ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಶಸ್ತ್ರತ್ಯಾಗ ಮಾಡಿದ್ದಾರೆ. ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಅವರ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದ ಯತ್ನಾಳ್ ಈಗ ಶಸ್ತ್ರ ತ್ಯಜಿಸಿರುವುದು ಅಚ್ಚರಿಯೇನಲ್ಲ.
ಇನ್ನು ಮುಂದೆ ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡಲಾರೆ. ನನಗೆ ಅವರ ಬಗ್ಗೆ ಅಪಾರ ಗೌರವವಿದೆ ಅಂತ ಯತ್ನಾಳ್ ಹೇಳಲೂ ಕಾರಣವಿದೆ. ಅದೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಕ್ತಿಯ ಅಗತ್ಯ ಪಕ್ಷಕ್ಕಿದೆ ಅಂತ ಮೋದಿ-ಅಮಿತ್ ಶಾ ಜೋಡಿಗೆ ಮನವರಿಕೆ ಆಗಿರುವುದು.
ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿ ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು ಅಂತ ಇತ್ತೀಚಿನವರೆಗೂ ಈ ಜೋಡಿ ನಿರ್ಧರಿಸಿತ್ತು. ಕಾರಣ ರಾಜ್ಯ ಬಿಜೆಪಿಗೆ ಎಲ್ಲಿಯವರೆಗೆ ಯಡಿಯೂರಪ್ಪ ಅನಿವಾರ್ಯ ಎನ್ನಿಸುತ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಪಕ್ಷ ಸ್ವಯಂ ಬೆಳವಣಿಗೆ ಕಾಣುವುದಿಲ್ಲ. ಇದು ಮುಂದೆ ವಂಶಪಾರಂಪರ್ಯ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರನ್ನು ಭವಿಷ್ಯದ ನಾಯಕನನ್ನಾಗಿ ನಿಲ್ಲಿಸಲು ಬಯಸಿದ್ದಾರೆ. ಯಾವ ಕಾರಣಕ್ಕೂ ಇದು ಸರಿಯಲ್ಲ ಎಂಬುದು ಮೋದಿ-ಅಮಿತ್ ಶಾ ಜೋಡಿಯ ಯೋಚನೆಯಾಗಿತ್ತು. ಇದೇ ಕಾರಣಕ್ಕಾಗಿ ಮೋದಿಯವರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪದೇ ಪದೇ ಧ್ವನಿ ಎತ್ತಿದರು.
ವಂಶಪಾರಂಪರ್ಯ ರಾಜಕಾರಣ ಅಧಿಕಾರವನ್ನಷ್ಟೇ ಅಲ್ಲ, ಭ್ರಷ್ಟಾಚಾರದ ಪರಂಪರೆಯೂ ಮುಂದುವರಿಯುವಂತೆ ಮಾಡುತ್ತದೆ ಎಂಬುದು ಮೋದಿಯವರ ಮಾತು.
ಅವರ ಇಂತಹ ಮಾತುಗಳಿಗೆ ಪೂರಕವಾಗಿ ಯಡಿಯೂರಪ್ಪ ಅವರನ್ನು ಮಾಡುವ ಪ್ರಯತ್ನ ಸಾಂಗೋಪಾಂಗವಾಗಿ ನಡೆದುಕೊಂಡು ಬಂತು.
ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಒಂದು ಹಂತದಲ್ಲಿ ತಮ್ಮ ಪುತ್ರನಿಗೆ ಎಂಎಲ್‌ಸಿ ಟಿಕೆಟು ಪಡೆಯಲು ಯಡಿಯೂರಪ್ಪ ಪರದಾಡಬೇಕಾಯಿತು.
ವಿಜಯೇಂದ್ರ ಅವರಿಗೆ ಟಿಕೆಟ್ ಸಿಗಲು ಬೆಂಬಲಿಸಿ ಅಂತ ಬೊಮ್ಮಾಯಿ ಸಂಪುಟದ ಕೆಲ ಸಚಿವರ ಬಳಿ ಯಡಿಯೂರಪ್ಪ ಕೇಳಿಕೊಳ್ಳುವ ಸ್ಥಿತಿ ಬಂದಿದ್ದು ಇದಕ್ಕೆ ಸಾಕ್ಷಿ. ಯಾವಾಗ ಯಡಿಯೂರಪ್ಪ ಅವರ ಮಾತಿಗೆ ಶಕ್ತಿ ಕಡಿಮೆಯಾಯಿತೋ ಆಗ ರಾಜ್ಯ ಬಿಜೆಪಿಯ ಮೇಲೆ ನಿಯಂತ್ರಣ ಸಾಧಿಸಿದವರು ಮತ್ತಷ್ಟು ಪವರ್ ಫುಲ್ ಆದರು. ಇದೇ ನಾಯಕರು ಮೇಲಿಂದ ಮೇಲೆ ಸರ್ವೆ ಮಾಡಿಸುತ್ತಾ, ಕರ್ನಾಟಕದಲ್ಲಿ ಪಕ್ಷದ ಶಕ್ತಿ ಹೆಚ್ಚಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತದೆ ಎಂಬಂತಹ ರಿಪೋರ್ಟುಗಳನ್ನು ತರಿಸತೊಡಗಿದರು. ಇತ್ತೀಚೆಗೆ ಬೆಂಗಳೂರಿನ ನಂದಿ ಬೆಟ್ಟದ ಬಳಿ ನಡೆದ ಪಕ್ಷದ ಸಭೆಯೊಂದರಲ್ಲಿ, ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಅಂತ ಈ ನಾಯಕರು ಹೇಳಿದಾಗ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಶಕ್ತಿಯನ್ನು ನಿರ್ಲಕ್ಷಿಸಬೇಡಿ. ಆ ಶಕ್ತಿ ಸರಳವಾದದ್ದಲ್ಲ ಅಂತ ಅವರು ನೀಡಿದ ಎಚ್ಚರಿಕೆ ಈ ನಾಯಕರ ಬಾಯಿ ಕಟ್ಟಿಸಿತು. ಇಷ್ಟಾದರೂ ಯಡಿಯೂರಪ್ಪ ಅವರ ವಿಷಯದಲ್ಲಿ ಮೋದಿ-ಅಮಿತ್ ಶಾ ಜೋಡಿಗಿದ್ದ ಅಸಹನೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿಗಳ ಬಲ ಬೆಳೆಯುವಂತೆ ಮಾಡಿತು.
ಇದೇ ಅಂಶ ಬಸನಗೌಡ ಪಾಟೀಲ್ ಯತ್ನಾಳ್ ಎಂಬ ಭಿನ್ನಮತೀಯ ನಾಯಕ ಪದೇ ಪದೇ ಅಬ್ಬರಿಸಲು ಕಾರಣವಾಯಿತು. ಆದರೆ ಇವತ್ತು ಪರಿಸ್ಥಿತಿ ಹೇಗಾಗಿದೆಯೆಂದರೆ, ತಿಪ್ಪರಲಾಗ ಹಾಕಿದರೂ ಬಿಜೆಪಿಯ ಗ್ರಾಫು ಏರುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷ ಅಬ್ಬರಿಸುತ್ತಿರುವ ಹೊಡೆತಕ್ಕೆ ಬಿಜೆಪಿ ತತ್ತರಿಸುತ್ತಿದೆ.
ಕಾಂಗ್ರೆಸ್‌ನ ಈ ಆರೋಪಕ್ಕೆ ಪ್ರತಿಯಾಗಿ ಅದು ನೀಡುತ್ತಿರುವ ಪ್ರತಿಕ್ರಿಯೆ ಜನರ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಗಂಗೋತ್ರಿ ಎಂದು ಬಿಜೆಪಿ ಹೇಳುತ್ತಿದ್ದರೂ, ಸ್ವಯಂ ಆಗಿ ತಾನೇ ಭ್ರಷ್ಟಾಚಾರದ ಯಮುನೋತ್ರಿಯಂತೆ ಕಾಣುತ್ತಿದೆ. ಹೀಗಾಗಿ ಅದು ತನ್ನ ಮುಖ ಉಳಿಸಿಕೊಳ್ಳಲು ಹಿಂದುತ್ವದ ಅಜೆಂಡಾ ಹಿಡಿಯುತ್ತಿದ್ದರೂ ಅದು ಕಮಲ ಪಾಳೆಯದ ಮತ ಬ್ಯಾಂಕ್ ಅನ್ನು ಬಲಿಷ್ಠಗೊಳಿಸುತ್ತಿಲ್ಲ.
ಅರ್ಥಾತ್, ಕರ್ನಾಟಕದ ನೆಲೆಯಲ್ಲಿ ಧರ್ಮಾಧಾರಿತ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವುದಕ್ಕಿಂತ ಜಾತಿಯ ಮತ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳುವುದು ಅನಿವಾರ್ಯ ಎಂಬುದು ಮೋದಿ-ಅಮಿತ್ ಶಾ ಜೋಡಿಗೆ ಮನವರಿಕೆ ಆಗಿದೆ.
ವಸ್ತುಸ್ಥಿತಿ ಎಂದರೆ ಬಿಜೆಪಿಗೆ ಜಾತಿ ಮತಬ್ಯಾಂಕ್ ಅನ್ನು ಕ್ರೋಢೀಕರಿಸಿ ಕೊಡುವ ಶಕ್ತಿ ಇರುವುದು ಕೇವಲ ಯಡಿಯೂರಪ್ಪ ಅವರಿಗೆ ಮಾತ್ರ.
ಜಾತಿರಾಜಕಾರಣದ ಸೂತ್ರಗಳನ್ನು ದೇವೇಗೌಡ, ಸಿದ್ದರಾಮಯ್ಯ ಅವರಂತೆಯೇ ಪರಿಣಾಮಕಾರಿಯಾಗಿ ಬಳಸಬಲ್ಲ ಶಕ್ತಿ ಇರುವುದು ಅವರಿಗೇ. ಕಳೆದ ಹಲ ಕಾಲದಿಂದ ಈ ಶಕ್ತಿಯ ಆವಾಹನೆ ರಾಜ್ಯ ಬಿಜೆಪಿಯ ಮತ್ತೊಬ್ಬ ನಾಯಕರ ಕೈಲಿ ಸಾಧ್ಯವಾಗಿಲ್ಲ.
ಸದ್ಯದ ಸ್ಥಿತಿ ನೋಡಿದರೆ ಸದ್ಯೋಭವಿಷ್ಯದಲ್ಲಿ ಜಾತಿ ಮತಬ್ಯಾಂಕ್ ಅನ್ನು ಪಕ್ಷಕ್ಕೆ ಅನುಕೂಲವಾಗುವಂತೆ ರೂಪಿಸುವ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿ ಕಾಣುತ್ತಿಲ್ಲ.
ಪರಿಣಾಮ ಮೋದಿ-ಅಮಿತ್ ಶಾ ಜೋಡಿ ಅನಿವಾರ್ಯವಾಗಿ ಯಡಿಯೂರಪ್ಪ ಅವರ ಕಡೆ ತಿರುಗಿದೆ.
ಇದೇ ಕಾರಣಕ್ಕಾಗಿ ಮೊನ್ನೆ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ ಮೋದಿ, ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳಿ ಎಂದಿದ್ದಾರೆ.
ಈ ಬೆಳವಣಿಗೆಯೇ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಶಸ್ತ್ರ ತ್ಯಾಗಕ್ಕೆ ಮುಖ್ಯ ಕಾರಣ.
ಇಂತಹ ಬೆಳವಣಿಗೆ ಬಿಜೆಪಿಗೆ ದೊಡ್ಡ ಮಟ್ಟದ ಅನುಕೂಲ ಮಾಡಿಕೊಡುತ್ತದೆ ಅಂತ ಹೇಳಲಾಗದಿದ್ದರೂ, ತತ್ಕಾಲಕ್ಕೆ ಡ್ಯಾಮೇಜ್ ಕಂಟ್ರೋಲ್ ಆಗಿರುವುದು ನಿಜ.
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…