*ರಹಮತ್ ತರೀಕೆರೆ
ಅಮ್ಮ ನಿಧನಳಾದ ಬಳಿಕ ಅಪ್ಪನ ಬಾಳು ಸೂತ್ರಹರಿದ ಪಟವಾಯಿತು. ನಮಗೆ ಅಮ್ಮನ ಜಾಗದಲ್ಲಿ ಮತ್ತೊಬ್ಬ ಮಹಿಳೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಯಿತು. ಈ ವಿಷಯದಲ್ಲಿ ಅಪ್ಪನಿಗೆ ಬೆಂಬಲ ಸಿಕ್ಕಿದ್ದು ದೊಡ್ಡಕ್ಕನಿಂದ ಮಾತ್ರ. ನಡುಪ್ರಾಯದ ಅಪ್ಪ ಹಾದಿಗೆಡಬಹುದು ಎಂದಾಕೆ ಆಲೋಚಿಸಿರಬೇಕು. ಆದರೆ ಮರುಮದುವೆ ಅವನ ಸಾರ್ವಜನಿಕ ಸ್ಥಾನವನ್ನು ಕಿಂಚಿತ್ ತಗ್ಗಿಸಿತು. ‘ಬುಡೇ ವಖತ್ ಮೆ ಬುರೀ ಬಲಾ’ ಎಂದು ನಂಟರು ಆಡಿಕೊಂಡರು. ಮೊದಮೊದಲು ಬಿರುಸಾಗಿದ್ದ ನಾವು, ನಿಧಾನವಾಗಿ ಚಿಕ್ಕಮ್ಮನಿಗೆ ಹೊಂದಿಕೊಂಡೆವು. ಮೊದಲ ಗಂಡನಿಂದ ವಿಚ್ಛೇದಿತೆಯಾಗಿ ಸ್ಕಿಜೊಫ್ರೇನಿಯಾದಿಂದ ಬಳಲುತ್ತಿದ್ದ ಆಕೆಗೆ ಹೊಸಬಾಳು ಮತ್ತು ಮಲಮಕ್ಕಳ ಸಮಸ್ಯೆ ಒಟ್ಟಿಗೆ ಸಿಕ್ಕಿದ್ದವು. ನಮ್ಮ ಕಾಟ ಸಹಿಸಿಕೊಂಡು ಎಲ್ಲರ ಮನವನ್ನು ಆಕೆ ಗೆದ್ದರು. ಆದರೆ ಕಳೆದುಹೋದ ಸಾಮಾಜಿಕ ಪ್ರತಿಷ್ಠೆ ಹಾಗೂ ಪತ್ನಿಯ ಮಾನಸಿಕ ಕಾಯಿಲೆಯಿಂದ ಅಪ್ಪ ಒಳಗೆ ಕೊರಗುತ್ತಿದ್ದನು. ಸಣ್ಣತಪ್ಪಿಗೂ ಚಿಕ್ಕಮ್ಮನನ್ನು ದಂಡಿಸುತ್ತಿದ್ದನು. ಆಕೆಯ ಹೊಟ್ಟೆಯಲ್ಲೊಂದು ಕೂಸು ಕಂಡಿತು. ಬಾಣಂತನದ ಉಪಚಾರಕ್ಕೆ ಸಣ್ಣಕ್ಕನನ್ನು ಕರೆತರ ಹೋದೆ. ಬಂಧುಗಳು ಮುಖ ವಿಕಾರಿಸಿಕೊಂಡು, ‘ಈ ವಯಸ್ನಾಗೆ ಇವೆಲ್ಲ ಬೇಕಿತ್ತೇನಪ್ಪ? ನಿಮ್ಮವ್ವ ಹೋದಾಗಲೇ ಸಂಬಂಧ ಹರೀತು. ಬೆಲ್ಲವೇ ಹೋತು. ಅದರ ಮ್ಯಾಲೆ ಹೊಚ್ಚಿದ ಬಟ್ಟೆದೇನು ಹಂಗು?’ ಎಂದರು.
ಚಿಕ್ಕಮ್ಮ ಬಹಳ ಕಾಲ ಬದುಕಲಿಲ್ಲ. ಅವರಿಲ್ಲವಾದ ಬಳಿಕ ಅಪ್ಪನ ಬಾಳು ಮತ್ತೊಮ್ಮೆ ಹಾಯಿಪಟ ಹರಿದ ನಾವೆಯಾಯಿತು. ಆ ಹೊತ್ತಿಗೆ ನಾವೆಲ್ಲ ಲಗ್ನವಾಗಿ ನೌಕರಿ ಹಿಡಿದು ಬೇರೆ ಊರುಗಳಲ್ಲಿ ನೆಲೆಸಿದ್ದವು. ಊರೊಳಗಿನ ಮನೆಯಲ್ಲಿ ಅವನು ಒಂಟಿಯಾದನು. ಗಂಡುಮಕ್ಕಳ ಮನೆಗೆ ಬರುತ್ತಿದ್ದರೂ ಅವನಿಗೆ ಹೆಣ್ಣುಮಕ್ಕಳ ಮನೆಯೇ ಇಷ್ಟ. ಊರಲ್ಲಿದ್ದ ಅಣ್ಣನ ಜತೆ ಸಂಬಂಧ ಕೆಟ್ಟಿತ್ತು. ಮಕ್ಕಳಿಂದ ಹಣ ಪಡೆಯುವುದಕ್ಕೆ ಅಭಿಮಾನ ಅಡ್ಡಬರುತ್ತಿತ್ತು. ಬಂದ ದಿನ ಲವಲವಿಕೆಯಿಂದ ಇರುತ್ತಿದ್ದ ಆತ, ಮಾರನೇ ದಿನ ಚಡಪಡಿಸುತ್ತಿದ್ದನು. ನಮಗೆ ಅವನೊಡನೆ ಮಾತಾಡಲು ಪುರುಸೊತ್ತು ಅಥವಾ ವಿಷಯ ಇರಲಿಲ್ಲ. ಮೊಮ್ಮಕ್ಕಳ ಜತೆ ಸಮಯ ಕಳೆಯುತ್ತಿದ್ದನು. ಸಂಜೆ ಪೇಟೆ ತಿರುಗಾಡಿ ಬರುತ್ತಿದ್ದನು. ಮುನ್ಸಿಪಲ್ ಮೈದಾನಕ್ಕೆ ವಾಕಿಂಗ್ ಬರುವವರ ಗೆಳೆತನ ಮಾಡಲು ಸೂಚಿಸಿದೆ. ಆತ ನಿವೃತ್ತ ನೌಕರರ ಕೂಟವೊಂದಕ್ಕೆ ಸೇರಿದನು. ಅವರು ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ವಾಕ್ ಮುಗಿಸಿ, ದೇಶದ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದರು.
ಚಿಕ್ಕಮಕ್ಕಳು ಶಾಲೆಗೆ ಹೋಗಲಾರೆ ಎಂಬಂತೆ ಒಂದು ದಿನ ಅಪ್ಪ ‘ನಾಳಿಂದ ಅವರೊಟ್ಟಿಗೆ ಹೋಗಲ್ಲಪ್ಪ. ಕಳ್ಳನನ್ನ ಮಕ್ಕಳು, ನನಗೆ ಮಾತಾಡೋಕೇ ಕೊಡಲ್ಲ’ ಎಂದನು. ಬಹುಶಃ ಚರ್ಚೆಯಲ್ಲಿ ಇವನು ಅಡ್ಡಬಾಯಿ ಹಾಕಿ, ‘ಸ್ವಾಮೀ, ಇಂದಿರಾ ಗಾಂಧಿ ಗಂಡಸಿದ್ದಂಗೆ. ಅವಳು ಸತ್ತಿದ್ದೇ ದೇಶ ಬರ್ಬಾದ್ ಆತು. ಬಡವರಿಗೆ ಪೆನಶನ್ ಕೊಟ್ಟವಳೇ ಅವಳು. ನೂರು ರೂಪಾಯಿ ನೋಟು ಒಲೇಲಿ ಸುಟ್ಟು ಟೀ ಮಾಡಿ ಕುಡಿಯೋಳು. ದಿನಾ ಬೆಳಿಗ್ಗೆ ಕೋಳಿಪಿಳ್ಳೆಯ ಸೂಪ್ ಕುಡಿಯೋಳು. ನೂರು ಕಾರು ನಿಲ್ಲಿಸಿದರೆ, ಆ ದಿನ ಯಾವ ಕಾರಿಗೆ ಬೆರಳು ತೋರಿಸ್ತಾಳೊ ಅದರ ಡ್ರೆ ವರ್ ಗಾಡಿ ತಗೀಬೇಕು. ಹಂಗೆ ಬೆಳದೋಳು’ ಇತ್ಯಾದಿ ಪಿಚ್ಚರ್ ಬಿಟ್ಟಿರಬೇಕು. ಇದು, ನಾವೇ ಕೇಳಿದಂತೆ ಅವನು ಕುಲುಮೆಯಲ್ಲಿ ಗಿರಾಕಿಗಳ ಮುಂದೆ ಬಿಗಿಯುತ್ತಿದ್ದ ಪ್ರವಚನ. ಪೇಪರ್ ಓದುವ, ಟಿವಿ ನೋಡುವ ವಾಕಿಂಗ್ ಗುಂಪಿನವರು ಇವನನ್ನು ಸ್ನಬ್ ಮಾಡಿರಬೇಕು. ಇವನಿಗೆ ಅವರ ಚರ್ಚೆ ಬೋರಾಗಿರಬೇಕು. ಈ ನಡುವೆ ವಾಯುವಿಹಾರಿಗಳಲ್ಲಿ ಒಬ್ಬರು ತೀರಿಕೊಂಡರು. ಅಪ್ಪ ಗುಂಪಿಗೆ ರಾಜೀನಾಮೆ ಕೊಟ್ಟನು.
ಒಂದು ಸಲ, ನಮ್ಮ ಕುಟುಂಬ ಪ್ರತಿವರ್ಷವೂ ಹೋಗುತ್ತಿದ್ದ ಬಿ.ದುರ್ಗದ ಉರುಸಿಗೆ ಹೋಗಿದ್ದೆವು. ಉರುಸು ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ಬರುವಾಗ, ಬಸ್ಸು ಹೊರಡುತ್ತಿರುವುದು ಕಂಡಿತು. ಎಲ್ಲರೂ ಅದರತ್ತ ಓಡಿದರು. ಅಪ್ಪ ಹಿಂದೆ ಬಿದ್ದಿದ್ದ. ಬೇಗ ಬರುವಂತೆ ಬಸ್ಸಿನೊಳಗೆ ಇದ್ದವರು ಕೈಬೀಸಿದರು. ಅಪ್ಪ ಓಡಿಬರಲು ಯತ್ನಿಸಿ ತೊಡರುಗಾಲು ಹಾಕಿಕೊಂಡು ಬುಡಕಡಿದ ಬಾಳೆಯಂತೆ ಸುತ್ತಿಕೊಂಡು ಬಿದ್ದುಬಿಟ್ಟ. ಓಡಿಹೋಗಿ ಎಬ್ಬಿಸಿದೆ. ಮೊಣಕಾಲು ತರಿದಿತ್ತು. ‘ಹಿಂದ್‌ನಂಗೆ ನಡಿಯಕೆ ಆಗಲ್ಲ ಮಗನೆ’ ಎಂದು ಗೊಣಗಿದ. ಆರಡಿ ಮನುಷ್ಯ, ನಮ್ಮೆಲ್ಲರ ಎದುರು ತೋಯ್ದ ಬಟ್ಟೆಯಂತೆ ಬಿದ್ದ ದೃಶ್ಯ, ಮುಪ್ಪು ತರುವ ದೈಹಿಕ,ಮಾನಸಿಕ ಅಸಹಾಯಕತೆಯ ಭೀಷಣ ಸತ್ಯ ಮನಗಾಣಿಸಿತು. ಅಪ್ಪ ಅಲ್ಲಿಂದಾಚೆ ಕೃಶವಾಗುತ್ತ, ಮಕ್ಕಳು ಹೇಳಿದಂತೆ ಕೇಳುವ ಮಗುವಾಗುತ್ತ ನಡೆದನು. ಕುಲುಮೆಯಲ್ಲಿ ಅರ್ಧಶತಮಾನ ಕುಡಿದ ಹೊಗೆ ಮತ್ತು ಗಣೇಶ ಬೀಡಿಗಳು ಜಂಟಿ ಕಾರ್ಯಾಚರಣೆ ನಡೆಸಿ ಶ್ವಾಸಕೋಶ ಕೆಡಿಸಿದ್ದವು.
ಆಮ್ಲಜನಕದ ಕೊರತೆಯ ಸಂಕಷ್ಟವನ್ನು ಹಿಮಾಲಯ ಚಾರಣದಲ್ಲಿ ಅನುಭವಿಸಿರುವೆ. ಅಪ್ಪನಿಗೆ ಉಸಿರಾಟ ತ್ರಾಸಾದಾಗ ನೀರಿಂದ ಹೊರಬಿದ್ದ ಮೀನಂತೆ ಆಡುತ್ತಿದ್ದನು. ಆಗ ತಕ್ಷಣ ಕೊಡುವಂತೆ ಡಾಕ್ಟರು ಇಂಜೆಕ್ಷನ್ ಬರೆದುಕೊಟ್ಟಿದ್ದರು. ಅದು ಡಿಸೆಂಬರ್ ಕೊನೆಯ ದಿನ. ಭಯಂಕರ ಚಳಿ. ದಮ್ಮಿದ್ದವರಿಗೆ ಕಷ್ಟದ ವಾತಾವರಣ. ಅಪ್ಪನ ಮದ್ದು ತರಲೆಂದು ಬಜಾರಿಗೆ ಹೋದವನು, ಗೆಳೆಯರೊಂದಿಗೆ ಹೊಸ ವರ್ಷದ ಪಾರ್ಟಿಗೆ ಹೋದೆ. ಹರಟೆಯಲ್ಲಿ ವೇಳೆ ಸರಿದಿದ್ದೇ ಅರಿವಾಗಲಿಲ್ಲ. ಮನೆಗೆ ಬರುವಾಗ ಅಪ್ಪ ಅಂಗಳದ ಕಟ್ಟೆಯ ಮೇಲೆ ಸುಂಯ್‌ಗರೆಯುತ್ತ ಕೂತಿದ್ದ. ನನ್ನ ಕಂಡವನೇ ಸಂಕಟದ ದನಿಯಲ್ಲಿ ‘ಕ್ಯಾದೋಸ್ತ್, ಬಹುತ್ ಡೇರ್ ಕರದಿಯಾ?’ ಎಂದನು. ಆತ ವ್ಯಂಗ್ಯದ ಬಹುವಚನ ಬಳಸುವುದೇ ಸಿಟ್ಟು, ಅಸಹಾಯಕತೆಯಲ್ಲಿ. ಇದು ಭರ್ಜಿಯಂತೆ ತಿವಿದು ನನ್ನ ಬೇಹೊಣೆ ಮನಗಾಣಿಸಿತು. ಇಂಜೆಕ್ಷನ್ ತೆಗೆದುಕೊಂಡ ಬಳಿಕ ಆತ ನಿರಾಳ ಮಲಗಿದ. ನನ್ನ ನಿದ್ದೆ ಕದಡಿಹೋಯಿತು.
ಕೊನೆಯ ದಿನಗಳಲ್ಲಿ ಅಪ್ಪ ಮಕ್ಕಳ ಮನೆಗಳಲ್ಲಿ ವಾರೊಪ್ಪತ್ತು ತಿರುಗಾಡಿಕೊಂಡಿದ್ದ. ಒಂದು ಮನೆಯಲ್ಲಿ ಸಿಕ್ಕ ಸರಕು, ಹಣ್ಣು, ಧಾನ್ಯ, ರೊಕ್ಕವನ್ನು ಜರೂರತ್ತಿರುವ ಇನ್ನೊಂದು ಮನೆಗೆ, ಚನ್ನೆಮಣೆಯಲ್ಲಿ ಹುಣಿಸೆಪಿಕ್ಕ ಹಾಕ್ಯಾಡುವಂತೆ ಒಯ್ಯುತ್ತಿದ್ದ. ಅವನ ಏಕಾಂಗಿತನ ಕ್ರೂರವಾಗಿತ್ತು. ಇದ್ದಬದ್ದ ಮುತುವರ್ಜಿಯನ್ನೆಲ್ಲ ಮಲಪುತ್ರನ ಮೇಲೆ ಕೇಂದ್ರೀಕರಿಸಿದ. ನನ್ನ ಚಿಕ್ಕಮಗಳನ್ನು ಕೂಸುಮಾರಿ ಮಾಡಿಕೊಂಡು ಶಾಲೆಗೆ ಬಿಟ್ಟು ಬರುತ್ತಿದ್ದ. ಅವಳೇ ಮಾತ್ರೆಯನ್ನು ಬಾಯಿಗೆ ಹಾಕಬೇಕು. ನೀರು ಕುಡಿಸಬೇಕು. ‘ಸೊಸ್ತೇರು ಸರಿಯಾಗಿ ನೋಡಿಕೊಳ್ಳಲ್ಲ’ ಎಂದು ದೂರುತ್ತಿದ್ದ. ತಮಾಷೆಗಾಡಿದ ಮಾತೂ ಮುಳ್ಳಿನಂತೆ ನೆಡುವಷ್ಟು ಸೂಕ್ಷ ನಾಗಿದ್ದ.
ಅಪ್ಪನ ತಿರುಗಾಟ ಸಂಪೂರ್ಣ ನಿಂತಿತು. ನಾಟಕದಲ್ಲಿ ಬಹುರೂಪಿ ಪಾತ್ರಗಳನ್ನು ನಿರ್ವಹಿಸಿದ ನಟ ರಂಗಬಿಡಲು ತಯಾರಾದನು. ಆತ ತಾನೇ ಮಾಡಿಸಿದ್ದ ಸಾಗುವಾನಿ ಮಂಚದ ಮೇಲೆ, ಹೊಲಮಾರಿ ಕೊಂಡ ಮನೆಯೊಳಗೆ, ಆರು ತಿಂಗಳು ಹಾಸಿಗೆಯಲ್ಲೇ ಎಲ್ಲ ಮಾಡುತ್ತ ಕಳೆದನು. ವಯಸ್ಸು ಕಾಯಿಲೆ ನಿರ್ದಯವಾಗಿದ್ದವು. ಸಲ್ಲೇಖನ ವ್ರತಹಿಡಿದ ಸವಣನಂತೆ ತೋರುತ್ತಿದ್ದನು. ಒಂದು ರಾತ್ರಿ. ಪಾರ್ಟಿಗೆ ಗೆಳೆಯರೆಲ್ಲ ಸೇರಿದ್ದೆವು. ಊರಿಂದ ಫೋನು. ಎತ್ತಿಕೊಂಡೆ. ‘ಅಪ್ಪ ಸೀರಿಯಸ್’ ಆಗಿರುವ ಸಂದೇಶವಿತ್ತು. ಕರೆಯಲ್ಲಿರುವ ಕಂಪನದನಿ ಬೇರೆ ಸತ್ಯವನ್ನೇ ಸೂಚಿಸುತ್ತಿತ್ತು. ಸಾವು ನಿರೀಕ್ಷಿತವಾಗಿತ್ತು. ಅವನ ನರಳಿಕೆ ಕಾಣುವಾಗ, ಸಾವೇ ಏಕಿಂತು ಕಾಡಿಸುತ್ತಿರುವೆ ಎಂದೂ ಸಿಟ್ಟು ಬರುತ್ತಿತ್ತು. ಪ್ರಿಯರ ಸಾವು ದುಗುಡದಾಯಕ. ಅವರ ದೇಹಪಡುವ ಯಾತನೆ ಕಾಣುವಾಗ ಅದುವೇ ಬಿಡುಗಡೆ. ಅಪ್ಪ ನೆಮ್ಮದಿಯ ಸಾವಿಗಾಗಿ ಪ್ರಾರ್ಥಿಸಲಿಲ್ಲ. ಉಳಿಸಿಕೊಳ್ಳಿರೊ ಎಂದು ಗೋಗರೆಯುತ್ತಿದ್ದ. ಅವನ ಮುಖದಲ್ಲಿದ್ದ ಆರ್ತತೆ ಅವನ ಧೀರಬದುಕಿನ ಚರಿತ್ರೆಗೆ ಹೊಂದಿಕೆ ಆಗುತ್ತಿರಲಿಲ್ಲ. ಅವನೊಟ್ಟಿಗೆ ಮುಖ ಹರಿದುಕೊಂಡಿದ್ದ ಅಣ್ಣ, ಹಿರಿಯ ಮಗನ ಹಕ್ಕಾಗಿ ಕಫನ್ ದಫನ್ ಖರ್ಚು ವಹಿಸಿಕೊಂಡ. ಅಪ್ಪ ಕಣ್ಮರೆಯಾದ ಬಳಿಕ ಅವನ ಮಹತ್ವ ಮನವರಿಕೆಯಾಯಿತು. ಅವನು ನಮ್ಮನ್ನು ಬೆಳೆಸಲು ಮಾಡಿದ ಸೆಣಸಾಟದ ನೆನಪು ಒಜ್ಜೆಯಾಗಿ ಕಾಡತೊಡಗಿತು. ಆತ ಸತ್ತು ನಮ್ಮೊಳಗೆ ಮತ್ತೊಮ್ಮೆ ಹುಟ್ಟತೊಡಗಿದ.
ಕುಲುಮೆಗೆ ರಾತ್ರಿ ಕಾವಲಿಗೆ ನಾನೂ ಅವನೂ ಮಲಗಲು ಹೋಗುತ್ತಿದ್ದುದು ನೆನಪಾಗುತ್ತಿದೆ. ಆಗವನು ನನಗೆ ಚಳಿಯಾಗದಂತೆ ಹೊಟ್ಟೆಯೊಳಗೆ ಹುದುಗಿಸಿಕೊಳ್ಳುತ್ತಿದ್ದನು. ಅವನ ಬಾಯಿಂದ ಬರುತ್ತಿದ್ದ ಪರಿಚಿತವೂ ಸಹ್ಯವೂ ಆಗಿದ್ದ ಗಣೇಶ ಬೀಡಿಯ ಪರಿಮಳ, ಆಮ್ಲಜನಕದ ಹಾಗೆ ಗುಡಾರ ತುಂಬುತ್ತಿತ್ತು. ನಾನು ತಾಯಹೊಟ್ಟೆಗೆ ಮರಳಿಹೋದಂತೆ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದೆನು.
ಅಪ್ಪನ ಎರಡು ಮೂರು ಫೋಟೊಗಳಿವೆ. ಅವುಗಳಲ್ಲಿ ಒಂದು–ಕೋವಿ ಲೈಸೆನ್ಸಿಗೆಂದು ತೆಗೆದಿದ್ದು. ಅದರಲ್ಲಿನ್ನೂ ಯೌವನವಿದೆ. ಸಣ್ಣ ಕಟಿಂಗು. ಕ್ಯಾಮೆರಾ ಎದುರಿಸುವ ಗಾಬರಿಯಿಂದ ಅರಳಿದ ಕಣ್ಣು. ಗದ್ದದ ಬಳಿ ಚೂಪುಗೊಂಡ ಮುಖ. ಇಂಗ್ಲಿಷ್ ಸಿನಿಮಾದ ಹಳೇ ನಟ. ಇನ್ನೊಂದು ನನ್ನ ಮದುವೆ ದಿನ ಹೊರಡುವಾಗ ತೆಗೆದಿದ್ದು. ಐದು ಸಾವಿರದಲ್ಲಿ ಮದುವೆ ಮುಗಿಯಬೇಕು ಎಂದು ಯಾರಿಗೂ ಬಟ್ಟೆ ತೆಗೆಸಿರಲಿಲ್ಲ. ಅಕ್ಕಂದಿರಿಗೆ ಅಪ್ಪನಿಗೆ ಮುಂದಿನ ಸಂಬಳದಲ್ಲಿ ಕೊಡಿಸುವೆನೆಂದು ಒಪ್ಪಿಸಿದ್ದೆ. ಅಪ್ಪನಿಗಿದು ಇಷ್ಟವಾಗಿರಲಿಲ್ಲ. ಮುಖದಲ್ಲಿ ಉದಾಸಭಾವವಿದೆ. ನಾವು ಭಾವುಕವಾಗಿ ಹಿರಿಯರವು ಎಂದು ಉಳಿಸಿಕೊಳ್ಳುವ ಗುರುತುಗಳು, ನಮ್ಮ ದೋಷದ ಮುಳ್ಳನ್ನೂ ಸಾಧನೆಯ ಹೂವನ್ನೂ ಒಟ್ಟಿಗೆ ಕೂಡಿಸಿದ ಗುಚ್ಛದಂತೆ ಉಳಿದುಬಿಡುತ್ತವೆ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…