ಎಡಿಟೋರಿಯಲ್

ಗಿಬ್ರಾನನ ಮಕ್ಕಳು

ನಮ್ಮ ಬಾಳಬಳ್ಳಿಯ ಮೊದಲ ಮೊಗ್ಗು ಶಮಾ. ಗಂಡೊ ಹೆಣ್ಣೊ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಎರಡು ಮಕ್ಕಳು ಸಾಕೆಂದು ನಿರ್ಧರಿಸಿದ್ದರಿಂದ ಎರಡನೇ ಕೂಸು ಗಂಡಾದರೆ ಒಳಿತೆಂದು ಸಹಜವಾಗಿ ಬಯಸಿದ್ದೆವು. ಸೀಮಾ ಬಂದಳು. ಮೊದಲ ಕೂಸನ್ನು ನೋಡಲು ಆಸ್ಪತ್ರೆಗೆ ಓಡಿಹೋಗಿದ್ದೆ. ಎರಡನೆಯದನ್ನು ಕಾಣಲು ತಳುವಿದೆ. ಎರಡನೇ ಹೆಂಗೂಸನ್ನು ಹೆತ್ತ ತಾಯಿಗೆ, ಸಮಾಜದ ನಿರುತ್ಸಾಹಿ ಸ್ಪಂದನೆಗಳನ್ನು ನಿಭಾಯಿಸುವ ಸವಾಲಿರುತ್ತದೆ. ಬಾನುಗೆ ನಾನು ವಿಳಂಬಿಸಿ ಬಂದಿದ್ದು ಸಂಕಟ ಹೆಚ್ಚಿಸಿರಬೇಕು. ಈಗ ನೆನೆದರೆ ನಾಚಿಕೆಯಾಗುತ್ತದೆ. ಹೋದವನೆ ಆಕೆಯ ಮಗ್ಗುಲಲ್ಲಿ ಮಲಗಿದ್ದ ಶಿಶುವನ್ನು ಕಂಡೆ. ಅದು ನನ್ನತ್ತ ನೋಡಿತು. ಅದರ ವಿಶಾಲ ಕಂಗಳನ್ನು ನೋಡುತ್ತಲೇ ನನ್ನೊಳಗಿನ ಸಾಮಾಜಿಕ ಅಪೇಕ್ಷೆ ಸತ್ತು, ಜೈವಿಕ ತಂದೆತನ ಸಜೀವಗೊಂಡಿತು. ಅದು ನಮ್ಮ ಅತ್ಯಂತ ಮುದ್ದಿನ ಕೂಸಾಯಿತು. ಮಕ್ಕಳಿರದ ಬಾನುವಿನ ಅಣ್ಣ ‘ನಮ್ಮ ಮಡಿಲಿಗೆ ಹಾಕಿಬಿಡಿ. ನಿಮಗೆ ಇನ್ನೊಂದು ಮಾಡಿಕೊಳ್ಳಿ’ ಎಂದರು. ಬಾನು ತ್ಯಾಗಕ್ಕೆ ಸಿದ್ಧವಿದ್ದಳು. ಮಕ್ಕಳಿಲ್ಲದ ಅಣ್ಣನಿಗೆ ಆಸರೆಯಾಗಲೆಂದು. ನಾನೊಪ್ಪಲಿಲ್ಲ. ಬಾನು ಮೂರನೇ ಸಲ ಗರ್ಭ ಧರಿಸಿದಳು. ಈಸಲ ಅವಳಿಗೆ ಗಂಡುಕೂಸಿನ ತಾಯಿಯಾದೇನು ಎಂಬ ಆಸೆಯಿತ್ತೊ ಏನೊ? ಇಬ್ಬರೂ ಆಲೋಚಿಸಿ ಅಥವಾ ಅವಳು ನನ್ನ ಒತ್ತಾಯಕ್ಕೆ ಮಣಿದು-ಇನ್ನು ಸಾಕೆಂದು ನಿವಾರಿಸಿದೆವು. ಹುಟ್ಟಿದ್ದರೆ ಏನಾಗಿರುತ್ತಿತ್ತೊ? ಅದನ್ನು ಉಳಿಸಿಕೊಳ್ಳಬೇಕಿತ್ತು ಕಳೆಯಬಾರದಿತ್ತು ಎಂದು ಈಗಲೂ ಹಲುಬುತ್ತಾಳೆ. ತಾಯಿಗೆ ಒಡಲೊಳಗಿನ ಜೀವಕ್ಕಿಂತ ಮಹತ್ವದ್ದು ಜಗತ್ತಿನಲ್ಲಿಲ್ಲ.

ಬಾನುಗೆ ಹೋಲಿಸಿದರೆ ನಾನು ಮಕ್ಕಳ ಬಾಲ್ಯದ ಜತೆ ಅಷ್ಟೊಂದು ಸಮಯ ಕಳೆಯಲಿಲ್ಲ. ಬರುವ ಸಂಬಳಕ್ಕೆ ಹೋಲಿಸಿದರೆ ಕುಟುಂಬದ ಹೊಣೆಯ ಪರಡಿ ಭಾರವಾಗಿತ್ತು. ಓದು-ಬರೆಹ, ಸೆಮಿನಾರು, ಚಳವಳಿ ಸುತ್ತಾಟ. ಕಾಲೇಜು ಕೆಲಸ ಏಕತಾನವೆನಿಸುತ್ತಿತ್ತು. ವಿಶ್ವವಿದ್ಯಾಲಯದಲ್ಲಿದ್ದರೆ ಹೆಚ್ಚಿನ ಓದು ಬರೆಹಕ್ಕೆ ಅವಕಾಶ ಸಿಗುತ್ತದೆ ಎಂದು ತುಡಿಯುತ್ತಿದ್ದೆ. ಈ ಬಿಕ್ಕಟ್ಟಿನಲ್ಲಿ ಬಾನು ಮಕ್ಕಳ ಬಗ್ಗೆ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಮಕ್ಕಳನ್ನು ಬೆಳೆಸುವ ವಿಷಯದಲ್ಲೂ ನಮ್ಮಲ್ಲಿ ಏಕಮತ ಇರಲಿಲ್ಲ. ನನ್ನ ಭಿನ್ನಮತ ಲೆಕ್ಕಿಸದೆ ಬಾನು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಟ್ಟಳು. ನಾನು ಕಲಿಯುವಾಗ ಪಟ್ಟ ಕಷ್ಟವನ್ನೇ ಮಕ್ಕಳೂ ಅನುಭವಿಸಬೇಕೆಂದು ಬಯಸುತ್ತಿದ್ದೆ. ಆಟೊ ಹಿಡಿಯದೆ ಲಗೇಜು ಹೊತ್ತು, ಮಡದಿ ಮಕ್ಕಳನ್ನು ನಡೆಸಿಕೊಂಡು ಹೋಗುತ್ತಿದ್ದೆ. ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ಮಕ್ಕಳ ಹುಟ್ಟುಹಬ್ಬ ಬಂದಾಗ, ಕೋಟಿ ಕೋಟಿ ಮಕ್ಕಳಿಗೆ ಹುಟ್ಟಿದ ದಿನಾಂಕವೇ ಇಲ್ಲದ ದೇಶದಲ್ಲಿ ನಾವು ಅದನ್ನು ಆಚರಿಸುವುದೇ ಅಪರಾಧವೆಂದು ಭಾಷಣ ಬಿಗಿಯುತ್ತಿದ್ದೆ. ಮಕ್ಕಳ ಮುಖದಲ್ಲಿ ಅಸಮ್ಮತಿ ಸ್ಪಷ್ಟವಾಗಿ ಕಾಣುತ್ತಿತ್ತು. ಅವರಿಗೆ ಮಾರುಕಟ್ಟೆಗೆ ಕಳಿಸುವುದು, ಕರೆಂಟ್‌ಬಿಲ್ ಕಟ್ಟುವುದಕ್ಕೆ ಕಳಿಸುವುದು, ಊರುಗಳಿಗೆ ಒಬ್ಬೊಬ್ಬರೇ ಪಯಣಿಸುವಂತೆ ಹೇಳುವುದು ಮಾಡುತ್ತಿದ್ದೆವು. ಪ್ರವಾಸಕ್ಕೆ ಜತೆಯಲ್ಲಿ ಕರೆದೊಯ್ಯುತ್ತಿದ್ದೆವು. ಮನೆಗೆಲಸ ಮಾಡಿಸುತ್ತಿದ್ದೆವು. ಸಹಪಾಠಿ ಹುಡುಗರ ಜತೆ ಭೇದವಿಲ್ಲದೆ ಬೆರೆಯಲು ಉತ್ತೇಜಿಸುತ್ತಿದ್ದೆವು. ಶಾಲೆಗೆ ಹೋಗುವ ಹಾದಿಯಲ್ಲಿ ಕಿಡಿಗೇಡಿಗಳ ಕಾಟವಿತ್ತು. ‘ತಪ್ಪಿಸಿಕೊಂಡು ಓಡಬೇಡಿ, ಸೈಕಲನ್ನು ಸ್ಟಾ ಂಡ್ ಹಾಕಿ ನಿಲ್ಲಿಸಿ. ಮುಖಾಮುಖಿ ಮಾಡಿ’ ಎನ್ನುತ್ತಿದ್ದೆವು. ಅದನ್ನವರು ಚೆನ್ನಾಗಿ ಮಾಡಿದರು. ಬೇಸಿಗೆ ರಜೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಚಳವಳಿಗಳಲ್ಲಿ ಕ್ಯಾಂಪೇನ್ ಕೆಲಸಕ್ಕೆ ಕಳಿಸುತ್ತಿದ್ದೆವು. ಗ್ರಾಮೀಣ ಪ್ರದೇಶದಲ್ಲಿ ವೈದ್ಯೆಯಾಗಿ, ಅನೇಕ ತರಲೆಗಳೊಂದಿಗೆ ಕೆಲಸ ಮಾಡಬೇಕಾದ ಶಮಾ ಹೇಳುತ್ತಾಳೆ: ‘ಬಾಲ್ಯದಲ್ಲಿ ಸಿಕ್ಕ ಕಠಿಣ ತರಬೇತಿ ಈಗ ಕೈಹಿಡಿಯುತ್ತಿದೆ’

ಶಮಾ ನಿರಂಕುಶಮತಿ. ಸೀಮಾ ಹುಟ್ಟಿದ ಬಳಿಕ ನಮ್ಮ ಪ್ರೀತಿ ಕಿರಿಯಳತ್ತ ಹೊರಳಿಕೊಂಡಾಗ ಅವಳಿಗೆ ಕೊಂಚ ಅನ್ಯಾಯವಾಯಿತು. ಸ್ವತಂತ್ರವಾಗಿ ಆಲೋಚಿಸುವ ಮತ್ತು ಕ್ರಿಯಾಶೀಲವಾಗುವ ದಿಟ್ಟತನ ಅವಳಲ್ಲಿ ಮೊದಲಿಂದ ಇತ್ತು. ತನ್ನ ತಾಯಂತೆ ಜನರೊಟ್ಟಿಗೆ ವ್ಯವಹರಿಸುವ ಕುಶಲತೆ, ನಾಯಕತ್ವದ ಗುಣ, ಕಷ್ಟಪಡಲು ಹಿಂಜರಿಕೆಯಿಲ್ಲ. ತಾನು ಕಲಿತ ಕನ್ನಡ ಶಾಲೆಯ ಚರಿತ್ರೆಯಲ್ಲೇ ಹೆಚ್ಚಂಕ ಗಳಿಸಿದ್ದಳು. ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಳು. ಪರೀಕ್ಷೆ ಕಟ್ಟುವುದು, ಸ್ಪರ್ಧೆಗಳಲ್ಲಿ ಗೆಲ್ಲುವುದು ಅವಳಿಗೆ ಆಟ. ದುಡಿದು ದಣಿದಾಗ, ಬಾಳು ಏಕತಾನವೆನಿಸಿದಾಗ, ಒಬ್ಬಳೇ ಆಗಸ, ಕಡಲು, ಕಾಡುಗಳಲ್ಲಿ ಕಳೆದುಹೋಗಲು ಬಯಸುತ್ತಾಳೆ. ಆಕೆಗೆ ಹರಟಲು ಜನ ಬೇಕು. ಯಾರೂ ಸಿಗದಿದ್ದರೆ ಕಲ್ಲಿಗಾದರೂ ಮಾತಾಡಬೇಕು. ವೈದ್ಯೆಯಾಗಿ ರೋಗಿಗಳಿಗೆ ಕೊಡುವ ಮದ್ದಿಗಿಂತ ಸಲಹೆ ಸೂಚನೆ ಹಿತವಚನಗಳ ಭರವಸೆಯ ವಾಗೌಷಽಯೇ ಹೆಚ್ಚು. ಆಸ್ಪತ್ರೆಗೆ ಹೋದಾಗ ರೋಗಿಗಳ ಜತೆ ಮಾತಾಡಿದೆ. ಅವರೆಂದರು: ‘ಮೇಡಮ್ಮರ ಮಾತ್ನಲ್ಲೆ ಅರ್ಧ ಕಾಯಿಲೆ ವಾಸಿ ಆಗಿಬುಡುತ್ತೆ ಸಾ’.

ಎರಡನೆಯ ಕೂಸು ಸೀಮಾ ಕಲ್ಪನಾಜೀವಿ, ಅಂತರ್ಮುಖಿ. ತುಸು ಆರಾಮಪಸಂದಿ ಕೂಡ. ‘ರ‍್ಯಾಂಕ್ ಬಂದಿದ್ದಳಲ್ಲ, ಶಮಾ, ಅವಳ ತಂಗೀ ಅಲ್ಲವಾ ನೀನು?’ ಎಂದು ಯಾರಾದರೂ ಅಂದರೆ ಅವಳಿಗೆ ಬೆಂಕಿ ಬೀಳುತ್ತದೆ. ಅಕ್ಕ ತನ್ನ ಇಷ್ಟಾನಿಷ್ಟ ರೂಪಿಸುವುದಕ್ಕೆ ಮುಂದಾಗುವುದು, ಜನ ಅಕ್ಕನ ಮೂಲಕ ಗುರುತಿಸುವುದು ಚೂರೂ ಹಿಡಿಸದು. ಅದಕ್ಕೆಂದೇ ವಿಜ್ಞಾನ ಕೈಬಿಟ್ಟು ಅಕ್ಕನ ಮಾರ್ಗದರ್ಶನದ ಕಾಟವಿಲ್ಲದ ಸಾಹಿತ್ಯದ ಕೋರ್ಸನ್ನು ತೆಗೆದುಕೊಂಡಳು. ತನ್ನ ಅಸ್ಮಿತೆ ಸ್ವಾತಂತ್ರ್ತ್ಯ್ಯದ ಬಗ್ಗೆ ಅಸೀಮ ನಂಬಿಕೆ. ಅವಳ ಸೃಜನಶೀಲತೆಯ ಪರಿಯೇ ಬೇರೆ. ಬರೆಹ-ಓದು ಇಷ್ಟ. ಎಳವೆಯಲ್ಲೇ ಮಕ್ಕಳಿಗೆ ಏನು ತೋರಿಸಬೇಕು, ಕೇಳಿಸಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯಿದೆ. ತನ್ನ ಮಗಳಿಗೆ ಟಿವಿಯ ವ್ಯಸನಕ್ಕೆ ಬೀಳದಂತೆ ಎಚ್ಚರದಿಂದ ಓದುವ ಹವ್ಯಾಸ ರೂಢಿಸಿದ್ದಾಳೆ.

ಸೀಮಾ ಮನೆಗೆ ಬಂದವರ ವರ್ತನೆ, ಮಾತುಕತೆಯನ್ನು ಸೂಕ್ಷವಾಗಿ ಗಮನಿಸುತ್ತಿದ್ದಳು ಮೂಕಿಯಂತೆ. ಅವರು ತೆರಳಿದ ಬಳಿಕ ಅತಿಥಿಗಳ ಬಗ್ಗೆ ನಾವು ಗಮನಿಸಿರದ ಸಂಗತಿ ಹೇಳುತ್ತಿದ್ದಳು. ದೊಡ್ಡವಳು ಮನೋರೋಗ ತಜ್ಞೆಯಾದರೆ, ಈಕೆ ಮನಶಾಸ್ತ್ರಜ್ಞೆ. ಬಾನು ನಾನು ಜಗಳ ಆಡುವಾಗ ಸುಮ್ಮನಿದ್ದು, ಕಡೆಗೆ ತಣ್ಣಗೊಂದು ಪ್ರತಿಕ್ರಿಯೆ ನೀಡುವಳು-ನಮ್ಮ ಸಣ್ಣತನ ನಮಗೇ ಅರಿವಾಗುವಂತೆ. ಅವಳ ಪ್ರಬುದ್ಧತೆ, ನಿರ್ಲಿಪ್ತತೆ, ಹಾಸ್ಯಪ್ರಜ್ಞೆ ಬಂಧುಗಳಿಗೆಲ್ಲ ಇಷ್ಟ. ಮನುಷ್ಯ ಸಂಬಂಧ, ಊಟ, ಅಡುಗೆಗಳಲ್ಲಿ ಆಸಕ್ತಿ. ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದರಲ್ಲಿ ಕೊಂಚ ಹಿಂದು. ಹುರುಡಿನ ಸ್ಪರ್ಧೆಗಳೇ ಇಷ್ಟವಿಲ್ಲ. ಲೌಕಿಕ ಯಶಸ್ಸಿನ ಬಗ್ಗೆ ಅನಾಸಕ್ತೆ. ಮಹತ್ವಾಕಾಂಕ್ಷೆಯಿಲ್ಲದೆ ತನ್ನದೇ ಜಗತ್ತನ್ನು ಕಟ್ಟಿಕೊಂಡು ವಿಹರಿಸುವವಳು. ಸಹನೆ, ಮೈತ್ರಿ, ಕರುಣೆಗಳಲ್ಲಿ ನಮ್ಮ ಮನೆತನದ ಬುದ್ಧ. ಸೋಜಿಗವಾಗುತ್ತದೆ: ಒಂದೇ ಬಳ್ಳಿಯ ಎರಡು ಹೂಗಳು-ಎಷ್ಟೊಂದು ಭಿನ್ನತೆ? ಒಬ್ಬಾಕೆ ವೇಗವಾಗಿ ಸುದೂರ ಪಯಣಿಸುವ ವಾಂಛೆಯುಳ್ಳ ಅಶ್ವಾರೋಹಿ. ಬಹದೂಕೆ; ಮತ್ತೊಬ್ಬಾಕೆ ಗೂಡಲ್ಲೇ ಕೂತು ಧ್ಯಾನಿಸುವ ಪಕ್ಷಿ. ಕುಟೀಚಕ.

ಮಕ್ಕಳು ಪ್ರಾಯಕ್ಕೆ ಬಂದಾಗ ಅವರ ಜೀವನ ಸಂಗಾತಿಗಳನ್ನು ಅವರೇ ನಿರ್ಧರಿಸಲು ಉತ್ತೇಜಿಸಿದ್ದೆವು. ಇಬ್ಬರೂ ತಾವಿಷ್ಟಪಟ್ಟ ಹುಡುಗರನ್ನು ಕಂಡುಕೊಂಡರು. ಸೀಮಾ ತನ್ನ ಲಗ್ನಕ್ಕೆ ಎರಡು ಕುಟುಂಬದವರು ಮಾತ್ರ ಇದ್ದರೆ ಸಾಕು ಎಂದಳು. ಹಾಗೇ ಆಯಿತು. ಬಾಲ್ಯದಲ್ಲಿ ಪ್ರತಿಸ್ಪಧಿ ಗಳಾಗಿದ್ದವರು, ಮದುವೆ ಬಳಿಕ ಬದುಕಿನ ಕಷ್ಟಗಳನ್ನು ಮುಖಾಬಿಲೆ ಮಾಡುತ್ತ ಆಪ್ತ ಸಖಿಯರಾದರು. ನಾವು ಮಕ್ಕಳನ್ನು ಜೈವಿಕವಾಗಿ ಹೆತ್ತೆವು. ಸಾಮಾಜಿಕ ಕರ್ತವ್ಯದ ಭಾಗವಾಗಿ ಬೆಳೆಸಿದೆವು. ಪ್ರತಿಯಾಗಿ ಅವರ ವಿದ್ಯಾರ್ಥಿಗಳಾಗಿ ಎಷ್ಟೆಲ್ಲ ಕಲಿತೆವು. ಈ ಕಲಿಕೆ ಇನ್ನೂ ನಿಂತಿಲ್ಲ. ಖಲೀಲ್ ಗಿಬ್ರಾನ್ ಹೇಳಿದ್ದು ದಿಟ: ‘ನಮ್ಮ ಮಕ್ಕಳು ನಮ್ಮವಲ್ಲ. ಅವು ಲೋಕದ ಮಕ್ಕಳು. ಅವರಿಗೆ ಕಲಿಸುವುದಕ್ಕಿಂತ ಅವರಿಂದ ಕಲಿಯಲು ಯತ್ನಿಸಬೇಕು’. ಮಕ್ಕಳ ಹೊಟ್ಟೆಯಲ್ಲಿ ತಂದೆ-ತಾಯಿಗಳು ಮತ್ತೊಮ್ಮೆ ಹುಟ್ಟಿಬರುವ ಅನುಭವವೇ ಅದ್ಭುತ. ಇದರ ಮುಂದೆ ಮಕ್ಕಳು ವಯಸ್ಸಾದ ಮೇಲೆ ನಮಗೆ ದುಡಿದುಹಾಕಬೇಕೆಂದೊ ಅಥವಾ ನಾವು ಮಾಡಿದ ಆಸ್ತಿಗೆ ಉತ್ತರಾಧಿಕಾರಿಗಳಾಗಬೇಕೆಂದೊ ಬಯಸುವುದು ಒಳ್ಳೆಯ ಸಂಗತಿಯಲ್ಲ. 

lokesh

Recent Posts

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

9 hours ago

ಸಿಎ ಸೈಟ್‌ ಕಟ್ಟಡ ನಿರ್ಮಾಣ ಕಾಲಮಿತಿ ; 3 ವರ್ಷದಿಂದ 5 ವರ್ಷ ಹೆಚ್ಚಳದ ಭರವಸೆ

ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…

9 hours ago

ಮೈಸೂರು : ಆನ್‌ಲೈನ್‌ನಲ್ಲಿ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚನೆ

ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…

9 hours ago

SC/ST ದೌರ್ಜನ್ಯ ತಡೆ : ನಾಗರಿಕ ಹಕ್ಕು ಜಾರಿ ನೂತನ ಠಾಣೆ ಮೈಸೂರಲ್ಲಿ ಕಾರ್ಯರಂಭ

ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…

9 hours ago

ಕೆಪಿಎ-ಮಹಿಳಾ-ಮಕ್ಕಳ ಅಭಿವೃದ್ಧಿ ಸಂಸ್ಥೆ ನಡುವೆ ಒಡಂಬಡಿಕೆ

ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…

10 hours ago

ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

10 hours ago