ಪಶ್ಚಿಮ ಬಂಗಾಳದ ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಚೊಚ್ಚಲ ಸಂಸದೆ ಈಕೆ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಸಂಪಾದಿಸಿದ್ದವರು. ಸಂಸತ್ತಿನಲ್ಲಿ ಮೋದಿ ಸರ್ಕಾರದ ನೀತಿ ನಿರ್ಧಾರಗಳ ಕುರಿತ ಅವರ ಚುಟುಕು ಭಾಷಣಗಳು ಕೆಂಡದ ಉಂಡೆಗಳು. ಅವರ ಮಾತುಗಳನ್ನು ಕೇಳುತ್ತಿದ್ದರೆ ನಿಮಿಷಕ್ಕೆ ಆರುನೂರು ಸುತ್ತು (ಸೆಕೆಂಡಿಗೆ 10 ಸುತ್ತು) ಗುಂಡುಗಳನ್ನು ಸಿಡಿಸುವ ಎ.ಕೆ-47 ರೈಫಲ್ ಕಣ್ಣ ಮುಂದೆ ಕಟ್ಟುತ್ತದೆ. ಎತ್ತೆತ್ತಲೋ ತೂರುವ ಗುರಿಯಿಲ್ಲದ ಹುಸಿಗುಂಡುಗಳಲ್ಲ. ಕಠಿಣ ತಯಾರಿ ಮತ್ತು ಎಚ್ಚರಿಕೆಯ ಗುರಿ ಇರಿಸಿ ಎದುರಾಳಿಯ ಗುಂಡಿಗೆ ನಡುಗಿಸುವ ಕಾಡತೂಸುಗಳ ಮಳೆಯದು. ಮೊಯಿತ್ರಾ ಅವರ ಮಾತುಗಳಿಗೆ ದೈಹಿಕವಾಗಿ ಸುಡುವ ಶಕ್ತಿ ಇದ್ದಿದ್ದರೆ ಅದಾನಿ- ಮೋದಿ ಜೋಡಿ ಈ ಹೊತ್ತಿಗೆ ಗಂಭೀರ ಗಾಯಾಳುಗಳಾಗಬೇಕಿತ್ತು.
ಚೊಚ್ಚಲ ಸಂಸದೆಯಾಗಿ ಮತ್ತು ತೃಣಮೂಲ ಸಂಸದೀಯ ದಳದ ಕಿರಿಯ ಸದಸ್ಯೆಯಾಗಿ ಆಕೆಗೆ ಹಂಚಿಕೆಯಾಗುತ್ತಿದ್ದುದು ಅತಿ ಕಡಿಮೆ ಸಮಯ. ಅಷ್ಟರಲ್ಲೇ ಕೆಂಡದುಂಡೆಗಳ ಮಳೆಗರಿಸಿಬಿಡುತ್ತಿದ್ದರು. ಅಚ್ಚ ಎ.ಕೆ-೪೭ ಸ್ವಯಂಚಾಲಿತ ರೈಫಲ್‌ನಂತೆ, ಅರೆ ಸೆಕೆಂಡನ್ನೂ ವ್ಯರ್ಥಗೊಳಿಸುತ್ತಿರಲಿಲ್ಲ. ಆಕೆಯ ಚಹರೆ ಕೂಡ ಹೊತ್ತಿ ಉರಿವ ಸೋಜಿಗದಂತೆ ಭಾಸವಾಗುತ್ತಿತ್ತು. ಮೋದಿ ಭಜನೆ ಮಾಡುವ ಗೋಽ ಮೀಡಿಯಾ ಕೂಡ ಸಂದರ್ಶನ ನಡೆಸಿದವು. ಆಕೆಯ ಮಾತುಗಾರಿಕೆ ಅದರ ಸಿದ್ಧತೆ, ಸ್ಛೂರ್ತಿ, ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಕುರಿತು ಕುತೂಹಲ ತೋರಿದ್ದುಂಟು.
2019ರಲ್ಲಿ ಲೋಕಸಭೆ ಪ್ರವೇಶಿಸಿದ ಈಕೆಯ ಮೊದಲ ಭಾಷಣವೇ ‘ನಮೋ’ ಟೀವಿ ಚಾನೆಲ್ಲನ್ನು ಮುಚ್ಚಬೇಕೆಂಬುದು. ಮೋದಿ ಆಡಳಿತದಲ್ಲಿ ಉಗ್ರ ಬಲಪಂಥೀಯ ಸರ್ವಾಧಿಕಾರಿ ಸೂತ್ರ ಸಂವಿಧಾನಗಳ ‘ಫ್ಯಾಷಿಸಮ್’ ತಲೆಯೆತ್ತತೊಡಗಿದೆ ಎಂಬುದಾಗಿ ಅವರು ಮಾಡಿದ್ದ ಭಾಷಣವನ್ನು ದೇಶವಿದೇಶಗಳು ಎದ್ದು ಕುಳಿತು ಗಮನಿಸಿದ್ದವು.
ದೇಶದ ರಾಜಕಾರಣವನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಜನಸಮೂಹ ಅವರನ್ನು ನಿಬ್ಬೆರಗಿನಿಂದ ನೋಡಿತು. ಆಕೆಯ ನಿಗಿನಿಗಿ ನಿರ್ಭೀತ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆದವು.
ಪ್ರತಿಪಕ್ಷಗಳನ್ನು ಮಣಿಸಲು ಎಲ್ಲ ಬಗೆಯ ತಂತ್ರಗಳನ್ನು ಪ್ರಯೋಗಿಸುತ್ತಿದೆ ಆಳುವ ಪಕ್ಷ. ಸಂಸದೀಯ ಸಮಿತಿಗಳನ್ನು ಕೂಡ ಹತಾರುಗಳನ್ನಾಗಿ ಪ್ರಯೋಗಿಸಿದೆ.
ಸದನದಲ್ಲಿ ಎದ್ದು ನಿಂತಾಗಲೆಲ್ಲ ತನ್ನನ್ನು ಜರ್ಝರಿತಗೊಳಿಸುತ್ತಿದ್ದ ಈ ‘ಫಿರಂಗಿ’ಯನ್ನು ಕೆಡವಲು ಖೆಡ್ಡಾ ತೋಡುವ ಸನ್ನಾಹದಲ್ಲಿತ್ತು ಆಳುವ ಪಕ್ಷ. ಆಗ ಅದರ ಕೈಗೆ ಒದಗಿಬಂದ ಹತಾರು ದಂಗು ಬಡಿಸುವಂತಹುದು. ಆಳುವ ಪಕ್ಷದ ಆಕ್ರಮಣಕಾರಿ ಸಂಸದ ನಿಶಿಕಾಂತ ದುಬೆ ಗಳಿಸಿರುವ ಶೈಕ್ಷಣಿಕ ಪದವಿಗಳು ಮತ್ತು ಡಾಕ್ಟರೇಟ್ ನಕಲಿ ಎಂದು ಮಹುವಾ ಈ ಹಿಂದೆಯೇ ಆಪಾದಿಸಿ ಆತನ ಹಗೆತನ ಕಟ್ಟಿಕೊಂಡಿದ್ದರು. ಸದನದಲ್ಲಿ ಇವರಿಬ್ಬರ ಜಟಾಪಟಿ ಜರುಗುತ್ತಲೇ ಇತ್ತು.
ಮಹುವಾ ಮತ್ತು ಆಕೆಯ ಮಾಜಿ ಪ್ರೇಮಿ ಜೈಅನಂತ್ ದೇಹಾದ್ರೈ ನಡು ವಣ ಜಗಳ ಮನಸ್ತಾಪ ಹಾಗೂ ಕ್ಷುಲ್ಲಕ ನಡವಳಿಕೆಗಳು. ಮಧುರ ಸಂಬಂಧ ಮುರಿದು ಬಿದ್ದಾಗ ಈ ಜೋಡಿಯ ಮುದ್ದಿನ ನಾಯಿ ‘ಹೆನ್ರಿ’ ಯಾರಿಗೆ ಸೇರಬೇಕೆಂಬ ವ್ಯಾಜ್ಯ ಸಿಡಿದಿತ್ತು. ಕಡುಹಗೆಯ ಹಂತ ತಲುಪಿತ್ತು. ಹೆನ್ರಿಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಮಹುವಾ ಮಾಜಿ ಪ್ರೇಮಿಯನ್ನು ಕೆರಳಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಜೈ ಅನಂತ್ ರೋಷ ಮುಗಿಲು ಮುಟ್ಟಿತ್ತು. ಹೆನ್ರಿಯನ್ನು ವಶಕ್ಕೆ ಪಡೆಯುವ ಜಿದ್ದು ಹಿಡಿದರು, ಪ್ರಶ್ನೆ ಕೇಳಲು ಲಂಚ-ರುಷುವತ್ತು ಪಡೆದಿರುವ ದೂರನ್ನು ಸಿಬಿಐಗೆ ನೀಡಿದರು. ಕುದಿಯುತ್ತಿದ್ದ ದುಬೆ ಕಾಲಿಗೆ ಅನಾಯಾಸವಾಗಿ ತೊಡರಿತ್ತು ಪ್ರತೀಕಾರದ ಬಳ್ಳಿ. ದರ್ಶನ್ ಹೀರಾನಂದಾನಿ ಎಂಬ ಉದ್ಯಮಿಗೆ ಮೋದಿ ಮೆಚ್ಚುಗೆಯ ಮತ್ತೊಬ್ಬ ಉದ್ಯಮಿ ಅದಾಣಿ ಜೊತೆಗೆ ಔದ್ಯಮಿಕ ಪೈಪೋಟಿಯಿತ್ತು. ಮಹುವಾ ಮೋದಿ-ಅದಾಣಿ ಸಂಬಂಧ ಕುರಿತು ಕೇಳಿದ್ದ ಪ್ರಶ್ನೆಗಳು ಅಸಲಿಗೆ ಹೀರಾನಂದಾನಿಯ ಪ್ರಶ್ನೆಗಳು. ಸಂಸತ್ತಿನ ಜಾಲತಾಣದ ಮಹುವಾ ಖಾತೆಯ ಪಾಸ್ವರ್ಡ್ ಹೀರಾನಂದಾನಿ ಬಳಿ ಇತ್ತು. ಪ್ರಶ್ನೆಗಳನ್ನು ಆತನೇ ಮಹುವಾ ಖಾತೆಯಿಂದ ‘ಅಪ್ಲೋಡ್’ ಮಾಡುತ್ತಿದ್ದ. ಪ್ರತಿಯಾಗಿ ಆಕೆ ದುಬಾರಿ ಉಡುಗೊರೆಗಳನ್ನು ಆತನಿಂದ ಪಡೆಯುತ್ತಿದ್ದರು ಎಂದು ಅನಂತ್ ದೇಹಾದ್ರೈ ದೂರು. ಈ ದೂರನ್ನು ತಮ್ಮದಾಗಿಸಿಕೊಂಡು ಲೋಕಸಭೆ ಸ್ಪೀಕರ್‌ಗೆ ಕಳಿಸಿದ್ದರು ದುಬೆ. ಲಂಚ ರುಷುವತ್ತು ಉಡುಗೊರೆ ಪಡೆದ ಆಪಾದನೆಗಳನ್ನು ನಿರಾಧಾರ ಎಂದು ಮಹುವಾ ತಳ್ಳಿಹಾಕಿದ್ದಾರೆ. ಎರಡು ಹೇಳಿಕೆಗಳ ವಿನಾ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಈ ಪೈಕಿ ಹೀರಾನಂದಾನಿ ಹೇಳಿಕೆ ತಯಾರಾದದ್ದು ಪ್ರಧಾನಿ ಕಚೇರಿಯಲ್ಲಿ. ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿ ಆತನಿಂದ ಸಹಿ ಹಾಕಿಸಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರು ದುಬೆ ದೂರನ್ನು ನೀತಿ ನಡವಳಿಕೆ ನಿಯಮಗಳ ಸ್ಥಾಯಿ ಸಮಿತಿಯ ವಿಚಾರಣೆಗೆ ಒಪ್ಪಿಸುತ್ತಾರೆ. ಜೈ ದೇಹಾದ್ರೈ ಮತ್ತು ದರ್ಶನ್ ಹೀರಾನಂದಾನಿ ಇಬ್ಬರನ್ನೂ ಪಾಟೀಸವಾಲಿಗೆ ಗುರಿಪಡಿಸಲು ಅನುಮತಿ ನೀಡುವಂತೆ ಮೊಯಿತ್ರಾ ನೀತಿ ಸಮಿತಿಯನ್ನು ಕೋರಿದ್ದರು. ಈ ಕೋರಿಕೆಯನ್ನು ಸಮಿತಿ ತಳ್ಳಿ ಹಾಕುತ್ತದೆ. ತಮ್ಮ ಸಮಜಾಯಿಷಿ ನೀಡಲು ಆಕೆಗೂ ಅವಕಾಶ ನಿರಾಕರಿಸಲಾಗುತ್ತದೆ. ಖಾಸಗಿ ಮತ್ತು ಅಸಭ್ಯತೆಯ ಅಂಚನ್ನು ಮುಟ್ಟಿದ ಪ್ರಶ್ನೆಗಳನ್ನು ಆಕೆಗೆ ಕೇಳಲಾಗುತ್ತದೆ.
17ನೆಯ ಲೋಕಸಭೆಯಿಂದ ಉಚ್ಚಾಟಿಸುವ ನಿರ್ಣಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಲೂ ಮಹುವಾಗೆ ಅವಕಾಶ ನೀಡಲಿಲ್ಲ. ಈ ಹಿಂದೆ ಬಿಜೆಪಿಯ ಆರು ಮಂದಿ ಸಂಸದರು ಸೇರಿದಂತೆ ಹನ್ನೊಂದು ಮಂದಿಯನ್ನು ಇದೇ ಕಾರಣಕ್ಕಾಗಿ ಉಚ್ಚಾಟಿಸಲಾಗಿತ್ತು. ಅಂದಿನ ಸ್ಪೀಕರ್ ಸೋಮನಾಥ ಚಟರ್ಜಿಯವರು ಕೂಡ ಆಪಾದಿತರಿಗೆ ಮಾತಾಡುವ ಅವಕಾಶವನ್ನು ಸದನದಲ್ಲಿ ನೀಡಿರಲಿಲ್ಲ ಎಂಬುದು ಆಳುವ ಪಕ್ಷದ ಸಮರ್ಥನೆ.
ಒಂದು ತಪ್ಪು ಮತ್ತೊಂದು ತಪ್ಪಿಗೆ ಸಮರ್ಥನೆಯಾಗುವುದಿಲ್ಲ. ಎರಡು ತಪ್ಪುಗಳು ಸೇರಿ ಒಂದು ‘ಸರಿ’ ಕೂಡ ಆಗುವುದಿಲ್ಲ.
‘ಅದಾಣಿ ಮೇಲಿನ 13 ಸಾವಿರ ಕೋಟಿ ರುಪಾಯಿಗಳ ಕಲ್ಲಿದ್ದಲು ಹಗರಣದಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಸರ್ಕಾರ ಹೂಡಿದ ಷಡ್ಯಂತ್ರವಿದು. ಅದಾಣಿ ಹಗರಣಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿಲ್ಲವೇಕೆ? ಮುಂಬರುವ ತಿಂಗಳುಗಳಲ್ಲಿ ನನ್ನ ವಿರುದ್ಧ ಸಿಬಿಐ, ಇ.ಡಿ.ಗಳನ್ನು ಛೂಬಿಟ್ಟು ಕಿರುಕುಳ ನೀಡುವುದು ನಿಶ್ಚಿತ. ಈ ದಮನಕ್ಕೆ ಮಣಿಯುವವಳು ನಾನಲ್ಲ. ನನಗಿನ್ನೂ ೪೯ ವರ್ಷ ವಯಸ್ಸು. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹೊರಗೆ, ಹಾದಿ ಬೀದಿಗಳಲ್ಲಿ ನಿಮ್ಮ ವಿರುದ್ಧ ಹೋರಾಡುತ್ತೇನೆ. ಖಚಿತವಾಗಿಯೂ ನಿಮ್ಮನ್ನು ಕೊನೆಗಾಣಿಸುತ್ತೇನೆ’.- ಉಚ್ಚಾಟನೆಯ ನಂತರ ಸಂಸದ್ ಭವನದ ಹೊರಭಾಗದಲ್ಲಿ ಮಹುವಾ ತೊಟ್ಟ ಪ್ರತಿಜ್ಞೆಯಿದು. ಈ ಹೊತ್ತಿನಲ್ಲಿ ಪ್ರತಿಪಕ್ಷದ ಹೇಮಾಹೇಮಿಗಳು ಆಕೆಯ ಬೆನ್ನಿಗಿದ್ದರು. ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ನಂತರ ದೂರವಾಗುತ್ತಿದ್ದ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ವನ್ನು ಪುನಃ ಹತ್ತಿರ ತರುತ್ತಿದೆ ಈ ಉಚ್ಚಾಟನೆ. ‘ಇಂಡಿಯಾ’ ಕುರಿತ ಮಮತಾ ಬ್ಯಾನರ್ಜಿ ಹೇಳಿಕೆಯೇ ಈ ಮಾತಿಗೆ ನಿದರ್ಶನ.
ಮಹುವಾ ಮೇಲಿನ ಲಂಚ ರುಷುವತ್ತಿನ ಆಪಾದನೆ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ರುಜುವಾತಾಗಿಲ್ಲ. ಸಂಸತ್ತಿನ ಜಾಲತಾಣದ ತಮ್ಮ ಪಾಸ್‌ವರ್ಡ್‌ಗಳನ್ನು ಸಂಸದರು ತಮ್ಮ ಆಪ್ತ ಸಹಾಯಕರೊಂದಿಗೆ ಹಂಚಿಕೊಳ್ಳುತ್ತ ಬಂದಿರುವುದು ಸಾಧಾರಣ ವಿಷಯ. ಇದೊಂದು ಒಪ್ಪಿತ ಪ್ರಕ್ರಿಯೆ. ಈ ಕುರಿತು ಸಂಸತ್ತು ಯಾವುದೇ ನಿಯಮ ರೂಪಿಸಿಲ್ಲ. ಪ್ರಶ್ನೆಗಳನ್ನು ಜಾಲತಾಣಕ್ಕೆ ಅಪ್‌ಲೋಡ್ ಮಾಡುವುದು ಅವರ ಆಪ್ತ ಸಹಾಯಕರೇ ವಿನಾ ಸಂಸದರಲ್ಲ. ಕೇವಲ ಪಾಸ್‌ವರ್ಡ್ ಹಂಚಿಕೊಂಡ ವಿಚಾರಕ್ಕೆ ಸದಸ್ಯತ್ವದಿಂದ ಉಚ್ಚಾಟಿಸುವುದು ಅಪ್ಪಟ ಸೇಡಿನ ನಡೆ.
ದೀರ್ಘಕಾಲ ಲೋಕಸಭೆಯ ಸೆಕ್ರೆಟರಿ ಜನರಲ್ ಆಗಿದ್ದ ಪಿ.ಡಿ.ಟಿ ಆಚಾರಿ ಅವರ ಪ್ರಕಾರ ಸದನದಲ್ಲಿ ಏನನ್ನು ಬೇಕಾದರೂ ಹೇಳುವ ಸ್ವಾತಂತ್ರ್ಯವನ್ನು ಸಂವಿಧಾನದ 105ನೆಯ ಅನುಚ್ಛೇದ ನೀಡುತ್ತದೆ. ಪ್ರಶ್ನೆಗಳನ್ನು ಕೇಳಲು ಯಾವ ಮೂಲವನ್ನು ಬೇಕಾದರೂ ಬಳಸುವ ಅವಕಾಶವನ್ನೂ ಇದೇ ಅನುಚ್ಛೇದ ಒದಗಿಸುತ್ತದೆ.
ಆಳುವ ಪಕ್ಷಕ್ಕೆ ಅಪ್ರಿಯವಾದ ಸತ್ಯವನ್ನು ಕಾಡತೂಸು ಸಿಡಿಸಿದಂತೆ ಹೇಳುತ್ತಿದ್ದ ಸಂಸದೆಯೊಬ್ಬಳನ್ನು ಸದನದಿಂದ ಹೊರದಬ್ಬಲು ತೋರಲಾದ ಅತೀವ ತರಾತುರಿಯಲ್ಲೇ ದುರುದ್ದೇಶ ಅಡಗಿದೆ.
‘ವಿನಾಶ ಕವಿದು ಮೈಮೇಲೇರಿದಾಗ ಮೊದಲು ಕಣ್ಮರೆಯಾಗುವುದು ವಿವೇಕ’ ಎಂಬುದು ಮಹುವಾ ಅವರ ವಿದಾಯದ ಸಿಡಿನುಡಿ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…