ಜನತಂತ್ರದ ನಾಲ್ಕನೆಯ ಸ್ತಂಭ ಎಂಬ ಅಭಿದಾನದ ಅರ್ಹತೆಯನ್ನು ಇಂದಿನ ಮೀಡಿಯಾ ಉಳಿಸಿಕೊಂಡಿಲ್ಲ. ಮುಖ್ಯಧಾರೆಯ ಬಹುತೇಕ ಸುದ್ದಿ ಚಾನೆಲ್ಲುಗಳು, ಪತ್ರಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಆಳುವವರ ಭಟ್ಟಂಗಿಗಳು. ಕೋಮುವಾದಿ ವಿಷವನ್ನು ನಿತ್ಯ ತಯಾರಿಸಿ ಸಮಾಜವಾಹಿನಿಗೆ ಬೆರೆಸುವ ನಂಜಿನ ಕಾರಖಾನೆಗಳು. ಸಮಾಜಹಿತವನ್ನು ಒತ್ತೆಯಿಟ್ಟಾದರೂ, ಬಲಿಗೊಟ್ಟಾದರೂ ಸರಿ ಲಾಭ ಗಳಿಸುವ ನೀಚ ಕೆಲಸದಲ್ಲಿ ತೊಡಗಿವೆ. ನೋಡುಗರು ಮತ್ತು ಓದುಗರನ್ನು ದೊಡ್ಡ ಸಂಖ್ಯೆಗಳಲ್ಲಿ ತಮ್ಮತ್ತ ಸೆಳೆದು ಜಾಹೀರಾತುಗಳ ಲಾಭಕ್ಕಾಗಿ ಅವರ ಕಣ್ಣಾಲಿಗಳನ್ನು ಮಾರಾಟ ಮಾಡುವ ದಂಧೆ ನಡೆಸಿವೆ. ಆಳುವವರು ಮತ್ತು ಬಹುಸಂಖ್ಯಾತವಾದದ ಪರವಾಗಿ ಜನಸಮ್ಮತಿಯನ್ನು ತಯಾರಿಸುವ ವಿಕಾರ ವಿಧ್ವಂಸಕ ಕೃತ್ಯಗಳಲ್ಲಿ ನಿರತವಾಗಿವೆ. ಭಿನ್ನಾಭಿಪ್ರಾಯಗಳನ್ನು ಸಮಾಜಹಿತವನ್ನು ಜರಡಿ ಹಿಡಿದು ಪಕ್ಕಕ್ಕೆ ಸರಿಸಿವೆ. ಅಧಿಕಾರಸ್ಥರನ್ನು ಬಹುಸಂಖ್ಯಾತರನ್ನು ಬಲಿಪಶುಗಳಂತೆ ಚಿತ್ರಿಸಿ ರೊಚ್ಚನ್ನು ಉತ್ಪಾದಿಸತೊಡಗಿವೆ. ಪ್ರತಿಪಕ್ಷಗಳನ್ನು ಬೇಟೆಯಾಡುತ್ತಿವೆ. ಇಂತಹ ಮಾಧ್ಯಮದ ಆತ್ಮಸಾಕ್ಷಿ ಆಳದ ಕೋಮಾ ಸ್ಥಿತಿಗೆ ಜಾರಿ ವರ್ಷಗಳೇ ಉರುಳಿವೆ. ಜನಪರ ಮಾಧ್ಯಮಗಳು ವಿರಳವಾಗಿವೆ. ಕೊಚ್ಚಿ ಸೆಳೆದೊಯ್ಯುವ ಪ್ರವಾಹಕ್ಕೆ ಎದುರಾಗಿ ಈಜಿ ಜೀವ ಹಿಡಿದುಕೊಂಡಿವೆ.
ಪಟ್ಟಭದ್ರ ಕಾರ್ಯಸೂಚಿಯ ಭಾಗವೇ ಆಗಿಹೋಗಿರುವ ಇವುಗಳಿಗೆ ನ್ಯಾಯಾಂಗದ ಅಂಕೆಶಂಕೆಯೂ ಇಲ್ಲವಾಗಿದೆ. ಜನತಂತ್ರವ ಕಾಯುವ ನಾಯಿಯ ಪಾತ್ರವನ್ನು ಗಾಳಿಗೆ ತೂರಿವೆ. ಆಳುವವರ ಸಾಕು ನಾಯಿಗಳಾಗಿವೆ. ತಮ್ಮ ಒಡೆಯನ ಇಷ್ಟಾನಿಷ್ಟವೇ ಇವುಗಳ ಇಷ್ಟಾನಿಷ್ಟ. ವಿರುದ್ಧ ಸೊಲ್ಲೆತ್ತುವವರನ್ನು ಸುತ್ತುವರೆದು ಬೊಗಳತೊಡಗಿವೆ. ಕಡೆಗೆ ನ್ಯಾಯಾಂಗವನ್ನೂ ಬಿಡದಾಗಿವೆ.
ಎಲೆಕ್ಟ್ರಾನಿಕ್ ಮೀಡಿಯಾ ಸಂಪೂರ್ಣ ಹೊಣೆಗೇಡಿಯಾಗಿದೆ ಎಂಬ ಗಂಭೀರ ಆರೋಪ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಂದಲೇ ಕೇಳಿ ಬಂದಿದೆ. ಮೀಡಿಯಾದಲ್ಲಿ ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣ ಮೀಡಿಯಾದಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಪ್ರಚಾರಾಂದೋಲನವೇ ಜರುಗಿದೆ. ಎಲೆಕ್ಟ್ರಾನಿಕ್ ಮೀಡಿಯಾದ ಉತ್ತರದಾಯಿತ್ವ ಸೊನ್ನೆ ಎಂದಿದ್ದಾರೆ.
ವಾರಗಳ ಹಿಂದೆ ಬಿಜೆಪಿ ನಾಯಕಿ ನೂಪುರ್ ಶರ್ಮ ಅವರ ಇಸ್ಲಾಮ್ ವಿರೋಧಿ ಹೇಳಿಕೆಗಳನ್ನು ಟೀಕಿಸಿದ್ದ ಸರ್ವೋಚ್ಚ ನ್ಯಾಯಾಲಯದ ಮತ್ತೊಬ್ಬ ನ್ಯಾಯಮೂರ್ತಿ ಜೆ.ಬಿ.ಪರ್ದೀವಾಲ ಕೂಡ ನ್ಯಾಯಮೂರ್ತಿಗಳ ಮೇಲೆ ವೈಯಕ್ತಿಕ ಟೀಕೆಯ ದಾಳಿಗಳು ಹೆಚ್ಚತೊಡಗಿವೆ ಎಂದು ಅಸಮಾಧಾನ ಪ್ರಕಟಿಸಿದ್ದರು. ಕಾಯಿದೆ ಕಾನೂನುಗಳು ಏನು ಹೇಳುತ್ತವೆಂಬುದನ್ನು ಪಕ್ಕಕ್ಕೆ ಇಟ್ಟು, ಮೀಡಿಯಾ ಏನು ಹೇಳುತ್ತಿದೆ ಎಂದು ನೋಡಬೇಕೆಂಬ ಒತ್ತಡ ಹೆಚ್ಚತೊಡಗಿದೆ ಎಂದಿದ್ದರು. ಪರ್ದೀವಾಲ ಅವರ ಮಾತುಗಳಿಗೆ ದನಿಗೂಡಿಸಿದ್ದರು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ. ನ್ಯಾಯಮೂರ್ತಿಗಳನ್ನು ತಮ್ಮ ಕಟಕಟೆಯಲ್ಲಿ ನಿಲ್ಲಿಸಿ ತೀರ್ಪು ಹೇಳುವ ಮೀಡಿಯಾ ಪ್ರವೃತ್ತಿ ಅಪಾಯಕಾರಿ ಎಂದು ಟೀಕಿಸಿದ್ದುಂಟು.
‘ಮಾಹಿತಿಗೇಡಿ ಮತ್ತು ಕಾರ್ಯಸೂಚಿ ಚಾಲಿತ ಚರ್ಚೆಗಳ ಮೂಲಕ ಮೀಡಿಯಾ ಕಾಂಗರೂ ಕೋರ್ಟ್ ಗಳನ್ನು ನಡೆಸತೊಡಗಿದೆ. (ಸಾಕ್ಷ್ಯಾಧಾರಗಳಿಲ್ಲದೆ, ನೆಲದ ಕಾನೂನು ಕಾಯಿದೆಗಳನ್ನು ಅನ್ವಯಿಸದೆ ಕೇವಲ ಪೂರ್ವಗ್ರಹಗಳನ್ನು ಆಧರಿಸಿ ದಿಢೀರನೆ ಯಾರನ್ನಾದರೂ ತಪ್ಪಿತಸ್ಥ ಎಂದು ನ್ಯಾಯನಿರ್ಣಯ ನೀಡುವ ಗುಂಪಿನ ಕ್ರಿಯೆಯನ್ನು ಕಾಂಗರೂ ಕೋರ್ಟ್ ಎಂದು ಕರೆಯುತ್ತಾರೆ). ನ್ಯಾಯನಿರ್ಣಯವೆಂಬುದು ಕಡುಕಠಿಣ ಹೊಣೆಗಾರಿಕೆ. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸವಾಲಿನ ಕೆಲಸವಾಗಿ ಪರಿಣಮಿಸುತ್ತಿದೆ. ಮೀಡಿಯಾ ತನ್ನದೇ ನ್ಯಾಯಾಲಯ ಮತ್ತು ಕಟಕಟೆಗಳನ್ನು ಟೀವಿ ಸ್ಟುಡಿಯೋಗಳಲ್ಲಿ ನಿರ್ಮಿಸಿಕೊಂಡು ಪ್ರಕರಣಗಳ ’ವಿಚಾರಣೆ’ಯಲ್ಲಿ ತೊಡಗಿದೆ. ಇಂತಹ ಮೀಡಿಯಾ ವಿಚಾರಣೆಗಳ ಸಂಖ್ಯೆ ಹೆಚ್ಚತೊಡಗಿರುವುದು ನ್ಯಾಯಾಂಗದ ನ್ಯಾಯಬದ್ಧ ಕರ್ತವ್ಯನಿರ್ವಹಣೆ ಮತ್ತು ಸ್ವತಂತ್ರವನ್ನು ಬಾಧಿಸುತ್ತದೆ. ಹೊಸ ಮಾಧ್ಯಮ ಸಾಧನ ಸಲಕರಣೆಗಳಿಗೆ ಸರಿ ತಪ್ಪು, ಒಳಿತು-ಕೆಡುಕು, ಅಸಲಿ- ನಕಲಿಯನ್ನು ವಿಂಗಡಿಸಿ ಹೇಳುವ ವಿವೇಚನೆ ಇಲ್ಲವಾಗಿದೆ. ಈ ಖೋಟಾ ಮೀಡಿಯಾ ವಿಚಾರಣೆಗಳನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಲಯಗಳು ತೀರ್ಪುಗಳನ್ನು ನೀಡುವುದು ಸಾಧ್ಯವಿಲ್ಲ. ಮೀಡಿಯಾ ಹೊಣೆಗೇಡಿಯಾಗಿದೆ. ಮೀಡಿಯಾದ ಕೆಲ ವರ್ಗಗಳು ಜನತಂತ್ರವನ್ನು ದುರ್ಬಲಗೊಳಿಸತೊಡಗಿವೆ. ಅನುಭವೀ ನ್ಯಾಯಮೂರ್ತಿಗಳಿಗೆ ಕೂಡ ಕಠಿಣವೆನಿಸುವ ಪ್ರಕರಣಗಳ ಕುರಿತು ಮೀಡಿಯಾ ಕಾಂಗರೂ ಕೋರ್ಟುಗಳನ್ನು ನಡೆಸುತ್ತಿದೆ. ನ್ಯಾಯನಿರ್ಣಯ ಕುರಿತ ಮಾಹಿತಿಗೇಡಿ ಮತ್ತು ಕಾರ್ಯಸೂಚಿ ಚಾಲಿತ ಚರ್ಚೆಗಳು ಜನಹಿತ ಮತ್ತು ಜನತಂತ್ರದ ಆರೋಗ್ಯಕ್ಕೆ ಮಾರಕವಾಗಿವೆ. ಈ ಪ್ರಕ್ರಿಯೆಯಲ್ಲಿ ನ್ಯಾಯದಾನ ಕ್ರಿಯೆಗೆ ಪೆಟ್ಟು ಬೀಳುತ್ತದೆ. ಇಂತಹ ಚರ್ಚೆಗಳ ಮೂಲಕ ನಮ್ಮ ಜನತಂತ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದೀರಿ’ ಎಂದು ಎಂದು ಮುಖ್ಯ ನ್ಯಾಯಮೂರ್ತಿ ಕಳವಳ ಪ್ರಕಟಿಸಿದ್ದಾರೆ.
‘ಮುದ್ರಣ ಮಾಧ್ಯಮ ಅಷ್ಟಿಷ್ಟು ಜವಾಬ್ದಾರಿಯನ್ನು ಇನ್ನೂ ಉಳಿಸಿಕೊಂಡಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಹೊಣೆಯರಿತು ನಡೆದುಕೊಳ್ಳಬೇಕು. ದನಿ ಎತ್ತುವ ನಿಮ್ಮ ಶಕ್ತಿ ಸಾಮರ್ಥ್ಯಗಳು ಜನರಿಗೆ ತಿಳಿವಳಿಗೆ ನೀಡಲು ಬಳಕೆಯಾಗಬೇಕು. ಪ್ರಗತಿಪರ, ಸಂಪದ್ಭರಿತ ಹಾಗೂ ಶಾಂತಿಯುತ ದೇಶವನ್ನು ಕಟ್ಟುವ ಸಾಮೂಹಿಕ ಪ್ರಯತ್ನದ ಭಾಗವಾಗಬೇಕು’ ಎಂದು ಎಚ್ಚರಿಕೆ ಬೆರೆತ ಕಿವಿಮಾತು ಹೇಳಿದ್ದಾರೆ.
(ಎಲೆಕ್ಟ್ರಾನಿಕ್ ಮತ್ತು ಸೋಶಿಯಲ್ ಮೀಡಿಯಾ) ಬಾರಿ ಬಾರಿಗೆ ಗೆರೆ ದಾಟಿ ಉಲ್ಲಂಘಿಸತೊಡಗಿ ಸಾಮಾಜಿಕ ಕ್ಷೋಭೆಗೆ ದಾರಿ ಮಾಡಿವೆ. ಪರಿಣಾಮವಾಗಿ ಮೀಡಿಯಾದ ಮೇಲೆ ಬಿಗಿ ನಿರ್ಬಂಧಗಳನ್ನು ಮತ್ತು ಉತ್ತರದಾಯಿತ್ವವನ್ನು ವಿಧಿಸಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. ಇತ್ತೀಚಿನ ಪ್ರವೃತ್ತಿಗಳನ್ನು ಗಮನಿಸಿದರೆ ಮೀಡಿಯಾ ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಂಡು, ಅಳೆದು ತೂಗಿ ಮಾತಾಡುವುದು ಲೇಸು. ಗೆರೆ ದಾಟಿ ಸರ್ಕಾರ ಮತ್ತು ನ್ಯಾಯಾಲಯದ ಹಸ್ತಕ್ಷೇಪವನ್ನು ಅಹ್ವಾನಿಸದಿರುವುದೇ ಒಳಿತು. ನ್ಯಾಯಮೂರ್ತಿಗಳು ತಕ್ಷಣ ಪ್ರತಿಕ್ರಿಯಿಸಲಾರರು. ಅದನ್ನು ದೌರ್ಬಲ್ಯ ಅಥವಾ ಅಸಹಾಯಕತೆ ಎಂದು ಭಾವಿಸುವ ತಪ್ಪು ಮಾಡಬೇಡಿರಿ. ಸ್ವಾತಂತ್ರ್ಯವನ್ನು ಹೊಣೆಯರಿತು ಚಲಾಯಿಸಿದರೆ ಬಾಹ್ಯ ನಿರ್ಬಂಧಗಳನ್ನು ದೂರ ಇರಿಸಬಹುದು ಎಂಬ ಮುಖ್ಯ ನ್ಯಾಯಮೂರ್ತಿಯವರ ಮಾತುಗಳು ಮೀಡಿಯಾಗೆ ನೀಡಿರುವ ಸ್ಪಷ್ಟ ಎಚ್ಚರಿಕೆ.
ಈ ಎಚ್ಚರಿಕೆಯನ್ನು ಕಡೆಗಣಿಸುವುದು ಆತ್ಮಹತ್ಯೆಯಾದೀತು. ಈಗಾಗಲೆ ಅಂಗೈಯಲ್ಲಿ ಆಡಿಸುತ್ತಿರುವ ಮೀಡಿಯಾದ ಕೈಕಾಲುಗಳನ್ನು ಕಾನೂನುಗಳು- ನಿಯಮಗಳಿಂದಲೇ ಕಟ್ಟಿ ಹಾಕಲು ಹೊಂಚು ಹಾಕುತ್ತಿದೆ ಪ್ರಭುತ್ವ. ಹೀಗಾಗಿ ನ್ಯಾಯಾಂಗದ ಪಾತ್ರ ವಹಿಸುವುದನ್ನು ಬಿಟ್ಟು ಜನತಂತ್ರದ ಕಾವಲು ನಾಯಿಯ ಕರ್ತವ್ಯವನ್ನು ನಿಯತ್ತಿನಿಂದ ನಡೆಸಿಕೊಂಡು ಹೋಗಬೇಕಿದೆ ಮೀಡಿಯಾ.
ಟೀವಿ ಚಾನೆಲ್ಲುಗಳಲ್ಲಿ ನಡೆಯುತ್ತಿರುವ ಬಹುತೇಕ ಚರ್ಚೆಗಳು ತೀರಾ ತೆಳು ಮತ್ತು ಮೇಲ್ಪದರದವು. ಪಕ್ಷಪಾತದಿಂದ ಕೂಡಿದ ಪೊಳ್ಳು ವಾದಗಳು. ಕದನಕುತೂಹಲ- ರೋಚಕತೆಯಿಂದ ಕೂಡಿದ ಈ ಚರ್ಚೆಗಳು ಆಳ ಅಗಲರಹಿತ. ರಾಜಕೀಯ ಪಕ್ಷಪಾತದಿಂದ ಕೂಡಿದವುಗಳು. ಒಂದು ಪಕ್ಷದ ಪರವಾಗಿರುವಂತಹವು. ಆ ಒಂದು ಪಕ್ಷ ನಿಸ್ಸಂಶಯವಾಗಿಯೂ ಆಳುವ ಪಕ್ಷವೇ. ಟೀವಿ ಆ್ಯಂಕರುಗಳು ನ್ಯಾಯಾಧೀಶರ ಪಾತ್ರ ವಹಿಸಿ ತೀರ್ಪು ನೀಡತೊಡಗಿದ್ದಾರೆ.. ವ್ಯಕ್ತಿಗಳು, ನಿರ್ದಿಷ್ಟ ಜನಸಮುದಾಯಗಳು, ಘಟನೆಗಳು, ವಿಷಯಗಳ ಕುರಿತು ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ಕುರಿತ ನ್ಯಾಯಮೂರ್ತಿಗಳ ಅಸಮಾಧಾನ ಸಹಜ ಸ್ವಾಭಾವಿಕ. ನ್ಯಾಯದಾನದ ದೃಷ್ಟಿಯಿಂದ ಮಾತ್ರವಲ್ಲ, ಮಾಧ್ಯಮಗಳ ವಿಶ್ವಾಸಾರ್ಹತೆಯ ದೃಷ್ಟಿಯಿಂದಲೂ ಈ ಅತಿರೇಕ ಅಂಕೆಗೆ ಒಳಪಡಬೇಕಿದೆ.ಮುಖ್ಯ ನ್ಯಾಯಮೂರ್ತಿಯವರು ಸಲಹೆ ನೀಡಿರುವಂತೆ ಮೀಡಿಯಾ ತಮಗೆ ತಾವೇ ಅಂಕೆ ವಿಧಿಸಿಕೊಳ್ಳುವುದೇ ಸೂಕ್ತ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…