ಕಳೆದ ಶುಕ್ರವಾರ ‘ಕನ್ನಡ ಚಿತ್ರರಂಗ 90’ರ ಎರಡು ಕಾರ್ಯಕ್ರಮಗಳಿದ್ದವು. ಒಂದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಉದ್ಯಮದ ಸಂಘಟನೆಗಳು ಮತ್ತು ಚಲನಚಿತ್ರ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡರೆ, ಇನ್ನೊಂದನ್ನು ಕಿರುತೆರೆಯ ಉತ್ಸಾಹಿಗಳು ನಡೆಸಿದರು. ಎರಡೂ ಕಾರ್ಯಕ್ರಮಗಳು ಕೊನೆಯ ಕ್ಷಣದಲ್ಲಿ ಹಮ್ಮಿಕೊಂಡವು.
ಕನ್ನಡ ಚಿತ್ರೋದ್ಯಮದ ಆದ್ಯಪ್ರವರ್ತಕರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ ಎನ್ನುವ ಆಕ್ಷೇಪ ಕನ್ನಡದ ಮೊದಲ ಸಿನಿಮಾ ಕುಟುಂಬದ್ದು. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ಕೆಲಸ ಮಾಡಿ ಇದೀಗ ಕಿರುತೆರೆಯಲ್ಲೂ ತಮ್ಮ ಛಾಪನ್ನು ಮೂಡಿಸಿರುವ, ಕನ್ನಡದ ಮೊದಲ ನಾಯಕ ನಟ ಸುಬ್ಬಯ್ಯ ನಾಯ್ಡು ಕುಟುಂಬದ ನೇತೃತ್ವದಲ್ಲಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರ ಬಳಗ ಹಮ್ಮಿಕೊಂಡ ‘ಸಿನಿಮಾ 90’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಸುಬ್ಬಯ್ಯ ನಾಯ್ಡು ಅಭಿನಯದ ‘ವಸಂತಸೇನೆ’ ಚಿತ್ರದ ಹಾಡಿಗೆ ಅವರ ಸೊಸೆ ಗಿರಿಜಾ ಲೋಕೇಶ್, ಲೋಕೇಶ್ ಅಭಿನಯದ ಚಿತ್ರಗಳ ಹಾಡಿಗೆ ಅವರ ಮಗಳು ಪೂಜಾ ಲೋಕೇಶ್, ಸೃಜನ್ ಲೋಕೇಶ್ ನಟಿಸಿದ ಚಿತ್ರದ ಹಾಡಿಗೆ ಅವರ ಮಕ್ಕಳಾದ ಸುಕೃತ್ ಮತ್ತು ಶ್ರೇಷ್ಠ ನರ್ತಿಸಿ ರಂಜಿಸಿದ್ದು ಕಾರ್ಯಕ್ರಮದ ವಿಶೇಷ. ಕಿರುತೆರೆಯ ಮಂದಿಯೆಲ್ಲ ಜೊತೆಯಾಗಬೇಕು, ಈ ಕಾರ್ಯಕ್ರಮ ಅದಕ್ಕೆ ನಾಂದಿಯಾಗಲಿ ಎಂದವರು ಸೃಜನ್ ಲೋಕೇಶ್.
ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ಕುರಿತಂತೆ, ಅದರ ಹಿನ್ನೆಲೆ, ಕನ್ನಡ ಚಿತ್ರರಂಗ ನಡೆದು ಬಂದ ಹಾದಿ, ವಿವಿಧ ಕ್ಷೇತ್ರಗಳ ಮಂದಿಯ ಕೊಡುಗೆಗಳ ಬಗ್ಗೆ ಸುಂದರರಾಜ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಉಮಾಶ್ರೀ, ರೇಖಾರಾಣಿ, ಗಂಗಾಧರ ಮೊದಲಿಯಾರ್, ಕೆ.ವಿ.ಚಂದ್ರಶೇಖರ್ ಮುಂತಾದವರು ಮಾತನಾಡಿದ ಈ ಕಾರ್ಯಕ್ರಮವನ್ನು ಪಿ.ಶೇಷಾದ್ರಿ ಅವರು ನಡೆಸಿಕೊಟ್ಟರೆ, ದೊಡ್ಡಣ್ಣ ವಂದಿಸಿದರು.
ಅಂದು ಮಾತನಾಡಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು, ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಅಪಾಯದ ಬಗ್ಗೆ ಗಮನ ಸೆಳೆದರು. ಒಂಟಿ ಪರದೆಯ ಚಿತ್ರಮಂದಿರಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಮಲ್ಟಿಪ್ಲೆಕ್ಸ್ಗಳ ಸಂಖ್ಯೆ ಏರುತ್ತಿರುವುದರಿಂದ ಕನ್ನಡ ಚಿತ್ರಗಳು ಎದುರಿಸುತ್ತಿರುವ ಅಪಾಯದ ಕುರಿತಂತೆ ಅವರ ಮಾತಿತ್ತು.
ಕಿರುತೆರೆಯ ಆಗಮನ, ಸರಣಿಗಳು, ಕನ್ನಡ ಚಿತ್ರಗಳ ಪ್ರಸಾರದ ನಂತರ ಒಂದು ವರ್ಗದ ಪ್ರೇಕ್ಷಕರು, ವಿಶೇಷವಾಗಿ ಮಹಿಳೆಯರು ಚಿತ್ರಮಂದಿರದ ಕಡೆ ಬರುವುದನ್ನು ಕಡಿಮೆ ಮಾಡಿದ್ದರು. ಡಿಜಿಟಲ್ ತಂತ್ರಜ್ಞಾನದ ನಂತರ ಬೆರಳ ತುದಿಯಲ್ಲಿ ಮನರಂಜನೆ ದೊರಕುವ ಜಾಲತಾಣಗಳು, ಮೊಬೈಲ್ಗಳು, ಕೊರೊನಾ ದಿನಗಳಲ್ಲಿ ಜನಪ್ರಿಯವಾದ ಒಟಿಟಿ ತಾಣಗಳು ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸಲು ಬರುವ ಸಿನಿಮಾಪ್ರಿಯರ ಸಂಖ್ಯೆಯನ್ನು ಇಳಿಸಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ದುಬಾರಿ ಪ್ರವೇಶದರ, ತಿಂಡಿತಿನಿಸುಗಳ ದರಗಳು ಜನಸಾಮಾನ್ಯ ಪ್ರೇಕ್ಷಕರನ್ನು ಅತ್ತ ಸುಳಿಯದಂತೆ ಮಾಡಿವೆ.
ಒಳ್ಳೆಯ ಚಿತ್ರಗಳನ್ನು ಒಟಿಟಿಯಲ್ಲಿ ನೋಡಬಹುದು ಎನ್ನುವುದು ಸಾಮಾನ್ಯವಾಗಿ ಹೇಳುವ ಮಾತು. ಆದರೆ ಅಲ್ಲಿಗೆ ಬರುವ ಕನ್ನಡ ಚಿತ್ರಗಳ ಸಂಖ್ಯೆ ಕಡಿಮೆ. ಇತ್ತೀಚಿನ ಪ್ರಸಂಗವೊಂದು ಅದಕ್ಕೆ ಒಳ್ಳೆಯ ಉದಾಹರಣೆ. ಕಳೆದ ವಾರ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಮುಂತಾದ ಚಿತ್ರಗಳನ್ನು ನೀಡಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಂಸೋರೆ ನಿರ್ದೇಶನದ ಹೊಸ ಚಿತ್ರ ‘19 20 21’ ತೆರೆಕಂಡಿತು.
ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಅದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆ. ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ನಡೆಸಿದ ಕಾನೂನು ಹೋರಾಟದ ಕಥೆ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ–ಮಗನನ್ನು ಬಂದಿಸಲಾಗಿತ್ತು. ವಿಠಲ್ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಕಾನೂನು ಹೋರಾಟ ನಡೆಸಿದರು. 2021ರಲ್ಲಿ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಹೇಳಿತು. ಈ ಹೋರಾಟದಲ್ಲಿ ಮಲೆಕುಡಿಯ ಸಮುದಾಯದ ಮಂದಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ.
ಈ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಉತ್ತಮ ವಿಮರ್ಶೆಗಳೂ ಬಂದಿವೆ. ಆದರೆ ಚಿತ್ರಮಂದಿರ ಮಾತ್ರ ಬರಿದು. ಕೆಲವು ಪ್ರದರ್ಶನಗಳು ರದ್ದಾದ ಸುದ್ದಿಯೂ ಬಂತು. ಎರಡನೇ ವಾರಕ್ಕೆ ಹೇಗಾದರೂ ಮಾಡಿ ಕೆಲವು ಪ್ರದರ್ಶನಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚಿತ್ರತಂಡ ಇದೆ. ಇದೊಂದೇ ಚಿತ್ರವಲ್ಲ. ಇದು ಒಂದು ಮಾದರಿ ಮಾತ್ರ. ಇಂತಹ ಹಲವು ಚಿತ್ರಗಳ ಪ್ರದರ್ಶನ ಎರಡನೇ ದಿನಕ್ಕೇ ರದ್ದಾದ ಪ್ರಸಂಗಗಳಿವೆ ಎನ್ನಿ.
ಮಲಯಾಳದಲ್ಲಿ ಬರುವ ಸದಭಿರುಚಿಯ ಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕ ಇಂತಹ ಚಿತ್ರಗಳು ಕನ್ನಡದಲ್ಲಿ ಬರುತ್ತಿಲ್ಲ ಎಂದು ಆಕ್ಷೇಪಿಸುತ್ತಾನೆ. ಆದರೆ ಇಂತಹ ಚಿತ್ರಗಳು ಬಿಡುಗಡೆ ಆದಾಗ ಅದನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡುವುದು ಅಪರೂಪ. ಹೇಗಿದ್ದರೂ ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎನ್ನುವ ನಿಲುವು.
ಇಲ್ಲೇ ಸಮಸ್ಯೆಯ ಮೂಲ. ಮಂಸೋರೆ ಹೇಳುತ್ತಾರೆ: ಪ್ರೇಕ್ಷಕರು ಒಟಿಟಿಯಲ್ಲಿ ಬಂದಾಗ ನೋಡಿದರಾಯಿತು ಎಂದುಕೊಳ್ಳುತ್ತಾರೆ. ಆದರೆ ಒಟಿಟಿಯಲ್ಲಿ ಎಲ್ಲ ಚಿತ್ರಗಳನ್ನೂ ಕೊಂಡುಕೊಳ್ಳುವುದಿಲ್ಲ. ಹೊಸಬರ ಚಿತ್ರಗಳನ್ನು ಒಟಿಟಿಗಾಗಿ ಕೊಂಡುಕೊಳ್ಳಬೇಕಾದರೆ, ಅದು ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿರಬೇಕು, ಇಲ್ಲವೇ ಅದು ಜನಪ್ರಿಯ ನಟರ ಚಿತ್ರವಾಗಿರಬೇಕು. ಚಿತ್ರಮಂದಿರದ ಕಡೆ ಇಂತಹ ಚಿತ್ರಗಳನ್ನು ನೋಡಲು ಮಂದಿ ಬರುವುದಿಲ್ಲ.
ಅವರಿಗೆ ತಮ್ಮ ದೌರ್ಬಲ್ಯ, ಬಲಹೀನತೆಗಳ ವಿರುದ್ಧ ಹೋರಾಡುವ ಪಾತ್ರಗಳು ತೆರೆಯ ಮೇಲೆ ಬೇಕು. ನಮ್ಮ ಚಿತ್ರಗಳಲ್ಲಿ ಅದೆಲ್ಲಿರುತ್ತದೆ? ನನ್ನ ಹಿಂದಿನ ಚಿತ್ರ ‘ಆಕ್ಟ್ 1978’ ಚಿತ್ರಮಂದಿರದಲ್ಲಿ ಯಶಸ್ವಿಯಾಗಿತ್ತು. ಬಹುಶಃ ಅದಕ್ಕೆ ಮುಖ್ಯ ಕಾರಣ ಬಾಂಬ್ ಕಟ್ಟಿಕೊಂಡು ಸರ್ಕಾರಿ ಕಚೇರಿಯಲ್ಲಿ ಎಲ್ಲರನ್ನೂ ಹೆದರಿಸಿದ ನಾಯಕಿ ಪಾತ್ರ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಲಂಚ ರುಷುವತ್ತುಗಳ ಬಗ್ಗೆ ಮಾತನಾಡುವ ಜನ ನೇರವಾಗಿ ಅದನ್ನು ಕೇಳಲಾರರು. ಚಿತ್ರದಲ್ಲಿ ಅಂತಹದೊಂದು ಪಾತ್ರ ಬಂದಾಗ ಪ್ರೇಕ್ಷಕನಿಗೆ ಸಮಾಧಾನ. ಇಲ್ಲಿ ಅಂತಹ ಪ್ರಸಂಗ, ಪಾತ್ರಗಳು ಇರಲಿಲ್ಲ. ಹಾಗಾಗಿ ಜನ ಚಿತ್ರಮಂದಿರಗಳತ್ತ ಬಂದಿಲ್ಲ.
ಮಂಸೊರೆಯವರ ಯೋಚನೆ ಅದಲ್ಲ. ಸಾಮಾಜಿಕ ತಾಣಗಳಲ್ಲಿ, ಅವರಿಗೆ ಸಾಕಷ್ಟು ಮಂದಿ ಹಿಂಬಾಲಕರಿದ್ದಾರೆ. ಯಾವುದಾದರೂ ವಿಷಯ ಪ್ರಸ್ತಾಪವಾದಾಗ, ಚರ್ಚೆ ಎತ್ತಿಕೊಂಡಾಗ, ಸಾವಿರಾರು ಜನರು ಅದನ್ನು ಇಷ್ಟಪಟ್ಟು ಗುರುತು ಹಾಕುತ್ತಾರೆ. ಅವರಲ್ಲಿ ಕಾಲುಭಾಗದಷ್ಟು ಮಂದಿ ಕೂಡಾ ಚಿತ್ರಮಂದಿರದ ಕಡೆಗೆ ಬರಲಿಲ್ಲ ಎನ್ನುವುದು ಯಾಕೆಂದು ಅವರಿಗೆ ಅರ್ಥವಾಗಿಲ್ಲ. ವಾಸ್ತವದ ಕಥೆ ಹೇಳಿದರೆ, ಅದಕ್ಕೆ ಸಾಕಷ್ಟು ಉತ್ತೇಜನ ಇಲ್ಲ ಎನ್ನುವುದು ಅವರು ಕಂಡ ಸತ್ಯ. ಕನ್ನಡದ ರಿಯಲಿಸ್ಟಿಕ್ ಸಿನಿಮಾಗಳು, ಜನಪ್ರಿಯ ನಟರಿಲ್ಲದ ಚಿತ್ರಗಳು ಒಟಿಟಿಯಲ್ಲಿ ಪ್ರಸಾರವಾಗಬೇಕಾದರೆ, ಅದನ್ನು ಅವರು ಕೊಂಡುಕೊಳ್ಳಬೇಕು. ಕೊಂಡುಕೊಳ್ಳಬೇಕಾದರೆ, ಮೊದಲೇ ಹೇಳಿದಂತೆ ಚಿತ್ರಮಂದಿರದಲ್ಲಿ ಯಶಸ್ವಿಯಾಗಬೇಕು. ಹೇಗೆ? ಇದೀಗ ಕನ್ನಡದ ಬಹುತೇಕ ಚಿತ್ರ ನಿರ್ಮಾಪಕ/ನಿರ್ದೇಶಕರ ಮುಂದಿರುವ ಪ್ರಶ್ನೆ. ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ನೋಡಲು ಸಾಧ್ಯವಾಗದೆ ಇರುವುದಕ್ಕೆ, ಬಾಬು ಅವರು ಹೇಳಿದಂತೆ, ಒಂಟಿ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗಿರುವುದೂ ಕಾರಣ. ಅಲ್ಲಿನ ಪ್ರವೇಶ ದರ, ಒಂದು ಚಿತ್ರವನ್ನು ಮನೆಮಂದಿ ಎಲ್ಲ ನೋಡಲು ಸಾಧ್ಯವಾಗದಷ್ಟು ದುಬಾರಿ ಏನಲ್ಲ. ಮಲ್ಟಿಪ್ಲೆಕ್ಸ್ಗಳಲ್ಲಿ, ಕೆಳಮಧ್ಯಮ ವರ್ಗದ ಒಂದು ಕುಟುಂಬ ಚಿತ್ರ ನೋಡಬೇಕಾದರೆ, ಅವರ ತಿಂಗಳ ದುಡಿಮೆಯ ಬಹುತೇಕ ಭಾಗ ವ್ಯಯಿಸಬೇಕಾಗುತ್ತದೆ.
ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಈ ಚಿತ್ರಮಂದಿರಗಳಲ್ಲಿ ಗರಿಷ್ಟ ಪ್ರವೇಶದರಕ್ಕೆ ಮಿತಿಯನ್ನು ಸರ್ಕಾರವೇ ನಿಗದಿಪಡಿಸಿದೆ. ಇಲ್ಲಿ ಹಾಗೇನಿಲ್ಲ. ಮನಸೋ ಇಚ್ಛೆ ಪ್ರವೇಶದರ. ಇದಕ್ಕೆ ನಿಯಂತ್ರಣ ಇಲ್ಲದೆ ಹೋದರೆ, ಚಿತ್ರಮಂದಿರಗಳಲ್ಲಿ ಹೊಸಬರ ಕನ್ನಡ ಚಿತ್ರಗಳ ಬಿಡುಗಡೆ ಮುಂದಿನ ದಿನಗಳಲ್ಲಿ ಸಾಧ್ಯವಾಗದೆ ಇರುವ ವಾತಾವರಣ ನಿರ್ಮಾಣವಾದರೆ ಆಶ್ಚರ್ಯವಿಲ್ಲ.
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ…
ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷದ ಏಪ್ರಿಲ್ 1 ರಿಂದ ಸೆಪ್ಟೆಂಬರ್.30ರವರೆಗೆ ಎಲ್ಲಾ…
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ…
ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ…
ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ…