ಇಪ್ಪತ್ತೈದು ವರ್ಷಗಳಿಂದ ಅನುಷ್ಠಾನಗೊಳ್ಳದೆ ನನೆಗುದಿಗೆ ಬಿದ್ದಿರುವ ಬೆಂಗಳೂರು-ಸತ್ಯಮಂಗಲ ರೈಲು ಯೋಜನೆಯು (ಬೆಂಗಳೂರು-ಚಾಮರಾಜನಗರ ರೈಲು ಪರಿಷ್ಕೃತ ಯೋಜನೆ) ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕೇಂದ್ರ ಸರ್ಕಾರದ ಮೂಲ ಸೌಕರ್ಯ ಯೋಜನೆಗಳಲ್ಲಿ ಅತ್ಯಂತ ವಿಳಂಬವಾಗಿ ಅನುಷ್ಠಾನವಾಗುತ್ತಿರುವ ಯೋಜನೆ ಇದಾಗಿದೆ ಎಂದು ಕೇಂದ್ರ ಸರ್ಕಾರವೇ ಪಟ್ಟಿ ಮಾಡಿದೆ.
ನನೆಗುದಿಗೆ ಬಿದ್ದಿರುವ ಮೂಲ ಸೌಕರ್ಯಗಳ ಯೋಜನೆಗಳ ಬಗ್ಗೆ ರಾಜ್ಯಸಭೆಯಲ್ಲಿ ಸಿಪಿಎಂ ಸದಸ್ಯ ಬಿನೋಯ್ ವಿಶ್ವಂ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ರಾಜ್ಯ ಸಚಿವ ಇಂದ್ರಜಿತ್‌ಸಿಂಗ್, ಅತ್ಯಂತ ವಿಳಂಬವಾಗುತ್ತಿರುವ ೨೦ (೧೫೦ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳು) ಯೋಜನೆಗಳನ್ನು ಪಟ್ಟಿ ಮಾಡಲಾಗಿದ್ದು, ಬೆಂಗಳೂರು- ಸತ್ಯಮಂಗಲಂ ಯೋಜನೆಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ಇದರ ಅನುಷ್ಠಾನ ಏಕೆ ವಿಳಂಬವಾಗಿದೆ ಎಂಬುದರ ಕುರಿತು ಮಾಹಿತಿ ನೀಡಿ ಕರ್ನಾಟಕದ ರಾಜ್ಯ ಸರ್ಕಾರಗಳು ಈ ಯೋಜನೆ ಬಗ್ಗೆ ತಾಳಿದ್ದ ನಿರ್ಲಕ್ಷ್ಯದ ಬಗ್ಗೆಯೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ೧೯೯೬ರಲ್ಲಿ ಈ ಯೋಜನೆಯನ್ನು ಘೋಷಿಸಿ ೨೦೦೨ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಧಾನಗತಿ ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಯದ ಕಾರಣ ಸ್ಥಗಿತಗೊಂಡಿದೆ. ಈಗ ಈ ಯೋಜನೆ ಪರಿಷ್ಕೃತ ಅಂದಾಜು ವೆಚ್ಚ ೧,೩೮೩ ಕೋಟಿ ರೂ.ಗಳಾಗಿದ್ದು, ೨೦೨೮ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ೧೯೯೬ರಲ್ಲಿ ೨೬೦ ಕಿ.ಮೀ. ಉದ್ದದ ಈ ಯೋಜನೆಗೆ ಅನುಮೋದನೆ ನೀಡಿತ್ತು ಆಗ ಇದರ ಅಂದಾಜು ವೆಚ್ಚ ೨೯೬ ಕೋಟಿ ರೂ.ಆಗಿತ್ತು.
ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಮತ್ತು ಗಡಿಯಲ್ಲಿರುವ ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದಂತಹ ದಟ್ಟ ಕಾಡಿನೊಳಗೆ ಈ ಯೋಜನೆಯ ರೈಲು ಮಾರ್ಗ ಹಾದು ಹೋಗುವುದರಿಂದ ತಮಿಳುನಾಡು ಸರ್ಕಾರವು ಒಪ್ಪಿಗೆ ನೀಡಲಿಲ್ಲ. ಕೇಂದ್ರ ಪರಿಸರ ಸಚಿವಾಲಯವು ಯೋಜನೆಗೆ ಪರಿಸರ ಅನುಮೋದನೆ ನೀಡಲು ನಿರಾಕರಿಸಿತು. ತದನಂತರ ಯೋಜನೆಯ ಅನುಷ್ಠಾನ ನನೆಗುದಿಗೆ ಬಿತ್ತು.
೨ ಹುಲಿ ಸಂರಕ್ಷಿತಾರಣ್ಯಗಳ ನಡುವೆ ರೈಲು ಮಾರ್ಗ ಹಾದು ಹೋಗುವುದರಿಂದ ಪರಿಸರ ಹಾಳಾಗುವುದಲ್ಲದೆ ಮರಗಿಡಗಳು ಹಾನಿಗೊಳ್ಳಲಿವೆ. ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡುಕುರಿ, ಅಪರೂಪದ ಪಕ್ಷಿಗಳಿಗೆ ತೊಂದರೆಯಾಗಲಿದೆ. ಇದಕ್ಕೆ ಅನುಮೋದನೆ ನೀಡಬಾರದು ಎಂದು ಪರಿಸರವಾದಿಗಳು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ ಈ ಯೋಜನೆ ಧೂಳು ಹಿಡಿದು ಕುಳಿತಿದೆ.
ಯೋಜನೆಗೆ ಸಾಕಷ್ಟು ವಿರೋಧಗಳು ಕೇಳಿಬಂದಿದ್ದರಿಂದ ೨೦೧೩ರಲ್ಲಿ ಕೇಂದ್ರದ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರು-ಸತ್ಯಮಂಗಲ ರೈಲು ಯೋಜನೆಯನ್ನು ಕೈಬಿಟ್ಟು ಪರಿಷ್ಕೃತ ಬೆಂಗಳೂರು-ಚಾ.ನಗರ ನಡುವೆ ರೈಲು ಮಾರ್ಗ ನಿರ್ಮಾಣ ಯೋಜನೆ (೧೪೭ ಕಿ.ಮೀ) ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದರು. ಬೆಂಗಳೂರು-ಹೆಜ್ಜಾಲೆ-ಕನಕಪುರ-ಮಳವಳ್ಳಿ-ಕೊಳ್ಳೇಗಾಲ- ಚಾಮರಾಜನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಯೋಜನಾ ಮೊತ್ತದ ಶೇ.೫೦ ರಷ್ಟನ್ನು ಭರಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಒಪ್ಪಿಕೊಂಡಿತ್ತು. ಯೋಜನೆಗಾಗಿ ೧,೭೩೩ ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಬೇಕಿತ್ತು.
ಆಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಭೂ ಸ್ವಾಧೀನಕ್ಕೆ ಹಣ ನೀಡಿ ಎಂದು ಕೋರಿದರು. ಆದರೆ, ಸಿದ್ದರಾಮಯ್ಯ ಅವರು ಆ ಬಗ್ಗೆ ಕಾಳಜಿ ತೋರಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸಹ ಇಚ್ಛಾಶಕ್ತಿ ತೋರಲಿಲ್ಲ. ಹಾಗಾಗಿ ಯೋಜನೆಯು ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲಿಲ್ಲ, ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ನಂತರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರ ಸುಮ್ಮನಾಯಿತು. ರಾಜ್ಯದಲ್ಲೂ ಅಧಿಕಾರ ನಡೆಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರ ಈ ರೈಲು ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಅಲ್ಲದೆ ಜಿಲ್ಲೆಯ ಕನ್ನಡ, ದಲಿತ, ರೈತಪರ ಹೋರಾಟಗಾರರು ಸಹ ಯೋಜನೆಯ ಬಗ್ಗೆ ಸಂಘಟಿತ ಹೋರಾಟ ನಡೆಸಲಿಲ್ಲ. ಹಾಲಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರು ಯೋಜನೆ ಅನುಷ್ಠಾನ ಕುರಿತು ಸಂಬಂಧಪಟ್ಟವರ ಬೆನ್ನತ್ತಲಿಲ್ಲ.
ದೂರದೃಷ್ಟಿಯಿಲ್ಲದ ಜಿಲ್ಲೆಯ ಜನಪ್ರತಿನಿಧಿಗಳು, ಮಾಧ್ಯಮ ಮತ್ತು ಸಾಮಾನ್ಯ ಜನರ ಬಗ್ಗೆ ಕಾಳಜಿಯಿಲ್ಲದ ಅಧಿಕಾರಿಗಳ ನಡೆಯಿಂದ ಮಹತ್ವದ ಯೋಜನೆಯೊಂದು ಮೂಲೆಗುಂಪಾಗಿದೆ. ರೈಲ್ವೆ ಇಲಾಖೆಯ ಪಿಂಕ್ ಪುಸ್ತಕದಲ್ಲಿ ಈ ಯೋಜನೆ ಬಗ್ಗೆ ಹೇಳಲಾಗಿದೆ ಅಷ್ಟೇ. ಬೆಂಗಳೂರಿನಿಂದ ಮೈಸೂರಿಗೆ ತೆರಳದೆ ನೇರವಾಗಿ ಚಾಮರಾಜನಗರಕ್ಕೆ ತಲುಪುವ ಪರ್ಯಾಯ ಮಾರ್ಗದ ಯೋಜನೆ ಇದಾಗಿದೆ. ಇದರ ಅನುಷ್ಠಾನದಿಂದ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಹಾಗೂ ಚಾ.ನಗರ ಜಿಲ್ಲೆಗಳಲ್ಲಿ ಆರ್ಥಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಚಾಮರಾಜನಗರ ಜಿಲ್ಲೆಯಿಂದ ಬೆಂಗಳೂರಿಗೆ ಹೋಗುವವರಿಗೆ ಅನುಕೂಲವಾಗಲಿದೆ. ಈ ಯೋಜನೆ ಮತ್ತಷ್ಟು ವಿಳಂಬ ಆಗಬಾರದು. ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಎಲ್ಲಾ ಭಾಗೀದಾರರು ಗಂಭೀರ ಪ್ರಯತ್ನ ಮಾಡಬೇಕಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…