ಎಡಿಟೋರಿಯಲ್

2024ಕ್ಕೆ ವಿದಾಯ ಹೇಳುತ್ತಾ 2025ನ್ನು ಸ್ವಾಗತಿಸುವ ಹೊತ್ತಿನಲ್ಲಿ

ಕಳೆದ ವಾರ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನವಾಯಿತು. ಮಂಡ್ಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಮನರಂಜನೋದ್ಯಮ (ರಂಗಭೂಮಿ, ಕಿರುತೆರೆ, ಚಲನಚಿತ್ರರಂಗ) ಎದುರಿಸುತ್ತಿರುವ ಸವಾಲುಗಳ ಕುರಿತ ಗೋಷ್ಠಿ ಕೂಡ ಇತ್ತು. ಅಧ್ಯಕ್ಷತೆ ವಹಿಸಿದ್ದವರು ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್. ವಿ. ರಾಜೇಂದ್ರ ಸಿಂಗ್ (ಬಾಬು). ಸಮ್ಮೇಳನ ಸಂಘಟನೆಯ ಅವ್ಯವಸ್ಥೆಯ ಅನುಭವದ ಕುರಿತು ಪ್ರಸ್ತಾಪಿಸಿದರು ಬಾಬು. ಅದರ ಜೊತೆಯಲ್ಲೇ ಈ ಗೋಷ್ಠಿ ಸಮಾನಾಂತರ ವೇದಿಕೆಯ ಬದಲು ಮುಖ್ಯ ವೇದಿಕೆಯಲ್ಲಿ ನಡೆಯಬೇಕಿತ್ತು; ಮುಂದಿನ ಬಾರಿ ಮುಖ್ಯ ವೇದಿಕೆಯಲ್ಲಿ ಈ ಗೋಷ್ಠಿ ನಡೆಯುವಂತೆ ನೋಡಿಕೊಳ್ಳಬೇಕು. ಪ್ರತಿ ವರ್ಷ ಸಮಾನಾಂತರ ವೇದಿಕೆಗಳಲ್ಲೇ ಅವಕಾಶ ನೀಡಲಾಗುತ್ತಿದೆ ಎಂದರು.

ಬಾಬು ಅವರ ಮಾತನ್ನು ಈ ಸಮ್ಮೇಳನಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಅನಿಸುತ್ತಿಲ್ಲ. ಕನ್ನಡ ಚಿತ್ರರಂಗಕ್ಕೂ ಅನ್ವಯಿಸಬಹುದು, ಕನ್ನಡ ಚಿತ್ರಗಳು ಭಾರತದ ಇತರ ಭಾಷಾ ಚಿತ್ರಗಳಂತೆ, ವಿಶೇಷವಾಗಿ ಹಿಂದಿ ಚಿತ್ರಗಳಂತೆ ಮುಖ್ಯವಾಹಿನಿಯಲ್ಲಿ ಸೇರಿಕೊಂಡದ್ದು ಅಪರೂಪ. ಎರಡು ಕೆಜಿಎಫ್‌ಗಳು ಮತ್ತು ಕಾಂತಾರ ಹೊರತಾಗಿ ಅಂತಹ ಸುದ್ದಿ ಮಾಡಿದವೆಷ್ಟು? ಈ ನೆಲಮೂಲ ಕಥೆಗಳ ಎಷ್ಟು ಚಿತ್ರಗಳು ಮುಖ್ಯವಾಹಿನಿಯ ಚಿತ್ರಗಳೆನಿಸಿಕೊಂಡಿವೆ? ಇದು ಚಿತ್ರದ ಗಳಿಕೆಗೆ ಸಂಬಂಧಪಟ್ಟ ಪ್ರಶ್ನೆ.

ಮೊನ್ನೆ ತೆಲುಗು ಚಿತ್ರ ಪುಷ್ಪ ಮುಂದುವರಿದ ಭಾಗ ತೆರೆಕಂಡಿತಷ್ಟೇ. ತೆರೆಕಂಡ ಆರೇ ದಿನಗಳಿಗೆ ಸಹಸ್ರ ಕೋಟಿ ರೂ. ಗಳಿಸಿದ್ದನ್ನು ದೇಶದ ಬಹುತೇಕ ಮಾಧ್ಯಮಗಳು ಸಂಭ್ರಮಿಸಿದಂತಿತ್ತು. ಮೊದಲ ಭಾಗಕ್ಕೆ ಒಂದೆರಡು ವೈಯಕ್ತಿಕ ಪ್ರಶಸ್ತಿಗಳು ರಾಷ್ಟ್ರ ಮಟ್ಟದಲ್ಲಿ ಬಂದಿದ್ದವು. ಮೊನ್ನೆ ಅಲ್ಲಿನ ಸಚಿವೆಯೊಬ್ಬರು ಈ ಕುರಿತಂತೆ ಟೀಕಿಸಿದ್ದು ವಿಶೇಷ. ಕಾನೂನು ಪಾಲಿಸಲು ನೆರವಾಗುವ ಪೊಲೀಸರನ್ನು ವಿವಸ್ತ್ರಗೊಳಿಸುವ ಕಳ್ಳಸಾಗಾಣಿಕೆದಾರನ ಕಥೆಯುಳ್ಳ ಚಿತ್ರದ ಪಾತ್ರಧಾರಿಗೆ ಪ್ರಶಸ್ತಿ ನೀಡಿದ್ದು ಎಷ್ಟು ಸರಿ ಎನ್ನುವುದಾಗಿತ್ತು ಅವರ ಪ್ರಶ್ನೆ.

ಭಾರತೀಯ ಚಿತ್ರಗಳೆಂದರೆ ಹಿಂದಿ ಚಿತ್ರಗಳು ಎನ್ನುವಂತೆ ಹಿಂದೆ ಬಿಂಬಿಸಲಾಗುತ್ತಿತ್ತು. ಈಗಲೂ ಕೆಲವೆಡೆ ಅದು ಮುಂದುವರಿದಿದೆ ಅನ್ನಿ. ಆದರೆ ದಕ್ಷಿಣ ಭಾರತೀಯ ಭಾಷಾ ಚಿತ್ರಗಳು ಅದನ್ನು ಸಮರ್ಥವಾಗಿ ಮುರಿಯುವಲ್ಲಿ ಯಶಸ್ವಿಯಾಗಿವೆ. ಒಂದು ಭಾಷೆಯಲ್ಲಿ ಚಿತ್ರ ನಿರ್ಮಿಸಿ, ಇತರ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿ, ಅದನ್ನು ಪಾನ್ ಇಂಡಿಯಾ ಎಂದು ಕರೆಯುವ ಶೋಕಿ ಈಗ ಬಹುತೇಕ ಚಿತ್ರೋದ್ಯಮಗಳಿಗೆ ಅಂಟಿರುವ ಸೋಂಕು.

ಕೆಜಿಎಫ್ ಚಿತ್ರದ ನಿರ್ಮಾಣದ ಹಂತದಲ್ಲೇ ಅದನ್ನು ಇತರ ಭಾಷೆಗಳಿಗೆ ಡಬ್ ಮಾಡಿ ದೇಶಾದ್ಯಂತ ಬಿಡುಗಡೆ ಮಾಡುವ ಯೋಜನೆ ನಿರ್ಮಾಣ ಸಂಸ್ಥೆ ಹೊಂಬಾಳೆಯದಾಗಿತ್ತು. ಆದರೆ ಕಾಂತಾರದ ಯೋಜನೆ ಹಾಗಿರಲಿಲ್ಲ. ಮಾತ್ರವಲ್ಲ, ಕನ್ನಡ ಚಿತ್ರವೇ ವಿಶ್ವಾದ್ಯಂತ ತೆರೆಕಂಡಿತು. ಪ್ರೇಕ್ಷಕರ ಮನಗೆದ್ದಿತು; ಚಿತ್ರೋದ್ಯಮಿಗಳದ್ದು ಕೂಡ. ಹಾಗಾಗಿಯೇ ಮುಂದೆ ಅದು ಇತರ ಭಾಷೆಗಳಿಗೆ ಡಬ್ ಆಗಿ, ಗಳಿಕೆಯಲ್ಲಿ ದಾಖಲೆ ಮಾಡಿತು.

ಆರು ದಶಕಗಳ ಹಿಂದೆ ಕನ್ನಡ ಚಳವಳಿಯ ಮಂದಿಯ ಡಬ್ಬಿಂಗ್ ವಿರೋಧದ ಸಾಕಷ್ಟು ಚರ್ಚೆ ನಡೆದಿತ್ತು. ಉದ್ಯಮದ ಒಂದು ವರ್ಗ ಅದನ್ನು ವಿರೋಽಸಿದ್ದೂ ಇದೆ. ಆದರೆ ಆ ಚರ್ಚೆಗಳು ವೈಯಕ್ತಿಕ ಹಿತಾಸಕ್ತಿಯದಾಗಿರಲಿಲ್ಲ; ಕನ್ನಡ ಚಿತ್ರರಂಗದ ಸಮಗ್ರ ಹಿತಕಾಯುವು ದಾಗಿತ್ತು. ಆಗ ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗುತ್ತಿತ್ತು; ಆದರೆ ಕನ್ನಡಕ್ಕೆ ಬೇರೆ ಭಾಷೆಗಳ ಚಿತ್ರಗಳು ಡಬ್ ಆಗುವುದಕ್ಕೆ ವಿರೋಧವಿತ್ತು. ಅದಕ್ಕೆ ಆಗ ಇದ್ದ ಸಮರ್ಥನೆ ಹೀಗಿತ್ತು: ಸಣ್ಣ ಮಾರುಕಟ್ಟೆಯ ಭಾಷಾ ಚಿತ್ರರಂಗಕ್ಕೆ ದೊಡ್ಡ ಮಾರುಕಟ್ಟೆ ಇರುವ ಭಾಷೆಯ ಚಿತ್ರಗಳು ಡಬ್ ಆದರೆ ಸ್ಥಳೀಯ ಭಾಷಾ ಚಿತ್ರರಂಗದ ಬೆಳವಣಿಗೆ ಕಷ್ಟ. ಆದರೆ ದೊಡ್ಡ ಮಾರುಕಟ್ಟೆಯ ಭಾಷಾ ಚಿತ್ರರಂಗಕ್ಕೆ ಡಬ್ ಆದರೆ ಅಂತಹ ತೊಂದರೆ ಏನೂ ಇಲ್ಲ.

ಇತ್ತೀಚೆಗೆ ಪರಭಾಷಾ ಚಿತ್ರಗಳು ಕನ್ನಡದಲ್ಲೂ ಡಬ್ ಆಗತೊಡಗಿವೆ. ದೊಡ್ಡ ಮಾರುಕಟ್ಟೆ ಇರುವ ಭಾಷೆಗಳ ಚಿತ್ರಗಳು ಸಣ್ಣ ಮಾರುಕಟ್ಟೆ ಇರುವ ಚಿತ್ರರಂಗಕ್ಕೆ ಡಬ್ ಆದರೆ ಏನಾಗುತ್ತದೆ ಎನ್ನುವುದಕ್ಕೆ ಇತ್ತೀಚಿನ ದಿನಗಳು ಸಾಕ್ಷಿಯಾಗತೊಡಗಿವೆ. ‘ಪುಷ್ಪ ೨’ ತೆಲುಗು ಚಿತ್ರ ಮೂಲಭಾಷೆಯಲ್ಲದೆ ತಮಿಳು, ಮಲಯಾಳ, ಹಿಂದಿ ಮಾತ್ರವಲ್ಲದೆ ಕನ್ನಡಕ್ಕೂ ಡಬ್ ಆಗಿ ತೆರೆಕಂಡಿತು. ಕರ್ನಾಟಕದಲ್ಲಿ ಈ ಎಲ್ಲ ಅವತರಣಿಕೆಗಳೂ ತೆರೆಕಂಡವು. ಕನ್ನಡದಲ್ಲಿ ಡಬ್ಬಿಂಗ್ ಬೇಕು ಎಂದು ವಾದಿಸಿದ ಕನ್ನಡ ಅಭಿಮಾನಿಗಳು, ಕರ್ನಾಟಕದಲ್ಲಿ ಕನ್ನಡ ಆವೃತ್ತಿ ಮಾತ್ರ ಬಿಡುಗಡೆ ಆಗಬೇಕು ಎಂದು ಒತ್ತಾಯಿಸುವ ಸ್ಥಿತಿಯಲ್ಲಿಲ್ಲ. ಈ ಮಾತು ಹೋರಾಟಗಾರರಿಗೂ ಅನ್ವಯವಾಗುತ್ತದೆ.

೨೦೨೪ರ ಸೋಲಿನ ದರ್ಬಾರಿನ ಹಿಂದೆ ಇಂತಹ ಬೆಳವಣಿಗೆಗಳೂ ಇವೆ. ವರ್ಚಸ್ವೀ ತಾರೆಯರ ಮನಸ್ಥಿತಿ ಕೂಡ ಇದೆ. ತಮ್ಮ ಅಭಿನಯದ ಚಿತ್ರಗಳ ಗಳಿಕೆಯ ಸಾಧ್ಯತೆ ಏನೇ ಇರಲಿ, ಸಂಭಾವನೆ ಮಾತ್ರ ನಮಗೆ ಇಷ್ಟು ಬರ ಬೇಕು ಎನ್ನುವ ನಟರ ಸಂಖ್ಯೆ ಹೆಚ್ಚತೊಡಗಿದೆ ಎನ್ನುತ್ತಿವೆ ಮೂಲಗಳು. ಬಹುತೇಕ ನಟರ ಸಂಭಾವನೆ ಎಂಟಂಕಿಯಾದರೆ, ಒಂದಿಬ್ಬರು ಒಂಬತ್ತರಲ್ಲಿದ್ದಾರೆ. ಕಲಾವಿದರ, ತಂತ್ರಜ್ಞರ ಸಂಭಾವನೆ, ಚಿತ್ರೀಕರಣ, ಚಿತ್ರೀಕರಣೋತ್ತರ ಕೆಲಸ, ಬಿಡುಗಡೆಪೂರ್ವ ಪ್ರಚಾರಕಾರ್ಯ, ಮಾಧ್ಯಮ ಪ್ರಚಾರ ಹೀಗೆ ಒಂದು ಚಿತ್ರ ಆರಂಭದಿಂದ ಬಿಡುಗಡೆಯವರೆಗೆ ಆಗುವ ವೆಚ್ಚ ಅದರ ಮುಖ್ಯ ಕಲಾವಿದರ ಸಂಭಾವನೆಯನ್ನು ಅನುಸರಿಸಿರುತ್ತದೆ. ಬಹಳಷ್ಟು ಚಿತ್ರಗಳು ದುಬಾರಿ, ಅನಗತ್ಯ ವೆಚ್ಚಗಳನ್ನು ಮಾಡಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ವರ್ಷ ತೆರೆಕಂಡ ‘ಮಾರ್ಟಿನ್’ ಮತ್ತು ನಿರ್ದೇಶಕ/ನಿರ್ಮಾಪಕನ ಬಲಿಪಡೆದ ‘ಅಶೋಕ ಬ್ಲೇಡ್’ ಇದಕ್ಕೆ ಜ್ವಲಂತ ಸಾಕ್ಷಿ. ಚಲನಚಿತ್ರ ಮಾಧ್ಯಮವನ್ನು ಬಲ್ಲ ತಂತ್ರಜ್ಞರ ಕೊರತೆ, ಯಾರು ಬೇಕಾದರೂ ಚಿತ್ರ ನಿರ್ಮಿಸಬಹುದು, ಅದಕ್ಕೆ ಯಾವುದೇ ಪೂರ್ವ ಸಿದ್ಧತೆ, ತರಬೇತಿಯ ಅಗತ್ಯ ಇಲ್ಲ ಎನುವ ಮನೋಭಾವ, ಜನಪ್ರಿಯ ನಟರ ಅಸ್ತಿತ್ವದ ಯೋಚನೆಗಳು ಮುಪ್ಪುರಿಗೊಂಡು, ಕನ್ನಡ ಚಿತ್ರರಂಗವನ್ನು ಇಂದಿನ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಿಲ್ಲ.

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವುದು ಈಗ ಕೇಳುತ್ತಿರುವ ಹೊಸ ಕೂಗು. ಚಿತ್ರೋದ್ಯಮದ ಸಂಘಟನೆಗಳಲ್ಲಿ ಸಕ್ರಿಯವಾಗಿರುವವು ಕಡಿಮೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ಭಾರವಾಹಿಗಳ ಆಯ್ಕೆ ಆಗಿದೆ. ಈ ಬಾರಿ ಅಧ್ಯಕ್ಷತೆ ಪ್ರದರ್ಶಕರದು. ಇದು ಕನ್ನಡ ಚಿತ್ರರಂಗದ ಕುರಿತು ಮಾತ್ರ ಚಿಂತಿಸುವುದು ಕಷ್ಟಸಾಧ್ಯ. ಏಕೆಂದರೆ ಅದರ ಸದಸ್ಯರಲ್ಲಿ ಪರಭಾಷಾ ಚಿತ್ರಗಳ ವಿತರಕರು, ಪ್ರದರ್ಶಕರು ಇದ್ದಾರೆ. ಇತ್ತೀಚೆಗೆ ಪ್ರದರ್ಶಕರು ಮಂಡಳಿಯಿಂದ ವಿಮುಖರಾಗುತ್ತಿದ್ದಾರೆ. ಚುನಾವಣೆಗೆ ಸ್ಪಽಸಿದ ಪ್ರದರ್ಶಕ ವಲಯದ ಸದಸ್ಯರ ಸಂಖ್ಯೆ ಇದನ್ನು ಹೇಳುತ್ತದೆ.

ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಉದ್ಯಮದ ಒಗ್ಗಟ್ಟಿನ ಕುರಿತ ಮಾತೂ ಇತ್ತು. ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ, ವಾಹಿನಿಗಳು ಮತ್ತು ಒಟಿಟಿಗಳು ಪ್ರಸಾರಕ್ಕಾಗಿ ಕೊಂಡುಕೊಳ್ಳುತ್ತಿಲ್ಲ ಮುಂತಾಗಿ ನಿರ್ಮಾಪಕರ ಅಳಲು. ಒಟಿಟಿ ಮತ್ತು ಮನರಂಜನಾ ವಾಹಿನಿಗಳಲ್ಲಿ ಕನ್ನಡ ಚಿತ್ರಗಳಿಗೆ ಬರ ಇದ್ದಂತಿಲ್ಲ. ಸಿನಿಮಾ ವಾಹಿನಿಗಳಲ್ಲಿ ಪರಭಾಷೆಯಿಂದ ಡಬ್ ಆದ ಚಿತ್ರಗಳ ಪ್ರಸಾರದ ಸಂಖ್ಯೆ ಏರತೊಡಗಿದೆ. ಧಾರಾವಾಹಿಗಳಿಗೂ ಈ ಮಾತು ಅನ್ವಯ.

ಚಲನಚಿತ್ರಗಳ ಕುರಿತಂತೆ ಬರೆಯುವ ಮಾಧ್ಯಮಗಳ ಕೊಡುಗೆಯನ್ನೂ ಈ ನಿಟ್ಟಿನಲ್ಲಿ ಮರೆಯುವ ಹಾಗಿಲ್ಲ. ನವಮಾಧ್ಯಮಗಳಲ್ಲಿ ಬಹುತೇಕ ಇವುಗಳ ಮೂಲಕವೇ ಉಸಿರಾಡುವಂತಿದೆ. ತಮ್ಮ ವಾಹಿನಿಗಳನ್ನು ನೋಡುವವರ ಸಂಖ್ಯೆ ಎಷ್ಟೇ ಇರಲಿ, ಬೇಡಿಕೆಗೇನೂ ಕಡಿಮೆ ಇಲ್ಲ ಎನ್ನುತ್ತಾರೆ ನಿರ್ಮಾಪಕರು. ತೆರೆಕಂಡ ಚಿತ್ರಗಳಲ್ಲಿ ಒಂದೆರಡು ಕಡೆ ಹೊರತುಪಡಿಸಿದರೆ ಎಲ್ಲ ಚಿತ್ರಗಳಿಗೂ ಕನಿಷ್ಠ ಮೂರು ನಕ್ಷತ್ರ ಯೋಗ! ಚಿತ್ರಗಳ ಗುಣಮಟ್ಟಕ್ಕಿಂತಲೂ ಅದಕ್ಕೆ ಸಂಬಂಽಸಿದ ಅಲ್ಲಿನ ವ್ಯಾವಹಾರಿಕ ವ್ಯವಸ್ಥೆ ಕಾರಣ ಎನ್ನಲಾಗಿದೆ. ತೆರೆಕಂಡ ಮೂರನೇ ದಿನವೇ ‘ಚಿತ್ರ ಯಶಸ್ವಿಯಾದ ಸಂತೋಷಕೂಟ’! ಇದು ಇನ್ನಷ್ಟು ಮಂದಿಯನ್ನು ಚಿತ್ರಮಂದಿರಕ್ಕೆ ಕರೆತರುತ್ತದೆ ಎನ್ನುವ ಭ್ರಮಾಧಿನ ಸ್ಥಿತಿ ಯಿಂದ ಹೊರಗೆ ಬಂದು ಒಟ್ಟಾಗಿ ಕುಳಿತು ಬೇಕುಬೇಡಗಳ ಚರ್ಚೆಗಳಾಗಬೇಕು.

ವರ್ಷದ ಕೊನೆಯ ವಾರ ತೆರೆಕಂಡ ಸುದೀಪ್ ಅಭಿನಯದ ಚಿತ್ರ ‘ಮ್ಯಾಕ್ಸ್’ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಅದು ಇನ್ನೊಂದು ದಾಖಲೆ ಕೂಡ ಮಾಡಿದೆ. ಪರಭಾಷೆಯ ಚಿತ್ರಗಳ ಹೊರತಾಗಿ ಕನ್ನಡ ಚಿತ್ರಗಳು ಹಿಂದೆ ಬುಧವಾರ ತೆರೆಕಂಡ ಉದಾಹರಣೆ ಇಲ್ಲ. ಇದೇ ಮೊದಲು. ೨೦೨೫ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು, ಗೆಲುವು ತರಲಿ ಎಂದು ಆಶಿಸೋಣ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡರ ಮನವಿ

ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…

2 hours ago

ಪೌರಕಾರ್ಮಿಕರು ಸೇರಿ ಎಲ್ಲಾ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ : ಬೈರತಿ ಸುರೇಶ್

ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…

3 hours ago

ಮೈಸೂರು | ನಾಳೆ ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್ ರಿಯಾಲಿಟಿ ಶೋʼನ ಆಡಿಷನ್‌

ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…

3 hours ago

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

4 hours ago

ಸಿನಿಮಾ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು : ನಿರ್ದೇಶಕ ಸುರೇಶ್‌ ಆಶಯ

ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…

4 hours ago

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳ ಕುರಿತು ಅರಿವು ಮೂಡಿಸಿ : ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…

4 hours ago