ಎಡಿಟೋರಿಯಲ್

ರಿಷಿ ಪ್ರಧಾನಿಯಾಗಿದ್ದರಿಂದ ಬ್ರಿಟನ್ನಿಗೆ ಒಳ್ಳೆಯದಾಗಲಿದೆಯೇ ?

ಟಿ.ಎಸ್. ವೇಣುಗೋಪಾಲ್

ರಿಷಿ ಸುನಕ್ ಈಗ ಇಂಗ್ಲೆಂಡಿನ ಪ್ರಧಾನಿ. ಜಗತ್ತು ನಿರೀಕ್ಷೆ, ಅನುಮಾನ ಹಾಗೂ ಆತಂಕದಿಂದ ಅವರ ಹೆಜ್ಜೆಗಳನ್ನು ಗಮನಿಸುತ್ತಿದೆ. ಭಾರತ ಮೂಲದವರಾದ್ದರಿಂದ ಭಾರತದಲ್ಲೂ ಸುದ್ದಿಯಲ್ಲಿದ್ದಾರೆ. ಇಂಗ್ಲೆಂಡಿನ ಬಿಳಿಯರಲ್ಲದ ಮೊದಲ ಪ್ರಧಾನಿ, ಮೊದಲ ಹಿಂದೂ ಪ್ರಧಾನಿ, ಅತಿ ಶ್ರೀಮಂತ, ಅತಿ ಕಿರಿಯ ವಯಸ್ಸಿನ ಪ್ರಧಾನಿ, ಹೀಗೆ ಹಲವಾರು ‘ಮೊದಲ ಪಟ್ಟ’ಗಳನ್ನು ಸೇರಿಸುತ್ತಾ ಹೋಗಬಹುದು. ತನ್ನ ಪಕ್ಷದ ಸದಸ್ಯರ ಬೆಂಬಲ ಕಳೆದುಕೊಂಡು ಲಿಜ್ ಟ್ರಸ್ ಪದಚ್ಯುತಿಗೊಂಡ ನಂತರ ರಿಷಿ ಪ್ರಧಾನಿಯಾಗಿದ್ದಾರೆ. ಅವರ ತಾತ ಈಗ ಪಾಕಿಸ್ತಾನಕ್ಕೆ ಸೇರಿರುವ ಆಗಿನ ಬ್ರಿಟಿಷ್ ಪಂಜಾಬ್ ಪ್ರಾಂತ್ಯದವರು. ಅತ್ಯಂತ ಕಡಿಮೆ ಅವಧಿಯಲ್ಲಿ ಬೆಳೆಯುತ್ತಾ ರಿಷಿ ಬ್ರಿಟನ್ನಿನ ಪ್ರಧಾನಿಯಾಗಿದ್ದು ನಿಜಕ್ಕೂ ದೊಡ್ಡ ವಿಷಯವೆ. ಇಂಗ್ಲೆಂಡ್ ಐರೋಪ್ಯ ಒಕ್ಕೂಟದಿಂದ ಹೊರಗೆ ಬಂದ ಆರು ವರ್ಷಗಳಲ್ಲಿ ಇವರು ಐದನೇ ಪ್ರಧಾನಿ.
ಐರೋಪ್ಯ ಒಕ್ಕೂಟದಿಂದ ಹೊರಬಂದರಷ್ಟೇ ಬ್ರಿಟನ್ನಿನ ಬೆಳವಣಿಗೆ ಸಾಧ್ಯ ಅಂತ ಹಲವರಿಗೆ ಅನ್ನಿಸತೊಡಗಿತ್ತು. ಆದರೆ ಹೊರಗೆ ಬರಬೇಕೆಂಬ ಅಭಿಪ್ರಾಯಕ್ಕೆ ಬೆಂಬಲಿಗರಿದ್ದಷ್ಟೇ ವಿರೋಧಿಗಳೂ ಇದ್ದರು. ಆಗಿನ ಪ್ರಧಾನಿ ಡೇವಿಡ್ ಕೆಮರಾನ್ ಅವರೂ ಒಕ್ಕೂಟದಲ್ಲಿ ಉಳಿಯಬೇಕೆಂದು ಪ್ರಬಲವಾಗಿ ವಾದಿಸಿದ್ದರು. “ಐರೋಪ್ಯ ಒಕ್ಕೂಟದೊಳಗೆ ಇರುವವರೆಗೆ ಬ್ರಿಟನ್ ಸುರಕ್ಷಿತವಾಗಿರಬಹುದು. ಆಗಷ್ಟೇ ಅದು ಹೆಚ್ಚು ಸದೃಢವಾಗಿ ಹಾಗೂ ಉತ್ತಮವಾಗಿ ಬೆಳೆಯಬಲ್ಲದು. ಈ ಬಗ್ಗೆ ನನಗೆ ಅನುಮಾನವಿಲ್ಲ” ಎಂದಿದ್ದರು.ಲೇಬರ್ ಪಕ್ಷದ 90%ರಷ್ಟು ಶಾಸಕರು ಐರೋಪ್ಯ ಒಕ್ಕೂಟದಲ್ಲೇ ಇಂಗ್ಲೆಂಡ್ ಮುಂದುವರಿಯಲಿ ಎಂದು ಬಯಸಿದ್ದರು. ಒಕ್ಕೂಟದಿಂದ ಹೊರ ಬಂದರೆ ಇಂಗ್ಲೆಂಡಿನ ಆರ್ಥಿಕ ಬೆಳವಣಿಗೆಗೆ ತೊಂದರೆಯಾಗುತ್ತದೆಎಂದು ಅವರಿಗೂ ಅನಿಸಿತ್ತು. ಆದರೆ ಹೊರಬೇಕೆಂಬ ಒತ್ತಾಯ ಹೆಚ್ಚಿನ ಕನ್ಸರ್ವೇಟಿವ್ ಸದಸ್ಯರದ್ದು. ಐರೋಪ್ಯ ಒಕ್ಕೂಟದ ನಿಯಂತ್ರಣ ಕಳಚಿಕೊಂಡರಷ್ಟೇ ಇಂಗ್ಲೆಂಡಿನ ಬೆಳವಣಿಗೆ ಸಾಧ್ಯವೆಂದುಅವರು ವಾದಿಸುತ್ತಿದ್ದರು. ಕನ್ಸರ್ವೇಟಿವ್ ಪಕ್ಷದ ಬಹುಪಾಲು ಬೆಂಬಲಿಗರು ಶ್ರೀಮಂತರು, ಆರ್ಥಿಕವಾಗಿ ಸ್ಥಿತಿವಂತರು. ಲೇಬರ್ ಪಕ್ಷದ ಹೆಚ್ಚಿನ ಬೆಂಬಲಿಗರು ಆರ್ಥಿಕವಾಗಿ ಕೆಳಸ್ತರದವರು.
ಪ್ರಧಾನಿ ಡೇವಿಡ್ ಕೆಮರಾನ್ ಅವರಿಗೆ ಜನರ ಅಭಿಪ್ರಾಯ ತಿಳಿಯುವುದು ಸೂಕ್ತವೆನಿಸಿತು. 2016ರಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮೊದಲಾದರು.ಇದರಲ್ಲ್ಲಿ ಬ್ರೆಕ್ಸಿಟ್ ಅಂದರೆ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರಬೇಕೇಬೇಡವೇಎನ್ನುವುದನ್ನು ಕುರಿತು ಅಭಿಪ್ರಾಯ ತಿಳಿಸುವಂತೆ ಜನರನ್ನು ಕೇಳಿದರು. ಆದರೆ ಹೊರಗೆ ಬರುವುದು ಅಂದರೇನು, ಭವಿಷ್ಯದಲ್ಲಿ ಒಕ್ಕೂಟದ ಜೊತೆ ಸಂಬಂಧ ಹೇಗಿರುತ್ತದೆ, ಆ ನಿರ್ಗಮನದ ನಂತರವೂ ಸಂಬಂಧ ಸೌಹಾರ್ದಯುತವಾಗಿ ಮುಂದುವರಿಯುತ್ತದೆಯೇ ಅಥವಾ ಸಂಬಂಧ ಸಂಪೂರ್ಣವಾಗಿ ಕಡಿದು ಹೋಗುವಂತಹ ಕಠಿಣ ನಿರ್ಗಮನವೇ ಇತ್ಯಾದಿಗಳ ಬಗ್ಗೆ ಸೂಚನೆಗಳಿರಲಿಲ್ಲ. 52%ರಷ್ಟು ಹೊರಹೋಗೋಣವೆಂದರು. ಬೇಸರಗೊಂಡ ಕೆಮರಾನ್ “ಜನ ಬೇರೆಯದೇ ದಾರಿ ಆರಿಸಿಕೊಂಡಿದ್ದಾರೆ. ಈ ದಾರಿಯಲ್ಲಿ ದೇಶವನ್ನು ಮುನ್ನಡೆಸಲು ಬೇರೆಯ ನಾಯಕತ್ವ ಬೇಕಾಗುತ್ತದೆ” ಎಂದು ಹೇಳಿ ಅಧಿಕಾರದಿಂದ ಹೊರಬಂದರು.
ಥೆರೆಸಾ ಮೇ ಪ್ರಧಾನಿಯಾದರು. ಥೆರೆಸಾಕೂಡ ಮೊದಲು ಬ್ರೆಕ್ಸಿಟ್ ಬೇಡÀ ಅಂದಿದ್ದವರೆ. ಆದರೆ ನಂತರ ನಿಲುವನ್ನು ಬದಲಿಸಿಕೊಂಡರು. ಅವರಿಗೆ ನಾರ್ವೆ ಮಾದರಿ ಆಯ್ಕೆಗೆ ಅವಕಾಶವಿತ್ತು. ಅಂದರೆ ಐರೋಪ್ಯ ಒಕ್ಕೂಟದ ನಿಯಮ-ನಿಯಂತ್ರಣಗಳನ್ನು ಒಪ್ಪಿಕೊಂಡು, ಈಗಿನ ಹಲವು ವಾಣಿಜ್ಯ ಸೌಲಭ್ಯವನ್ನು ಉಳಿಸಿಕೊಳ್ಳಬಹುದಿತ್ತು. ಪ್ರಮುಖ ವ್ಯಾಪಾರಿ ಸಂಬಂಧಗಳನ್ನೂ ಮುಂದುವರಿಸಿಕೊಂಡು ಹೋಗಬಹುದಿತ್ತು. ಜೊತೆಗೆ ಲಂಡನ್ನಿನ ಪಾರ್ಲಿಮೆಂಟಿಗೂ ಸ್ವಲ್ಪಮಟ್ಟಿನ ರಾಜಕೀಯ ಅಸ್ತಿತ್ವ ಸಿಗುವಂತೆ ನೋಡಿಕೊಳ್ಳಬಹುದಿತ್ತು. ಆದರೆ ಬ್ರೆಕ್ಸಿಟ್‍ನ ಕಟ್ಟಾ ಬೆಂಬಲಿಗರನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಸಂಪೂರ್ಣ ಪ್ರತ್ಯೇಕತೆಯನ್ನು ಥೆರೇಸಾ ಬೆಂಬಲಿಸಿದರು. ವಲಸೆ, ವ್ಯಾಪಾರ, ದೇಶೀಯ ಕಾರ್ಮಿಕರ ಹಕ್ಕುಗಳು, ಮಾನವ ಹಕ್ಕು ಹಾಗೂ ಆರ್ಥಿಕತೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಿಕೊಳ್ಳುವುದಕ್ಕೆ ಇಂಗ್ಲೆಂಡಿಗೆ ಸ್ವಾತ್ರಂತ್ರ್ಯ ಬೇಕೆಂದರು. ಆದರೆ ಅವರ ದಾರಿ ಅಷ್ಟು ಸುಲಭವಾಗಿರಲಿಲ್ಲ. ಅವರ ನಿಲುವಿಗೆ ಪಾರ್ಲಿಮೆಂಟಿನಲ್ಲಿ ಬಹುಮತ ಸಿಗಲಿಲ್ಲ. ಕೊನೆಗೆ ಅವರೂ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು.
ನಂತರ ಬೋರಿಸ್ ಜಾನ್ಸನ್ ‘ಬ್ರೆಕ್ಸಿಟ್ ಮಾಡಿಯೇ ತೀರೋಣ’ ಅನ್ನುವ ಘೋಷಣೆಯೊಂದಿಗೆ ಗಾದಿಯೇರಿದರು. ಅವರನ್ನು ರಿಷಿ ಸುನಕ್ ಕೂಡ ಬೆಂಬಲಿಸಿದ್ದರು. ಅವರ ಕೆಲವು ನಿರ್ಧಾರಗಳನ್ನು ಪಾರ್ಲಿಮೆಂಟ್ ತಿರಸ್ಕರಿಸಿತು. ಚುನಾವಣೆ ಘೋಷಣೆಯಾಯ್ತು. ಅತಿ ಹೆಚ್ಚು ಮತಗಳಿಸಿ ಆಯ್ಕೆಯಾದರು.ಥ್ಯಾಚರ್ ನಂತರಅತ್ಯಂತ ಹೆಚ್ಚು ಮತ ಗಳಿಸಿದವರು ಇವರೆ. ಬ್ರೆಕ್ಸಿಟ್ ಬೆಂಬಲಿಗರು ಹೆಚ್ಚು ಇದ್ದ ಕ್ಷೇತ್ರಗಳಲ್ಲಿ ಬ್ರೆಕ್ಸಿಟ್ ಅಪಾಯಗಳನ್ನು ಕುರಿತು ಮಾತನಾಡಲು ಲೇಬರ್ ಪಕ್ಷ ಹಿಂದೇಟು ಹಾಕಿತು. ಇದು ಜಾನ್ಸನ್‍ಗೆ ಅನುಕೂಲವಾಯಿತು. ಆದರೆ ಲೇಬರ್ ಪಕ್ಷ ಚುನಾವಣೆಯಲ್ಲಿ ಸೋತಿತು ಮತ್ತು ಬ್ರೆಕ್ಸಿಟ್‍ನ ಸಾಧುತ್ವವನ್ನು ಪ್ರಶ್ನಿಸುವ ಅವಕಾಶವನ್ನು ಕಳೆದುಕೊಂಡಿತು. ಜಾನ್ಸನ್ ದೃಷ್ಟಿಯಲ್ಲ್ಲಿ “ಬ್ರೆಕ್ಸಿಟ್ ಜಾರಿಗೆ ಬಂದುಬಿಟ್ಟರೆ ರಾಷ್ಟ್ರೀಯ ಅರೋಗ್ಯ ಯೋಜನೆ ಬಲಗೊಳ್ಳುತ್ತದೆ, ತೆರಿಗೆ ಕಡಿಮೆಯಾಗುತ್ತದೆ, ಅವಶ್ಯಕ ಕಾರ್ಯಕ್ರಮಗಳಿಗೆ ತೊಡಗಿಸಲು ಸರ್ಕಾರದ ಬಳಿ ಸಾಕಷ್ಟು ಹಣ ಇರುತ್ತದೆ. ಕೂಲಿ ಹೆಚ್ಚುತ್ತದೆ. ಇಂಧನದ ಬೆಲೆ ಕಡಿಮೆಯಾಗುತ್ತದೆ.”
ಬ್ರೆಕ್ಸಿಟ್ ಸಾಧಿಸೋಣ ಎಂದು ಅಧಿಕಾರಕ್ಕೆ ಬಂದ ಜಾನ್ಸನ್‍ಬ್ರೆಕ್ಸಿಟ್ ಸಾಧಿಸಿದ್ದೇನೆ ಎಂದು ಘೋಷಿಸಿಯೂ ಬಿಟ್ಟರು. ಆದರೆ ಅದು ಘೋಷಣೆಯಾಗಿಯಷ್ಟೇ ಉಳಿಯಿತು. ಹಲವು ಪ್ರಶ್ನೆಗಳು ಇನ್ನೂ ಉತ್ತರಗಳ ನಿರೀಕ್ಷೆಯಲ್ಲೇ ಇವೆ. ಹಲವು ಹಗರಣಗಳಿಂದಜಾನ್ಸನ್ ಮಧ್ಯದಲ್ಲೇ ಅಧಿಕಾರದಿಂದ ಇಳಿಯಬೇಕಾಯಿತು. ಒಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಿದರು. ಸಂಗಡಿಗರೂ ಅವರನ್ನು ವಿರೋಧಿಸಿದ್ದರು. ಅವರ ಸಂಪುಟದಲ್ಲಿ ವಿತ್ತಮಂತ್ರಿಯಾಗಿದ್ದ ರಿಷಿಯವರೂ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದೂ ಅವರ ಮೇಲೆ ಒತ್ತಡವನ್ನು ಹೆಚ್ಚಿಸಿತ್ತು.
ನಂತರ ಲಿಜ್ ಟ್ರಸ್ ಅಧಿಕಾರಕ್ಕೆ ಹಿಡಿದರು. ಅವರು ಇಂಗ್ಲೆಂಡಿನ ಮೂರನೇ ಮಹಿಳಾ ಪ್ರಧಾನಿ. ಟ್ರಸ್ ಅಪೂರ್ಣವಾಗಿರುವ ಬ್ರೆಕ್ಸಿಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇನೆಂದರು. ಇವರು ಕೂಡ ಮೊದಲುಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಉಳಿಯಬೇಕೆಂದವರು. ಆದರೆ ನಂತರ ಬ್ರೆಕ್ಸಿಟ್ ಪರವಾಗಿ ತಮ್ಮ ನಿಲುವು ಬದಲಿಸಿಕೊಂಡರು. ಲಿಜ್ ಮುಕ್ತ ಮಾರುಕಟ್ಟೆ ಸಿದ್ಧಾಂತದ ಪ್ರಬಲ ಪ್ರತಿಪಾದಕಿ. ಬ್ರೆಕ್ಸಿಟ್ ಬೇಕೆನ್ನುವುದಕ್ಕೆ ಇವರ ವಾದ ಸರಳ. ಐರೋಪ್ಯ ಒಕ್ಕೂಟದ ಹಣಕಾಸಿನ ನಿಯಂತ್ರಣ ಹಾಗೂ ಕಾರ್ಮಿಕ ಕಾನೂನು ಬ್ರಿಟನ್ನಿಗೆ ಒಂದು ದೊಡ್ಡ ತೊಡಕಾಗಿದೆ. ಒಮ್ಮೆ ಈ ನಿಯಂತ್ರಣ ತಪ್ಪಿಬಿಟ್ಟರೆ ಆರ್ಥಿಕ ಪ್ರಗತಿಯನ್ನು ದೊಡ್ಡ ಮಟ್ಟದಲ್ಲಿ ಸಾಧಿಸಬಹುದು. ಹಣಕಾಸಿನ ನೆರವಿಲ್ಲದೆ, ಅವಶ್ಯಕ ಸಿಬ್ಬಂದಿಗಳಿಲ್ಲದೆ ಸೊರಗಿರುವರಾಷ್ಟ್ರೀಯ ಆರೋಗ್ಯ ಸೇವಾ ಯೋಜನೆಗೆ ಕೋಟ್ಯಂತರ ಹಣ ಸಿಗುತ್ತದೆ. ಬ್ರೆಕ್ಸಿಟ್ಟಿನಿಂದ ದೇಶದ ಎಲ್ಲ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ. ಸ್ವತಂತ್ರ ಬ್ರಿಟನ್ನಿನ ಜೊತೆ ವ್ಯಾಪಾರ ನಡೆಸಲು ಜಗತ್ತಿನ ದೇಶಗಳೆಲ್ಲಾ ಸಾಲು ನಿಲ್ಲುತ್ತವೆ ಎಂಬಕಿನ್ನರಿಯರ ಕಥೆಯನ್ನು ಸೃಷ್ಟಿಸಲಾಗಿತ್ತು. ಅವರ ದೃಷ್ಟಿಯಲ್ಲಿ ಇದನ್ನು ಸಾಧಿಸುವುದಕ್ಕೆ ಸರಳ ಮಾರ್ಗವೆಂದರೆ ಶ್ರೀಮಂತರ ತೆರಿಗೆಯಲ್ಲಿ ಕಡಿತ ಮಾಡುವುದು. ತೆರಿಗೆ ಕಡಿಮೆ ಮಾಡಿದ ತಕ್ಷಣ ಅವರೆಲ್ಲಾ ಅಪಾರ ಹೂಡಿಕೆ ಮಾಡಿ ದೇಶದ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುತ್ತಾರೆ. ಇದು ಟ್ರಸ್ ಒಪ್ಪಿಕೊಂಡು, ಜಾರಿಗೆ ತರಲು ಹೊರಟ ಸಿದ್ದಾಂತ.
ಪ್ರಧಾನಿಯಾದೊಡನೆ ಉತ್ಸಾಹದಿಂದ ಸೆಪ್ಟೆಂಬರ್ 23ರಂದು ಕಿರುಬಜೆಟ್ ಘೋಷಿಸಿದರು. ತೆರಿಗೆ ಕಡಿತ ಮಾಡಿದರು. ಎಲ್ಲರ ನಿರೀಕ್ಷೆ ಮೀರಿ 45%ರಷ್ಟು ಕಡಿತ ಮಾಡಿದರು. ಅದು ತಿರುಗುಬಾಣವಾಯಿತು. ಆದರೆ ತೆರಿಗೆ ಕಡಿತದಿಂದಾದ ಸಂಗ್ರಹದ ಕೊರತೆಯನ್ನು ಎಲ್ಲಾದರೂ ಸರಿದೂಗಿಸಬೇಕಲ್ಲ. ಅದು ಹೇಗೆ ಅನ್ನುವುದಕ್ಕೆ ವಿವರಣೆ ಇಲ್ಲ.ನೂರೆಂಟು ಪ್ರಶ್ನೆಗಳು ಎದ್ದವು. ಆರ್ಥಿಕ ಅನಿಶ್ಚಿತತೆ ಸೃಷ್ಟಿಯಾಯಿತು. ಮಾರುಕಟ್ಟೆ ತೀವ್ರವಾಗಿ ಪ್ರತಿಕ್ರಿಯಿಸಿತು. ಬಾಂಡ್ ಬೆಲೆ ಕುಸಿಯಿತು. ಅದರ ಬಿಸಿ ಪಿಂಚಣಿ ನಿಧಿಗೂ ತಗುಲಿತು. ಯಾಕೆಂದರೆ ಪಿಂಚಣಿ ನಿಧಿಯ ಬಹುಪಾಲು ಹಣವನ್ನು ಬಾಂಡುಗಳಲ್ಲಿ ತೊಡಗಿಸಲಾಗಿತ್ತು. ಆತಂಕದಿಂದ ಎಲ್ಲರೂ ಬಾಂಡುಗಳನ್ನು ಮಾರಲು ತೊಡಗಿದರು. ಕೊಳ್ಳುವರಿಲ್ಲದ ಬಿಕ್ಕಟ್ಟು ಪ್ರಾರಂಭವಾಯಿತು. ತಕ್ಷಣ ಇಂಗ್ಲೆಂಡಿನ ಕೇಂದ್ರ ಬ್ಯಾಂಕು ಮಧ್ಯೆ ಪ್ರವೇಶಿಸಿ 65 ಬಿಲಿಯನ್ ಪೌಂಡ್ ಮೌಲ್ಯದ ಬಾಂಡುಗಳನ್ನು ಕೊಳ್ಳಲು ಮುಂದೆ ಬಂದಿತು. ಆದರೂ ಕಿರು ಬಜೆಟ್ ಸೃಷ್ಟಿಸಿದ ಅನಿಶ್ಚಿತತೆ, ಆತಂಕದ ಬಿಕ್ಕಟ್ಟು ನಿಲ್ಲಲಿಲ್ಲ. ತೆರಿಗೆ ಕಡಿತವನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ವಿತ್ತಮಂತ್ರಿಗಳು ರಾಜೀನಾಮೆ ಕೊಟ್ಟರು. ಅಲ್ಲಿಗೂ ಅಸಮಾಧಾನÀ ಕೊನೆಯಾಗಲಿಲ್ಲ. ಕೊನೆಗೆ ಟ್ರಸ್ ರಾಜೀನಾಮೆ ಕೊಡಬೇಕಾಯಿತು. ಬ್ರಿಟನ್ನನ್ನು ಅತ್ಯಂತ ಕಡಿಮೆ ಅವಧಿ ಆಳಿದ ಪ್ರಧಾನಿಯೆನಿಸಿಕೊಂಡರು.
ಟ್ರಸ್ ಭಾವಿಸಿದ ಹಾಗೆ ದೇಶಗಳ ನಡುವೆ ವ್ಯಾಪಾರದ ಒಪ್ಪಂದಗಳು ಸುಮ್ಮನೆ ಆಗಿಬಿಡೋಲ್ಲ. ಎಲ್ಲಾ ದೇಶಗಳಿಗೆ ಪ್ರತಿಯಾಗಿ ಅವುಗಳದ್ದೇ ನಿರೀಕ್ಷೆಗಳಿರುತ್ತವೆ. ತನ್ನ ಕೆಲಸಗಾರರಿಗೆ ಅಲ್ಲಿಯ ವೀಸಾ ಸಲೀಸಾಗಿ ಸಿಗಬೇಕೆಂದು ಭಾರತ ಬಯಸುತ್ತದೆ. ಅದನ್ನು ಒಪ್ಪಿಕೊಂಡರೆ ವಲಸೆ ನಿಯಂತ್ರಣದ ಭರವಸೆ ಪೊಳ್ಳಾಗಿಬಿಡುತ್ತದೆ. ಹಾಗೆಯೇ ಟ್ರಸ್ ಅವರು ಅಂದುಕೊಂಡಂತೆ ತೆರಿಗೆ ಕಡಿತದಿಂದ ಆರ್ಥಿಕ ಪ್ರಗತಿ ಸಾಧ್ಯ ಅನ್ನುವುದೂ ಮಿಥ್ಯೆಎಂದು ಸಾಬೀತಾದರೂ ಟ್ರಸ್ ಅಂತಹ ಮುಖಂಡರು ಆ ಶವಕ್ಕೆ ಜೀವಕೊಡುವ ವಿಫಲ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಅವರಲ್ಲಿ ಆರ್ಥಿಕ ಪ್ರಗತಿಗೆ ಒಂದು ಸ್ಪಷ್ಟ ಖಚಿತ ಯೋಚನೆಯಿಲ್ಲ ಅನ್ನುವುದನ್ನು ಇವೆಲ್ಲಾ ಸೂಚಿಸುತ್ತದೆ.
ಇಂದು ಬ್ರಿಟನ್ ಆರ್ಥಿಕವಾಗಿ ಕಷ್ಟದಲ್ಲಿದೆ. ಉತ್ಪಾದಕತೆ ಕುಸಿದಿದೆ. ರಾಜಕೀಯ ಅಸ್ಥಿರತೆ ಇದೆ. ಹಣದುಬ್ಬರ ವಿಪರೀತವಾಗಿದೆ. ಇಂಧನದ ಬಿಕ್ಕಟ್ಟು ತೀವ್ರವಾಗಿದೆ. ರಾಷ್ಟ್ರೀಯ ಆರೋಗ್ಯ ಸೇವೆಯಂತಹ ಯೋಜನೆಗಳು ನಿಸ್ತೇಜಗೊಂಡಿವೆ. ಡಾಲರ್ ಎದುರು ಪೌಂಡ್ ಮಂಡಿಯೂರಿದೆ. ಐರೋಪ್ಯ ಒಕ್ಕೂಟದೊಂದಿಗಿನ 50ವರ್ಷದ ಸಂಬಂದವನ್ನು ಕಳಚಿಕೊಳ್ಳುವುದು ಸುಲಭವಲ್ಲ. ಎಷ್ಟು ಸಲ ಬೇಕಾದರೂ ಹೊರಗೆ ಹೋಗಬಹುದು. ಆದರೆ ಸಂಪೂರ್ಣ ಕಳಚಿಕೊಳ್ಳುವುದು ಕಷ್ಟ.
ಈಗ ರಿಷಿ ಸುನಕ್ ಇಂಗ್ಲೆಂಡಿನ ಪ್ರಧಾನಿಯಾಗಿದ್ದಾರೆ. ಅವರು ಚುನಾಯಿತ ಪ್ರಧಾನಿಯಲ್ಲ. ತನ್ನ ಪಕ್ಷದವರು ಆಯ್ಕೆ ಮಾಡಿದ ಅಭ್ಯರ್ಥಿ. ಹಲವು ಮಿತಿಗಳಿವೆ. ಅವರ ಬಗ್ಗೆ ಹಲವಾರು ಅನುಮಾನಗಳಿವೆ. ನೆಲದ ಮಿಡಿತವೇ ಅರಿಯದ ಅತಿಶ್ರೀಮಂತ ವ್ಯಕ್ತಿಗೆ, ಸಾಮಾನ್ಯ ಜನರ ಇಂಗ್ಲೆಂಡ್ ಅರ್ಥವಾಗುತ್ತದೆಯೇ ಅನ್ನುವ ಸಂದೇಹಗಳಿವೆ. ಪತ್ನಿ ಅಕ್ಷತಾ ಮೂರ್ತಿ ತೆರಿಗೆ ತಪ್ಪಿಸಲು ಮಾಡಿದ ಪ್ರಕರಣವನ್ನು ಇಂಗ್ಲೆಂಡ್ ಮರೆತಿಲ್ಲ. “ ನನಗೆ ಕಾರ್ಮಿಕ ವರ್ಗದ ಸ್ನೇಹಿತರೆ ಇಲ್ಲ” ಎಂದು ಕೊಳ್ಳುವ ಅವರ ಸಿರಿತನದ ಬಗ್ಗೆ ಹಲವು ಕಥೆಗಳು ಪ್ರಚಾರದಲ್ಲಿವೆ. ನಾವು ಭಾರತೀಯರಿಗೆ ನಮ್ಮವರು ಅನ್ನಿಸುವುದಕ್ಕಿಂತ, ಬ್ರಿಟೀಷರಿಗೆ ತಮ್ಮವರು ಅನ್ನಿಸಬೇಕು.
ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿಂದ ಇಂಗ್ಲೆಂಡಿನ ಜನ ಬ್ರೆಕ್ಸಿಟ್‍ಗೆ ಮತ ಹಾಕಿದ್ದರು. ದೇಶದ ಎಲ್ಲಾ ಸಮುದಾಯಗಳು, ಮುಂದಿನ ತಲೆಮಾರಿನ ಜನ ಹೆಮ್ಮೆ ಪಡಬಹುದಾದ ಅವಕಾಶಗಳು, ನೆಚ್ಚಿ ಬದುಕಬಹುದಾಂತಹ ಸಾರ್ವಜನಿಕ ಸೇವೆ ಸಾಧ್ಯವಾಗುತ್ತದೆ ಎಂದು ಕನಸು ಕಂಡಿದ್ದರು. ಈಗ ಜನರಲ್ಲಿ ಮೋಸ ಹೋಗಿದ್ದೇವೆಂಬ ಭಾವನೆ ಮೂಡುತ್ತಿದೆ. ರಿಷಿ ಪ್ರಧಾನಿಯಾಗಿ ಈ ಮನಸ್ಸುಗಳಿಗೆ ಸಾಂತ್ವನ ಹೇಳಬೇಕಾಗಿದೆ. ಭರವಸೆ ಮೂಡಿಸಬೇಕಾಗಿದೆ.ಬ್ರಿಟೀಷರಿಗೆ ಒಳ್ಳೆಯದಾಗಲಿ.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago