ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಯಾಕಪ್ಪ ನಮಾಜಿಗೆ ಬರಲಿಲ್ಲ ಎಂದು ಯಾರೂ ಕೇಳುವ ಬಾಬತ್ತಿರಲಿಲ್ಲ. ಸೂಫಿಸಂತರ ಆಚರಣೆಗಳೇ ಪ್ರಧಾನವಾಗಿದ್ದವು. ಹಬ್ಬಗಳೇ ಸಮುದಾಯದ ಧಾರ್ಮಿಕತೆಯನ್ನು ರೂಪಿಸಿದ್ದವು. ಅಪ್ಪ ತನ್ನ ಹೆಸರಿನ ಸಂತನಾದ ಮೆಹಬೂಬ್ ಸುಬಾನಿಯ ಗ್ಯಾರವಿಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದನು. ಅಂದು ಅಮ್ಮ ಜವೆಗೋಽಯ ಒಡಕಲಿನಿಂದ ಗೋಡಂಬಿ, ಒಣದ್ರಾಕ್ಷಿ, ಒಣಕೊಬ್ಬರಿ, ಸೋಪಿನಕಾಳು, ಏಲಕ್ಕಿ ಹಾಕಿ ಗಟ್ಟಿಪಾಯಸ ತಯಾರಿಸುತ್ತಿದ್ದಳು. ಜತೆಗೆ ತುಪ್ಪದಲ್ಲಿ ಒಗ್ಗರಿಸಿದ ಖುಷ್ಕ ಮತ್ತು ಗರಂಮಸಾಲೆಯ ಖುರ್ಮ. ಅಪ್ಪ ಗಳುವಿನ ಗಂಟನ್ನು ಹೆರೆದು, ತುದಿಗೆ ಹಸಿರು ಝಂಡೆ ಪೋಣಿಸುತ್ತಿದ್ದನು. ಅದನ್ನು ಅರಬೀ ಮಂತ್ರ ಪಠಿಸುತ್ತ ಊರ ನಡುವಿರುವ ಬೇವಿನ ವೃಕ್ಷಕ್ಕೆ ಕೊಂಡುಹೋಗಿ ಕಟ್ಟುತ್ತಿದ್ದೆವು. ನಾವಿದ್ದ ತರೀಕೆರೆಯ ಬಡಾವಣೆಗಳಲ್ಲೂ ಮಸೀದಿ ಇರಲಿಲ್ಲ. ಶುಕ್ರವಾರದ ಪ್ರಾರ್ಥನೆಗೆ ಕೆರೆಯ ದಡದಾಚೆ ಪೇಟೆಯಲ್ಲಿದ್ದ ಜಾಮಿಯಾ ಮಸೀದಿಗೆ ಹೋಗಬೇಕಿತ್ತು. ಅಲ್ಲೊಬ್ಬ ಗೌರವ ಬರಿಸುವ ಪ್ರಸನ್ನ ಮುಖವುಳ್ಳ ಇಮಾಮರಿ ದ್ದರು. ಅವರು ಉದ್ದನೆಯ ನಿಲುವಂಗಿ ಧರಿಸಿ ಕಮಂಡಲುವಿನಂತಹ ದೀರ್ಘ ದಂಡದ ಮೇಲೆ ಕೈಗಳನ್ನಿಟ್ಟು, ಗಂಭೀರ ದನಿಯಲ್ಲಿ ಕುರಾನಿನ ಆಯತುಗಳನ್ನು ಪಠಿಸುತ್ತಿದ್ದರು. ಪ್ರಾರ್ಥನೆಯ ಬಳಿಕ ನಾವವರ ಮುಂಗೈ ಚುಂಬಿಸುತ್ತಿದ್ದೆವು. ಮಸೀದಿಯ ಪ್ರಾರ್ಥನೆ, ದರ್ಗಾದ ಭಕ್ತಿ, ಮೊಹರಮ್ಮಿನ ಕಲಾವಂತಿಕೆಗಳ ಮಧ್ಯೆ ವೈರುಧ್ಯವಿಲ್ಲದ ಈ ಧಾರ್ಮಿಕತೆ, ನೆಮ್ಮದಿಯ ದಡದಂತಿತ್ತು.
ಕುಲುಮೆ ಕೆಲಸದಲ್ಲಿ ದಿನವಿಡೀ ಮುಳುಗಿರುತ್ತಿದ್ದ ಅಪ್ಪ-ಅಣ್ಣನಿಗೆ ಪ್ರಾರ್ಥನೆಗೆ ಪುರುಸೊತ್ತಿರಲಿಲ್ಲ. ದಣಿದು ಬೆವೆತು ಬಾಡಿದ ಬಾಳೆಲೆಗಳಂತೆ ಮನೆಗೆ ಬಂದು ಬೀಳುತ್ತಿದ್ದರು. ನಮಾಜು ಮಾಡುವ ಕೆಲವರಿಗೆ ತಾವಷ್ಟೆ ಸ್ವರ್ಗಕ್ಕೆ ಹೋಗುವರೆಂಬ ಆತ್ಮವಿಶ್ವಾಸವೂ ಬಾರದಿರುವವರನ್ನು ಕ್ಷುದ್ರವಾಗಿ ಕಾಣುವ ಗುಣವೂ ಇರುವುದುಂಟು. ಮಿಂದು ಮಡಿಯುಟ್ಟು ಶುಕ್ರವಾರದ ನಮಾಜಿಗೆ ಹೋಗುತ್ತಿದ್ದ ನನಗೆ, ಕುಲುಮೆಯಲ್ಲಿ ಕತ್ತೆಯಂತೆ ದುಡಿಯುತ್ತಿದ್ದ ಅಣ್ಣ, ಅಧರ್ಮಿಯಂತೆ ನರಕಭಾಜನನಂತೆ ತೋರುತ್ತಿದ್ದನು. ಮುಂದೆ ಅಣ್ಣ ಮಹಾಧಾರ್ಮಿಕನಾದನು. ಸಾಮಾಜಿಕ ಮನ್ನಣೆಯಿಲ್ಲದ ಕಮ್ಮಾರನಾಗಿದ್ದ ಅವನಿಗೆ, ಹೊಸ ಧಾರ್ಮಿಕತೆಯು ಐಡೆಂಟಿಯನ್ನು ಕೊಟ್ಟಿತ್ತು. ನಾನು ವಿಚಾರವಾದಿ ಚಳವಳಿಯ ಭಾಗವಾಗಿ, ಧರ್ಮಗಳ ವಿಮರ್ಶಕನಾದೆನು. ಕೆಲವರು ನನ್ನಲ್ಲಿ ತಕ್ಕಷ್ಟು ಧಾರ್ಮಿಕ ಶ್ರದ್ಧೆಯಿಲ್ಲ ಎಂದು ಪತ್ತೆ ಮಾಡಿದರು. ಸಾಮೂಹಿಕ ಪ್ರಾರ್ಥನೆಗೆ ಗುಂಪಾಗಿ ತಕಬೀರ್ ಹೇಳುತ್ತ ಹೋಗುವಾಗ, ಮೌನವಾಗಿ ನಡೆಯುತ್ತಿದ್ದ ನನ್ನತ್ತ ಒಬ್ಬ ಬಂದವನೇ, ‘ಧರ್ಮದ ಜೋಶೇ ಇಲ್ಲವಲ್ಲೊ ನಿನ್ನಲ್ಲ್ಲಿ’ ಎಂದು ಕೈಯನ್ನು ತಿರುಚುವಂತೆ ಅಮುಕಿದನು. ದೇವರ-ನಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರ ಸಮಸ್ಯೆ ವಿಚಿತ್ರವಾಗಿತ್ತು. ಹೀಗಿದ್ದರೆ ಮಾತ್ರ ಧಾರ್ಮಿಕ ಎಂಬ ಸಂಪ್ರದಾಯಸ್ಥ ಕಣ್ಪಹರೆಗಳು ನನ್ನನ್ನು ಹೊಸ ಹಾದಿಯತ್ತ ಚಲಿಸುವಂತೆ ಮಾಡಿದವು.
ಸಾಂಪ್ರದಾಯಿಕ ಧರ್ಮದ ಕಣ್ಣಿಗೆ ವ್ಯಕ್ತಿವಿಶಿಷ್ಟತೆ ಮತ್ತು ವೈಚಾರಿಕತೆಗಳು ಹಾದಿತಪ್ಪಿದವರ ಚೇಷ್ಟೆಗಳಂತೆ ತೋರುತ್ತವೆ; ವ್ಯಕ್ತಿಯ ಧ್ಯಾನ, ಆಧ್ಯಾತ್ಮಿಕ ತುಡಿತ, ಗುಪ್ತಭಕ್ತಿ, ಸಾಮಾಜಿಕ ಹೊಣೆಗಾರಿಕೆ ಅವಕ್ಕೆ ಅರ್ಥವಾಗುವುದಿಲ್ಲ. ಅಮ್ಮ ಕುರಾನ್ ಸೀಯರ್ ಓದುವುದು, ಬಾನು ನಮಾಜು ಮಾಡುವುದು, ಅತ್ತೆಯವರು ಹಜ್‌ಗೆ ಹೋಗಿದ್ದು, ಅಪ್ಪ ಬೇವಿನ ಮರಕ್ಕೆ ಝಂಡೆ ಏರಿಸು ವುದು, ಬಂಧುಗಳು ಉರುಸಿಗೆ ಹೋಗುವುದು ನನಗೆಂದೂ ತೋರಿಕೆ ಅನಿಸಲಿಲ್ಲ. ಧಾರ್ಮಿಕತೆಯು ಮತ್ತೊಬ್ಬರ ಧರ್ಮಶ್ರದ್ಧೆಯನ್ನು ಅಳೆವ ಮಾನದಂಡ ಮತ್ತು ತಿದ್ದುವ ಕಾವಲುಗಾರ ಆಗುತ್ತಿದ್ದಂತೆ ಮೂಲಭೂತವಾದಿ ಆಗುತ್ತದೆ. ಅಣ್ಣನು ಸೇರಿಕೊಂಡಿದ್ದ ಪಾಂಥಿಕ ಧರ್ಮದ ಆಚರಣೆಗಳಲ್ಲಿ ಈ ಗುಣವಿತ್ತು. ದುಡಿವ ಜನ ನಮಾಜಿಗೆ ಹೋಗದೆಯೂ ನೆಮ್ಮದಿಯಾಗಿ ಇರುವಾಗ, ತೋರಿಕೆಯ ಧಾರ್ಮಿಕತೆ, ಲೋಕಕ್ಕಂಜಿ ಮಾಡುವ ನಟನೆ ಎನಿಸುತ್ತಿತ್ತು. ಈಜುಬಾರದೆ ಕಿನಾರೆ ಕಾಣದೆ ಆಳನೀರಲ್ಲಿ ಕೈಕಾಲು ಬಡಿವವನ ಪರಿಸ್ಥಿತಿ ಸಂಕ್ರಮಣಾವಸ್ಥೆಯಲ್ಲಿದ್ದೆ.
ಹಾಗಾದರೆ ನಿಜವಾದ ಮುಸ್ಲಿಮನ ಗುರುತೇನು? ಶ್ರದ್ಧಾವಂತ ಧಾರ್ಮಿಕನಾಗಿದ್ದೂ ಎಲ್ಲರ ನೋವಿಗೆ ಮಿಡಿವ, ಅವರ ಸಂಭ್ರಮಗಳಲ್ಲಿ ಶಾಮೀಲಾಗುವ, ಕೇಡನ್ನು ಪ್ರತಿರೋಽಸುವ ನಾಗರಿಕ ಪ್ರಜ್ಞೆಯ ಮಾನವನಾಗುವುದು ಹೇಗೆ? ಏಕದೇವೋಪಾಸಕ ಧರ್ಮಗಳಲ್ಲಿ ಸ್ವತಂತ್ರ ಆಲೋಚನೆಯು ಸಮುದಾಯದ ಜತೆಗಿನ ಸಾವಯವ ಸಂಬಂಧ ಕಳಚಿಕೊಳ್ಳುವ ಕಷ್ಟಕ್ಕೂ ದೂಡುತ್ತದೆಯೇ? ಸಾಂಪ್ರದಾಯಿಕ ಧರ್ಮಶ್ರದ್ಧೆಯ ಪ್ರದರ್ಶನ, ಅಲ್ಲಿರುವ ಸ್ತ್ರೀಯರನ್ನು ಕುರಿತ ಅಸಮಾನ ಧೋರಣೆ ಅಫೀಮಿನ ರೂಪಕವನ್ನು ನೆನಪಿಸುತ್ತಿತ್ತು. ಕನ್ನಡ ಸಾಹಿತ್ಯ ಓದು ಮತ್ತು ಚಳವಳಿಗಳ ಸಂಗ ಹೊಸಪ್ರಜ್ಞೆ ಬೆಳೆಸುತ್ತಿದ್ದವು. ನನ್ನ ತುರುಸಿನ ವಾದವನ್ನು ಒಪ್ಪಿಸಲು ಒಬ್ಬ ಎದುರಾಳಿ ಬೇಕಿತ್ತು. ಆಗ ಸಿಕ್ಕಿದ್ದು ಬಾನು. ಧರ್ಮದ ಹೆಸರಲ್ಲಿ ಕ್ರೌರ್ಯ ಹಿಂಸೆ ನಡೆದಾಗ, ಅಮಾಯಕ ಜನರ ಬಡತನ ರೋಗ ಸಂಕಟಗಳು ಕಂಡಾಗ, ‘ದೇವರಿದ್ದಾನೆಯೇ? ಅವನಿದ್ದೂ ಇಷ್ಟೆಲ್ಲ ಅನ್ಯಾಯ ಏಕೆ ನಡೀತಿದೆ? ಇವೆಲ್ಲ ಆಗುವಾಗಲೂ ಆತ ಮೌನ ವಹಿಸಿದ್ದಾನೆಂದರೆ ಅದು ಕ್ರೌರ್ಯ ಅಲ್ಲವೇ?’ ಎಂದು ಕೇಳುತ್ತಿದ್ದೆ. ನನ್ನ ಪ್ರಶ್ನೆಗೆ ಉತ್ತರಿಸದೆ ಆಕೆ ಮೌನ ತಾಳುತ್ತಿದ್ದಳು. ಒಳಗೇ ದುಃಖಿಸುತ್ತಿದ್ದಳು. ಮಕ್ಕಳಿಗೆ ನನ್ನ ಗಾಳಿ ಬೀಸದಂತೆ ಎಚ್ಚರವಹಿಸಿದಳು.
ನನ್ನ ಒರಟು ವೈಚಾರಿಕತೆಯ ನಶೆ ಇಳಿದ ಮೇಲೆ, ಅವಳ ಭಾವನೆಯನ್ನು ಗೌರವಿಸತೊಡಗಿದೆ. ಮತ್ತೊಬ್ಬರಿಗೆ ಬಾಧೆಕೊಡದೆ ತಮ್ಮ ಪಾಡಿಗೆ ಬದುಕುವ ಧಾರ್ಮಿಕರನ್ನು, ಅವರಲ್ಲಿರುವ ಜೀವನಪ್ರೀತಿ, ಮಾನವೀಯತೆಯನ್ನು ಸಹನೆಯಿಂದ ಅರ್ಥಮಾಡಿಕೊಳ್ಳಲು ಕಲಿತೆ. ಪಾಂಥಿಕ ಕಟುತ್ವವಿಲ್ಲದೆ ಸರಳ ಬದುಕಿನಿಂದ ಧಾರ್ಮಿಕಳಾಗಿದ್ದ ಅಮ್ಮ ಇದಕ್ಕೆ ಮಾದರಿಯಾಗಿದ್ದಳು. ಆಕೆಗೆ ಸರ್ವ ಜಾತಿ ಧರ್ಮದವರೊಡನೆ ಹಾರ್ದಿಕ ಸಂಬಂಧವಿತ್ತು. ಸಮುದಾಯ ದೊಳಗಿದ್ದೇ ಜನರನ್ನು ಅರ್ಥಮಾಡಿಕೊಂಡು ನನ್ನ ಸಾಮಾಜಿಕ ರಾಜಕೀಯ ಚಿಂತನೆ ಹಂಚಿಕೊಳ್ಳುವ ಹಾದಿ ಹುಡುಕತೊಡಗಿದೆ. ನನ್ನ ಧಾರ್ಮಿಕ ಶ್ರದ್ಧೆ ಪ್ರಶ್ನಿಸುವವರಿಗೆ ‘ನನ್ನ ಸಮುದಾಯದ ಆರ್ಥಿಕ ಸ್ಥಿತಿ, ಸಾಮಾಜಿಕ ಸುಧಾರಣೆ, ರಾಜಕೀಯ ಪ್ರಜ್ಞೆ ಬಗ್ಗೆ ಚಿಂತಿಸುತ್ತೇನೆ. ಇದೇ ನನ್ನ ಧರ್ಮ. ಇಷ್ಟಕ್ಕೂ ಧಾರ್ಮಿಕ ಶ್ರದ್ಧೆ ಮನಸ್ಸಿನಲ್ಲಿ ಇರಬೇಕಾದ್ದು. ಪ್ರಪಂಚಕ್ಕೆ ತೋರಿಸುವಂತಹದ್ದಲ್ಲ’ ಎಂದು ಪ್ರತಿವಾದ ಕೊಡಲು ಆರಂಭಿಸಿದೆ. ಸಂಪ್ರದಾಯಸ್ಥರ ಕಣ್ಣಲ್ಲಿ ಸ್ವರ್ಗಕ್ಕರ್ಹನಾದ ಧಾರ್ಮಿಕ ಆಗುವುದಕ್ಕಿಂತ ಮಾನವಂತರ ಕಣ್ಣಲ್ಲಿ ಮನುಷ್ಯ ಎನಿಸಿಕೊಳ್ಳುವುದು ಅಗತ್ಯವೆಂದು ಭಾವಿಸತೊಡಗಿದೆ.
ಜೀವನಪ್ರೀತಿಯ ಧಾರ್ಮಿಕತೆ, ಅಸಹನಶೀಲ ಮೂಲಭೂತವಾದ, ಮಾನವತಾವಾದ, ನಾಸ್ತಿಕವಾದ, ಸಾಂಸ್ಕ ತಿಕ ಅಸೂಕ್ಷ ತೆಯ ಶುಷ್ಕ ವಿಚಾರವಾದಗಳ ಗೊಂದಲದ ಚಕ್ರದಲ್ಲಿ ತೊಳಲುವಾಗ, ಪ್ರೇಮತತ್ವದ ಅನುಭಾವ ದರ್ಶನವಾದ ಸೂಫಿಸಂ ಪ್ರಿಯವಾಗತೊಡಗಿತು. ಅದರೊಳಗಿನ ಸಾಹಿತ್ಯ ದರ್ಶನ ಸಂಗೀತಗಳು ಆವರಿಸಿಕೊಂಡವು. ಅದು ಪ್ರೇಮಭಾವವನ್ನು ನಮ್ಮೊಳಗೆ ಉದ್ದೀಪಿಸಿಕೊಳ್ಳುವುದನ್ನು ಸೂಚಿಸುತ್ತಿತ್ತು. ತನ್ನೊಳಗನ್ನು ತಾನೇ ಶೋಽಸುವ ಅದರ ಅಧ್ಯಾತ್ಮ ಅನುಭಾವ ಧ್ಯಾನ ಸಂಭ್ರಮ ಇಷ್ಟವಾದವು. ಬಾಲ್ಯದ ಮುಗ್ಧತೆಯಲ್ಲಿದ್ದ ಮನಃಪೂರ್ವಕ ಧಾರ್ಮಿಕತೆ, ವ್ಯಕ್ತಿಯ ವೈಯಕ್ತಿಕತೆಯನ್ನು ನಾಶಗೊಳಿಸಿ ಹೇರಲಾಗುವ ಜಡ ಧಾರ್ಮಿಕತೆ, ವೈಚಾರಿಕ ಬಿಡುಗಡೆ ಭಾವ ಏರ್ಪಡಿಸುವ ಸಮುದಾಯ ದೂರತೆಯ ಹೆದ್ದೆರೆಗಳಲ್ಲಿ ತೊಳಲಾಡಿ ನಾವೆ, ಸೂಫಿಸಂ ವಿಶ್ವಾತ್ಮಕ ಮಾನವತೆಯ ಕಿನಾರೆಯಲ್ಲಿ ಲಂಗರು ಹಾಕಿತು. ಇಷ್ಟಕ್ಕೂ ನಾನು ದೊಡ್ಡ ಸುತ್ತುಹಾಕಿ ಅಪ್ಪ-ಅಮ್ಮನ ಸರಳ ಧಾರ್ಮಿಕತೆಗೆ ಮರಳಿದ್ದೆ.
‘ನೀವು ಸೂಫಿಗಳ ಮೇಲೆ ಪುಸ್ತಕ ಬರೆದಿದ್ದೀರಿ. ಅದು ಹೇಗೆ ಇಸ್ಲಾಮಿಗೆ ಸಂಬಂಧ?’ ಎಂದು ಕೆಲವರು ಕೇಳುವುದುಂಟು. ಮೊದಲೆಲ್ಲ ‘ಹೇಗೆಂದರೆ…’ ಎಂದು ಕಷ್ಟಪಟ್ಟು ಸಮಜಾಯಿಷಿ ನೀಡುತ್ತಿದ್ದೆ. ಈಗ ‘ನೀವು ಶ್ರದ್ಧಾವಂತ ಮುಸ್ಲಿಮರು ಅಂದುಕೊಂಡಿದ್ದೀರಲ್ಲ. ಹಾಗಿದ್ದರೆ ಇದನ್ನೇಕೆ ಮಾಡುತ್ತೀರಿ?’ ಎಂದು ಪ್ರಶ್ನಿಸಿ, ಸಮಜಾಯಿಷಿ ಕೊಡುವ ಅವಸ್ಥೆಗೆ ಅವರನ್ನು ದೂಡುತ್ತೇನೆ. ಈಚೆಗೆ ಇಂತಹ ವ್ಯಾಜ್ಯಕ್ಕೆ ಬೀಳುವುದೂ ಕಡಿಮೆಗೊಂಡಿತು. ಬಾಬ್ರಿಮಸೀದಿ ಕೆಡವಿದ ಬಳಿಕ ದೇಶದಲ್ಲಿ ನಿರ್ಮಾಣವಾದ ವಿದ್ವೇಷದ ಸನ್ನಿವೇಶವು, ನಮ್ಮ ವೈಚಾರಿಕತೆಯನ್ನು ಘೋಷಿಸದೆ ಅಥವಾ ಹೇರದೆ, ಸಮುದಾಯಗಳಲ್ಲಿ ಸೇತುಗಟ್ಟುವ ಮತ್ತು ಸಂವಾದ ಮಾಡುವ ಜರೂರತ್ತನ್ನು ಮನಗಾಣಿಸಿತು. ಇದು ನನಗೆ, ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಭಾರತಕ್ಕೂ ಬೇಕಾದ್ದು. ಈಗ ನೀನು ಯಾರು ಎಂದು ದಟ್ಟಿಸಿ ಕೇಳಿದರೆ, ಜಲಾಲುದ್ದೀನ್ ರೂಮಿ, ಕಬೀರ, ದಾರಾಶಿಕೊ, ಎರಡನೇ ಇಬ್ರಾಹಿಂ, ಅಕ್ಬರ್, ಅಸಘರಲಿ ಇಂಜಿನಿಯರ್, ಫಕೀರ್ ಮುಹಮದ್ ಕಟ್ಪಾಡಿ ಪರಂಪರೆಯವನು ಎನ್ನುತ್ತೇನೆ. ಸೂಫಿಸಂನಲ್ಲೂ ವ್ಯಾಪಾರೀಕರಣ, ವ್ಯಕ್ತಿಪೂಜೆ, ಮೌಢ್ಯಗಳು ಅಡಗಿವೆ. ಅವನ್ನು ನಿವಾರಿಸಿಕೊಂಡು ಯಾನಮಾಡುವ ಬಗ್ಗೆ ಚಿಂತಿಸುತ್ತೇನೆ.
ವತೀಯವಾದಕ್ಕೆ ನನ್ನ ಪ್ರತಿರೋಧದ ಬರಹವನ್ನು ಮೆಚ್ಚುವ ಅನೇಕ ಮುಸ್ಲಿಮರು, ಬುರ್ಖಾ, ತಲಾಖ್ ಪದ್ಧತಿ ಮತ್ತು ಮುಸ್ಲಿಂ ಮೂಲ ಭೂತವಾದದ ಬಗ್ಗೆ ನನ್ನ ನಿಲುವನ್ನು ಕಂಡು, ಹೊರಗಿನವನು ಎಂಬಂತೆ ನೋಡುವರು.
ಹಿಂದುಗಳಲ್ಲಿ ಕೆಲವರು ನಾನು ಶಾಕ್ತ ಆರೂಢ ನಾಥಗಳ ಮೇಲೆ ಮಾಡಿರುವ ಚಿಂತನೆಯನ್ನು ಬಹಳವಾಗಿ ಮೆಚ್ಚುವರು. ಆದರೆ ಮತೀಯವಾದಿಗಳು ‘ಏನು ಮಾಡಿದರೂ ನಮ್ಮವನಲ್ಲ’ ಎಂದು ಶಂಕಿಸುವರು. ಕೆಲವು ವಿಚಾರವಾದಿ ಗೆಳೆಯರಿಗೆ ನನ್ನ ವೈಚಾರಿಕತೆಯ ಬಗ್ಗೆ ಒಳಗೇ ಶಂಕೆ. ಇಸ್ರೇಲ್, ಪ್ಯಾಲೆಸ್ತೇನ್ ಪ್ರವಾಸಕ್ಕೆ ಹೋಗುವಾಗ, ಜೆರುಸಲೇಂ ಗೋಲ್ಡನ್‌ಡೂಮಿನ ಚಿತ್ರ ಹಂಚಿಕೊಂಡಿದ್ದೆ. ಅದು ಕ್ರೈಸ್ತ, ಇಸ್ಲಾಂ, ಯಹೂದಿ ಮೂರೂ ಧರ್ಮಗಳಿಗೂ ಸೇರಿದ ಕಟ್ಟಡ. ಅದನ್ನು ಕಂಡ ಗೆಳೆಯರು ನಾನು ಹಜ್ ಯಾತ್ರೆಗೆ ಹೋಗುತ್ತಿದ್ದೇನೆಂದೂ ಆಳದಲ್ಲಿ ಸಂಪ್ರದಾಯವಾದಿಯೆಂದೂ ಪುಕಾರು ಹಬ್ಬಿಸಿದರು. ವಾಸ್ತವವಾಗಿ ಅದು ಏಸು ಹುಟ್ಟಿ ಬೆಳೆದ, ಶಿಲುಬೆಗೆರಿದ ಸ್ಥಳಗಳ ಯಾತ್ರೆಯಾಗಿತ್ತು. ಕಟ್ಟರ್ ವಿಚಾರವಾದಿಗಳ ಈ ಕಣ್ಪಹರೆ ಕಂಗೆಡಿಸಿತು. ಇದಾದ ಬಳಿಕ ಅರಬಸ್ಥಾನಕ್ಕೆ ಹೋಗಲೇಬೇಕು ಅನಿಸಿತು. ಮಕ್ಕಾ, ಮದೀನ, ಕರ್ಬಲಾ, ಬಾಗ್ದಾದ್, ಜೆರುಸಲೇಂ, ಡಮಾಸ್ಕಸ್ ಚಾರಿತ್ರಿಕ ಮಹತ್ವದ ಸ್ಥಳಗಳು. ಮೊಹರಂ ಸೂಫಿಸಂ ಅಧ್ಯಯನದ ದೃಷ್ಟಿಯಿಂದಲೂ ಇವನ್ನು ಅಭ್ಯಾಸ ಮಾಡಬೇಕಿದೆ.
ಕೊನೆಗೂ ನಾನು ಯಾರು? ನನ್ನ ಧಾರ್ಮಿಕತೆ ಅಥವಾ ವೈಚಾರಿಕತೆ ಯಾವುದು? ನನ್ನ ಚಹರೆಯ ಪ್ರಶ್ನೆಯನ್ನು ತುರ್ತಾಗಿ ಬಗೆಹರಿಸಿಕೊಳ್ಳುವ ದರ್ದು ನನಗೀಗ ಕಾಣುತ್ತಿಲ್ಲ. ನನ್ನಂತಹವರ ಅವಸ್ಥೆಯನ್ನು ಹಿಡಿದಿಡುವ ಪರಿಭಾಷೆಯೂ ಫಕ್ಕನೆ ಸಿಗಲೊಲ್ಲದು. ನಾನೀಗ ಏನೇನಾಗಿದ್ದೇನೊ ಅಥವಾ ಆಗಿಲ್ಲವೊ ಅದೇ ನಾನು. ಲೋಕವನ್ನು ಭೇದವಿಲ್ಲದೆ ಪ್ರೀತಿಸುವ ಮೈತ್ರಿಭಾವದ ಮನುಷ್ಯನಾಗಲು ಹಂಬಲಿಸುವವನು. ಈ ಮೈತ್ರಿಯನ್ನು ಕದಡುವ ಎಲ್ಲ ಶಕ್ತಿಗಳನ್ನು ಪ್ರತಿರೋಽಸುವವನು; ಈ ಹಂಬಲ- ಪ್ರತಿರೋಧಗಳ ದ್ವಂದ್ವದಲ್ಲಿ ತೊಳಲಾಡುವವನು; ‘ನಿಮ್ಮೊಳಗಿದ್ದೂ ನಿಮ್ಮಂತಾಗದೆ’ ಕವಿತೆಯ ನಾಯಕನಂತೆ ಎಲ್ಲಿಯೂ ಸಲ್ಲದವನು. ದಡ ಸಿಗದಾಗಿನ ತಲ್ಲಣವನ್ನು ದಡ ಸಿಕ್ಕ ಬಳಿಕವೂ ಉಳಿಸಿಕೊಂಡವನು. ಶ್ರದ್ಧೆ, ಸಂಶಯ, ಹುಡುಕಾಟಗಳಿಂದ ನನಗೆ ಮುಕ್ತಿಯಿದ್ದಂತಿಲ್ಲ.
ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ…
ಬಾಗಲಕೋಟೆ: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿ, ಫೇಕ್ ಎನ್‌ಕೌಂಟರ್ ಮಾಡುವ ಉದ್ದೇಶವಿತ್ತು ಎಂದೆನ್ನಿಸುತ್ತದೆ ಎಂದು ಕೇಂದ್ರ…
ಬೆಂಗಳೂರು: ಸಾರ್ವಜನಿಕರಿಗೆ ಪಿಎಫ್ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ…
ಮಂಡ್ಯ: 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 66ವರ್ಷದ ಬಳಿಕ ಗಣಿನಾಡಿಗೆ ನುಡಿತೇರು…
ಬೆಳಗಾವಿ: ಚಳಿಗಾಳದ ಅಧಿವೇಶನ ಸಂದರ್ಭದಲ್ಲಿ ಪಂಚಮಶಾಲಿಗಳು ತಮ್ಮ ಮೀಸಲಾತಿಗಾಗಿ ಸುವರ್ಣ ಸೌಧದ ಹತ್ತಿರ ಹೋರಾಟ ಮಾಡುವಾಗ ಪೊಲೀಸರು ಲಾಠಿ ಚಾರ್ಜ್…
ಕಲಬುರ್ಗಿ: ನಗರದ ಏಳು ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಟ್ಟಡವನ್ನು ಇಂದು…