ಇಂದಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ಪುಸ್ತಕ, ಪತ್ರಿಕೆ ಓದುವ ಅಭ್ಯಾಸ ತೀವ್ರವಾಗಿ ಕ್ಷೀಣಿಸುತ್ತಿರುವುದು ಎಲ್ಲೆಡೆ ಕಂಡು ಬರುವ ಒಂದು ವಿದ್ಯಮಾನ. ಹಿಂದೆ, ನಗರ ಹಳ್ಳಿಗಳೆಂಬ ಭೇದವಿಲ್ಲದೆ ಸರ್ಕಾರಿ ಮತ್ತು ಖಾಸಗಿ ಗ್ರಂಥಾಲಯಗಳು ಕಾಣಬರುತ್ತಿದ್ದವು. ಕುಗ್ರಾಮಗಳ ಪಂಚಾಯಿತಿ ಕಚೇರಿಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳು ಇರುತ್ತಿದ್ದವು. 2011ರ ಜನಗಣತಿಯ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 70,817 ಮತ್ತು ನಗರಪ್ರದೇಶಗಳಲ್ಲಿ 4,580 ಸರ್ಕಾರಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಹುಡುಕುತ್ತ ಹೋದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಗ್ರಂಥಾಲಯಗಳು ತೆರೆದಿರುವುದನ್ನು ಹೊರತುಪಡಿಸಿದರೆ ಖಾಸಗಿ ಗ್ರಂಥಾಲಯಗಳು ಕಾಣಸಿಗುವುದು ತೀರಾ ಅಪರೂಪ. ಅಂತಹದರಲ್ಲಿ, ಮಹಾರಾಷ್ಟ್ರದ ಒಂದು ಹಳ್ಳಿಯ ಮನೆಮನೆಗಳಲ್ಲಿಯೂ ಗ್ರಂಥಾಲಯಗಳಿವೆ ಎಂದರೆ ನಂಬಲಾದೀತೇ? ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲಾರ್ ಎಂಬ ಪುಟ್ಟ ಹಳ್ಳಿಗೆ ಬಂದರೆ ಇದನ್ನು ಕಣ್ಣಾರೆ ಕಂಡು ನಂಬಬಹುದು. ಈ ಗ್ರಂಥಾಲಯಗಳ ಕಾರಣಕ್ಕಾಗಿಯೇ ಭಿಲಾರನ್ನು ಭಾರತದ ಪ್ರಪ್ರಥಮ ‘ಪುಸ್ತಕದ ಊರು (ಪುಸ್ತಕಾಂಚೆ ಗಾಂವ್)’ ಎಂದು ಕರೆಯುತ್ತಾರೆ.
ಮಹಾಬಲೇಶ್ವರ ಮತ್ತು ಪಂಚಗನಿ ಮಹಾರಾಷ್ಟ್ರದ ಎರಡು ಪ್ರಮುಖ ಹಿಲ್ ಸ್ಟೇಷನ್ಗಳು. ಸತಾರಾ ಜಿಲ್ಲೆಯಲ್ಲಿರುವ ಈ ತಂಪು ಪ್ರದೇಶಗಳಿಗೆ ವರ್ಷವಿಡೀ ಪ್ರವಾಸಿಗರು ಬರುತ್ತಾರೆ. ಈ ಎರಡೂ ಹಿಲ್ ಸ್ಟೇಷನ್‌ಗಳ ನಡುವೆ ಇರುವುದೇ ಭಿಲಾರ್. ಭಿಲಾರ್ ಪ್ರೇಕ್ಷಣೀಯ ತಾಣವೆಂಬುದರ ಜೊತೆಗೆ ಸ್ಟ್ರಾಬೆರಿ ಹಣ್ಣಿನ ಬೆಳೆಗೂ ಹೆಸರುವಾಸಿಯಾಗಿದೆ. ಬೆಂಗಳೂರಲ್ಲಿ ಕಡ್ಲೆಕಾಯಿ ಪರಿಷೆ ನಡೆಯುವಂತೆ ಇಲ್ಲಿ ಸ್ಟ್ರಾಬೆರಿ ಮೇಳ ನಡೆಯುತ್ತದೆ. ಸುಮಾರು 3000 ಜನ ಸಂಖ್ಯೆಯ ಈ ಊರಲ್ಲಿ ಈಗ 35ಕ್ಕೂ ಹೆಚ್ಚು ಮನೆಗಳು ಸಾರ್ವಜನಿಕ ಗ್ರಂಥಾಲಯಗಳಾಗಿ ಪ್ರವಾಸಿಗರಿಗೆ ಆಕರ್ಷಣೆಯ ಜೊತೆಯಲ್ಲಿ ಕುತೂಹಲದ ತಾಣವಾಗಿಯೂ ಮಾರ್ಪಟ್ಟಿವೆ.
‘ಪುಸ್ತಕದ ಊರು’ ಎಂಬುದು ಮೂಲತಃ ಲಂಡನ್ನಿನ ‘ಹೇ–ಆನ್–ವೈ’ ಎಂಬ ಒಂದು ಗ್ರಾಮದ ಮಾದರಿ. ಅಲ್ಲಿ ಕಳೆದ 36 ವರ್ಷಗಳಿಂದ ಪ್ರತಿವರ್ಷ ಮೇ 25ರಂದು ನಡೆಯುವ 10 ದಿನಗಳ ಸಾಹಿತ್ಯ ಜಾತ್ರೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಮಹಾರಾಷ್ಟ್ರದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ವಿನೋದ್ ತಾವ್ಡೆ ಅನ್ನುವವರು ಲಂಡನ್ನಿಗೆ ಭೇಟಿ ಕೊಟ್ಟಾಗ, –ಹೇ–ಆನ್–ವೈ ಗ್ರಾಮದಲ್ಲಿನ ಪ್ರತಿ ಮನೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳಿರುವುದನ್ನು ಕಂಡು, ಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೇಕೆ ರೂಪಿಸಲು ಪ್ರಯತ್ನಿಸಬಾರದು ಎಂದು ಯೋಚಿಸಿ, ಸರ್ಕಾರ ಮತ್ತು ಸ್ಥಳೀಯರ ಸಹಕಾರ ಪಡೆದು ಭಿಲಾರ್‌ನಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಿದರು. 2017ರ ಮೇ ತಿಂಗಳಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನಾವಿಸ್ ಈ ಯೋಜನೆಯನ್ನು ಉದ್ಘಾಟಿಸಿದರು.
ಪ್ರಾರಂಭದಲ್ಲಿ ಭಿಲಾರಿನ ಮನೆಗಳು, ಸಾರ್ವಜನಿಕ ಸ್ಥಳಗಳು, ಮಂದಿರಗಳು, ಶಾಲೆಗಳು ಮೊದಲಾಗಿ 25 ಸ್ಥಳಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಯಿತು. ಮುಂದೆ ಈ ಸಂಖ್ಯೆ 35ಕ್ಕೆ ಏರಿತು. ಇನ್ನೂ ಹಲವು ಮನೆಗಳು ವೈಟಿಂಗ್ ಲಿಸ್ಟ್ನಲ್ಲಿದ್ದವು. ಸರ್ಕಾರ ಸ್ಥಳೀಯಾಡಳಿತದ ಮೂಲಕ ಪುಸ್ತಕದ ಮನೆಗಳಿಗೆ ಬೇಕಾಗುವ ಪುಸ್ತಕ, ಕುರ್ಚಿ, ಮೇಜು, ಕಪಾಟು ಮೊದಲಾದವುಗಳನ್ನು ಒದಗಿಸುತ್ತದೆ. ಆಸಕ್ತ ಸ್ಥಳೀಯರು ತಮ್ಮ ಮನೆಯ ಯಾವುದಾದರೂ ಮೂಲೆ, ವರಾಂಡ, ಕೋಣೆ ಅಥವಾ ಮಾಳಿಗೆಯನ್ನು ಬಿಟ್ಟು ಕೊಟ್ಟು, ಗ್ರಂಥಾಲಯವನ್ನು ನಿರ್ಮಿಸಲಾಗುತ್ತದೆ. ಈ 35 ಪುಸ್ತಕದ ಮನೆಗಳಲ್ಲಿ ಕನಿಷ್ಠವೆಂದರೆ 35 ಸಾವಿರ ಪುಸ್ತಗಳಿವೆ. ಇವೆಲ್ಲವನ್ನೂ ತಜ್ಞರು ವಿವಿಧ ವಿಷಯಗಳನುಸಾರವಾಗಿ ವಿಭಾಗಿಸಿದ್ದು, ಪ್ರತಿಯೊಂದು ಪುಸ್ತಕದ ಮನೆಯಲ್ಲೂ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಇವೆ. ಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಬಗ್ಗೆ ಪುಸ್ತಕಗಳು ಲಭ್ಯ ಅನ್ನುವುದನ್ನು ಗೋಡೆ ಚಿತ್ರ, ಫಲಕಗಳಲ್ಲಿ ಸುಂದರವಾಗಿ ಬರೆಯಲಾಗಿದೆ. ಹಾಗೆಯೇ, ಭಿಲಾರೆಯ ಯಾವ ಪ್ರದೇಶದಲ್ಲಿ ಪುಸ್ತಕದ ಮನೆಗಳಿವೆ ಮತ್ತು ಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಪುಸ್ತಕಗಳು ಲಭ್ಯವಿವೆ ಎಂದು ತೋರಿಸುವ ನಕ್ಷೆಯೂ ಇದೆ.
ಪ್ರವಾಸಿಗರು ದಿನದ ಯಾವ ಹೊತ್ತಿನಲ್ಲಾದರೂ ಈ ಪುಸ್ತಕದ ಮನೆಗಳಿಗೆ ಭೇಟಿ ಕೊಟ್ಟು, ಉಚಿತವಾಗಿ ತಮ್ಮ ಇಷ್ಟದ ಪುಸ್ತಕಗಳನ್ನು ಓದಬಹುದು. ಪುಸ್ತಕದ ಮನೆಯವರು ಇಂತಹ ಓದುಗ–ಪ್ರವಾಸಿಗರನ್ನು ಆದರದಿಂದ ಬರ ಮಾಡಿಕೊಂಡು ಅದು ಅವರ ಮನೆಯೇ ಎಂಬಂತಹ ವಾತಾವರಣವನ್ನು ನಿರ್ಮಿಸಿಕೊಡುತ್ತಾರೆ. ಪುಸ್ತಕದ ಮನೆಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರಿಗೆ ಊರವರು ಸಂತೋಷದಿಂದ ದಾರಿ ತೋರಿಸುತ್ತಾರೆ. ಮಹಾಬಲೇಶ್ವರ ಮತ್ತು ಪಂಚಗನಿ ಎರಡೂ ಅತ್ಯಂತ ಹೆಚ್ಚು ಪ್ರಮಾಣದ ಮಳೆ ಬೀಳುವ ಪ್ರದೇಶಗಳಾದುದರಿಂದ ಮಳೆಗಾಲದ ಹೊರತಾಗಿ ಉಳಿದ ಸಮಯದಲ್ಲಿ ತೆರೆದ ಜಾಗದಲ್ಲಿ ಕುಳಿತು, ಸುತ್ತಲ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತ ಪುಸ್ತಕಗಳನ್ನು ಓದಬಹುದು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಪುಸ್ತಕದ ಮನೆಯವರು ಪ್ರವಾಸಿಗರಿಂದ ತಮ್ಮ ದಿನನಿತ್ಯದ ಬದುಕಿಗೆ ಮತ್ತು ತಮ್ಮ ದಿನನಿತ್ಯದ ಕೆಲಸಗಳಿಂದ ಪ್ರವಾಸಿಗರಿಗೆ ಯಾವುದೇ ಅಡಚಣೆಯಾಗದಂತೆ ನಗುಮೊಗದಿಂದ ಉಪಚರಿಸುತ್ತಾರೆ.
ಪುಸ್ತಕದ ಮನೆಗಳ ಮಾಲೀಕರಿಗೆ ಸರ್ಕಾರ ಯಾವುದೇ ರೀತಿಯ ಆರ್ಥಿಕ ಲಾಭವನ್ನು ಕೊಡುವುದಿಲ್ಲ. ಆದರೆ, ಪುಸ್ತಕದ ಮನೆಗಳಿಂದಾಗಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿರುವುದರ ಜೊತೆ ಭಿಲಾರೆ ಗ್ರಾಮದ ಅಭಿವೃದ್ಧಿಯೂ ನಡೆದಿದೆ. ಸರ್ಕಾರ ಅಚ್ಚುಕಟ್ಟಾದ ರಸ್ತೆ, ಸೂಕ್ತ ರೀತಿಯ ಚರಂಡಿ ವ್ಯವಸ್ಥೆ, ಬೀದಿ ದೀಪ, ಶಾಲೆಗಳ ನವೀಕರಣ ಮೊದಲಾದವುಗಳನ್ನು ಮಾಡುವುದರ ಜೊತೆಗೆ ಒಂದು ಆಂಪಿ ಥಿಯೇಟರನ್ನೂ ನಿರ್ಮಿಸಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಿಲಾರೆಯಂತಹ ಗ್ರಾಮದಲ್ಲೂ ಅಲ್ಲಲ್ಲಿ ‘ಸ್ಟೇ ಹೋಮ್’ ತಲೆ ಎತ್ತಿ, ಹೊಸ ಉದ್ಯೋಗಾವಕಾಶಗಳೂ ಹುಟ್ಟಿಕೊಂಡಿವೆ. ದೀಪಾವಳಿ, ಕ್ರಿಸ್ಮಸ್ ಮತ್ತಿತರ ರಜಾದಿನಗಳಂದು ಮರಾಠಿ ಭಾಷೆ ಹಾಗೂ ಮಹಾರಾಷ್ಟ್ರ ಸಂಸ್ಕ ತಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು ನಡೆಯುವುದರಿಂದ ಚಿಕ್ಕಪುಟ್ಟ ವ್ಯಾಪಾರಿಗಳ ಆದಾಯವೂ ಹೆಚ್ಚಿದೆ. ವಿವಿಧ ಊರು, ವಿವಿಧ ಹಿನ್ನೆಲೆಯ ಪ್ರವಾಸಿಗರು ಬರುವುದರಿಂದ ಪುಸ್ತಕದ ಮನೆಗಳ ಜನರಿಗೆ, ಮುಖ್ಯವಾಗಿ ಮಹಿಳೆಯರಿಗೆ, ತಾವು ಇದ್ದಲ್ಲೇ ಹೊರ ಪ್ರಪಂಚದ ನೇರ ಅನುಭವ ಪಡೆಯುವ ಅವಕಾಶ ನಿರ್ಮಾಣವಾಗಿದೆ. ಪುಸ್ತಕದ ಮನೆಗಳಿಂದಾಗಿ ಭಿಲಾರೆ ಗ್ರಾಮದ ಜನರಲ್ಲೂ ಪುಸ್ತಕ ಓದುವ ಅಭ್ಯಾಸ ಬೆಳೆಯುತ್ತಿರುವುದು ಪುಸ್ತಕದ ಮನೆಗಳು ತಂದ ಬಹುಮುಖ್ಯ ಬದಲಾವಣೆ ಅನ್ನಬಹುದು.
ಭಿಲಾರೆಯ ಪುಸ್ತಕದ ಮನೆ ಯೋಜನೆಯ ಯಶಸ್ಸಿನಿಂದ ಉತ್ತೇಜಿತ ವಾಗಿರುವ ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಜಿಲ್ಲೆಯ ಅಂಖಲ್ಕೋಪ್, ಸಿಂಧುದುರ್ಗದ ಪೊಂಬುರ್ಲೆ, ಔರಂಗಾಬಾದಿನ (ಎಲ್ಲೋರಾ ಖ್ಯಾತಿಯ) ವೆರೂಲ್ ಮತ್ತು ಗೊಂಡಿಯಾ ಜಿಲ್ಲೆಯ ನಾವೇಗಾಂವ್ ಬಂಧ್ ಎಂಬ ಇನ್ನೂ ನಾಲ್ಕು ಹಳ್ಳಿಗಳಲ್ಲಿ ಪುಸ್ತಕದ ಮನೆಗಳನ್ನು ತೆರೆಯಲು ಯೋಜಿಸಿದೆ. ಭಿಲಾರೆಯಿಂದ ಸ್ಛೂರ್ತಿ ಪಡೆದ ಕೇರಳದಲ್ಲೂ ಈಗ ಕೊಲ್ಲಂ ಹತ್ತಿರದ ಪೆರುಂಕುಲಂ ಎಂಬ ಊರು ಪುಸ್ತಕದ ಊರಾಗುತ್ತಿದೆ. ತಮಿಳುನಾಡಿನಲ್ಲಿ ಶಿವಶಂಕರ್ ಮತ್ತು ಆಸೈತಂಬಿ ರೆಪ್ಲೊಂಗ್ ಎಂಬ ಇಬ್ಬರು ನಿವೃತ್ತ ಪ್ರೊಫೆಸರ್‌ಗಳು ಭಿಲಾರ್ ಮಾದರಿಯಲ್ಲೇ ತಮಿಳುನಾಡಿನಾದ್ಯಂತ ದಲಿತರ ಮನೆಗಳನ್ನು ‘ಪುಸ್ತಕದ ಮನೆ’ಗಳನ್ನಾಗಿ ಮಾರ್ಪಡಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…