ಎಡಿಟೋರಿಯಲ್

ದೆಹಲಿ ಧ್ಯಾನ:‘ಬೇಟಿ ಬಚಾವೋ?’ ಎಂಬ ತಮ್ಮ ಘೋಷಣೆಗೆ ಅರ್ಥ ಹೇಳಲಿ ಪ್ರಧಾನಿ

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಸರ್ವಾಧಿಕಾರಿ ವರ್ತನೆ ಮತ್ತು ಲೈಂಗಿಕ ಕಿರುಕುಳ ಕುರಿತು ಬೆಚ್ಚಿ ಬೀಳಿಸುವ ಆಪಾದನೆಗಳು ಬಯಲಿಗೆ ಬಂದಿವೆ. ಈ ಆಪಾದನೆಗಳನ್ನು ಮಾಡಿರುವವರು ದೇಶಕ್ಕೆ ದೊಡ್ಡ ಹೆಸರು ತಂದಿರುವ ಕುಸ್ತಿ ಕ್ರೀಡಾಳುಗಳು.

ಮಹಿಳಾ ಕ್ರೀಡಾಳುಗಳಿಗೆ ಲೈಂಗಿಕ ಕಿರುಕುಳದ ಆಪಾದನೆಗಳು ಇದೇ ಮೊದಲಲ್ಲ, ಕೊನೆಯವೂ ಆಗುವ ಸೂಚನೆಗಳಿಲ್ಲ. ನಾಚಿಕೆಗೇಡಿನ ಈ ವಿದ್ಯಮಾನಗಳು ಭಾರತೀಯ ಕ್ರೀಡಾಲೋಕದ ಕತ್ತಲ ಲೋಕದ ಪ್ರತೀಕಗಳು.

ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್ ಮತ್ತಿತರರು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ಕುಳಿತಿದ್ದರು. ಈ ಪ್ರತಿಭಟನೆಗೆ ಕ್ರೀಡಾಳುಗಳು, ಅದರಲ್ಲೂ ಕುಸ್ತಿಪಟುಗಳಿಂದ ವ್ಯಾಪಕ ಬೆಂಬಲ ದೊರೆತಿತ್ತು.

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಜರಂಗ್ ಪುನಿಯಾ ಕರೆ ಕೊಟ್ಟ ನಂತರ ಅಂತಾರಾಷ್ಟ್ರೀಯ ಕುಸ್ತಿ ಪಟುಗಳು, ಹರಿಯಾಣ, ಉತ್ತರಪ್ರದೇಶ ಹಾಗೂ ರಾಜಸ್ತಾನದ ಕುಸ್ತಿ ಪೈಲ್ವಾನರು ದೊಡ್ಡ ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹ ಸೇರಿಕೊಂಡಿದ್ದರು.

ತಮಗೆ ಉಂಟಾದ ಲೈಂಗಿಕ ಕಿರುಕುಳವನ್ನು ಪುರಾವೆಗಳ ಸಹಿತ ರುಜುವಾತುಪಡಿಸಲು ಅನೇಕ ಮಹಿಳಾ ಕುಸ್ತಿಪಟುಗಳು ತಯಾರಿದ್ದಾರೆ. ಉತ್ತರ ಭಾರತ ಮಾತ್ರವಲ್ಲದೆ, ಮಹಾರಾಷ್ಟ್ರ ಹಾಗೂ ಕೇರಳದಿಂದಲೂ ದೂರವಾಣಿ ಕರೆಗಳು ಬಂದಿದ್ದು, ತಮ್ಮ ಕೆಟ್ಟ ಅನುಭವ ಹೇಳಿಕೊಳ್ಳಲು ಸಿದ್ಧರಿದ್ದಾರೆ. ಸರ್ಕಾರ ಕ್ರಮ ಜರುಗಿಸದಿದ್ದರೆ ಎಫ್.ಐ.ಆರ್. ದಾಖಲಿಸಬೇಕಾದೀತು ಎಂದು ವಿನೇಶಾ ಎಚ್ಚರಿಕೆ ನೀಡಿದ್ದರು,

ಈ ಆಪಾದನೆಗಳ ಕೇಂದ್ರಬಿಂದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜಭೂಷಣ್ ಶರಣ್ ಸಿಂಗ್. ಉತ್ತರಪ್ರದೇಶದ ಅತ್ಯಂತ ಪ್ರಭಾವೀ ಕುಳ. ಅಳೆದೂ ಸುರಿದೂ ಕೇಂದ್ರ ಸರ್ಕಾರ ಈ ಆಪಾದನೆಗಳ ವಿಚಾರಣೆಗೆ ಸಮಿತಿಯೊಂದನ್ನು ನೇಮಕ ಮಾಡಿ ಒಂದು ತಿಂಗಳ ಗಡುವು ನೀಡಿದೆ. ಈ ಕ್ರಮವು ತಿಪ್ಪೆ ಸಾರಿಸುವ ಕ್ರಮ ಆಗಕೂಡದು.

“ಬ್ರಿಜಭೂಷಣ್ ಆಪ್ತರೆನ್ನಲಾಗುವ ಕುಸ್ತಿ ಫೆಡರೇಷನ್ನಿನ ಕೆಲವು ಕೋಚ್‌ಗಳು ಮಹಿಳಾ ಕುಸ್ತಿಪಟುಗಳು ಮತ್ತು ಮಹಿಳಾ ಕೋಚ್‌ಗಳನ್ನು ಶೋಷಿಸುತ್ತಾರೆ, ಕೊಳಕಾಗಿ ವ್ಯವಹರಿಸುತ್ತಾರೆ. ಆದರೂ ಅವರನ್ನೇ ರಾಷ್ಟ್ರೀಯ ಕುಸ್ತಿ ತರಬೇತಿ ಶಿಬಿರದಲ್ಲಿ ನೇಮಿಸಲಾಗುತ್ತಿದೆ. ಖುದ್ದು ಅಧ್ಯಕ್ಷರೇ (ಬ್ರಿಜಭೂಷಣ್) ಶೋಷಿಸಿರುವ ಮಹಿಳಾ ಕುಸ್ತಿಪಟುಗಳ ಲೆಕ್ಕವಿಲ್ಲ. ಭಗವಂತನ ದಯೆಯಿಂದ ನಾನು ಸರಿಯಾಗಿದ್ದೇನೆ. ಆದರೆ ಟೋಕಿಯೋ ಒಲಿಂಪಿಕ್ಸ್ ನಂತರ ಈ ವ್ಯಕ್ತಿ (ಬ್ರಿಜಭೂಷಣ್) ನನ್ನನ್ನು ಜೀವಂತ ಉಳಿಸುವುದು ಅನುಮಾನವಿತ್ತು. ಅಷ್ಟೊಂದು ಹಿಂಸೆ ನೀಡಿದ್ದ. ನಿತ್ಯ ಆತ್ಮಹತ್ಯೆಯ ಆಲೋಚನೆಯೇ ಕಾಡುತ್ತಿತ್ತು” ಎಂದು ವಿನೇಶಾ ಕಣ್ಣೀರಿಟ್ಟು ಮಾಧ್ಯಮಗಳ ಮುಂದೆ ಸಂಕಟ ತೋಡಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಲೈಂಗಿಕ ಕಿರುಕುಳದ ಕುರಿತು ನೇರವಾಗಿ ಪ್ರಧಾನಿಯವರಲ್ಲೇ ದೂರಲಾಗಿತ್ತು. ತಾವು ಯಾವ ಕ್ರಮ ತೆಗೆದುಕೊಂಡರೆಂದು ಮೋದಿಯವರು ಸಮಜಾಯಿಷಿ ನೀಡಬೇಕು.

ರಾಷ್ಟ್ರೀಯ ಮಹಿಳಾ ಆಯೋಗವು ಈ ಹಿಂದೆ ಸ್ವಯಂಪ್ರೇರಣೆಯಿಂದ ಕ್ರಮ ಜರುಗಿಸಿದ ಅನೇಕ ಉದಾಹರಣೆಗಳಿವೆ. ಆದರೆ ಹಾಲಿ ಪ್ರಕರಣದಲ್ಲಿ ಮಹಿಳಾ ಆಯೋಗ ಮೌನ ತಳೆದಿದೆ. ಆಯೋಗಕ್ಕೆ ದೂರು ಬಂದಿಲ್ಲವೆಂಬ ಸಬೂಬು ಹೇಳಿ ನುಣುಚಿಕೊಂಡಿದೆ. ಐವತ್ತಾರು ಅಂಗುಲದ ಽಮಂತರೆಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ‘ಸರ್ವಶಕ್ತ’ ಮೋದಿಯವರೇ ಬ್ರಿಜಭೂಷಣ್ ಕುರಿತು ತುಟಿ ಬಿಚ್ಚಿಲ್ಲ. ಬಡಪಾಯಿ ಮಹಿಳಾ ಆಯೋಗದಿಂದ ಇನ್ನೇನನ್ನು ನಿರೀಕ್ಷಿಸಲು ಬಂದೀತು?

‘ಬೇಟಿ ಪಢಾವೋ ಭೇಟಿ ಬಚಾವೋ’ (ಹೆಣ್ಣು ಮಗುವಿಗೆ ಶಿಕ್ಷಣ ನೀಡಿ, ಹೆಣ್ಣು ಮಗುವನ್ನು ಉಳಿಸಿ ಬೆಳೆಸಿ) ಎಂಬ ಘೋಷಣೆಯನ್ನು ಮೋದಿ ಸರ್ಕಾರ ಆಗಸದೆತ್ತರದಿಂದ ಆರಚಿ ಹೇಳುತ್ತಲಿದೆ. ಭಾರೀ ಪ್ರಚಾರ ನೀಡಿದೆ. ಆದರೆ ಇದೊಂದು ಪಕ್ಕಾ ಪೊಳ್ಳು ಘೋಷಣೆ. ಆಡಿದ ಮಾತನ್ನು ನಡೆಸಿಕೊಡುವುದರಲ್ಲಿ ಮೋದಿ ಸರ್ಕಾರದ ದಾಖಲೆ ಅತಿ ಕಳಪೆ.

ಮೋದಿ ಸರ್ಕಾರ ಈ ಘೋಷಣೆಯನ್ನು ಹಾಸ್ಯಾಸ್ಪದಗೊಳಿಸಿರುವುದು ಇದೇ ಮೊದಲೇನೂ ಅಲ್ಲ. ಉನ್ನಾಂವ್ ಅತ್ಯಾಚಾರ ಪ್ರಕರಣದ ಆಪಾದಿತನಾಗಿದ್ದ ಕುಲದೀಪ್ ಸೆಂಗರ್ ಎಂಬ ಬಿಜೆಪಿ ಶಾಸಕ, ತಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಮುಂತಾದವರ ಮೇಲೆ ಕ್ರಮ ಜರುಗಿಸಲು ಮೋದಿಯವರ ಪಕ್ಷದ ಸರ್ಕಾರಗಳು ಎಣಿಸಿದ ಮೀನಮೇಷ ಅಕ್ಷಮ್ಯ.

ಸತತ ಆರು ಬಾರಿ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿರುವ ಬ್ರಿಜಭೂಷಣ್ ರಾಜಕೀಯ-ಸಾಮಾಜಿಕ-ತೋಳ್ಬಲ-ಹಣಬಲದ ಅಬ್ಬರ ಉತ್ತರಪ್ರದೇಶದ ಆರು ಜಿಲ್ಲೆಗಳಲ್ಲಿ ಹರಡಿ ಹಬ್ಬಿದೆ. ಗೆಲುವನ್ನು ಪಳಗಿಸಿ ಅದರ ಕುತ್ತಿಗೆಗೆ ಸರಪಳಿ ತೊಡಿಸಿರುವ ಈತ ಕುಸ್ತಿ ಕಣವಿರಲಿ, ರಾಜಕೀಯ ಅಖಾಡವೇ ಆಗಲಿ ಈವರೆಗೆ ಸೋತಿರುವ ಉದಾಹರಣೆಯೇ ಇಲ್ಲ. ಬಿಜೆಪಿಗೆ ಈತ ಬೇಕಾಗಿದ್ದಾನೆಯೇ ವಿನಾ ಈತ ಗೆಲ್ಲಲು ಬಿಜೆಪಿ ಬೇಕಿಲ್ಲ. ಇದೀಗ ಮಹಿಳಾ ಕುಸ್ತಿಪಟುಗಳು ಈ ಇತಿಹಾಸವನ್ನು ಬದಲಿಸುವರೇ ಕಾದು ನೋಡಬೇಕಿದೆ.

ರಾಜಕಾರಣದ ಒಳ ಹೊರಗೆ ಚಂಡಪ್ರಚಂಡರನ್ನು ಎದುರು ಹಾಕಿಕೊಂಡಾಗಲೂ ಈತನ ಕೂದಲೂ ಕೊಂಕಿಲ್ಲ. ‘ಪತಂಜಲಿ’ ಉತ್ಪನ್ನಗಳ ಉದ್ಯಮಿ- ಸನ್ಯಾಸಿ ಬಾಬಾ ರಾಮದೇವ್ ಅವರನ್ನು ‘ಕಲಬೆರಕೆಯ ಅರಸ’ನೆಂದೂ, ಆತನ ಮೇಲೆ ಕ್ರಮ ಜರುಗಿಸಬೇಕೆಂದೂ ಬ್ರಿಜಭೂಷಣ್ ಆಗ್ರಹಿಸಿದ್ದುಂಟು. ಹಾಗೆಯೇ ನೆರೆಹಾವಳಿಗೆ ಸಿಕ್ಕಿ ಉತ್ತರಪ್ರದೇಶದ ತತ್ತರಿಸಿದಾಗ ಪರಿಹಾರ ಕಾಮಗಾರಿ ಏನೇನೂ ಸಾಲದೆಂದೂ, ಉತ್ತರಪ್ರದೇಶಕ್ಕೆ ದೇವರೇ ದಿಕ್ಕೆಂದೂ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಈತ ಟೀಕಿಸಿದ್ದುಂಟು.

ಬಿಜೆಪಿಯು ಬೆನ್ನು ಬಿದ್ದು ಬೇಟೆಯಾಡಿದ ಉತ್ತರಪ್ರದೇಶದ ಮುಸ್ಲಿಮ್ ನಾಯಕ ಆಝಮ್ ಖಾನ್ ಅವರನ್ನು ಜನಸಮೂಹಗಳ ಬೆಂಬಲವುಳ್ಳ ನಾಯಕನೆಂದು ಈತ ಹೊಗಳಿದ್ದ. ಮುಂಬಯಿಯಲ್ಲಿನ ಉತ್ತರಪ್ರದೇಶ ಮೂಲದ ನಿವಾಸಿಗಳನ್ನು ಅವಮಾನಿಸುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ತಲೆಯಾಳು ರಾಜ್ ಠಾಕ್ರೆ ಕ್ಷಮಾಪಣೆ ಕೇಳುವ ತನಕ ಅಯೋಧ್ಯೆಯೊಳಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಬೆದರಿಸಿದ್ದ. ಹಲವು ಜಿಲ್ಲೆಗಳಲ್ಲಿ ಭಿತ್ತಿಪತ್ರಗಳ ಬರೆಯಿಸಿ ಹಾಕಿಸಿದ್ದ. ಹೀಗೆ ಬೆದರಿಸಿದ್ದ ದಿನಗಳಲ್ಲಿ ಬಿಜೆಪಿ ನಾಯಕತ್ವ ರಾಜ್ ಠಾಕ್ರೆಯನ್ನು ಒಲಿಸಿಕೊಳ್ಳುವ ಯತ್ನದಲ್ಲಿತ್ತೆಂಬುದು ಗಮನಾರ್ಹ.

ಪ್ರತಿ ವರ್ಷ ಅದ್ಧೂರಿಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರಿಸಿ ಅವರಿಗೆ ಮೋಟರ್ ಸೈಕಲ್, ಸ್ಕೂಟಿ, ನಗದು ಬಹುಮಾನಗಳನ್ನು ವಿತರಿಸುತ್ತಾನೆ. ಲಖ್ನೋ, ಬಹ್ರೇಚ್, ಬಲರಾಂಪುರ್, ಶ್ರಾವಸ್ತಿ, ಅಯೋಧ್ಯ, ಬಾರಾಬಂಕಿ ಜಿಲ್ಲೆಗಳಲ್ಲಿ ಈ ಸಲ ಜರುಗಿದ ಈತನ ಹುಟ್ಟುಹಬ್ಬದ ಆಚರಣೆಗಳಲ್ಲಿ ಕೇಂದ್ರ ಮಂತ್ರಿ ಪಂಕಜ್ ಚೌಧರಿ ಪಾಲ್ಗೊಂಡರು. ಗೊಂಡಾ, ಶ್ರಾವಸ್ತಿ, ಬಲರಾಂಪುರ್, ಬಹ್ರೇಚ್, ಅಯೋಧ್ಯ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಕಾನೂನು ಹಾಗೂ ಶಿಕ್ಷಣ ಸೇರಿದಂತೆ ಐವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಒಡೆಯನೀತ. ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ- ರಿಯಾಯಿತಿ ನೀಡುತ್ತಾನೆ. ಬಾಹುಬಲ ಭಯ ಅಭಯ ಧನಬಲಗಳ ಸವಾರ. ಈ ಸೀಮೆಯ ಸಾಮ್ರಾಟ.

ಪುರುಷಾಧಿಪತ್ಯದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಡಿಯಾಳುಗಳು ಹೆಣ್ಣುಮಕ್ಕಳು. ಈ ಪರಿಸ್ಥಿತಿಯಲ್ಲಿ ಈಗಲೂ ಹೆಚ್ಚು ಬದಲಾವಣೆ ಆಗಿಲ್ಲ. ಪುರುಷರೇ ಮೆರೆಯುತ್ತಿದ್ದ ಕುಸ್ತಿ ಕ್ರೀಡೆಯ ಉಕ್ಕಿನ ಗೋಡೆಗಳನ್ನು ಇತ್ತೀಚೆಗೆ ಭೇದಿಸಿದ ಭಾರತೀಯ ಹೆಣ್ಣುಮಕ್ಕಳು ಅನತಿ ಕಾಲದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಸಾಧನೆ ಮಣ್ಣುಪಾಲಾಗದಂತೆ ಅವರ ಘನತೆಯನ್ನು ಕಾಯುವುದು ಸಮಾಜದ ಮತ್ತು ಸರ್ಕಾರದ ಹೊಣೆಗಾರಿಕೆ.

ಭಾರತೀಯ ಕುಸ್ತಿ ಫೆಡರೇಷನ್‌ನ ಕಚೇರಿ ದೆಹಲಿಯ ಅಶೋಕ ರಸ್ತೆಯಲ್ಲಿನ ಬ್ರಿಜಭೂಷಣ್ ಅವರ ಸಂಸದೀಯ ನಿವಾಸದ ಆವರಣದಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಈತನೇ ಫೆಡರೇಷನ್ ಅಧ್ಯಕ್ಷ. ನಿವಾಸಕ್ಕೆ ಬಲವಾದ ಪೊಲೀಸ್ ಕಾವಲು. ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದ ಜಂತರ್ ಮಂತರ್ ನಿಂದ ಬಹಳ ದೂರವೇನೂ ಇಲ್ಲ. ನಿವಾಸದ ಹೊರಗೆ ಕಾಯುತ್ತಿದ್ದ ಕ್ರೀಡಾಳುಗಳು ಆಡಿದ ಮಾತೊಂದು ಮಹತ್ತರ- ‘ನಾವು ಕುಸ್ತಿ ಪಟುಗಳು ಹನುಮಂತನ ಭಕ್ತರು. ರಾವಣನ ಲಂಕೆಯ ಸುಟ್ಟ ದೈವ ಈತ. ಈ ಬಾಹುಬಲಿಗೂ (ಬ್ರಿಜಭೂಷಣ್) ರಾವಣನ ಲಂಕೆಯ ಗತಿಯೇ ಕಾದಿದೆ’.

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

3 hours ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

3 hours ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

4 hours ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

4 hours ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

4 hours ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

4 hours ago