ಛತ್ತೀಸ್ ಗಢ ರಾಜ್ಯದ ದುರ್ಗ್ ಎಂಬ ಜಿಲ್ಲೆಯ ಅಮಲೇಶ್ವರ ಎಂಬ ಗ್ರಾಮದಲ್ಲಿ ಮೊನ್ನೆ ದಾರುಣ ಘಟನೆಯೊಂದು ಜರುಗಿತು. ಮೂವತ್ತು ವರ್ಷ ವಯಸ್ಸಿನ ಸಂಗೀತಾ ಸೋನವಾಣಿ ಎಂಬ ವಿವಾಹಿತೆ, ತನ್ನ ಪತಿಯನ್ನು ಕೊಂದು ಹಾಕಿದಳು. ಪತಿ ಅನಂತ್ ಸೋನವಾಣಿಯು ಸಂಗೀತಾಳನ್ನು ಹೆಜ್ಜೆಹೆಜ್ಜೆಗೆ ಕರಿಯ ಮೈಬಣ್ಣದವಳು, ಕುರೂಪಿ ಎಂದು ಹಂಗಿಸುತ್ತಿದ್ದ. ಇತ್ತೀಚಿನ ಜಗಳ ಹತ್ಯೆಯಲ್ಲಿ ಕೊನೆಯಾಯಿತು.
ದಶಕಗಳ ಹಿಂದೆ ಇಂತಹುದೇ ಅವಹೇಳನಕ್ಕೆ ಗುರಿಯಾಗಿ ರೋಸಿ ಹೋಗಿದ್ದ ಯುವತಿಯು ತನ್ನ ಕುಟುಂಬದ ಸಮಾರಂಭವೊಂದರ ಅಡುಗೆಗೆ ವಿಷ ಬೆರೆಸಿ ಐವರು ಸತ್ತರು. ಆದರೆ ತಮ್ಮ ಪ್ರಾಣಗಳನ್ನು ತೆಗೆದುಕೊಂಡ ಬಡಪಾಯಿಗಳ ಸಂಖ್ಯೆಯೇ ಹೆಚ್ಚು. ದೆಹಲಿಯ ಹೆಣ್ಣುಮಗಳೊಬ್ಬಳು ನೇಣು ಹಾಕಿಕೊಂಡರೆ ಮತ್ತೊಬ್ಬಾಕೆ ಸುಟ್ಟುಕೊಂಡು ಸತ್ತಳು. ಗೌರವರ್ಣ ಹೊಂದಿರಬೇಕೆಂಬ ಒತ್ತಡ ಗಂಡಸರ ಮೇಲಿರುವುದಕ್ಕಿಂತ ಹಲವು ಸಾವಿರ ಪಟ್ಟು ಹೆಣ್ಣುಮಕ್ಕಳನ್ನು ಕಾಡಿರುವುದು ಕಟು ವಾಸ್ತವ. ನಮ್ಮ ಸುತ್ತಲ ಸಾಮಾಜಿಕ ಬದುಕು, ಮನರಂಜನಾ ಮಾಧ್ಯಮಗಳು, ಸೌಂದರ್ಯ ಸ್ಪರ್ಧೆಗಳು, ವಿವಾಹ ಸಂಸ್ಥೆಗಳು ಹಾಗೂ ಬಹುಮುಖ್ಯವಾಗಿ ಗಂಡಾಳಿಕೆಯು ಈ ಪೂರ್ವಗ್ರಹವನ್ನು ಬಲಿಷ್ಠವಾಗಿ ಬೆಳೆಸುತ್ತ ಪೋಷಿಸುತ್ತ ಬಂದಿದೆ. ಭಾರತದ ಶೇ.೬೦ಕ್ಕೂ ಹೆಚ್ಚು ಮಹಿಳೆಯರು ಮತ್ತು ಶೇ.೧೦ರಷ್ಟು ಗಂಡಸರು ಫೇರ್ನೆಸ್ ಕ್ರೀಮುಗಳನ್ನು ಬಳಸುತ್ತಾರೆಂದು ಸಮೀಕ್ಷೆಯೊಂದು ಸಾರಿದೆ.
ದೇಶದ ೧೭ ನಗರಗಳಲ್ಲಿ ಹನ್ಸಾ ರಿಸರ್ಚ್ ಎಂಬ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶೇ.೮೦ರಷ್ಟು ಶಾಲಾಬಾಲಕಿಯರು ‘ಸೌಂದರ್ಯ ಪರೀಕ್ಷೆ’ಯನ್ನು (ಆಛಿಚ್ಠಠಿ ಛಿಠಿ) ಎದುರಿಸುತ್ತಿದ್ದಾರೆಂದು ೨೫ ಸೆಪ್ಟೆಂಬರ್ ೨೦೨೨ ದಿನಾಂಕದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಡೋವ್ ಸ್ನಾನದ ಸಾಬೂನಿನ ಜಾಹೀರಾತು ಸಾರಿತು. ಅಂದಹಾಗೆ ಸೌಂದರ್ಯ ಪರೀಕ್ಷೆಗಳನ್ನು ನಿಲ್ಲಿಸಿ ಎಂಬ ಅಭಿಯಾನವೊಂದನ್ನು ಈ ಸಾಬೂನು ಕಂಪೆನಿ ಕೈಗೊಂಡಿದೆಯಂತೆ.
ವಿಶೇಷವಾಗಿ ದೇಶದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಗಳ ಭಾನುವಾರದ ವಧು ಅನ್ವೇಷಣೆಯ ವರ್ಗೀಕೃತ ಜಾಹೀರಾತುಗಳ ಮೇಲೆ ಕಣ್ಣಾಡಿಸಿದರೆ ಈ ಬಿಳಿ ಮೈಬಣ್ಣದ ಗೀಳಿನ ಆಳ ಅಗಲದ ಪರಿಚಯ ಆದೀತು.
ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ ಬದುಕಿನಲ್ಲಿ ಕಂಡೂ ಕಾಣದಂತೆ ಭೇದ ಭಾವ ಬಗೆಯುತ್ತ ಬಂದಿರುವ ನಾವು ಆಷಾಢಭೂತಿಗಳು. ಬಿಳಿ ತೊಗಲು ಬಹುತೇಕ ಭಾರತೀಯರ ಅಂತಃಸ್ಸಾಕ್ಷಿಗಳಿಗೆ ಅಂಟಿಕೊಂಡು ಆಸ್ಟ್ರೇಲಿಯಾದಲ್ಲಿ, ಬ್ರಿಟನ್ನಿನಲ್ಲಿ, ಅಮೆರಿಕೆಯಲ್ಲಿ ಭಾರತೀಯರ ಮೇಲೆ ನಡೆಯುವ ವರ್ಣದ್ವೇಷದ ಹಲ್ಲೆಗಳನ್ನು ಕೊರಳೆತ್ತಿ ಖಂಡಿಸುವ ನಮಗೆ ನಮ್ಮ ಬೆನ್ನು ಕಾಣುವುದೇ ಇಲ್ಲ.
ಗೌರವರ್ಣ ಅಥವಾ ಬಿಳಿ ಮೈಬಣ್ಣವೇ ಸೌಂದರ್ಯ ಎಂದು ಬಿಂಬಿಸುತ್ತ ಬಂದಿರುವ ಬಿಳಿ ತೊಗಲಿನ ರಾಜಕಾರಣ ನಮ್ಮ ಸಾಮಾಜಿಕ- ಸಾಂಸ್ಕೃತಿಕ ಬದುಕಿನಲ್ಲಿ ಆಳದ ಬೇರುಗಳನ್ನು ಇಳಿಸಿದೆ. ಇದು ಬಹುತೇಕ ಭಾರತೀಯರ ಅಂತಃಸ್ಸಾಕ್ಷಿಗಳಿಗೆ ಅಂಟಿಕೊಂಡು ಬಂದಿರುವ ಗೀಳು. ಮೈ ಬಣ್ಣ ಕುರಿತ ಭ್ರಮೆಗಳು ಅಭದ್ರತೆ ಆತಂಕಗಳ ಅಡಿಪಾಯಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿನ ಉದ್ಯಮಗಳು ಎದ್ದು ನಿಂತಿವೆ. ಗಂಡಸರಿಗೆ ಪ್ರತ್ಯೇಕ ಫೇರ್ನೆಸ್ ಕ್ರೀಮುಗಳು ಮಾರುಕಟ್ಟೆಯನ್ನು ಮುತ್ತಿವೆ. ಭಾರತದಲ್ಲಿ ಈ ಉದ್ಯಮದ ಒಟ್ಟು ವಾರ್ಷಿಕ ವಹಿವಾಟಿನ ಮೊತ್ತ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳು.
ಭಾರತೀಯರ ಬಿಳಿ ತೊಗಲಿನ ಗೀಳಿನ ಬೇರುಗಳನ್ನು ಆರ್ಯರ ವಲಸೆ, ಮುಸ್ಲಿಂ ಆಕ್ರಮಣಕಾರರ ದಾಳಿ, ಬ್ರಿಟಿಷರ ಆಳ್ವಿಕೆಯಲ್ಲಿ ಅರಸುವ ಪ್ರಯತ್ನಗಳು ಜರುಗಿರುವುದು ಉಂಟು. ಆದರೆ ಇಲ್ಲಿಯ ತನಕ ಇಂತಹುದೇ ಕಾರಣವೆಂದು ನಿರ್ದಿಷ್ಟವಾಗಿ ಹೇಳುವುದು ಸಾಧ್ಯವಾಗಿಲ್ಲ. ಚರ್ಮದಲ್ಲಿರುವ ಮೆಲನಿನ್ (ಛ್ಝಿಚ್ಞಜ್ಞಿ) ಎಂಬ ವರ್ಣದ್ರವ್ಯವೇ (ಜಿಜಞಛ್ಞಿಠಿ) ಮನುಷ್ಯರ ಚರ್ಮದ ಬಣ್ಣವನ್ನು ನಿರ್ಧರಿಸುತ್ತದೆ ಎನ್ನುತ್ತದೆ ವಿಜ್ಞಾನ. ಸಮಶೀತೋಷ್ಣವಲಯದಲ್ಲಿ ನೆಲೆಸಿರುವ ಜನತೆಯಲ್ಲಿರುವ ಮೆಲನಿನ್ ವರ್ಣದ್ರವ್ಯವೇ ಬಿಳುವು, ತೆಳುಗಪ್ಪು, ಕಡುಗಪ್ಪು ಬಣ್ಣಗಳಿಗೆ ಕಾರಣ. ಸೂರ್ಯನ ಕಠೋರ ಕಿರಣಗಳಿಂದ ರಕ್ಷಿಸಲೆಂದೇ ಈ ವಲಯದ ಜನರಿಗೆ ಪ್ರಕೃತಿಯೇ ಹೆಚ್ಚಿನ ಪ್ರಮಾಣದ ಮೆಲನಿನ್ ವರ್ಣದ್ರವ್ಯವನ್ನು ದಯಪಾಲಿಸಿರುತ್ತದೆ. ಸೂರ್ಯಕಿರಣಗಳು ಚರ್ಮವನ್ನು ಪ್ರವೇಶಿಸದಂತೆ ತಡೆಹಿಡಿಯಲು ಮತ್ತು ಚರ್ಮದ ಕಪ್ಪನ್ನು ಹೆಚ್ಚಿಸುವ ಮೆಲನಿನ್ ವರ್ಣದ್ರವ್ಯ ಸ್ರವಿಸದಂತೆ ತಡೆಯುವುದೇ ಫೇರ್ನೆಸ್ ಕ್ರೀಮ್ ಗಳ ಉದ್ದೇಶ. ಆದರೆ ಮೆಲನಿನ್ ವರ್ಣದ್ರವ್ಯವನ್ನು ಕಳೆದುಕೊಂಡ ಚರ್ಮವು ಸೂರ್ಯ ಕಿರಣಗಳಿಂದ ಹೆಚ್ಚಿನ ಹಾನಿಗೆ ತುತ್ತಾಗುತ್ತದೆ. ಇಂತಹ ಬಹುತೇಕ ಕ್ರೀಮುಗಳಲ್ಲಿ ಹೈಡ್ರೋಕ್ವಿನೈನ್ ಎಂಬ ಬ್ಲೀಚಿಂಗ್ ಏಜೆಂಟ್, ಸ್ಟೀರಾಯ್ಡುಗಳು, ಪಾದರಸ ಲವಣಗಳು, ಹೈಡ್ರೋಜನ್ ಪರಾಕ್ಸೈಡ್, ಮ್ಯಾಗ್ನೀಸಿಯಂ ಪರಾಕ್ಸೈಡ್ ಮುಂತಾದ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳಿವೆ.
ಆದರೆ ಭಾರತ ದೇಶ ಆರಾಧಿಸುವ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಇಂತಹ ವರ್ಣದ್ವೇಷ ಕಂಡು ಬಂದಿಲ್ಲ ಎಂಬುದು ನಮ್ಮ ಆಷಾಢಭೂತಿಗಳ ಪಾಲಿಗೆ ಕಟು ವಾಸ್ತವ.
೧೮೯೦ರ ಆಪ್ಟೆ ಸಂಸ್ಕೃತ ನಿಘಂಟಿನ ಪ್ರಕಾರ ಕೃಷ್ಣ ಎಂಬ ಶಬ್ದಕ್ಕೆ ಕಪ್ಪು, ಕತ್ತಲೆ, ಕಡು ನೀಲಿ, ದುಷ್ಟ, ಅನಿಷ್ಟ, ಕೃಷ್ಣಮೃಗ, ಕೋಗಿಲೆ, ಕೃಷ್ಣಪಕ್ಷ, ವಿಷ್ಣುವಿನ ಎಂಟನೆಯ ಅವತಾರ ಕೃಷ್ಣ, ಕೃಷ್ಣನ ಮಗ ಪ್ರದ್ಯುಮ್ನ, ಮಹಾಭಾರತದ ಅರ್ಜುನ ಎಂಬ ಅರ್ಥಗಳಿವೆ. ಕೃಷ್ಣ ಎಂಬುದು ದೇಶದ ಅತಿ ಜನಪ್ರಿಯ ಹೆಸರುಗಳಲ್ಲೊಂದು.
ವಿಷ್ಣುವಿನ ಮೂರು ಅವತಾರಗಳಾದ ರಾಮ, ಕೃಷ್ಣ ಹಾಗೂ ಮೋಹಿನಿಯ ಮೈ ಬಣ್ಣ ಕಪ್ಪು ಇಲ್ಲವೇ ಕಡು ನೀಲಿ. ಮೂವರ ಸೌಂದರ್ಯವನ್ನು ಪುರಾಣಗಳು, ಭಾಗವತಗಳು ಕೊಂಡಾಡಿವೆ. ಕೃಷ್ಣನನ್ನು ಶ್ಯಾಮಸುಂದರ ಎಂದು ಇಂದಿಗೂ ಕರೆಯಲಾಗುತ್ತಿದೆ. ಈ ಹೆಸರನ್ನು ಲೆಕ್ಕವಿಲ್ಲದಷ್ಟು ಮಂದಿ ಇಟ್ಟುಕೊಂಡು ಅಡ್ಡಾಡುತ್ತಾರೆ.
ವಾಲ್ಮೀಕಿ ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ಬಣ್ಣಿಸುವ ಪ್ರಕಾರ ರಾಮನ ಮೈ ಕಡು ಕಂದು ಮತ್ತು ಕಣ್ಣುಗಳ ವರ್ಣ ಕೆಂಪು. ರಾವಣನ ಶಯ್ಯಾಗಾರದ ಸುಂದರಿಯರು ಕಪ್ಪು ಬಣ್ಣದವರಾಗಿದ್ದರು ಎಂಬುದು ಇದೇ ಸುಂದರಕಾಂಡದ ಪ್ರಸ್ತಾಪ. ಮಹಾಭಾರತದ ದ್ರೌಪದಿ, ಸತ್ಯವತಿ, ವ್ಯಾಸ, ಕರ್ಣ ಕಪ್ಪು ಬಣ್ಣದವರು. ಆಗ ಸುಂದರವಾಗಿದ್ದ ಕಪ್ಪು ಈಗ ಅಸಹ್ಯದ ಬಣ್ಣವಾಗಿ ಬದಲಾದದ್ದು ಯಾಕೆ?
ದೇಶದ ಉದ್ದಗಲಕ್ಕೆ ದೇಗುಲಗಳು ಮತ್ತು ಸಂಪ್ರದಾಯಸ್ಥರ ಮನೆ ಗೋಡೆಗಳಲ್ಲಿ ತೂಗಿರುವ ರಾಜಾ ರವಿವರ್ಮನ ತೈಲ ಚಿತ್ರಗಳು ಈ ಎಲ್ಲರನ್ನೂ ಗೌರವರ್ಣದವರನ್ನಾಗಿ ಬದಲಾಯಿಸಿಬಿಟ್ಟಿವೆ. ಮನೆ ಮನೆಗಳನ್ನು ತಲುಪಿದ ರಮಾನಂದ ಸಾಗರ್ ಮತ್ತು ಛೋಪ್ರಾ ಅವರ ರಾಮಾಯಣ ಮಹಾಭಾರತ ಟೀವಿ ಧಾರಾವಾಹಿಗಳು ಪ್ರಸಾರ ಮಾಡಿದ್ದೂ ಇದೇ ಮಿಥ್ಯೆಯನ್ನು.
ಇನ್ನೊಂದು ಮಾತು. ಹೊಟ್ಟೆ ಬಟ್ಟೆಗಿಲ್ಲದ ಆಫ್ರಿಕೆಯ ಬಡದೇಶಗಳ ಲೂಟಿಗೆ ಚೀನಾ, ಅಮೆರಿಕೆ ಹಾಗೂ ಸೌದಿ ಆರೇಬಿಯದ ಜೊತೆ ಸೊಂಟ ಕಟ್ಟಿ ನಿಂತಿರುವುದು ಭಾರತೀಯ ಕಂಪೆನಿಗಳು. ಅವರ ನೆಲ, ಜಲ, ಶ್ರಮವನ್ನು ದುಗ್ಗಾಣಿಯ ಬೆಲೆಗೆ ದೋಚುತ್ತಿವೆ. ಈ ದೇಶಗಳಲ್ಲಿ ಆಹಾರ ಉತ್ಪಾದಿಸುವ ವೆಚ್ಚ ನಮ್ಮ ದೇಶಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ. ಆಹಾರ ಮತ್ತು ವಾಣಿಜ್ಯ ನೀತಿಗಳನ್ನು ಜನಪರ ಧೋರಣೆಯಿಂದ ವಿಶ್ಲೇಷಿಸುವ ಡಾ.ದೇವಿಂದರ್ ಶರ್ಮ ಅವರು ಶೋಷಣೆಯನ್ನು ‘ಅನ್ನದ ಕಡಲುಗಳ್ಳತನ’ ಎಂದು ಜರಿದಿದ್ದಾರೆ.
ಹೊಸ ರೂಪ ಧರಿಸಿದ ವಸಾಹತುಶಾಹಿ, ಭೂಗಳ್ಳತನ ಎಂಬ ವಿಶೇಷಣಗಳು ಈ ಪ್ರವೃತ್ತಿಯನ್ನು ಬಣ್ಣಿಸಿವೆ. ವಿವರಗಳ ಕುತೂಹಲ ಉಳ್ಳವರು ರಿಕ್ ರೋವ್ಡೆನ್ ಎಂಬ ಸಂಶೋಧಕ ಸಿದ್ಧಪಡಿಸಿರುವ ‘ಐ್ಞಜಿ’ ್ಕಟ್ಝಛಿ ಜ್ಞಿ ಠಿಛಿ ಘೆಛಿಡಿ ಎ್ಝಟಚಿಚ್ಝ ಊಚ್ಟಞ್ಝಚ್ಞ ಎ್ಟಚಿ’ ವರದಿಯನ್ನು ಓದಬೇಕು.
ಎಥಿಯೋಪಿಯಾದ ಗೋಮಾಳಗಳು ಮತ್ತು ಜಲಮೂಲಗಳು ಈ ಭೂಗಳ್ಳತನಕ್ಕೆ ಬಲಿಯಾಗುತ್ತಿವೆ. ಉದ್ಯೋಗಾವಕಾಶದ ಗಾಳ ಹಾಕಲಾಗುತ್ತಿದೆ. ಆದರೆ ಒಕ್ಕಲೆಬ್ಬಿಸಿದ ಮೂರು ಲಕ್ಷ ಕುಟುಂಬಗಳ ಪೈಕಿ ಅತ್ಯಾಧುನಿಕ ಯಾಂತ್ರೀಕೃತ ಹೊಲ ಗದ್ದೆ ತೋಟಗಳಲ್ಲಿ ಉದ್ಯೋಗ ಪಡೆದಿರುವ ಜನರ ಸಂಖ್ಯೆ ಕೇವಲ ಹತ್ತಾರು ಸಾವಿರ.
ಇತ್ತೀಚೆಗೆ ಆರಂಭವಾದ ಈ ನವವಸಾಹತುಶಾಹಿ ಕ್ರಿಯೆಗೆ ಭಾರತ ಸರ್ಕಾರವೂ ಬೆಂಬಲ ನೀಡಿದೆ. ಎಥಿಯೋಪಿಯಾ, ಕೀನ್ಯಾ, ಮಡಗಾಸ್ಕರ್, ಸೆನೆಗಲ್, ಮೊಜಾಂಬಿಕ್ ಮುಂತಾದ ಪೂರ್ವ ಆಫ್ರಿಕೆಯ ದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿಯ ಬಂಡವಾಳವನ್ನು ಹೂಡಿವೆ ನಮ್ಮ ಎಂಬತ್ತು ಕಂಪನಿಗಳು. ಈ ಪೈಕಿ ಮುಂಚೂಣಿಯಲ್ಲಿರುವುದು ಬೆಂಗಳೂರಿನ ಒಂದು ಕಂಪೆನಿ. ಈ ಕಂಪೆನಿಯ ವಶದಲ್ಲಿರುವ ಕಪ್ಪುವರ್ಣೀಯರ ಜಮೀನು ಕಮ್ಮಿಯೆಂದರೂ ಮೂರೂವರೆ ಲಕ್ಷ ಹೆಕ್ಟೇರುಗಳು!
ನಾವು ತಿನ್ನುತ್ತಿರುವ ಅನ್ನದ ಒಂದು ಪಾಲು ಈ ಬಡದೇಶಗಳ ಹಸಿದ ಕಪ್ಪು ಜನರ ಹೊಟ್ಟೆಯ ಮೇಲೆ ಹೊಡೆದು ಬೆಳೆದದ್ದು ಎಂಬುದು ನಮ್ಮ ಅರಿವಿನ ಭಾಗವಾಗಿರಬೇಕು.
ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಫ್ರಿಕ ಮೂಲದ ಟೆಕ್ಕಿಯೊಬ್ಬನನ್ನು ಆರೆಂಟು ಯುವಕರು ಕರಿಯನೆಂದು ಹಂಗಿಸಿ ತನ್ನ ದೇಶಕ್ಕೆ ವಾಪಸು ಹೋಗುವಂತೆ ಗದರಿದರು. ಮೈಮೇಲೆರಗಿ ಮನ ಬಂದಂತೆ ಬಡಿದರು. ದುಂಡುಗಲ್ಲೆತ್ತಿ ಜಜ್ಜಿದರು. ಗಾಯಗೊಂಡು ರಕ್ತ ಕಾರಿದ ಆತನ ಬೆನ್ನು ಮೂಳೆ ತೀವ್ರ ಘಾಸಿಯಾಗಿತ್ತು.
ಇದು ಕೇವಲ ಬೆಂಗಳೂರಿನ ಕತೆಯಲ್ಲ. ದೇಶದ ಯಾವ ನಗರಕ್ಕೆ ಹೋದರೂ ಕಾಣಸಿಗುವ ಕಟು ಸತ್ಯ. ವಿಶೇಷವಾಗಿ ಆಫ್ರಿಕನ್ ದೇಶಗಳ ಕಪ್ಪು ವರ್ಣೀಯರನ್ನು ನಾವು ನಡೆಸಿಕೊಳ್ಳುವ ರೀತಿ ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ತೆರನಾದದ್ದು.
. ಆಸ್ಟ್ರೇಲಿಯಾದಲ್ಲಿ, ಬ್ರಿಟನ್ನಿನಲ್ಲಿ, ಅಮೆರಿಕೆಯಲ್ಲಿ ಭಾರತೀಯರ ಮೇಲೆ ನಡೆಯುವ ವರ್ಣದ್ವೇಷದ ಹಲ್ಲೆಗಳನ್ನು ಕೊರಳೆತ್ತಿ ಖಂಡಿಸುವ ನಮಗೆ ನಮ್ಮ ಬೆನ್ನು ಕಾಣುವುದೇ ಇಲ್ಲ. ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ ಬದುಕಿನಲ್ಲಿ ಕಂಡೂ ಕಾಣದಂತೆ ಭೇದ ಭಾವ ಬಗೆಯುತ್ತ ಬಂದಿರುವ ನಾವು ಆಷಾಢಭೂತಿಗಳು.