ಎಡಿಟೋರಿಯಲ್

ಸಿನಿಮಾಟೋಗ್ರಾಫ್ – (ತಿದ್ದುಪಡಿ) ಮಸೂದೆಯಿಂದ ಪೈರಸಿ ನಿಗ್ರಹ ಸಾಧ್ಯವೇ?

 1952ರ ಸಿನಿಮಾಟೋಗ್ರಾಫ್ – ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ರಾಜ್ಯಸಭೆ, ಲೋಕಸಭೆ ಎರಡರಲ್ಲೂ ಹಸಿರು ನಿಶಾನೆ ದೊರೆತಿದೆ. ಸಿನಿಮಾಟೋಗ್ರಫಿ (ತಿದ್ದುಪಡಿ) ಮಸೂದೆ -2023 ಮುಖ್ಯವಾಗಿ ಪೈರಸಿ, ವಯಸ್ಸಿಗೆ ಅನುಗುಣವಾಗಿ ಪ್ರಮಾಣ ಪತ್ರ, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮಾನ್ಯತೆ ಮೊದಲಾದ ಅಂಶಗಳನ್ನು ಒಳಗೊಂಡಿದೆ.

ಸಿನಿಮಾಟೋಗ್ರಾಪ್ – ಕಾಯ್ದೆಗೆ ತಿದ್ದುಪಡಿ ತರುವ ಶಿಫಾರಸನ್ನು 2019ರಲ್ಲೇ ಶ್ಯಾಮ್ ಬೆನಗಲ್ ಅಧ್ಯಕ್ಷತೆಯ ಸಮಿತಿ ನೀಡಿತ್ತು. ಅದು ಆಗ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲಿಲ್ಲ. ನಂತರ ಲೋಕಸಭೆಯ ವಿಷಯ ಸಮಿತಿಗೆ ಇದನ್ನು ಒಪ್ಪಿಸಲಾಯಿತು. ಅದು ಹಲವು ಬದಲಾವಣೆಗಳನ್ನು ಸೂಚಿಸಿತು. 2021ರಲ್ಲಿ ಈ ಮಸೂದೆಯ ಕರಡನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಯಿತು. ಈ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಂಡಿಸಿದ ‘ಸಿನಿಮಾಟೋಗ್ರಫಿ (ತಿದ್ದುಪಡಿ) ಮಸೂದೆ 2023 ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಅಂಗೀಕಾರ ಪಡೆದಿದೆ. ಇಷ್ಟರಲ್ಲೇ ಅದು ಕಾಯ್ದೆಯಾಗಿ ಬರಲಿದೆ.

ಪೈರಸಿಯಿಂದ ಭಾರತೀಯ ಚಲನಚಿತ್ರೋದ್ಯಮಕ್ಕೆ ವಾರ್ಷಿಕ 20,000 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎನ್ನುವುದು ಲೆಕ್ಕಾಚಾರ. ಹೊಸ ಕಾಯ್ದೆ ಇದನ್ನು ತಡೆಯುವಲ್ಲಿ ಸಹಕಾರಿಯಾಗಬಲ್ಲದು ಎನ್ನುವುದು ಸಚಿವರ ಅಭಿಪ್ರಾಯ. ಹೊಸ ನಿಯಮದಂತೆ ಚಿತ್ರಮಂದಿರಗಳಲ್ಲಿ ಇಲ್ಲವೇ ಇತರೆಡೆಗಳಲ್ಲಿ ಅನಧಿಕೃತ ರೆಕಾರ್ಡಿಂಗ್ ಮತ್ತು ಪೈರಸಿ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಿರುವುದೇ ಅಲ್ಲದೆ ಅದಕ್ಕೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಈ ಶಿಕ್ಷೆ ಮೂರು ತಿಂಗಳಿಂದ ಮೂರು ವರ್ಷಗಳವರೆಗೂ ಆಗಬಹುದು, ಮಾತ್ರವಲ್ಲದೆ ಮೂರು ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದೆ ದಂಡ ವಸೂಲಿ ಮಾಡಬಹುದು. ಈ ದಂಡದ ಮೊತ್ತವನ್ನು ಮೂರು ಲಕ್ಷ ರೂ.ಗಳಿಂದ, ಚಿತ್ರದ ನಿರ್ಮಾಣ ವೆಚ್ಚದ ಪ್ರತಿಶತ ಐದರವರೆಗೂ ಏರಿಸಲು ಅವಕಾಶ ಇದೆ.

ಇದು ಪೈರಸಿಗೆ ಕಡಿವಾಣ ಹಾಕಲು ಸಹಕಾರಿಯಾಗಬಲ್ಲದು ಎನ್ನುವುದು ಸಾಮಾನ್ಯ ಗ್ರಹಿಕೆ. ಆದರೆ, ಈ ನೆಲದ ಕಾನೂನು ಯಥಾವತ್ ಜಾರಿಯಾಗುವುದು ಬಹಳಷ್ಟು ಸಂದರ್ಭಗಳಲ್ಲಿ ಕಡಿಮೆ ಎಂದು ಹೇಳುವವರೂ ಇದ್ದಾರೆ. ಕಾನೂನು ಚಾಪೆಯಡಿಗೆ ತೂರಿದರೆ, ಅದನ್ನು ಮುರಿಯುವ ಮಂದಿ ರಂಗೋಲಿಯಡಿಗೂ ಹೋಗುತ್ತಾರೆ ಎನ್ನುವುದು ಹೊಸದೇನೂ ಅಲ್ಲ.

ಪೈರಸಿ ನಿಗ್ರಹಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ಎಂದೋ ಕಾಯ್ದೆ ಬಂದಿದೆ. ಗೂಂಡಾ ಕಾಯ್ದೆಯ ಅಡಿಗೆ ಪೈರಸಿಯನ್ನು ಸೇರಿಸಲಾಗಿದೆ. ಆದರೆ, ಈ ತನಕ ಈ ಕಾಯ್ದೆಯಿಂದಾಗಿ ಕಂಬಿ ಎಣಿಸಿದವರು ಎಷ್ಟು ಮಂದಿ ಎಂದು ಕೇಳಿದರೆ ನಕಾರಾತ್ಮಕ ಉತ್ತರ ಸಿಗಬಹುದು. ಹೊಸ ತಾಂತ್ರಿಕ ಬೆಳವಣಿಗೆಗಳು, ಡಿಜಿಟಲ್ ತಂತ್ರಜ್ಞಾನ ಈ ಪೈರಸಿ ಮಾಡುವ ಮಂದಿಗೆ ವರಪ್ರದವಾಗಿದೆ ಎನ್ನುವುದು ಇದರಿಂದ ನೊಂದವರ ಅನುಭವ.

ಯಾವುದೇ ಚಿತ್ರ, ವಿಶೇಷವಾಗಿ ಅದ್ಧೂರಿ ವೆಚ್ಚದ ಚಿತ್ರ ತೆರೆಕಂಡ ಕೆಲವೇ ಕ್ಷಣಗಳಲ್ಲಿ ಅದರ ಪ್ರತಿ ಮಾಡಿ ಜಾಲತಾಣಗಳಿಗೆ ರವಾನಿಸಲಾಗುತ್ತದೆಯಂತೆ. ಅದು ನಮ್ಮ ದೇಶದಲ್ಲೇ ಆದರೆ ಪರವಾಗಿಲ್ಲ. ಬೇರೆ ದೇಶಗಳ ಜಾಲತಾಣಗಳ ಮೂಲಕ ಈ ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ; ನಮ್ಮ ದೇಶದ ಕಾನೂನು ಅಲ್ಲಿ ಲಾಗೂ ಆಗುವುದಿಲ್ಲ ಎನ್ನಲಾಗುತ್ತಿದೆ. ‘ನೀವು ಯಾವುದೇ ಚಿತ್ರದ ಹೆಸರು ಹೇಳಿದರೆ, ಕ್ಷಣಾರ್ಧದಲ್ಲಿ ಅದನ್ನು ಜಾಲತಾಣದಿಂದ ಇಳಿಸಿಕೊಡುವ ವ್ಯವಸ್ಥೆ (ಪೈರಸಿ ಪ್ರತಿ) ಇದೆ. ದೆಹಲಿಯಲ್ಲಂತೂ ಇದು ರಾಜಾರೋಷವಾಗಿ ನಡೆಯುತ್ತದೆ, ಬೆಂಗಳೂರಿನಲ್ಲಿ ಕೂಡ’ ಎನ್ನುತ್ತಾರೆ ಹಿರಿಯ ನಿರ್ದೇಶಕರೊಬ್ಬರು.

ಈ ನಿಟ್ಟಿನಲ್ಲಿ ಸಿನಿಮಾಟೋಗ್ರಾಫ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ವ್ಯವಸ್ಥೆ ಆಗಬೇಕು. ಸಿನಿಮಾಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಜವಾಬ್ದಾರಿ ಇರುವುದು ಈ ಕಾಯ್ದೆಗೆ ಸಂಬಂಸಿ ಮಾತ್ರ.

ಸಂಸತ್ತಿನಲ್ಲಿ ಮಂಡಿಸಿದ ಪ್ರಸ್ತಾವಿತ ಮಸೂದೆಯಲ್ಲಿ ಕನ್ನಡ ಚಿತ್ರ ನಿರ್ದೇಶಕರಾದ ಕೆ.ಎಂ.ಶಂಕರಪ್ಪ ಅವರು ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 6(1) ಅಸಾಂವಿಧಾನಿಕ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯ ಅದನ್ನು ಮಾನ್ಯ ಮಾಡಿತು. ಕೇಂದ್ರ ಸರ್ಕಾರ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಅಲ್ಲಿ ಕೂಡ ಶಂಕರಪ್ಪನವರ ವಾದವೇ ಗೆದ್ದಿತು.

ಸಿನಿಮಾಟೋಗ್ರಾಫ್ ಕಾಯಿದೆ 1952ರ ಸೆಕ್ಷನ್ 6(1) ಅಸಾಂವಿಧಾನಿಕ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಲು ಕಾರಣ ಏನೆಂದರೆ, ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಚಲನಚಿತ್ರಗಳನ್ನು ಪ್ರಮಾಣೀಕರಿಸಲು ಅರೆ-ನ್ಯಾಯಾಂಗ ಸಂಸ್ಥೆಯನ್ನು ಸ್ಥಾಪಿಸಿದ ಮೇಲೆ ಆ ಕೆಲಸದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ. ಅಂತಹ ಹಸ್ತಕ್ಷೇಪಕ್ಕಾಗಿ ಮಾಡಲಾದ ಯಾವುದೇ ನಿಬಂಧನೆಯು ಕಾನೂನಿನ ನಿಯಮಕ್ಕೆ ವಿರುದ್ಧವಾಗಿರುತ್ತದೆ ಮತ್ತು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ ಎನ್ನುವುದಾಗಿತ್ತು. ಹೊಸ ತಿದ್ದುಪಡಿಯಲ್ಲಿ ಸೆಕ್ಷನ್ 6(1) ತೆಗೆದು ಹಾಕಲಾಗಿದೆ.

ಶಂಕರಪ್ಪನವರ ಕುರಿತಂತೆ ಬಹಳ ಮಂದಿಗೆ ತಿಳಿದಿರಲಾರದು. ಅವರು ಕಾಲೇಜಿನ ಶಿಕ್ಷಣದ ನಂತರ ಪೂನಾದಲ್ಲಿರುವ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ತರಬೇತಿ ಪಡೆದವರು. ಆ ದಿನಗಳಲ್ಲಿ ಅವರು ನಿರ್ಮಿಸಿ, ನಿರ್ದೇಶಿಸಿದ ಕಿರುಚಿತ್ರ ‘ನಲ್ಲಿಯಲ್ಲಿ ನೀರು ಬಂತು’ ಅವರಿಗೆ ಹೆಸರು ತಂದು ಕೊಟ್ಟಿತು.

1974ರಲ್ಲಿ ಅವರು ಬಸವರಾಜ ಕಟ್ಟೀಮನಿಯವರ ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಚಿತ್ರಿಸಿದ ಕಾದಂಬರಿ ಆಧರಿಸಿ ‘ಮಾಡಿ ಮಡಿದವರು’ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಂದಿತ್ತು. ಚಲನಚಿತ್ರಕ್ಕೆ ಸಂಬಂಧಪಟ್ಟ ರಾಜ್ಯ ಸರ್ಕಾರದ ಹಲವು ಸಮಿತಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

ಚಲನಚಿತ್ರಗಳಿಗೆ ನೀಡುತ್ತಿದ್ದ ಪ್ರಮಾಣಪತ್ರಗಳಲ್ಲಿ “ua’ ಇನ್ನು ಮುಂದೆ ವಯಸ್ಸಿನ ಆಧಾರದ ಮೇಲೆ ಮೂರು ರೀತಿಯಲ್ಲಿ ನೀಡಲಾಗುವುದು. ‘ua 7+’ ua 13+’ ಮತ್ತು ua 16+. ಹೆತ್ತವರು ಅಥವಾ ಪೋಷಕರೊಂದಿಗೆ ಹೋಗಿ ವೀಕ್ಷಿಸಬಹುದಾದ ಚಿತ್ರಗಳಿವು. ಏಳು ವರ್ಷ ವಯಸ್ಸಿನವರೆಗೆ ಮಕ್ಕಳು ಹೆತ್ತವರ ಜೊತೆ ಹೋಗಿ ನೋಡಬಹುದಾದ ಚಿತ್ರಕ್ಕೆ ua 7+ಹಾಗೆಯೇ ಹದಿಮೂರು ಮತ್ತು ಹದಿನಾರು ವರ್ಷ ಪ್ರಾಯದ ಮಕ್ಕಳು ಹೆತ್ತವರೊಂದಿಗೆ ನೋಡಬಹುದಾದ ಚಿತ್ರಗಳಿಗೆ’ua 7+’,ua 16+’ ಮತ್ತು  16+ ಪ್ರಮಾಣಪತ್ರ ನೀಡಲಾಗುವುದು.

ಉಳಿದಂತೆ ‘u’ ಸಾರ್ವಜನಿಕರಿಗೆ ಮುಕ್ತ ಮತ್ತು ‘s’ ವಯಸ್ಕರಿಗೆ ಮಾತ್ರ ಹಾಗೂ ‘t ‘ ವೈದ್ಯಕೀಯ ಮತ್ತಿತರ ವೃತ್ತಿಪರ ಚಿತ್ರಗಳಿಗೆ ನೀಡುವ ಪ್ರಮಾಣಪತ್ರದಲ್ಲಿ ಬದಲಾವಣೆ ಇರುವುದಿಲ್ಲ.

ಈ ಹಿಂದೆ ಪ್ರಮಾಣಪತ್ರದ ಅವಧಿ ಹತ್ತು ವರ್ಷಗಳಿಗೆ ಸೀಮಿತವಾಗಿತ್ತು. ಹತ್ತು ವರ್ಷಗಳು ಕಳೆದ ಮೇಲೆ ಮತ್ತೆ ಪ್ರಮಾಣಪತ್ರ ಪಡೆಯಬೇಕಿತ್ತು. ಕಳೆದ ಕೆಲವು ವರ್ಷಗಳಿಂದ ಇದನ್ನು ತೆಗೆದುಹಾಕಲಾಗಿತ್ತು. ತಿದ್ದುಪಡಿಯಲ್ಲಿ ಅದರ ಪ್ರಸ್ತಾಪವಿದೆ. ಒಮ್ಮೆ ಪಡೆದ ಪ್ರಮಾಣಪತ್ರಕ್ಕೆ ಶಾಶ್ವತ ಸಿಂಧುತ್ವ ಇರುತ್ತದೆ ಎನ್ನುವುದು ಈ ಸಾಲು.

ಚಿತ್ರಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನಗಳಿಗೆ ವಯೋ ಮಾನಕ್ಕನುಗುಣವಾಗಿ ವಿವಿಧ ಪ್ರಮಾಣಪತ್ರಗಳನ್ನು ಪ್ರಮಾಣೀಕರಣ ಮಂಡಳಿ ನೀಡುತ್ತದೆ. ಆದರೆ ದೂರದರ್ಶನದಲ್ಲಿ ಪ್ರಸಾರಕ್ಕೆ ಚಿತ್ರಗಳು ಮರು ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಅವು ಆಕ್ಷೇಪಿತ ದೃಶ್ಯಗಳು, ಚಿತ್ರಿಕೆಗಳನ್ನು ಕತ್ತರಿಸಿ ʼW’ ಪ್ರಮಾಣ ಪತ್ರ ಪಡೆಯಬೇಕು, ಇಲ್ಲದೆ ಹೋದರೆ ಅವುಗಳನ್ನು ಪ್ರಸಾರ ಮಾಡುವಂತಿಲ್ಲ.

ಈ ತಿದ್ದುಪಡಿಗಳು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪ್ರಮಾಣೀಕರಣ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಚಲನಚಿತ್ರ ಪೈರಸಿಯ ಬೆದರಿಕೆಯನ್ನು ಸಮಗ್ರವಾಗಿ ನಿಗ್ರಹಿಸುತ್ತದೆ. ಇದರಿಂದ ಚಿತ್ರೋದ್ಯಮ ಅತಿ ವೇಗವಾಗಿ ಬೆಳವಣಿಗೆ ಕಾಣಬಹುದು, ಅಲ್ಲದೆ ಚಿತ್ರೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಎನ್ನುವುದು ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರ ಅಭಿಪ್ರಾಯ.

ವಿವಿಧ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿರುವ ಭಾರತದ ಚಲನಚಿತ್ರೋದ್ಯಮ ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ, ವಾರ್ಷಿಕವಾಗಿ 3000ಕ್ಕೂ ಹೆಚ್ಚು ಚಲನಚಿತ್ರಗಳು ತಯಾರಾಗುತ್ತಿವೆ. ಸಿನಿಮಾ ಮಾಧ್ಯಮ, ಉಪಕರಣಗಳು ಮತ್ತು ಸಂಬಂಽತ ತಂತ್ರಜ್ಞಾನದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ ಪೈರಸಿ ಹಾವಳಿಯೂ ಹೆಚ್ಚಾಗಿದೆ. ಈಗ ಅಂಗೀಕಾರವಾಗಿರುವ ‘ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ- 2023’ ಪೈರಸಿಯ ಹಾವಳಿಯನ್ನು ತಡೆಗಟ್ಟುವಲ್ಲಿ ಮತ್ತು ಭಾರತೀಯ ಚಲನಚಿತ್ರೋದ್ಯಮವನ್ನು ಸಬಲೀಕರಣಗೊಳಿಸುವಲ್ಲಿ ಸಾಕಷ್ಟು ನೆರವಾಗಲಿದೆ ಎನ್ನುತ್ತಾರೆ ಸಚಿವರು. ಹಾಗಾಗಲಿ.   

lokesh

Share
Published by
lokesh

Recent Posts

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

12 mins ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

2 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

2 hours ago

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ…

2 hours ago

ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು!

ದಾ. ರಾ. ಮಹೇಶ್ ವೀರನಹೊಸಹಳ್ಳಿ: ಮೂರು ದಿನಗಳಿಂದ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಓಡಿಸಲು ಹೋದ ಜನರ ಗುಂಪನ್ನೇ ಆನೆಗಳು…

2 hours ago

ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲು

ದಾವಣಗೆರೆ: ಇಲ್ಲಿನ ಗಾಂಧಿ ನಗರ ಪೊಲೀಸ್‌ ಠಾಣೆಯಲ್ಲಿ ವಿಜಯಪುರ ಶಾಸಕ ಪಾಟೀಲ ಯತ್ನಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಜ್ಯ ಕಾಂಗ್ರೆಸ್‌…

11 hours ago