ಎಡಿಟೋರಿಯಲ್

ದೆಹಲಿ ಧ್ಯಾನ : ಪೂನಾ ಒಪ್ಪಂದ ಎಂಬ ದಲಿತ ದುರಂತದ ಸುತ್ತ

ಪೂನಾ ಒಪ್ಪಂದ ಎಂಬ ದಲಿತ ದುರಂತದ ಸುತ್ತ

೧೯೫೧ರಲ್ಲಿ ಜರುಗಿದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ೪೮೯ರ ಪೈಕಿ ೩೬೪ ಸ್ಥಾನಗಳನ್ನು ಗೆದ್ದು ಭಾರೀ ವಿಜಯ ಗಳಿಸಿತು. ಆದರೆ ಬಾಬಾಸಾಹೇಬ ಅಂಬೇಡ್ಕರ್ ಸೋತಿದ್ದರು. ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು. ಅವರ ಪಕ್ಷದಿಂದ ಇಬ್ಬರು ಹುರಿಯಾಳುಗಳು ಗೆದ್ದಿದ್ದರು. ಆನಂತರ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ಎಂದು ಕರೆಯಲಾದ ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್‌ನಿಂದ ಅವರು ನಿಂತಿದ್ದರು. ಚತುಷ್ಕೋನ ಸ್ಪರ್ಧೆಯಲ್ಲಿ ಬಾಬಾಸಾಹೇಬರನ್ನು ಸೋಲಿಸಿದಾತ ಕಾಂಗ್ರೆಸ್ಸಿನ ನಾರಾಯಣ ಸದೋಬಾ ಕಾರ್ಜೋಳ್ಕರ್ ಎಂಬ ಅಭ್ಯರ್ಥಿ. ಹೆಚ್ಚು ಮಂದಿ ಈತನ ಹೆಸರನ್ನು ಕೂಡ ಕೇಳಿರಲಿಲ್ಲ. ಉಳಿದಂತೆ ಕಮ್ಯೂನಿಸ್ಟ್ ಪಕ್ಷ ಹಾಗೂ ಹಿಂದೂ ಮಹಾಸಭಾದ ಉಮೇದುವಾರರು ಕಣದಲ್ಲಿದ್ದರು. ಅಶೋಕ್ ಮೆಹ್ತಾ ಅವರ ನೇತೃತ್ವದ ಸೋಷಲಿಸ್ಟರು ಮಾತ್ರವೇ ಬಾಬಾಸಾಹೇಬರಿಗೆ ಬೆಂಬಲ ನೀಡಿದ್ದರು. ಸಿಪಿಐ ನ ಶ್ರೀಪಾದ ಅಮೃತ ಡಾಂಗೆ ಬಾಬಾಸಾಹೇಬರ ವಿರುದ್ಧ ತೀವ್ರ ಪ್ರಚಾರ ನಡೆಸಿದ್ದರು. ಒಂದೊಮ್ಮೆ ಬಾಬಾಸಾಹೇಬರ ಸಹಾಯಕನಾಗಿ ಕೆಲಸ ಮಾಡಿದ್ದ ಕಾರ್ಜೋಳ್ಕರ್ ಹದಿನೈದು ಸಾವಿರ ಮತಗಳ ಭಾರೀ ಅಂತರದಿಂದ ಚುನಾವಣೆಯಲ್ಲಿ ಗೆದ್ದಿದ್ದ. ನಾಲ್ವರು ಹುರಿಯಾಳುಗಳ ಪೈಕಿ ಬಾಬಾಸಾಹೇಬರು ನಾಲ್ಕನೆಯ ಸ್ಥಾನಕ್ಕೆ ಕುಸಿದಿದ್ದರು.
ಇಂಡಿಯಾದ ಉಜ್ವಲ ಪುತ್ರರತ್ನ, ಮಹಾ ಮೇಧಾವಿ, ತಳಸಮುದಾಯಗಳ ವಿಮೋಚಕ, ನಿರ್ಭೀತ ನೇತಾರ ಒಂದು ಚುನಾವಣೆಯನ್ನು ಗೆಲ್ಲಲು ಆಗದೆ ಹೋಯಿತು. ಶೋಚನೀಯ ಸೋಲನ್ನು ಎದುರಿಸಬೇಕಾಯಿತು. ಭಾರತೀಯ ಜನತಂತ್ರದ ಅತ್ಯಂತ ವಿಚಿತ್ರ ವಿದ್ಯಮಾನವಿದು.
೧೯೫೪ರಲ್ಲಿ ಭಂಡಾರಾದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪುನಃ ಸೋತರು ಅಂಬೇಡ್ಕರ್. ಪುನಃ ಅವರು ಸೋತದ್ದು ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯ ಮುಂದೆ.
೧೯೫೭ರಲ್ಲಿ ನಡೆದ ದೇಶದ ಎರಡನೆಯ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವರು ಬದುಕಿಯೇ ಇರುವುದಿಲ್ಲ. ೧೯೫೬ರ ಡಿಸೆಂಬರ್‌ನಲ್ಲಿ ಸಾವು ಅವರನ್ನು ಸೆಳೆದೊಯ್ಯುತ್ತದೆ. ಇಂತಹ ಮಹಾನಾಯಕನನ್ನು ಸ್ವತಂತ್ರ ಭಾರತ ಎರಡು ಸಲ ಸೋಲಿಸಿದ್ದು ಅದರ ಪಾಲಿನ ದುರಂತ.
ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಜಾಗದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವನ್ನು ಸ್ಥಾಪಿಸುವ ಮುನ್ನವೇ ಬಾಬಾಸಾಹೇಬರು ಗತಿಸುತ್ತಾರೆ. ಅವರ ಅನುಯಾಯಿಗಳು ೧೯೫೭ರಲ್ಲಿ ರಿಪಬ್ಲಿಕನ್ ಪಾರ್ಟಿಯನ್ನು ಅಧಿಕೃತವಾಗಿ ಸ್ಥಾಪಿಸುತ್ತಾರೆ. ಅವರ ಮಗ ಯಶವಂತರಾವ್ ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಈ ಕೆಲಸ ನಡೆಯುತ್ತದೆ. ೧೯೫೭ರ ಎರಡನೆಯ ಲೋಕಸಭಾ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಒಂಬತ್ತು ಸೀಟುಗಳನ್ನು ಗೆಲ್ಲುತ್ತದೆ. ಆದರೆ ಆನಂತರ ಹಲವು ಹೋಳುಗಳಾಗಿ ಒಡೆದು ಕ್ಷೀಣಿಸುತ್ತದೆ.
ಗಾಂಧೀಜಿಯನ್ನು ಕೊಂದ ಗೋಡ್ಸೆ- ಸಾವರ್ಕರ್ ಅವರ ಅಖಿಲ ಭಾರತ ಹಿಂದೂ ಮಹಾಸಭಾ ಕೂಡ ನಾಲ್ಕು ಸೀಟುಗಳನ್ನು ಗೆದ್ದುಬಿಡುತ್ತದೆ. ಹಿಂದೂ ರಾಷ್ಟ್ರದ ಪ್ರಣಾಳಿಕೆ ಇಟ್ಟುಕೊಂಡಿದ್ದ ಅಖಿಲ ಭಾರತೀಯ ರಾಮರಾಜ್ಯ ಪರಿಷತ್ ಎಂಬ ಪಕ್ಷ ಕೂಡ ಮೂರು ಸೀಟುಗಳನ್ನು ಗೆಲ್ಲುತ್ತದೆ. ಭಾರತೀಯ ಜನತಾ ಪಾರ್ಟಿಯ ಅಂದಿನ ರೂಪವಾಗಿದ್ದ ಭಾರತೀಯ ಜನಸಂಘ ಮೂರು ಸೀಟು ಗೆಲ್ಲುತ್ತದೆ.
ಸೋತ ನಂತರ ಅವರು ಸಂಸತ್ತನ್ನು ಪ್ರವೇಶಿಸುತ್ತಾರೆ, ರಾಜ್ಯಸಭೆಯ ಮೂಲಕ.
ದುಂಡು ಮೇಜಿನ ಪರಿಷತ್ತುಗಳಲ್ಲಿ ಪ್ರತಿಪಾದಿಸಿ ಬ್ರಿಟಿಷರನ್ನು ಒಪ್ಪಿಸಿದ್ದ ಕಮ್ಯೂನಲ್ ಅವಾರ್ಡ್ ಪ್ರಕಾರ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಇದ್ದಿದ್ದ ಪಕ್ಷದಲ್ಲಿ ದೇಶದ ಯಾವ ಭಾಗದಿಂದ ನಿಂತಿದ್ದರೂ ಅವರನ್ನು ಸೋಲಿಸುವುದು ಸಾಧ್ಯವಿತ್ತೇ?
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳಿಗಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿದ್ದರು ಬಾಬಾಸಾಹೇಬರು. ಈ ಹೋರಾಟಕ್ಕಾಗಿ ಹಿಂದೂ ಭಾರತದ ತೀವ್ರ ದ್ವೇಷವನ್ನು ತಾವು ಕಟ್ಟಿಕೊಳ್ಳಬೇಕಾಯಿತು ಎಂದು ಅವರು ಬರೆದಿದ್ದಾರೆ. ದೇಶದ್ರೋಹಿಯಂತೆ ತಮ್ಮನ್ನು ನಡೆಸಿಕೊಳ್ಳಲಾಯಿತು ಎಂದು ಅವರು ದಾಖಲಿಸಿದ್ದಾರೆ. ೧೯೩೨ರ ಪೂನಾ ಒಡಂಬಡಿಕೆ ದಲಿತ ಪ್ರಾತಿನಿಧ್ಯದ ಸಮಾಧಿಯನ್ನು ತೋಡಿತು. ದಲಿತರು ಈ ಸಮಾಧಿಯಿಂದ ಈಗಲೂ ಹೊರಬರಲಾಗಿಲ್ಲ.
೧೯೩೨ರ ಪೂನಾ ಒಪ್ಪಂದದ ನಂತರ ೧೯೩೬ರಲ್ಲಿ ಬಾಬಾಸಾಹೇಬರು ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್‌ಪಿ) ಎಂಬ ಪಕ್ಷ ಸ್ಥಾಪಿಸುತ್ತಾರೆ. ಪೂನಾ ಒಡಂಬಡಿಕೆಯ ಪ್ರಕಾರವೇ ೧೯೩೭ರಲ್ಲಿ ಪ್ರಾಂತೀಯ ಶಾಸನಸಭೆಗಳು ನಡೆಯುತ್ತವೆ. ಈ ಚುನಾವಣೆಯ ಫಲಿತಾಂಶಗಳನ್ನು ಬಾಬಾ ಸಾಹೇಬರು ೧೯೪೫ರಲ್ಲಿ ವಿಮರ್ಶಿಸಿದ್ದಾರೆ.
ಈ ಪ್ರಾಂತೀಯ ಚುನಾವಣೆಗಳಲ್ಲಿ ಐಎಲ್‌ಪಿ ಸ್ಪರ್ಧಿಸುತ್ತದೆ. ದಲಿತರಿಗೆ ೧೫೧ ಸೀಟುಗಳು ದಕ್ಕಿರುತ್ತವೆ. ಈ ಪೈಕಿ ಐಎಲ್‌ಪಿ ಹನ್ನೆರಡನ್ನು ಗೆದ್ದಿರುತ್ತದೆ. ಉಳಿದ ಎಲ್ಲ ೧೩೯ ದಲಿತ ಸೀಟುಗಳು ಕಾಂಗ್ರೆಸ್ ಪಾಲಾಗಿರುತ್ತವೆ. ದಲಿತರ ಪ್ರತಿನಿಧಿ ತಾನೇ ಎಂದು ಕಾಂಗ್ರೆಸ್ ಎದೆ ಸೆಟೆಸಿ ಬೀಗುತ್ತದೆ.
ತಮ್ಮನ್ನು ತಲೆ ತಲಾಂತರಗಳಿಂದ ಇಲ್ಲಿಯ ತನಕ ತುಳಿದಿಟ್ಟು, ಸಾವಿರಾರು ಬಗೆಗಳಲ್ಲಿ ತಮ್ಮನ್ನು ವಂಚಿಸುತ್ತ ಬಂದಿರುವ, ತಮ್ಮ ವಿರುದ್ಧ ವಿಷವನ್ನೇ ಕಾರುವ, ತಮ್ಮ ಹಿತವನ್ನು ವಿಮೋಚನೆಯನ್ನು ನಿರ್ದಯೆಯಿಂದ ವಿರೋಧಿಸಿದ್ದ ಪಕ್ಷಗಳ ದಾಸರಾಗಿ ಹೋಗಿದ್ದಾರೆ ದಲಿತರು. ಹಾವಿನ ಹೆಡೆಯ ಅಡಿಯ ನೆರಳನ್ನು ನಿಜ ನೆರಳೆಂದು ಭ್ರಮಿಸಿ ತಮ್ಮನ್ನು ನುಂಗುವ ಸರ್ಪಗಳತ್ತ ಕುಪ್ಪಳಿಸುತ್ತಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸಮಾನತೆಗೆ ಯಾವ ಅರ್ಥವೂ ಇಲ್ಲ ಎಂದಿದ್ದರು ಬಾಬಾಸಾಹೇಬರು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ದಲಿತರಿಗೆ ಇನ್ನೂ ದೂರ ದಿಗಂತದ ಕನಸಾಗಿಯೇ ಉಳಿದಿದೆ. ಜಾತಿ ತಾರತಮ್ಯದ ನೀಚತನ ದಿನದಿಂದ ದಿನಕ್ಕೆ ಹೆಚ್ಚು ಕ್ರೌರ್ಯ ಧರಿಸಿ ಹೂಂಕರಿಸುತ್ತಿದೆ. ರಾಜಕೀಯ ಸಮಾನತೆಯನ್ನು ದಲಿತರಿಗೆ ಗಳಿಸಿಕೊಡುವ ಬಾಬಾಸಾಹೇಬರ ಅಪ್ರತಿಮ ಹೋರಾಟ ೯೦ ವರ್ಷಗಳ ಹಿಂದೆ ಹೀಗೆ ಮಣ್ಣು ಪಾಲಾಯಿತು. ಗಾಂಧೀಜಿಯ ಜೀವ ಉಳಿಸುವ ಬ್ಲ್ಯಾಕ್‌ಮೇಲ್‌ಗೆ ಬಾಬಾಸಾಹೇಬರನ್ನು ಮತ್ತು ದಲಿತರ ರಾಜಕೀಯ ವಿಮೋಚನೆಯನ್ನು ಬಲಿ ಕೊಡಲಾಯಿತು.
ಬಾಬಾಸಾಹೇಬರು ತಾವು ಬದುಕಿರುವ ತನಕವೂ ಪೂನಾ ಒಡಂಬಡಿಕೆಯನ್ನು ಮೋಸವೆಂದು ಹೀಗಳೆದಿದ್ದರು.
ಪೂನಾ ಒಡಂಬಡಿಕೆಯ ನಂತರ ೧೯೪೫ರಲ್ಲಿ ಅವರು ಬರೆದಿದ್ದ ಕೃತಿಯೊಂದರ ಶೀರ್ಷಿಕೆ- What Congress and Gandhi have done to the untouchables . ಅಲ್ಲಿಂದಾಚೆಗೆ ೧೯೪೭ರಲ್ಲಿ ರಚಿಸಿದ ಪ್ರಸಿದ್ಧ ಕೃತಿ- State and Minorities ಈ ಎರಡೂ ಪುಸ್ತಕಗಳಲ್ಲಿ ಪೂನಾ ಒಡಂಬಡಿಕೆಯಿಂದ ದಲಿತರಿಗೆ ಜರುಗಿದ ಮೋಸದ ಕುರಿತ ಅವರ ಒಡಲ ಸಂಕಟ ಅಲ್ಲಲ್ಲಿ ಹೊರಚೆಲ್ಲಿದೆ. ಈ ಸಂಕಟದ ಕೆಲವು ಮಾದರಿಗಳು ಹೀಗಿವೆ-
೧ಉಪವಾಸದಲ್ಲಿ ಉತ್ತಮವಾದದ್ದೇನೂ ಇರಲಿಲ್ಲ. ಅದೊಂದು ಹೊಲಸು ಕೃತ್ಯ. ಅಸ್ಪೃಶ್ಯರಿಗೆ ಪ್ರಯೋಜನ ಆಗಬೇಕೆಂದು ಮಾಡಿದ ಉಪವಾಸವಲ್ಲ ಅದು. ತಮಗೆ (ಬ್ರಿಟಿಷ್) ಪ್ರಧಾನಿಯಿಂದ ದೊರೆತ ಸಂವಿಧಾನಾತ್ಮಕ ರಕ್ಷಣೆಗಳನ್ನು ಬಿಟ್ಟುಕೊಟ್ಟು ಹಿಂದೂಗಳ ಮರ್ಜಿಯ ಮೇರೆಗೆ ಬದುಕುವಂತೆ ಅಸಹಾಯಕರ ಮೇಲೆ ಹೇರಿದ ಅತಿ ಕೆಟ್ಟ ಬಲವಂತ. ದುಷ್ಟ ಕೃತ್ಯ. ಇಂತಹ ವ್ಯಕ್ತಿಯನ್ನು ಪ್ರಾಮಾಣಿಕನೆಂದು ಒಪ್ಪಿಕೊಳ್ಳುವುದಾದರೂ ಹೇಗೆ?
೨ಪೂನಾ ಒಡಂಬಡಿಕೆಯಿಂದ ಅಸ್ಪೃಶ್ಯರಿಗೆ ದೊರೆಯುವ ಮೀಸಲು ಸೀಟುಗಳ ಸಂಖ್ಯೆ ಹೆಚ್ಚಿದೆಯೆಂದು ಹೇಳಲಾಗಿದೆ. ಆದರೆ ಕಮ್ಯೂನಲ್ ಅವಾರ್ಡ್ ನೀಡಿದ್ದ ಡಬಲ್ ವೋಟಿನ ಹಕ್ಕನ್ನು ಕಿತ್ತುಕೊಂಡು ಸೀಟುಗಳ ಸಂಖ್ಯೆಯನ್ನು ಎಷ್ಟು ಹೆಚ್ಚಿಸಿದರೇನು ಉಪಯೋಗ? ಡಬಲ್ ವೋಟನ್ನು ಕಿತ್ತುಕೊಂಡದ್ದರಿಂದ ಉಂಟಾದ ನಷ್ಟವನ್ನು ಸೀಟುಗಳ ಹೆಚ್ಚಳ ತುಂಬಿಕೊಡುವುದು ಅಸಾಧ್ಯ. ಕಮ್ಯೂನಲ್ ಅವಾರ್ಡು ನೀಡಿದ್ದ ಎರಡನೆಯ ಮತವು ದಲಿತರ ಪಾಲಿಗೆ ಅಮೂಲ್ಯ ವಿಶೇಷಾಧಿಕಾರ. ರಾಜಕೀಯ ಅಸ್ತ್ರವಾಗಿ ಅದರ ಬೆಲೆ ಊಹಿಸಲಾರದಷ್ಟು ದೊಡ್ಡದು.
೩ಪೂನಾ ಒಡಂಬಡಿಕೆಯ ಫಲವಾಗಿ ದಲಿತರಿಗೆ ಇಂದು ಒಂದಷ್ಟು ಸೀಟುಗಳು ಹೆಚ್ಚು ದೊರೆತಿವೆ. ಆದರೆ ಅವರ ಪಾಲಿಗೆ ಉಳಿದದ್ದು ಈ ಹೆಚ್ಚು ಸೀಟುಗಳು ಮಾತ್ರ. ಡಬಲ್ ವೋಟಿನ ಅಧಿಕಾರದ ಕಮ್ಯೂನಲ್ ಅವಾರ್ಡ್ ಜಾರಿಗೆ ಬಂದಿದ್ದರೆ, ಅಸ್ಪೃಶ್ಯರಿಗೆ
ಸೀಟುಗಳು ಒಂದಷ್ಟು ಕಡಿಮೆ ದೊರೆಯುತ್ತಿದ್ದವು. ಆದರೆ ಈ ಸೀಟುಗಳಿಂದ ಆಯ್ಕೆಯಾಗಿ ಬಂದ ಪ್ರತಿಯೊಬ್ಬ ಜನಪ್ರತಿನಿಧಿಯೂ ನೂರಕ್ಕೆ
ನೂರರಷ್ಟು ಅಸ್ಪೃಶ್ಯರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಪ್ರತ್ಯೇಕ ಮತಕ್ಷೇತ್ರಗಳನ್ನು ಕೈ ಬಿಟ್ಟು, ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನು ಆರಿಸುವ ಮತಾಧಿಕಾರವನ್ನು ದಲಿತರು ಮಾತ್ರವಲ್ಲದೆ ಇತರೆ ಸಾಮಾನ್ಯ ವರ್ಗಕ್ಕೂ ನೀಡಲಾದ ಜಂಟಿ ಮತಕ್ಷೇತ್ರಗಳು ದಲಿತರ ಮತಾಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡಿವೆ. ಈ ಹಿಂದೆ ನಡೆದ ಚುನಾವಣೆಗಳ
(೧೯೩೭ರ ಪ್ರಾಂತೀಯ ಚುನಾವಣೆಗಳು) ಫಲಿತಾಂಶಗಳೇ ಈ ಮಾತಿಗೆ ಉದಾಹರಣೆ.
೪ಪೂನಾ ಒಡಂಬಡಿಕೆಯ ನಂತರ ಮೀಸಲು ಕ್ಷೇತ್ರಗಳಲ್ಲಿ ಹಿಂದೂಗಳ ತಾಳಕ್ಕೆ ಕುಣಿಯುವ ದಲಿತರನ್ನು ಹುರಿಯಾಳುಗಳನ್ನಾಗಿ ಹೂಡದಂತೆ ಕಾಂಗ್ರೆಸ್ ಪಕ್ಷವನ್ನು ಮಿಸ್ಟರ್ ಗಾಂಧೀ ತಡೆಯಬೇಕಿತ್ತು. ಅಸ್ಪೃಶ್ಯರ ಹಿತದ ರಾಜಕಾರಣವನ್ನು ಕೆಡಿಸದಂತೆ ಕಾಯಬೇಕಿತ್ತು. ಹಾಗೆ ಮಾಡಲಿಲ್ಲವೇಕೆ?
೫ಅಸ್ಪಶ್ಯರ ವಿರುದ್ಧದ ಸಮರದ ಹಾದಿಯನ್ನು ಮಿಸ್ಟರ್ ಗಾಂಧೀ ಇನ್ನೂ ತೊರೆದಿಲ್ಲ. ಮತ್ತೆ ತೊಂದರೆ ಕೊಟ್ಟರೂ ಕೊಡಬಹುದು. ಅವರನ್ನು ನಂಬುವ ಕಾಲ ಇನ್ನೂ ಬಂದಿಲ್ಲ. ಅಸ್ಪಶ್ಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದ್ದರೆ ಮಿಸ್ಟರ್ ಗಾಂಧೀ ಕುರಿತು ಎಚ್ಚರಿಕೆಯಿಂದಿರಿ (ಬಿವೇರ್ ಆಫ್ ಮಿಸ್ಟರ್ ಗಾಂಧೀ) ಎಂದು ಸಾರುವುದೊಂದೇ ಸರಿಯಾದ ದಾರಿ.
೬ತನ್ನಿಂದ ಆಯ್ಕೆಯಾಗಿರುವ ಅಸ್ಪಶ್ಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಪಕ್ಷದ ಶಿಸ್ತಿಗೆ ಗುರಿ ಮಾಡಿರುವುದು ಕಾಂಗ್ರೆಸ್ ಪಕ್ಷದ ಮತ್ತೊಂದು ಕೆಟ್ಟ ಕೃತ್ಯ. ಕಾಂಗ್ರೆಸ್‌ಗೆ ಇಷ್ಟವಿಲ್ಲದ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳುವಂತಿಲ್ಲ. ಕಾಂಗ್ರೆಸ್ ಅನುಮತಿ ನೀಡದಿರುವ ಯಾವುದೇ ನಿರ್ಣಯವನ್ನೂ ಅವರು ಮಂಡಿಸುವಂತಿಲ್ಲ. ಅದು ಆಕ್ಷೇಪಿಸುವ ಯಾವುದೇ ಶಾಸನವನ್ನೂ ಅವರು ತರುವಂತಿಲ್ಲ. ತಮಗೆ ಇಷ್ಟ ಬಂದಂತೆ ಮತ ಚಲಾಯಿಸುವ, ತಮಗೆ ಅನಿಸಿದ್ದನ್ನು ಮಾತಾಡುವ ಸ್ವಾತಂತ್ರ್ಯವೂ ಅವರಿಗೆ ಇಲ್ಲ. ಹೊಡೆದತ್ತ ನಡೆಯುವ ಪಶುಗಳಂತೆ ಅವರನ್ನು ನಡೆಸಿಕೊಳ್ಳಲಾಗುತ್ತಿದೆ. ತಮ್ಮ ದೂರು ದುಮ್ಮಾನಗಳನ್ನು ಸದನದಲ್ಲಿ ತೋಡಿಕೊಂಡು, ಅವುಗಳಿಗೆ ಪರಿಹಾರ ಪಡೆಯುವುದೇ ಅಸ್ಪೃಶ್ಯರನ್ನು ಶಾಸನಸಭೆಗಳಿಗೆ ಆರಿಸಿ ತರುವ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಕಾಂಗ್ರೆಸ್ ಅತ್ಯಂತ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಭಂಗಗೊಳಿಸಿದೆ.
೭ಈ ಸುದೀರ್ಘ ದುಃಖದ ಕತೆಯನ್ನು ಚುಟುಕಾಗಿ ಹೀಗೆ ಹೇಳಿ ಮುಗಿಸಬಹುದು- ಪೂನಾ ಒಡಂಬಡಿಕೆಯ ಎಲ್ಲ ಜೀವರಸವನ್ನು ಹೀರಿದ ಕಾಂಗ್ರೆಸ್ ಪಕ್ಷ, ಅಳಿದುಳಿದ ಒಣ ದಂಟನ್ನು ಅಸ್ಪಶ್ಯರ ಮುಖದ ಮೇಲೆ ರಾಚಿ ಎಸೆದಿದೆ.
೮ಪ್ರಾಥಮಿಕ ಚುನಾವಣೆಗಳಲ್ಲಿ ಅಸ್ಪೃಶ್ಯರು ತಿರಸ್ಕರಿಸಿದ್ದ ಅದೇ ಹುರಿಯಾಳುಗಳನ್ನು ಅಂತಿಮ ಚುನಾವಣೆಗಳಲ್ಲಿ ಸವರ್ಣೀಯ ಹಿಂದೂಗಳ ಮತಗಳಿಂದ ಗೆಲ್ಲಿಸಿ ತರುವ ಮೂಲಕ ಅಸ್ಪೃಶ್ಯರ ಮತಾಧಿಕಾರವನ್ನು ಅಳಿಸಿ ಹಾಕಿದೆ ಕಾಂಗ್ರೆಸ್ ಪಕ್ಷ.
೯ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಸ್ಪೃಶ್ಯನನ್ನು ಅಸ್ಪೃಶ್ಯರ ಪ್ರತಿನಿಧಿಯೆಂದು ನಾಮಕರಣ ಮಾಡುವ ಅಧಿಕಾರವನ್ನು ಹಿಂದೂಗಳ ಕೈಗೆ ಇರಿಸಿರುವ ಒಪ್ಪಂದವೇ ಪೂನಾ ಒಪ್ಪಂದ.
ಈ ಪರಿಸ್ಥಿತಿ ಬದಲಾಗಿದೆ ಎಂದು ಎದೆ ತಟ್ಟಿ ಹೇಳುವವರು ಯಾರಾದರೂ ಇದ್ದಾರಾ? ಪೂನಾ ಒಪ್ಪಂದ ಜಾರಿಯಾಗಿ ೯೦ ವರ್ಷಗಳು ಉರುಳಿವೆ. ಮುಖ್ಯಧಾರೆಯ ರಾಜಕೀಯ ಪಕ್ಷಗಳು ದಲಿತರನ್ನು ಮತ್ತು ಅವರನ್ನು ನಡೆಸಿಕೊಳ್ಳುವ ವೈಖರಿ ಅಚ್ಚ ಬಾಬಾಸಾಹೇಬರು ಹೇಳಿದ್ದಂತೆಯೇ ಮುಂದುವರಿದಿದೆ. ೯೦ ವರ್ಷಗಳಲ್ಲಿ ಬದಲಾಗದ್ದು ಮುಂದೆಂದಾದರೂ ಬದಲಾದೀತೆಂದು ನಂಬುವುದಾದರೂ ಹೇಗೆ? ಇನ್ನಷ್ಟು ಹದಗೆಡಬಹುದೆಂದು ಧಾರಾಳವಾಗಿ ಹೇಳಬಹುದು.
ಪೂನಾ ಒಡಂಬಡಿಕೆ ಇವರನ್ನು ರಾಜಕೀಯ ಪಕ್ಷಗಳ ಶಾಶ್ವತ ಗುಲಾಮಗಿರಿಗೆ ನೂಕಿದೆ. ಮೀಸಲು ಮತಕ್ಷೇತ್ರಗಳೇ ಇರಬಹುದು. ಆದರೆ ಅಲ್ಲಿಂದ ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು. ಮೇಲ್ಜಾತಿಗಳೆನ್ನುವವರನ್ನು ಖುಷಿ ಮಾಡುವವರು ದಲಿತರ ಹಿತ ಕಾಯುವುದು ಹೇಗೆ ಸಾಧ್ಯ?
ಸದ್ಯದ ರಾಜಕೀಯ ಮೀಸಲಾತಿ ವ್ಯವಸ್ಥೆ ಕುರಿತು ಮೇಲ್ಜಾತಿ ಪ್ರಾಬಲ್ಯದ ರಾಜಕೀಯ ಪಕ್ಷಗಳು ಸಂತೋಷವಾಗಿವೆ. ಮೀಸಲು ಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಯ ಗೆಲುವನ್ನು ದಲಿತ ಮತದಾರರು ನಿರ್ಧರಿಸಕೂಡದು. ಬದಲಾಗಿ ಅಂತಹ ಅಧಿಕಾರ ತಮ್ಮ ಕೈಲಿರಬೇಕು ಎಂಬ ಅವರ ಬಯಕೆಯನ್ನು ಪೂನಾ ಒಪ್ಪಂದ ಈಡೇರಿಸಿಕೊಟ್ಟಿದೆ. ಅವರು ಬಯಸುವ ಈ ವ್ಯವಸ್ಥೆಯಲ್ಲಿ ದಲಿತ ಜನಪ್ರತಿನಿಧಿಯು ತನ್ನ ದಲಿತ ಮತದಾರರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ. ಆತನ ಅಥವಾ ಆಕೆಯ ನಿಷ್ಠೆ ತನ್ನ ರಾಜಕೀಯ ಪಕ್ಷ ಮತ್ತು ನಾಯಕತ್ವಕ್ಕೆ ಮೀಸಲು.
ಈ ಕುರಿತು ೨೦೧೨ರ ಒಂದು ಉದಾಹರಣೆಯನ್ನು ರಾಜಶೇಖರ ವುಂದ್ರು ತಮ್ಮ ಪುಸ್ತಕವೊಂದರಲ್ಲಿ ನೀಡುತ್ತಾರೆ. ಯಶವೀರ್ ಸಿಂಗ್ ಎಂಬಾತ ಸಮಾಜವಾದಿ ಪಕ್ಷದ ದಲಿತ ಸಂಸದ. ಉತ್ತರಪ್ರದೇಶದ ನಗೀನಾ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುತ್ತಾನೆ. ದಲಿತ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಮುಂದುವರಿಸುವ ವಿಧೇಯಕದ ಪ್ರತಿಯೊಂದನ್ನು ಆತ ೨೦೧೨ರ ಡಿಸೆಂಬರ್ ೧೯ರಂದು ಪಾರ್ಲಿಮೆಂಟಿನಲ್ಲಿ ಹರಿದು ಹಾಕುತ್ತಾನೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸಮಾಜವಾದಿ ಪಾರ್ಟಿ ವಿರೋಧಿಸುವ ನಿರ್ಧಾರವನ್ನು ತೆಗೆದುಕೊಂಡಿರುತ್ತದೆ. ಹೀಗಾಗಿ ತಾನು ದಲಿತನಾಗಿದ್ದರೂ ದಲಿತ ಹಿತದ ವಿಧೇಯಕವನ್ನು ಹರಿದು ತೂರುತ್ತಾನೆ. ಇಂತಹ ಅನಾಹುತದ ಭವಿಷ್ಯವನ್ನು ಬಾಬಾಸಾಹೇಬರು ನುಡಿದಿದ್ದರು. ಪೂನಾ ಒಪ್ಪಂದದ ಅಡಿಯಲ್ಲಿ ದಲಿತರು ಮೇಲ್ಜಾತಿಗಳ ಕೈಯಲ್ಲಿನ ಕೊಡಲಿಯ ಕಾವುಗಳು. ತಾನು ಹುಟ್ಟಿ ಬೆಳೆದ ಪರಿಸರವನ್ನು, ತನ್ನದೇ ಬಂಧು ಬಾಂಧವರನ್ನು ಕಡಿದು ಹಾಕಲು ದಲಿತರು ಬಳಕೆಯಾಗುತ್ತಿದ್ದಾರೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

10 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

37 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago