ಎಡಿಟೋರಿಯಲ್

ದೆಹಲಿ ಧ್ಯಾನ : ದಲಿತನಾಯಕ ಮಲ್ಲಿಕಾರ್ಜುನ ಖರ್ಗೆಯೀಗ ಕಾಂಗ್ರೆಸ್ ಅಧ್ಯಕ್ಷ

– ಡಿ.ಉಮಾಪತಿ

ಪಕ್ಷದ ಮನೆಯಲ್ಲಿ ಕತ್ತಲೆ ಕವಿದ ದಿನಗಳಲ್ಲೇ ದೀಪ ಮುಡಿಸುವ ದಂದುಗ ಖರ್ಗೆಯವರ ಹೆಗಲೇರಿರುವುದು ಇದು ಮೂರನೆಯ ಸಲ

ಅಧಿಕಾರ ಪದವಿಗಳಿಗಾಗಿ ಒಬ್ಬರನ್ನು ಮತ್ತೊಬ್ಬರು ಕಾಲೆಳೆದು ಕೆಡವುವ ಕುತಂತ್ರಗಳ ಮಡುವು ದಿಲ್ಲಿಯ ರಾಜಕಾರಣ. ಈ ಮಡುವಿನಲ್ಲಿ ಈಸಿ ಜೈಸುವ ರಾಜಕಾರಣಗಳಿಗೆ ಆಕ್ರಮಣಕಾರೀ ಮನಸ್ಥಿತಿಯ ಜೊತೆಗೆ ಉತ್ತರ ಭಾರತದ ಆಡು ಭಾಷೆ ಹಿಂದೀ ನಾಲಗೆಯ ಮೇಲೆ ನಲಿಯಬೇಕು. ತಮ್ಮದೇ ಪಕ್ಷಗಳ ಒಳ ಹೊರಗೆ ಕಾಲೆಳೆದು ಕೆಡುವುವ ಕುಟಿಲ ಕಾರಸ್ಥಾನಗಳ ಅರಿವಿರಬೇಕು.

ಇವ್ಯಾವುವೂ ಇಲ್ಲದೆ ಅದೃಷ್ಟಮಾತ್ರದಿಂದಲೇ ಪ್ರಧಾನಿ ಹುದ್ದೆಗೆ ಏರಿದ ಮೊದಲ ಕನ್ನಡಿಗ ಎಚ್.ಡಿ.ದೇವೇಗೌಡ. ಅವರು ನೀಡಿದ ಆಡಳಿತ ಕಳಪೆಯದೇನೂ ಅಲ್ಲ. ಆದರೆ ವರ್ಷ ತುಂಬುವ ಮುನ್ನವೇ ಇಲ್ಲಿಯ ರಾಜಕಾರಣದ ಒಳಸುಳಿಗಳು ಅವರ ಪದವಿಯನ್ನು ಆಹುತಿ ಪಡೆದವು.

ಉಳಿದಂತೆ ರಾಜ್ಯದ ಹಲವು ತಲೆಯಾಳುಗಳು ಕೇಂದ್ರದ ಹಲವು ಸರ್ಕಾರಗಳಲ್ಲಿ ಮಂತ್ರಿಗಳಾದರು. ಕೆಲವರಿಗೆ ಉತ್ತಮ ಖಾತೆಗಳೂ ದೊರೆತವು. ಆದರೆ ಹಾಗೆ ದೊರೆತದ್ದು ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ದೊರೆಯಲೇಬೇಕಿದ್ದ ಪ್ರಾತಿನಿಧ್ಯದ ಕಾರಣಕ್ಕೆ. ಗೌಡರು ಏರಿದ್ದು ಪ್ರಧಾನಿ ಹುದ್ದೆ ಹೌದು. ಅದರ ಹಿರಿಮೆ ಗರಿಮೆಯೇ ಬೇರೆ ಎಂಬುದನ್ನು ಒಪ್ಪಲೇಬೇಕು. ಆನಂತರ ಕರ್ನಾಟಕದ ಹೆಸರು ದೊಡ್ಡ ರೀತಿಯಲ್ಲಿ ದೆಹಲಿಯಲ್ಲಿ ಮುನ್ನೆಲೆಗೆ ಬಂದದ್ದು ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಮಂತ್ರಿಯಾದಾಗ.

ಕಾಂಗ್ರೆಸ್ಸು ನೆಲಕಚ್ಚಿರುವ ದಿನಗಳಲ್ಲಿ ದಿಲ್ಲಿ ಎದ್ದು ಕುಳಿತು ಗಮನಿಸಿದ ರಾಜ್ಯದ ಮತ್ತೊಂದು ರಾಜಕೀಯ ವ್ಯಕ್ತಿತ್ವ ಮಲ್ಲಿಕಾರ್ಜುನ ಖರ್ಗೆ ಅವರದು.

2014ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗಳಿಸಿದ್ದು ಕೇವಲ 44 ಸೀಟುಗಳು. ಅಧಿಕೃತ ಪ್ರತಿಪಕ್ಷದ ಸ್ಥಾನವೂ ಕೈ ತಪ್ಪಿತ್ತು. ಅದಕ್ಕೆ ಕನಿಷ್ಠ 55 ಸ್ಥಾನಗಳಲ್ಲಾದರೂ ಆರಿಸಿ ಬರಬೇಕಿತ್ತು. ತನ್ನ ಸಾಂವಿಧಾನಿಕ ಇತಿಹಾಸದಲ್ಲಿ ಮೊದಲ ಸಲ ಇಂತಹ ಅಪಮಾನಕ್ಕೆ ಗುರಿಯಾಗಿತ್ತು ಈ ಪಕ್ಷ. ಸ್ಥಾನಮಾನ ಸಿಗಲಿಲ್ಲವೆಂದು ಕೈ ಚೆಲ್ಲಿ ಕುಳಿತುಕೊಳ್ಳಲು ಬರುವುದಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕನೊಬ್ಬನನ್ನು ಆರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಈ ಸ್ಥಾನಕ್ಕೆ ಎದ್ದು ಬಂದ ಅಚ್ಚರಿಯ ಆಯ್ಕೆ ಮಲ್ಲಿಕಾರ್ಜುನ ಖರ್ಗೆ ಅವರದು. ಹಿರಿಯರೂ, ರಾಜಕಾರಣ ಮತ್ತು ಆಡಳಿತದಲ್ಲಿ ಅಪಾರ ಅನುಭವ ಉಳ್ಳವರು. ಆದರೆ ಉತ್ತರ ಭಾರತದ ರಾಜಕಾರಣಕ್ಕೆ ಹಳಬರೆಂದು ಹೇಳುವಂತಿರಲಿಲ್ಲ.

ಐದು ವರ್ಷಗಳ ಕಾಲ ಕೇಂದ್ರದಲ್ಲಿ ಮಂತ್ರಿಯಾಗಿದ್ದು ಸಚಿವ ಸಂಪುಟ, ಲೋಕಸಭೆ, ರಾಜ್ಯಸಭೆಯನ್ನು ಕಂಡದ್ದು ಹೌದು. ನಾಲ್ಕು ದಶಕಗಳ ರಾಜಕಾರಣದ ಅನುಭವದಲ್ಲಿ ಐದು ವರ್ಷಗಳ ಕಾಲ ಕೇಂದ್ರ ಮಂತ್ರಿ ಹುದ್ದೆಯನ್ನು ನಿಭಾಯಿಸಿರುವ ಖರ್ಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ಅವಕಾಶ ಸಿಕ್ಕಾಗಲೆಲ್ಲ ನೀರೊಳಗಿನ ಮೀನಿನಂತೆ ಲೀಲಾಜಾಲವಾಗಿ ಹೊಳೆದಿದ್ದವರು.

ಆರಂಭದಲ್ಲಿ ದಕ್ಕಿದ್ದು ಕಾರ್ಮಿಕ ಮಂತ್ರಿ ಖಾತೆ. ಕಾರ್ಮಿಕ ಹಿತಗಳ ಬಲಿದಾನ ಆಗಬಾರದೆಂಬ ಧೋರಣೆಯಿಂದಲೇ ಆಡಳಿತ ನಡೆಸಿದರು. ಬಡತನದ ರೇಖೆಯ ಕೆಳಗೆ ಜೀವಿಸುವ ಅಸಂಘಟಿತ ವಲಯದ ಕಾರ್ಮಿಕರಿಗೆಂದು ರೂಪಿಸಲಾಗಿದ್ದ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಸೈಕಲ್ ರಿಕ್ಷಾ ಎಳೆಯುವವರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಸ್ತರಿಸಿದರು.

ಎರಡನೆಯ ಯುಪಿಎ ಸರ್ಕಾರದ ಅವಧಿಯ ಕಡೆಯ ಭಾಗದಲ್ಲಿ ಅವರ ಖಾತೆ ರೇಲ್ವೆಗೆ ಬದಲಾಗಿತ್ತು. ಅಲ್ಲಿಯೂ ಭ್ರಷ್ಟಾಚಾರದ ಕೊಳೆ ಅಂಟಿಸಿಕೊಳ್ಳದೆ ಪಾರಾದರು. ಕರ್ನಾಟಕದ ಪಾಲಿಗಂತೂ ವರವೇ ಆದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕನ ಸ್ಥಾನ ದೊರೆತದ್ದು ಖುದ್ದು ಖರ್ಗೆಯವರಿಗೇ ಅನಿರೀಕ್ಷಿತ. ಆರಕ್ಕೆ ಏರದಂತೆ ಮೂರಕ್ಕೆ ಇಳಿಯದಂತೆ ಭಾವನೆಗಳನ್ನು ಮುಖದಲ್ಲಿ ತೋರ್ಪಡಿಸದೆ ನಿರ್ಲಿಪ್ತರಂತೆ ಕಾಣುವುದು ಖರ್ಗೆಯವರಿಗೆ ಒಲಿದಿರುವ ಕಲೆ. ಆಯ್ಕೆಯ ಮರುದಿನ ದಿಲ್ಲಿಗೆ ಬಂದಾಗ ಅವರು ಹಿಗ್ಗಿದಂತೆಯೂ ತೋರಲಿಲ್ಲ. ಕುಗ್ಗಿದಂತೆಯೂ ಕಾಣಲಿಲ್ಲ. ಆದರೆ ಈ ಅಗಾಧ ಜವಾಬ್ದಾರಿಯು ಅವರ ಅರಿವಿನ ಆಳಕ್ಕೆ ಇಳಿದಿದ್ದು ನಿಚ್ಚಳವಿತ್ತು.
ಸೋನಿಯಾ ಗಾಂಧೀ, ರಾಹುಲ್ ಗಾಂಧೀ ಹಾಗೂ ಪಕ್ಷದ ಇತರೆ ಹಿರಿಯ ಅನುಭವೀ ನಾಯಕರು ಮಾರ್ಗದರ್ಶನ ಮಾಡಬೇಕು ಎಂಬ ಶುರುವಿನ ಅವರ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಈಡೇರಿದಂತೆ ಕಾಣಲಿಲ್ಲ. ಆದರೆ ಕಾಂಗ್ರೆಸ್ಸಿಗೆ ಅವರದು ಅಳುಕದ ಅಚಲ ನಿಷ್ಠೆ. ಜೊತೆಗೆ ಯಾವುದೇ ವಿವಾದಕ್ಕೆ ಸಿಲುಕಿರದ ಅವರ ರಾಜಕೀಯ ಬದುಕು ಹಾಗೂ ಹಿರಿಯ ವಿಶ್ವಾಸಾರ್ಹ ದಲಿತ ಚಹರೆ ಅವರನ್ನುಈ ಗುರುತರ ಸ್ಥಾನಕ್ಕೆ ಕರೆತಂದು ನಿಲ್ಲಿಸಿತ್ತು.

ಆಯ್ಕೆ ಹೊಂದಿದ ಮರುದಿನ ದಿಲ್ಲಿಯಲ್ಲಿ ಸುದ್ದಿಗಾರರು ಅವರತ್ತ ತೂರಿದ್ದ ಪ್ರಶ್ನೆಯೊಂದು ಹೀಗಿತ್ತು- ಬಿಜೆಪಿಗೆ ತನ್ನ ಸ್ವಂತಶಕ್ತಿಯ ಮೇಲೆ ಬಹುಮತ ದೊರೆತಿದ್ದು, ಆಕ್ರಮಣಕಾರಿ ಮಾತುಗಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಗೆ ಎದುರಿಸುತ್ತೀರಿ?

ಆ ಸಂದರ್ಭ ಬಂದಾಗ ಹೇಗೆ ಎದುರಿಸುತ್ತೇನೆ ಎಂಬುದು ತಾನಾಗಿಯೇ ಗೊತ್ತಾಗುತ್ತೆ. ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ. ಮೋದಿ ಒಂದು ಸವಾಲು ಎಂದು ನೀವು ಹೇಳಬಹುದು. ಆದರೆ ಆ ಸವಾಲಿಗೆ ಈಗಲೇ ಉತ್ತರ ಸಿಗುವುದಿಲ್ಲ. ಸವಾಲು ಎದ್ದಾಗ ಅದಕ್ಕೆ ಜವಾಬು ತಾನೇ ತಾನಾಗಿ ಸಿಗುತ್ತದೆ ಎಂದಿದ್ದರು ಖರ್ಗೆ.

ಅಂದಿನ ಸಂದರ್ಭದಲ್ಲಿ ಅವರ ಈ ಆತ್ಮವಿಶ್ವಾಸವನ್ನೂ ಗಂಭೀರವಾಗಿ ಪರಿಗಣಿಸಿದವರು ಬಹಳ ಕಡಿಮೆ. ಆದರೆ ದಿನಗಳು ಉರುಳಿದಂತೆ ಕಾಂಗ್ರೆಸ್ ಪಕ್ಷದ ನಾಯಕನಾಗಿ ಸಂಸದ್ಕಲಾಪದಲ್ಲಿ ತಮ್ಮ ಛಾಪು ಮೂಡಿಸಿದ್ದು ಹೌದು.

ಮೊತ್ತ ಮೊದಲ ಅಧಿವೇಶನದಲ್ಲಿ ಸ್ಪೀಕರ್ ಹುದ್ದೆಗೆ ಆಯ್ಕೆಯಾದ ಸುಮಿತ್ರಾ ಮಹಾಜನ್ ಅವರನ್ನ ಅಭಿನಂದಿಸುವ ಭಾಷಣದಲ್ಲೇ ಖರ್ಗೆ ತಮ್ಮ ಆಯ್ಕೆಯನ್ನು ಸಾಬೀತು ಮಾಡಿ ತೋರಿಸಿದರು. ಐದು ನಿಮಿಷಗಳ ಕಾಲ ನಿರರ್ಗಳವಾಗಿ ಹಿಂದೀಯಲ್ಲಿ ಮಾತನಾಡಿ ಉರ್ದು ಶಾಯರಿಯೊಂದನ್ನು ಹೇಳಿ ಚಕಿತಗೊಳಿಸಿದ್ದರು.

ರಾಜೀವ ಪ್ರತಾಪ ರೂಢಿಗೆ ಅವರು ನೀಡಿದ್ದ ಜವಾಬೊಂದು ಹೀಗಿತ್ತು- ”ಕೌರವರು ನೂರು ಜನರಿದ್ದರೂ ಅವರನ್ನು ಮಣ್ಣು ಮುಕ್ಕಿಸಿದ ಪಾಂಡವರು ಐದೇ ಮಂದಿ ಎಂಬುದು ನೆನಪಿರಲಿ. ನಿಮಗೆ (ಬಿಜೆಪಿಗೆ) ದೊರೆತಿರುವ ಮತಗಳ ಪ್ರಮಾಣ ಶೇ.31 ಮಾತ್ರ. ಅರ್ಥಾತ್ ಉಳಿದ ಶೇ.69ರಷ್ಟು ಮಂದಿ ನಿಮ್ಮ ವಿರುದ್ಧ ಚಲಾಯಿಸಿದ್ದಾರೆ’’.

ಮಾತಿನ ನಂತರ ಪ್ರೆಸ್ ಗ್ಯಾಲರಿಯಲ್ಲಿ ನೆರೆದಿದ್ದ ಪತ್ರಕರ್ತರು ಮಾತ್ರವಲ್ಲದೆ ಸೋನಿಯಾಗಾಂಧೀ, ರಾಹುಲ್ ಗಾಂಧೀ ಕೂಡ ಖರ್ಗೆಯವರನ್ನು ಅಭಿನಂದಿಸಿದ್ದರು.

ಮತ್ತೊಂದು ಸಂದರ್ಭದಲ್ಲಿ ಮೋದಿಯವರು ದೀರ್ಘ ಭಾಷಣ ಮಾಡಿ ವಿರಮಿಸಿದ ಒಡನೆಯೇ ಮಾತಾಡಿದ ಖರ್ಗೆ ಹೇಳಿದ್ದು- ”ನಿಮ್ಮ ಭಾಷಣ ಅಮೋಘವಾಗಿತ್ತು. ಆದರೆ ಹಸಿದ ಹೊಟ್ಟೆಗಳು ಕೇವಲ ಆಡಂಬರದ ಮಾತುಗಳಿಂದ ತುಂಬುವುದಿಲ್ಲ…’’
.
ಅಧಿವೇಶನದಲ್ಲಿ ಒಮ್ಮೆ ಬಿಡುವಿನ ವೇಳೆಯಲ್ಲಿ ಸೆಂಟ್ರಲ್ ಹಾಲಿನಲ್ಲಿ ಕುಳಿತಿದ್ದ ಖರ್ಗೆ ಬಳಿ ಅನಿರೀಕ್ಷಿತವಾಗಿ ನಡೆದು ಬಂದವರು ಅಂದಿನ ಬಿಜೆಪಿ ನಾಯಕ ಮತ್ತು ಅರ್ಥಮಂತ್ರಿಯಾಗಿದ್ದ ಅರುಣ್ ಜೇಟ್ಲಿ. ಬಂದವರೇ ಕೈ ಕುಲುಕಿ ಅಭಿನಂದಿಸಿದ್ದು ಖರ್ಗೆಯವರ ಸಮಯಸ್ಫೂರ್ತಿಯ ಮಾತುಗಾರಿಕೆಗೆ ಮತ್ತು ದಕ್ಷಿಣ ಭಾರತೀಯರಾಗಿ ಹಿಂದೀ ಭಾಷೆಯನ್ನು ಲೀಲಾಜಾಲದಿಂದ ಆಡಿದ್ದು ಅವರ ಮೆಚ್ಚುಗೆಗೆ ಕಾರಣವಾಗಿತ್ತು. ಅಧಿಕೃತ ಪ್ರತಿಪಕ್ಷದ ನಾಯಕನ ಸ್ಥಾನ ದೊರೆಯದೆ ಹೋದರೂ, ಕಷ್ಟಕಾಲದಲ್ಲಿ ಪಕ್ಷ ನೀಡಿದ್ದ ಹೊಣೆಯನ್ನು ವಿಶ್ವಾಸಕ್ಕೆ ಚ್ಯುತಿ ಬರದಂತೆ ನಿಭಾಯಿಸುವ ಮನೋ ನಿರ್ಧಾರ ಅವರದಾಗಿತ್ತು. ಸಾಗಬೇಕಿರುವ ದಾರಿ ದೂರವಿದೆ ಎಂಬುದು ಅವರಿಗೆ ತಿಳಿದಿತ್ತು.

2009ರಲ್ಲಿ ಕಲಬುರ್ಗಿಯಿಂದ ಲೋಕಸಭೆಗೆ ಆಯ್ಕೆಯಾಗಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟದಲ್ಲಿ ಕಾರ್ಮಿಕ ಮಂತ್ರಿಯಾದರು. 2014ರಲ್ಲಿ ಮರು ಆಯ್ಕೆ ಹೊಂದಿದರು. 2019ರ ಚುನಾವಣೆಯಲ್ಲಿ ಅವರು ಪುನಃ ಲೋಕಸಭೆಗೆ ಆಯ್ಕೆಯಾಗುವುದನ್ನು ತಡೆಗಟ್ಟಲು ಖುದ್ದು ಮೋದಿ-ಶಾ ಜೋಡಿ ತಂತ್ರ ಹೆಣೆದು ಸಫಲವಾಗಿತ್ತು. ಕಾಂಗ್ರೆಸ್ ವರಿಷ್ಠರು ಖರ್ಗೆಯವರನ್ನು ರಾಜ್ಯಸಭೆಗೆ ಆರಿಸಿ ತಂದರು.

ಇದೀಗ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಯಾದ ಅಧ್ಯಕ್ಷ ಸ್ಥಾನ ಅವರಿಗೆ ಒಲಿದಿದೆ. ಪಕ್ಷ ನಿಷ್ಠೆಗೆ ಮತ್ತೊಂದು ಹೆಸರಿದ್ದರೆ ಅದು ಮಲ್ಲಿಕಾರ್ಜುನ ಖರ್ಗೆ. ಸೋನಿಯಾ- ರಾಹುಲ್- ಪ್ರಿಯಾಂಕಾ ನಂಬಿಕೆಯನ್ನು ಖರ್ಗೆ ಸಂಪಾದಿಸಿರುವುದು ನಿಚ್ಚಳ. ಇಲ್ಲವಾಗಿದ್ದರೆ ಶಶಿ ತರೂರ್ ವಿರುದ್ಧ ಭಾರೀ ವಿಜಯ ಅವರದಾಗುತ್ತಿರಲಿಲ್ಲ.
ಪಕ್ಷದ ಪ್ರಥಮ ಕುಟುಂಬ ಕುಣಿಸಿದಂತೆ ಕುಣಿವ ಸೂತ್ರದ ಗೊಂಬೆ ಎಂಬ ಬ್ರಾಹ್ಮಣ್ಯ ಮೂಲದ ಮೀಡಿಯಾ ಖರ್ಗೆಯವರನ್ನು ಟೀಕಿಸಿ ಅವಹೇಳನ ಮಾಡಿದೆ. ಹುಟ್ಟಿನ ಕಾರಣಕ್ಕಾಗಿ ಇಂತಹ ಟೀಕೆಗಳನ್ನು ಎದುರಿಸಿಕೊಂಡು ಬಂದಿದ್ದಾರೆ ಖರ್ಗೆ. ಪುಟವಿಟ್ಟ ಬಂಗಾರದಂತೆ ಕಳಂಕರಹಿತರಾಗಿ ಹೊರಬಿದ್ದಿದ್ದಾರೆ. ಈಗಲೂ ಅಷ್ಟೇ. ಶತಾಯಸ್ಸು ದಾಟಿರುವ ಕಾಂಗ್ರೆಸ್ ಪಕ್ಷವನ್ನು ಮುರಿದು ಕಟ್ಟಬೇಕಿದೆ. ಬೇರು ಮಟ್ಟದಿಂದ ಸುಧಾರಣೆಗಳನ್ನು ತರಬೇಕಿದೆ. ತರುವ ಛಾತಿಯೂ ಖರ್ಗೆಯವರಿಗೆ ಉಂಟು. ಪಕ್ಷದೊಳಗಿನ ಮನೆಮುರುಕ ವ್ಯಕ್ತಿಗಳು ಕಾಲೆಳೆಯದೆ ಸಹಕರಿಸಿದರೆ ಈ ಸಾಧನೆ ಕೂಡ ಖರ್ಗೆ ಕೈವಶ ಆಗಲಿದೆ.

ಲೋಕಸಭೆಗೆ 120 ಸೀಟುಗಳನ್ನು ಆರಿಸುವ ಯೂಪಿ- ಬಿಹಾರ ರಾಜ್ಯಗಳಲ್ಲಿ ನೆಲಕಚ್ಚಿ ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತವೆನಿಸುವ ಹಂತಕ್ಕೆ ಕುಸಿದಿದೆ ಕಾಂಗ್ರೆಸ್ಸು. ಕಾಯಕಲ್ಪ ನೀಡುವ ಮಹಾನ್ ಸವಾಲು ಖರ್ಗೆ ಮುಂದಿದೆ. ಪಕ್ಷದಲ್ಲಿನ ಹಲವು ಅಧಿಕಾರ ಕೇಂದ್ರಗಳು ಹಿಂದೆ ಸರಿದು ಸಲೀಸಾಗಿ ಕೆಲಸ ಮಾಡಲು ಖರ್ಗೆಯವರಿಗೆ ಅನುವು ಮಾಡಿಕೊಡಬೇಕು. ದಲಿತರನ್ನು ತಮ್ಮ ಸ್ವೇಚ್ಛಾನುಸಾರ ಬಗ್ಗಿಸಿಕೊಳ್ಳಬಹುದು ಎಂಬ ಜಾತಿ ಅಹಂಕಾರವನ್ನು ತೊರೆಯಬೇಕು. ಪಕ್ಷದ ಮನೆಯಲ್ಲಿ ಕತ್ತಲೆ ಕವಿದ ದಿನಗಳಲ್ಲೇ ದೀಪ ಮುಡಿಸುವ ದಂದುಗ ಖರ್ಗೆಯವರ ಹೆಗಲೇರಿರುವುದು ಇದು ಕನಿಷ್ಠ ಮೂರನೆಯ ಸಲ. ಈ ಹೊಣೆ ನಿಭಾಯಿಸಲು ಎಂದಿನಂತೆ ಅವರು ತಮ್ಮ ಎಲ್ಲ ಸಾಮರ್ಥ್ಯವನ್ನು ಧಾರೆ ಎರೆಯುವಲ್ಲಿ ಸಂಶಯವಿಲ್ಲ. ದಲಿತರು ಹೆಮ್ಮೆ ಪಡುವಂತೆ ಈ ಕೆಲಸವನ್ನು ಅವರು ಮಾಡಲಿ.
ಹೈದರಾಬಾದ್ ಕರ್ನಾಟಕಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ವಿಶೇಷ ಸಾಂವಿಧಾನಿಕ ಸ್ಥಾನಮಾನ ದೊರಕಿಸಿಕೊಡುವಲ್ಲಿ ಯುಪಿಎ- 2 ಸರ್ಕಾರದಲ್ಲಿದ್ದುಕೊಂಡು ಅವರು ವಹಿಸಿದ ಶ್ರಮ ಉಲ್ಲೇಖನಾರ್ಹ. ಲಿಂಗಾಯತ ಕೋಮಿನ ಸಾಮಾಜಿಕ- ರಾಜಕೀಯ ಪ್ರಾಬಲ್ಯದ ಸೀಮೆಯಲ್ಲಿ ಅವರಂತಹ ದಲಿತನೊಬ್ಬ ಅದಮ್ಯ ರಾಜಕೀಯ ಬದುಕನ್ನು ಕಟ್ಟಿಕೊಂಡದ್ದೇ ಒಂದು ಅಚ್ಚರಿಯ ಸಾಧನೆ!

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

6 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

6 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago