ಎಡಿಟೋರಿಯಲ್

ಡಾ. ಅಂಬೇಡ್ಕರ್ ರವರು ರಾಷ್ಟೀಯ ಚಳುವಳಿಯ ಭಾಗವಲ್ಲವೆ?

ಮಲ್ಕುಂಡಿ ಮಹದೇವಸ್ವಾಮಿ

ಈ ಸನ್ನಿವೇಶವನ್ನೊಮ್ಮೆ ಓದಿಬಿಡಿ…

ಡಾ. ಅಂಬೇಡ್ಕರ್ ಅವರು ೩೭೦ ನೇ ವಿಧಿಯ ಬಗ್ಗೆ ಶೇಖ್ ಅಬ್ದುಲ್ಲಾ ಅವರಿಗೆ ಬರೆಯುತ್ತಾ- ‘ಭಾರತವು ನಿಮ್ಮ ಗಡಿಗಳನ್ನು ರಕ್ಷಿಸಬೇಕು, ನಿಮ್ಮ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಬೇಕು, ನಿಮಗೆ ಆಹಾರ ಧಾನ್ಯಗಳನ್ನು ಪೂರೈಸಬೇಕು ಮತ್ತು ಕಾಶ್ಮೀರವು ಭಾರತದ ಸಮಾನ ಸ್ಥಾನಮಾನವನ್ನು ಪಡೆಯಬೇಕು ಎಂದು ನೀವು ಬಯಸುತ್ತೀರಿ. ಆದರೆ ಭಾರತ ಸರ್ಕಾರವು ಸೀಮಿತ ಅಧಿಕಾರವನ್ನು ಹೊಂದಿರಬೇಕು ಮತ್ತು ಭಾರತೀಯ ಜನರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕು ಇರಬಾರದು. ಈ ನಿಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದು ಭಾರತದ ಹಿತಾಸಕ್ತಿಗೆ ವಿರುದ್ಧವಾದ ವಿಶ್ವಾಸಘಾತುಕ ಸಂಗತಿಯಾಗಿದೆ ಮತ್ತು ಭಾರತದ ಕಾನೂನು ಸಚಿವನಾಗಿ ನಾನು ಅದನ್ನು ಎಂದಿಗೂ ಮಾಡುವುದಿಲ್ಲ.’

ಹಾಗೆಯೇ ಈ ಇಬ್ಬರ ಮಾತುಗಳನ್ನು ನಿಮ್ಮ ಮುಂದಿಡುತ್ತೇನೆ.
ಸ್ವದೇಶ್ ಸಿಂಗ್ ಅವರು ಬರೆಯುತ್ತಾ- ‘ಡಾ.ಅಂಬೇಡ್ಕರ್ ಅವರು ಭಾರತೀಯ ಸಮಾಜದ ಅತ್ಯಂತ ದೀನದಲಿತ ಮತ್ತು ವಂಚಿತ ವರ್ಗಗಳೊಂದಿಗೆ ನಿಂತರು; ಈ ವರ್ಗಗಳು ಸಾರ್ವಜನಿಕ ಜೀವನದಲ್ಲಿ ಧ್ವನಿ ಇಲ್ಲದ ವಿಭಾಗಗಳು. ಅಂಬೇಡ್ಕರ್ ಅವರು ಈ ವಿಭಾಗಗಳನ್ನು ಸಾಮಾಜಿಕವಾಗಿ ಕ್ರೋಢೀಕರಿಸಿದ್ದು, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗೆ ಸಹಾಯ ಮಾಡಿತು. ಕರಡು ಸಮಿತಿಯ ಅಧ್ಯಕ್ಷರಾಗಿ, ಅಂಬೇಡ್ಕರ್ ಅವರು ಬಲಿಷ್ಠ ರಾಷ್ಟ್ರ-ರಾಜ್ಯವನ್ನು ಪ್ರತಿಪಾದಿಸಿದರು’.

ಶ್ರೀ ಅರವಿಂದೋ, ಗಾಂಧಿ, ನೆಹರು, ತಿಲಕ್, ಟ್ಯಾಗೋರ್ ಮತ್ತು ದೀನ್ ದಯಾಳ್ ಉಪಾಧ್ಯಾಯರು, ಭಗತ್ ಸಿಂಗ್, ಬೋಸ್‌ರಂತಹ ಅನೇಕ ಭಾರತೀಯ ನಾಯಕರು ಭಾರತೀಯ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಪರಿಶೀಲಿಸಿದಂತೆ, ಡಾ. ಅಂಬೇಡ್ಕರ್‌ರವರೂ ರಾಷ್ಟೀಯತೆಯ ಕಲ್ಪನೆಯನ್ನು ಮೂಡಿಸಿದರು.

ಕಳೆದ ಬಾರಿ ಶಾಲೆಯ ಶಿಕ್ಷಕರೊಬ್ಬರನ್ನು ಸ್ವಾತಂತ್ರ್ಯ ದಿನಾಚರಣೆ ದಿನ ಅಂಬೇಡ್ಕರ್ ಫೋಟೋ ಯಾಕೆ ಇಟ್ಟಿಲ್ಲ? ಎಂದು ಕೇಳಿದಾಗ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಉತ್ತರಿಸಿದ್ದರು. ಆನಂತರ ಏನಾಯಿತು ಇದಲ್ಲವೂ ನಿಮಗೆ ತಿಳಿದಿದೆ.

ಅವರ ಉತ್ತರಕ್ಕೆ ಮತ್ತು ಅಂತಹ ಮನಸ್ಥಿತಿಯುಳ್ಳವರಿಗೆ ನಾನೊಂದಿಷ್ಟ ಪ್ರಶ್ನೇ ಕೇಳಬೇಕಿನಿಸಿ, ನಿಮ್ಮ ಮುಂದಿಟ್ಟಿದ್ದೇನೆ.
ಅಂತಹವರಿಗೆ ನೀವು ಕೂಡಾ ಈ ಪ್ರಶ್ನೆಗಳನ್ನು ಕೇಳಬಹುದು.

ಅಂಬೇಡ್ಕರವರು ನಿಮಗೆ ರಾಷ್ಟೀಯ ಚಳುವಳಿಯ ಭಾಗವಾದ ಕಾಲ್ನಡಿಗೆ, ಮುಷ್ಕರ, ಹರತಾಳ, ಉಪವಾಸ, ಜಾಥ, ಸತ್ಯಾಗ್ರಹಗಳಲ್ಲಿ ಕಾಣದೆ ಇರಬಹುದು, ಆದರೆ ಆ ಕಾಲದಲ್ಲಿ ರೂಪಿತಗೊಂಡ ಕಾಯ್ದೆಗಳಲ್ಲಿ ಕಾಣಸಿಗುತ್ತಾರೆ. ಆ ಕಾಲದಲ್ಲಿ ರೂಪಿತಗೊಂಡ ಕಾಯಿದೆಗಳು, ಸ್ವತಂತ್ರ ಚಳುವಳಿಯ ಭಾಗ ಅಲ್ಲವೇ?

ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲರ ಮೂವತ್ತು ವರ್ಷದ ಹೋರಾಟದ ಪ್ರತಿಫಲ ಅಲ್ಲಿನ ಜನರಿಗೆ ವೋಟು ಮಾಡುವ ಸ್ವಾತಂತ್ರ್ಯ ಬಂತು. ಭಾರತ ದೇಶದಲ್ಲಿ ಯಾವುದೇ ಹೋರಾಟವಿಲ್ಲದೆ, ಯಾರೂ ಕಾರಗೃಹಕ್ಕೆ ಹೋಗದೆ. ಸರ್ವ ಭಾರತೀಯರಿಗೆ ಓಟು ಮಾಡವ ಸ್ವಾತಂತ್ರ್ಯ ಬಂತು. ಇದು ಸಾಧ್ಯವಾಗಿದ್ದು ದುಂಡು ಮೇಜಿನ ಸಭೆಗಳಲ್ಲಿ ಡಾ. ಅಂಬೇಡ್ಕರ್‌ರವರ ಸಮರ್ಥನೆಗಳಿಂದ. ಪ್ರತಿ ಭಾರತೀಯನಿಗೆ ವೋಟು ಹಾಕುವ ಈ ಸ್ವಾತಂತ್ರ್ಯ ದಕ್ಕಿದ್ದು ಮತ್ತು ೧೯೩೫ ರ ಕಾಯಿದೆ ಭಾರತದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದಿದ್ದು, ಸ್ವತಂತ್ರ ಚಳುವಳಿ ಅಲ್ಲವೆ?

ಇತರರು ೨೦೦ ವರ್ಷಗಳ ಗುಲಾಮಗಿರಿಯಿಂದ ಭಾರತವನ್ನು ಬಿಡಿಸಲು ಹೋರಾಡಿದರೆ, ಡಾ. ಅಂಬೇಡ್ಕರ್ ೨೦೦೦ ವರ್ಷಗಳ ಗುಲಾಮಗಿರಿಯಿಂದ ಭಾರತೀಯರನ್ನು ಬಿಡಿಸಲು ಹೋರಾಡಿದರು. ಹಾಗಾಗಿಯೆ ಅಂಬೇಡ್ಕರ್‌ರವರು ಎರಡು ಸ್ವಾತಂತ್ರ್ಯಗಳ ಬಗ್ಗೆ ಏಕಕಾಲದಲ್ಲಿ ಹೋರಾಡಬೇಕಿತ್ತು. ಒಂದು, ದೇಶದ ಸ್ವಾತಂತ್ರ್ಯ ಮತ್ತೊಂದು ಯಾರೂ ಸಹಾ ಹೋರಾಡದಿದ್ದ ಶೋಷಿತ ಸಮುದಾಯಗಳ ಸ್ವಾತಂತ್ರ್ಯ.

ಅಂಬೇಡ್ಕರ್‌ರವರ ಸ್ವಾತಂತ್ರ್ಯ ಬಗ್ಗೆ ವ್ಯಾಖ್ಯಾನಿಸಿದ ೪ ಮಾತುಗಳನ್ನಷ್ಟೇ ನಿಮ್ಮ ಮುಂದಿಡುವೆ. ಗಮನಿಸಿ,

‘ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ, ಸರಪಳಿ ಕೈಯಲ್ಲಿಲ್ಲದಿದ್ದರೂ ಮನಸ್ಸು ಮುಕ್ತವಾಗಿರದ ವ್ಯಕ್ತಿ ಗುಲಾಮ. ಸ್ವಾತಂತ್ರ್ಯ ಮನುಷ್ಯನಲ್ಲ. ಯಾರ ಮನಸ್ಸು ಸ್ವತಂತ್ರವಾಗಿಲ್ಲ ಅವನು ಜೈಲಿನಲ್ಲಿ ಇಲ್ಲದಿದ್ದರೂ ಖೈದಿಯೇ, ಜೀವಂತವಾಗಿದ್ದರೂ ಮನಸ್ಸು ಮುಕ್ತವಾಗಿಲ್ಲದವನು ಸತ್ತವರಿಗಿಂತ ಉತ್ತಮನಲ್ಲ. ಮನಸ್ಸಿನ ಸ್ವಾತಂತ್ರ್ಯವು ಒಬ್ಬರ ಅಸ್ತಿತ್ವದ ಪುರಾವೆಯಾಗಿದೆ’.

‘ಮನುಷ್ಯ ಸನ್ನಿವೇಶಗಳ ಗುಲಾಮನಾಗಬಾರದು. ಅವುಗಳನ್ನು ತನ್ನ ಪರವಾಗಿ ಬದಲಾಯಿಸಲು ಶ್ರಮಿಸಬೇಕು, ಅಂತಹವನನ್ನು ನಾನು ಮುಕ್ತ ಎನ್ನುತ್ತೇನೆ.’

‘ಪದ್ದತಿಗಳು, ಅರ್ಥಹೀನ ಆಚರಣೆಗಳು, ಮೂಢ ನಂಬಿಕೆಗಳು, ಹೀನ ಸಂಪ್ರದಾಯಗಳ ಗುಲಾಮನಲ್ಲದವನು, ಯಾರ ಜ್ವಾಲೆಗೂ ನಂದಿಸಲ್ಪ ಪಡದವನನ್ನು ನಾನು ಸ್ವಾತಂತ್ರ್ಯ ಮನುಷ್ಯ ಎನ್ನುತ್ತೇನೆ.’

‘ಕೇವಲ ರಾಜಕೀಯ ಲಾಭಕ್ಕಾಗಿ ಸ್ವಾತಂತ್ರ್ಯವಿದ್ದರೆ ಸಾಕಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕನೂ ಧಾರ್ಮಿಕ ಮತ್ತು ರಾಜಕೀಯ ಹಕ್ಕುಗಳನ್ನು ಹೊಂದಿರುವ , ಭಾರತೀಯ ರಾಷ್ಟ್ರವನ್ನು ಹೊಂದುವುದು ಅತ್ಯಗತ್ಯವಾಗಿದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿ ಅಭಿವೃದ್ಧಿ ಹೊಂದುತ್ತಾನೆ.’

ಡಾ. ಅಂಬೇಡ್ಕರ್‌ರವರ ನಿಲುವು ಹೀಗಿರುವಾಗ ಅಂದಿನ ರಾಷ್ಟೀಯ ಚಳುವಳಿಯಲ್ಲಿ ಏಕಕಾಲದಲ್ಲಿ ೪ ಪ್ರಬಲ ಹೋರಾಟಗಳಿದ್ದವು.
ಒಂದು- ರಾಷ್ಟ್ರೀಯ ಕಾಂಗ್ರೆಸ್, ಬ್ರಿಟೀಶ್ ವಸಾಹತುಗಳಿಂದ ಸ್ವಾತಂತ್ರ್ಯ ಕ್ಕೆ ಒತ್ತು ನೀಡಿದ ಹೋರಾಟ.

ಎರಡು- ಆರೆಸ್ಸೆಸ್ ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಮೂಲಕ ಮೂಲ ರಾಷ್ಟ್ರೀಯತೆಯ ವಾದವನ್ನ ಬಲಪಡಿಸುತ್ತಿದ್ದ ಹೋರಾಟ.

ಮೂರು-ಮುಸ್ಲೀಮರ ಮತೀಯವಾದದ ಹೋರಾಟ.

ನಾಲ್ಕು-ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯಿಂದ ಭಾರತವನ್ನು ಮುಕ್ತವಾಗಿಸಿ ’ಸಮಾನತೆ ಸ್ವಾತಂತ್ರ್ಯದ’ ಡಾ. ಅಂಬೇಡ್ಕರ್‌ರವರ ಸಬಾಲ್ಟ ರ್ನ್ ಹೋರಾಟ.

ಅದಕ್ಕೆ ಡಾ. ಅಂಬೇಡ್ಕರರವರು ೬೦ ಮಿಲಿಯನ್ ಜನರ ವಿಮೋಚನೆ ಇಲ್ಲದೆ ಭಾರತೀಯ ಸ್ವಾತಂತ್ರ್ಯ ಹೋರಾಟವು ಪರಿಪೂರ್ಣವಾಗಲಾರದು ಎಂದು ವಾದಿಸಿದರು.

ಆದರೆ ಮೇಲಿನ ಮೂರು ಹೋರಾಟಗಳ ನೇತೃತ್ವಕ್ಕೆ ಸಿಕ್ಕ ಬೆಂಬಲ, ಪ್ರಚಾರ, ಸಹಾಯ ಡಾ. ಅಂಬೇಡ್ಕರ್‌ರ ಹೋರಾಟಕ್ಕೆ ಸಿಗಲಿಲ್ಲ.
ಅವರ ಹಿಂದೆ ಅಸಂಖ್ಯಾತ ಅಮಾಯಕರಿದ್ದರೂ, ಪ್ರಬಲ ಜನವರ್ಗ ಇರಲಿಲ್ಲ. ಆದರೆ ಅವರ ಪ್ರಬಲ ಜ್ಞಾನ ಇತ್ತು. ಅವರ ಜ್ಞಾನವೇ ಅವರನ್ನು ಏಕಾಂಗಿಯಾಗಿ ನಿಂತರೂ ಪ್ರಬಲವಾಗಿಸಿತು.

ಡಾ. ಅಂಬೇಡ್ಕರ್ ಅವರಿಗೆ ಈ ದೇಶದ ಉಜ್ವಲ ಭವಿಷ್ಯ ಮತ್ತು ವಿಕಾಸದ ಬಗ್ಗೆ ಅಪಾರ ನಂಬಿಕೆಯಿತ್ತು. ಅವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಾಧಿಸುವ ರಾಷ್ಟ್ರೀಯತೆಯ ಮೆಲೆ ಒಂದು ‘ಇಸಂ’ ಇತ್ತು. ಅದು, ಮಾನವತಾವಾದ, ಸಮಾನತೆ ಮತ್ತು ಸ್ವಾತಂತ್ರ್ಯ. ಈ ತತ್ವಗಳ ಆಧಾರದ ಮೇಲೆಯೇ ಸ್ವಾತಂತ್ರ್ಯವನ್ನು ರೂಪಿಸಬೇಕೆಂಬ ಪರಿಕಲ್ಪನೆ ಇತ್ತು. ಹಾಗಾಗಿಯೇ ಅವರು ‘ಸಮಾನತೆ ಇಲ್ಲದ ಸ್ವಾತಂತ್ರ್ಯ ವ್ಯರ್ಥ’ ಎಂದರು.

ರಾಷ್ಟ್ರೀಯ ಚಳುವಳಿಯ ಒಟ್ಟೊಟ್ಟಿಗೆ ಬೆಳೆದು ಬಂದು ಭಾರತವನ್ನು ಆಂತರಿಕವಾಗಿ ಗಟ್ಟಿಗೊಳಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಬೇಡ್ಕರ್‌ರ ಪರಿಕಲ್ಪನೆ ಕೂಸಲ್ಲವೆ? ‘ಯಂಗ್ ಇಲ್ಟನ್ ಆಯೋಗ’ ದಿ ಪ್ರಾಬ್ಲಮ್ ಆಫ್ ರುಪಿ ಎಂಬ ಅವರ ಸಂಶೋಧನಾ ಕೃತಿಯ ಆಧಾರದ ಮೇಲೆ ರೂಪಿತವಾಗಿರವಾಗ ಆರ್‌ಬಿಐ ಭಾರತದಲ್ಲಿ ರಾಷ್ಟೀಯ ಚಳವಳಿಯಲ್ಲಿ ಪ್ರಭಾವ ಬೀರಿಲ್ಲವೆ?

ಅಂಬೇಡ್ಕರವರು ಬ್ರಿಟಿಷ್ ಕೌನ್ಸಿಲ್ ನ ಮಂತ್ರಿಯಾಗಿ ಜಾರಿಗೆ ತಂದ ಕೈಗಾರಿಕ ನೀತಿ, ಕೃಷಿ ನೀತಿ, ತೆರಿಗೆ ನೀತಿ,ಕಾರ್ಮಿಕ ನೀತಿಗಳು ಸ್ವಾತಂತ್ರ್ಯದ ನಂತರ ಭಾರತ ಅಳವಡಿಸಿಕೊಳ್ಳಬೇಕಿದ್ದ ಪ್ರಗತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಅಳವಡಿಸಿಕೊಂಡಿದ್ದು ರಾಷ್ಟೀಯ ಚಳುವಳಿಗೆ ಪೂರಕವಲ್ಲವೆ?

ಲಿಂಗ ತಾರತಮ್ಯದಿಂದ ಬಿಡಿಸಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ದುಡಿಯುವ ವರ್ಗಗಳಿಗೆ ಸಮಾನ ಕೂಲಿ, ಸಮಾನ ವೇತನ, ಮತ್ತು ದುಡಿತದ ಸಮಯವನ್ನು ನಿಗದಿಪಡಿಸಿ, ಮಹಿಳೆಯರಿಗಾಗಿ ಹೆರಿಗೆ ಭತ್ತೆ, ಮಹಿಳೆಯರು ಗಣಿಗಳಲ್ಲಿ ಕಾರ್ಮಿಕರಾಗಿ ದುಡಿಯುವುದರ ನಿಷೇಧ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದಂತಹ, ಮಾನವೀಯ ಹಕ್ಕುಗಳಿಗಾಗಿ ಹೋರಾಡಿದ ಅಂಬೇಡ್ಕರ್‌ರವರ ಸ್ವಾತಂತ್ರ್ಯದ ಕಲ್ಪನೆಗಳು ರಾಷ್ಟೀಯ ಚಳುವಳಿಯ ಕಾಲಘಟ್ಟದಲ್ಲಿ ಜೊತೆ ಜೊತೆಗೆ ಹೊರ ಹೊಮ್ಮಿದವು.

ಈ ಮಾನವ ಹಕ್ಕುಗಳನ್ನು ಸ್ವಾತಂತ್ರ್ಯ ಎಂದು ಭಾವಿಸದಿದ್ದಲ್ಲಿ, ಈ ಹೋರಾಟವನ್ನು ಸ್ವಾತಂತ್ರ್ಯ ಹೋರಟ ಎಂದು ಭಾವಿಸದಿದ್ದಲ್ಲಿ ಏನು ಹೇಳುವುದು? ಹೇಳಿ.

 

andolana

Recent Posts

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

1 min ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

17 mins ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

40 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

50 mins ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

56 mins ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

2 hours ago