ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ 800ಕ್ಕೂ ಹೆಚ್ಚು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಅವರಲ್ಲಿ 31 ಜನ ಕರ್ನಾಟಕದ ಹಕ್ಕಿಪಿಕ್ಕಿ ಎಂಬ ಬುಡಕಟ್ಟು ಜನಾಂಗದವರು ಎಂಬ ಸುದ್ದಿ ಆತಂಕಕ್ಕೂ, ಕುತೂಹಲಕ್ಕೂ ಕಾರಣವಾಗಿದೆ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕರ್ನಾಟಕದ ಒಂದು ಬುಡಕಟ್ಟಿನ ಇಷ್ಟೊಂದು ಜನ ವಿದೇಶಕ್ಕೆ ಏಕೆ ಹೋದರು, ಹೇಗೆ ಹೋದರು ಮತ್ತು ಅಲ್ಲಿ ಏನು ಮಾಡುತ್ತಿದ್ದಾರೆಂಬುದು ಸಹಜವಾಗಿಯೇ ಹಲವರಲ್ಲಿ ಕುತೂಹಲ ಹುಟ್ಟಿಸಿದೆ.
ಹಕ್ಕಿಪಿಕ್ಕಿ ಜನಾಂಗ ಕಾಡುಗಳಲ್ಲಿ ಹಕ್ಕಿ, ಪ್ರಾಣಿಗಳನ್ನು ಬೇಟೆಯಾಡುವುದು, ಬೇಟೆಯಾಡಿದ ಪ್ರಾಣಿ, ಪಕ್ಷಿಗಳ ಉಗುರು, ಹಲ್ಲು, ಮೂಳೆ, ರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರುವುದು, ಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರುವುದನ್ನು ತನ್ನ ಜೀವನೋಪಾಯ ಮಾಡಿಕೊಂಡಿತ್ತು. ಹಕ್ಕಿಪಿಕ್ಕಿಗಳು ಜೀವನೋಪಾಯಕ್ಕೆ ಕಂಡುಕೊಂಡ ಇನ್ನೊಂದು ದಾರಿಯೆಂದರೆ ಗಿಡಮೂಲಿಕೆ ಔಷಧಿಗಳ ಮಾರಾಟ. ಸದ್ಯ ಸುಡಾನಿನಲ್ಲಿ ಸಿಕ್ಕಿಹಾಕಿಕೊಂಡಿರುವ 31 ಜನ ಹಕ್ಕಿಪಿಕ್ಕಿಗಳು ಅಲ್ಲಿಗೆ ಹೋಗಿರುವುದು ಈ ಗಿಡಮೂಲಿಕೆ ಔಷಧಿಗಳನ್ನು ಮಾರಲು. ಕಡು ಬಡದೇಶಗಳಲ್ಲೊಂದಾದ ಸುಡಾನಿನ ಸಾಮಾನ್ಯ ಜನರಿಗೆ ಆಧುನಿಕ ಔಷಧಿಗಳು ಗಗನ ಕುಸುಮ. ಹಕ್ಕಿಪಿಕ್ಕಿಗಳು ಇದನ್ನೇ ತಮ್ಮ ಗಿಡಮೂಲಿಕೆಗಳ ಮಾರುಕಟ್ಟೆಗೆ ಅವಕಾಶವನ್ನಾಗಿಸಿಕೊಂಡು ಅಲ್ಲಿಗೆ ಹೋದರು. 31 ಜನರಲ್ಲಿ ಗಂಡಸರು ಹೆಂಗಸರು ಸೇರಿದ್ದಾರೆ. ಆದರೆ, ಹೆಚ್ಚೂ ಕಡಿಮೆ ಅನಕ್ಷರಸ್ಥ ಸಮುದಾಯವಾದ ಹಕ್ಕಿಪಿಕ್ಕಿಗಳು ಅಷ್ಟು ದೂರದ ಸುಡಾನಿನ ಈ ವಿಚಾರವನ್ನು ಹೇಗೆ ತಿಳಿದುಕೊಂಡರು ಮತ್ತು ಹೇಗೆ ಆ ದೇಶಕ್ಕೆ ಹೋದರು ಎಂಬುದು ಇನ್ನಷ್ಟೇ ತಿಳಿಯಬೇಕು.
ಕಾಡನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದ ಹಕ್ಕಿಪಿಕ್ಕಿಗಳನ್ನು 1950-60ರ ದಶಕದಲ್ಲಿ ಜಾರಿಗೆ ಬಂದ ಬೇಟೆ, ಅರಣ್ಯಗಳಿಗೆ ಸಂಬಂಧಿತ ಕಾನೂನುಗಳು ಕಾಡಿನಿಂದ ನಗರಪ್ರದೇಶಗಳಿಗೆ ಒಕ್ಕಲೆಬ್ಬಿಸಿದವು. ಕಾಡಿನಿಂದ ಹೊರಬಂದ ಹಕ್ಕಿಪಿಕ್ಕಿಗಳು ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ದೊಡ್ಡಬಳ್ಳಾಪುರ ಮತ್ತು ತಮಿಳುನಾಡು ಮತ್ತು ಆಂಧ್ರಪ್ರದೇಶ ಗಡಿಗಳ ತನಕ ಚದುರಿ ಹೋಗಿದ್ದಾರೆ. ಹಕ್ಕಿಪಿಕ್ಕಿಗಳು ಹೀಗೆ ನೆಲೆ ಕಂಡುಕೊಂಡ ಹೊಸ ಪ್ರದೇಶಗಳಲ್ಲಿ ಭದ್ರಾಪುರ ಮುಖ್ಯವಾದುದು. ಕರ್ನಾಟಕದಲ್ಲಿ ಇವರ ಸಂಖ್ಯೆ ಸುಮಾರು 15,000 ಎನ್ನಲಾಗುತ್ತದೆ. ಸಂಖ್ಯೆಯ ದೃಷ್ಟಿಯಲ್ಲಿ ಹಕ್ಕಿಪಿಕ್ಕಿಗಳು ಅಳಿವಿನ ಅಂಚಿನಲ್ಲಿರುವ ಜನಾಂಗವಾಗಿದ್ದಾರೆ. ಅರಣ್ಯಗಳಿಂದ ಹೊರಹಾಕಲ್ಪಟ್ಟ ಹಕ್ಕಿಪಿಕ್ಕಿಗಳು ಅತ್ತ ಕಾಡಿನ ಆಸರೆ ತಪ್ಪಿ ಇತ್ತ ನಗರ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಅತಂತ್ರರಾದರು. ಸರ್ಕಾರ ಅವರಿಗೆ ಜೀವಿಸಲು ಪರ್ಯಾಯ ಜಮೀನು ನೀಡಿದರೂ ಜೀವನೋಪಾಯಕ್ಕೆ ಯಾವುದೇ ದಾರಿಯಿಲ್ಲದ ಕಾರಣ ಅನೇಕ ಹಕ್ಕಿಪಿಕ್ಕಿಗಳು ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿದರು.
ಹಕ್ಕಿಪಿಕ್ಕಿಗಳು ಮೂಲತಃ ಗುಜರಾತಿನ ಒಂದು ಯೋಧ ಜನಾಂಗದವರೆಂದು ಹೇಳಲಾಗುತ್ತದೆ. ಪ್ರತಾಪ ಸಿಂಹ ರಾಣಾ ವಂಶಿಗರು ಎಂದು ಹೇಳಿಕೊಳ್ಳುವ ಹಕ್ಕಿಪಿಕ್ಕಿ ಜನಾಂಗದವರು ಮೊಘಲರ ಆಳ್ವಿಕೆ ಕಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬಂದು, ಇಲ್ಲಿನ ಕಾಡುಗಳಲ್ಲಿ ನೆಲೆ ಕಂಡುಕೊಂಡಿದ್ದರು ಎನ್ನುತ್ತಾರೆ. ಗುಜರಾತಲ್ಲಿ ಇವರನ್ನು ವಾಗ್ರಿ, ತಮಿಳುನಾಡಿನಲ್ಲಿ ನರಿ ಕುರವರ್ ಎಂದು ಕರೆಯುತ್ತಾರೆ. ಸೈನಿಕ ವೃತ್ತಿ ಕಳೆದುಕೊಂಡ ನಂತರ ಹಕ್ಕಿಪಿಕ್ಕಿಗಳು ಕಾಡುಗಳಲ್ಲಿ ಹಕ್ಕಿ, ಪ್ರಾಣಿಗಳ ಬೇಟೆ, ಬೇಟೆಯಾಡಿದ ಪ್ರಾಣಿ, ಪಕ್ಷಿಗಳ ಉಗುರು, ಹಲ್ಲು, ಮೂಳೆ, ರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳ ಮಾರಾಟ, ಕಾಡುತ್ಪನ್ನಗಳ ಮಾರಾಟ ಮತ್ತು ಗಿಡಮೂಲಿಕೆ ಔಷಧಿಗಳ ಮಾರಾಟದಿಂದ ಜೀವನೋಪಾಯ ನಡೆಸುತ್ತಿದ್ದರು. ಆದರೆ, ಅರಣ್ಯ ಕಾನೂನಿನ ಹೆಸರಲ್ಲಿ ಸರ್ಕಾರಗಳು ಇವರನ್ನು ಬಲವಂತವಾಗಿ ಕಾಡಿನಿಂದ ಒಕ್ಕಲೆಬ್ಬಿಸಿ, ನಗರ ಪ್ರದೇಶಗಳಲ್ಲಿ ಭಿಕ್ಷಾಟನೆಯ ಮೂಲಕ ಜೀವಿಸಬೇಕಾದ ಹೀನಾಯ ಸ್ಥಿತಿಗೆ ತಳ್ಳಿದವು. ಇದರ ಜೊತೆಯಲ್ಲಿ, ಕಾಡುಗಳಲ್ಲಿ ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕಿದ್ದ ಹಕ್ಕಿಪಿಕ್ಕಿಗಳ ಜೀವನಕ್ರಮವೂ ಸಂಪೂರ್ಣವಾಗಿ ನೆಲೆ ತಪ್ಪಿತು.
ಗುಜರಾತಿಯಂತೆ ಕೇಳಿಸುವ ವಾಗ್ರಿಬೋಲಿ ಎಂಬುದು ಹಕ್ಕಿಪಿಕ್ಕಿಗಳ ಮೂಲ ಭಾಷೆ. ಇದರ ಜೊತೆಯಲ್ಲಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮೊದಲಾಗಿ 14 ಭಾಷೆಗಳನ್ನು ಆಡಬಲ್ಲರು! ಇಷ್ಟೊಂದು ಭಾಷೆಗಳನ್ನು ಮಾತಾಡುವುದರಿಂದ ಸಹಜವಾಗೇ ಇವರ ಭಾಷೆ ಹತ್ತಾರು ಭಾಷೆಗಳ ಒಂದು ಮಿಶ್ರಣದಂತೆ ಕೇಳಿಸುತ್ತದೆ. ಅವರ ಸಾಮಾಜಿಕ ರೀತಿರಿವಾಜುಗಳೂ ಭಿನ್ನ. ಅವರಲ್ಲಿ ವರದಕ್ಷಿಣೆ ಬದಲಿಗೆ ಮದುವೆ ಸಮಯದಲ್ಲಿ ಗಂಡೇ ಹೆಣ್ಣಿಗೆ ವಧುದಕ್ಷಿಣೆ ಕೊಡಬೇಕು. ಮದುವೆ ನಡೆಯುವುದು ರಾತ್ರಿ ಹೊತ್ತಲ್ಲಿ. ವಿವಾಹ ವಿಚ್ಛೇದನೆ ಸಮಯದಲ್ಲಿ ಹೆಂಡತಿಯು ಮದುವೆ ಸಮಯದಲ್ಲಿ ತನಗೆ ಕೊಡಲ್ಪಟ್ಟ ವಧುದಕ್ಷಿಣೆಯಲ್ಲಿ ಅರ್ಧಾಂಶವನ್ನು ಗಂಡಿಗೆ ಹಿಂತಿರುಗಿಸಬೇಕು.
ಇವೆಲ್ಲಕ್ಕೂ ಹೆಚ್ಚು ಸ್ವಾರಸ್ಯಕರವಾದುದು ಹಕ್ಕಿಪಿಕ್ಕಿಗಳ ಹೆಸರುಗಳು. ಬಸ್ಸು, ಟ್ರೈನ್, ವಿಮಾನ, ಕಾಂಪೌಂಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಿಸ್ತೂಲ್, ವೋಟರ್ ಐಡಿ ಮೊದಲಾದವು ವಸ್ತುಗಳ ಹೆಸರು ಅನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹೈಕೋರ್ಟ್, ಸುಪ್ರೀಂ ಕೋರ್ಟ್, ಹೋಟೆಲ್ ಮೊದಲಾದವು ಕಟ್ಟಡಗಳ ಹೆಸರೆಂದು ಯಾರೂ ಹೇಳಬಹುದು. ಮೈಸೂರ್ ಪಾಕ್, ಕಾಫಿ, ಗ್ಲುಕೋಸ್ ಮೊದಲಾದವು ತಿಂಡಿ, ಪಾನೀಯಗಳ ಹೆಸರೆನ್ನುವುದು ಯಾರಿಗೆ ತಿಳಿಯದು? ಹಾಗೆಯೇ ಕಾಂಗ್ರೆಸ್, ಜನತಾ, ಬಿಜೆಪಿ ಅನ್ನುವುದು ರಾಜಕೀಯ ಪಕ್ಷಗಳ ಹೆಸರೆನ್ನುವುದು ಮಕ್ಕಳಿಗೂ ಗೊತ್ತಿರುವ ವಿಚಾರ. ಆದರೆ, ಇವುಗಳೆಲ್ಲವೂ ಹಕ್ಕಿಪಿಕ್ಕಿ ವ್ಯಕ್ತಿಗಳ ಹೆಸರುಗಳು ಅಂದರೆ ನಂಬಲಾಗದಿದ್ದರೂ ನಂಬಲೇಬೇಕು!
ಹಕ್ಕಿಪಿಕ್ಕಿಗಳ ಹೆಸರುಗಳು ಮೇಲುನೋಟಕ್ಕೆ ತಮಾಷೆಯಾಗಿ ಕಂಡರೂ ವಾಸ್ತವದಲ್ಲಿ ಅವುಗಳು ಈ ಜನಾಂಗದ ದುರಂತಮಯ ಬದುಕಿನ ಸ್ಥಿತಿಯನ್ನು ಹೇಳುತ್ತವೆ. ಕಾಡುಗಳಲ್ಲಿ ವಾಸಿಸುತ್ತಿದ್ದಾಗ ಹಕ್ಕಿಪಿಕ್ಕಿಗಳು ತಮ್ಮ ಮಕ್ಕಳಿಗೆ ತಾವು ಪೂಜಿಸುವ ಬೆಟ್ಟಗುಡ್ಡ, ನದಿತೊರೆಗಳ ಹೆಸರಿಡುತ್ತಿದ್ದರು. ಕಾಡಿನಿಂದ ಹೊರದಬ್ಬಲ್ಪಟ್ಟು ತಮ್ಮದಲ್ಲದ ನೆಲೆಗಳಲ್ಲಿ ವಾಸಿಸಲು ಶುರುಮಾಡಿದಂದಿನಿಂದ ಅವರ ಸಾಮಾನ್ಯ ಜೀವನದೊಂದಿಗೆ ಅವರು ತಮ್ಮ ಮಕ್ಕಳಿಗೆ ಹೆಸರಿಡುವ ಕ್ರಮವೂ ಬದಲಾಯಿತು. ನದಿ ತೊರೆ ಬೆಟ್ಟಗುಡ್ಡಗಳ ಬದಲಿಗೆ ನಗರ ಪ್ರದೇಶಗಳಲ್ಲಿ ಕಾಣಸಿಗುವ ವಸ್ತುಗಳು, ಸಿನಿಮಾಗಳಲ್ಲಿ ಕಾಣಿಸುವ ಹೀರೋ ಹೀರೋಯಿನ್ಗಳು, ಚುನಾವಣೆ ಸಮಯದಲ್ಲಿ ಮನೆ ಮನೆಗೆ ಓಡಾಡುವ ರಾಜಕಾರಣಿಗಳು ಮೊದಲಾದವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಡಲು ಶುರು ಮಾಡಿದರು. ನಗರವಾಸಿಗಳ ಬಾಯಲ್ಲಿ ಆಗಾಗ್ಗೆ ಉಚ್ಚರಿಸಲ್ಪಡುವ ಗೂಗಲ್, ಇಂಗ್ಲಿಷ್, ಒನ್ ಬೈ ಟೂ ಮೊದಲಾದ ಶಬ್ದಗಳೂ ಅವರ ಮಕ್ಕಳ ಹೆಸರಾದವು. ಶಾರುಖ್ ಖಾನ್, ಸೋನಿಯಾ ಗಾಂಧಿ, ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಜಿತೇಂದ್ರ, ಎಲಿಜಬೆತ್ ಮೊದಲಾದ ಹೆಸರಿನ ಹಕ್ಕಿಪಿಕ್ಕಿಗಳೂ ಇದ್ದಾರೆ. ಕಲೆಕ್ಟರ್, ಮಿಲಿಟರಿ, ಡಾಲರ್, ಡಿವಿಸನ್, ಬ್ರಿಟಿಷ್, ಅಮೆರಿಕ ಎಂದು ಕರೆಯಲ್ಪಡುವ ಹಕ್ಕಿಪಿಕ್ಕಿಗಳೂ ಇದ್ದಾರೆ.
‘ಹೆಸರಿನಲ್ಲೇನಿದೆ?‘ ಎಂದು ಕೇಳಿದ್ದ ಶೇಕ್ಸ್‌ಪಿಯರ್ ಈಗೇನಾದರೂ ಇದ್ದು ಈ ಹಕ್ಕಿಪಿಕ್ಕಿಗಳನ್ನು ನೋಡಿದ್ದರೆ ಏನನ್ನುತ್ತಿದ್ದನೋ! ಏನೇ ಇರಲಿ, ದೂರದ ಯುದ್ಧಗ್ರಸ್ತ ಸುಡಾನಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಈ ಬಡಪಾಯಿಗಳು ಸುರಕ್ಷಿತವಾಗಿ ವಾಪಸ್ ಬರುವಂತಾಗಲಿ ಎಂದು ಹಾರೈಸೋಣ. ಕಾಡುಗಳಿಂದ ಹಕ್ಕಿಪಿಕ್ಕಿಗಳನ್ನು ಹೊರ ಹಾಕಿದ ಸರ್ಕಾರ ಇನ್ನಾದರೂ ನಾಡಿನಲ್ಲಿ ಇವರು ಇತರರಂತೆ ಗೌರವಯುತ ಬದುಕು ನಡೆಸಲು ಬೇಕಾದುದನ್ನು ಒದಗಿಸಲಿ ಎಂದು ಒತ್ತಾಯಿಸೋಣ.
ಅತ್ಯಂತ ಅಪಾಯಕಾರಿ ಪರಿಸ್ಥಿತಿಯೊಂದನ್ನು ನನಗೆ ಹಸ್ತಾಂತರಿಸಲಾಗಿತ್ತು: ನರವಣೆ ‘ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದ ಪ್ರಧಾನಿ’ ‘ಇಂದಿರಾ ಗಾಂದಿ, ವಾಜಪೇಯಿ ಪ್ರಧಾನಿಗಳಾಗಿದ್ದಾಗ…
ಲಕ್ಷ್ಮೀಕಾಂತ್ ಕೊಮಾರಪ್ಪ ಜನತೆಯ ೩೦ ವರ್ಷಗಳ ಕನಸು ಕೊನೆಗೂ ನನಸು; ೧.೦೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನಿಲ್ದಾಣ ಸೋಮವಾರಪೇಟೆ:…
ಮಹೇಂದ್ರ ಹಸಗೂಲಿ ನಿಯಮಾವಳಿ ಪಾಲಿಸದ ಕ್ರಷರ್; ದೂಳು-ಶಬ್ದ ಮಾಲಿನ್ಯ ಆರೋಪ ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿ ಗ್ರಾಮದ ಬಳಿ ಇರುವ ಪಾರ್ವತಿ…
ಮೈಸೂರು: ಸಾವಿರಾರು ಕಿ.ಮೀ. ದೂರದಿಂದ ವಲಸೆ ಬರುವ ಹಕ್ಕಿಗಳಿಗೆ ಅದರಲ್ಲೂ ವಿಶೇಷವಾಗಿ ಮಂಗೋಲಿಯಾದಿಂದ ಸಾವಿರಾರು ಕಿಲೋಮೀಟರ್ ದೂರ ವಲಸೆ ಬರುವ…
ಮಂಜು ಕೋಟೆ ಕೋಟೆ ಪುರಸಭೆಯಲ್ಲಿ ಇ-ಸ್ವತ್ತು ಸಿಗದೆ ಸಮಸ್ಯೆ; ವಾರ್ಡುಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಹೈರಾಣಾದ ಜನತೆ ಎಚ್.ಡಿ.ಕೋಟೆ: ಪುರಸಭೆಯಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು: ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಅಧಿಕಾರದಲ್ಲೇ ಮುಂದಿನ ಏಪ್ರಿಲ್ ತಿಂಗಳಲ್ಲಿ ಐದು ವರ್ಷಗಳನ್ನು ಪೂರೈಸುತ್ತಿರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ…