ಎಡಿಟೋರಿಯಲ್

ದೆಹಲಿ ಧ್ಯಾನ – ಮರೆಯಾದ ‘ಅವಕಾಶವಾದಿ ಸಮಾಜವಾದಿ’ ಮುಲಾಯಂ ಸಿಂಗ್

– ಡಿ.ಉಮಾಪತಿ

ಪಕ್ಷದಿಂದ ಪಕ್ಷಕ್ಕೆ ಜಿಗಿದು ಮುಖ್ಯಮಂತ್ರಿಯಾಗಲು ಬಿಜೆಪಿಯಿಂದ ಹಿಡಿದು ಬಿಎಸ್ ಪಿಯ ತನಕ ನೆರವು ಪಡೆಯದ ರಾಜಕೀಯ ಪಕ್ಷಗಳೇ ಇಲ್ಲ!

ಲೋಹಿಯಾ, ಚರಣಸಿಂಗ್ ಹಾಗೂ ಜೇಪಿಯವರಲ್ಲಿ ಭರವಸೆ ಹುಟ್ಟಿಸಿ, ಕಾಂಗ್ರೆಸ್ ವಿರೋಧಿ ರಂಗವನ್ನು ಕಟ್ಟಿದ ಪ್ರಮುಖರಲ್ಲಿ ಮುಖ್ಯರು ಮುಲಾಯಂಸಿಂಗ್. 1962ರ ಫರ್ರೂಕಾಬಾದ್ ಲೋಕಸಭಾ ಉಪ ಚುನಾವಣಾ ಪ್ರಚಾರದಲ್ಲಿ ಲೋಹಿಯಾ ಕಣ್ಣಿಗೆ ಬಿದ್ದಿದ್ದ ಚುರುಕಿನ ಹುಡುಗ.

ಮಗ ಜಗಜ್ಜೆಟ್ಟಿ ಆಗಲೆಂಬುದು ಮುಲಾಯಂ ತಂದೆಯ ಆಸೆಯಾಗಿತ್ತು. ಅಸಾಧಾರಣ ಕುಸ್ತಿ ಪಟುವಾಗಿ ರೂಪುಗೊಂಡರು. ಚಾರ್ಖಾ ಹೆಸರಿನ ಕುಸ್ತಿ ಪಟ್ಟೊಂದು ಅವರ ಕೈವಶವಾಗಿತ್ತು. ತಮ್ಮ ರಾಜಕೀಯ ಗುರು ನಥ್ಥುಸಿಂಗ್ ರ ಕಣ್ಣಿಗೆ ಬಿದ್ದದ್ದು ಕೆಂಪು ಮಣ್ಣಿನ ಕುಸ್ತಿ ಅಖಾಡದಲ್ಲೇ. 1962ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳ ಪ್ರಚಾರ ನಡೆದಿದ್ದ ದಿನಗಳು. ನಥ್ಥುಸಿಂಗ್ ಸಂಯುಕ್ತ ಸಮಾಜವಾದಿ ಪಾರ್ಟಿಯ ಜಸ್ವಂತ್ ನಗರ್ ಕ್ಷೇತ್ರದ ಹುರಿಯಾಳು. ಕುಸ್ತಿ ನೋಡಲು ಬಂದ ನಥ್ಥುಸಿಂಗ್ ಮುಲಾಯಂ ಸೆಣಸಿಗೆ ಮನಸೋತಿದ್ದರು. ಮುಲಾಯಂ ಸ್ನಾಯು ಬಲ ಕುಸ್ತಿ ಪಂದ್ಯವೊಂದರಲ್ಲಿ ನಥ್ಥುಸಿಂಗ್ ಕಣ್ಣು ಕುಕ್ಕಿತ್ತು. ಅಂದಿನಿಂದ ಎದುರಾಳಿಯನ್ನು ಚಿತ್ತು ಮಾಡುವ ಕಲೆ ಅವರಿಗೆ ಕೈ ಕೊಟ್ಟದ್ದು ವಿರಳವೇ ಎನ್ನಬೇಕು

ಕುಸ್ತಿ ನೋಡಲು ಬಂದಿದ್ದ ನಥ್ಥು ಸಿಂಗ್ ಹಿಂದೆಯೇ ನಡೆದ ಮುಲಾಯಂ ಚುನಾವಣಾ ಪ್ರಚಾರದಲ್ಲಿ ತೊಡಗಿಬಿಟ್ಟರು. ಎಸ್.ಎಸ್.ಪಿ. ಜೊತೆ ಅವರ ಬೆಸುಗೆ ಗಟ್ಟಿಯಾಗಿತ್ತು. 1967ರಲ್ಲಿ ಅದೇ ಜಸ್ವಂತ್ ನಗರದಿಂದ ಎಸ್.ಎಸ್.ಪಿ. ಉಮೇದುವಾರರಾಗಿ ಕಣಕ್ಕಿಳಿದರು. ಪ್ರಬಲ ಎದುರಾಳಿ ಲಖ್ಖನ್ ಸಿಂಗ್ ಯಾದವ್ ಅವರನ್ನು ಸೋಲಿಸಿದ್ದರು ಮುಲಾಯಂ. ಅಲ್ಲಿಂದಾಚೆಗೆ ಸೋಲಿಲ್ಲದ ಸರದಾರನೆಂದೇ ಹೆಸರಾದರು. ಹತ್ತು ಸಲ ವಿಧಾನಸಭೆಗೆ ಮತ್ತು ಏಳು ಬಾರಿ ಲೋಕಸಭೆಗೆ ಆರಿಸಿಬಂದರು. ಮೂರು ಸಲ ಮುಖ್ಯಮಂತ್ರಿಯಾದರು. ಒಮ್ಮೆ ಕೇಂದ್ರ ರಕ್ಷಣಾ ಸಚಿವರಾದದ್ದು ಉಂಟು.

ಮೈನ್ಪುರಿ- ಇಟಾವಾ ಎಂಬುದು ಉತ್ತರಪ್ರದೇಶದ ಹಿಂದುಳಿದ ಸೀಮೆ. ಅತಿ ಅಗ್ಗದ ಪಿಸ್ತೂಲುಗಳನ್ನು ಉತ್ತರ ಭಾರತದ ಆಡುಭಾಷೆಯಲ್ಲಿ ಕಟ್ಟಾ ಎಂದು ಕರೆಯಲಾಗುತ್ತದೆ. ಇಂತಹ ಪಿಸ್ತೂಲುಗಳ ಹೇರಳ ತಯಾರಿಕೆ ಮೈನ್ಪುರಿಯ ಗೋಪ್ಯ ಗುಡಿ ಕೈಗಾರಿಕೆ. 1967ರಿಂದ 1992ರ ತನಕ ಪಕ್ಷದಿಂದ ಪಕ್ಷಕ್ಕೆ ಜಿಗಿದ ಈ ಊಸರವಳ್ಳಿ ಮುಖ್ಯಮಂತ್ರಿಯಾಗಲು ಬಿಜೆಪಿಯಿಂದ ಹಿಡಿದು ಬಿಎಸ್ ಪಿಯ ತನಕ ನೆರವು ಪಡೆಯದ ರಾಜಕೀಯ ಪಕ್ಷಗಳೇ ಇಲ್ಲ. ಕಾಂಗ್ರೆಸ್ಸಿನ ಊರುಗೋಲು ಹಿಡಿದದ್ದು ಎರಡು ಬಾರಿ. ಬಿಜೆಪಿಯ ಬೆಂಬಲ ಪಡೆದದ್ದು ಒಮ್ಮೆ ಪ್ರತ್ಯಕ್ಷವಾಗಿ ಮತ್ತೊಮ್ಮೆ ಪರೋಕ್ಷವಾಗಿ.1992ರಲ್ಲಿ ತಾವೇ ರಚಿಸಿದ ಸಮಾಜವಾದೀ ಪಾರ್ಟಿಯ ಸೂತ್ರ ಹಿಡಿದು ನೆಲೆಗೊಂಡರು. 1989ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದದ್ದು ಜನತಾದಳ ಪಕ್ಷದಿಂದ. ಬಿಜೆಪಿಯ ಬೆಂಬಲದಿಂದ ದಕ್ಕಿದ್ದ ಪಟ್ಟವಿದು. ಪ್ರಧಾನಿ ವಿ.ಪಿ.ಸಿಂಗ್ ಅವರು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗದ ವರದಿಯನ್ನು ಜಾರಿ ಮಾಡಿದ ನಂತ ರ ಮಂಡಲದ ವಿರುದ್ಧ ಕಮಂಡಲ ಕತ್ತಿ ಹಿರಿದ ಕಾಲಘಟ್ಟ. ಮುಲಾಯಂ ಕುರ್ಚಿ ಅಲ್ಲಾಡತೊಡಗಿತ್ತು. ಮಂಡಲದ ವಿರುದ್ಧ ಕಮಂಡಲವನ್ನು ಹೂಡಿ ಹಿಂದೂಗಳನ್ನು ಬಾಬರಿ ಮಸೀದಿ ವಿರುದ್ಧ ಕೆರಳಿಸಿದ ಆಡ್ವಾಣಿಯವರ ರಾಮ ರಥಯಾತ್ರೆ ಆರಂಭವಾಗಿತ್ತು. ರಥಯಾತ್ರೆಯನ್ನು ಸ್ವಾಗತಿಸಲು ಮತ್ತು ಬಾಬರಿ ಮಸೀದಿಯನ್ನು ಕೆಡವುವ ಕರಸೇವೆ ಮಾಡಲು 1990ರ ಅಕ್ಟೋಬರ್ 30ರ ಮುಹೂರ್ತ ನಿಗದಿಯಾಗಿತ್ತು. ಅಯೋಧ್ಯೆಯಲ್ಲಿ ಸಾವಿರಾರು ಕರಸೇವಕರು ಜಮೆಯಾದರು. ಕರಸವೇಕರನ್ನು ನಿಯಂತ್ರಿಸಲು ಮುಲಾಯಂ ಸರ್ಕಾರ ಗೋಲಿಬಾರ್ ಗೆ ಆದೇಶ ನೀಡಿತ್ತು.

28 ಮಂದಿ ಕರಸೇವಕರ ಸಾವಿಗೆ ಕಾರಣರಾದರೆಂದು ಕ್ರುದ್ಧಗೊಂಡ ಬಿಜೆಪಿ ಮುಲಾಯಂ ಹೆಸರಿನ ಹಿಂದೆ ಮುಲ್ಲಾ ಎಂಬ ವಿಶೇಷಣವನ್ನು ಸೇರಿಸಿತು. ಮುಲ್ಲಾ ಮುಲಾಯಂ ಸಿಂಗ್ ಎಂಬ ಅಭಿದಾನ ಬಹಳ ಕಾಲದ ತನಕ ಮುಲಾಯಂ ಹೆಗಲೇರಿದ ಒಜ್ಜೆಯಾಗಿ ಉಳಿಯಿತು.
‘ವಾಸ್ತವವಾದಿ’ ಎಂಬ ಮುಸುಕಿನ ಮರೆಯ ಅವಕಾಶವಾದಿ ರಾಜಕಾರಣಿಯಾದರು ಅವರು. ರಾಮಮನೋಹರ ಲೋಹಿಯಾ, ರಾಜನಾರಾಯಣ್, ಚರಣ್ ಸಿಂಗ್ ರೂಪಿಸಿದ್ದ ವ್ಯಕ್ತಿತ್ವ ಕಾಲ ಕಾಲಕ್ಕೆ ಪೊರೆ ಕಳಚಿ ಬಂಡವಾಳವಾದಿಗಳು ಮತ್ತು ಭಾರೀ ಉದ್ಯಮ ಸದನಗಳ ಸಂಗದಲ್ಲಿ ಮಿಂದಿತ್ತು. ಸಮಾಜವಾದೀ ವಿಚಾರ ಪ್ರಣಾಲಿ ಮುಲಾಯಂ ಪಕ್ಷದ ಹೆಸರಿಗಷ್ಟೇ ಸೀಮಿತ ಆಯಿತು. ಅಮರ್ ಸಿಂಗ್ ಮಾದರಿಯ ಪವರ್ ಬ್ರೋಕರ್ ಮುಲಾಯಂ ಅವರ ನೆಚ್ಚಿನ ಬಂಟನಾದರು. ಬಾಲಿವುಡ್ ತಾರೆಗಳ ಬೆಡಗಿನ ಲೋಕ ಅವರ ಕಣ್ಣಾಲಿಗಳನ್ನು ತುಂಬಿ ತೇಲಿಸಿತು.
996ರಲ್ಲಿ ಹಠಾತ್ತನೆ ಮೈ ತಳೆದ ತೃತೀಯ ರಂಗವು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರವಿಟ್ಟು ಯುನೈಟೆಡ್ ಫ್ರಂಟ್ ಸರ್ಕಾರವನ್ನು ರಚಿಸಿತ್ತು. ಪ್ರಧಾನಮಂತ್ರಿಯ ಪದವಿ ಕೂದಲೆಳೆಯ ಅಂತರದಲ್ಲಿ ಮುಲಾಯಂ ಅವರ ಕೈ ತಪ್ಪಿ ಎಚ್.ಡಿ.ದೇವೇಗೌಡರ ಉಡಿಗೆ ಬಿದ್ದಿತ್ತು.

1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡಲಾಗದೆ 13 ದಿನಗಳ ಅಲ್ಪಾಯುಷ್ಯದ ನಂತರ ಅವಸಾನಗೊಂಡಿತ್ತು. ಎರಡನೆಯ ಅತಿದೊಡ್ಡ ಪಕ್ಷ ಕಾಂಗ್ರೆಸ್ಸನ್ನು ಸರ್ಕಾರ ರಚಿಸುವಂತೆ ರಾಷ್ಟ್ರಪತಿ ಆಹ್ವಾನಿಸಿದ್ದರು. ಸರ್ಕಾರ
ರಚನೆಗೆ ಅಗತ್ಯವಿರುವ 272 ಸದಸ್ಯರ ಬೆಂಬಲ ತಮಗೆ ಇರುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧೀ ಸಾರಿದ್ದರು. ಈ 272ರ ಪೈಕಿ ಮುಲಾಯಂಸಿಂಗ್್ ಅವರ ಸಮಾಜವಾದೀ ಪಾರ್ಟಿಯ 20 ಸದಸ್ಯಬಲವೂ ಸೇರಿತ್ತು. ಆದರೆ ಮುಲಾಯಂಸಿಂಗ್ ಹಿಂದೆಗೆದಿದ್ದರು. ನಿಲವು ಬದಲಾಯಿಸುವ ಮುನ್ನ ಬಿಜೆಪಿಯ ತಲೆಯಾಳು ಎಲ್.ಕೆ.ಆಡ್ವಾಣಿ ಅವರನ್ನು ಭೇಟಿ ಮಾಡಿದ್ದರು.

ಡಕಾಯಿತರ ರಾಣಿ ಎಂಬ ಅಭಿದಾನ ಪಡೆದಿದ್ದ ಫೂಲನ್ ದೇವಿ ಲೋಕಸಭೆಗೆ ಆಯ್ಕೆಯಾಗಿ ಸದನದಲ್ಲಿ ನಿಂತು ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ ಐತಿಹಾಸಿಕ ಗಳಿಗೆಗಳನ್ನು ದೇಶದ ತಳಸಮುದಾಯಗಳು ತಲೆದೂಗಿ ಸ್ವಾಗತಿಸಿದ್ದರು. ಆದರೆ ಮಧ್ಯಮವರ್ಗಿಗಳು ಪುರೋಹಿತಶಾಹಿಗಳು ಜನತಂತ್ರದ ದುರ್ಗತಿಯಿದು ಎಂದು ಹಳಿದಿದ್ದವು. ಇಂತಹ ಗಳಿಗೆಗಳನ್ನು ಆಗು ಮಾಡಿದ್ದ ಕೀರ್ತಿ ಮುಲಾಯಂ ಗೆ ಸಲ್ಲಬೇಕು. ಆಕೆಯ ವಿರುದ್ಧದ ಎಲ್ಲ ಕೇಸುಗಳನ್ನು ವಾಪಸು ಪಡೆದು ಸಮಾಜವಾದಿ ಪಾರ್ಟಿಯ ಟಿಕೆಟ್ ನೀಡಿ ಮಿರ್ಜಾಪುರ ಕ್ಷೇತ್ರದಿಂದ ಗೆಲ್ಲಿಸಿ ಲೋಕಸಭೆಗೆ ಕರೆ ತಂದಿದ್ದವರು ಇದೇ ಮುಲಾಯಂ.
1995ರಲ್ಲಿ ಬಿ.ಎಸ್.ಪಿ. ಜೊತೆಗಿನ ಮೈತ್ರಿ ಹಠಾತ್ತನೆ ಮುರಿದು ಬಿದ್ದಿತ್ತು. ಮಾಯಾವತಿಯವರ ಆಕ್ರೋಶ ಎದುರಿಸಬೇಕಿತ್ತು. ಮಲ್ಲಾ-ಕೇವಟ್-ಕಚ್ಚೀ ಎಂಬ ಅಂಬಿಗ ಉಪಪಂಗಡಗಳನ್ನು ಒಲಿಸಿಕೊಳ್ಳುವ ಹಂಚಿಕೆ ಅವರ ಫೂಲನ್ ದೇವಿ ನಡೆಯ ಹಿಂದಿತ್ತು. ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದೊಂದಿಗೆ ಕೈ ಜೋಡಿಸಿ ಉತ್ತರಪ್ರದೇಶ- ಮಧ್ಯಪ್ರದೇಶದ ಚಂಬಲ್ ಮತ್ತು ಯಮುನಾ ನದಿಯ ದುರ್ಗಮ ಕೊಳ್ಳಗಳಲ್ಲಿ ನೆಲೆ ನಿಂತಿದ್ದ ಡಕಾಯಿತರನ್ನು ಶರಣಾಗುವಂತೆ ಮನ ಒಲಿಸಿದರು. ಈ ದಿಸೆಯಲ್ಲಿ ಜಯಪ್ರಕಾಶ ನಾರಾಯಣ ಅವರ ಒತ್ತಾಸೆಯೂ ಮುಲಾಯಂಗೆ ಇತ್ತು. ಉತ್ತರ ಪ್ರದೇಶದ ಇಟಾವಾ, ಔರಯ್ಯಾ, ಜಾಲೌಂ ಜಿಲ್ಲೆಗಳು ಮತ್ತು ಮಧ್ಯಪ್ರದೇಶದ ಭಿಂಡ್, ಮುರೈನಾ, ಗ್ವಾಲಿಯರ್ ಜಿಲ್ಲೆಗಳ 50ಕ್ಕೂ ಹೆಚ್ಚು ಮಂದಿ ಹೆಸರಾಂತ ಡಕಾಯಿತರು ಶರಣಾದರು.

ಭಾರತದ ಮಂಡಲ್ ರಾಜಕಾರಣ ಮತ್ತು ಕಾಂಗ್ರೆಸ್ ವಿರೋಧಿ ರಾಜಕಾರಣದ ಬಹುದೊಡ್ಡ ಅಧ್ಯಾಯವೊಂದು ಕೊನೆಯಾಗಿದೆ ಎಂಬುದು ಸವಕಲು ಮಾತಾದರೂ ನಿಜ. ಲಾಲೂ ಪ್ರಸಾದ್ ಯಾದವ್ ಅತ್ತ ಬಿಹಾರದಲ್ಲಿ ಮಾಡಿದಂತೆ ಮುಲಾಯಂ ಸಿಂಗ್ ಅವರು ಯಾದವ ಮತ್ತು ಮುಸಲ್ಮಾನರನ್ನು ಒಟ್ಟುಗೂಡಿಸಿ ಯಶಸ್ವೀ ರಾಜಕಾರಣ ನಡೆಸಿದರು. ಮುಲಾಯಂ ಒಟ್ಟುಗೂಡಿಸಿದ್ದ ತಮ್ಮದೇ ಯಾದವ ಕುಲದ ಅನೇಕ ಮನೆತನಗಳು ಚೆದುರಿ ಹೋಗಿವೆ. ತಮ್ಮ ಶಿವಪಾಲ್ ಯಾದವ್ ಮತ್ತು ಸೊಸೆ ಅಪರ್ಣಾ ಯಾದವ್ ( ಮುಲಾಯಂ ಅವರ ಎರಡನೆಯ ಪತ್ನಿ ಸಾಧನಾ ಯಾದವ್ ಅವರ ಮೊದಲ ಪತಿಯ ಮಗ ಪ್ರತೀಕ್ ಯಾದವ್ ಅವರ ಪತ್ನಿ) ಬಿಜೆಪಿಯತ್ತ ಸರಿದಿದ್ದಾರೆ.

ಅವರ ಮಗ ಅಖಿಲೇಶ್ ಜನಪ್ರಿಯ ಯುವ ರಾಜಕಾರಣಿ ಹೌದು. ಆದರೆ ತಂದೆಯ ಚತುರಮತಿ, ಗರಿಕೆಬೇರು ಮಟ್ಟದ ರಾಜಕಾರಣದ ಸೂಕ್ಷ್ಣ ಅರಿವು ಮಗನಿಗೆ ಇಲ್ಲ. ಮುಲಾಯಂ ಉಳಿಸಿ ಹೋಗಿರುವ ಶೂನ್ಯವನ್ನು ತುಂಬುವುದು ಸರಳವಲ್ಲ. ಬಿಜೆಪಿಯ ತೊತ್ತಳತುಳಿತದ ನಡುವೆ ಸಮಾಜವಾದಿ ಪಾರ್ಟಿಯನ್ನು ಒಡೆಯದಂತೆ, ಅದರ ಜನಾಧಾರ ಕುಸಿಯದಂತೆ ಕಾಪಾಡಿಕೊಳ್ಳುವ ದೊಡ್ಡ ಸವಾಲು ಅಖಿಲೇಶ್ ಮುಂದಿದೆ. ಯಾದವ ಮತ್ತು ಮುಸ್ಲಿಮ್ ಮತಗಳ ಮೇಲೆ ಕಣ್ಣಿರಿಸಿದ ಹೊಸ ನಾಯಕತ್ವಗಳಿಗೆ ಬಿಜೆಪಿ ನೀರು ಗೊಬ್ಬರ ಎರೆಯಲು ಈಗಾಗಲೆ ಮುಂದಾಗಿದೆ. ಮುಸಲ್ಮಾನ ಕೋಟೆಗಳೆಂದೇ ಹೆಸರಾಗಿದ್ದ ರಾಂಪುರ ಮತ್ತು ಆಝಮ್ ಗಢ ಲೋಕಸಭಾ ಕ್ಷೇತ್ರಗಳನ್ನು ಕೇಸರಿ ಪಕ್ಷ ಉಪಚುನಾವಣೆಗಳಲ್ಲಿ ಗೆದ್ದು ಹೊಸ ಹುರುಪಿನಲ್ಲಿದೆ. ಪಾಸ್ಮಂದಾ ಮುಸ್ಲಿಮರನ್ನು ಒಲಿಸಿಕೊಳ್ಳುವ ದೊಡ್ಡ ನೀಲಿನಕಾಶೆಯನ್ನೇ ಹರವತೊಡಗಿದೆ. ಉತ್ತರಪ್ರದೇಶದಲ್ಲಿ ಹೊಸ ಜಾತಿ ಗಣಿತಕ್ಕೆ ಮುಲಾಯಂ ಮರಣ ದಾರಿ ಮಾಡಿಕೊಡುವುದು ನಿಶ್ಚಿತ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

1 min ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

29 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago