ಭಾವನಾತ್ಮಕತೆ ಮತ್ತು ವಾಸ್ತವತೆಯ ಮುಖಾಮುಖಿಯ ಸಂಘರ್ಷದಲ್ಲಿ ನಾವು ಹಿರೀಕರ ಎಷ್ಟೋ ಗುರುತುಗಳನ್ನು ಕಳೆದುಹಾಕಿದೆವು
ಈಚೆಗೆ ನನ್ನ ತಮ್ಮನು, ಅಮ್ಮನು ಹಾಕಿದ ಒಂದು ಕಸೂತಿಯನ್ನು ಪತ್ತೆ ಮಾಡಿದನು. ಅಮ್ಮ ತೀರಿಕೊಂಡಾಗ ಅವನಿನ್ನೂ ಕೂಸು. ಅವನಿಗೆ ಅವಳ ಮುಖದಚಿತ್ರವು ಸ್ಮತಿಯಲ್ಲಿ ನಿಂತಿಲ್ಲ. ಹೀಗಾಗಿ ಅವಳ ಗುರುತುಗಳೆಲ್ಲವೂ ವೇದನೆಯನ್ನು ಮೀಟುತ್ತವೆ. ನಾನೂ ಆ ಕಸೂತಿಯನ್ನು ನವಿರಾಗಿ ಮುಟ್ಟಿ ಸವರಿದೆ. ನೆನಪುಗಳು ಜೀವಂತಗೊಂಡವು. ಅಮ್ಮನಿಗೆ ಬಿಡಿಬಿಡಿ ವಿವರಗಳನ್ನು ಬಿರುಕಿಲ್ಲದೆ ಹೆಣೆದು ನಿರೂಪಿಸುವ ಪ್ರತಿಭೆಯಿತ್ತು. ಅದರಂತೆಯೇ, ಬಿಳಿಬಟ್ಟೆಯ ಮೇಲೆ ಬಣ್ಣಬಣ್ಣದ ನೂಲುಗಳಿಂದ ಕಸೂತಿಯನ್ನೂ ಕ್ರಾಸ್‌ಸ್ಟಿಚ್ ಹೆಣಿಗೆಯನ್ನೂ ಮಾಡುವ ಕುಶಲತೆಯೂ ಇತ್ತು. ಮಧ್ಯಾಹ್ನದ ಹೊತ್ತಲ್ಲಿ ನೂಲಲಡಿ, ಸೂಜಿ, ಹೆಣಿಗೆಕಡ್ಡಿ, ಕತ್ತರಿಗಳಿದ್ದ ಪೆಟ್ಟಿಗೆಯನ್ನು ಬಿಚ್ಚಿಕೊಂಡು ಕಣ್ಣು-ಬೆರಳುಗಳಿಗೆ ಕೆಲಸ ಕೊಡುತ್ತಿದ್ದಳು. ಚೆಲುವಾದ ನವಿಲು ಗಿಣಿ ಚಿಟ್ಟೆ ಹೂವು ಎಲೆಬಳ್ಳಿ ಹಣ್ಣಗೊಂಚಲು ಬಟ್ಟೆಯ ಮೇಲೆ ಮೈದಳೆಯುತ್ತಿದ್ದವು. ಕಸೂತಿ ಕೆಲಸದ ಶರಪೋಶ್ ಎಂದು ಕರೆಯಲಾಗುತ್ತಿದ್ದ ಮೇಲ್ವಸ್ತ್ರಗಳನ್ನು ಮದುವೆ ಇತ್ಯಾದಿ ಶುಭಕಾರ್ಯಗಳಲ್ಲಿ ಉತ್ತುತ್ತೆ ಬಾದಾಮಿ ತಟ್ಟೆಗಳ ಮೇಲೆ ಹೊದಿಸಲು ಬಳಸಲಾಗುತ್ತಿತ್ತು. ಒಮ್ಮೆ ಬಾಬಾಬುಡನಗಿರಿ ಗುಹೆಯಲ್ಲಿರುವ ಸಂತನ ಹಾವುಗೆಯನ್ನು ಇಡಲು ಆಕೆ ಕಸೂತಿವಸ್ತ್ರ ಸಿದ್ಧಪಡಿಸಿದ್ದಳು. ಅವಳು ಸಿದ್ಧಪಡಿಸುತ್ತಿದ್ದ ಚಿಲಮನ್ ಎನ್ನಲಾಗುವ, ಎರಡು ತ್ರಿಕೋನಗಳನ್ನು ಜೋಡಿಸಿದಂತಿದ್ದ ಬಾಗಿಲತೋರಣದಲ್ಲಿ, ಇಬ್ಬರು ಹುಡುಗಿಯರು ಹೂಬಳ್ಳಿ ಹಿಡಿದು ನಿಂತಿರುತ್ತಿದ್ದರು. ನಡುವೆ ವೆಲ್‌ಕಂ ಎಂಬ ಆಂಗ್ಲಪದ. ಲಡಕಾಸಿ ಬಾಡಿಗೆ ಮನೆಗಳ ಬಾಗಿಲಿಗೆ ಕಟ್ಟಲಾಗುತ್ತಿದ್ದ ಈ ತೋರಣಗಳು, ನರಕದಲ್ಲೂ ಸ್ವರ್ಗಹುಟ್ಟಿಸುವ ಅಮ್ಮನ ಕತೃತ್ವದ ಪ್ರತೀಕಗಳಾಗಿದ್ದವು. ಅಮ್ಮ ಕಣ್ಮರೆಯಾದ ಬಳಿಕ, ಅವಳ ನೆನಪಿಗೆ ಆಕೆಯ ಕಸೂತಿಯಿದ್ದ ಒಂದು ಬ್ಯಾಗನ್ನು ನಾನೂ ಇರಿಸಿಕೊಂಡಿದ್ದೆ. ಅದರ ಮೇಲೆ ಎರಡು ನವಿಲುಗಳಿದ್ದವು. ಆದರೆ ಅದು ಹಳತಾಗಿ ದಾರಹಿಸಿದು ತುಂಡಾಯಿತು. ರೇಡಿಯೊ ಮೇಲೆ ಹೊದಿಸುತ್ತಿದ್ದ ದಿನವೂ ಅದನ್ನು ನೋಡುತ್ತ ಬಳಸುತ್ತ ಭಾವನಾತ್ಮಕ ನೆನಪುಗಳಿಗೆ ಮಂಕುಕವಿಯಿತು. ಅದೊಂದು ದಿನ ಕಣ್ಮರೆಯಾಯಿತು. ಭಾವನಾತ್ಮಕತೆ ಮತ್ತು ವಾಸ್ತವತೆಯ ಮುಖಾಮುಖಿಯ ಸಂಘರ್ಷದಲ್ಲಿ ನಾವು ಹಿರೀಕರ ಎಷ್ಟೋ ಗುರುತುಗಳನ್ನು ಕಳೆದುಹಾಕಿದೆವು ನೆನೆದರೆ ಎದೆ ಬಿರಿಯುತ್ತದೆ.
ಅಪ್ಪ ಹಳ್ಳಿಯಲ್ಲಿದ್ದ ಹೊಲ ಮಾರಿ ಕುಲುಮೆಗಾಗಿ ಮೂರು ಮೈಲಿ ದೂರದಲ್ಲಿದ್ದ ತರೀಕೆರೆ ಪಟ್ಟಣಕ್ಕೆ ಗುಳೆ ಬಂದಿದ್ದು, ನಮ್ಮ ಕುಟುಂಬದ ಪಾಲಿಗೆ ಕೇವಲ ಸ್ಥಳಪಲ್ಲಟವಾಗಿರಲಿಲ್ಲ. ಹೊಸಬದುಕಿನ ಜೀವನಶೈಲಿಯ ಪಲ್ಲಟವೂ ಆಗಿತ್ತು. ಪಟ್ಟಣಕ್ಕೆ ಬರುವಾಗಲೇ ಅನೇಕ ವಸ್ತುಗಳನ್ನು ಹಳ್ಳಿಯಲ್ಲೇ ವಿಲೇವಾರಿ ಮಾಡಬೇಕಾಯಿತು. ಸಣ್ಣದೋಣಿಯಂತಿದ್ದ ಹುಲ್ಲಬಾನಿಯನ್ನು ಚಿಕ್ಕಪ್ಪನಿಗೆ ಕೊಟ್ಟೆವು. ನೊಗ ಪಟಗಣ್ಣಿ ನೇಗಿಲು ಕುಂಟೆ ಎಡೆಕುಂಟೆ ಇತ್ಯಾದಿಗಳು ಮಾವನಿಗೆ ಹೋದವು. ಆದರೆ ದವಸ ಸಂಗ್ರಹಿಸುವ ವಾಡೆಗಳನ್ನು ಅಮ್ಮ ಯಾರಿಗೂ ಕೊಡಲೊಪ್ಪಲಿಲ್ಲ. ‘ಬಾಡಿಗೆ ಮನೆ ಸಣ್ಣದು ಕಣೇ’ ಎಂದು ಅಪ್ಪ ಗೊಣಗಿದ. ಆಯಾ ದಿನದ ದುಡಿಮೆಯಲ್ಲಿ ಅಂಗಡಿ ರೇಶನ್ನು ತಂದು ಹಸಿವು ಚುಕ್ತಾ ಮಾಡಿಕೊಳ್ಳಬೇಕಾದ ಪಟ್ಟಣದಲ್ಲಿ, ವರ್ಷಕ್ಕೆ ಬೇಕಾಗುವ ಕಾಳನ್ನು ವಾಡೆಗಳಲ್ಲಿ ತುಂಬಿಡುವ ಸಾಧ್ಯತೆಯಿರಲಿಲ್ಲ. ಆದರೂ ಅಮ್ಮ ಹಠಬಿದ್ದು ಬಂಡಿಯಲ್ಲಿ ಹುಲ್ಲುಹಾಸಿಗೆ ಮಾಡಿ, ಅದನ್ನು ಮಲಗಿಸಿ ಹುಶಾರಾಗಿ ಸಾಗಿಸಿ ತಂದಳು.
ವಾಡೆಗಳಿಗೆ ಎದೆಯುದ್ದದ ಪೀಪಾಯಿಯ ಆಕಾರವಿತ್ತು. ಬುಡದಲ್ಲಿ ನೆಲದ ಮೇಲೆ ಕೂರಲು ತಾಟಿನಗಲದ ಸಪಾಟು ತಳ. ತಳದಿಂದ ಹಿರಿದಾಗುತ್ತಾ ಮೇಲೆ ಹೊರಟು ನಡುವೆ ಬಸುರಿಯಂತೆ ಉಬ್ಬಿ ಎದೆಯ ಬಳಿ ಕುಗ್ಗಿ ಬಾಟಲಿ ಕೊರಳಿನಂತೆ ಕಿರಿದಾಗುವ ಕಂಠ. ಹೂಜಿಗಿರುವಂತೆ ಪುಟ್ಟ ಬಾಯಿ. ಅಂಗೈದಪ್ಪವಿದ್ದು ಸಲೀಸಾಗಿ ಎತ್ತಾಡಲಾಗದಂತೆ ತಿಣ್ಣವಾಗಿದ್ದವು. ಖಾಲಿಯಿದ್ದಾಗ ಬೆರಳ ಹಿಂಗಂಟುಗಳಿಂದ ಬಾರಿಸಿದರೆ ಧಂಧಂ ಮದ್ದಲೆನಾದ ಹೊರಡುತ್ತಿತ್ತು. ಕುಂಬಾರರು ಹೇಗಾದರೂ ದೊಡ್ಡ ಮಣ್ಣಮುದ್ದೆಯನ್ನು ಕುಲಾಲ ಚಕ್ರದ ಮೇಲಿಟ್ಟು ಆಡಿಸಿದರೊ, ಒಳಗೆ ಕೈತೂರಿಸಿ ಹಲಗೆಯಿಂದ ತಟ್ಟಿದರೊ, ಆವಿಗೆಯಲ್ಲಿಟ್ಟು ಬೇಯಿಸಿದರೊ? ಪ್ರತಿ ವಾಡೆಯೂ ಒಂದು ಪಲ್ಲ ದವಸ ಹಿಡಿಸುತ್ತಿತ್ತು. ಕಾಳು ತುಂಬಿದ ಬಳಿಕ ಅವುಗಳ ಕಿರುಬಾಯ ಮೇಲೆ ಮಡಕೆ ಬೋರಲು ಹಾಕಿ, ಸಗಣಿ-ಕೆಮ್ಮಣ್ಣು ಬೆರಸಿದ ಕೆಸರಿನಿಂದ ಸೀಲ್ ಮಾಡಲಾಗುತ್ತಿತ್ತು.
ಹಳ್ಳಿಯ ಮನೆಯಲ್ಲಿ ಈ ವಾಡೆಗಳನ್ನು ತುಸು ಕತ್ತಲಿರುವ ದವಸದ ಕೋಣೆಯಲ್ಲಿ ಗೋಡೆಯ ಮಗ್ಗುಲಿಗೆ ಕಟ್ಟಿದ ಜಗಲಿಯ ಮೇಲೆ ನಿಲ್ಲಿಸಲಾಗಿತ್ತು. ಸುಣ್ಣ ಹೊಡೆಸಿಕೊಂಡ ಅವು ಡೈನೊಸಾರಸ್ ಮೊಟ್ಟೆಗಳಂತಿದ್ದವು. ಒಂದರಲ್ಲಿ ರಾಗಿ, ಇನ್ನೊಂದರಲ್ಲಿ ದಬ್ಬಳಸಾಲೆ ಭತ್ತ. ಜಡಿಮಳೆ ಹಿಡಿದಾಗ ವಾಡೆಗಳ ಸೀಲನ್ನೊಡೆದು ಅಯಾ ದಿನಕ್ಕೆ ಬೇಕಾದಷ್ಟು ಕಾಳನ್ನು ತೆಗೆದು ಮಿಲ್ಲಿಗೆ ಹಾಕಿಸಿ ಮುಂದಿನ ಸುಗ್ಗಿಯವರೆಗೆ ಹುಶಾರಾಗಿ ದಿನ ದೂಡಲಾಗುತ್ತಿತ್ತು. ಆಲೆಮನೆ ಸೀಜನ್ನಿನಲ್ಲಿ ಇವು ಬೆಲ್ಲದುಂಡೆಗಳಿಗೂ ಆಶ್ರಯ ಕಲ್ಪಿಸುತ್ತಿದ್ದವು. ಒಮ್ಮೆ ತಳದಲ್ಲಿದ್ದ ಬೆಲ್ಲ ಹೆಕ್ಕಲು ಹೋಗಿ, ಪಾತಾಳದಲ್ಲಿ ಪಾಪಚ್ಚಿಯಂತೆ ತಲೆಕೆಳಗಾಗಿ ಬಿದ್ದಿದ್ದೆ. ಕತ್ತಲು ತುಂಬಿದ ಗುಹೆಯಲ್ಲಿ ಸಿಕ್ಕು ಉಸಿರುಗಟ್ಟಿ ದಂತಾಗಿ ಲಬೊಲಬೊ ಹೊಯ್ದುಕೊಂಡೆ. ಅಪ್ಪ ಬಂದು ಸತ್ತ ಇಲಿಯನ್ನು ಬಾಲಹಿಡಿದು ಎತ್ತುವಂತೆ ನನ್ನ ಕಾಲು ಹಿಡಿದು ಮೇಲೆಕ್ಕೆತ್ತಿ ನಾಲ್ಕು ಇಕ್ಕಡಿಸಿದ್ದನು.
ಹಳ್ಳಿಯಲ್ಲಿ ಅನ್ನದಾತರ ಗೌರವ ಸಂಪಾದಿಸಿದ್ದ ಈ ವಿಶಿಷ್ಟ ಜೀವಿಗಳಿಗೆ ಪೇಟೆಯ ಇಕ್ಕಟ್ಟು ಮನೆಯಲ್ಲಿ ಜಾಗವಿರಲಿಲ್ಲ. ಇವು ಇಲ್ಲಿ ನಿರುದ್ಯೋಗಿಗಳಾಗಿ, ಅನಪೇಕ್ಷಿತ ನಿರಾಶ್ರಿತರಂತೆ ಇಟ್ಟ ಕಡೆ ಕೂರುತ್ತ, ಕೂತಕಡೆ ಹೊಂದಿಕೆಯಾಗದೆ ಕಿರಿಕಿರಿ ಹುಟ್ಟಿಸಿದವು. ‘ಎಲ್ಲಾದರೂ ಇಡಿ, ಅಡಿಗೆ ಮನೆಯಲ್ಲಿ ಬೇಡ’ ಎಂದು ಅಕ್ಕ ನಿಷ್ಠುರ ನುಡಿದಳು. ಅವಳು ಗೋಡೆಗೆ ಹಲಗೆಗಳನ್ನು ಹೊಡೆದು, ಸ್ಟ್ಯಾಂಡನ್ನಾಗಿಸಿ, ಅದರ ಮೇಲೆ ಪಾತ್ರೆಗಳನ್ನು ಬೆಳಗಿ ಸಾಲಾಗಿಟ್ಟು, ಶೋರೂಂ ಮಾಡಿಕೊಂಡಿದ್ದಳು. ದೊಡ್ಡಕ್ಕ-ಭಾವ ಬಂದರೆ ಉಳಿಯಲೆಂದು ಮಾಡಿದ್ದ ಸಣ್ಣ ಬೆಡ್‌ರೂಮನ್ನು ಮಿಕ್ಕಸಮಯದಲ್ಲಿ ನಾನು ಓದುಗೋಣೆ ಮಾಡಿಕೊಂಡಿದ್ದೆ. ಉಳಿದಿದ್ದು ನಡುಮನೆ. ಅಲ್ಲಿಟ್ಟರೆ ಮನೆಮಂದಿ ಊಟಕ್ಕೆ ಕೂರುವುದು ಮಲಗುವುದು ಎಲ್ಲಿ?
ಅಮ್ಮ ವೀಟೊ ಚಲಾಯಿಸಿ ವಾಡೆಗಳನ್ನು ನಡುಮನೆಯಲ್ಲೇ ಇರಿಸಿದಳು. ತುಂಬಲು ದವಸವಿಲ್ಲದ ಖಾಲಿಬಿದ್ದಿದ್ದ ಅವುಗಳೊಳಗೆ ನಾವು ಹಳೇಬಟ್ಟೆ ಗೋಣಿಚೀಲ ಇತ್ಯಾದಿ ಬೇಡವಾದ ಸಾಮಾನು ಹಾಕುವ ತೊಟ್ಟಿಯಾಗಿಸಿದೆವು. ಕ್ಲಾಸ್‌ಮೇಟುಗಳು ಮನೆಗೆ ಬಂದಾಗ ಇವನ್ನು ಬೆರಗುಪಟ್ಟು ನೋಡುತ್ತಿದ್ದರು. ಮನೆಗೆ ಬಂದ ಮೊಮ್ಮಕ್ಕಳ ಸ್ನೇಹಿತರಿಗೆ ಅಸಂಬದ್ಧವಾದ ಪ್ರಶ್ನೆ ಕೇಳುವ ಹಳಗಾಲದ ಮುದುಕರಂತೆ, ಇವು ಮುಜುಗರ ಮಾಡುತ್ತಿದ್ದವು. ನಾನೂ ಸಣ್ಣಕ್ಕನೂ ಅವನ್ನು ಮನೆಯಿಂದ ಹೊರಹಾಕಲು ಸಂಚು ಹೂಡಿದೆವು. ಹಬ್ಬಕ್ಕೆಂದು ಮನೆಗೆ ಸುಣ್ಣಬಣ್ಣ ಮಾಡುವಾಗ ಮನೆಯೊಳಗಿನ ಸಾಮಾನುಗಳನ್ನೆಲ್ಲ ಅಂಗಳಕ್ಕೆ ಹಿಡಿಯುವ ಪದ್ಧತಿಯಿತ್ತು. ವಾಡೆಯನ್ನು ನೆಲದ ಮೇಲೆ ಉರುಳಿಸಿಕೊಂಡು ಹೊರಗೊಯ್ದೆವು. ನಾಲ್ಕು ಉರುಳು ಉರುಳಿರಬೇಕು. ಖರಕ್ ಸದ್ದು ಬಂತು. ಭೂಕಂಪನಕ್ಕೆ ಬಿರುಕು ಬಿಡುವ ಭೂಮಿಯಂತೆ ವಾಡೆಯ ನಡುಭಾಗದಲ್ಲಿ ಕೂದಲುಗೆರೆ ಬಿಟ್ಟುಕೊಂಡಿತು. ಮೊದಲು ಬಾರಿಸಿದಾಗ ಬರುತ್ತಿದ್ದ ಮಧುರ ಸುನಾದದ ಬದಲು ಒಡಕು ಸದ್ದಿನ ಆರ್ತನಾದ ಕೇಳಿಬರತೊಡಗಿತು. ಅಮ್ಮ ಹೊರಗೆ ಧಾವಿಸಿ ಒಮ್ಮೆ ಸಂಕಟದಿಂದ ದಿಟ್ಟಿಸಿದಳು. ‘ಒಡೆದು ಹಾಕಿದರೇನಪ್ಪ? ನಿಮ್ಮ ಕಣ್ಣಿಗೆ ಬಹಳ ಚುಚ್ಚುತ್ತಿತ್ತು. ನಿಮ್ಮ ಹೊಟ್ಟೆ ತಣ್ಣಗಿರಲಿ’ ಎಂದಳು.
ಮನೆಯ ಸಾರಣೆ ಮುಗಿದ ಬಳಿಕ ಅಂಗಳಕ್ಕೆ ಬಂದಿದ್ದ ಸಾಮಾನು ಒಳಗೆ ಪಯಣಿಸಿದವು. ವಾಡೆ ಹೊರಗೇ ಉಳಿದವು. ಒಡೆದ ವಾಡೆಯ ಕೆಳಗಿನ ಒಡಕಿಗೆ ಅಕ್ಕ ಮಣ್ಣುಹಾಕಿ ಪುದಿನ ಬೇರುಗಳನ್ನು ನೆಟ್ಟಳು. ಕಂಠಭಾಗವು ಒಳಕಲ್ಲಿನಲ್ಲಿ ಭತ್ತ ಕುಟ್ಟುವಾಗ ಕಾಳುಹಾರದಂತೆ ತಡೆವ ಕುದುರಾಯಿತು. ವಾಡೆಗಳನ್ನು ತೆರವುಗೊಳಿಸಿದ್ದರಿಂದ ನಡುಮನೆ ವಿಶಾಲವಾಯಿತು. ಒಡೆಯದ ವಾಡೆಯನ್ನು ಸೂರಿನಿಂದ ಮಳೆನೀರು ಬೀಳುವ ಜಾಗದಲ್ಲಿಟ್ಟೆವು. ಒಂದು ಕಾರ್ಗಾಲದ ರಾತ್ರಿ. ಜಡಿಮಳೆಯ ಜುರೋ ಸದ್ದಿನ ನಡುವೆ ‘ಧೊಪ್’ ಸದ್ದಾಯಿತು. ಹೋಗಿ ಕಂಡರೆ, ನೀರಿನ ಭಾರಕ್ಕೆ ನೆಲಜರಿದೊ, ತನ್ನ ಸಂಗಾತಿಯ ಅಗಲಿಕೆಯಿಂದ ಬದುಕಬಾರದು ಎಂದೊ ಎರಡನೇ ವಾಡೆ ಆಯತಪ್ಪಿ ಉರುಳಿಕೊಂಡು ಹೋಳಾಗಿತ್ತು. ಅಮ್ಮ ಈಗ ಮಾತಾಡಲಿಲ್ಲ. ‘ನನ್ನ ತಂಗಿಗಾದರೂ ಕೊಟ್ಟುಬಂದಿದ್ದರೆ ಇರುತ್ತಿದ್ದವು’ ಎಂದು ಗೊಣಗಿದಳು. ಅವನ್ನು ಆಕೆ ಬೆಟ್ಟದಾವರೆಕೆರೆಯ ಕುಂಬಾರರಿಗೆ ತಲಾ ಒಂದು ಪಲ್ಲ ರಾಗಿ ಕೊಟ್ಟು ಮಾಡಿಸಿದ್ದಳು. ಅವುಗಳ ಜೊತೆ ಅವಳಿಗೆ ಇನ್ನೂ ಯಾವೆಲ್ಲ ನೆನಪುಗಳಿದ್ದವೊ? ಈಗಲೂ ಜಾನಪದ ಮ್ಯೂಸಿಯಂಗಳಲ್ಲೊ ಹಳ್ಳಿಗಾಡಿನ ಮನೆಗಳಲ್ಲೊ ವಾಡೆ ಕಂಡರೆ, ಮುದುಕರನ್ನು ದೂಡಿಕೊಂದ ಭಾವ ಮುತ್ತಿಕೊಳ್ಳುತ್ತದೆ.
ಮುಂದೆ ಅಮ್ಮ ತೀರಿಕೊಂಡ ಬಳಿಕ, ಆಕೆಯ ತಾಮ್ರ ಹಿತ್ತಾಳೆಯ ವಸ್ತುಗಳನ್ನು ಅಕ್ಕಂದಿರು ಕ್ರಮವಾಗಿ ಹಂಚಿಕೊಂಡರು. ಅವುಗಳಲ್ಲಿ ಸುತ್ತಿಗೆ ಏಟಿನಿಂದ ಕಚ್ಚುಹಾಕಿ ಮಾಡಿದ ಕೈತೊಳೆವ ಹಿತ್ತಾಳೆಯ ತಾಂಬಾಳವನ್ನು ನಾನು ಇರಿಸಿಕೊಳ್ಳಲು ಬಯಸಿದೆ. ಡೈನಿಂಗ್ ಟೇಬಲ್ಲೂ ಪಕ್ಕದಲ್ಲಿ ವಾಶ್‌ಬೇಸಿನ್ನೂ ಇರುವುದರಿಂದ, ಅದರಿಂದ ಪ್ರಯೋಜನವಿಲ್ಲ ಎಂದು ಬಾನು ನುಡಿದಳು. ಅಮ್ಮನ ಕಿವಿಯಲ್ಲಿದ್ದ ಹರಳಿನ ವಾಲೆ ಮೂಗುತಿಗಳನ್ನು ಅಕ್ಕಂದಿರು ನನಗೆ ಕೊಟ್ಟು, ಒಂದು ಉಂಗುರ ಮಾಡಿಸಿ ನೆನಪಿಗೆ ಹಾಕಿಕೊ ಎಂದರು. ಚಿನಿವಾರನು ಅವನ್ನು ಕರಗಿಸಿ ಅವುಗಳಲ್ಲಿ ಬಂಗಾರದಂಶ ಕಮ್ಮಿಯಿದೆಯೆಂದೂ ಆಭರಣ ಮಾಡಲು ಬರುವುದಿಲ್ಲವೆಂದೂ ಬೆಂಕಿಕಡ್ಡಿ ಗಾತ್ರದ ಎರಡು ತುಂಡುಗಳನ್ನು ಹಿಂದಿರುಗಿಸಿದನು. ಅವು ಎಲ್ಲಿಯೊ ಕಳೆದುಹೋದವು. ಅಮ್ಮನ ಮುಖಕ್ಕೆ ಲಕ್ಷಣಕೊಟ್ಟಿದ್ದ ಕಿವಿ ಬುಗುಡಿಗಳನ್ನು ಕಷ್ಟದ ದಿನಗಳಲ್ಲಿ ಒತ್ತೆಯಿಟ್ಟು ಮತ್ತೆ ಬಿಡಿಸಿಕೊಳ್ಳಲು ಆಗಲೇ ಇಲ್ಲ. ಅಮ್ಮ ಕೊಟ್ಟ ಹಸುಗಳನ್ನು ಅಕ್ಕಂದಿರು ಬಹಳ ಕಾಲ ಸಂಭಾಳಿಸಿದರು. ಹಳ್ಳಿಗಳನ್ನು ಬಿಟ್ಟು ಪೇಟೆಗಳಿಗೆ ನೆಲೆಸಲು ಅವರು ಬರುವಾಗ ಅವನ್ನೆಲ್ಲ ಅನಿವಾರ್ಯವಾಗಿ ಮಾರಬೇಕಾಯಿತು.
ಬದುಕಿನಲ್ಲಿ ಜರುಗುವ ಘಟನೆಗಳನ್ನು ನೆನಪಾಗಿ ಮಿದುಳಿನ ಗೋದಾಮು ಹಿಡಿದಿಡುತ್ತದೆ. ಆದರೆ ಕಾಲವು ಮರೆವೆಂಬ ಕಸಬರಿಗೆಯಿಂದ ಕೆಲವು ಸ್ಮತಿಗಳನ್ನು ಗುಡಿಸಿ ಹಾಕುತ್ತದೆ. ಕೆಲವು ಮಾತ್ರ ಹಸಿಗೋಡೆಗೆ ಬಡಿದ ಹರಳಿನಂತೆ ಉಳಿಯುತ್ತವೆ. ಕಾರಣ, ಅವುಗಳಲ್ಲಿ ತುಂಬಿದ ಭಾವನಾತ್ಮಕ ತೀವ್ರತೆ. ಈ ಭಾವನಾತ್ಮಕತೆ ಕೆಲವು ವಸ್ತುಗಳಲ್ಲೂ ಅಡಗಿರುತ್ತದೆ. ಆದರೆ ಅವನ್ನು ನಾವೇ ಬೇಹೊಣೆಯಿಂದಲೊ ದುಡುಕಿನಿಂದಲೊ ಕಳೆದುಹಾಕುತ್ತೇವೆ. ಅವುಗಳ ಜತೆ ನಮ್ಮಷ್ಟು ಭಾವನಾತ್ಮಕ ನಂಟಿಲ್ಲದ ಹೊಸ ತಲೆಮಾರು ತಮ್ಮ ಹಕ್ಕನ್ನು ಚಲಾಯಿಸಿ, ಅವನ್ನು ನಿರ್ದಯವಾಗಿ ನಿವಾರಿಸುತ್ತದೆ. ಬದುಕು ಮುಂದೆ ಚಲಿಸುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…