ಎಡಿಟೋರಿಯಲ್

ಬೆಂಗಳೂರು ಡೈರಿ : ಜಾ.ದಳ, ಕಾಂಗ್ರೆಸ್ ಬಲಿಷ್ಟರ ಸೆಳೆಯಲು ಶಾ ಸೂಚನೆ?

ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಆಯಾರಾಂ ಗಯಾರಾಂ ಸಂಸ್ಕೃತಿ ಸಾಧ್ಯತೆ

-ಆರ್.ಟಿ.ವಿಠ್ಠಲಮೂರ್ತಿ

ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಒಂದು ಮಹತ್ವದ ಸಭೆ ನಡೆಸಿದ್ದರು. ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆದ ಈ ಸಭೆಯಲ್ಲಿ ಮೈಸೂರು ವಿಭಾಗದ ಹಲವು ಮಂದಿ ನಾಯಕರು ಭಾಗವಹಿಸಿದ್ದರು.
ಅಂದ ಹಾಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಅಮಿತ್ ಶಾ ಅವರ ಚಿಂತೆ. 2008 ಮತ್ತು 2019 ರಲ್ಲಿ ಬಿಜೆಪಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಿದ್ದೇನೋ ಸರಿ. ಆದರೆ ಎರಡೂ ಬಾರಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಅದಕ್ಕೆ ಸಾಧ್ಯವಾಗಿಲ್ಲ.
2008ರಲ್ಲಿ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದರೆ, ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಗಟ್ಟಿ ಮಾಡಿಕೊಳ್ಳಬೇಕಾಯಿತು. 2018ರ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೂ ಸ್ವಂತದ ಸರ್ಕಾರ ರಚಿಸಲು ಆಪರೇಷನ್ ಕಮಲದ ಮೊರೆ ಹೋಗಬೇಕಾಯಿತು.
ಬಿಜೆಪಿಯ ಈ ಕೊರತೆಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಯಶಸ್ಸು ಸಿಗದೆ ಇರುವುದೇ ಕಾರಣ. ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಇಪ್ಪತ್ತು ಸ್ಥಾನಗಳನ್ನೂ ಗೆಲ್ಲಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಿಕೊಳ್ಳದೆ ಹೋದರೆ ಕರ್ನಾಟಕದಲ್ಲಿ ಬಿಜೆಪಿ ಸ್ವಯಂ ಬಲದ ಮೇಲೆ ಎದ್ದು ನಿಲ್ಲಲು ಸಾಧ್ಯವಾಗುವುದಿಲ್ಲ ಎಂಬುದು ಅಮಿತ್ ಶಾ ಅವರಿಗಿರುವ ಮಾಹಿತಿ.
ಈ ಹಿನ್ನೆಲೆಯಲ್ಲಿಯೇ ಅವರು ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲಿನಲ್ಲಿ ಮೈಸೂರು ಭಾಗದ ನಾಯಕರ ಸಭೆ ನಡೆಸಿ, ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆ ಮುಂದಿಟ್ಟರು. ಅವರ ಈ ಪ್ರಶ್ನೆಗೆ ಪ್ರತಿಯಾಗಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು, ಜಾತ್ಯತೀತ ಜನತಾದಳದ ಜತೆ ಒಳಹೊಂದಾಣಿಕೆ ಮಾಡಿಕೊಳ್ಳುತ್ತಿರುವುದೇ ನಮ್ಮ ನಿಶ್ಯಕ್ತಿಗೆ ಕಾರಣ ಎಂದರಂತೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹಲವೆಡೆ ನಾವು ದುರ್ಬಲ ಅಭ್ಯರ್ಥಿಗಳನ್ನು ಹಾಕುವ ಮೂಲಕ ಜಾ.ದಳಕ್ಕೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ನಮ್ಮ ಶಕ್ತಿ ಹೆಚ್ಚುತ್ತಿಲ್ಲ ಎಂದು ಈ ನಾಯಕರು ಹೇಳಿದಾಗ ಅಮಿತ್ ಶಾ ಗಂಭೀರರಾದರಂತೆ.
ಈ ಸಭೆ ನಡೆದ ಕೆಲ ದಿನಗಳ ನಂತರ ರಾಜ್ಯ ಬಿಜೆಪಿ ನಾಯಕರಿಗೆ ದೆಹಲಿಯಿಂದ ಒಂದು ಸಂದೇಶ ಬಂದಿದೆ. ಅದೆಂದರೆ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಗೆಲ್ಲುವ ಅಭ್ಯರ್ಥಿಗಳ ಕೊರತೆ ಇದ್ದರೆ ಜಾ.ದಳ ಇಲ್ಲವೇ ಕಾಂಗ್ರೆಸ್ ಪಕ್ಷದಲ್ಲಿರುವ ಬಲಿಷ್ಟ ನಾಯಕರನ್ನು ಪಕ್ಷಕ್ಕೆ ಸೆಳೆಯಿರಿ ಎಂಬುದು. ಹೀಗೆ ಜಾ.ದಳ ಇಲ್ಲವೇ ಕಾಂಗ್ರೆಸ್ ಪಕ್ಷದಲ್ಲಿರುವವರನ್ನು ಬಿಜೆಪಿಗೆ ಸೆಳೆದು ಟಿಕೆಟ್ ನೀಡಿದರೆ, ಅವರು ತಾವು ಬಂದ ಪಕ್ಷದ ಮತಗಳನ್ನು ಸೆಳೆಯುತ್ತಾರೆ. ಅದೇ ಕಾಲಕ್ಕೆ ಬಿಜೆಪಿಯ ಬಲ ಸೇರಿದರೆ ಅನುಕೂಲವಾಗುತ್ತದೆ ಎಂಬುದು ಈ ಸಂದೇಶದ ಹೂರಣ.
ಪರಿಣಾಮ, ಈಗ ಬಿಜೆಪಿಯ ನಾಯಕರು ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜಾ.ದಳದ ಸ್ಥಳೀಯ ನಾಯಕರನ್ನು ಸೆಳೆಯತೊಡಗಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಫೆಬ್ರವರಿ ಅಂತ್ಯದ ವೇಳೆಗೆ ಹಳೇ ಮೈಸೂರು ಭಾಗದ ಕನಿಷ್ಠ ಮೂವತ್ತೈದು ಕ್ಷೇತ್ರಗಳಲ್ಲಿ ಬಿಜೆಪಿಯ ಶಕ್ತಿ ಹೆಚ್ಚಲಿದೆುಂಂತೆ. ಅರ್ಥಾತ್, ಕರ್ನಾಟಕದ ರಾಜಕಾರಣದಲ್ಲಿ ಆಯಾರಾಂ-ಗಯಾರಾಂ ಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ.

ಕೈ ಪಾಳೆಯಕ್ಕೆ ಟಾನಿಕ್:
ಈ ಮಧ್ಯೆ ಕಳೆದ ಕೆಲ ದಿನಗಳಿಂದ ಉತ್ಸಾಹದ ಅಲೆಯ ಮೇಲೆ ತೇಲುತ್ತಿರುವ ರಾಜ್ಯ ಕಾಂಗ್ರೆಸ್ ಪಾಳೆಯಕ್ಕೆ ಎಸ್.ಎ.ಎಸ್. ಟಾನಿಕ್ ಸಿಕ್ಕಿದೆ. ಹೈದ್ರಾಬಾದ್‌ನ ಎಸ್.ಎ.ಎಸ್. ಸಂಸ್ಥೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆಸಿದ ಸರ್ವೆ ಪ್ರಕಾರ, 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಹಳೆ ಮೈಸೂರು, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಅದು ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಕಾಂಗ್ರೆಸ್ ಬಗ್ಗೆ ಜನರ ಒಲವು ಹೆಚ್ಚಿದೆ. ಕಾಂಗ್ರೆಸ್ ಪಕ್ಷ 108 ರಿಂದ 114 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 65 ರಿಂದ 76 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ.
ಉಳಿದಂತೆ ದೇವೇಗೌಡರ ನೇತೃತ್ವದ ಜಾ.ದಳ 24 ರಿಂದ 30 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಅಂದ ಹಾಗೆ ಇಂತಹ ಸರ್ವೆಗಳು ಪರಿಪೂರ್ಣವೆಂದೇನಲ್ಲ. ಅದರೆ ಅವು ಒಂದು ಮಟ್ಟದಲ್ಲಿ ಜನಾಭಿಪ್ರಾಯವನ್ನು ಕ್ರೋಢೀಕರಿಸುವುದು ನಿಜ. ಅರ್ಥಾತ್, ಅಧಿಕಾರ ಹಿಡಿಯುವ ಕನಸಿನಲ್ಲಿರುವ ಕಾಂಗ್ರೆಸ್ಸಿಗೆ ಈ ಸರ್ವೆ ರಿಪೋರ್ಟು ಟಾನಿಕ್ ನೀಡಿದೆ.
ಇದು ಬಿಜೆಪಿಗೂ ಗೊತ್ತಿದೆ. ಹೀಗಾಗಿ ಸರ್ವೆಗಳ ಮೂಲಕ ಟಾನಿಕ್ ಪಡೆಯಲು ಅದು ಕೂಡ ದೊಡ್ಡ ಮಟ್ಟದಲ್ಲಿ ಕೈ ಹಾಕಲಿದೆ. ಅಂದರೆ, ಸರ್ವೆ ಉದ್ಯಮಕ್ಕೆ ಕರ್ನಾಟಕ ಪ್ರಶಸ್ತ ತಾಣವಾಗಲಿದೆ.

ಬಿಜೆಪಿಗೆ ಒಳಜಗಳದ ಚಿಂತೆ:
ಅಂದ ಹಾಗೆ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ಬುಂಸಿರುವ ಬಿಜೆಪಿ, ಇದಕ್ಕಾಗಿ ಎಲ್ಲ ಬಗೆಯ ಕಸರತ್ತುಗಳನ್ನೂ ನಡೆಸುತ್ತಿದೆ. ಆದರೆ ಇದೆಲ್ಲದರ ನಡುವೆ ಅದಕ್ಕೆ ತಲೆನೋವಾಗಿರುವುದು ಪಕ್ಷದಲ್ಲಿರುವ ಒಳಜಗಳ. ಪಂಚಮಸಾಲಿ ಮೀಸಲಾತಿಉ ವಿಷಯ ಎಲ್ಲೆಲ್ಲೋ ಹೋಗಿ ಈಗ ಅಂತಿಮವಾಗಿ ಸಚಿವ ನಿರಾಣಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ನಡುವಣ ಸಂಘರ್ಷಕ್ಕೆ ಮೂಲವಾಗಿದೆ.
ಇವರಿಬ್ಬರ ಬಹಿರಂಗ ಕಾದಾಟ ಹೇಗಿದೆ ಎಂದರೆ ಪಂಚಮಸಾಲಿ ಮತಬ್ಯಾಂಕ್ ಬಿಜೆಪಿಯಿಂದ ಅಂತರ ಕಾಯ್ದು ಕೊಳ್ಳಬಹುದು ಎಂಬ ಮಟ್ಟದಲ್ಲಿದೆ. ಇದು ನೂರಕ್ಕೆ ನೂರು ಸಾಧ್ಯವಾಗದೇ ಇರಬಹುದು. ಅದರೆ ಬಿಜೆಪಿ ಸರ್ಕಾರ ಪಂಚಮಸಾಲಿಗಳ ಜತೆಗಿಲ್ಲ ಎಂಬ ಅನುವಾನ ದಟ್ಟವಾಗುತ್ತಿರುವುದರಿಂದ ಗಣನೀಯ ಮಟ್ಟದಲ್ಲಿ ಇದು ಪಕ್ಷಕ್ಕೆ ಹೊಡೆತ ಕೊಡಬಹುದು ಎಂಬುದು ಬಿಜೆಪಿ ನಾಯಕರ ಚಿಂತೆ.
ಯಾವಾಗ ಒಂದು ಮತಬ್ಯಾಂಕಿನಲ್ಲಿ ಅನುಮಾನ ಮೂಡುತ್ತದೋ? ಆಗ ಅದು ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ಹೆಜ್ಜೆಗಳನ್ನಿಡುತ್ತದೆ. ಅಂತಹ ಹೆಜ್ಜೆಗಳು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಮಾಡಿಕೊಡಬಹುದು ಎಂಬುದು ಇವರ ಚಿಂತೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago