ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮವು ಒಂದು ತಿಂಗಳಿನಿಂದ ಜಾತಿ ಸಂಘರ್ಷದಲ್ಲಿ ನಲುಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗಲೂ ೧೪೪ ಸೆಕ್ಷನ್ ಅನ್ವಯ ಗ್ರಾಮದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ. ಎರಡು ಬಲಿಷ್ಠ ಜಾತಿಯ ಕೆಲವು ರಾಜಕೀಯ ಪುಢಾರಿಗಳು, ಕಿಡಿಗೇಡಿಗಳು ಸಣ್ಣ ಪುಟ್ಟ ವಿಚಾರಗಳನ್ನು ಬೃಹದಾಕಾರ ಎಂಬಂತೆ ಬಿಂಬಿಸಿ ಗುಂಪು ಘರ್ಷಣೆಗಳಿಗೆ ಕಾರಣರಾಗಿದ್ದಾರೆ. ಸಮಾನತೆಯ ಆಧಾರದಲ್ಲಿ ಸಮಾಜ ಕಟ್ಟಲು ದುಡಿದ ನಾಡಿನ ಮಹಾನ್ ವ್ಯಕ್ತಿಗಳಾದ ಕೆಂಪೇಗೌಡ ಮತ್ತು ಬಸವೇಶ್ವರರ ಹೆಸರಿನಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಇವರಿಬ್ಬರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡಿದ್ದರೆ ಜಾತಿ ಸಂಘರ್ಷ ಎಂಬುದು ಹೇಳ ಹೆಸರಿಲ್ಲದೆ ನಿರ್ನಾಮ ಆಗುತ್ತಿತ್ತು. ಆದರೆ, ಗ್ರಾಮದಲ್ಲಿರುವ ಕೆಲವು ಕಿಡಿಗೇಡಿಗಳ ಹುನ್ನಾರದಿಂದ ಸಮಸ್ಯೆ ಬೆಟ್ಟದಂತೆ ಬೆಳೆದು ನಿಂತಿದೆ. ಸ್ಥಳೀಯ ಶಾಸಕರಾದ ಸಿ.ಎಸ್.ನಿರಂಜನಕುಮಾರ್ ಅವರು ಉಭಯ ಜಾತಿಗಳ ಮುಖಂಡರ ನಡುವೆ ನೇರವಾಗಿ ಶಾಂತಿ ಸಭೆ ನಡೆಸಿ ಮನವೊಲಿಸಬಹುದಿತ್ತು. ಆದರೆ, ಅಂತಹ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಗ್ರಾಮದ ಪ್ರಜ್ಞಾವಂತ ಜನರಾದರೂ ತಮ್ಮ ಸಮುದಾಯಗಳ ಸ್ವಾಮೀಜಿಗಳಿಗೆ ಸಂಘರ್ಷದ ವಿಚಾರವನ್ನು ತಿಳಿಸಿ ಅವರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿಲ್ಲ. ತಾಲೂಕಿನ ತಹಶೀಲ್ದಾರ್ ಮತ್ತು ಪೊಲೀಸರಿಂದ ಸಂಘರ್ಷವನ್ನು ಶಮನ ಮಾಡುವ ಯತ್ನ ನಡೆಸಿದ್ದನ್ನು ಬಿಟ್ಟರೆ ಇತರೆ ಪರಿಹಾರ ಮಾರ್ಗಗಳು ನಡೆದಿಲ್ಲ. ಕಾನೂನು ಮೂಲಕವೇ ಸಮಸ್ಯೆಯನ್ನು ಪರಿಹರಿಸುವ ಜೊತೆಗೆ ಇತರೆ ಆಯಾಮಗಳಲ್ಲೂ ಶಮನ ಮಾಡುವ ಯತ್ನ ಸಾಗಬೇಕಿತ್ತು. ಅದರತ್ತ ಯಾರೂ ಚಿತ್ತ ಹರಿಸಿಲ್ಲ.
ಕಳೆದ ಒಂದು ತಿಂಗಳ ಹಿಂದೆ ಮಠಾಧಿಪತಿಗಳಾದ ಗುರುಮಲ್ಲೇಶ್ವರರ ಭಾವಚಿತ್ರಕ್ಕೆ ಅಪಮಾನ ಮಾಡಲಾಯಿತು ಎಂಬ ವಿಚಾರವಾಗಿ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬೇಗೂರು ಠಾಣೆ ಪೊಲೀಸರು ಮತ್ತು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರ ಸಮ್ಮುಖದಲ್ಲಿ ಶಾಂತಿ ಸಭೆ ನಡೆದು ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿತ್ತು.
ಕೆಲವು ದಿನಗಳ ನಂತರ ಗ್ರಾಮದಲ್ಲಿರುವ ಬಸವೇಶ್ವರರ ಫ್ಲೆಕ್ಸ್ ಬಳಿ ಕೆಂಪೇಗೌಡರ ಫ್ಲೆಕ್ಸ್ ಹಾಕಿದ್ದರಿಂದ ಮತ್ತೊಂದು ವಿವಾದ ಸೃಷ್ಟಿಯಾಯತು. ಈಗ ಕೆಂಪೇಗೌಡರ ಜಯಂತಿ ಆಚರಣೆ, ಬಸವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಕೆ ವಿಚಾರ ಮತ್ತಷ್ಟು ಬಿಗಡಾಯಿಸಿದೆ. ಈ ಸಂಬಂಧ ಎರಡು ದಿನಗಳ ಹಿಂದೆ ಗುಂಪು ಘರ್ಷಣೆ ಹಾಗೂ ಪರಸ್ಪರ ನಿಂದನೆ ನಡೆದು ಇಬ್ಬರ ಮೇಲೆ ಹಲ್ಲೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಒಂದು ಸಮುದಾಯದ ಜನರು ದೇಗುಲದಲ್ಲಿ ಪ್ರತ್ಯೇಕವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಬೇಡಿಕೆಯಿಟ್ಟಿದ್ದು ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ. ಈ ನಡುವೆ ಗ್ರಾಮದ ಅನೇಕ ಮುಖಂಡರು ಪೊಲೀಸರು, ತಾಲೂಕು ಆಡಳಿತ ವರ್ಗ, ಶಾಸಕರು ಸಮಸ್ಯೆಯನ್ನು ಪರಿಹರಿಸುವಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗುವ ಹುಳಿ ಹಿಂಡುವ ಕೆಲವು ಕಿಡಿಗೇಡಿಗಳ ವರ್ತನೆಯಿಂದ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ರಾಜಕಾರಣಿಗಳು ಮತಬ್ಯಾಂಕ್ ಲೆಕ್ಕಾಚಾರ ಹಾಕುತ್ತ ಸಮಸ್ಯೆಯನ್ನು ಮತ್ತಷ್ಟು ಬೆಳೆಯಲು ಬಿಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.
ಗ್ರಾಮದ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರು, ಆಧ್ಯಾತ್ಮಿಕ ಮುಖಂಡರು, ಪ್ರಜ್ಞಾವಂತರು ಮುತ್ಸದ್ಧಿತನ ತೋರಿ ಸಂಘರ್ಷವನ್ನು ತಡೆಯಲು ಯತ್ನಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಒಂದು ಗ್ರಾಮದಲ್ಲೇ ಇರುವ ಜನರು ಸಣ್ಣಪುಟ್ಟ ವಿಚಾರಗಳಿಗೆ ಪರಸ್ಪರ ನಿಂದನೆ, ಘರ್ಷಣೆ ಮಾಡಿಕೊಂಡು ಬೀದಿಗಿಳಿದರೆ ಮುಂದಿನ ದಿನಗಳಲ್ಲಿ ಭಾರಿ ದಂಡ ತರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಬೆಳವಣಿಗೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ಇಲ್ಲದಿದ್ದರೆ ದ್ವೇಷ ದೊಡ್ಡದಾಗಿ ಬೆಳೆಯಬಹುದು. ಇಂತಹ ಅನೇಕ ಉದಾಹರಣೆಗಳು ನಮ್ಮ ಎದುರೇ ನಡೆದು ಹೋಗಿವೆ.
ಗ್ರಾಮದಲ್ಲಿ ಉದ್ಭವಿಸಿರುವ ಸಂಘರ್ಷ ಅಂತ್ಯ ಕಾಣದೇ ಹಲವು ತಿರುವು ಪಡೆದುಕೊಳ್ಳುತ್ತಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಸೂಕ್ಷ್ಮವಾಗಿ ಗಮನಿಸಿ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ನಿಯಂತ್ರಣಕ್ಕೆ ತರಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಒಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು. ಉಭಯ ಜಾತಿಗಳ ಮುಖಂಡರ ಮನವೊಲಿಸಬೇಕು, ಗ್ರಾಮದಲ್ಲಿ ಸಮುದಾಯಗಳ ನಡುವೆ ಸೌಹಾರ್ದ ವಾತಾವರಣ ಮೂಡುವ ತನಕ ಪೊಲೀಸರ ಬಿಗಿ ಬಂದೋಬಸ್ತ್ ಮಾಡಬೇಕು. ಗ್ರಾಮದಲ್ಲಿ ಮದ್ಯ ಮಾರಾಟ ನಡೆಯದಂತೆ ತಡೆಯೊಡ್ಡಬೇಕು. ಇದಲ್ಲದೆ ಸಾಧ್ಯವಿರುವ ಎಲ್ಲ ಕಠಿಣವಾದ ಕಾನೂನು ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಜನರಲ್ಲಿಯೂ ಸಂಘರ್ಷಗಳಿಂದ ಯಾವುದೇ ಲಾಭವಿಲ್ಲ, ಇದೊಂದು ಜನವಿರೋಧಿ ಕೃತ್ಯ ಎಂಬುದನ್ನು ಮನವರಿಕೆ ಮಾಡಿ ಜಾಗೃತಿಗೊಳಿಸಬೇಕಿದೆ.
ಬೆಂಗಳೂರು: ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 28 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ…
ಬೆಂಗಳೂರು: ಕರ್ನಾಟಕ ಸಾರಿಗೆ ನಿಗಮಗಳ ಬಸ್ ಪ್ರಯಾಣ ಟಿಕೆಟ್ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ…
ದಕ್ಷಿಣ ರಾಜ್ಯಗಳ ಅರಣ್ಯ ಸಚಿವರಿಗೆ ಶೀಘ್ರವೇ ಪತ್ರ – ಈಶ್ವರ ಖಂಡ್ರೆ ಬೆಂಗಳೂರು: ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು…
ಬೆಂಗಳೂರು: ಕರ್ನಾಟಕ ಮತ್ತು ಕೇರಳ ನಡುವೆ ಬಂಡೀಪುರ ಮತ್ತು ವಯನಾಡು ನಡುವೆ ರಾತ್ರಿ ಸಂಚಾರ, ಪ್ರಸ್ತುತ ರಾತ್ರಿ 9ರವರೆಗೆ ಸಂಚಾರಕ್ಕೆ…
ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಹೆಚ್ಚಗುತ್ತಲೆ ಇದೆ. ನೀವು ನೀಡುವ 2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ,…
ಮೈಸೂರು: ಇತಿಹಾಸವಿರುವ ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೆ ಹೋರಾಟ ಮಾಡುತ್ತೇವೆ ಶತಸಿದ್ದ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ…