ನಾ ದಿವಾಕರ
ಜಾತಿ-ಮತಗಳ ಅಸ್ಮಿತೆಗಳಿಗಾಗಿ ಸಮಾಜದಲ್ಲಿ ದ್ವೇಷಾಸೂಯೆಗಳ ಬೀಜ ಬಿತ್ತುವ ಸಂಘಟನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಾಮಾಜಿಕ ಉತ್ತರದಾಯಿತ್ವವೇ ಇಲ್ಲದ ಈ ಸಂಘಟನೆಗಳಿಗೆ ರಾಜಕೀಯ ಅಂಕುಶಗಳೂ ಇಲ್ಲದಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಕೆಲವೇ ವರ್ಷಗಳ ಹಿಂದೆ ವ್ಯಕ್ತಿಗತ ವೈಷಮ್ಯಗಳಿಗೆ ಸಾಮಾಜಿಕ ನೆಲೆಯಲ್ಲಿ ನ್ಯಾಯ ಪಡೆಯುವ ಒಂದು ಧೋರಣೆ ನಮ್ಮ ನಡುವೆ ಜೀವಂತವಾಗಿತ್ತು. ತಾರತಮ್ಯಕ್ಕೊಳಗಾದವರು, ಸಾಲ ಕೊಟ್ಟವರು, ವಂಚನೆಗೊಳಗಾದವರು ನ್ಯಾಯದ ಮೊರೆ ಹೋಗುತ್ತಿದ್ದರು. ನೊಂದವರು ಸಮಾಜದ ಮೊರೆ ಹೋಗುತ್ತಿದ್ದರು. ಸಾಲ ಮಾಡಿದವರು ಸಾಂತ್ವನದ ನೆಲೆಗಳನ್ನು ಅರಸುತ್ತಿದ್ದರು. ಆದರೆ ಇಂದು ವ್ಯಕ್ತಿಗತ ವೈಷಮ್ಯಗಳು ಹತ್ಯೆಗಳಲ್ಲಿ ಅಂತ್ಯವಾಗುತ್ತಿವೆ.
ಕಳೆದ ಒಂದು ವರ್ಷದಲ್ಲೇ ಕರ್ನಾಟಕದಲ್ಲಿ ಸಂಭವಿಸಿದ ಪ್ರವೀಣ್ ನೆಟ್ಟಾರ್, ಹರ್ಷ, ಫಾಜಿಲ್, ಮಸೂದ್, ಚಂದ್ರು ಮುಂತಾದ ಅಮಾಯಕ ಯುವಕರ ಹತ್ಯೆಗಳು, ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕದಡುವುದಷ್ಟೇ ಅಲ್ಲದೆ, ಏಕೆ ಹೀಗಾಗುತ್ತಿದೆ ಎಂಬ ಜಿಜ್ಞಾಸೆಯಾದರೂ ಆಡಳಿತ ವ್ಯವಸ್ಥೆಯನ್ನು, ಸಮಾಜವನ್ನು ಕಾಡಬೇಕಿತ್ತು. ಆದರೆ ನಾವು ಈ ಹತ್ಯೆಗಳನ್ನು ‘ಯಾರು ಮತ್ತು ಯಾರಿಂದ’ ಎಂಬ ಪ್ರಶ್ನೆಗಳೊಂದಿಗೆ ಪರಾಮರ್ಶಿಸುತ್ತಿದ್ದೇವೆ. ಅಂದರೆ, ಏಕೆ ಹೀಗಾಗುತ್ತಿದೆ ಎಂದು ಯೋಚಿಸುವ ವ್ಯವಧಾನವನ್ನು, ಸೂಕ್ಷ್ಮ ಸಂವೇದನೆಯನ್ನು ನಾವು ಕಳೆದುಕೊಂಡಿದ್ದೇವೆ ಎಂದರ್ಥ.
ಸಾವು ನೋವಿಗೆ ಸ್ಪಂದಿಸುವಂತಹ ಸೂಕ್ಷ್ಮ ಸಂವೇದನೆಯ ಸಮಾಜವನ್ನು ಈ 75 ವರ್ಷಗಳಲ್ಲಿ ನಿರ್ಮಿಸಿದ್ದರೆ ನಮ್ಮ ದೇಶ ಇಂದು ಅಂಬೇಡ್ಕರ್- ಗಾಂಧಿ ಕನಸಿನ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿತ್ತು. ಸಾಹಿತ್ಯಕ ಹಾಗೂ ಕಲಾಭಿವ್ಯಕ್ತಿಗಳ ಮೂಲಕ ಈ ಪ್ರಯತ್ನಗಳು ಸತತವಾಗಿ ನಡೆಯುತ್ತಲೇ ಇದ್ದರೂ, ಅಧಿಕಾರ ರಾಜಕಾರಣದ ಮತೀಯ ನೆಲೆಗಳು, ಸ್ವಾರ್ಥ ಮತ್ತು ಸಂಪತ್ತು ಕ್ರೋಢೀಕರಣದ ಲೋಭ ಈ ಅಭಿವ್ಯಕ್ತಿ ಮಾಧ್ಯಮಗಳನ್ನು ಕೊಲ್ಲುತ್ತಲೇ ಬರುತ್ತಿದೆ. ನಾವು ಹರಡುತ್ತಿರುವ ದ್ವೇಷಾಸೂಯೆಗಳಿಗೆ ಚಾರಿತ್ರಿಕ ಬುನಾದಿಗಳನ್ನು ಉತ್ಖನನ ಮಾಡುತ್ತಲೇ, ವರ್ತಮಾನದ ವಾಸ್ತವಗಳಿಗೆ ವಿಮುಖವಾಗುತ್ತಿದ್ದೇವೆ. ಹಾಗಾಗಿಯೇ ವಿಸ್ಮೃತಿಗೆ ಜಾರಬೇಕಾದ ಚಾರಿತ್ರಿಕ ವಿಕೃತಿಗಳನ್ನು ಭವಿಷ್ಯದ ಮಾರ್ಗಗಳಾಗಿ ರೂಪಿಸುವಂತಹ ಸಾಂಸ್ಕೃತಿಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.
ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುವುದರ ಮೂಲಕವೇ ತಮ್ಮ ಅಧಿಕಾರ ಕೇಂದ್ರಗಳನ್ನು ಸಂರಕ್ಷಿಸಲು ಹೆಣಗಾಡುತ್ತಿರುವ ರಾಜಕೀಯ ಶಕ್ತಿಗಳು ಈ ಪ್ರಯತ್ನಗಳಿಗೆ ಒಂದು ತಾತ್ವಿಕ ನೆಲೆಯನ್ನು ಒದಗಿಸುತ್ತಿರುವುದೇ ಅಲ್ಲದೆ, ಸಾಂಸ್ಕೃತಿಕ ಭೂಮಿಕೆಯನ್ನೂ ಸಿದ್ಧಪಡಿಸುತ್ತಿವೆ.
ಈ ಭೂಮಿಕೆಯಲ್ಲೇ ಪರಸ್ಪರ ಪ್ರೀತಿಸುವ ಮನಸ್ಸುಗಳ ನಡುವೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವ್ಯಕ್ತಿಗತ ನೆಲೆಯ ಮತಶ್ರದ್ಧೆಯಾಗಲೀ, ಧಾರ್ಮಿಕ ನಂಬಿಕೆಗಳಾಗಲೀ ಸಮಾಜ ಸ್ವಾಸ್ಥ್ಯವನ್ನು ಕದಡುವುದಿಲ್ಲ. ಆದರೆ ಈ ಶ್ರದ್ಧೆ ನಂಬಿಕೆಗಳು ಶ್ರೇಷ್ಠತೆಯ ವ್ಯಸನಕ್ಕೊಳಗಾದಾಗ ನಮ್ಮೊಳಗಿನಿಂದಲೇ ‘ಅನ್ಯರು’ ಸೃಷ್ಟಿಯಾಗುತ್ತಾರೆ. ‘ಆಂತರಿಕ’ ಆಗಿರುವುದೆಲ್ಲವೂ ‘ಬಾಹ್ಯ’ ಆಗತೊಡಗುತ್ತದೆ. ಶ್ರೇಷ್ಠತೆಯ ವ್ಯಸನ ಸೃಷ್ಟಿಸುವ ಈ ಅಹಮಿಕೆಯೇ ದ್ವೇಷಾಸೂಯೆಗಳಿಗೆ ಎಡೆಮಾಡಿಕೊಡುತ್ತದೆ. ಶತಮಾನಗಳಿಂದಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಮತಧರ್ಮಗಳು, ಜಾತಿಯ ನೆಲೆಗಳು ಮತ್ತೊಬ್ಬರಿಂದ ಅಪಾಯಕ್ಕೊಳಗಾಗಿದೆ ಎಂಬ ಕಪೋಲಕಲ್ಪಿತ ಭೀತಿ ಈ ದ್ವೇಷಾಸೂಯೆಗಳನ್ನು ಹಿಂಸಾತ್ಮಕ ಪ್ರತಿಕ್ರಿಯೆಗಳಾಗಿ ಪರಿವರ್ತಿಸುತ್ತವೆ. ಈ ಭೀತಿಯೇ ಸಮಾಜಘಾತುಕ ಶಕ್ತಿಗಳಿಗೆ, ವಿಘಟನೆಯ ಹರಿಕಾರರಿಗೆ, ದ್ವೇಷ ರಾಜಕಾರಣದ ವಾರಸುದಾರರಿಗೆ ಪ್ರಧಾನ ಅಸ್ತ್ರವಾಗುತ್ತದೆ.
ತಳಮಟ್ಟದ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿರುವ ಈ ಭೀತಿ ಸಾಂಸ್ಕೃತಿಕ ಅಥವಾ ಮತಧಾರ್ಮಿಕ ಸ್ವರೂಪವನ್ನು ಪಡೆದಾಗ ಸಮುದಾಯಗಳು ಕೋಮುಗಳಾಗಿ ಪರಿವರ್ತನೆಯಾಗುತ್ತವೆ. ನಿತ್ಯ ಜೀವನದ ಒಡನಾಟದಲ್ಲಿ ಒಂದರೊಳಗೊಂದಾಗಿ ಬದುಕುವ ಸಮುದಾಯಗಳೂ ತಮ್ಮದೇ ಆದ ಕೋಮು ದೃಷ್ಟಿಕೋನವನ್ನು ಬೆಳೆಸಿಕೊಂಡು, ಶ್ರೇಷ್ಠತೆಯ ಕವಚಗಳನ್ನೂ ಧರಿಸಿಕೊಂಡು, ಪ್ರತ್ಯೇಕತೆಯ ಗೋಡೆಗಳನ್ನೂ, ದ್ವೇಷದ ಪರದೆಗಳನ್ನೂ ಸೃಷ್ಟಿಸಿಕೊಳ್ಳಲಾರಂಭಿಸುತ್ತವೆ.
ಈ ಗೋಡೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲು, ದ್ವೇಷದ ಪರದೆಗಳನ್ನು ಮತ್ತಷ್ಟು ಅಪಾರದರ್ಶಕವಾಗಿಸಲು ಮತ್ತು ದ್ವೇಷಾಸೂಯೆಗಳ ಮನಸುಗಳನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಲು ಮತಾಂಧ, ಮೂಲಭೂತವಾದಿ ಸಂಘಟನೆಗಳು ಶ್ರಮಿಸುತ್ತಲೇ ಇರುತ್ತವೆ. ಏಕೆಂದರೆ ಅವುಗಳಿಗೆ ಇದು ಅಸ್ತಿತ್ವದ ಪ್ರಶ್ನೆ. ಆದರೆ ಮಾನವ ಸಮಾಜಕ್ಕೆ ಇದು ಅಗತ್ಯವಿಲ್ಲ. ನಾವು ಕೆಡವಿ ಕಟ್ಟುವುದೇ ಆದರೆ, ಪ್ರಾಚೀನ ಅವೈಚಾರಿಕತೆಯ ಗೋಡೆಗಳನ್ನು, ತಾರತಮ್ಯಗಳ ಕೋಟೆಗಳನ್ನು, ಶೋಷಣೆಯ ಬುನಾದಿಯನ್ನು ಕೆಡವಿ, ವೈಚಾರಿಕ ಪ್ರಜ್ಞೆಯ, ವೈಜ್ಞಾನಿಕ ಮನೋಭಾವದ, ಸಾಮಾಜಿಕಾರ್ಥಿಕ ಸಮಾನತೆಯ ದೃಷ್ಟಿಕೋನದ ಭವ್ಯ ಮಹಲುಗಳನ್ನು ಕಟ್ಟಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಗಾಂಧಿ-ಅಂಬೇಡ್ಕರ್- ಮಾರ್ಕ್ಸ್ ಮತ್ತು ಅನೇಕ ಮಹನೀಯರು ದಾರಿ ದೀಪವಾಗಲು ಸಾಧ್ಯ. ದುರದೃಷ್ಟವಶಾತ್ ನಾವು ಈ ಮಹಾನ್ ಚೇತನಗಳನ್ನು ಪ್ರತಿಮೆಗಳಲ್ಲಿ ಬಂಧಿಸಿಟ್ಟಿದ್ದೇವೆ. ಸಮಾಧಿಗಳಲ್ಲಿಟ್ಟು ಆರಾಧಿಸತೊಡಗಿದ್ದೇವೆ. ಅವರ ಚಿಂತನೆಗಳ ಅನುಕರಣೆಗೂ ವರ್ತಮಾನದ ವಾಸ್ತವ ಜಗತ್ತಿನಲ್ಲಿ ಅವುಗಳನ್ನು ಅಳವಡಿಸಿ, ಪ್ರಸ್ತುತ ಸಮಾಜಕ್ಕೆ ಹೊಸ ಮಾರ್ಗಗಳನ್ನು ಕಲ್ಪಿಸುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲು ನಾವು ವಿಫಲರಾಗಿದ್ದೇವೆ.
ಈ ವೈಫಲ್ಯವೇ ಸಮಾಜಘಾತುಕ ಶಕ್ತಿಗಳಿಗೆ ಮತ್ತು ಜನಸಾಮಾನ್ಯರನ್ನು ಜಾತಿ ಮತಗಳ ಅಸ್ಮಿತೆಗಳಲ್ಲಿ ವಿಭಜಿಸುವ ಶಕ್ತಿಗಳಿಗೆ ಮುಕ್ತ ಅವಕಾಶವನ್ನೂ ನೀಡುತ್ತಿದೆ.
ಅಮಾನುಷತೆಯನ್ನು ತಾತ್ವಿಕ ನೆಲೆಯಲ್ಲಿ, ಸೈದ್ಧಾಂತಿಕ ಚೌಕಟ್ಟಿನಲ್ಲಿ ಸ್ವೀಕರಿಸುವಂತಹ ಒಂದು ವಿಕೃತ ಸಮಾಜಕ್ಕೆ 21ನೆಯ ಶತಮಾನದ ಭಾರತ ಸಾಕ್ಷಿಯಾಗಿದೆ ಎಂದರೆ ನಮಗೆ ಗಾಂಧಿ ಜಯಂತಿಯನ್ನು ಆಚರಿಸುವ ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಸಮಾಜಘಾತುಕ ಶಕ್ತಿಗಳನ್ನು ಕಾನೂನಾತ್ಮಕವಾಗಿ ಮಟ್ಟ ಹಾಕಲಾಗುತ್ತದೆ ಎಂಬ ಸರ್ಕಾರಗಳ ಘೋಷಣೆಯ ನಡುವೆಯೇ ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ, ಪ್ರಕ್ಷುಬ್ಧಗೊಳಿಸುವ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಮಲಿನಗೊಳಿಸುವ ಶಕ್ತಿಗಳು, ಗುಂಪುಗಳು ತಮ್ಮದೇ ಆದ ಸುರಕ್ಷಿತ ನೆಲೆಯನ್ನು ಕಂಡುಕೊಳ್ಳುತ್ತಿವೆ. ಕಾನೂನಾತ್ಮಕ ನಿಷೇಧದ ಮೂಲಕ ಈ ಶಕ್ತಿಗಳು ರೂಪಿಸುವ ಮನಸ್ಥಿತಿಯನ್ನು ಪರಿವರ್ತಿಸುವುದು ಸಾಧ್ಯವೇ? ಪ್ರೀತಿ ಹಂಚುವ ಎಲ್ಲ ಅಭಿವ್ಯಕ್ತಿಯ ಮಾರ್ಗಗಳನ್ನೂ ಕೊನೆಗೊಳಿಸಿ, ದ್ವೇಷಾಸೂಯೆಯನ್ನು ಹರಡುವ ವಿಕೃತ ಮಾರ್ಗಗಳನ್ನು ಪೋಷಿಸುವ ಒಂದು ರಾಜಕೀಯ- ಸಾಂಸ್ಕೃತಿಕ ಪರಂಪರೆಯ ನಡುವೆ, ಕಾನೂನಾತ್ಮಕ ಕ್ರಮಗಳು ಎಷ್ಟರ ಮಟ್ಟಿಗೆ ಸಫಲವಾಗುತ್ತವೆ? ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕಿದೆ.
ತಾವು ಪ್ರತಿನಿಧಿಸುವ ಸಮುದಾಯವು ಶತಮಾನಗಳ ಶೋಷಣೆ ಅನುಭವಿಸಿದ್ದರೂ ಈ ಸಂಕೋಲೆಗಳಿಂದ ವಿಮೋಚನೆ ಪಡೆಯಲು ಶಾಂತಿ- ಸಹನೆ- ಸಮಾನತೆಯ ಹಾದಿಯನ್ನು ಅನುಸರಿಸಿದ ಡಾ ಬಿ ಆರ್ ಅಂಬೇಡ್ಕರ್ ಹಾಗೂ ತಾವು ಸ್ವೀಕರಿಸಿ ಆರಾಧಿಸುವ ಧಾರ್ಮಿಕ ಸಮುದಾಯದಲ್ಲಿರುವ ಅಮಾನುಷ ಪದ್ಧತಿಗಳನ್ನು ವಿರೋಧಿಸುತ್ತಲೇ ಮನಃಪರಿವರ್ತನೆಯ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಗಾಂಧಿ, ವರ್ತಮಾನದ ಸಂದರ್ಭದಲ್ಲಿ ಎರಡು ಧೃವಗಳಲ್ಲಿ ನಿಂತರೂ, ಈ ಇಬ್ಬರ ಆಶಯಗಳು ಒಂದೇ ಆಗಿವೆ. ಅಹಿಂಸಾತ್ಮಕ, ಶಾಂತಿಯುತ, ಸಮಾನತೆಯ, ಶೋಷಣೆ ಮುಕ್ತ, ದೌರ್ಜನ್ಯ ಮುಕ್ತ ಭಾರತವನ್ನು ಕಟ್ಟುವುದೇ ಈ ಆಶಯದ ಅಂತಃಸತ್ವವೂ ಆಗಿದೆ. ಈ ಭಾರತವನ್ನು ಕಟ್ಟಲು ಭಾರತದ ಪ್ರತಿ ಪ್ರಜೆಯೂ ದ್ವೇಷ, ಅಸೂಯೆ, ಈರ್ಷೆ ಮತ್ತು ಅಮಾನವೀಯತೆಗೆ ಸ್ವಯಂ ನಿಷೇಧ ಹೇರಿಕೊಳ್ಳಬೇಕಿದೆ. ಇಂತಹ ಒಂದು ಸಮಾಜವನ್ನು ಕಟ್ಟಿ ಬೆಳೆಸುವ ಹೊಣೆ 75 ವರ್ಷಗಳ ಸ್ವತಂತ್ರ ಭಾರತದ ಮತ್ತು ಶ್ರೇಷ್ಠ ಸಂವಿಧಾನದ ಫಲಾನುಭವಿಗಳ ಮೇಲಿದೆ. ನಾವು ಎಡವಿದ್ದೇವೆ ಇನ್ನು ಎಡವುವುದು ಬೇಡ ಎಂಬ ಎಚ್ಚರಿಕೆ ನಮ್ಮನ್ನು ಜಾಗೃತವಾಗಿರಿಸಿದರೆ ನಾವು ಬಾಪು ಗಾಂಧಿಗೆ ಸಲ್ಲಿಸುವ ನಮನಗಳೂ ಸಾರ್ಥಕವಾದೀತು. (ಮುಗಿಯಿತು)