ಶಿವಾಜಿ ಗಣೇಶನ್, ದೆಹಲಿ ಕಣ್ಣೋಟ
ಸಂವಿಧಾನ ನಮ್ಮ ಆಡಳಿತ ವ್ಯವಸ್ಥೆಯ ಅಡಿಪಾಯ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನದ ಮಹತ್ವದ ಬಗೆಗೆ ಹೆಚ್ಚು ಚರ್ಚೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಜೊತೆ ಜೊತೆಗೆ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯವಿದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದರೆ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಸಂವಿಧಾನ ಜಾರಿಗೆ ಬಂದು ಐವತ್ತು ವರ್ಷಗಳಾದಾಗ ಆ ದಿನಗಳಲ್ಲಿ ಅಽಕಾರದಲ್ಲಿದ್ದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ‘ಈ ಐವತ್ತು ವರ್ಷಗಳಲ್ಲಿ ಏನು ಸಾಧನೆ ಆಗಿದೆ, ಈ ಹಿನ್ನೆಲೆಯಲ್ಲಿ ಸಂವಿಧಾನದಿಂದ ಆಗಿರುವ ಅಭಿವೃದ್ಧಿ ಮತ್ತು ವೈಫಲ್ಯದ ಬಗೆಗೆ ಒಂದು ಹಿನ್ನೋಟ ನೋಡೋಣ‘ ಎನ್ನುವ ಉದ್ದೇಶವನ್ನಿಟ್ಟುಕೊಂಡು ಬಿಜೆಪಿ ಸರ್ಕಾರ ಸಂವಿಧಾನ ಪರಾಮರ್ಶೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರದ ಉದ್ದೇಶವೇ ಬೇರೆ, ಅದರ ಹಿಡನ್ ಅಜೆಂಡಾವೇ ಬೇರೆ ಎನ್ನುವ ಸಂಶಯ ಅಂದಿನ ಪ್ರತಿಪಕ್ಷಗಳನ್ನು ವಿಶೇಷವಾಗಿ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಸಂಸತ್ ಸದಸ್ಯರನ್ನು ಕಾಡಿತು.
‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಈ ಸಂವಿಧಾನದಲ್ಲಿ ಸನಾತನ ಧರ್ಮದ ವಾಸನೆ ಇಲ್ಲ; ವಿದೇಶಿ ಪರಿಣತ ಅಂಶಗಳೇ ಹೆಚ್ಚು’ ಎಂದು ಸಂವಿಧಾನ ಜಾರಿಯಾದಾಗಿನಿಂದ ಬಿಜೆಪಿಯ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಇತರೆ ಪರಿ ವಾರ ಸಂಘಟನೆಗಳು ಸಮಯ ಬಂದಾಗಲೆಲ್ಲ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಬಂದದ್ದು ಬಹಿರಂಗ ಸತ್ಯ. ಈ ಅತೃಪ್ತಿ ಹೊರಹಾಕಲು ಸಂವಿಧಾನವನ್ನು ಟೀಕಿಸುವುದಕ್ಕೆ ಮಾಡಿಕೊಂಡ ಅಸ್ತ್ರ ಮೀಸಲಾತಿ. ಸಂಘ ಪರಿವಾರ ಮೀಸಲಾತಿಗೆ ವಿರೋಧಿ ಎನ್ನುವುದು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯನ್ನು ಅಂದಿನ ವಿ. ಪಿ. ಸಿಂಗ್ ಸರ್ಕಾರ ಜಾರಿಗೆ ತಂದಾಗ ನಡೆದ ಮೀಸಲಾತಿ ವಿರೋಽ ಹೋರಾಟಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎನ್ನುವುದು ಹಲವರ ವಾದ.
೧೯೯೮ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸಂವಿಧಾನ ಪರಾಮರ್ಶೆಯನ್ನು ಕೈಗೆತ್ತಿಕೊಂಡಿತು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನೂ ರಚಿಸಿತು. ಸಮಿತಿ ತನ್ನ ವರದಿಯನ್ನೂ ಸಲ್ಲಿಸಿತು. ಆದರೆ ಈ ವರದಿಯನ್ನು ಸರ್ಕಾರ ಅಂಗೀಕರಿಸುವ ಮತ್ತು ಸಂಸತ್ತಿನಲ್ಲಿ ಚರ್ಚೆಗೂ ಬಾರದಂತೆ ವಿರೋಧ ಪಕ್ಷಗಳು ಪ್ರಬಲವಾಗಿ ವಿರೋಧ ಮಾಡಿದ್ದರಿಂದ ಸಂವಿಧಾನ ಪರಾಮರ್ಶೆಯಲ್ಲಿ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಎಡವಿತು. ಉದ್ದೇಶವೇನೋ ಸರಿ. ಆದರೆ ಸಂವಿಧಾನ ಪರಾಮರ್ಶೆಯ ನಡೆಯಲ್ಲಿ ದೋಷವಿರುವುದು ಎದ್ದು ಕಂಡುಬಂದದ್ದರಿಂದ ಅದರ ಉದ್ದೇಶ ಸಾರ್ಥಕತೆ ಕಾಣಲಿಲ್ಲ.
ಸಂವಿಧಾನ ಜಾರಿಗೆ ಬಂದು ಆರುವತ್ತು ವರ್ಷಗಳಾದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿತು. ಅಷ್ಟನ್ನು ಬಿಟ್ಟರೆ ಸಂವಿಧಾನದ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ ಸಂವಿಧಾನವನ್ನು ಅಂಗೀಕರಿಸಿದ ೧೯೪೯ರ ನವೆಂಬರ್ ೨೬ನ್ನು ‘ಕಾನೂನು ದಿನ‘ ಎಂದು ಆಚರಿಸುತ್ತಿದ್ದದ್ದನ್ನು ‘ಸಂವಿಧಾನ ದಿನ‘ವನ್ನಾಗಿ ಆಚರಿಸುವ ಪದ್ಧತಿಯನ್ನು ಮೋದಿ ಸರ್ಕಾರ ೨೦೧೫ರಲ್ಲಿ ಜಾರಿಗೆ ತಂದಿತು. ಅಲ್ಲಿಂದೀಚೆಗೆ ಸಂವಿಧಾನ ಚರ್ಚೆಗೆ ಮತ್ತಷ್ಟು ಅವಕಾಶಗಳು, ವೇದಿಕೆಗಳು ಸೃಷ್ಟಿಯಾದವು.
ಈಗಿನ ಸಂವಿಧಾನವನ್ನು ಬದಲಾಯಿಸಿ ಸನಾತನ ಧರ್ಮದ ಸಿದ್ಧಾಂತ ಮತ್ತು ಆಚರಣೆಗೆ ತಕ್ಕಂತೆ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಹೊಸದೊಂದು ಸಂವಿಧಾನ ರಚಿಸಬೇಕೆನ್ನುವುದು ಬಿಜೆಪಿ ಮತ್ತು ಸಂಘಪರಿವಾರದ ಬಹುದಿನಗಳ ಕನಸು. ಅದು ಬಿಜೆಪಿಯ ಹಿಡನ್ ಅಜೆಂಡಾ ಎನ್ನುವ ಮಾತು ಮತ್ತು ಹತ್ತಾರು ಅನುಮಾನಗಳು ಜನರನ್ನು ಕಾಡುತ್ತಲೇ ಬರುತ್ತಿರುವುದು ಸುಳ್ಳಲ್ಲ. ಇದಕ್ಕೆ ಪೂರಕ ಎನ್ನುವಂತೆ ಬಿಜೆಪಿಯ ಕೆಲವು ಸಂಸದರೂ ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು‘ ಎನ್ನುವ ಹೇಳಿಕೆಗಳನ್ನು ಆಗಾಗ್ಗೆ ನೀಡುತ್ತಾ ಬಂದದ್ದು, ಈ ಹೇಳಿಕೆಗೆ ಬಿಜೆಪಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಹೋದದ್ದು ಬಿಜೆಪಿ ಸಂವಿಧಾನ ವಿರೋಧಿ ಎನ್ನುವ ಹಲವರ ಆತಂಕವನ್ನು ಹೆಚ್ಚಿಸಿರುವುದು ಸಹಜ.
ಈಗ ಸಂವಿಧಾನ ಜಾರಿಗೆ ಬಂದು ಎಪ್ಪತ್ತೈದು ವರ್ಷಗಳು. ಈ ಆಚರಣೆಯ ದಿನವೂ ಬಂದಿರುವುದು ಬಿಜೆಪಿ ಆಡಳಿತಾವಽಯಲ್ಲೇ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವಾಗ ಮೊದಲು ನಮಿಸಿದ್ದು ಸಂವಿಧಾನ ಗ್ರಂಥಕ್ಕೆ. ಸಂವಿಧಾನ ಜಾರಿಗೆ ಬಂದು ಎಪ್ಪತ್ತೈದು ವರ್ಷಗಳ ನೆನಪಿಗೆ ಸಂಸತ್ ಡಿಸೆಂಬರ್ ೧೬ ಮತ್ತು ೧೭ರಂದು ಸಂವಿಧಾನದ ಚರ್ಚೆಯ ಕಲಾಪವನ್ನು ಕೈಗೆತ್ತಿಕೊಂಡಿದ್ದು ಶ್ಲಾಘನೀಯ. ಆದರೆ ಈ ಎರಡು ದಿನಗಳ ಚರ್ಚೆಯು ಫಲಪ್ರದವಾಯಿತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ನಮ್ಮ ಸಂವಿಧಾನದ ಮುಖ್ಯ ಆಶಯ ಮತ್ತು ಅದರ ಪೀಠಿಕೆಯಂತೆ ‘೧. ನ್ಯಾಯ (ಜಸ್ಟೀಸ್)- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮತ್ತು ಸ್ವತಂತ್ರ ಅಭಿಪ್ರಾಯ ಸ್ವಾತಂತ್ರ್ಯ. ೨. ಸಮಾನತೆ (ಈಕ್ವಾಲಿಟಿ)- ಎಲ್ಲರಿಗೂ ಸಮಾನ ಅವಕಾಶ ಒದಗಿಸುವುದು. ೩. ಭ್ರಾತೃತ್ವ (ಫೆಟರ್ನಿಟಿ) ವ್ಯಕ್ತಿಯ ಘನತೆಯನ್ನು ಮತ್ತು ರಾಷ್ಟ್ರದ ಐಕ್ಯತೆ ಮತ್ತು ಘನತೆಯನ್ನು ಎತ್ತಿ ಹಿಡಿ ಯುವುದು. ಇದು ಸಂವಿಧಾನದ ಮೂಲಮಂತ್ರ.
ನಂತರ ೧೯೭೭ರಲ್ಲಿ ಅಂದಿನ ಇಂದಿರಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ತಂದ ೪೨ನೇ ತಿದ್ದುಪಡಿಯಲ್ಲಿ ಜಾತ್ಯತೀತ ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಸಾರ್ವಭೌಮತ್ವ ರಾಷ್ಟ್ರ ಎನ್ನುವ ಅಂಶವನ್ನು ಸಂವಿಧಾನ ಪೀಠಿಕೆಯಲ್ಲಿ ಸೇರಿಸಲಾಯಿತು ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಈ ಎಪ್ಪತ್ತೈದು ವರ್ಷಗಳ ಆಡಳಿತದಲ್ಲಿ ಸಂವಿಧಾನ ಪೀಠಿಕೆಯ ಜಾರಿಯಂತೆ ನಡೆದುಕೊಂಡು ಬಂದಿದ್ದೇವೆಯೇ? ಇಲ್ಲವಾದರೆ ಏಕೆ ಆಗಿಲ್ಲ? ನಾವು ಎಷ್ಟರ ಮಟ್ಟಿಗೆ ಸಂವಿಧಾನಕ್ಕೆ ಬದ್ಧರಾಗಿ ಆಡಳಿತ ನಡೆಸಿದ್ದೇವೆ? ಇದುವರೆಗೆ ಎಷ್ಟು ಸಾಽಸಿದ್ದೇವೆ? ಸಾಧನೆಯಲ್ಲಿ ಆಗಿರುವ ಅಡೆತಡೆಗಳೇನು? ಸಂವಿಧಾನದ ಸಫಲತೆ ಮತ್ತು ವೈಫಲ್ಯ ಏನು? ಎನ್ನುವ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಂಸತ್‌ನ ಉಭಯ ಸದನಗಳಲ್ಲೂ ಚರ್ಚೆ ಮಾಡಬೇಕಿತ್ತು. ಆದರೆ ಆ ಎರಡೂ ದಿನಗಳಲ್ಲಿ ಆದದ್ದೇನು? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ವಾಸ್ತವವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಇತರೆ ಪ್ರತಿಪಕ್ಷಗಳು ಸಂವಿಧಾನದ ಬಗೆಗೆ ಕಿತ್ತಾಟ, ಜಟಾಪಟಿ ನಡೆಸುತ್ತಾ ಸಂವಿಧಾನ ಆಚರಣೆಗಿಂತ (ಜಾರಿ) ಹುಸಿ ಆರಾಧನೆಯಲ್ಲಿ ತೊಡಗಿರುವುದು ದುರಂತ.
ಇದಕ್ಕೆ ಮುಖ್ಯ ಕಾರಣ ನಮ್ಮ ಸಂಸತ್ತಿಗೆ ಆಯ್ಕೆಯಾಗುತ್ತಿರುವವರು ಎಂತಹವರು ಎನ್ನುವ ಪ್ರಶ್ನೆ. ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸದಸ್ಯರ ನಡುವೆ ನಡೆಯುವ ಪರಸ್ಪರ ಕೂಗಾಟ, ಆರೋಪ, ಪ್ರತ್ಯಾರೋಪ ಮತ್ತು ಗದ್ದಲದಲ್ಲೇ ಕಲಾಪ ಮುಳುಗಿ ಹೋಗುತ್ತಿರುವುದು. ಇದು ಸದನದ ಒಳಗೆ ನಡೆದರೆ, ಸಂಸತ್ತಿನ ಹೊರಗೂ ನಿತ್ಯವೂ ಒಂದಲ್ಲ ಒಂದು ಪ್ರತಿಭಟನೆ. ಚಳಿಗಾಲದ ಅಽವೇಶನ ಮುಗಿಯುವ ಮುನ್ನಾದಿನ ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆಯಲ್ಲಿ ನೂಕಾಟದಿಂದ ಆಳುವ ಪಕ್ಷದ ಸದಸ್ಯರೊಬ್ಬರು ಬಿದ್ದು ತಲೆಗೆ ಗಾಯವಾದ ಘಟನೆಯೂ ನಡೆದು ಹೋಯಿತು. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ತಾವು ಬದ್ಧರಾಗಿದ್ದು, ಅದನ್ನು ಅಕ್ಷರಶಃ ಜಾರಿಗೆ ತರುತ್ತಿದ್ದೇನೆ ಎಂದು ಗೌರವ ವ್ಯಕ್ತಪಡಿಸುವುದು, ಮತ್ತೊಂದು ಕಡೆ ತಮ್ಮನ್ನು ಬಿಟ್ಟರೆ ಸರ್ಕಾರದಲ್ಲಿ ಬಲಿಷ್ಠ ಸಚಿವರಾಗಿರುವ ಮೇಲ್ನೋಟಕ್ಕೆ ಆಡಳಿತದ ಎಲ್ಲ ಮಜಲನ್ನೂ ನಿಭಾಯಿಸುವ ಅಮಿತ್ ಶಾ ಸಂವಿಧಾನ ಬರೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಉಡಾಫೆಯ ಮಾತುಗಳನ್ನಾಡುವುದು ಸರ್ಕಾರದ ಇಬ್ಬಗೆಯ ನೀತಿ.
ಈಗಿನ ಅವಾಂತರಗಳಿಗೆ ಕಾರಣ. ಹೀಗಾಗಿಯೇ ಎರಡು ದಿನಗಳ ಸಂವಿಧಾನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ ತಮ್ಮ ಭಾಷಣದಲ್ಲಿ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಇಂದಿನ ರಾಹುಲ್ ಗಾಂಧಿವರೆಗಿನ ಕುಟುಂಬದ ರಾಜಕಾರಣವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದು. ಕಾಂಗ್ರೆಸ್ ತನ್ನ ಅರವತ್ತು ವರ್ಷಗಳ ಆಡಳಿತದಲ್ಲಿ ಸಂವಿಧಾನಕ್ಕೆ ೭೭ ಬಾರಿ ತಿದ್ದುಪಡಿ ಮಾಡಿದ್ದರೆ ಬಿಜೆಪಿ ಸರ್ಕಾರ ಇದುವರೆಗೆ ೨೨ ಬಾರಿ ಮಾತ್ರ ತಿದ್ದುಪಡಿ ಮಾಡಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಿದರು. ಸಂವಿಧಾನಕ್ಕೆ ತಿದ್ದುಪಡಿ ಮಾಡು ವುದಕ್ಕೆ ಮುಕ್ತ ಅವಕಾಶವಿದೆ. ಕಾಲದ ಅವಶ್ಯಕತೆ ಮತ್ತು ಬದಲಾವಣೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಯಾರದೂ ವಿರೋಧವಿಲ್ಲ. ಆದರೆ ಅದನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವುದಕ್ಕಷ್ಟೇ ವಿರೋಧ ವ್ಯಕ್ತವಾಗುತ್ತಿರುವುದು. ಇತ್ತ ವಿರೋಧ ಪಕ್ಷಗಳು ಸದನದಲ್ಲಿ ಬಿಜೆಪಿ ಸರ್ಕಾರಕ್ಕೆ ಸಂವಿಧಾನದ ಬಗೆಗೆ ಎಳ್ಳಷ್ಟೂ ಗೌರವವಿಲ್ಲ. ಸಂವಿಧಾನ ಬದಲಿಸುವುದೇ ಸರ್ಕಾರದ ಮುಖ್ಯಗುರಿ ಎಂದು ಟೀಕಿಸುವುದರಲ್ಲೇ ಎರಡು ದಿನಗಳ ಚರ್ಚೆ ಮುಗಿದು ಹೋದದ್ದು ವಿಪರ್ಯಾಸ.
ನಿಜವಾಗಿ ಸಂವಿಧಾನದ ಬಗೆಗೆ ಕಾಳಜಿ ಇದ್ದಿದ್ದರೆ ಉಭಯ ಪಕ್ಷಗಳು ನಮ್ಮ ಸಂಸತ್ತು ಮತ್ತು ರಾಜ್ಯ ವಿಧಾನಮಂಡಲ ಮುಂತಾದ ಪ್ರಜಾಸತ್ತಾತ್ಮಕ ಚುನಾಯಿತ ಸಭೆಗಳಲ್ಲಿ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ದೊರಕಿದೆಯೇ? ಸಂವಿಧಾನದ ಆಶಯದಂತೆ ಮೀಸಲಾತಿ ಪೂರ್ಣವಾಗಿ ಜಾರಿಯಾ ಗಿದೆಯೇ? ಎಲ್ಲರಿಗೂ ಸರ್ಕಾರಿ ಮಟ್ಟದಲ್ಲಿ ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳು ದೊರೆತಿವೆಯೇ? ಬಡತನ ನಿವಾರಣೆ ಎಷ್ಟರ ಮಟ್ಟಿಗೆ ಆಗಿದೆ. ಜನರಿಗೆ ಉದ್ಯೋಗ, ಆಹಾರ, ವಸತಿ ಇತ್ಯಾದಿ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ಎಲ್ಲಿ ಎಡವಿದ್ದೇವೆ? ಎಷ್ಟರ ಮಟ್ಟಿಗೆ ಸರ್ಕಾರದ ಕಾರ್ಯಕ್ರಮ ಗಳು ಜನಸಾಮಾನ್ಯರಿಗೆ ಮುಟ್ಟಿವೆ? ಕೃಷಿ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಈ ಎಪ್ಪತ್ತೈದು ವರ್ಷಗಳಲ್ಲಿ ಆಗಿರುವ ಸಾಧನೆ ಎಷ್ಟು? ಇನ್ನೂ ಏನು ಮಾಡಬೇಕಿದೆ? ಆಡಳಿತವನ್ನು ದುರ್ಬಲಗೊಳಿಸುತ್ತಿರುವ ವ್ಯಾಪಕ ವಾದ ಭ್ರಷ್ಟಾಚಾರ ನಿರ್ಮೂಲನೆ ಏಕೆ ಆಗಿಲ್ಲ? ಇತ್ಯಾದಿ ನೂರಾರು ಸಮಸ್ಯೆ ಗಳ ಬಗೆಗೆ ಚರ್ಚೆ ನಡೆಯಬೇಕಿತ್ತು. ಆದರೆ ಆರೋಪ ಪ್ರತ್ಯಾರೋಪ ದಲ್ಲಿಯೇ ಕಲಾಪ ಮುಗಿದು ಹೋದದ್ದು ದುರಂತ.
ಈ ಎಲ್ಲ ಗದ್ದಲಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಆಶಯದಂತೆ ಹತ್ತು ಅಂಶಗಳ ನಿರ್ಣಯವನ್ನು ಮಂಡಿಸಿದರು. ನರೇಂದ್ರ ಮೋದಿ ಅವರ ಮೆಚ್ಚಿನ ಘೋಷಣೆ ವಿಕಸಿತ ಭಾರತ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವುದು, ಧರ್ಮಾಧಾರಿತ ಮೀಸಲಾತಿ ಜಾರಿ ಕೂಡದು, ಭ್ರಷ್ಟಾಚಾರ ರಹಿತ ಆಡಳಿತ ಜಾರಿ, ಮಹಿಳೆಯರಿಗೆ ನೀಡುವ ಗೌರವ ಮತ್ತು ಸಮಾನತೆಯಲ್ಲಿ ಇಡೀ ವಿಶ್ವಕ್ಕೇ ಭಾರತ ಮಾದರಿಯಾಗುವುದು. ಸಂವಿಧಾನವನ್ನು ಗೌರವದಿಂದ ನೋಡಬೇಕೇ ಹೊರತು ಅದನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಬಾರದು ಇತ್ಯಾದಿ.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…