ಎಡಿಟೋರಿಯಲ್

ಬೆಂಗಳೂರು ಡೈರಿ: ಕಾಂಗ್ರೆಸ್: ಉತ್ತರ ಸಿಗುವ ಕಾಲ ಸನ್ನಿಹಿತ

ರಾಜ್ಯ ಕಾಂಗ್ರೆಸ್‌ನಲ್ಲಿ ಬಗೆಹರಿಯದೆ ಉಳಿದಿರುವ ಒಂದು ಪ್ರಶ್ನೆಗೆ ಉತ್ತರ ಸಿಗುವ ಕಾಲ ಹತ್ತಿರವಾದಂತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಯಾರು ಮುಖ್ಯಮಂತ್ರಿಯಾಗಬೇಕು? ಎಂಬುದು ಆ ಪ್ರಶ್ನೆ. ಮತ್ತು ಇದೇ ಪ್ರಶ್ನೆಯನ್ನು sಹಿಡಿದುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಗ್ಗಾಟ ನಡೆಸುತ್ತಾ ಬಂದಿದ್ದರು.

ಒಕ್ಕಲಿಗ ನಾಯಕರ ಸಭೆಗಳಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಪಟ್ಟು ಹಾಕಿದರೆ ಸಿದ್ದರಾಮೋತ್ಸವದ ಮೂಲಕ ಮತ್ತು ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಪ್ರತಿಪಟ್ಟು ಹಾಕುತ್ತಿದ್ದರು. ಹೀಗಾಗಿ ದಿನಕಳೆದಂತೆ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದೇ ರಾಷ್ಟ್ರೀಯ ವಿವಾದದಂತೆ ಕಾಣಿಸತೊಡಗಿತ್ತು.

ಈ ಮಧ್ಯೆ ಇದಕ್ಕೆ ಉಪ್ಪು–ಖಾರ ಸುರಿಯುವ ಬೆಳವಣಿಗೆಗಳೂ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಾ ಹೋದವು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರವಂತೂ, ಸಿದ್ದರಾಮಯ್ಯ ಅವರಿಂದಾದ ಹಳೆಯ ಗಾಯಗಳನ್ನು ಖರ್ಗೆ ಮರೆಯಲು ಸಾಧ್ಯವೇ? ಹೀಗಾಗಿ ಸಂದರ್ಭ ಬಂದರೆ ಅವರು ಸಿದ್ದರಾಮಯ್ಯ ಅವರ ಬದಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರ ನಿಲ್ಲುತ್ತಾರೆ. ಇಲ್ಲವೇ ಡಾ.ಜಿ.ಪರಮೇಶ್ವರ್ ಅವರ ಪರ ಬ್ಯಾಟಿಂಗ್ ಮಾಡುತ್ತಾರೆ ಎಂಬ ಪ್ರಚಾರ ಅದ್ಧೂರಿಯಾಗಿ ನಡೆಯಿತು.

ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮನಸ್ಸಿರಲಿಲ್ಲ. ಬದಲಿಗೆ ರಾಜ್ಯ ರಾಜಕಾರಣದಲ್ಲೇ ಉಳಿದು ಒಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇತ್ತು. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ವರಿಷ್ಠರು ಸಿದ್ದರಾಮಯ್ಯ ಇಲ್ಲವೇ ಡಿಕೆಶಿ ಬದಲಿಗೆ ಖರ್ಗೆ ಅವರಿಗೇ ಒಂದು ಅವಕಾಶ ನೀಡಬಹುದು ಎಂಬ ವದಂತಿಗಳು ಹಬ್ಬಿದವು.

ಆದರೆ ಕಳೆದ ವಾರ ದಿಲ್ಲಿಯ ಕಾಂಗ್ರೆಸ್ ಪಾಳೆಯದಿಂದ ಹರಿದು ಬಂದ ಸಂದೇಶದ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬಲ ತುಂಬಲು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ. ಕಾರಣ ನಾಯಕತ್ವದ ಪ್ರಶ್ನೆ ಬಗೆಹರಿಯದೆ ಉಳಿದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ಖರ್ಗೆ ಅವರಿಗೆ ಮನವರಿಕೆ ಆಗಿದೆ.

ಎಷ್ಟೇ ಆದರೂ ಐವತ್ತು ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಗಮನಿಸುತ್ತಾ ಬಂದವರು ಮಲ್ಲಿಕಾರ್ಜುನ ಖರ್ಗೆ. ಹೀಗಾಗಿ ಅವರಿಗೆ ಇಲ್ಲಿನ ಜಾತಿ ಸೂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತು ಮತ್ತು ಈ ಜಾತಿ ಸೂತ್ರದ ಪ್ರಕಾರ ರಾಜ್ಯದಲ್ಲಿ ಕೈ ಪಾಳೆಯದ ಸಾರಥ್ಯ ಯಾರ ಕೈಗೆ ಹೋಗಬೇಕು ಎಂಬುದೂ ಗೊತ್ತು. ಅದರ ಪ್ರಕಾರ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬೆಂಬಲ ನೀಡಿ ರಣಾಂಗಣಕ್ಕಿಳಿದರೆ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂಬುದು ಖರ್ಗೆ ಅವರಿಗಿರುವ ಮಾಹಿತಿ.

ಅಂದಹಾಗೆ ಖರ್ಗೆಯವರು ಪ್ರಾಕ್ಟಿಕಲ್ ನಾಯಕ. ತಮಗಾದ ನೋವು, ಅವಮಾನಗಳನ್ನು ನೆನಪಿಸಿಕೊಳ್ಳುತ್ತಾ ಕೂತರೆ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೇ ಹೊರತು ಬೇರೇನಲ್ಲ ಎಂಬುದು ಅವರ ಲೆಕ್ಕಾಚಾರ. ಅದೇ ರೀತಿ ಎಐಸಿಸಿ ಅಧ್ಯಕ್ಷರಾಗಿ ಕುಳಿತಿರುವ ಈ ಸಂದರ್ಭದಲ್ಲಿ ಹಳೆಯ ಗಾಯಗಳನ್ನು ನೆನಪಿಸಿಕೊಳ್ಳುವುದೆಂದರೆ ತವರು ರಾಜ್ಯದಲ್ಲಿ ತಾವೇ ಪಕ್ಷದ ಸೋಲು ಬಯಸಿದಂತೆ ಎಂಬುದು ಅವರಿಗೆ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳನ್ನೂ ಕಣ್ಣ ಮುಂದಿಟ್ಟುಕೊಂಡ ಖರ್ಗೆಯವರಿಗೆ, ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯ ಅವರ ಶಕ್ತಿ ಅನಿವಾರ್ಯ ಎಂಬುದು ಮನವರಿಕೆ–ಯಾಗಿದೆ.

ಸಿದ್ದರಾಮಯ್ಯ ಅವರ ಶಕ್ತಿ ಇಲ್ಲದೆ ಗೆಲ್ಲುವುದು ಕಷ್ಟ ಅಂತ ಬಹುತೇಕ ಕ್ಷೇತ್ರಗಳಿಂದ ಅವರಿಂದ ಫೀಡ್ ಬ್ಯಾಕೂ ಸಿಕ್ಕಿದೆ. ಹೀಗಾಗಿ ಕಳೆದ ವಾರ ಪಕ್ಷದ ವರಿಷ್ಠರ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಮುಂದಿನ ಚುನಾವಣೆಯಲ್ಲಿ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರ ಭುಜಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದ್ದಾರಂತೆ. ಅವರು ಹಾಗೆ ಹೇಳಿದ್ದಾರೆ ಎಂಬ ವರ್ತಮಾನ ರಾಜ್ಯ ಕಾಂಗ್ರೆಸ್‌ನ ಪಡಸಾಲೆಯಲ್ಲಿ ಮೆಲ್ಲಗೆ ಹರಡತೊಡಗಿದ್ದೇ ತಡ, ಹಲ ನಾಯಕರ ನಿದ್ದೆ ಹಾರಿ ಹೋಗಿದೆ. ಆದರೆ ನಿದ್ದೆ ಹಾರಿ ಹೋದರೂ ಈ ನಾಯಕರು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಖುದ್ದು ಎಐಸಿಸಿ ಅಧ್ಯಕ್ಷರೇ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಲಕ್ಷಣ ಕಾಣಿಸಿರುವುದರಿಂದ ಇವರು ನಿರಾಶರಾಗ–ಬಹುದೇ ಹೊರತು ಬಂಡಾಯ ಏಳಲು ಸಾಧ್ಯವಿಲ್ಲ.

ಇನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದರಿಂದ ನಿರಾಸೆಯಾಗುವುದು ನಿಶ್ಚಿತವಾದರೂ ಅವರು ಪಕ್ಷಕ್ಕೆ ನಿಷ್ಠರಾಗಿರುವವರು. ಹೀಗಾಗಿ ಚುನಾವಣೆ ಮುಗಿಯುವ ತನಕ ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನೂ ಅವರು ಮಾಡುತ್ತಾರೆ. ಕೊನೆಗೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವನ್ನು ಒಪ್ಪಿಕೊಳ್ಳುತ್ತಾರೆ ಎಂಬುದು ಕೈ ಪಾಳೆಯದ ಲೇಟೆಸ್ಟು ಚರ್ಚೆ.

ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಇಂತಹ ಬೆಳವಣಿಗೆಗೆ ಬೇರೆ ಕಾರಣವಿರಬಹುದೇ? ಎಂಬ ಗುಸು ಗುಸು ಕೈ ಪಾಳೆಯದಲ್ಲಿ ಶುರುವಾಗಿದೆ. ಅದರ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಆಸೆ ಇರುವುದು ನಿಜವಾದರೂ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಸಿಎಂ ಆಗಲು ಹಪಹಪಿಸುವುದು ಕಷ್ಟ. ಹೀಗಾಗಿ ಅವರು ತಮ್ಮ ಆಸೆಯನ್ನು ತೊರೆದು ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಭವಿಷ್ಯದ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ಬಯಸಿದ್ದಾರಂತೆ. ಇದು ಸಾಧ್ಯವಾಗಬೇಕು ಎಂದರೆ ಪಕ್ಷ ಅಧಿಕಾರಕ್ಕೆ ಬರಬೇಕು. ಅದು ಅಧಿಕಾರಕ್ಕೆ ಬರಬೇಕು ಎಂದರೆ ಭವಿಷ್ಯದ ಮುಖ್ಯಮಂತ್ರಿ ಯಾರು? ಎಂಬುದು ಸ್ಪಷ್ಟವಾಗಬೇಕು. ಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲು, ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ ಅಂತ ಕೆಲವರು ಪಿಸುಗುಟ್ಟುತ್ತಿದ್ದಾರೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಕೈ ಪಾಳೆಯದ ಕೆಲ ನಾಯಕರು ವ್ಯಕ್ತಪಡಿಸಿದ

ಅಸಮಾಧಾನದ ಹಿಂದೆ ಈ ವರ್ತಮಾನವೂ ಕೆಲಸ ಮಾಡಿರುವಂತೆ ಕಾಣುತ್ತಿದೆ.

andolanait

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

11 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

12 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

12 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

13 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

13 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

17 hours ago