂತಹ ಒಂದು ಕುಗ್ರಾಮ. ಅಲ್ಲಿ ರೇಣುಕಾ ರಾಮಕೃಷ್ಣನ್ ಹಗಲು ಶಿಫ್ಟ್ ಅಲ್ಲದೆ ರಾತ್ರಿ ಶಿಫ್ಟ್‌ನಲ್ಲೂ ಕೆಲಸ ಮಾಡಿದರು. ರಾತ್ರಿ ಶಿಫ್ಟ್ ಕೆಲಸಕ್ಕೆ ಸಿಗುತ್ತಿದ್ದ ಹೆಚ್ಚಿನ ಭತ್ಯೆಯನ್ನು ಹಗಲು ಹೊತ್ತಲ್ಲಿ ಚಿಕಿತ್ಸೆಗೆ ಬರುತ್ತಿದ್ದ ಕುಷ್ಠರೋಗಿಗಳ ವಿಶೇಷ ಉಪಚಾರಕ್ಕೆ, ಅವರ ಮಕ್ಕಳ ವಿದ್ಯಾ ಭ್ಯಾಸಕ್ಕೆ ಬಳಸುತ್ತಿದ್ದರು. ಹಳ್ಳಿಗಳ ಒಳಗೆ ಹೋಗಿ ಮನೆಮನೆಗಳಿಗೂ ಭೇಟಿ ಕೊಟ್ಟು ಜನರಿಗೆ ಕುಷ್ಠರೋಗದ ಜೊತೆ ಎಚ್‌ಐವಿ, ಏಡ್ಸ್ ಮೊದಲಾದ ರೋಗಗಳ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡಿದರು.

ಮುಂದೆ, ಮದುವೆಯಾಗುವಾಗ ತನ್ನ ಭಾವೀ ಪತಿಗೆ ತಾನು ಯಾವತ್ತೂ ಕುಷ್ಠ ರೋಗಿಗಳ ಆರೈಕೆ ಮಾಡುವ ಕೆಲಸವನ್ನೇ ಮಾಡುತ್ತೇನೆ ಎಂಬ ಷರತ್ತು ಹಾಕಿ, ಅದರಂತೆಯೇ ಮದುವೆಯ ನಂತರ ಚೆನ್ನೆ ಯ ಶೆಣೈ ನಗರದ ಒಂದು ಕುಷ್ಠರೋಗಿಗಳ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರುತ್ತಾರೆ. ರೇಣುಕಾ ರಾಮ ಕೃಷ್ಣನ್ ಕುಷ್ಠರೋಗಿಗಳಿಗೆ ತಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಮುಡುಪಾಗಿರಿಸಿದ್ದಾರೆಂದರೆ, ಅವರು ಗರ್ಭಿಣಿಯಾಗಿದ್ದಾಗಲೂ ಆಸ್ಪತ್ರೆಗೆ ಹೋಗಿ ಕುಷ್ಠರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲೂ ಸಕ್ರಿಯರಾಗಿರುವ ರೇಣುಕಾ ರಾಮಕೃಷ್ಣನ್, ಎಲ್ಲ ಸಂದರ್ಶನಗಳಲ್ಲಿಯೂ ತಮ್ಮ ಫೋನ್ ನಂಬರನ್ನು ಹೇಳಿ ಕುಷ್ಠರೋಗಿಗಳಾಗಲೀ, ಟ್ರಾನ್ಸ್‌ಜೆಂಡರ್‌ಗಳಾಗಲೀ ಅಥವಾ ಕಷ್ಟದಲ್ಲಿರುವ ಇನ್ಯಾರೇ ಆಗಲಿ, ಯಾವ ಹೊತ್ತಿನಲ್ಲಾದರೂ ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸಲು ಹೇಳುತ್ತಾರೆ.

ರೇಣುಕಾ ರಾಮಕೃಷ್ಣನ್ ಮದರ್ ಥೆರೇಸಾರ ಕಡು ಅಭಿಮಾನಿ. ಅವರೀಗ ಕೆಲಸ ಮಾಡುತ್ತಿರುವ ಸ್ಥಳಕ್ಕೆ ಮದರ್ ಥೆರೇಸಾ ಹಿಂದೊಮ್ಮೆ ಭೇಟಿ ಕೊಟ್ಟಿದ್ದನ್ನು ಅವರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಮದರ್ ಥೆರೇಸಾ ಪ್ರಾರ್ಥನೆ ಮಾಡಿದ್ದ ಹತ್ತಿರದ ಚರ್ಚಿಗೆ ಹೋಗಿ ತಾವೂ ಪ್ರಾರ್ಥನೆ ಮಾಡಿದಾಗ ತನಗೇನೋ ಅವ್ಯಕ್ತವಾದ ಸಂತೋಷವಾಗುತ್ತದೆ ಎಂದು ಹೇಳುತ್ತಾರೆ. ಪ್ರತಿದಿನ ಮದರ್ ಥೆರೇಸಾರ ಯಾವುದಾದರೂ ಒಂದು ಸ್ಛೂರ್ತಿದಾಯಕ ಮಾತನ್ನು ಓದಿ, ಅದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ತನ್ನೆಲ್ಲ ಯೋಚನೆ ಮತ್ತು ಯೋಜನೆಗಳನ್ನು ಸಾಕಾರಗೊಳಿಸಲು ತನ್ನ ಪತಿಯೊಂದಿಗೆ ‘ಮಂಗಳ ಟ್ರಸ್ಟ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಯಾರಿಂದಲೂ ಬಿಡಿಗಾಸನ್ನೂ ದೇಣಿಗೆ ಪಡೆಯದೆ ‘ಮಂಗಳ ಟ್ರಸ್ಟ್’ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಕಾಯಕವನ್ನು ಮಾಡುತ್ತಿದೆ.

lokesh

Recent Posts

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…

2 hours ago

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

2 hours ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

2 hours ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

2 hours ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

4 hours ago