‘ಹಾಲಿ’ನಂತೆ ಹಣ ಚೆಲ್ಲಿ ಗೆದ್ದವರು ‘ಉತ್ಪಾದಕರ’ ಹಿತಾಸಕ್ತಿ ಕಾಯಬಲ್ಲರೇ?

ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ದ ಆಡಳಿತ ಮಂಡಳಿಯ 9 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕುರುಡು ಕಾಂಚಾಣದ ನರ್ತನ ನಡೆದಿರುವುದು ಆಘಾತಕಾರಿ ಸಂಗತಿ. ಈ ಹಣದ ಅಬ್ಬರ  ಸೋಲು ಗೆಲುವುಗಳ ಲೆಕ್ಕಾಚಾರಗಳನ್ನೇ ತಲೆಕೆಳಗು ಮಾಡಿಬಿಟ್ಟಿದೆ.  ಸಹಕಾರಿ ಕ್ಷೇತ್ರದ ಚಾಮುಲ್‍ಗೆ ರಾಜಕೀಯ ಪಕ್ಷಗಳ ರಹಿತ ಚುನಾವಣೆ ನಡೆಯಿತು. ಆದರೂ ಕಾಂಗ್ರೆಸ್ ಬೆಂಬಲಿತ 4, ಬಿಜೆಪಿ ಬೆಂಬಲಿತ 2, ಜೆಡಿಎಸ್ ಬೆಂಬಲಿತ 1, ಪಕ್ಷೇತರರು ಇಬ್ಬರು ಸೇರಿ 9 ನಿರ್ದೇಶಕರು ಆಯ್ಕೆಯಾದರು. ಇದು ಯಾವ ಸಾಮಾನ್ಯ ಚುನಾವಣೆಗಿಂತಲೂ ಕಡಿಮೆ ಇರಲಿಲ್ಲ. ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಲಕ್ಷಾಂತರ ರೂ. ವೆಚ್ಚ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಇಲ್ಲವೇ ನಿಯೋಜಿತರು ಮತದಾರರು. ಇವರಲ್ಲಿ ಶೇ.70 ಮತದಾರರು ಅನಕ್ಷರಸ್ಥರು, ಇವರಿಗೆ ಚಾಮುಲ್ ಬಗ್ಗೆಯಾಗಲಿ ಅದರ ಉದ್ದೇಶವಾಗಲಿ ಗೊತ್ತಿಲ್ಲ. ಮತದಾನದ ಮಹತ್ವದ ಅರಿವಿಲ್ಲ. ಪಕ್ಷಗಳ ಮುಖಂಡರು, ಜಾತಿ ಅಭ್ಯರ್ಥಿಗಳು ಸೂಚಿಸಿದವರಿಗೆ ಮತ ಹಾಕಿದ್ದಾರೆ. ಇವರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ತಮ್ಮತ್ತ ಒಲಿಸಿಕೊಂಡು ಮತ ಪಡೆಯಲು ಒಡ್ಡಿದ ಆಮಿಷಗಳು ಹಲವು. ಮತದಾರರಿಗೆ ಅವರ ಸಂಬಂಧಿಕರು, ಪಕ್ಷಗಳ ಮುಖಂಡರು, ಜಾತಿ ನಾಯಕರ ಮೂಲಕ ಮನವೊಲಿಕೆ ಮಾಡಿಸಿದ್ದಾರೆ. ಈ ತಂತ್ರಗಾರಿಕೆ ಜೊತೆಗೆ ಹಣವನ್ನೂ ಹರಿಸಿದ್ದಾರೆ. ಒಬ್ಬೊಬ್ಬ ಮತದಾರನಿಗೆ 2 ಮತ ಚಲಾಯಿಸುವ ಹಕ್ಕಿತ್ತು.   ಹಣ ನೀಡದೆ ಮತ ಕೇಳಿದ ಅಭ್ಯರ್ಥಿಗಳಿಗೆ ಬಿದ್ದ ಮತಗಳ ಸಂಖ್ಯೆ 10 ಅನ್ನು ದಾಟಿಲಿಲ್ಲ.

 ಸೇವಾ ಮನೋಭಾವದ ಅನುಭವಸ್ಥರು ಚಾಮುಲ್ ಆಡಳಿತ ಮಂಡಳಿಗೆ ಆಯ್ಕೆಯಾಗಬೇಕು. ಹಾಲು ಪೂರೈಕೆದಾರರ ಹಿತ ಕಾಪಾಡಬೇಕು. ಚಾಮುಲ್ ಅನ್ನು ಒಂದು ಯಶಸ್ವಿ ಉದ್ಯಮವಾಗಿ ಉತ್ತುಂಗಕ್ಕೆ ಏರಿಸಬೇಕೆಂಬ ಕನಸನ್ನು ನನಸಾಗಿಸುವವರು ಆಯ್ಕೆಯಾಗಬೇಕೆಂಬುದು ಸಹಕಾರಿ ಧುರೀಣರು ಆಶಯವಾಗಿತ್ತು. ಆದರೆ, ಚುನಾವಣೆಯನ್ನು ಎದುರಿಸಿ ನಿರ್ದೇಶಕರಾದವರು ಮತ್ತು ಸೋತವರನ್ನು ಈ ಬಗ್ಗೆ ಮಾತಿಗೆ ಎಳೆದರೆ ಮೌನವಾಗಿ ಬಿಡುತ್ತಾರೆ. ಆ ಬಗ್ಗೆ ಮಾತನಾಡದೆ ಇರುವುದೇ ಸೂಕ್ತ ಎಂದು ಸುಮ್ಮನಾಗುತ್ತಾರೆ. ಚುನಾವಣೆಯಲ್ಲಿ ಇಷ್ಟೊಂದು ಹಣ ಖರ್ಚು ಮಾಡಿ ಗೆದ್ದವರು ಪ್ರಾಮಾಣಿಕವಾಗಿ ಆಡಳಿತ ನಡೆಸಲು ಮತ್ತು ಚಾಮುಲ್ ಅನ್ನು ಲಾಭದಾಯಕ ಸಂಸ್ಥೆಯಾಗಿ ರೂಪಿಸಲು ಸಾಧ್ಯವೇ?

ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಸಹಕಾರಿ ಧುರೀಣರು ಕಂಡ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಜೂ.29 ರಂದು ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನ ಪಡೆಯಲು ಹಣ ಹಾಗೂ ಇತರೆ ಆಮಿಷವೊಡ್ಡಲಾಗುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಚಾಮುಲ್‍ಗೆ ಪ್ರತಿನಿತ್ಯ 2.70 ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. 40 ಸಾವಿರ ಲೀ.ಹಾಲು ರೂಪದಲ್ಲಿ, 12 ಸಾವಿರ ಲೀ.ಮೊಸರಾಗಿ, 90 ಸಾವಿರ ಲೀ.ಗುಡ್‍ಲೈಫ್ ಹಾಲಾಗಿ, 60 ಸಾವಿರ ಲೀ. ಸಗಟು ರೂಪದಲ್ಲಿ ಮಾರಾಟವಾಗುತ್ತಿದೆ. ಉಳಿದದ್ದು ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಹೋಗುತ್ತಿದೆ.  ಬೇರೆ ರಾಜ್ಯಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆಯಿದೆ.

  ಜಿಲ್ಲೆಯಲ್ಲಿ ಹಾಲು ಪೂರೈಕೆದಾರರಿಗೆ ಲೀ.ಹಾಲಿಗೆ 25 ರೂ. ಬೆಲೆ ನೀಡಲಾಗುತ್ತಿದೆ. ಅದು ಎಸ್‍ಎನ್‍ಎಫ್ ಸತ್ವವಿದ್ದರೆ ಮಾತ್ರ ಈ ದರ ಸಿಗಲಿದೆ. ಇಲ್ಲದಿದ್ದರೆ 22 ರೂ. ನೀಡಲಾಗುತ್ತಿದೆ ಈ ತಾರತಮ್ಯ ಹೋಗಲಾಡಿಸಬೇಕು. ಎಸ್‍ಎನ್‍ಎಫ್ ಮಾನದಂಡವನ್ನು ತೆಗೆದು ಎಲ್ಲ ಹಾಲಿಗೂ 25 ರೂ. ದರ ನೀಡಬೇಕು ಎಂಬ ಕೂಗಿದೆ. ಉಚಿತವಾಗಿ ಪಶು ವಿಮೆ ಮಾಡಿಸಬೇಕು. ಮೃತ ಹಾಲು ಉತ್ಪಾದಕರ ಕುಟುಂಬಕ್ಕೆ ನೀಡುವ ಪರಿಹಾರ ಧನ 5 ಸಾವಿರ ರೂ. ಬದಲಿಗೆ 15 ಸಾವಿರ ನೀಡಬೇಕು. ಪ್ರೋತ್ಸಾಹಧನ ಲೀ.ಹಾಲಿಗೆ 5 ರೂ. ಅನ್ನು 10 ರೂ.ಗೆ ಏರಿಸಬೇಕು. ಹಾಲು ಪೂರೈಕೆದಾರರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿನ ಹಾಸ್ಟೆಲ್‍ಗಳಲ್ಲಿ ಸೀಟುಗಳನ್ನು ಮೀಸಲು ಇಡುವಂತಹ ವ್ಯವಸ್ಥೆ ಆಗಬೇಕು ಎಂಬ ಆಗ್ರಹವಿದೆ. ಚಾಮುಲ್‍ನಲ್ಲಿ ಆಡಳಿತ ವೆಚ್ಚ ದುಬಾರಿಯಾಗಿದ್ದು ಇಳಿಕೆ ಮಾಡಬೇಕೆಂಬ ಒತ್ತಾಯವೂ ಇದೆ.  ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳಲ್ಲಿ ಸಹಕಾರಿ ಹಾಲಿನ ಡೇರಿ ಜೊತೆಗೆ  ಖಾಸಗಿ ಡೇರಿಗಳು ತಲೆ ಎತ್ತಿವೆ. ಸಹಕಾರಿ ಹಾಲಿನ ಡೇರಿಗಳಲ್ಲಿ ಪಾರದರ್ಶಕ ಆಡಳಿತ ಇಲ್ಲದಿರುವುದು, ಸಕಾಲಕ್ಕೆ ಹಾಲು ಪೂರೈಕೆದಾರರಿಗೆ ಹಣ ನೀಡದೆ ಇರುವುದು ಈ ಕೆಲವು ಕಾರಣದಿಂದ ಹಾಲು ಸರಬರಾಜುದಾರರು ಖಾಸಗಿ   ಡೇರಿಯತ್ತ ಮುಖ ಮಾಡಿದ್ದಾರೆ.  ಹಣ ಹಾಗೂ ಇತರೆ ಆಮಿಷವೊಡ್ಡಿ ಚಾಮುಲ್ ನಿರ್ದೇಶಕರಾದವರು ಹಾಲು ಉತ್ಪಾದಕರ  ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವರ ಹಿತಾಸಕ್ತಿ ಕಾಪಾಡುವರೇ?