ಎಡಿಟೋರಿಯಲ್

ಚಿಕ್ಕಲ್ಲೂರು ಜಾತ್ರೆ: ಕನ್ನಡ ನಾಡಿನ ದೇಸಿ ಸಂಸ್ಕೃತಿ, ಚರಿತ್ರೆಯ ಉತ್ಸವ

• ಪ್ರೊ.ಮಹಾದೇವ ಶಂಕನಪುರ, ಕೊಳ್ಳೇಗಾಲ

ಮಂಟೇಸ್ವಾಮಿ ನೀಲಗಾರ ಪರಂಪರೆ ಕನ್ನಡನಾಡಿನ ಒಂದು ವಿಶಿಷ್ಟವಾದ ಪಂಥ. “ಮಂಟೇಸ್ವಾಮಿ ಸ್ಕೂಲ್ ಆಫ್ ಥಾಟ್ಸ್’ ಎಂಬ ತನ್ನದೇ ಐಡೆಂಟಿಟಿಯನ್ನು ಹೊಂದಿದೆ ಎಂಬುದು ಈವರೆಗಿನ ಅಧ್ಯಯನಗಳ ಅಪ್‌ಡೇಟ್ಸ್ ಆಗಿದೆ. ಈ ಕಾವ್ಯ ಮತ್ತು ಪರಂಪರೆ ಬರೇ ಜಾನಪದ ಮಾತ್ರ ಅಲ್ಲ. ಕನ್ನಡ ನಾಡಿನ ದೇಸಿ ಸಂಸ್ಕೃತಿ ಮತ್ತು ಚರಿತ್ರೆ ಮೇಲೆ ಬೆಳಕು ಚೆಲ್ಲಿದೆ.

ವಿಜಯನಗರ ಅರಸರು ಮತ್ತು ಮೈಸೂರು ಒಡೆಯರ ಆಳ್ವಿಕೆ ಕಾಲದ ಜೊತೆಗೆ 15-16ನೇ ಶತಮಾನದ ಈ ಪರಂಪರೆಯ ಸಂತರ ಚರಿತ್ರೆ ಬೆಸೆದುಕೊಂಡಿರುವುದು ಕುತೂಹಲಕರವಾಗಿದೆ. ಈ ಗುರು ಮಂಟೇಸ್ವಾಮಿ- ಮಂಟೇದಲಿಂಗ ಕಾವ್ಯನಾಮದಲ್ಲಿ 13 ಕಾಲಜ್ಞಾನ ವಚನಗಳನ್ನು, ಕೊಡೇಕಲ್ಲ ಪರಂಪರೆಯಿಂದ ಬಂದ ಕಪ್ಪಡಿ ರಾಚಪ್ಪಾಜಿಯವರು 10 ಕಾವ್ಯಗಳನ್ನು, 46 ತತ್ವ ಪದಗಳನ್ನು ಬರೆದಿರುವ ತಾಳೆಗರಿ ಸಾಹಿತ್ಯ ಇಂದು ಲಭ್ಯವಿದೆ. ಇಂತಹ ಪರಂಪರೆಗೆ ಸೇರಿದ ಚಿಕ್ಕಲ್ಲೂರು ಜಾತ್ರೆ ಕಟ್ಟುವುದು ಮಂಟೇಸ್ವಾಮಿಯವರ ಶಿಶು ಮಗ ಘನನೀಲಿ ಸಿದ್ಧಪ್ಪಾಜಿ ಹೆಸರಲ್ಲಿ. ಸಿದ್ಧಪ್ಪಾಜಿ ಶೈವ ಸಿದ್ಧ ಮೂಲದ ನೀಲಗಾರ ಪಂಥದ ಪ್ರವರ್ತಕ.

ಕೆಂಪಚಾರಿ ಸಿದ್ಧಪ್ಪಾಜಿಯಾದ ಬಗೆ… ಚಿಕ್ಕಲ್ಲೂರು ಸಿದ್ಧಪ್ಪಾಜಿ ಜೀವನ ವಿವರಗಳು, ಮಂಟೇಸ್ವಾಮಿ ಕಾವ್ಯ ಮತ್ತು ಚಾರಿತ್ರಿಕ ಕೃತಿಗಳಲ್ಲಿ ತೆರೆದುಕೊಳ್ಳುತ್ತವೆ. ಬಾಚಿ ಬಸವಣ್ಣಚಾರಿ- ಮುದ್ದಮ್ಮ ದಂಪತಿ ನಿಡುಘಟ್ಟದ ವಾಸಿಗಳು (ಮಂಡ್ಯ ಜಿಲ್ಲೆ). ಉಣ್ಣಲು ಅನ್ನ, ಉಡಲು ಬಟ್ಟೆ ಇಲ್ಲದ ಬಡವರಿವರು. ನಿಡುಘಟ್ಟ ಬಿಟ್ಟು ಮಾರಳ್ಳಿಗೆ ಒಕ್ಕಲಾಗಿ ಬರುವ ಇವರಿಗೆ ಆರು ಜನ ಗಂಡು ಮಕ್ಕಳಾದರೂ ಅದೃಷ್ಟ ಇರಲಿಲ್ಲ. ಏಳನೇ ಮಗ ಕೆಂಪಚಾರಿ ಮನೆ ತುಂಬಾ ಭಾಗ್ಯ ತಂದ ಅದೃಷ್ಟವಂತ. ಎಪ್ಪತ್ತೇಳು ಕುಲುಮೆಗಳ ಒಡೆಯ. ಇಂತಹ ಭಾಗ್ಯವಂತ ಕೆಂಪಚಾರಿಯನ್ನು ಶಿಷ್ಯನನ್ನಾಗಿ ಪಡೆಯಲು ಮಂಟೇಸ್ವಾಮಿ ಬಯಸುತ್ತಾರೆ. ಶಿಶು ಮಗನನ್ನಾಗಿ ಮಾಡಲು ತಾಯಿ ಒಪ್ಪುವುದಿಲ್ಲ. ಕೆಂಪಚಾರಿಯು ಗುರುವಿಗೆ ಮಣಿಯುವುದಿಲ್ಲ. ಕಡೆಗೆ ಮಂಟೇಸ್ವಾಮಿ ತನ್ನ ಕಪ್ಪುಧೂಳತ, ಭಂಗಿ ನೀಲಿ ಗ್ಯಾನ ಕೊಡಲಾಗಿ ಕೆಂಪಚಾರಿಯು ತಾನಾಗೇ ಶಿಶು ಮಗನಾಗಿ ಒಲಿದು ಬರುವನು, ಎಲೆ ಕುಂದೂರು ಬೆಟ್ಟದ ಕಾಳಿಂಗನ ಕಲ್ಲುಗವಿಯಲ್ಲಿ 12 ವರ್ಷ ಕಾಯಸಿದ್ಧಿ ವಿದ್ಯೆ ಗಳಿಸುವ ಕೆಂಪಚಾರಿ, ಬೊಪ್ಪಣಪುರ ಮಠಮನೆಯಲ್ಲಿ ಗುರುಮಣಿ ಕಟ್ಟಿಸಿಕೊಂಡು ಸಿದ್ದಪ್ಪಾಜಿ ಆಗುತ್ತಾನೆಂದು ಕಾವ್ಯದಲ್ಲಿ ಹಾಡಲಾಗುತ್ತದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಲಗ ಎಂಬ ಗ್ರಾಮದಲ್ಲಿ ಮುಸ್ಲಿಂ ಶೈಲಿಯ ಚನ್ನ ಬಸವೇಶ್ವರನ ದೇವಾಲಯವಿದೆ. ಇದರ ಕೆಳಗೆ ಸಿದ್ಧಪ್ಪಯ್ಯನ ಗವಿ ಇದೆ. ಮಂಟೇಸ್ವಾಮಿಯವರ ಶಿಷ್ಯ ಸಿದ್ಧಪ್ಪಾಜಿ ಇವರೇ ಇರಬಹುದು. ಇವರು ಮಂಟೇಸ್ವಾಮಿ ಜತೆ ಉತ್ತರದಿಂದ ದಕ್ಷಿಣಕ್ಕೆ ಬಂದವರಾಗಿರಬಹುದೆಂದು ಚಾರಿತ್ರಿಕವಾಗಿ ಬಸವಲಿಂಗ ಸೊಪ್ಪಿನಮಠ ಗುರುತಿಸುತ್ತಾರೆ.

ಇಂದಿಗೂ ಜೀವಂತ ಚರಿತ್ರೆ ಮತ್ತು ಸಂಸ್ಕೃತಿ… ಗುರು ಮಂಟೇದ ಅವರಿಗೆ ಮಠಮನೆ ಕಟ್ಟುವುದು, ಒಕ್ಕಲುಗಳ ಪಡೆದು ನೀಲಗಾರ ಪರಂಪರೆ ವಿಸ್ತರಿಸುವುದು ಸಿದ್ಧಪ್ಪಾಜಿಯವರ ಕಾರ್ಯ ಸೂಚಿಯಾಗುತ್ತದೆ. ಅದಕ್ಕಾಗಿ ಸಿದ್ಧಪ್ಪಾಜಿ ಹಲಗೂರು-ಚಿಲ್ಲಾಪುರ-ಪಾಂಚಾಳರ ಪ್ರಾಂತ್ಯಕ್ಕೆ ಕಬ್ಬಿಣ ಭಿಕ್ಷೆ ತರಲು ಹೋಗುತ್ತಾರೆ. ಜನಪದ ಕತೆಯಾಗಿ ಹಾಡಲ್ಪಡುವ ಈ ಸಂತರ ಕುರಿತಾದ ಈ ಕಾವ್ಯ ವರ್ತಮಾನದಲ್ಲೂ ಇರುವ ಚರಿತ್ರೆ ಮತ್ತು ಸಂಸ್ಕೃತಿಯಾಗಿದೆ. ಸಿದ್ಧಪ್ಪಾಜಿ ಐಕ್ಯವಾಗಿರುವ ಇಂದಿನ ಚಿಕ್ಕಲ್ಲೂರು ಸುತ್ತಾಮುತ್ತ, ಸಮೀಪದ ಹಲಗೂರು ಜಿಲ್ಲಾಪುರ ಪ್ರದೇಶಗಳಲ್ಲಿ ಪಾಂಚಾಳರ ನೂರಾರು ಕುಲುಮೆ ತಿಟ್ಟುಗಳೆಂಬ ಕಬ್ಬಿಣದ ಗುಡಿ ಕೈಗಾರಿಕೆ ನೆಲೆಗಳಿದ್ದವು ಎಂಬುದು ಸ್ಥಳೀಯ ಇತಿಹಾಸವಾಗಿದೆ.

“ವಿಜಯನಗರದ ಸುತ್ತಲಿನ ಪ್ರದೇಶಗಳಿಂದ ಕಬ್ಬಿಣದ ಅದಿರನ್ನು ದಕ್ಷಿಣದ ಕುಲುಮೆಗಳಲ್ಲಿ ಆಯುಧಗಳು, ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು. ಈ ಭಾಗದಲ್ಲಿ ತಯಾರಾದ ವಸ್ತುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇತ್ತು. ಶ್ರೀರಂಗಪಟ್ಟಣ ಇವರ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. ಶಿವನ ಸಮುದ್ರ, ಶ್ರೀರಂಗಪಟ್ಟಣಕ್ಕೆ ಹತ್ತಿರವಿದ್ದ ಹಲಗೂರು-ಚಿಲ್ಲಾಪುರ ಕಬ್ಬಿಣದ ಸಾಮಗ್ರಿಗಳನ್ನು ಉತ್ಪಾದಿಸುತ್ತಿದ್ದ ಮುಖ್ಯ ಕೇಂದ್ರಗಳಾಗಿದ್ದವು. ಎಂಬುದಾಗಿ 1799 ರಲ್ಲಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಇತಿಹಾಸಕಾರ ಫ್ರಾನ್ಸಿಸ್ ಬುಕೆನಾನ್ ಬರೆದಿದ್ದಾನೆ. ಪಾಂಚಾಳರು ಹಲಗೂರು-ಚಿಲ್ಲಾಪುರ ಹಾಗೂ ಚಿಕ್ಕಲ್ಲೂರು ಪ್ರದೇಶದಲ್ಲಿ 777 ಕುಲುಮೆಗಳ ಒಡೆಯರಾಗಿದ್ದರು. ಇವರಿಂದ ಸಿದ್ಧಪ್ಪಾಜಿ ಗುರುವಿಗೆ ಮಠಮನೆ ಮಾಡಲು ಬೇಕಾದ ಕಬ್ಬಿಣ ಭಿಕ್ಷೆ ಪಡೆದು ಪಾಂಚಾಳರನ್ನು ಒಕ್ಕಲು ಮಾಡುತ್ತಾರೆ. ಕಡೆಗೆ ಗುರು ಆಜ್ಞೆಯಂತೆ ಚಿಕ್ಕಲ್ಲೂರು ಕ್ಷೇತ್ರದಲ್ಲಿ ನೆಲೆಸುತ್ತಾರೆ ಎಂಬುದು ಜನಪದವೂ… ಇತಿಹಾಸವೂ… ಆಗಿದೆ.

ಆ ಜಾತಿ ಈ ಜಾತಿ ಏಕ ಜಾತಿ ಆಗುತ್ತಾ…?

ಚಿಕ್ಕಲ್ಲೂರು ಜಾತ್ರೆ ಮಂಟೇಸ್ವಾಮಿ ಒಕ್ಕಲುಗಳ ಮತ್ತು ಸಮುದಾಯಗಳ ವಾಣಿಜ್ಯ ಮತ್ತು ಕೃಷಿ ಸಮೃದ್ಧಿ ಸಂಭ್ರಮದ ಅಭಿವ್ಯಕ್ತಿ. ಕೃಷಿಕ ವರ್ಗ ಮತ್ತು ಒಕ್ಕಲುಗಳು ಪ್ರತಿ ವರ್ಷ ನೀಲಗಾರ ಪಂಥದ ತತ್ವ ಆದರ್ಶಗಳನ್ನು ಹೊಸ ತಲೆಮಾರಿಗೆ ವರ್ತಮಾನಗೊಳಿಸುವುದನ್ನು ಜಾತ್ರೆ ಮೂಲಕನೆರವೇರಿಸಲಾಗು ತದೆ. ಈ ಪರಂಪರೆಯ ಸೌಹಾರ್ದತೆ, ಜಾತ್ಯತೀತತೆ, ಸಹಪಂಕ್ತಿ ಭೋಜನ ದಂತಹ ಸಮಸಮಾಜದ ಮನುಷ್ಯ ಲೋಕ ಕಟ್ಟುವ ಪ್ರಕ್ರಿಯೆ ಮತ್ತೆ ಮತ್ತೆ ಜಾತ್ರೆಯಲ್ಲಿ ಆಚರಣೆಗಳ ಮೂಲ ನಡೆಯುತ್ತಲೇ ಇರುತ್ತದೆ. ಚಿಕ್ಕಲ್ಲೂರು ಜಾತ್ರೆಯಲ್ಲಿ ದಿನಕ್ಕೊಂದು ಆಚರಣೆಗಳು ಮೈದಾಳುತ್ತವೆ. ಜಾತ್ರೆಯ ಪೂಜಾ ವಿಧಿವಿಧಾನಗಳನ್ನು ಬೊಪ್ಪೇಗೌಡನ ಪುರದ ಪೀಠಾಧಿಪತಿಗಳಾದ ಶ್ರೀ ಜ್ಞಾನನಂದಾ ಚನ್ನೇರಾಜೇ ಅರಸ್ ಅವರು ನೆರವೇರಿಸುತ್ತಾರೆ. ಆಡಳಿತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜನೆಯನ್ನು ಜಾತ್ರೆ ಸಮಿತಿ ಅಧ್ಯಕ್ಷರು ಹಾಗೂ ಮಳವಳ್ಳಿ ಮಠದ ಪೀಠಾಧಿಪತಿಗಳಾದ ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಅವರು ನಡೆಸಿ ಕೊಡುತ್ತಾರೆ. ಮೊದಲ ದಿನ ಮಧ್ಯರಾತ್ರಿ ಚಂದ್ರಮಂಡಲ ಆಚರಣೆಯೊಂದಿಗೆ ಜಾತ್ರೆ ಆರಂಭವಾಗುತ್ತದೆ. ಎರಡನೇ ದಿನ ದೊಡ್ಡಮ್ಮತಾಯಿ ಸೇವೆ, ಮೂರನೇ ದಿನ ಮುಡಿಸೇವೆ (ನೀಲಗಾರ ದೀಕ್ಷೆ), ನಾಲ್ಕನೇ ದಿನ ಪಂಕ್ತಿಸೇವೆ (ಸಹಪಂಕ್ತಿ ಭೋಜನ), ಐದನೇ ದಿನ ಮುತ್ತತ್ತಿರಾಯನ ಸೇವೆ ಮೂಲಕ ಐದು ದಿನಗಳ ಜಾತ್ರೆ ಸಂಪನ್ನಗೊಳ್ಳುತ್ತದೆ.

ಬಹುತೇಕ ಎಲ್ಲ ಜಾತಿಯ ಜನರೂ ನೀಲಗಾರ ಒಕ್ಕಲಾಗಿದ್ದು ಒಂದೇ ದೇವಸ್ಥಾನ ಸಿದ್ಧಪ್ಪಾಜಿ ಗದ್ದಿಗೆಯಲ್ಲಿ ಪೂಜಿಸಿ ಜಾತ್ರೆ ಬಯಲಲ್ಲಿ ಕಲೆಯುತ್ತಾರೆ. ಗದ್ದಿಗೆ, ಕಂಡಾಯ, ಬೆತ್ತ, ಜಾಗಟೆ-ಜೋಳಿಗೆ ಎಲ್ಲರ ಸಮಾನ ಆರಾಧನಾ ದೈವ ಸಂಕೇತಗಳಾಗಿರುತ್ತವೆ. ಎಲ್ಲೂ ಭೇದ ಭಾವ ಜಾತೀಯತೆಗೆ ಆಸ್ಪದವಿಲ್ಲ. ಆ ಜಾತಿ ಈ ಜಾತಿ ಏಕ ಜಾತಿ ಆಗುತ್ತದೆ. ಮೇಲು ಕೀಳಾಗುತ್ತದೆ, ಕೀಳು ಮೇಲಾಗುತ್ತದೆ’ ಎಂಬ ಮಂಟೇಸ್ವಾಮಿ ಕಾವ್ಯದ ಸಾಲುಗಳಂತೆ ಜಾತಿ ವಿನಾಶದ ಆಶಯ ಇಲ್ಲಿ ಅನುಷ್ಠಾನವಾಗುತ್ತದೆ.

andolana

Share
Published by
andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago