ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಮೋದಿ-ಅಮಿತ್ ಶಾ ಜೋಡಿಗೆ ಆತಂಕಕಾರಿ ಮಾಹಿತಿ ರವಾನೆಯಾಗಿದೆ.
ಹಳೇ ಮೈಸೂರು ಭಾಗದಲ್ಲಿ ಕನಿಷ್ಠ ಮೂವತ್ತೈದು ಸೀಟುಗಳನ್ನು ಗೆಲ್ಲಬೇಕು ಅಂತ ನೀವು ನಿಗದಿ ಮಾಡಿದ ಟಾರ್ಗೆಟ್ ಅನ್ನು ತಲುಪುವುದು ಕಷ್ಟ ಎಂಬುದು ಈ ಮಾಹಿತಿ.
ರಾಜ್ಯ ಬಿಜೆಪಿಯ ಮೂಲಗಳ ಪ್ರಕಾರ ಮೋದಿ-ಅಮಿತ್ ಶಾ ಜೋಡಿಗೆ ಇಂತದೊಂದು ಮಾಹಿತಿ ರವಾನಿಸಿದವರು ಯಡಿಯೂರಪ್ಪ ಆಪ್ತರು. ಅಂದ ಹಾಗೆ ಕೆಲ ಕಾಲದ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಶಾ ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಈ ಸಭೆಗಳಲ್ಲಿ ಪಕ್ಷದ ಸ್ಥಳೀಯ ನಾಯಕರಿಂದ ಫೀಡ್ ಬ್ಯಾಕ್ ಪಡೆದಿದ್ದ ಅಮಿತ್ ಶಾ ಅಂತಿಮವಾಗಿ ಒಂದು ಟಾರ್ಗೆಟ್ ನಿಗದಿ ಮಾಡಿ ಹೋಗಿದ್ದರು.
2004ರಿಂದ ಪಕ್ಷ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಯಾದರೂ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯ ವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಹಳೇ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿ ಹೆಚ್ಚದೇ ಇರುವುದು. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ವರ್ಚಸ್ಸು ಕೆಲಸ ಮಾಡಿದರೂ ಪಕ್ಷ 104 ಸ್ಥಾನಗಳಲ್ಲಿ ಗೆಲುವು ಗಳಿಸಲು ಶಕ್ತವಾಯಿತೇ ಹೊರತು, 112 ಎಂಬ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕಾದ ಕೊರತೆ. ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿದರೆ ಆ ಭಾಗದ ಜಿಲ್ಲೆಗಳಲ್ಲಿ ಪಕ್ಷದ ಗಳಿಕೆ 20 ಸೀಟುಗಳ ಗಡಿ ತಲುಪಲಿಲ್ಲ.
ಎಲ್ಲಿಯವರೆಗೆ ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ನಮ್ಮ ಗಳಿಕೆ ಮೂವತ್ತೈದು ಸೀಟುಗಳ ಗಡಿ ತಲುಪುವುದಿಲ್ಲವೋ ಅಲ್ಲಿಯ ತನಕ ನಾವು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬುದು ಅಮಿತ್ ಶಾ ಮಾತು. ಹೀಗೆ ಅವರು ಪಕ್ಷದ ನಾಯಕರಿಗೆ ಟಾರ್ಗೆಟ್ ನಿಗದಿ ಮಾಡಿದ ಕಾಲದಲ್ಲಿ ಮೈಸೂರು ಭಾಗದ ನಾಯಕರು ಮತ್ತೊಂದು ಅಂಶವನ್ನು ಅಮಿತ್ ಶಾ ಗಮನಕ್ಕೆ ತಂದಿದ್ದರು. ಅದೆಂದರೆ, ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಗೆಲ್ಲುವ ಕ್ಯಾಂಡಿಡೇಟುಗಳನ್ನೇ ನಮ್ಮ ಪಕ್ಷ ಸಿದ್ಧಗೊಳಿಸುತ್ತಿಲ್ಲ ಎಂಬುದು. ಇದೇ ಕಾರಣಕ್ಕಾಗಿ ಅಮಿತ್ ಶಾ ಅವರು, ಗೆಲ್ಲಬಲ್ಲ ಕ್ಯಾಂಡಿಡೇಟುಗಳು ಬೇರೆ ಪಕ್ಷದಲ್ಲಿದ್ದರೂ ಅವರನ್ನು ಬಿಜೆಪಿಗೆ ಸೆಳೆಯುವಂತೆ ಸೂಚನೆ ನೀಡಿ ಹೋಗಿದ್ದರು.
ಆದರೆ ಹೀಗವರು ಸೂಚನೆ ನೀಡಿ ಎರಡು ತಿಂಗಳಾಗುತ್ತಾ ಬಂದರೂ ಪರಿಸ್ಥಿತಿ ಬದಲಾಗಿಲ್ಲ ಅಂತ ಯಡಿಯೂರಪ್ಪ ಆಪ್ತರು ಸಂದೇಶ ರವಾನಿಸಿದ್ದಾರಂತೆ. ಅವರ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಬಿಜೆಪಿಯ ಗಳಿಕೆ ಈಗಲೂ ಇಪ್ಪತ್ತು ಸೀಟುಗಳ ಗಡಿ ಮೀರುವುದಿಲ್ಲ.
ಈವತ್ತು ನಾಲ್ಕೈದು ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲುವ ಪ್ರಯತ್ನ ನಡೆದಿದೆಯಾದರೂ, ಅದೇ ಕಾಲಕ್ಕೆ ಕಳೆದ ಬಾರಿ ಗೆದ್ದಿದ್ದ ಸೀಟುಗಳ ಪೈಕಿ ನಾಲ್ಕೈದು ಸೀಟುಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅರ್ಥಾತ್, ಇವತ್ತಿನ ಪ್ರಯತ್ನ ಹೇಗಿದೆ ಎಂದರೆ ಕಳೆದ ಬಾರಿಯ ಪರಿಸ್ಥಿತಿ ಹೇಗಿತ್ತೋ ಈ ಬಾರಿಯೂ ಅದೇ ಸ್ಥಿತಿ ಮುಂದುವರಿಯಲಿದೆ ಎಂಬುದು ಯಡಿಯೂರಪ್ಪ ಆಪ್ತರ ಸಂದೇಶ. ಅಂದ ಹಾಗೆ ಹಳೇ ಮೈಸೂರು ಭಾಗದಲ್ಲಿ ಚುನಾವಣಾ ರಣತಂತ್ರ ಹೆಣೆಯುತ್ತಿರುವವರು ಸಂತೋಷ್. ಆದರೆ ಅವರು ಯಡಿಯೂರಪ್ಪ ಕ್ಯಾಂಪಿನ ಪ್ರಮುಖರನ್ನು ದೂರವಿಟ್ಟಿದ್ದಾರೆ. ಅದರ ಬೆನ್ನಲ್ಲೇ ಇಂತಹದೊಂದು ಸಂದೇಶ ಅಮಿತ್ ಶಾ ಅವರಿಗೆ ರವಾನೆಯಾಗಿದೆ.
ಕುತೂಹಲದ ಸಂಗತಿ ಎಂದರೆ ಅಮಿತ್ ಶಾ ಸೂಚನೆಯ ಪ್ರಕಾರ, ಚುನಾವಣೆ ಗೆಲ್ಲುವ ಕ್ಯಾಂಡಿಡೇಟುಗಳನ್ನು ಈ ಕ್ಷಣದವರೆಗೆ ಸೆಳೆಯುವ ಕೆಲಸ ಸಂತೋಷ್ ಬಣದಿಂದ ನಡೆದಿಲ್ಲವಂತೆ. ಪರಿಣಾಮವಾಗಿ ಇವತ್ತಿನ ಸ್ಥಿತಿ ಮೋದಿ-ಅಮಿತ್ ಶಾ ಅವರಿಗೆ ಚಿಂತೆ ಮೂಡಿಸಿದೆ.
ಅಷ್ಟೇ ಅಲ್ಲ, ಎಲ್ಲಿ ಕಾಂಗ್ರೆಸ್- ಜಾತ್ಯತೀತ ಜನತಾದಳದ ಮಧ್ಯೆ ನೇರ ಹಣಾಹಣಿ ಇದೆಯೋ ಅಂತಲ್ಲಿ ಕಾಂಗ್ರೆಸ್ ವಿರುದ್ಧ ಜಾ.ದಳ ಗೆಲ್ಲಲು ಸಹಕಾರ ನೀಡಿ ಎಂದು ಹೇಳುವಂತೆ ಮಾಡಿದೆ. ಯಾಕೆಂದರೆ ಕಾಂಗ್ರೆಸ್ ಗೆದ್ದರೆ ಅದು ಬಿಜೆಪಿಗೆ ನಷ್ಟ. ಆದರೆ ಜಾ.ದಳ ಗೆದ್ದರೆ ಕನಿಷ್ಠ ಪಕ್ಷ ಮೈತ್ರಿಯನ್ನಾದರೂ ಮಾಡಿಕೊಳ್ಳಬಹುದು ಎಂಬುದು ಅಮಿತ್ ಶಾ ಲೆಕ್ಕಾಚಾರ.
ಡಿಸಿಎಂ ಆಕಾಂಕ್ಷಿಗಳ ದಂಡು: ಈ ಮಧ್ಯೆ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜಾ.ದಳ ಪಾಳೆಯಗಳಲ್ಲಿ ಡಿಸಿಎಂ ಹುದ್ದೆಯ ಆಕಾಂಕ್ಷಿಗಳ ದಂಡು ಬೆಳೆಯುತ್ತಿದೆ. ಇದಕ್ಕೆ ಕಾರಣ ಈ ಪಕ್ಷಗಳಲ್ಲಿ ಸಿಎಂ ಕ್ಯಾಂಡಿಡೇಟ್ ಯಾರು ಅಂತ ಈಗಾಗಲೇ ನಿಕ್ಕಿಯಾಗಿರುವುದು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಫೈಟು ನಡೆದಿದೆಯಾದರೂ ಫೈನಲಿ ಇಬ್ಬರ ಪೈಕಿ ಒಬ್ಬರಿಗೆ ಸಿಎಂ ಗಿರಿ ದಕ್ಕುವುದು ಗ್ಯಾರಂಟಿ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಗುವ ಆಸೆ ಇರುವುದು ನಿಜವಾದರೂ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಬರುವುದು ಕಷ್ಟ ಎಂಬುದು ಅವರಿಗೇ ಗೊತ್ತಿದೆ. ಅದೇ ರೀತಿ ಪಕ್ಷ ಗೆಲ್ಲಬೇಕು ಎಂದರೆ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು ಎಂಬುದೂ ಗೊತ್ತಿದೆ. ಹೀಗಾಗಿ ಅವರು ಸಿಎಂ ಹುದ್ದೆಯ ರೇಸಿನಿಂದ ಹಿಂದುಳಿದಿದ್ದಾರೆ.
ಪರಮೇಶ್ವರ್ ಅವರಿಗೆ ಆಸೆ ಇದೆಯಾದರೂ, ಪರಿಸ್ಥಿತಿ ನೋಡಿದರೆ ಡಿಸಿಎಂ ಹುದ್ದೆಗೆ ತೃಪ್ತಿಪಟ್ಟುಕೊಳ್ಳುವ ಇರಾದೆ ಬಂದಿದೆ. ಇದೇ ರೀತಿ ಲಿಂಗಾಯತ ನಾಯಕ ಎಂ.ಬಿ.ಪಾಟೀಲ್, ದಲಿತ ನಾಯಕ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರಿಗೆ ಡಿಸಿಎಂ ಹುದ್ದೆಯ ಮೇಲೆ ಕಣ್ಣು ಬಿದ್ದಿದೆ. ಇದಕ್ಕೆ ಉದ್ಬವವಾಗಬಹುದಾದ ಸನ್ನಿವೇಶಗಳು ಹೇಗಿರಬಹುದು ಎಂಬ ಲೆಕ್ಕಾಚಾರ ಕಾರಣ.
ಇನ್ನು ಜಾ.ದಳ ಅಧಿಕಾರದ ಪಾಲುದಾರನಾದರೆ ಕುಮಾರ-ಸ್ವಾಮಿ ಅವರೇ ಸಿಎಂ ಕ್ಯಾಂಡಿಡೇಟ್. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಮುಸ್ಲಿಂ ನಾಯಕ ಸಿ.ಎಂ.ಇಬ್ರಾಹಿಂ, ಕುರುಬ ಸಮುದಾಯದ ಬಂಡೆಪ್ಪ ಕಾಶೆಂಪೂರ್, ದಲಿತ ಸಮುದಾಯದ ಎಚ್.ಕೆ.ಕುಮಾರಸ್ವಾಮಿ ಡಿಸಿಎಂ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಯಾರು ಸಿಎಂ ಕ್ಯಾಂಡಿಡೇಟ್ ಎಂಬುದು ನಿಕ್ಕಿಯಾಗಿಲ್ಲ. ಹೀಗಾಗಿ ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಇದ್ದರೂ ಅವರ ಹೆಸರುಗಳು ಫ್ರಂಟ್ ಲೈನಿಗೆ ಬರುತ್ತಿಲ್ಲ.
ಜಾ.ದಳ ಲೆಕ್ಕಾಚಾರ ಏನು?: ಮುಂದಿನ ವಿಧಾನಸಭಾ ಚುನಾ ವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟೆಷ್ಟು ಸೀಟು ಗೆಲ್ಲುತ್ತವೆ ಅಂತ ಎಲ್ಲ ರಾಜಕೀಯ ಪಕ್ಷಗಳೂ ಲೆಕ್ಕ ಹಾಕಿವೆ. ಈ ಪೈಕಿ ಕಾಂಗ್ರೆಸ್, ಬಿಜೆಪಿ ಲೆಕ್ಕಾಚಾರ ಬಹಿರಂಗವಾಗಿದ್ದರೆ, ಜಾ.ದಳದ ಲೆಕ್ಕಾಚಾರ ಮಾತ್ರ ಬಹಿರಂಗವಾಗಿರಲಿಲ್ಲ. ಆದರೆ ಈಗ ಜಾ.ದಳ ಪಾಳೆಯ ದಿಂದಲೂ ಲೆಕ್ಕಾಚಾರ ಹೊರಬಂದಿದೆ. ಅದರ ಪ್ರಕಾರ, ಕಾಂಗ್ರೆಸ್ ಪಕ್ಷ 75 ರಿಂದ 80, ಬಿಜೆಪಿ 65 ರಿಂದ 70 ಮತ್ತು ಜಾ.ದಳ 60 ರಿಂದ 65 ಸೀಟು ಗೆಲ್ಲಲಿವೆ.ಅರ್ಥಾತ್, ಯಾರೇ ಸರ್ಕಾರ ರಚಿಸಬೇಕೆಂದರೂ ಜಾ.ದಳದ ನೆರವು ಬೇಕೇ ಬೇಕು ಮತ್ತು ಸಿಎಂ ಹುದ್ದೆ ಬಿಟ್ಟು ಕೊಡಲು ತಯಾರಿರಬೇಕು ಎಂಬುದು ಅದರ ನಂಬಿಕೆ. ಹೀಗಾಗಿ ದಿನ ಕಳೆದಂತೆ ರಣೋತ್ಸಾಹ ಹೆಚ್ಚುತ್ತಲೇ ಇದೆ.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…