ಕೊರೊನಾದಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಮರಾಜನಗರ ಜಿಲ್ಲಾ ದಸರಾ ಕಾರ್ಯಕ್ರಮಗಳು ಈ ಬಾರಿ ನಡೆದು ಸಣ್ಣ ಪುಟ್ಟ ಲೋಪಗಳ ನಡುವೆ ಮುಕ್ತಾಯಗೊಂಡಿದೆ. ನೆನಪಿನಲ್ಲಿ ಉಳಿಯುವಂತಹ ರಸವತ್ತಾದ ಕಾರ್ಯಕ್ರಮಗಳೇನು ಇರಲಿಲ್ಲ ಮಾಮೂಲಿ ಸರ್ಕಾರಿ ಉತ್ಸವದಂತೆ ವಿಜೃಂಭಿಸಿತ್ತು. ನಾಲ್ಕು ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನ ಹೊರತುಪಡಿಸಿದರೆ ಉಳಿದ ಕಾರ್ಯಕ್ರಮಗಳು ಹೇಳಿಕೊಳ್ಳುವಂತೆ ಇರಲಿಲ್ಲ.
ಪ್ರತಿ ವರ್ಷದಂತೆ ಈ ಬಾರಿಯೂ ಚಾಮರಾಜೇಶ್ವರ ದೇವಾಲಯದ ಮುಂಭಾಗ ಹಾಕಲಾಗಿದ್ದ ಮುಖ್ಯ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಬಹಳಷ್ಟು ಜನರು ನಿಂತುಕೊಂಡೆ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ದೇವಾಲಯದ ಮುಂಭಾಗ ಹಾಗೂ ಸುತ್ತಮುತ್ತಲ ರಸ್ತೆಗಳು ಕಿರಿದಾಗಿದ್ದು ವಾಹನಗಳ ನಿಲುಗಡೆಗೆ ಸ್ಥಳದ ಅಭಾವವಾಯಿತು. ವೇದಿಕೆ ಮುಂಭಾಗ ಸೇರುವ ಜನರೆಲ್ಲ ಕುರ್ಚಿಗಳಲ್ಲಿ ಕುಳಿತು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಷ್ಟು ಜಾಗವಿರಲಿಲ್ಲ. ಅರ್ಧದಷ್ಟು ಜನರು ನಿಂತುಕೊಂಡೆ ವೀಕ್ಷಣೆ ಮಾಡಿದರು.
೨೦೧೬ ರಿಂದ ಜಿಲ್ಲಾ ದಸರಾ ಕಾರ್ಯಕ್ರಮ ಆರಂಭವಾದ ದಿನಗಳಿಂದಲೂ ಇಂತಹ ಸಮಸ್ಯೆಗಳಿದ್ದರೂ ಪರ್ಯಾಯ ಜಾಗ ಹುಡುಕಿ ಕಾರ್ಯಕ್ರಮ ಮಾಡೋಣ ಎಂಬುದರ ಬಗ್ಗೆ ಜಿಲ್ಲಾಡಳಿತ ಆಲೋಚನೆ ಮಾಡುವುದೇ ಇಲ್ಲ. ಇಲ್ಲಿಯ ತನಕ ಕಾರ್ಯಕ್ರಮಗಳು ಚಾಮರಾಜೇಶ್ವರ ದೇವಾಲಯದ ಮುಂಭಾಗ ಮತ್ತು ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯುತ್ತಿದ್ದವು. ಈ ಬಾರಿ ಹೊಸದಾಗಿ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆದವು. ಆದರೂ ಚಾಮರಾಜೇಶ್ವರ ದೇವಾಲಯದ ಮುಂಭಾಗ ಕಾರ್ಯಕ್ರಮ ಮಾಡುವ ಬದಲು ಡಾ.ಬಿ.ಆರ್.ಕ್ರೀಡಾಂಗಣದಲ್ಲಿ ಆಯೋಜಿಸಿದ್ದರೆ ಸ್ಥಳಾವಕಾಶವಿತ್ತು. ವಾಹನಗಳ ನಿಲುಗಡೆಗೂ ಅನುಕೂಲವಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ, ಜಿಲ್ಲಾಡಳಿತ ಮಾತ್ರ ಈ ವಿಚಾರವಾಗಿ ಮೌನ ವಹಿಸಿತ್ತು.
ನಾಡಹಬ್ಬ ದಸರಾ ಅಂಗವಾಗಿ ಚಾಮರಾಜೇಶ್ವರ ದೇವಾಲಯದ ಮುಂಭಾಗ ಹಾಗೂ ಸುತ್ತಲಿನ ರಸ್ತೆಗಳು, ಬಿ.ರಾಚಯ್ಯ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿತ್ತು. ಜೋಡಿರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಡಸ್ವಾಮಿ ಜೋಡಿರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಆದರೂ ದೀಪಾಲಂಕಾರ ಮಾಡದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಮತ್ತು ಶಾಸಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರತ್ಯಕ್ಷಗೊಂಡ ನಂಜುಂಡಸ್ವಾಮಿ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದರು. ಈ ವೇಳೆ ಗೊಂದಲ ಸೃಷ್ಟಿಯಾಗಿತ್ತು.
ಮ್ಯಾರಥಾನ್ ಓಟ ಹಮ್ಮಿಕೊಳ್ಳುವುದಾಗಿ ಜಿಲ್ಲಾಡಳಿತ ಘೋಷಿಸಿತ್ತು. ಕೊನೆ ಗಳಿಗೆಯಲ್ಲಿ ದಸರಾ ನಡಿಗೆ ಎಂದು ಹೆಸರು ಬದಲಿಸಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಓಡುವ ಬದಲು ನಡೆದಾಡಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿದ್ದು ಸೂಕ್ತವಾಗಿತ್ತು. ಆದರೆ, ಹೊರ ಜಿಲ್ಲೆಯ ಕಲೆಗಳನ್ನು ಮತ್ತು ಸುಪ್ರಸಿದ್ದ ಕಲಾವಿದರಿಂದ ಕಾರ್ಯಕ್ರಮ ನಡೆಸಲಿಲ್ಲ ಎಂಬ ಬೇಸರ ವ್ಯಕ್ತವಾಯಿತು. ಕಾಮಿಡಿ ಕಿಲಾಡಿಗಳ ತಂಡ, ವಾಗ್ಮಿ ಕೃಷ್ಣೇಗೌಡ ಮತ್ತು ತಂಡದಿಂದ ಹಾಸ್ಯ ಸಂಜೆ, ಗಾಯಕ ಕಂಬದ ರಂಗಯ್ಯ ಮತ್ತು ಅವರ ತಂಡದಿಂದ ರಸಸಂಜೆ, ಅನುರಾಧ ಭಟ್ ಮತ್ತು ಅವರ ತಂಡದಿಂದ ನಡೆಸಿದ ಗಾಯನ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ಸುಪ್ರಸಿದ್ದ ಗಾಯಕರಿಂದ ರಸ ಗಳಿಗೆಯನ್ನು ಕಟ್ಟಿಕೊಡಲಿಲ್ಲ. ಜಿಲ್ಲೆಯ ಕಲಾವಿದರ ಬೇಡಿಕೆಗೆ ಸ್ಪಂದಿಸಿದರೆ ಹೊರತು ಮತ್ತಷ್ಟು ರಂಗು ರಂಗಿನ ರಸವತ್ತಾದ ಕಾರ್ಯಕ್ರಮಗಳನ್ನು ಆಯೋಜಿಸಲಿಲ್ಲ ಎಂಬ ಬೇಸರ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು. ಕವಿಗೋಷ್ಠಿಗಳಿಗೆ ಸಾಹಿತ್ಯ ಆಸಕ್ತರು ಹೆಚ್ಚಾಗಿ ಪಾಲ್ಗೊಳ್ಳಲೇ ಇಲ್ಲ.
ಫಲಪುಷ್ಪ ಪ್ರದರ್ಶನಕ್ಕೆ ಭಾರಿ ಜನಸ್ಪಂದನ ವ್ಯಕ್ತವಾಯಿತು. ಬಗೆ ಬಗೆಯ ಹೂಗಳಿಂದ ಮಾಡಿದ್ದ ಪ್ರಾಣಿಗಳು, ದೇವಾಲಯಗಳು, ಸೆಲ್ಫಿ ಪಾಯಿಂಟ್ಗಳು ಗಮನ ಸೆಳೆದವು. ಸಿರಿಧಾನ್ಯಗಳಿಂದ ತಯಾರಿಸಿದ್ದ ನಟ ಪುನೀತ್ ರಾಜಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಪ್ರತಿಮೆಗಳಂತೂ ಎಲ್ಲರ ಮನಸೂರೆಗೊಂಡವು. ಮಹಿಳಾ, ರೈತ ದಸರಾಗಳೂ ನಡೆದವು. ಜನಪದ ಕಲಾ ತಂಡಗಳ ಮತ್ತು ಸ್ತಬ್ದ ಚಿತ್ರಗಳ ಮೆರವಣಿಗೆಯು ಆಕರ್ಷಣೀಯವಾಗಿದ್ದವು. ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ನೀಡಿದ ಸಮಯಾವಕಾಶವು ಕಡಿಮೆಯಿತ್ತು. ಸಮೂಹ ನೃತ್ಯ ನೀಡಿದ ತಂಡಗಳು, ಸುಗಮ ಸಂಗೀತ, ಭಕ್ತಿ ಗೀತೆ, ಜನಪದ ಗೀತೆ, ತತ್ವಪದ, ಸೋಬಾನೆ, ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಪವಾಡಗಳ ಕುರಿತ ಗಾಯನಗಳಿಗೂ ಸಮಯಾವಕಾಶ ಸಾಕಾಗಲಿಲ್ಲ ಎಂಬ ಅಸಮಾಧಾನವೂ ವೇದಿಕೆಯಲ್ಲಿಯೇ ಕೇಳಿಬಂತು.
ಮುಂದಿನ ವರ್ಷವಾದರೂ ಚಾಮರಾಜೇಶ್ವರ ದೇವಾಲಯದ ಮುಂಭಾಗ ವೇದಿಕೆ ನಿರ್ಮಾಣ ಕೈಬಿಟ್ಟು ಕ್ರೀಡಾಂಗಣದಲ್ಲಿ ಹಾಕಬೇಕು. ಹೊರ ಜಿಲ್ಲೆಗಳ ವೈವಿಧ್ಯಮಯ ಜನಪದ ಹಾಗೂ ಇತರೆ ಕಾರ್ಯಕ್ರಮಗಳನ್ನು ಜಿಲ್ಲೆಯ ಜನರಿಗೆ ಉಣಬಡಿಸಬೇಕು. ಹೊಸತನದ ಗಾಯನ ಆಲಿಸುವಂತಾಗಬೇಕು. ಸರ್ಕಾರ ನೀಡುವ ಅನುದಾನದಲ್ಲಿಯೇ ಅಚ್ಚುಕಟ್ಟಾಗಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮಗಳನ್ನು ಆಯೋಜಿಸಿ ಮೆಚ್ಚುಗೆ ಗಳಿಸಬೇಕು. ಜನರನ್ನು ಒಳಗೊಂಡ ಕಾರ್ಯಕ್ರಮವೆಂದರೆ ಲೋಪ ದೋಷಗಳು ಇರುತ್ತವೆ. ಇವುಗಳ ನಡುವೆಯೇ ಉತ್ತಮ ಕಾರ್ಯಕ್ರಮ ನಡೆಸಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಜಿಲ್ಲಾಡಳಿತ ಜನರ ನಿರೀಕ್ಷೆಗೆ ಸ್ಪಂದಿಸಬೇಕು.
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…