ಬ್ರಿಟನ್ ನ ಅತಿ ಕಿರಿಯ ಪ್ರಧಾನಿಯಾಗಿರುವ ರಿಷಿ ಸುನಕ್ ಭಾರತೀಯ ಮೂಲದವರು, ಅವರು ಹಿಂದೂ, ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ – ಈ ಎಲ್ಲವೂ ಸತ್ಯಗಳೇ. ಹಾಗಂತ ಅವರು ಭಾರತದ ಪರವಾಗಿಯೇ ಕೆಲಸ ಮಾಡುತ್ತಾರೆ. ಭಾರತಕ್ಕೆ ಅವರಿಂದಾಗಿ ಎಲ್ಲಾ ರೀತಿಯ ನೆರವು ಸಿಗುತ್ತದೆ ಎಂಬುದು ಮಾತ್ರ ಮಿಥ್ಯ.
ವಾಸ್ತವವಾಗಿ ರಿಷಿ ಸುನಕ್ ಬ್ರೆಕ್ಸಿಟ್ ಪರವಾಗಿರುವವರು. ಅಂದರೆ ತಮ್ಮ ದೇಶದ ಭೌಗೋಳಿಕ ಗಡಿಗಳನ್ನಷ್ಟೇ ಅಲ್ಲದೇ ವಾಣಿಜ್ಯ ಗಡಿಗಳನ್ನು ಬಿಗಿಗೊಳಿಸುವ ಇರಾದೆ ಅವರದು. ಈಗಾಗಲೇ ರುವಾಂಡ ನಿರಾಶ್ರಿತರ ಗಡಿಪಾರಿಗೆ ತಯಾರಿ ನಡೆಯುತ್ತಿದೆ. ಬ್ರಿಟನ್ ನಲ್ಲಿ ವೀಸಾ ಮುಗಿದ ಭಾರತೀಯರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಬ್ರೆಕ್ಸಿಟ್ ಪರವಾಗಿರುವ ನಿಲುವಿನ ರಿಷಿ ಸುನಕ್ ವೀಸಾ ಮುಗಿದ ಒಂದೂವರೆ ಲಕ್ಷ ಭಾರತೀಯರ ನೆರವಿಗೆ ಬರುತ್ತಾರೆಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.
ಏಕೆಂದರೆ ವೀಸಾ ಮುಗಿದರೂ ಅಲ್ಲೇ ಉಳಿದಿರುವವರನ್ನು ಹೊರ ಹಾಕುವ ನಿಲುವು ಹೊಂದಿರುವ ಭಾರತೀಯ ಮೂಲದ ಸುಯೇಲಾ ಬ್ರೇವರ್ಮನ್ ಅವರನ್ನೇ ರಿಷಿ ಸುನಕ್ ಗೃಹ ಸಚಿವರಾಗಿ ಮುಂದುವರೆಸಿದ್ದಾರೆ. ಮುಂಬರುವ ದಿನಗಳಲ್ಲಿ ವೀಸಾ ಮುಗಿದ ಭಾರತೀಯರು ಸಂಕಷ್ಟ ಎದುರಿಸುವ ಸಾಧ್ಯತೆ ಹೆಚ್ಚೇ ಇದೆ.
ಎಲ್ಲಾ ಅಂದುಕೊಂಡಿದ್ದಂತೆ ಆಗಿದ್ದರೆ, ಈ ದೀಪಾವಳಿ ಹೊತ್ತಿಗೆ ಭಾರತ- ಬ್ರಿಟನ್ ನಡುವೆ ಮುಕ್ತವಾಣಿಜ್ಯ ಒಪ್ಪಂದಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಹಿ ಹಾಕಬೇಕಿತ್ತು. ಬೋರಿಸ್ ಜಾನ್ಸನ್ ಕಾಲದಲ್ಲಿ ಈ ಒಪ್ಪಂದಗಳ ಕರಡು ಸಿದ್ದವಾಗಿತ್ತು. ಆದರೆ, ಪ್ರಧಾನಿ ಬದಲಾದ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ಸಹಿ ಬೀಳುವುದೂ ಮುಂದೆ ಹೋಗಿದೆ.
ಆದರೆ, ಈಗಾಗಲೇ ಆಗಿರುವ ಕರಡು ಒಪ್ಪಂದಗಳಿಗೆ ಮುಂದೆ ಸಹಿ ಬೀಳುತ್ತದೆಯೇ? ರಿಶಿ ಸುನಕ್ ಅವಧಿಯಲ್ಲಿ ಅದಕ್ಕೂ ಅನುಮಾನವಿದೆ. ಏಕೆಂದರೆ ಈಗಾಗಲೇ ಆಗಿರುವ ಕರಡು ಒಪ್ಪಂದಗಳ ಬಗ್ಗೆ ಗೃಹ ಸಚಿವೆ ಸುಯೇಲಾ ಬ್ರೇವರ್ ಮನ್ ತಕರಾರು ತೆಗೆದಿದ್ದಾರೆ. ಅವರ ಪ್ರಕಾರ, ಕರಡು ಒಪ್ಪಂದಗಳು ಬ್ರೆಕ್ಸಿಟ್ ಆಶಯಗಳಿವೆ ವಿರುದ್ಧವಾಗಿವೆ.
ಸುಯೇಲಾ ಬ್ರೇವರ್‍ಮ್ಯಾನ್ ಅವರು ಈ ಒಪ್ಪಂದದ ಕೆಲ ವಿವರಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪ ಎತ್ತಿದ್ದಾರೆ. ಈ ಒಪ್ಪಂದ ಆದರೆ ಇನ್ನಷ್ಟು ಭಾರತೀಯರು ಬ್ರಿಟನ್‍ಗೆ ವಲಸೆ ಬರುತ್ತಾರೆ. ಈಗಾಗಲೇ ವಿಸಾ ಅವಧಿ ಮುಗಿದ ಭಾರತೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈಗ ರೂಪಿಸಿರುವ ಭಾರತದ ಜೊತೆಗಿನ ಒಪ್ಪಂದ ಬ್ರೆಕ್ಸಿಟ್ ಒಪ್ಪಂದದಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಬಹಿರಂಗವಾಗಿ ಬ್ರೇವರ್‍ಮ್ಯಾನ್ ಹೇಳಿ ವಿವಾದವನ್ನು ಎಬ್ಬಿಸಿದ್ದಾರೆ.
ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಕಾಲದಲ್ಲಿ ಸಚಿವರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಮಾತುಕತೆಗಳು ನಡೆದಿದ್ದವು. ಶಿಕ್ಷಣ, ವಾಣಿಜ್ಯ, ಉದ್ಯೋಗ, ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಎರಡೂ ದೇಶಗಳ ಗಡಿಯನ್ನು ಮುಕ್ತಗೊಳಿಸುವ ಉದ್ದೇಶದ ಮುಕ್ತ ವಾಣಿಜ್ಯ ಒಪ್ಪಂದದ ಕರಡುಗಳು ತಯರಾಗಿದ್ದವು. ಜಾನ್ಸನ್ ಮುಂದುವರೆಯದ ಕಾರಣ ಸಹಿ ಬಿದ್ದಿಲ್ಲ. ರಿಶಿ ಸುನಕ್ ಭಾರತೀಯ ಮೂಲದವರು ಎಂಬ ಕಾರಣದಿಂದ ತಕ್ಷಣ ಸಹಿ ಬೀಳುತ್ತದೆ ಎಂಬುದು ಮಿಥ್ಯೆ.
ರಿಶಿ ಸುನಕ್ ಅವರಿಗೆ ಭಾರತದೊಂದಿಗಿನ ವ್ಯಾಪಾರ ವಾಣಿಜ್ಯ ಬಾಂಧವ್ಯ ಬಿಗಿಗೊಳಿಸಿಕೊಳ್ಳುವುದಕ್ಕಿಂತಲೂ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬ್ರಿಟನ್ ದೇಶವನ್ನು ಸರಿದಾರಿಗೆ ತರುವುದಕ್ಕೆ ಮೊದಲ ಆದ್ಯತೆ. ಹಣದುಬ್ಬರ ಜಿಗಿದಿದೆ. ಜನಜೀವನ ಅಸ್ತವ್ಯಸ್ತವಾಗುವತ್ತ ಸಾಗಿದೆ. ಲಿಜ್ ಟ್ರಾಸ್ ಪ್ರಧಾನಿಯಾಗಿ ಅತ್ಯಲ್ಪ ಅವಧಿಯಲ್ಲಿ ಮಾಡಿದ ಆರ್ಥಿಕ ಅದ್ವಾನಗಳನ್ನು ರಿಸಿ ಸುನಕ್ ಸರಿಪಡಿಸಬೇಕಿದೆ.
ಎಲ್ಲಕ್ಕೂ ಮಿಗಿಲಾಗಿ ದೇಶದ ಆರ್ಥಿಕತೆಯಷ್ಟೇ ಕ್ಷೋಭೆಗೆ ಒಳಗಾಗಿರುವ ಪಕ್ಷವನ್ನೂ, ದಶದಿಕ್ಕುಗಳತ್ತ ಮುಖಮಾಡಿರುವ ಪಕ್ಷದ ನಾಯಕರನ್ನು ತಣಿಸಿ ಸಂತೈಸಬೇಕಿದೆ. ಈ ಹಂತದಲ್ಲಿ ಬ್ರಿಟನ್ ವಲಸಿಗರ ಬಗ್ಗೆ ಉದಾಹರತೆ ತೋರುವಷ್ಟು ಔದಾರ್ಯ ಬೆಳಸಿಕೊಳ್ಳಲಾಗದು. ಅಂದರೆ, ಬ್ರಿಟನ್ ನಲ್ಲಿರುವ ವೀಸಾ ಅವದಿ ಮುಗಿದ ಭಾರತೀಯರನ್ನು ವಾಪಸ್ ಕಳುಹಿಸಲು ಮುಂದಾದರೆ ಉಭಯ ದೇಶಗಳ ನಡುವಿನ ಬಾಂಧವ್ಯ ಸಡಿಲವಾಗುವುದಂತೂ ನಿಜ. ಅದರ ಪರಿಣಾಮ ವಾಣಿಜ್ಯ ವಹಿವಾಟಿಗೂ ವಿಸ್ತರಿಸುತ್ತದೆ. ಸದ್ಯಕ್ಕೆ ವಾಪಾಸ್ ಕಳುಹಿಸುವ ಸಾಧ್ಯತೆಗಳಂತೂ ಇಲ್ಲ.
ಬ್ರಿಟನ್ನಿನಲ್ಲೂ ಹೊರಗಿನವರು ಮತ್ತು ಒಳಗಿನವರು ಎನ್ನುವ ಭಾವನೆ ದೊಡ್ಡದಾಗಿ ಬೆಳೆದಿದೆ. ಅದು ಅಲ್ಲಿನ ಜನರ ಅವಕಾಶಗಳನ್ನು ಹೊರಗಿನವರು ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆಯಿಂದ ಬಂದದ್ದು. ಆದರೆ, ಈ ಭಾವನೆಗಳು ಅತಿರೇಕಕ್ಕೆ ಹೋಗಿಲ್ಲ, ಸಹಿಷ್ಣುತೆ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ರಿಷಿ ಸುನಕ್ ಪ್ರಧಾನಿಯಾಗಿರುವುದೇ ಸಾಕ್ಷಿ.
ರಿಶಿ ಸುನಕ್ ಬ್ರಿಟನ್ ರಾಜಕೀಯಕ್ಕೆ ತುಲನಾತ್ಮಕವಾಗಿ ಹೊಸಬರಾಗಿದ್ದರೂ, ತಮ್ಮ ಚಾಣಕ್ಯ ನಡೆಗಳ ಮೂಲಕ ತ್ವರಿತಗತಿಯಲ್ಲಿ ಉತ್ಯುನ್ನತ ಪದವಿಗೆ ಏರಿದ್ದಾರೆ. ಬಿಳಯರಲ್ಲದ ಮೊದಲ ಪ್ರಧಾನಿಯಾಗಿದ್ದಾರೆ. ಅವರು ಹುಟ್ಟುವ ಮುಂಚೆಯೇ ಅವರ ಪೂರ್ವಜರು ಬ್ರಿಟನ್ ಗೆ ವಲಸೆ ಹೋಗಿದ್ದರು. ಹೀಗಾಗಿ ಭಾರತದ ಮೂಲದವರಾದರೂ ಸುನಕ್ ಅವರಿಗೆ ಭಾರತದ ಬಗೆಗೆ ಅಂತ ಭಾವನಾತ್ಮಕ ಬೆಸುಗೆ ಏನಿಲ್ಲ. ಇರುವ ಬೆಸುಗೆ ಎಂದರೆ ಅವರು ಇನ್ಫೋಸಿಸ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಅವರನ್ನು ಮದುವೆಯಾಗಿದ್ದಾರೆ. ಅಕ್ಷತಾ ಬ್ರಿಟನ್ ಪ್ರಜೆಯಾಗಿ ಅಲ್ಲೇ ನೆಲೆಸಿದ್ದಾರೆ. ಇನ್ಫೋಸಿಸ್ ನಲ್ಲಿ ಅಕ್ಷತಾ ಅವರು 6000 ಕೋಟಿ ರೂಪಾಯಿ ಮೌಲ್ಯದಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ಷೇರುಗಳಿಗೆ ಅವರು ಲಾಭಾಂಶ ಪಡೆಯುತ್ತಿದ್ದಾರೆ. ಆ ಲಾಭಾಂಶದ ಮೇಲಿನ ತೆರಿಗೆ ತಕರಾರು ಇನ್ನೂ ಉಳಿದಿದೆ.
ಕನ್ಸರ್ವೇಟಿವ್ ಪಕ್ಷದೊಳಗಿನ ಇತ್ತೀಚಿನ ರಾಜಕೀಯ ಪ್ರಕ್ಷುಬ್ಧತೆ ಮತ್ತು ದೇಶದ ಆರ್ಥಿಕ ಕ್ಷೋಬೆಗಳಿಂದಾಗಿಯೇ ಸುನಕ್ ಅವರಿಗೆ ಬ್ರಿಟಿಷ್ ಪ್ರಧಾನಿಯಾಗಲು ಅವಕಾಶವನ್ನು ಒದಗಿದೆ. ಈ ಎರಡೂ ಸಮಸ್ಯೆಗಳನ್ನು ಅವರು ಸಮರ್ಥವಾಗಿ ನಿಭಾಯಿಸಿದರೆ ಅವರ ಮುಂದಿನ ಹಾದಿ ಸುಗಮವಾಗಲಿದೆ. ಈ ಹಾದಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವುದರಿಂದ ಉದ್ಭವಿಸಿರುವ ಹೊಸ ಸಮಸ್ಯೆಗಳನ್ನು ಅವರು ಎದುರಿಸಬೇಕಿದೆ.
ಪ್ರಧಾನಿಯಾಗಿ ತಮ್ಮ ಮೊದಲ ಭಾಷಣದಲ್ಲಿ ಅವರು ದೇಶವು ಗಹನವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಎತ್ತಿ ತೋರಿಸಿದರು. ಇದಲ್ಲದೆ, ಕೋವಿಡ್‌ನ ನಂತರದ ಪರಿಣಾಮವು ಇನ್ನೂ ಉಳಿದಿದೆ ಮತ್ತು ಉಕ್ರೇನ್ ಮೇಲೆ ರಷ್ಯಾ ಆಕ್ರಮಣವು ಇಂಧನ ಮಾರುಕಟ್ಟೆಗಳನ್ನು ಮತ್ತು ಪ್ರಪಂಚದಾದ್ಯಂತ ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಿದೆ ಎಂದು ಹೇಳಿದ್ದರು. “ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆ” ಮೂಲಕ “ಆರ್ಥಿಕ ಸ್ಥಿರತೆಯನ್ನು” ತರುವುದಾಗಿ ಭರವಸೆ ನೀಡಿದ್ದಾರೆ.
ಸುನಕ್ ಒಬ್ಬ ತಂತ್ರಜ್ಞ, ಮತ್ತು ಕೋವಿಡ್ ಸಂಕಷ್ಟದ ಸಮಯದಲ್ಲಿ ವಿತ್ತ ಸಚಿವರಾಗಿ ಸಾಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಪಕ್ಷ ತನ್ನ ನಾಯಕನಾಗಿ ಆಯ್ಕೆ ಮಾಡಿದೆ. ಆದರೆ ಸುನಕ್ ಅವರಿಗೆ ರಾಜಕೀಯವೇ ನಿಜವಾದ ಸವಾಲು ಎಂಬುದು ವಾಸ್ತವಿಕ ಸತ್ಯ.
ಸಂತಸದ ಸಂಗತಿ ಏನೆಂದರೆ ಬ್ರಿಟನ್ ನಂತಹ ಬ್ರಿಟನ್ನೇ ಬಿಳಿಯರಲ್ಲದ ವ್ಯಕ್ತಿಯನ್ನು ಪ್ರಧಾನಿಯಾಗಿ ಒಪ್ಪಿಕೊಂಡಿದೆ. ಅದು ಧರ್ಮ, ವರ್ಣ ಸಹಿಷ್ಣುತೆಯ ಸ್ಪಷ್ಟ ನಿದರ್ಶನವೂ ಹೌದು. ಧರ್ಮ, ಜಾತಿಗಳ ಹೆಸರಿನಲ್ಲಿ ಒಡೆದು ಆಳುತ್ತಿರುವವರಿಗೆ, ಅಸಹಿಷ್ಣತೆಯನ್ನೇ ಬಂಡವಾಳ ಮಾಡಿಕೊಂಡ ಮೂಲಭೂತವಾದಿಗಳಿಗೆ ಒಂದೊಂದು ಪ್ರಾಯೋಗಿಕ ನೀತಿ ಪಾಠ.
ಸಹಿಷ್ಣುತೆಯ ಬರಗಾಲದಲ್ಲಿ ಮುಂಗಾರಿನ ಮಿಂಚಿನಂತೆ ಬ್ರಿಟನ್ ಜನತೆ ತಮ್ಮ ವರ್ಣದವರಲ್ಲದವರೊಬ್ಬರನ್ನು ಪ್ರಧಾನಿಯಾಗಿ ಒಪ್ಪಿಕೊಂಡು ಆದರ್ಶ ಮೆರೆದಿದ್ದಾರೆ. ಆ ಮೂಲಕ ಜಗತ್ತಿಗೊಂದು ಸಂದೇಶ ನೀಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಸಹಿಷ್ಣುತೆಯಲ್ಲೇ ಪರಿಹಾರ ಇದೆ ಎಂಬುದು ಆ ಸಂದೇಶ!
(ವಿವಿಧ ಮೂಲಗಳಿಂದ)
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…