ಕಳೆದ ವಾರದ ಅಂಕಣದಲ್ಲಿ ಏಕಪರದೆಯ ಚಿತ್ರಮಂದಿರಗಳ ಸಮಸ್ಯೆಯ ಕುರಿತಂತೆ ಪ್ರಸ್ತಾಪಿಸಲಾಗಿತ್ತು. ಏಕಪರದೆಯ ಚಿತ್ರಮಂದಿರಗಳು ಮುಚ್ಚುವ ಕುರಿತಂತೆ ಹೇಳಲಾಗಿತ್ತು. ಇದೀಗ ಈ ಬೆಳವಣಿಗೆ ಇನ್ನಷ್ಟು ಚರ್ಚೆಯಾಗತೊಡಗಿದೆ. ಸಂಬಂಧಪಟ್ಟವರು ಕೂಡಲೇ ಈ ಕಡೆ ಗಮನಹರಿಸದೆ ಹೋದರೆ, ಉಳಿದಿರುವ ಚಿತ್ರಮಂದಿರಗಳಲ್ಲಿ ಕೆಲವು ಮುಚ್ಚಬಹುದು. ಇನ್ನು ಕೆಲವು ಇದ್ದರೂ ಕನ್ನಡ ಚಿತ್ರಗಳ ಪಾಲಿಗೆ ಇಲ್ಲದಂತಾಗಬಹುದು.
ಇದ್ದೂ ಇಲ್ಲದಂತಾಗುವುದು ಹೇಗೆ? ಕನ್ನಡದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಏರಿದ್ದರೂ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗುವವುಗಳ ಸಂಖ್ಯೆ ಕಡಿಮೆ. ಚಿತ್ರಗಳ ಪ್ರದರ್ಶನ, ಪ್ರಸಾರಕ್ಕೆ ಬೇರೆ ತಾಣಗಳು ಇರುವುದೂ ಇದಕ್ಕೆ ಇರುವ ಕಾರಣಗಳಲ್ಲಿ ಒಂದು. ಜನಪ್ರಿಯ ನಟರ ಚಿತ್ರಗಳ ಕೊರತೆ ಇನ್ನೊಂದು. ಗುಣಮಟ್ಟದ ಚಿತ್ರಗಳ ನಿರ್ಮಾಣ ಕಡಿಮೆಯಾಗಿರುವುದು ಮತ್ತೊಂದು ಕಾರಣ. ಚಿತ್ರ ನಿರ್ಮಾಣದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದೆ, ಅವರಿವರ ಮಾತುಗಳಿಗೆ ಮರುಳಾಗಿ, ಈ ಕಡೆಗೆ ಬರುವವರ ಸಂಖ್ಯೆಯೂ ಕಡಿಮೆ ಏನಲ್ಲ. ಇವೆಲ್ಲ ಸೇರಿ ಕನ್ನಡ ಚಿತ್ರೋದ್ಯಮವನ್ನು ಇಳಿಜಾರಿಗೆ ತಳ್ಳತೊಡಗಿವೆ. ಅಲ್ಲೊಂದು ಇಲ್ಲೊಂದು ದಾಖಲೆ, ಹಾಗೊಂದು, ಹೀಗೊಂದು ಗುಣಮಟ್ಟದ ಚಿತ್ರಗಳು, ಸದಭಿರುಚಿಯವು ಎನ್ನುವುದನ್ನು ಹೊರತುಪಡಿಸಿದರೆ ಉಳಿದಂತೆ ಕನ್ನಡ ಚಿತ್ರರಂಗ ಸಾಗುತ್ತಿರುವ ದಾರಿ ನಿರಾಶಾದಾಯಕ ಎನ್ನುವುದು, ಇಲ್ಲಿನ ಗಣ್ಯರ ಅಭಿಪ್ರಾಯ.
ಚಿತ್ರಮಂದಿರಗಳ ವಿಷಯಕ್ಕೆ ಬಂದರೆ, ಇಲ್ಲಿ ಏಕಪರದೆಯ ಚಿತ್ರಮಂದಿರಗಳಲ್ಲಿ ನಿರಂತರ ಪ್ರದರ್ಶನಕ್ಕೆ ಸಾಕಷ್ಟು ಚಿತ್ರಗಳಿಲ್ಲ. ಏಕ ಪರದೆಯ ಚಿತ್ರಮಂದಿರಗಳಲ್ಲಿ ಒಂದು–ಒಂದೂವರೆ ಲಕ್ಷ ರೂ. ದುಡಿಮೆಯೂ ಆಗುವುದು ಕಷ್ಟವಾಗತೊಡಗಿದೆ ಎನ್ನುತ್ತಾರೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮೀಸಲಾದ ವೀರೇಶ ಚಿತ್ರಮಂದಿರದ ಕೆ.ವಿ.ಚಂದ್ರಶೇಖರ್ ಅವರ ಮಗ, ಈಗ ವಾಣಿಜ್ಯ ಮಂಡಳಿಯ ಪ್ರದರ್ಶಕ ವಲಯದ ಗೌರವ ಕಾರ್ಯದರ್ಶಿಯೂ ಆಗಿರುವ ಕುಶಾಲ್. ಪರಿಸ್ಥಿತಿ ಹೀಗೆಯೇ ಮುಂದು ವರಿದರೆ, ರಾಜ್ಯದಲ್ಲಿನ ಹೆಚ್ಚಿನ ಏಕಪರದೆಯ ಚಿತ್ರಮಂದಿರಗಳು ಮುಚ್ಚ ಬಹುದು, ಇಲ್ಲವೇ ಪರಭಾಷೆಯ ಚಿತ್ರಗಳು, ಅವುಗಳ ಡಬ್ಬಿಂಗ್ ಅವ ತರಣಿಕೆಗಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡಬೇಕಾಗಿ ಬರಬಹುದು, ಕನ್ನಡ ಚಿತ್ರಗಳಿಗೆ ಮಾತ್ರ ಅವಕಾಶ ನೀಡುತ್ತಿರುವ ಚಿತ್ರಮಂದಿರಗಳಿಗೆ ಮುಂದೆ ಅನಿವಾರ್ಯವಾಗಬಹುದು ಎನ್ನುತ್ತಾರೆ ಅವರು.
ವರ್ಚಸ್ವೀ ಕಲಾವಿದರು ವರ್ಷಕ್ಕೆ ಎರಡು ಮೂರು ಚಿತ್ರಗಳಲ್ಲಿ ಅಭಿನಯಿಸಿದರೆ ಪರಿಸ್ಥಿತಿ ಕೊಂಚ ಬದಲಾಗಬಹುದು ಎನ್ನುವ ಅವರ ಮಾತೇನೋ ನಿಜ. ಆದರೆ ಹಿಂದಿನ ದಿನಗಳಂತೆ, ನೂರು ದಿನ, ಇಪ್ಪತ್ತೆ ದು ವಾರ ಒಂದು ಚಿತ್ರ ಪ್ರದರ್ಶನ ಈಗೆಲ್ಲಿ ಸಾಧ್ಯ? ಹಿಂದೆ ಸೆಲ್ಯುಲಾಯಿಡ್ ದಿನಗಳಲ್ಲಿ ಯಾವುದೇ ಹೊಸ ಚಿತ್ರ ಮೊದಲು ‘ಎ’ ಕೇಂದ್ರಗಳಲ್ಲಿ ತೆರೆಕಾಣು ತ್ತಿತ್ತು. ಅಂದರೆ ಬಹುತೇಕ ಜಿಲ್ಲಾ ಕೇಂದ್ರಗಳು. ನಂತರ ‘ಬಿ’, ಆ ಮೇಲೆ ‘ಸಿ’ ಕೇಂದ್ರಗಳಲ್ಲಿ ಬಿಡುಗಡೆ. ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತದೋ ಅಷ್ಟು ಪ್ರಿಂಟ್‌ಗಳನ್ನು ಹಾಕಿಸಬೇಕಾಗಿತ್ತು. ಅವುಗಳ ಸಾಗಾಣಿಕೆ ಬೇರೆ.
ಈಗ ಹಾಗಿಲ್ಲ. ಹೊಸ ಚಿತ್ರವೊಂದು ಈ ಡಿಜಿಟಲ್ ತಂತ್ರಜ್ಞಾನದ ದಿನಗಳಲ್ಲಿ ಒಮ್ಮೆಲೇ ಎಲ್ಲ ಕೇಂದ್ರಗಳಲ್ಲೂ ತೆರೆ ಕಾಣಬಹುದು. ರಾಜಧಾನಿ ಮೊದಲ್ಗೊಂಡು, ಹೋಬಳಿಯಲ್ಲಿರುವ ಚಿತ್ರಮಂದಿರದವರೆಗೆ, ಎಲ್ಲಿ ಬೇಕೆಂದರಲ್ಲಿ. ಅದಕ್ಕೆ ತಾಂತ್ರಿಕ ನೆರವು ನೀಡುವ ಯುಎಫ್‌ಒದಂತಹ ಸಂಸ್ಥೆಗಳಿವೆ. ಅಲ್ಲಿನ ಸರ್ವರ್‌ನಲ್ಲಿ ಚಿತ್ರವನ್ನು ತುಂಬಿದರಾಯಿತು. ಅವರು ದೇಶವಿದೇಶಗಳಲ್ಲಿನ ತಮ್ಮ ನಿಯಂತ್ರಣದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತಾರೆ. ವಾರದಲ್ಲಿ 28 ಪ್ರದರ್ಶನಗಳಿಗೆ ಅವರು ನಿಗದಿಪಡಿಸಿದ ಶುಲ್ಕ ಇರುತ್ತದೆ.
ಪ್ರಚಾರ, ಜಾಹೀರಾತು ವೆಚ್ಚಗಳಿರಲಿ, ಕನ್ನಡದ ಕೆಲವು ಚಿತ್ರಗಳ ಗಳಿಕೆ, ಯುಎಫ್ಒಗೆ ಕೊಡಬೇಕಾದ ಶುಲ್ಕದಷ್ಟೂ ಇರುವುದಿಲ್ಲವಂತೆ. ಹಾಗಾಗಿ ಕೆಲವು ಚಿತ್ರಗಳ ನಿರ್ಮಾಪಕರು ಅವುಗಳ ಬಿಡುಗಡೆಯ ಯೋಚನೆಯನ್ನೂ ಮಾಡುವುದಿಲ್ಲ. ಅದೇನಿದ್ದರೂ, ಡಬ್ಬಿಂಗ್ ಹಕ್ಕುಗಳ ಮಾರಾಟ, ಒಟಿಟಿ ತಾಣದಲ್ಲಿ ಪ್ರಸಾರ, ಸಹಾಯಧನ ಹೀಗೆ ತಾವು ಹಾಕಿದ ಬಂಡವಾಳವನ್ನು ಪಡೆಯುವ ಪ್ರಯತ್ನ.
ಚಿತ್ರಗಳ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನ ಈ ಮೂರೂ ವಲಯಗಳ ಸದಸ್ಯರನ್ನು ಹೊಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಹಿಂದಿನಂತೆ ಕೆಲಸ ಮಾಡುತ್ತಿದ್ದಂತಿಲ್ಲ. ಹೊಸ ಆಡಳಿತ ವರ್ಗದ ವಿರುದ್ಧ ಇದ್ದ ನ್ಯಾಯಾಲಯದ ಆದೇಶ, ಅವರ ಕೈಗಳನ್ನು ಕಟ್ಟಿಹಾಕಿದೆ ಎನ್ನುವುದು ಹೊಸ ಪದಾಧಿಕಾರಿಗಳ ಮಾತು. ಅದಾಗಲೇ ಮತ್ತೆ ಚುನಾವಣೆಗೆ ಮಂಡಳಿ ಸಿದ್ಧವಾಗಬೇಕಾಗಿದೆ. ಈ ಬಳಗ ಹೊರಹೋಗುವ ಮೊದಲು ಏನಾದರೂ ನಿರ್ಧಾರ ಸಾಧ್ಯವಾಗುವುದೋ ನೋಡಬೇಕು.
ಮೊನ್ನೆ ಹಿರಿಯ ತಾರೆ ಲೀಲಾವತಿ ಅವರನ್ನು ನೋಡಲು ಅವರ ಮನೆಗೆ ಚಿತ್ರರಂಗದ ಹಲವು ಮಂದಿ ಹೋಗಿದ್ದರು. ಹಿರಿಯ ನಿರ್ದೇಶಕರು, ನಟನಟಿಯರು, ನಿರ್ಮಾಪಕರು ಈ ಬಳಗದಲ್ಲಿದ್ದರು. ಉದ್ಯಮದವರನ್ನೆಲ್ಲ ನೋಡಬೇಕು ಎಂದು ಲೀಲಾವತಿಯವರು ಬಯಸಿದ್ದಾರೆ, ಬಿಡುವು ಮಾಡಿಕೊಂಡು ಬನ್ನಿ ಎಂದು ವಾಣಿಜ್ಯ ಮಂಡಳಿಯಿಂದ ಕರೆ ಬಂದಿತ್ತು, ಹಾಗಾಗಿ ಎಲ್ಲ ಸೇರಿದ್ದೆವು, ಎಂದು ಹೋದವರಲ್ಲಿ ಒಬ್ಬರು ಹೇಳಿದರು.
ಲೀಲಾವತಿಯವರಿಗೆ ಈಗ 86 ವಯಸ್ಸು. ವಯೋಸಹಜ ಅನಾರೋಗ್ಯ ಇದೆ. ಅವರಿಗೆ ತಮ್ಮವರನ್ನೆಲ್ಲ ಕಂಡ ಖುಷಿ ಇತ್ತು. ಚಿತ್ರರಂಗದ ಮಂದಿ ಎಂದ ಮೇಲೆ ಕೇಳಬೇಕೇ! ಎಲ್ಲರಿಗೂ ಲೀಲಾವತಿಯವರ ಜೊತೆ ಫೋಟೋ ತೆಗಿಸಿಕೊಳ್ಳುವ ಆಸೆ. ಬಹಳ ಹೊತ್ತು ಕುಳಿತುಕೊಳ್ಳುವುದು ಅವರ ಈಗಿನ ಸ್ಥಿತಿಯಲ್ಲಿ ಕಷ್ಟ, ಆದರೂ ಸುಮಾರು ನಾಲ್ಕು ಗಂಟೆಗಳ ಕಾಲ ಅವರನ್ನು ಕೂರಿಸಿಕೊಂಡು ಬಂದವರೆಲ್ಲ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಪೂರೈಸಿಕೊಂಡರಂತೆ. ವಿಶೇಷವೆಂದರೆ, ಅವರಷ್ಟೇ ವಯಸ್ಸಾದ, ಈಗಲೂ ಚಟುವಟಿಕೆಯಿಂದ ಇರುವ ತಾರೆ ಎಂ.ಎನ್.ಲಕ್ಷಿ ದೇವಿ, ನಿರ್ದೇಶಕ, ನಿರ್ಮಾಪಕ ಸಿ.ವಿ.ಶಿವಶಂಕರ್ ಅವರು ಲೀಲಾವತಿಯವರನ್ನು ನೋಡಲು ಹೋಗಿದ್ದರು. ಕಲಾವಿದರ ಸಂಘದ ಪರವಾಗಿ ದೊಡ್ಡಣ್ಣ ಅಲ್ಲಿದ್ದರು.
ಕಲಾವಿದರ ಸಂಘ ಸಕ್ರಿಯವಾಗುವುದು ಯಾವಾಗ? ಹಿರಿಯ ಕಲಾವಿದರನ್ನು ನೋಡುವುದು, ಅವರ ಯೋಗಕ್ಷೇಮ ವಿಚಾರಿಸುವುದು, ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದೇ ಮೊದಲಾದ ಕೆಲಸಗಳನ್ನು ಕಲಾವಿದರ ಸಂಘ ಮಾಡಬೇಕಲ್ಲವೇ. ಉಳಿದವರು ಮಾಡಬಾರದು ಎಂದೇನಲ್ಲ, ಆದರೆ ಕಲಾವಿದರ ಸಂಘದ ಆದ್ಯತೆ ಅದು. ಅಂಬರೀಶ್ ಅಧ್ಯಕ್ಷರಾಗಿದ್ದ ವೇಳೆ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಯಿತು. ಅದರ ಉದ್ಘಾಟನಾ ಕಾರ್ಯಕ್ರಮ ಹೊರತುಪಡಿಸಿದರೆ, ಇನ್ನೇನೂ ಅಲ್ಲಿ ಆದಂತಿಲ್ಲ.
ಅದಕ್ಕೂ ಮೊದಲು ಅಂಬರೀಶ್ ಅವರು ಅಧ್ಯಕ್ಷರಾಗಿದ್ದ ವೇಳೆ ಶ್ರೀನಾಥ್ ಗೌರವಾಧ್ಯಕ್ಷರಾಗಿದ್ದರು. ತಾರೆಯರಾದ ಸರೋಜಾದೇವಿ ಹಾಗೂ ಜಯಂತಿಯವರು ಉಪಾಧ್ಯಕ್ಷರಾಗಿಯೂ, ಸುಂದರರಾಜ್ ಕಾರ್ಯದರ್ಶಿ ಯಾಗಿಯೂ ಇದ್ದರು. ಈ ಸಮಿತಿ 2007ರ ಜನವರಿ 14ರಂದು, ಹಮ್ಮಿಕೊಂಡ ಸುವರ್ಣ ಕರ್ನಾಟಕ ರಾಜ್ಯೋತ್ಸವ ಹಾಗೂ ಹಿರಿಯ ಕಲಾವಿದರಿಗೆ, ಸಾಧಕರಿಗೆ ಅಭಿನಂದನೆ, ಸನ್ಮಾನ ಸಮಾರಂಭವೇ ಕೊನೆಯದು. ಡಾ.ಚಂದ್ರ ಶೇಖರ ಕಂಬಾರ ಮುಖ್ಯ ಅತಿಥಿಗಳಾಗಿ ಬಂದಿದ್ದ ಆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾಗಿದ್ದ ಅಂಬರೀಶ್, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ಪಡೆದ ಕಲಾವಿದರಾದ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಅಭಿನಂದನೆ, ಹಿರಿಯ ತಾರೆಯರಾದ ಎಂ.ಎನ್. ಲಕ್ಷಿ ದೇವಿ, ಎಂ.ಪಿ.ಶಂಕರ್, ಬಿ.ಜಯ, ಶಾಂತಮ್ಮ, ಬಿ.ಎಂ.ವೆಂಕಟೇಶ್, ರತ್ನಾಕರ್, ಶನಿ ಮಹದೇವಪ್ಪ ಮತ್ತು ತಾರಾ ಅವರಿಗೆ ಸನ್ಮಾನ ಇತ್ತು.
ಕಲಾವಿದರ ಸಂಘದ ಕುರಿತಂತೆ ಯಾರೂ ಉತ್ಸಾಹದಿಂದ ಮಾತನಾಡುತ್ತಿಲ್ಲ. ಸ್ವಂತ ಕಟ್ಟಡ ಹೊಂದಿದ ಮೊದಲ ಕಲಾವಿದರ ಸಂಘ ಎನ್ನುವ ಹೆಗ್ಗಳಿಕೆ ಇಲ್ಲಿನದು. ಕೇರಳದ ಕಲಾವಿದರ ಸಂಘ ಅಲ್ಲಿನ ಉದ್ಯಮದ ಜೊತೆ ಹಾಸುಹೊಕ್ಕಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಮುಂದೆ ಕೈಚಾಚದೆ, ಆಸಕ್ತ ಕಲಾವಿದರಿಗೆ ಸಂಘವೇ ಮಾಸಿಕ ಪಿಂಚಣಿ ನೀಡುತ್ತಿದೆ.
ಇನ್ನು ಇಲ್ಲಿನ ನಿರ್ದೇಶಕರ ಸಂಘ ಚುನಾವಣೆಗೆ ಸಂಬಂಧಿಸಿದ ಕಾನೂನು ತೊಡಕುಗಳನ್ನು ಬಿಡಿಸುವುದರಲ್ಲಿದೆ. ಅದು ಆಗುವವರೆಗೆ ಅಲ್ಲಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಮಂದಿ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ಕೆಲವು ಹೆಸರುಗಳನ್ನು ತೇಲಿಬಿಡಲಾಗುತ್ತದೆ ಕೂಡ. ಈಗಾಗಲೇ ಒಮ್ಮೆ ಅಧ್ಯಕ್ಷರಾಗಿದ್ದ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಅವರು ಮತ್ತೊಮ್ಮೆ ಈ ಅವಕಾಶವನ್ನು ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪನೆಯ ಉದ್ದೇಶದಿಂದ ಕೇಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಚಿತ್ರನಗರಿ ನಿರ್ಮಾಣ ದಂತಹ ಬೃಹತ್ ಯೋಜನೆ ಅಕಾಡೆಮಿಯ ಕೈಕೆಳಗೆ ಬರುವುದಿಲ್ಲ, ಅದಕ್ಕೆಂದೇ ಪ್ರತ್ಯೇಕ ನಿಗಮ ಇರಬೇಕು (ಹಿಂದೆ ಇದ್ದ ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಹಾಗೆ), ಇಲ್ಲವೇ ಇಲಾಖೆಯ ಮೂಲಕವೇ ಆಗಬೇಕು ಎನ್ನುವುದು ಬಲ್ಲವರ ಮಾತು. ಚಿತ್ರನಗರಿ ಮತ್ತು ಜನತಾ ಚಿತ್ರಮಂದಿರದ ನಿರ್ಮಾಣವೇ ಮೊದಲಾದ ಉದ್ದೇಶಕ್ಕಾಗಿ, ಹಿಂದೆ ನಮ್ಮಲ್ಲಿದ್ದ, ಈಗ ದೇಶದ ಬಹುತೇಕ ರಾಜ್ಯಗಳಲ್ಲಿ ಇರುವಂತಹ ನಿಗಮವೊಂದರ ಸ್ಥಾಪನೆ ಈ ನಿಟ್ಟಿನಲ್ಲಿ ಮುಖ್ಯ ಅನಿಸುತ್ತದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…