ತ್ರಿಭಾಷಾ ಸೂತ್ರದ ಆಧಾರದ ಮೇಲೆ ರೂಪುಗೊಂಡಿರುವ ೨೦೨೦ರ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಜನಸಂಖ್ಯೆ ಆಧಾರದ ಮೇಲೆ ಹತ್ತು ವರ್ಷಗಳಿಗೊಮ್ಮೆ ಕೈಗೊಳ್ಳುವ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ವಿಷಯದಲ್ಲಿ ತಮಿಳುನಾಡು ಅಕ್ಷರಶಃ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ.
ತ್ರಿಭಾಷಾ ಸೂತ್ರದ ಮೂಲಕ ದಕ್ಷಿಣ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಹುನ್ನಾರ ನಡೆದಿದೆ. ೧೯೭೧ರ ನಂತರ ಕೇಂದ್ರ ಸರ್ಕಾರದ ಜನಸಂಖ್ಯಾ ನೀತಿಯಂತೆ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನಸಂಖ್ಯೆ ನಿಯಂತ್ರಣ ಮಾಡಿಕೊಂಡು ಬಂದ ತಮಿಳುನಾಡಿಗೆ ಲೋಕಸಭೆಯಲ್ಲಿ ಈಗಿರುವ ಪ್ರಾತಿನಿಧ್ಯದ ಸಂಖ್ಯಾ ಪ್ರಮಾಣವು ಇಳಿಕೆಯಾಗಲಿದೆ ಎಂದು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ತೀವ್ರ ಆತಂಕಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ೫ರಂದು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸರ್ವಪಕ್ಷಗಳ ಸಭೆಯನ್ನು ಕರೆದಿರುವುದು ತನ್ನ ನ್ಯಾಯಬದ್ಧ ಹಕ್ಕೊತ್ತಾಯಕ್ಕಾಗಿ ಬೀದಿಗಿಳಿಯಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ.
ಮುಖ್ಯಮಂತ್ರಿ ಸ್ಟಾಲಿನ್ ಅವರ ಈ ಆತಂಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಮಾತ್ರವಲ್ಲ ದಕ್ಷಿಣದ ಯಾವುದೇ ರಾಜ್ಯಗಳ ಈಗಿರುವ ಪ್ರಾತಿನಿಧ್ಯ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗಲು ಬಿಡುವುದಿಲ್ಲ. ಜನಸಂಖ್ಯೆಯ ಆಧಾರವನ್ನಾಧರಿಸಿಯೇ ಲೋಕಸಭೆಯಲ್ಲಿನ ಪ್ರಾತಿನಿಧ್ಯ ನಿರ್ಧಾರವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈಗಿರುವ ಜನಸಂಖ್ಯಾ ಆಧಾರದ ಮೇಲೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗದಿರಬಹುದು. ಆದರೆ ಜನಸಂಖ್ಯೆಯ ನಿಯಂತ್ರಣ ಮಾಡದೆ, ಇನ್ನೂ ಅಭಿವೃದ್ಧಿ ಪಥದತ್ತ ಮುನ್ನಡೆಯದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳ ಪ್ರಾತಿನಿಧ್ಯ ಸಂಖ್ಯೆ ಹೆಚ್ಚಳವಾಗುವುದು ನಿಚ್ಚಳ. ಹೀಗಾಗುವುದರಿಂದ ಆರ್ಥಿಕ ಪ್ರಗತಿ ಹೊಂದದ ಲಂಗು ಲಗಾಮಿಲ್ಲದೆ ಯರ್ರಾಬಿರ್ರಿ ಜನಸಂಖ್ಯೆಯನ್ನು ಹೊಂದುತ್ತಿರುವ ‘ಬಿಮಾರು‘ (ರೋಗ ಗ್ರಸ್ತ) ರಾಜ್ಯಗಳ ಪ್ರಾತಿನಿಧ್ಯ ಲೋಕಸಭೆಯಲ್ಲಿ ಹೆಚ್ಚಳವಾಗಲಿದೆ. ಇದರ ಪರಿಣಾಮ ಜನಸಂಖ್ಯಾ ನೀತಿ ಮತ್ತು ಆರ್ಥಿಕ ಶಿಸ್ತು ಅನುಸರಿಸಿಕೊಂಡು ಪ್ರಗತಿಪಥದತ್ತ ಹೆಜ್ಜೆ ಹಾಕುತ್ತಿರುವ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯದ ಸಂಖ್ಯೆ ಕ್ಷೀಣಿಸಿ ಲೋಕಸಭೆಯಲ್ಲಿ ತಮ್ಮ ದನಿ ಕುಗ್ಗಲಿದೆ ಎನ್ನುವ ಆತಂಕಕ್ಕೆ ಕೇಂದ್ರ ಸರ್ಕಾರದಿಂದ ವಿಶ್ವಾಸವಿಡಬಹುದಾದ ಉತ್ತರವಿಲ್ಲ.
ಈ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಟಾಲಿನ್ ಅವರ ಆತಂಕಕ್ಕೆ ದನಿಗೂಡಿಸಿದ್ದು, ಅಮಿತ್ ಶಾ ಅವರ ಮಾತನ್ನು ನಂಬುವ ಹಾಗಿಲ್ಲ ಎಂದು ದಕ್ಷಿಣ ರಾಜ್ಯಗಳಿಗೆ ಆಗುವ ಅನ್ಯಾಯದ ಬಗೆಗೆ ತಮ್ಮದೂ ಒಂದು ವಿರೋಧವಿರಲಿ ಎಂದು ಹೇಳುವ ಮೂಲಕ ಸಮಸ್ಯೆಯ ಗಂಭೀರತೆಯನ್ನು ಹೆಚ್ಚಿಸಿದ್ದಾರೆ. ಉತ್ತರ ರಾಜ್ಯಗಳ ಜನಸಂಖ್ಯೆ ಹೆಚ್ಚಳದಿಂದ ಆಗಬಹುದಾದ ಪರಿಣಾಮವನ್ನು ಅರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ಮಹಿಳೆಯರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿ ಎಂದು ಕರೆ ನೀಡಿರುವುದನ್ನು ಗಮನಿಸಬೇಕಿದೆ.
ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಕಾರ್ಯವು ೨೦೧೯ರ ಮಾರಣಾಂತಿಕ ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದಾಗಿ ನಡೆಯಲಿಲ್ಲ. ಕೋವಿಡ್ ಸಮಸ್ಯೆ ಮುಗಿದು ಮೂರು ವರ್ಷಗಳಾದರೂ ಕೇಂದ್ರ ಸರ್ಕಾರವು ಜನಗಣತಿಯ ಕಡೆ ಗಮನ ನೀಡಲಿಲ್ಲ. ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಸಾಲು ಸಾಲಾಗಿ ಬಂದ ಕಾರಣವನ್ನು ನೆಪ ಮಾಡಿಕೊಂಡು ಜನಗಣತಿ ಕಾರ್ಯವನ್ನು ಕೇಂದ್ರ ಸರ್ಕಾರವು ಮುಂದೂಡುತ್ತಲೇ ಬಂದಿದೆ. ಈ ವಿಳಂಬಕ್ಕೆ ಕೋವಿಡ್ ಕಾರಣವಾದರೂ, ಜನಗಣತಿ ಕಾರ್ಯವನ್ನು ಮತ್ತೆ ಎಂದು, ಯಾವಾಗ ಮಾಡಲಾಗುವುದು ಎಂಬ ಬಗ್ಗೆ ಕೇಂದ್ರ ಸರ್ಕಾರ ಬಾಯಿಬಿಡುತ್ತಿಲ್ಲ. ಆದರೆ ೨೦೨೬ಕ್ಕೆ ಜನಗಣತಿ ನಡೆಸುವ ಸ್ಪಷ್ಟ ಸೂಚನೆ ಇದ್ದು, ೨೦೨೯ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಹೊಸದಾದ ಕ್ಷೇತ್ರಗಳ ಮಹಿಳಾ ಮೀಸಲು ಕ್ಷೇತ್ರಗಳನ್ನು ಗುರುತಿಸುವ ಜೊತೆಗೆ ಪುನರ್ ವಿಂಗಡಣೆ ಆಗುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತಿದೆ.
ದೇಶದಲ್ಲಿ ಈಗಾಗಲೇ ಮೂರು ಬಾರಿ ನಡೆಸಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್) ಪ್ರಕಾರ ಫಲವಂತಿಕೆಯ ಪ್ರಮಾಣ ದಕ್ಷಿಣ ರಾಜ್ಯಗಳಲ್ಲಿ ಕುಗ್ಗಿದ್ದು, ಉತ್ತರದ ರಾಜ್ಯಗಳಲ್ಲಿ ಹೆಚ್ಚುತ್ತಿದೆ. ಈ ಸಮೀಕ್ಷೆಯ ಪ್ರಕಾರ ಜನಗಣತಿಯಲ್ಲಿ ಉತ್ತರದ ರಾಜ್ಯಗಳ ಜನಸಂಖ್ಯೆ ಪ್ರಮಾಣ ಹೆಚ್ಚಲಿದೆ. ಇದರಿಂದಾಗಿ ಸರಾಸರಿ ೧೦. ೧೧ ಲಕ್ಷ ಜನಸಂಖ್ಯೆಗೆ ಒಂದು ಲೋಕಸಭೆ ಕ್ಷೇತ್ರದ ಪ್ರಮಾಣವು ಉತ್ತರ ರಾಜ್ಯಗಳಲ್ಲಿ ಗಣನೀಯ ವಾಗಿ ಏರಿಕೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.
ಉದಾಹರಣೆಗೆ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಈಗಿನ ಪ್ರಾತಿನಿಧ್ಯ ೮೦ ಇದ್ದು, ೨೦೨೬ರ ಗಣತಿ ಪ್ರಕಾರ ೯೧ ಸ್ಥಾನಗಳಿಗೆ ಹೆಚ್ಚಲಿದೆ. ಅಂದರೆ ಹನ್ನೊಂದು ಸ್ಥಾನಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಹಾಗೆಯೇ ಬಿಹಾರವು ಈಗ ೪೦ ಕ್ಷೇತ್ರಗಳನ್ನು ಹೊಂದಿದ್ದು, ಅದು ೫೦ ಕ್ಷೇತ್ರಗಳಿಗೆ ಹೆಚ್ಚುವ ಮೂಲಕ ಹತ್ತು ಸ್ಥಾನಗಳು ಅಽಕವಾಗಿ ದೊರೆಯಲಿವೆ. ರಾಜಸ್ಥಾನದ ಈಗಿನ ೨೫ ಕ್ಷೇತ್ರಗಳ ಸಂಖ್ಯೆಯು ೩೧ಕ್ಕೆ ಹೆಚ್ಚಲಿದ್ದು, ಆರು ಕ್ಷೇತ್ರಗಳು ಹೆಚ್ಚುವರಿಯಾಗಿ ದೊರೆಯಲಿವೆ. ಮಧ್ಯ ಪ್ರದೇಶದ ಈಗಿನ ಸಂಖ್ಯೆಯು ೨೯ ಇದ್ದು, ಅದು ೩೩ಕ್ಕೆ ಹೆಚ್ಚಲಿದೆ. ಅಂದರೆ ನಾಲ್ಕು ಕ್ಷೇತ್ರಗಳು ಹೆಚ್ಚಾಗಲಿವೆ. ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ರಾಜ್ಯಗಳಾದ ಕರ್ನಾಟಕದಲ್ಲಿನ ೨೮ ಕ್ಷೇತ್ರಗಳ ಸಂಖ್ಯೆಯು ೨೬ಕ್ಕೆ ಇಳಿಯಲಿವೆ. ತಮಿಳುನಾಡಿನ ೩೯ ಕ್ಷೇತ್ರಗಳು ೩೧ಕ್ಕೆ ಇಳಿಯಲಿವೆ. ಆಂಧ್ರ ಪ್ರದೇಶದ ಕ್ಷೇತ್ರಗಳು ೨೫ರಿಂದ ೨೦ಕ್ಕೆ ಕುಸಿಯಲಿವೆ. ತೆಲಂಗಾಣದ ೧೭ ಕ್ಷೇತ್ರಗಳು ೧೪ಕ್ಕೆ ಕುಸಿಯಲಿವೆ. ಜನಸಂಖ್ಯೆ ನಿಯಂತ್ರಣದಲ್ಲಿರುವ ಈಶಾನ್ಯ ರಾಜ್ಯಗಳದ್ದೂ ಇದೇ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ.
ಮುಂದಿನ ಜನಗಣತಿಯಲ್ಲಿ ಆಗುವ ಜನಸಂಖ್ಯೆ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡೇ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಹೊಸದಾಗಿ ನಿರ್ಮಿಸಿರುವ ಸಂಸತ್ ಭವನದಲ್ಲಿನ ಲೋಕಸಭೆ ಸೀಟುಗಳ ಸಂಖ್ಯೆಯನ್ನು ೮೮೮ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ದೂರಾಲೋಚನೆಯ ಉದ್ದೇಶವನ್ನು ಮೆಚ್ಚಲೇಬೇಕು.
ಆದರೆ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಜನಸಂಖ್ಯೆಯ ಏರುಪೇರಿನಿಂದಾಗುವ ಪರಿಣಾಮ ಮತ್ತು ಉತ್ತರ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣ ಮಾಡದೆ ಅಭಿವೃದ್ಧಿ ಕಾಣದ ಬಗೆಗೆ ಕೇಂದ್ರ ಸರ್ಕಾರ ಗಮನ ನೀಡಿದಂತೆ ಕಾಣುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ೨೦೧೪ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಹಿಂದಿನ ಸರ್ಕಾರಗಳು ಮತ್ತು ಹಿಂದೆ ಆಡಳಿತ ನಡೆಸಿದ ಪ್ರಧಾನ ಮಂತ್ರಿಗಳು ರಾಜ್ಯಗಳ ನಡುವೆ ಉಂಟಾಗುವ ಸಮಸ್ಯೆ, ವಿವಾದಗಳನ್ನು ಸಂಬಂಽಸಿದ ಮತ್ತು ಹಲವು ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗಳನ್ನು ಕರೆದು ಪರಸ್ಪರ ಮುಖಾಮುಖಿ ಚರ್ಚಿಸಿ ಸಾಂವಿಧಾನಿಕ ಪರಿಹಾರ ಕಂಡು ಕೊಳ್ಳುತ್ತಿದ್ದರು. ತಾನು ಮಾಡಿದ್ದೇ ಸರಿ ಎನ್ನುವ ಹಠ ಹಿಂದಿನ ಪ್ರಧಾನಿಗಳಲ್ಲಿ ಕಾಣುತ್ತಿರಲಿಲ್ಲ.
ಪ್ರತಿ ವರ್ಷವು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆ, ರಾಷ್ಟ್ರೀಯ ಭಾವೈಕ್ಯತಾ ಸಭೆಗಳು ನಿಯಮಬದ್ಧವಾಗಿ ತಪ್ಪದೆ ನಡೆಯುತ್ತಿದ್ದವು. ಇಂತಹ ಸಭೆಗಳಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸುತ್ತಿದ್ದರು. ಆದರೆ ಪ್ರಧಾನಿ ಮೋದಿ ಅವರು ಇಂತಹ ಪ್ರಜಾಸತ್ತಾತ್ಮಕ ಕ್ರಮಗಳನ್ನು ಕಡೆಗಣಿಸಿರುವುದು ವಿಪರ್ಯಾಸ. ತಮಿಳುನಾಡು ಎತ್ತಿರುವ ತ್ರಿಭಾಷಾ ಸೂತ್ರ ವಿವಾದ, ಜನಗಣತಿ ವಿಳಂಬ, ಅಭಿವೃದ್ಧಿ ಪಥದಲ್ಲಿರುವ ಕರ್ನಾಟಕ ಮುಂತಾದ ದಕ್ಷಿಣ ರಾಜ್ಯಗಳಿಗೆ ಜಿಎಸ್‌ಟಿಯಿಂದ ನ್ಯಾಯವಾಗಿ ಬರಬೇಕಾದ ಅನುದಾನದ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗೆಗೆ ಕರ್ನಾಟಕ ಮತ್ತು ತಮಿಳುನಾಡು ಪದೇ ಪದೇ ಎತ್ತುತ್ತಿರುವ ಬೇಡಿಕೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣ ರಾಜ್ಯಗಳ ಈಗಿರುವ ಸ್ಥಾನಗಳ ಸಂಖ್ಯೆಯು ಕುಸಿಯಲಿದೆ ಎನ್ನುವ ಆತಂಕ ಮುಂತಾದ ವಿಷಯಗಳ ಬಗೆಗೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಸಭೆ ಕರೆದು ಇಷ್ಟು ಹೊತ್ತಿಗೆ ಪರಸ್ಪರ ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕಿತ್ತು. ಆದರೆ ಮೋದಿ ಅವರು ಇಂತಹ ರಾಷ್ಟ್ರೀಯ ಗಂಭೀರ ಸಮಸ್ಯೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಕಡೆಗಣಿಸಿ ತಮ್ಮ ಅಜೆಂಡಾ ಪ್ರಕಾರ ಆನೆ ನಡೆದದ್ದೇ ದಾರಿ ಎನ್ನುವಂತೆ ಹೋಗುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಅವರ ಇಂತಹ ನಡೆ ಹಲವು ಸಂಶಯ ಮತ್ತು ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುತ್ತಿರುವುದನ್ನು ತಳ್ಳಿಹಾಕಲಾಗದು.
ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…
ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…
ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…
ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…
ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…
ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…