ಡಿ. ಉಮಾಪತಿ
ಭಿನ್ನಮತವಿಲ್ಲದೆ ಜನತಂತ್ರವಿಲ್ಲ , ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಜೀವಾಳ ಎಂಬುದು ಕಾಯಂ ಮೌಲ್ಯವೇ ವಿನಾ ಕೇವಲ ಮಾತಲ್ಲ
ಸರ್ಕಾರ ಎಂದರೆ ದೇಶವೆಂಬ ಕಥಾನಕವನ್ನು ಇತ್ತೀಚಿನ ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ದೇಶವೆಂಬುದು ಸರ್ಕಾರಕ್ಕಿಂತ ಎಷ್ಟೋ ದೊಡ್ಡದು ಎಂಬ ಸತ್ಯವನ್ನು ಮರೆಮಾಚಲಾಗಿದೆ. ಸರ್ಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂಬುದು ಅತ್ಯಂತ ದುಷ್ಟ ಮತ್ತು ಪ್ರತಿಗಾಮಿ ವಾದ. ಆದರೆ ಇದೆ ವಾದವನ್ನು ವೈಭವೀಕರಿಸಿ ಚಾಲ್ತಿಗೆ ಬಿಡಲಾಗಿದೆ.
ಪರಮದೈವ ಎಂದು ಪ್ರಧಾನಿಯವರೇ ಘೋಷಿಸುವ ಅದೇ ಸಂವಿಧಾನದ ಮೌಲ್ಯಗಳನ್ನು ಆಚರಣೆಯ ಮಾತು ಬಂದಾಗ ಹರಿದ ಕಾಗದದ ಚೂರುಗಳಂತೆ ಗಾಳಿಗೆ ತೂರಲಾಗುತ್ತಿದೆ.
ಸಮಾಜವನ್ನು ಹರಿದು ಹಂಚುವವರು ಭಾರೀ ತ್ರಿವರ್ಣ ಧ್ವಜವನ್ನು ಹಿಡಿದು ವಂದೇಮಾತರಂ ಹೇಳಿ ದೇಶಭಕ್ತರೆಂಬ ಬಿರುದು ಬಾವಲಿ ಗಳಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಶಕಪುರುಷನೆಂದು ಹಾಡಿ ಹೊಗಳಿದ ಅವೇ ನಾಲಗೆಗಳು ಅಂಬೇಡ್ಕರ್ ವಾದಿಗಳನ್ನು ದೇಶದ್ರೋಹಿಗಳೆಂದು ನಿಂದಿಸಿ ಹಲ್ಲು ಮಸೆಯುತ್ತಿವೆ. ರಕ್ತದಾಹದ ರಾಷ್ಟ್ರಭಕ್ತಿ ಹೂಂಕರಿಸಿ ದೀನ ದುರ್ಬಲರಲ್ಲಿ ಭಯ ಬಿತ್ತತೊಡಗಿದೆ.
ಭಿನ್ನಮತ ಅಥವಾ ಭಿನ್ನಾಭಿಪ್ರಾಯವನ್ನು, ಶಾಂತಿಯುತ ಪ್ರತಿಭಟನೆಗಳನ್ನು ಕ್ರೂರವಾಗಿ ದಂಡಿಸಲಾಗುತ್ತಿದೆ. ಅದಕ್ಕೆ ಭಯೋತ್ಪಾದನೆ ಇಲ್ಲವೇ ರಾಜದ್ರೋಹದ ಹಣೆಪಟ್ಟಿಗಳ ಹಚ್ಚಲಾಗುತ್ತಿದೆ. ಬೇಹುಗಾರಿಕೆ, ಬಂಧನ, ಪೊಲೀಸು-ತೆರಿಗೆ ದಾಳಿಗಳಿಗೆ ಗುರಿಪಡಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪ್ರಯೋಗಿಸಲಾಗುವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಡು ಕಠಿಣ ಕಾಯಿದೆಗಳನ್ನು ಪ್ರಯೋಗಿಸಲಾಗುತ್ತಿದೆ. ಬಾಲಬಡುಕ ಮೀಡಿಯಾ ಸರ್ಕಾರದೊಂದಿಗೆ ಶಾಮೀಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಮತವನ್ನು ಬೇಟೆಯಾಡಲಾಗುತ್ತಿದೆ. ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ದನಿ ಎತ್ತಿದವರು ವಿದ್ಯಾರ್ಥಿಗಳು, ಅಲ್ಪಸಂಖ್ಯಾತರು, ರೈತರು, ಪತ್ರಕರ್ತರು, ಸಾಮಾಜಿಕ ಆಂದೋಲನಕಾರರು ಯಾರೇ ಇರಲಿ ಅವರನ್ನು ದೇಶದ್ರೋಹಿಗಳೆಂದು ಹೆಸರಿಸಿ ಗುಂಡಿಟ್ಟು ಹೊಡೆಯಬೇಕು ಎಂಬ ಘೋಷಣೆಗಳಿಗೆ ಧ್ವನಿವರ್ಧಕ ಹಿಡಿಯಲಾಗಿದೆ.
ಕವಿಗಳು-ಕಲಾವಿದರ ಸಾಂಸ್ಕೃತಿಕ ಪ್ರತಿರೋಧ, ಮಾನವಹಕ್ಕುಗಳ ಹೋರಾಟಗಾರರ ಅದಮ್ಯ ಛಲ ಪ್ರಭುತ್ವದ ಆಕ್ರೋಶಕ್ಕೆ ಗುರಿಯಾಗುತ್ತಲೇ ಬಂದಿದೆ. ಸರ್ಕಾರ ಅನಾಯಾಸವಾಗಿ ಹೇಳುವ ಸುಳ್ಳುಗಳನ್ನು ಸುಳ್ಳೆಂದು ಹೇಳುವುದೂ ರಾಜದ್ರೋಹವಾಗಿ ಪರಿಣಮಿಸಿದೆ. ತೀವ್ರ ದಮನಕಾರಿ ನಾಯಕತ್ವದ ಪ್ರತಿಯೊಂದು ಸಂದೇಶವೂ ಸತ್ಯವನ್ನು ತಿರುವುಮುರುವು ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ ‘ಸಮರವೇ ಶಾಂತಿ’ ಮತ್ತು ‘ಸ್ವಾತಂತ್ರ್ಯ ಎಂಬುದು ಗುಲಾಮಗಿರಿ’ ಎಂಬುದಾಗಿ ನಿರಂತರ ಪುನರುಚ್ಚರಿಸಲಾಗುತ್ತದೆ. ಸತ್ಯದ ಸಚಿವ ಖಾತೆಯು ಸುಳ್ಳುಗಳನ್ನು ಹರಡುತ್ತಿರುತ್ತದೆ. ಪ್ರೇಮ- ಪ್ರೀತಿಯ ಸಚಿವ ಖಾತೆಯು ಪ್ರೇಮಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸುತ್ತ ಇರುತ್ತದೆ ಎಂಬ ಜಾರ್ಜ್ ಆರ್ವೆಲ್ ಮಹಾಶಯನ ಮಾತುಗಳು ಈ ಸನ್ನಿವೇಶದಲ್ಲಿ ಉಲ್ಲೇಖಾರ್ಹ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಟೀಕಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಅಡಗಿದೆ ಎಂಬುದನ್ನು ಸುಪ್ರೀಮ್ ಕೋರ್ಟು ಈ ಹಿಂದೆ ಹಲವಾರು ಸಲ ಹೇಳಿದೆ. ಭಿನ್ನಮತವಿಲ್ಲದೆ ಜನತಂತ್ರವಿಲ್ಲ. ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಜೀವಾಳ ಎಂಬುದು ಕಾಯಂ ಮೌಲ್ಯವೇ ವಿನಾ ಕೇವಲ ಮಾತಲ್ಲ.
ಅಪ್ಪ ನೆಟ್ಟ ಆಲಕ್ಕೇ ಜೋತುಬೀಳುವುದು ಸಾಮಾಜಿಕ ಅಧಃಪತನಕ್ಕೆ ದಾರಿ ಮಾಡುತ್ತದೆ. ಸರ್ವಮಾನ್ಯ ಕಟ್ಟು ಕಟ್ಟಳೆಗಳನ್ನು ಪ್ರಶ್ನಿಸುವ ಪ್ರಕ್ರಿಯೆಯು ಕಾಲ ಕಾಲಕ್ಕೆ ಹೊಸ ಚಿಂತಕರು ಮತ್ತು ಸಮಾಜ ಸುಧಾರಕರ ಹುಟ್ಟಿಗೆ ಕಾರಣವಾಗಿದೆ. ತುಳಿದುಕೊಂಡು ಬಂದಿರುವ ಹಾದಿಯನ್ನೇ ಎಲ್ಲರೂ ಕಟ್ಟುನಿಟ್ಟಾಗಿ ತುಳಿಯುತ್ತ ಹೋದರೆ ಹೊಸ ದಾರಿಗಳು ಹುಟ್ಟುವುದಿಲ್ಲ, ಹೊಸ ಶೋಧನೆಗಳು ಆಗುವುದಿಲ್ಲ, ಹೊಸ ದಿಗಂತಗಳು ಕಾಣುವುದಿಲ್ಲ. ಸನಾತನ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನೇ ಕೇಳದೆ ಹೋದರೆ, ಸಂದೇಹಗಳನ್ನು ಪ್ರಕಟಿಸದೆ ಹೋದರೆ ಹೊಸ ವ್ಯವಸ್ಥೆಗಳು ವಿಕಸಿಸುವುದಿಲ್ಲ, ಮನೋದಿಗಂತಗಳು ವಿಸ್ತರಿಸುವುದಿಲ್ಲ. ಬುದ್ಧ, ಮಹಾವೀರ, ಯೇಸುಕ್ರಿಸ್ತ, ಪ್ರವಾದಿ ಮಹಮ್ಮದ, ಗುರುನಾನಕ್, ಮಾರ್ಟಿನ್ ಲೂಥರ್, ಕಬೀರ್, ರಾಜಾರಾಮ್ ಮೋಹನ್ ರಾಯ್, ಕಾರ್ಲ್ ಮಾರ್ಕ್ಸ್ , ಮಹಾತ್ಮಾ ಗಾಂಧೀ ಅವರು ಒಪ್ಪಿತ ಮೌಲ್ಯಗಳನ್ನು, ಆಚರಣೆಗಳೂ-ರೂಢಿ ಸಂಪ್ರದಾಯಗಳನ್ನು ಪ್ರಶ್ನಿಸದೆ ಎತ್ತಿ ಹಿಡಿಯುತ್ತ ಹೋಗಿದ್ದರೆ ಹೊಸ ಚಿಂತನೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ ಎಂದಿದ್ದಾರೆ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ.
ಬಹುಮತದ ಆಳ್ವಿಕೆ ಜನತಂತ್ರದ ಅವಿಭಾಜ್ಯ ಅಂಗ ಎಂಬುದು ಸರಿ. ಆದರೆ ಬಹುಸಂಖ್ಯಾತರ ಆಳ್ವಿಕೆಯು ಜನತಾಂತ್ರಿಕ ತಿರುಳಿನ ಉಲ್ಲಂಘನೆ. ನಮ್ಮ ಹಾಲಿ ಚುನಾವಣಾ ವ್ಯವಸ್ಥೆಯ ಪ್ರಕಾರ ಆಯ್ಕೆಯಾಗುವ ಸರ್ಕಾರಗಳು ಜನಸಂಖ್ಯೆಯ ಬಹುಮತವನ್ನು ಪ್ರತಿನಿಧಿಸುವುದಿಲ್ಲ. ಅಷ್ಟೇ ಅಲ್ಲ, ಮತ ಚಲಾಯಿಸಿದವರ ಸಂಖ್ಯೆಯನ್ನು ಲೆಕ್ಕಕ್ಕೆ ಹಿಡಿದರೂ ಸರ್ಕಾರಗಳು ಬಹುಮತದ ಮತದಾರರನ್ನು ಪ್ರತಿನಿಧಿಸುವುದಿಲ್ಲ.
ಆಳುವವರಿಗೆ ಶೇ.೫೦ಕ್ಕಿಂತ ಹೆಚ್ಚು ಮತಗಳು ಬಿದ್ದಿವೆ ಎಂದು ಒಂದು ವೇಳೆ ಅಂದುಕೊಂಡರೂ, ಉಳಿದ ಶೇ.೪೯ರಷ್ಟು ಜನರಿಗೆ ಈ ದೇಶದ ಆಳ್ವಿಕೆಯಲ್ಲಿ ದನಿಯೇ ಇಲ್ಲ ಎನ್ನಲಾದೀತೇ? ಈ ಶೇ.೪೯ರಷ್ಟು ಜನ ಮುಂದಿನ ಐದು ವರ್ಷಗಳ ಕಾಲ ಬಾಯಿ ಹೊಲಿದುಕೊಂಡಿರಬೇಕೇ, ಅವರು ಸರ್ಕಾರವನ್ನು ವಿರೋಧಿಸಿದರೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೇ? ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ನ್ಯಾಯಮೂರ್ತಿ ಗುಪ್ತ.
ಐದು ವರ್ಷಗಳಿಗೊಮ್ಮೆ ಮತದಾನ ಮಾಡಿದ ನಂತರ ನಾಗರಿಕನ ಹಕ್ಕು ಹೊಣೆಗಾರಿಕೆ ಎರಡೂ ತೀರಿತು ಎಂಬುದು ಆಳುವ ಸರ್ವಾಧಿಕಾರಿ ಸರ್ಕಾರಗಳ ಧೋರಣೆ. ಆದರೆ ಮತದಾನ ಮಾಡಿದ ನಂತರ ದೇಶವನ್ನು ಯಾವ ರೀತಿ ನಡೆಸಲಾಗುತ್ತಿದೆ ಎಂಬುದರಲ್ಲಿ ಪಾಲ್ಗೊಳ್ಳುವುದೂ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರದ ನಡೆ ನುಡಿಗಳನ್ನು ಟೀಕಿಸುವ ಬಾಯಿಗಳಿಗೆ ಬೀಜ ಹಾಕಿ ಸೆರೆಮನೆಗೆ ತಳ್ಳಿದರೆ ಈ ಹಕ್ಕಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಆಳುವವರ ಅಭಿಮತಗಳಿಗೆ ಸಾರಾಸಗಟು ವ್ಯತಿರಿಕ್ತ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುವ ಹಕ್ಕು ನಾಗರಿಕನಿಗೆ ಉಂಟು. ಆದರೆ ಈ ಅಭಿಪ್ರಾಯವನ್ನು ಪ್ರಕಟಿಸುವ ರೀತಿನೀತಿಗಳು ಶಾಂತಿಯುತವಾಗಿರಬೇಕು ಅಷ್ಟೇ. ಸರ್ಕಾರದ ಕ್ರಮಗಳು ಸರಿಯಾಗಿಲ್ಲವೆಂದು ನಾಗರಿಕರಿಗೆ ಅನಿಸಿದರೆ ಶಾಂತಿಯುತವಾಗಿ ಸಭೆ ಸೇರಿ ಪ್ರತಿಭಟಿಸುವ ಹಕ್ಕು ಅವರಿಗೆ ಇದ್ದೇ ಇದೆ. ನಾಗರಿಕರ ತಿಳಿವಳಿಕೆ ಸದಾ ಸರಿಯಿರಲೇಬೇಕಿಲ್ಲ. ಹಾಗೆಯೇ ಸರ್ಕಾರದ ಕ್ರಮ ಕೂಡ ದಾರಿ ತಪ್ಪಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ವಾದಿಸಿದ್ದಾರೆ.
ವಕೀಲರು, ಪ್ರಾಧ್ಯಾಪಕರು, ಕವಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ದಮನಿತರ ಪರವಾಗಿ ಧೈರ್ಯದಿಂದ ದನಿಯೆತ್ತುವವರು. ಕೋಟಿ ಕೋಟಿ ಭಾರತೀಯರು ಕೇಳಲು ಹೆದರುವ ಪ್ರಶ್ನೆಗಳನ್ನು ಅಂಜಿಕೆಯಿಲ್ಲದೆ ಕೇಳುವವರು. ಅವರ ದಮನ ಜನಕೋಟಿಯ ದನಿಯ ದಮನ. ಈ ದಮನಕ್ಕೆ ಆಳುವ ಸರ್ಕಾರದ ಮಡಿಲಿನಲ್ಲಿ ಹಚ್ಚಗೆ ಬೆಚ್ಚಗೆ ಆಡಿಕೊಂಡಿರುವ ಮಾಧ್ಯಮಗಳು ಗಾಳಿ ಹಾಕತೊಡಗಿರುವುದು ದೇಶದ್ರೋಹ.
ದೇಶವೆಂಬುದು ಪ್ರಚಂಡ ನಾಯಕರು ಮತ್ತು ಬಹುಮತದ ಸರ್ಕಾರಗಳಿಗಿಂತ ದೊಡ್ಡದು. ಮಾನವೀಯ ಮೌಲ್ಯಗಳು ದೇಶಕ್ಕಿಂತ ದೊಡ್ಡವು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…