ಫ್ರಾನ್ಸ್ ದೇಶದ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಯೂರೋಪ್ ಅಷ್ಟೇ ಏಕೆ ಪಶ್ಚಿಮ ರಾಷ್ಟ್ರಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಮುಂದಿನ ಆಗಸ್ಟ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್ ನಗರದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ತಮಗೂ ಆಹ್ವಾನ ನೀಡಬೇಕೆಂದು ಕೋರಿರುವುದೇ ಈ ಬಿರುಗಾಳಿಗೆ ಕಾರಣ. ಅಮೆರಿಕ ನೇತೃತ್ವದ ಶಕ್ತಿರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿ ಕೊಂಡಿರುವ ಮೆಕ್ರಾನ್ ರಷ್ಯಾ, ಚೀನಾ ನೇತೃತ್ವದ ಬ್ರಿಕ್ಸ್ ಸಂಘಟನೆ ಬಗ್ಗೆ ಆಸಕ್ತಿ ತೋರಿಸಿರುವುದು ಆಶ್ಚರ್ಯ ಹುಟ್ಟಿಸಿದೆ. ಈಗಾಗಲೇ ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಇರಾನ್, ಇಂಡೋನೇಷ್ಯಾ ಸೇರಿದಂತೆ 19 ದೇಶಗಳು ಬ್ರಿಕ್ಸ್ ಸಂಘಟನೆಯ ಭಾಗವಾಗಲು ಮುಂದಾಗಿರುವುದು ಬದಲಾಗುತ್ತಿರುವ ಜಾಗತಿಕ ಆರ್ಥಿಕ ಶಕ್ತಿ ರಾಜಕೀಯದ ಸಂಕೇತವೆಂದೇ ಹೇಳಲಾಗುತ್ತಿದೆ.
ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಚೀನಾ, ರಷ್ಯಾ, ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾದ ಗುಂಪೇ ಬ್ರಿಕ್ಸ್. ವಾಣಿಜ್ಯ ವಹಿವಾಟು, ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಸಹಕಾರ ಸಾಧಿಸುವ ಗುರಿ ಇಟ್ಟುಕೊಂಡು 2009ರಲ್ಲಿ ಆರಂಭವಾದ ಈ ಸಂಘಟನೆ ಇದುವರೆಗೆ ಗಮ ನಾರ್ಹವಾದ ಪ್ರಗತಿಯನ್ನೇನೂ ಸಾಧಿಸಿಲ್ಲ. ಅಭಿವೃದ್ಧಿ ದೇಶಗಳನ್ನು ಒಳಗೊಂಡ ಜಿ–7, ಜಿ-20 ಸಂಘಟನೆಗಳೇ ವಿಶ್ವದ ಆರ್ಥಿಕ ಆಗು–ಹೋಗುಗಳನ್ನು ನಿಭಾಯಿಸುತ್ತಿದ್ದವು. ಆದರೆ ಅಮೆರಿಕ ಪ್ರಣೀತ ತತ್ವ–ಸಿದ್ಧಾಂತಗಳಿಗೆ ಬದ್ಧವಾಗಿದ್ದ ಈ ಸಂಘಟನೆಗಳ ಬಗ್ಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಾಯಕರು ಅಷ್ಟೇನೂ ಭರವಸೆ ಇಟ್ಟುಕೊಂಡಿರಲಿಲ್ಲ. ಈ ಅಸಮಾಧಾನ ಇದೀಗ ಬ್ರಿಕ್ಸ್ ಸಂಘಟನೆಯ ಸ್ವರೂಪದಲ್ಲಿ ಬಹಿರಂಗಗೊಂಡಂತೆ ಕಾಣುತ್ತಿದೆ.
ಈ ಬೆಳವಣಿಗೆಗೆ ಮುಖ್ಯವಾದ ಕಾರಣ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ. ಯುದ್ಧಕ್ಕಿಂತ ಅದರ ಹೆಸರಿನಲ್ಲಿ ರಷ್ಯಾದ ವಿರುದ್ಧ ಅಮೆರಿಕ ಮತ್ತು ಯೋರೋಪ್ ದೇಶಗಳು ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳು. ಡಾಲರ್‌ಅನ್ನು ಆಯುಧವಾಗಿ ಬಳಸಿ ರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕುವ ಅಮೆರಿಕದ ಮಾರ್ಗ ಇದೀಗ ತೀವ್ರ ವಿವಾದಕ್ಕೆ ಒಳಗಾಗಿದೆ, ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಮುಖ್ಯವಾಗಿ ರಷ್ಯಾದಿಂದ ಪೂರೈಕೆಯಾಗುತ್ತಿದ್ದ ಅನಿಲ ಮತ್ತು ತೈಲ ನಿಂತಿದ್ದರಿಂದ ಯೂರೋಪ್‌ನ ಅರ್ಥವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಯೂರೋಪ್ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇದು ಹಣದುಬ್ಬರಕ್ಕೆ ಕಾರಣವಾಗಿದೆ. ಆಹಾರ ಧಾನ್ಯಗಳ ಸಾಗಣೆಯಲ್ಲಿ ವ್ಯತ್ಯಯವಾಗಿ ಆಫ್ರಿಕಾ ದೇಶಗಳ ಜನರು ಪರದಾಡುವಂತಾಗಿದೆ. ರಷ್ಯಾ ತೈಲ ಮತ್ತು ಅನಿಲ ಸಂಪನ್ಮೂಲ ದೇಶ. ತೈಲ ಮತ್ತು ಅನಿಲ ಅದರ ಆದಾಯದ ಮೂಲ. ಉಕ್ರೇನ್ ಮೇಲೆ ಮಿಲಿಟರಿ ದಾಳಿ ಮಾಡಿದ್ದಕ್ಕಾಗಿ ರಷ್ಯಾವನ್ನು ಶಿಕ್ಷಿಸಲು ಅಮೆರಿಕ ದಂತೆ ಯೂರೋಪಿಯನ್ ಒಕ್ಕೂಟ ಕೂಡ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ನಿರ್ಬಂಧ ವಿಧಿಸಿತು. ರಷ್ಯಾದ ಆರ್ಥಿಕ ಮೂಲವನ್ನು ಕತ್ತರಿಸುವುದು ಅಮೆರಿಕದ ಉದ್ದೇಶ. ರಷ್ಯಾ ಸುಮಾರು ಮುನ್ನೂರು ಟ್ರಿಲಿಯನ್ ಡಾಲರ್‌ಗಳನ್ನು ವಿದೇಶೀ ವಿನಿಮಯ ಸಂಗ್ರಹವಾಗಿ ಅಮೆರಿಕದ ಬ್ಯಾಂಕ್‌ಗಳಲ್ಲಿ ಕ್ರಮೇಣ ಇಟ್ಟಿತ್ತು. ಡಾಲರ್ ಮೂಲಕ ಯಾವುದೇ ವ್ಯವಹಾರ ಮಾಡದಂತೆ ರಷ್ಯಾ ಮೇಲೆ ನಿರ್ಬಂಧ ವಿಧಿಸಲಾಯಿತು. ರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕುವ ಅಮೆರಿಕದ ಈ ಯತ್ನ ಕ್ರಮೇಣ ವಿಫಲವಾಗುತ್ತಿರುವುದು ಹೊಸ ಸಮಸ್ಯೆಗಳಿಗೆ ಕಾರಣವಾಗಿದೆ. ರಷ್ಯಾ ತನ್ನ ಮಿತ್ರ ರಾಷ್ಟ್ರಗಳಾದ ಚೀನಾ ಮತ್ತು ಭಾರತಕ್ಕೆ ತೈಲವನ್ನು ಕಡಿಮೆ ದರಗಳಲ್ಲಿ ಪೂರೈಸಲಾರಂಭಿಸಿತು. ಬುದ್ಧಿವಂತಿಕೆಯಿಂದ ಈ ದೇಶಗಳು ಆ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡತೊಡಗಿದವು. ವಿಚಿತ್ರ ಎಂದರೆ ಯಾವ ಯೂರೋಪ್ ದೇಶಗಳು ರಷ್ಯಾ ತೈಲವನ್ನು ನಿಷೇಧಿಸಿದ್ದವೋ ಅವುಗಳಿಗೆ ಭಾರತ ಮತ್ತು ಚೀನಾ ಮಾರಾಟ ಮಾಡತೊಡಗಿವೆ. ಹೆಸರಿಗೆ ಮಾತ್ರ ಭಾರತ ಮತ್ತು ಚೀನಾದಿಂದ ಬಂದ ತೈಲ. ಇದರಿಂದ ರಷ್ಯಾಕ್ಕೂ ಆದಾಯ, ಮಾರಾಟ ಮಾಡಿದ ಭಾರತ ಮತ್ತು ಚೀನಾಕ್ಕೂ ಲಾಭ. ಈ ಬೆಳವಣಿಗೆಯಿಂದಾಗಿ ರಷ್ಯಾವನ್ನು ಆರ್ಥಿಕವಾಗಿ ಕೊಲ್ಲುವ ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟದ ಉದ್ದೇಶ ವಿವಾದಕ್ಕೆ ಒಳಗಾಗಿದೆ. ಡಾಲರ್ ಅನ್ನು ಅಸ್ತ್ರವಾಗಿ ಬಳಸಿದ್ದರಿಂದ ತಮ್ಮ ದೇಶದ ಆರ್ಥಿಕತೆಯ ಮೇಲೆ ಆದ ಕೆಟ್ಟ ಪರಿಣಾಮವನ್ನು ನಿಭಾಯಿಸಲು ಮೆಕ್ರಾನ್ ಅವರು ಬ್ರಿಕ್ಸ್ ಕಡೆಗೆ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಇಂದು ಫ್ರಾನ್ಸ್, ನಾಳೆ ಜರ್ಮನಿ ಇದೇ ರೀತಿ ಬ್ರಿಕ್ಸ್ ಸದಸ್ಯತ್ವ ಕೇಳಿದರೆ ಆಶ್ಚರ್ಯವಿಲ್ಲ.
ಅಮೆರಿಕ ಮತ್ತಿತರ ದೇಶಗಳು ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳು ಡಾಲರ್ ಮೇಲಿನ ಒತ್ತಡವನ್ನು ಜಾಸ್ತಿ ಮಾಡಿವೆ. ಡಾಲರ್ ಪ್ರಾಬಲ್ಯ ಕ್ರಮೇಣ ಕುಸಿಯುತ್ತಿದೆ. ಡಾಲರ್ ವಿಶ್ವದಲ್ಲಿ ಅತಿ ಹೆಚ್ಚು ಮಾನ್ಯತೆ ಗಳಿಸಿರುವ ವಿದೇಶೀ ವಿನಿಮಯ ಹಣ. ಬಹುಪಾಲು ಎಲ್ಲ ದೇಶಗಳು ತಮ್ಮ ವಾಣಿಜ್ಯ ವಹಿವಾಟನ್ನು ಡಾಲರ್ ಮೂಲಕವೇ ನಡೆಸುತ್ತವೆ. ಡಾಲರ್‌ಗೆ ಅಂಥ ಮಾನ್ಯತೆ ಇದೆ. ಡಾಲರ್ ಒಂದು ಪೇಪರ್ ಚೂರು ಇರಬಹುದು, ಆದರೆ ಅದಕ್ಕಿರುವ ಆರ್ಥಿಕ ಶಕ್ತಿ ಬೇರೆ ಯಾವುದೇ ದೇಶದ ಹಣಕ್ಕೂ ಇಲ್ಲ. ಒಂದು ದೇಶದ ಆರ್ಥಿಕ ಸ್ಥಿತಿಯನ್ನು ಅದು ತನ್ನ ವಿದೇಶೀ ವಿನಿಮಯ ಖಾತೆಯಲ್ಲಿ ಎಷ್ಟು ಡಾಲರ್ ಸಂಗ್ರಹಿಸಿ ಕೂಡಿಟ್ಟಿದೆ ಎನ್ನುವುದರ ಮೇಲೆ ಲೆಕ್ಕ ಹಾಕಲಾಗುತ್ತದೆ. ಇಂಥ ಡಾಲರ್‌ಅನ್ನು ಅಮೆರಿಕವು ರಷ್ಯಾವನ್ನು ಮುಗಿಸಲು ಅಸ್ತ್ರವಾಗಿ ಬಳಸಿದ್ದು ವಿಶ್ವದ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದೆ. ಹೀಗಾಗಿ ಡಾಲರ್‌ಗೆ ಪರ್ಯಾಯವನ್ನು ಸೃಷ್ಟಿಸುವತ್ತ ದೇಶಗಳು ಯೋಚಿಸುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ ಡಾಲರ್‌ನ ಪಾತ್ರವನ್ನು ವಾಣಿಜ್ಯ ವಹಿವಾಟು ಮತ್ತು ಬದುಕಿನ ಇತರ ಕ್ಷೇತ್ರಗಳಲ್ಲಿ ಕಡಿಮೆ ಮಾಡುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ.
ರಷ್ಯಾದ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಡಾಲರ್‌ಗೆ ಪರ್ಯಾಯ ಕರೆನ್ಸಿಯೊಂದನ್ನು ಗುರುತಿಸುವ ಕೆಲಸ ಆಗಬೇಕೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಸಭೆಯೊಂದರಲ್ಲಿ ಸಲಹೆ ಮಾಡಿದ್ದರು. ಮೊದಲ ಹಂತವಾಗಿ ವಾಣಿಜ್ಯ ವಹಿವಾಟನ್ನು ಆಯಾ ದೇಶಗಳ ಕರೆನ್ಸಿಯಲ್ಲಿಯೇ ನಡೆಸಲು ತೀರ್ಮಾನಿಸಲಾಗಿತ್ತು. ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಭಾರತಕ್ಕೆ ಸೀಮಿತವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ವ್ಯವಸ್ಥೆಯನ್ನು ಈಗಾಗಲೇ ರೂಪಿಸಿದೆ. ಬೇರೆ ದೇಶಗಳ ಜೊತೆಗಿನ ವಾಣಿಜ್ಯ ವಹಿವಾಟಿನಲ್ಲಿ ಭಾರತ ರೂಪಾಯಿಯನ್ನೇ ಕರೆನ್ಸಿಯಾಗಿ ಬಳಸುತ್ತಿದೆ. ತೈಲ ವಿಚಾರದಲ್ಲಿ ರೂಪಾಯಿ ಲೆಕ್ಕದಲ್ಲಿ ಹಣ ನೀಡಲು ರಷ್ಯಾ ಕೂಡ ಅಗತ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ರಷ್ಯಾ ರೂಬೆಲ್ ಮೂಲಕ ವಹಿವಾಟು ನಡೆಸಿದರೆ ಪ್ರತಿಯಾಗಿ ಭಾರತ ರೂಪಾಯಿ ಮೂಲಕ ಹಣ ನೀಡುತ್ತಿದೆ. ಆದರೆ ಡಾಲರ್‌ನಂತೆ ರೂಪಾಯಿ ವಿಶ್ವವ್ಯಾಪಿ ಹಣವಲ್ಲ. ಭಾರತ ಮತ್ತು ರಷ್ಯಾಕ್ಕೆ ಸೀಮಿತವಾದ ವ್ಯವಸ್ಥೆ. ಈ ಮಧ್ಯೆ ಚೀನಾ ಕೂಡ ತನ್ನ ಕರೆನ್ಸಿ ಯುಯಾನ್ ಮೂಲಕ ವಹಿವಾಟು ನಡೆಸುತ್ತಿದೆ. ಸೌದಿ ಅರೇಬಿಯಾದಿಂದ ಪೂರೈಸಲಾಗುವ ತೈಲಕ್ಕೆ ಹಣವನ್ನು ರೆನ್‌ಮಿಂಬಿ ಅಥವಾ ಯುಯಾನ್ ಹಣದ ಮೂಲಕ ಕೊಡುತ್ತಿದೆ. ಈ ಸಂಬಂಧವಾಗಿ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ಬ್ರಿಕ್ಸ್‌ನ ಇತರ ಸದಸ್ಯ ದೇಶಗಳ ಕರೆನ್ಸಿಗೆ ಹೋಲಿಸಿದರೆ ಚೀನಾದ ಯುಯಾನ್ ಬ್ರಿಕ್ಸ್‌ನ ಕರೆನ್ಸಿಯಾಗುವ ಅರ್ಹತೆ ಪಡೆದಿದೆ. ಡಾಲರ್ ನಂತರ ಹೆಚ್ಚು ದೇಶಗಳಲ್ಲಿ ಮಾನ್ಯತೆ ಪಡೆದಿರುವ ಹಣ ಯೂರೋ. ಆದರೆ ಯೂರೋಪಿಯನ್ ಒಕ್ಕೂಟ ಅಮೆರಿಕದ ಜೊತೆಗೂಡಿ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಸದ್ಯಕ್ಕೆ ಯೂರೋ ಪರ್ಯಾಯ ವಿದೇಶೀ ವಿನಿಮಯ ಹಣವಾಗುವ ಸಾಧ್ಯತೆ ಇಲ್ಲ. ಆದರೆ ಕೆಲವು ದೇಶಗಳು ಹೊಸದೇ ಒಂದು ‘ಬ್ರಿಕ್ಸ್’ ಕರೆನ್ಸಿ ಚಾಲ್ತಿಗೆ ತರುವಂತೆ ಒತ್ತಾಯಿಸುತ್ತಿರುವುದರಿಂದ ಈ ವಿಚಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ಶೃಂಗಸಭೆಯಲ್ಲಿ ಚರ್ಚೆಗೆ ಬರಲಿದೆ.
ಎರಡನೆಯ ಮಹಾಯುದ್ಧದ ಕಾಲದಿಂದಲೂ ಅಮೆರಿಕದ ಡಾಲರ್ ಜಾಗತಿಕ ಕರೆನ್ಸಿಯಾಗಿದೆ. ಕಳೆದ ಎರಡು ದಶಕಗಳಿಂದ ಡಾಲರ್ ಪ್ರಬಲವಾಗಿಯೇ ಇದೆ. ಡಾಲರ್ ಇಷ್ಟೊಂದು ಪ್ರಭಾವ ಬೆಳೆಸಿಕೊಳ್ಳಲು ಮುಖ್ಯ ಕಾರಣ ಅಮೆರಿಕದ ಬಲಾಢ್ಯ ಆರ್ಥಿಕ ಸ್ಥಿತಿ. ಈಗ ಅಮೆರಿಕದ ಆರ್ಥಿಕ ಸ್ಥಿತಿ ಮೊದಲಿನಂತೆ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯವಾಗಿ ಡಾಲರ್ ಬೆಲೆ ಕಡಿಮೆಯಾಗಿದೆ. ಆದರೂ ಬೇರೆ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್‌ನ ಪರಿಸ್ಥಿತಿ ಉತ್ತಮವಾಗಿಯೇ ಇದೆ. ‘ಡಾಲರ್ ಪ್ರಾಬಲ್ಯ ಕ್ರಮೇಣ ಕಡಿಮೆಯಾಗಿರುವುದು ನಿಜ. ಮೊದಲು ವಿಶ್ವದ ಒಟ್ಟು ಕರೆನ್ಸಿ ಮೊತ್ತದಲ್ಲಿ ಡಾಲರ್‌ನ ಸಿಂಹಪಾಲು ಇತ್ತು. ಆದರೆ ಅದು ಕ್ರಮೇಣ ಕರಗುತ್ತ ಬಂದಿದೆ. ಆದರೆ ಪ್ರಾಬಲ್ಯ ಅಳಿಸಿಹೋಗದು’ ಎಂದು ಅಮೆರಿಕದ ಟ್ರೆಶರಿ ಸೆಕ್ರೆಟರಿ (ಹಣಕಾಸು ಸಚಿವೆ) ಜಾನೆಟ್ ಯೆಲೆನ್ ತಿಳಿಸಿದ್ದಾರೆ. ಇದೇ ರೀತಿ ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಅಭಿಪ್ರಾಯಪಟ್ಟಿದೆ.
ಇದೇನೇ ಇದ್ದರೂ ಡಾಲರ್‌ಗೆ ಪರ್ಯಾಯ ಕಟ್ಟುವ ಪ್ರಯತ್ನಗಳು ಆರಂಭವಾಗಿವೆ. ಇದೀಗ ಬ್ರಿಕ್ಸ್ ತನ್ನದೇ ಆದ ಬ್ಯಾಂಕ್ ಆರಂಭಿಸಿದೆ. ಆರ್ಥಿಕ ತಜ್ಞರ ಪ್ರಕಾರ ಪರ್ಯಾಯ ರೂಪಿಸಲು ಇನ್ನೂ ಎರಡು ದಶಕಗಳಾದರೂ ಬೇಕು. ಅದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎನ್ನುವುದನ್ನು ಮುಂದಿನ ಬೆಳವಣಿಗೆಗಳೇ ನಿರ್ಧರಿಸುತ್ತವೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…
ಹಾಸನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.…
ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಕಂಟೇನರ್ ಹಾಗೂ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ…
ಬೆಂಗಳೂರು: ಮಧ್ಯರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್‌ಮಸ್ ಸಡಗರ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಕ್ರಿಸ್‌ಮಸ್ ಹಬ್ಬವು ನಂಬಿಕೆಯೆಂಬ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10ಕ್ಕೂ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೋರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಸಜೀವ…