ಹೊಸ ವರ್ಷಾರಂಭದ ಹೊತ್ತಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಜ್ಯದಲ್ಲಿ ಹೊಸ ಸರ್ಕಾರ ಬರಲು ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಬೆನ್ನಲ್ಲೇ, ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮತ್ತು ನಮ್ಮ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನಾ ಮುಂದು-ತಾ ಮುಂದು ಎಂದು ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಆರೋಪ-ಪ್ರತ್ಯಾರೋಪದ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಎದುರಾಳಿಗಳ ಮೇಲೆ ಅರೋಪ ಮಾಡುವಾಗ ವೈಯಕ್ತಿಕ ನಿಂದನೆ, ತೇಜೋವಧೆಗಿಳಿದು ಸಭ್ಯತೆಯ ಎಲ್ಲೆ ಮೀರದೆ ಅಭಿವೃದ್ಧಿ ವಿಚಾರಗಳು ಚರ್ಚೆಯಾಗಿ ಕರ್ನಾಟಕ ರಾಜಕಾರಣ ದೇಶಕ್ಕೆ ಮಾದರಿ ಎಂಬುದನ್ನು ತೋರಿಸಬೇಕಿದೆ.
ಕೇವಲ ಮತಗಳಿಕೆಗಾಗಿ ಒಂದು ಧರ್ಮದವರನ್ನು ಇನ್ನೊಂದು ಧರ್ಮೀಯರ ವಿರುದ್ಧ ಎತ್ತಿಕಟ್ಟಿ ಧರ್ಮ-ಧರ್ಮಗಳ ಮಧ್ಯೆ ಕಿಚ್ಚು ಹಚ್ಚುವುದು, ಧಾರ್ಮಿಕ ವಿಚಾರಗಳನ್ನು ಮುಂದೆ ಮಾಡಿ ಅಭಿವೃದ್ಧಿ ವಿಚಾರಗಳನ್ನು ನಗಣ್ಯ ಮಾಡುವುದು ಖಂಡನೀಯ.
ನಮ್ಮನ್ನು ಆಳುವ ಜನಪ್ರತಿನಿಧಿಗಳಿರಲಿ, ರಾಜಕೀಯ ನಾಯಕರೇ ಆಗಲಿ ಸಾರ್ವಜನಿಕವಾಗಿ ಮಾತ್ರವಲ್ಲ, ಖಾಸಗಿಯಾಗಿಯೂ ಮಾತನಾಡಲು ಹಿಂದು-ಮುಂದು ನೋಡಬೇಕಾದ ಕಾಲವಿದು. ಅಷ್ಟರ ಮಟ್ಟಿಗೆ ಆಧುನಿಕ ತಂತ್ರಜ್ಞಾನದ ಕಣ್ಗಾವಲು ನಮ್ಮ ಮೇಲಿದೆ. ಹಿಂದೆಲ್ಲಾ ನಾಯಕರ ಭಾಷಣಗಳು ಎದುರಿಗಿದ್ದ ನಾಲ್ಕಾರು ಜನರ ಕಿವಿಗಷ್ಟೇ ಬೀಳುತ್ತಿತ್ತು. ಆದರೆ, ಕಾಲ ಹಿಂದಿನಂತಿಲ್ಲ. ಮಾಧ್ಯಮಗಳ ಭರಾಟೆಯ ಜತೆಗೆ ಎಲ್ಲರ ಕೈಯಲ್ಲೂ ಕುಣಿಯುತ್ತಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳು ಯಾವುದೇ ವ್ಯಕ್ತಿಯ ಖಾಸಗಿತನದ ಮೇಲೂ ಕಣ್ಣಿರಿಸುತ್ತಿದೆ. ಇದರಿಂದ ಕಾಲು ಜಾರಿದರೆ ಕೆಲವೇ ಸೆಕೆಂಡುಗಳಲ್ಲಿ ಜಗತ್ತಿನ ಮುಂದೆ ಬೆತ್ತಲಾಗಬೇಕಾಗುತ್ತದೆ. ಈ ಎಚ್ಚರಿಕೆ ನಮ್ಮ ನಾಯಕರಿಗಿರಬೇಕು.
ಹಿಂದೆಲ್ಲಾ ರಾಜಕೀಯ ನಾಯಕರು ತಮ್ಮ ಎದುರಾಳಿಯ ವಿರುದ್ಧ ಮಾತನಾಡುವಾಗಲೂ ಸಭ್ಯತೆಯು ಎಲ್ಲೆ ಮೀರುತ್ತಿರಲಿಲ್ಲ. ಈಗ ಮಾತಿನ ಭರದಲ್ಲಿ ಎದುರು ಪಕ್ಷದ ನಾಯಕರನ್ನು ಬೋ…, ಸೂ…ಮಗ ಎಂದು ಸಂಬೋಧಿಸುವುದೂ ನಮ್ಮ ನಾಯಕರಿಗೆ ತಪ್ಪು ಎಂದು ಅನ್ನಿಸುತ್ತಿಲ್ಲ. ಬದಲಿಗೆ ಮಾತನಾಡಿದ ಮೇಲೆ ಒಂದು ವಿಷಾದ ವ್ಯಕ್ತಪಡಿಸಿದರಾಯ್ತು ಎಂಬ ಉಡಾಳತನಕ್ಕೆ ತಲುಪಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ ಚುನಾವಣಾ ಭಾಷಣ ಮಾಡುವಾಗ ಎದುರು ಪಕ್ಷದವರ ವಿರುದ್ಧ ಟೀಕೆ-ಟಿಪ್ಪಣಿ ಮಾಡುವುದು ಸಹಜ. ಹಾಗೆಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಅನ್ನುವುದಾಗಲಿ, ಸಿದ್ದರಾಮಯ್ಯ ಸರ್ಕಾರ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತೆ ಎಂದು ಹೇಳಿ ವೇದಿಕೆ ಎದುರು ಕುಳಿತ ಒಂದಷ್ಟು ಮಂದಿ ಬಿಸಿ ರಕ್ತದ ಯುವಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ತೇಜೋವಧೆಗಿಳಿಯುವುದು ಶೋಭೆ ತರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ರಾಜಕಾರಣವೆಂಬುದು ಧರ್ಮಕಾರಣದಲ್ಲಿ ಮಿಳಿತವಾಗಿ ಹೋಗಿರುವುದರಿಂದ ಚುನಾವಣೆ ಸಂದರ್ಭವೇ ಇರಲಿ, ಬೇರೆ ಸಂದರ್ಭಗಳೇ ಇರಲಿ, ಧಾರ್ಮಿಕ ವಿಚಾರಗಳೇ ಚರ್ಚೆಗೆ ಮುನ್ನಲೆಗೆ ಬಂದು ಅಭಿವೃದ್ಧಿ ಕಾರ್ಯಗಳ ಚರ್ಚೆಯಾಗುತ್ತಲೇ ಇಲ್ಲ. ಆಡಳಿತಾರೂಢ ಪಕ್ಷ ಕೂಡ ತನ್ನ ಚುನಾವಣೆ ಪ್ರಚಾರ ಸಭೆಗಳಲ್ಲಿ ತಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾವೇನು ಮಾಡಿದ್ದೇವೆ ಎಂದು ಪಟ್ಟಿಮಾಡುವ ಬದಲಿಗೆ, ಅವರು ಹಿಂದೂ ವಿರೋಧಿ, ಇನ್ನೊಂದು ಧರ್ಮದವರನ್ನು ಅತಿಯಾಗಿ ಓಲೈಸುತ್ತಾರೆ ಎನ್ನುವುದರ ಜತೆಗೆ ಎದುರಾಳಿಗಳ ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸಿ ತೇಜೋವಧೆ ಮಾಡುವುದು ಸರಿಯಲ್ಲ. ಇದರಿಂದ ಮತದಾರನಿಗೆ ಆಗಬೇಕಾದ್ದು ಏನೂ ಇಲ್ಲ. ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ಕಳೆದ ಐದು ವರ್ಷಗಳಲ್ಲಿ ನಾವೇನು ಮಾಡಿದ್ದೇವೆ ಎಂಬುದರ ಜತೆಗೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಆ ಮೂಲಕ ರಾಜ್ಯದ ಜನರ ನೆಮ್ಮದಿಗೆ ಭಂಗತರದಂತೆ ಹೇಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಬೇಕೇ ಹೊರತು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯಕ್ಕೆ ಕಿಚ್ಚು ಹಚ್ಚಿ ‘ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸ’ ಮಾಡಬಾರದು.
ಚುನಾವಣೆಯಲ್ಲಿ ಲಾಭಪಡೆಯುವ ದೃಷ್ಟಿಕೋನದಲ್ಲಿ ಮಾತ್ರ ಮಾತನಾಡುವ ಭರದಲ್ಲಿ ಮಾತು ಅಂಕೆ ಮೀರಬಾರದು. ಈ ರೀತಿ ಗೊತ್ತು-ಗುರಿಯಿಲ್ಲದೆ ಎದುರಾಳಿಯ ಮೇಲೆ ಆರೋಪ ಮಾಡುವುದಕ್ಕೆ ಮೈಸೂರಿನಲ್ಲಿ ಸುಬ್ಬರಾಯನ ಕೆರೆ ಭಾಷಣ ಎಂದು ಅಲ್ಲಗಳೆಯುವ ಸ್ಥಿತಿ ಇದೆ.
ಹತ್ತಾರು ವರ್ಷಗಳ ಹಿಂದಿನ ಘಟನಾವಳಿಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ರಾಜಕೀಯ ನಾಯಕರುು ಮಾತ್ರ ಮಾತಿನ ಭರದಲ್ಲಿ ಆಕ್ಷೇಪಾರ್ಹ ಪದ ಬಳಸುವುದು ಸರಿಯಲ್ಲ. ಇದು ಉದ್ದೇಶಪೂರ್ವಕವಾಗಿಯೇ ಆಡಿದ ಮಾತು. ಆ ಮೂಲಕ ಎಲ್ಲಿಗೆ ಯಾವ ಸಂದೇಶ ಮುಟ್ಟಿಸಬೇಕೋ ಅಲ್ಲಿಗೆ ಆ ಸಂದೇಶವನ್ನು ಮುಟ್ಟಿಸಿ ಆ ನಂತರ ಅದು ವಿವಾದವಾದಾಗ ವಿಷಾದ ವ್ಯಕ್ತಪಡಿಸಿದರಾಯಿತು ಎಂಬ ಮನಸ್ಥಿತಿಯನ್ನು ನಮ್ಮ ಮೊದಲು ಬಿಡಬೇಕಿದೆ. ಚುನಾವಣಾ ಭಾಷಣಗಳಲ್ಲಿ ಪ್ರಸ್ತಾಪಿಸಲು ಸಾವಿರ-ಸಾವಿರ ವಿಷಯಗಳಿರುವಾಗ ನಿಮ್ಮ ವೈಯಕ್ತಿಕ ತೀಟೆಗೆ ಸಾರ್ವಜನಿಕ ವೇದಿಕೆಗಳನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಹಾಗೆ ನೋಡಿದರೆ ಮಾಧ್ಯಮಗಳೆದುರು, ಸಾರ್ವಜನಿಕ ವೇದಿಕೆಗಳಲ್ಲಿ ಪರಸ್ಪರ ಟೀಕೆ-ಟಿಪ್ಪಣಿ ಮಾಡಿಕೊಳ್ಳುವ ರಾಜಕೀಯ ನಾಯಕರು ವೈಯಕ್ತಿಕವಾಗಿ ಖಾಸಾ ದೋಸ್ತಿಗಳಾಗಿರುವ ಸತ್ಯ ಜಗಜ್ಜಾಹೀರಾಗಿದೆ. ಆದರೂ ಚುನಾವಣೆಯಲ್ಲಿ ಲಾಭವಾಡಿಕೊಳ್ಳುವ ಒಂದಶದ ಕಾರ್ಯಕ್ರಮಕ್ಕೆ ಆಕ್ಷೇಪಾರ್ಹ ಪದ ಬಳಕೆ ಮಾಡಿ, ಯುವ ಜನತೆಗೆ ಯಾವ ಸಂದೇಶ ಕೊಡಲು ಹೊರಟಿದ್ದೀವಿ ಎಂಬುದನ್ನು ಯೋಚನೆ ಮಾಡಿ. ಸಾರ್ವಜನಿಕ ಬದುಕಿನಲ್ಲಿರುವ ಪ್ರತಿಯೊಬ್ಬರೂ ಗಾಜಿನ ಮನೆಯಲ್ಲೇ ಕುಳಿತು ಇನ್ನೊಬ್ಬರ ಮೇಲೆ ಕಲ್ಲೆಸೆಯುತ್ತಿದ್ದೇವೆ ಎಂಬ ಎಚ್ಚರಿಕೆಯೊಂದಿಗೆ ಪದ ಬಳಕೆ ಮಾಡುವುದು ಸೂಕ್ತ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…