ಸ್ವಾತಂತ್ರ್ಯದ ನಂತರ ಜಲಿಯನ್ ವಾಲಾಬಾಗ್‌ಗೆ ಭೇಟಿ ನೀಡಿದ್ದ ಮಹಾರಾಣಿ, ಜನರಲ್ ಡೈಯರ್ ನಡೆಸಿದ ನರಮೇಧಕ್ಕೆ ಕ್ಷಮೆ ಯಾಚಿಸಲಿಲ್ಲ!
ಡಿ ಉಮಾಪತಿ
ಬ್ರಿಟನ್ನಿನ ಮಹಾರಾಣಿ ಎಲಿಝಬೆತ್ ನಿಧನಕ್ಕೆ ಭಾರತ ದೇಶ ಇದೇ ಭಾನುವಾರದಂದು ಅಧಿಕೃತವಾಗಿ ಶೋಕ ಆಚರಿಸಲಿದೆ. ವಿಶ್ವದ ಚಂಡ ಪ್ರಚಂಡ ನಾಯಕರು ರಾಣಿಯ ಸಾವಿಗೆ ಶೋಕ ಸಂತಾಪಗಳನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾರಾಣಿಯನ್ನು ನಮ್ಮ ಕಾಲಮಾನದ ದಿಗ್ಗಜವೆಂದು ಬಣ್ಣಿಸಿದರು.
ಆದರೆ ಈ ಹೊಗಳಿಕೆ ಕಂಬನಿಗಳ ಸುರಿಮಳೆಯ ಹಿಂದೆ ಅಲ್ಲಲ್ಲಿ ಆಕೆಯ ವಿರುದ್ಧ ಆಕ್ರೋಶದ ಹೊಗೆಯಾಡಿದ್ದೂ ಅಷ್ಟೇ ನಿಜ. ಅಮೆರಿಕೆಯ ಪ್ರತಿಷ್ಠಿತ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಉಜು ಆನ್ಯ ಎಂಬ ಪ್ರೊಫೆಸರ್ ಅತ್ಯಂತ ಕಟು ಪದಗಳನ್ನು ಬಳಸಿದ್ದರು- ಕದ್ದು ದೋಚಿದ, ಅತ್ಯಾಚಾರ ಎಸಗಿದ, ಜನಾಂಗೀಯ ಹತ್ಯೆ ನಡೆಸಿದ ಸಾಮ್ರಾಜ್ಯದ ಪಟ್ಟದರಸಿಯು ಕಡೆಗೂ ಸಾಯುತ್ತಿದ್ದಾಳೆಂದು ಕೇಳಿಪಟ್ಟೆನು. ಸಾವನ್ನು ಎದುರುಗೊಳ್ಳುವಾಗ ಆಕೆಯ ನೋವು ಅಸಹನೀಯ ಆಗಲಿ ಎಂದು ಶಪಿಸಿ ಟ್ವೀಟ್ ಮಾಡಿದ್ದರು ಪ್ರೊ.ಆನ್ಯ.
ಆಕೆಯಂತೆಯೇ ಆಫ್ರಿಕನ್ ಸಮುದಾಯದ ಹಲವು ಬರೆಹಗಾರರು ಮತ್ತು ಹೋರಾಟಗಾರರು ಮಹಾರಾಣಿ ಎಲಿಝಬೆತ್ ಆಳ್ವಿಕೆಯ ಅಡಿಯಲ್ಲಿ ಬ್ರಿಟಿಷ್ ವಸಾಹತುಶಾಹಿ ಎಸಗಿದ ಅನ್ಯಾಯ ಅತ್ಯಾಚಾರಗಳನ್ನು ಕಟುವಾಗಿ ಖಂಡಿಸಿದ್ದಾರೆ. ಹಿಂಸಾಚಾರ, ಕಳವು ಹಾಗೂ ದಬ್ಬಾಳಿಕೆಗಳಿಂದಲೇ ರಾಶಿ ರಾಶಿ ಐಶ್ವರ್ಯವನ್ನು ಸಂಪಾದಿಸಿದ ವಸಾಹತುಶಾಹಿಯನ್ನು ಶಪಿಸಿದರು.
ಐದನೆಯ ಜಾರ್ಜ್ 1952ರಲ್ಲಿ ನಿಧನರಾದಾಗ ಎಲಿಝಬೆತ್ ಬ್ರಿಟನ್ನಿನ ರಾಣಿಯಾದರು. ಆಗ ಆಕೆಯ ವಯಸ್ಸು 25. ಎಪ್ಪತ್ತು ವರ್ಷಗಳ ಸುದೀರ್ಘ ಆಳ್ವಿಕೆ ಆಕೆಯದು. ಅಷ್ಟು ಕಾಲ ಬ್ರಿಟನ್ನಿನ ಅರಸಿಯಾದವರು ಮತ್ತೊಬ್ಬರಿಲ್ಲ. ಹಾಗೆಯೇ ಏಳು ದಶಕಗಳ ಕಾಲ ರಾಣಿಯಾಗಿ ಆಳಿದ ಮಹಿಳೆಯೂ ಚರಿತ್ರೆಯಲ್ಲಿ ಇಲ್ಲ. ಇತ್ತೀಚಿನ ಲಿಝ್ ಟ್ರಸ್ ಸೇರಿದಂತೆ ಬ್ರಿಟನ್ನಿನ 16 ಪ್ರಧಾನಮಂತ್ರಿಗಳೊಂದಿಗೆ ಕೆಲಸ ಮಾಡಿದವರು. ಅಮೆರಿಕೆಯ 14 ಅಧ್ಯಕ್ಷರನ್ನು ಕಂಡವರು.
1765ರಿಂದ 1938ರ 173ವರ್ಷಗಳ ಅವಧಿಯಲ್ಲಿ ಭಾರತವನ್ನು ಹೀರಿ ಹಿಂಡಿ ಹಿಪ್ಪೆ ಮಾಡಿ ಲೂಟಿ ಹೊಡೆದ ಒಟ್ಟು ಮೊತ್ತ 45 ಲಕ್ಷ ಕೋಟಿ ರೂಪಾಯಿಗಳು (45 ಟ್ರಿಲಿಯನ್ ಡಾಲರುಗಳು). ಹೆಚ್ಚು ಕಡಿಮೆ ಎರಡು ಶತಮಾನಗಳ ಅವಧಿಯ ವಾಣಿಜ್ಯ-ವ್ಯಾಪಾರ ಹಾಗೂ ತೆರಿಗೆಗಳ ಅಂಕಿ ಅಂಶಗಳನ್ನು ಅಧ್ಯಯನ ಮಾಡಿ ಈ ಲೆಕ್ಕಾಚಾರಕ್ಕೆ ಬರಲಾಗಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊ. ಉತ್ಸಾ ಪಟ್ನಾಯಕ್ ಅವರ ಸಂಶೋಧನೆಯ ಫಲವಿದು. ಈ ಸಂಶೋಧನೆಯನ್ನು ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದೆ. ಈ 45 ಲಕ್ಷ ಕೋಟಿ ರೂಪಾಯಿಗಳು ಇಂದಿನ ಯುನೈಟೆಡ್ ಕಿಂಗ್ ಡಮ್‌ನ ವಾರ್ಷಿಕ ಜಿಡಿಪಿಯ17 ಪಟ್ಟು ದೊಡ್ಡ ಮೊತ್ತ!
ಬ್ರಿಟನ್ ಆಡಳಿತ ಭಾರತಕ್ಕೆ ಕೆಲವು ‘ಕೊಡುಗೆ’ಗಳನ್ನು ಕೊಟ್ಟಿರಬಹುದು. ಆದರೆ ಬ್ರಿಟಿಷರ ಆಡಳಿತ ಅತ್ಯಂತ ಕ್ರೌರ್ಯ ಮತ್ತು ಅತೀವ ದಬ್ಬಾಳಿಕೆಯಿಂದ ಕೂಡಿತ್ತು. ಮೂರೂವರೆ ಕೋಟಿ ಭಾರತೀಯರ ಹತ್ಯೆ ಮಾಡಿದ ನೆತ್ತರು ಅದರ ಹಸ್ತಗಳಿಗೆ ಮೆತ್ತಿ ಹೋಗಿದೆ. ಸ್ವಾತಂತ್ರ್ಯದ ನಂತರ ಜಲಿಯನ್ ವಾಲಾ ಬಾಗ್‌ಗೆ ಭೇಟಿ ನೀಡಿದ್ದ ಮಹಾರಾಣಿ, ತನ್ನ ದಂಡನಾಯಕ ಜನರಲ್ ಡೈಯರ್ ನಡೆಸಿದ ನರಮೇಧಕ್ಕೆ ಕ್ಷಮೆ ಯಾಚಿಸಲು ಕಡೆಗೂ ಒಪ್ಪಲಿಲ್ಲ.
ಗತದಲ್ಲಿ ತಾವು ಮಾಡಿದ ಅತಿರೇಕಗಳು, ಹತ್ಯೆಗಳು, ಅಪರಾಧಗಳಿಗೆ ಕ್ಷಮೆ ಕೇಳಿ ನೈತಿಕ ಬಿಕ್ಟಟ್ಟಿನ್ನು ನಿವಾರಿಸಿಕೊಂಡಿರುವ ಹಲವು ದೇಶಗಳಿವೆ. ನಾಜೀ ಹತ್ಯಾಕಾಂಡಗಳ ನೆತ್ತರನ್ನು ನ್ಯೂರೆಂಬರ್ಗ್ ಸಾರ್ವಜನಿಕ ವಿಚಾರಣೆಗಳು ಮತ್ತು ಸಾರ್ವಜನಿಕ ತಪ್ಪೊಪ್ಪಿಗೆಯ ಮೂಲಕ ತೊಳೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿತು ಜರ್ಮನಿ. ಸತ್ಯ ಮತ್ತು ಪುನರ್ ಅನುಸಂಧಾನ ಆಯೋಗವನ್ನು ರಚಿಸಿತು ದಕ್ಷಿಣ ಆಫ್ರಿಕಾ. ಆದರೆ ಬ್ರಿಟನ್ ಇಂತಹ ಪಶ್ಚಾತ್ತಾಪವನ್ನು ತೋರಿಯೇ ಇಲ್ಲ. ಅಪರಾಧಗಳನ್ನು ಒಪ್ಪಿಯೇ ಇಲ್ಲ. ಅಂದಿನ ಬ್ರಿಟನ್ ಮಾಡಿದ ಅಪರಾಧಗಳಿಗೆ ಇಂದಿನ ಬ್ರಿಟನ್ ಜವಾಬ್ದಾರ ಅಲ್ಲ ಎಂಬ ವಾದವೇನೋ ಸರಿ. ತಾನು ತುಳಿದು ಅಳಿಸಿ ಹಾಕಿದ ಸಮುದಾಯಗಳ ಸಾಮೂಹಿಕ ಸ್ಮೃತಿಗಳನ್ನು ಮರಳಿ ತಂದುಕೊಡುವುದು ಇಂದಿನ ಬ್ರಿಟನ್ ಗೆ ಸಾಧ್ಯವಿಲ್ಲ ಹೌದು. ತಾನು ಬಲಿ ಪಡೆದ ಲಕ್ಷ ಲಕ್ಷ ಮಂದಿಗೆ ಪುನಃ ಪ್ರಾಣದುಸಿರು ತುಂಬಿ ಜೀವಂತಗೊಳಿಸುವುದೂ ಅಸಾಧ್ಯ. ಆದರೆ ಪಶ್ಚಾತ್ತಾಪ ಪ್ರಕಟಣೆ ಸಲೀಸು ಸಾಧ್ಯ.
ತಮ್ಮ ಸೊಸೆ ರಾಜಕುವರಿ ಡಯಾನಾ ಸಾವಿಗೆ ಎಲಿಝಬೆತ್ ಮಹಾರಾಣಿ ಮರಗಟ್ಟಿದ್ದ ಬಗೆ ಅಮಾನವೀಯ. ಡಯಾನಾಳ ಮಗ ರಾಜಕುವರ ಹ್ಯಾರಿ ವರಿಸಿದ ಅಮೆರಿಕನ್ ನಟಿ ಮೆಘಾನ್ ಮರ್ಕಲ್ ಅವರ ತಾಯಿ ಕಪ್ಪು ವರ್ಣೀಯರು. ತಂದೆ ಶ್ವೇತ ವರ್ಣೀಯ. ಈ ಹಿನ್ನೆಲೆಯಲ್ಲಿ ಹ್ಯಾರಿ- ಮೆಘಾನ್ ಜೋಡಿಗೆ ಹುಟ್ಟಿದ ಮಗು ಆರ್ಚಿಯ ಮೈ ಬಣ್ಣ ಕಪ್ಪಾಗಿರಬಹುದೇ ಎಂಬ ವರ್ಣಭೇದದ ಆತಂಕವನ್ನು ಅರಮನೆ ಪ್ರಕಟಿಸಿತ್ತು. ಖುದ್ದು ಮೆಘಾನ್ ಅವರೇ ಈ ಅಪಮಾನವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.
ಎಲ್ಲ ವರ್ಣೀಯರನ್ನೂ ಒಳಗೊಳ್ಳುವ ಅದ್ಭುತ ಅವಕಾಶವೊಂದನ್ನು ರಾಜಮನೆತನ ಕಳೆದುಕೊಂಡಿತು. ಮನನೊಂದ ಮೆಘಾನ್ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಯ ಆಲೋಚನೆ ಮಾಡಿದ್ದರು. ಅಂತಹ ಹೊತ್ತಿನಲ್ಲಿ ಅರಮನೆಯಿಂದ ಕನಿಷ್ಠ ಸಾಂತ್ವನವೂ ಕೇಳಿಬರಲಿಲ್ಲ.
ತಮ್ಮ ಎರಡನೆಯ ಮಗ ಆ್ಯಂಡ್ರೂ ಲೈಂಗಿಕ ಹಲ್ಲೆಯ ಪ್ರಕರಣವೊಂದನ್ನು ಎದುರಿಸಿದ ಪ್ರಕರಣದಲ್ಲಿ ಮಹಾರಾಣಿ ಎಲಿಝಬೆತ್ ಮಗನ ಪಕ್ಷಪಾತಿಯಾಗಿ ನಿಂತಿದ್ದರು. ಇತ್ತೀಚೆಗೆ 2022ರ ಜನವರಿಯಲ್ಲಿ ಆ್ಯಂಡ್ರೂನ ರಾಜಪದವಿಗಳನ್ನು ಕಿತ್ತು ಹಾಕಿದರು.
ಎಲಿಝಬೆತ್ ಹುಟ್ಟುವ ಕೆಲವೇ ವರ್ಷಗಳ ಹಿಂದೆ ಬ್ರಿಟಿಷ್ ಸಾಮ್ರಾಜ್ಯ ತನ್ನ ಉತ್ತುಂಗ ಸ್ಥಿತಿಯಲ್ಲಿ ಇಳೆಯ ಮೇಲಿನ ಕಾಲು ಭಾಗದಷ್ಟು ಭೂಭಾಗದ ಅಧಿಪತಿಯಾಗಿತ್ತು. ಆಫ್ರಿಕಾ ಮತ್ತು ಏಷ್ಯಾವನ್ನು ದೋಚಿ ಅಪಾರ ಸಂಪತ್ತನ್ನು ದೋಚಿದ ಬ್ರಿಟಿಷರ ಪೈಕಿ ಗುಲಾಮರನ್ನು ಮಾರಿ ಲಾಭ ಬಳಿದುಕೊಂಡವರು, ವ್ಯಾಪಾರಿಗಳು, ಬಂಡವಾಳಗಾರರು ಹಾಗೂ ರಾಜಮನೆತನದ ಸದಸ್ಯರೂ ಸೇರಿದ್ದರು.
ಮೊದಲನೆಯ ಎಲಿಝಬೆತ್ ರಾಣಿಯು ಹದಿನಾರನೆಯ ಶತಮಾನದ ಬ್ರಿಟನ್ನಿನಲ್ಲಿ ಗುಲಾಮ ವ್ಯಾಪಾರಕ್ಕೆ ಅಡಿಪಾಯ ಹಾಕಿದವಳು. ಈ ವ್ಯಾಪಾರಕ್ಕಾಗಿ ತನ್ನ ಹಡಗನ್ನೇ ಕೊಡುಗೆಯಾಗಿ ನೀಡಿದವಳು.
ಎರಡನೆಯ ಎಲಿಝಬೆತ್ ರಾಣಿಯ ನಿಧನದ ನಂತರ ಆಕೆಯ ಹಿರಿಯ ಮಗ ರಾಜಕುವರ ಚಾರ್ಲ್ಸ್ ತನ್ನ 72ನೆಯ ವಯಸ್ಸಿನಲ್ಲಿ ರಾಜನಾಗಲಿದ್ದಾನೆ. ಗುಲಾಮರನ್ನು ಖರೀದಿಸಿ ವ್ಯಾಪಾರ ಮಾಡಿದ ಅನಾಚಾರಕ್ಕೆ ಈತ 2018ರಲ್ಲಿ ಕ್ಷಮೆ ಕೋರಿದ. ಆದರೆ ಈತನ ತಾಯಿ ಮಹಾರಾಣಿಗೆ ಕ್ಷಮೆ ಕೋರಬೇಕೆಂದು ಅನಿಸಲೇ ಇಲ್ಲ.
ಅಮಾಯಕ ಆಫ್ರಿಕನ್ನರನ್ನು ಹಿಡಿದು ತಂದು ಗುಲಾಮರನ್ನಾಗಿ ಮಾರಾಟ ಮಾಡಿದ್ದ ವ್ಯಾಪಾರಿ ಎಡ್ವರ್ಡ್ ಕೊಲ್ಸಟನ್ ನ ಪ್ರತಿಮೆಯನ್ನು ಬ್ರಿಟನ್ನಿನ ಬ್ರಿಸ್ಟಲ್ ನಗರದಲ್ಲಿ ಎರಡು ವರ್ಷಗಳ ಹಿಂದೆ ಉರುಳಿಸಿ ನದಿಗೆ ಎಸೆದಿದ್ದರು ವರ್ಣಭೇದ ನೀತಿಯ ಪ್ರತಿಭಟನಾಕಾರರು.
ಬ್ರಿಟನ್ನಿನ ರಾಜಪರಿವಾರ ವರ್ಣಭೇದ ನೀತಿಯನ್ನು ಇತ್ತೀಚಿನ ತನಕ ಆಚರಿಸುತ್ತಲೇ ಇದೆ. ಹಲವಾರು ನಿದರ್ಶನಗಳಿವೆ ಈ ಮಾತಿಗೆ.