ಎಚ್.ಎಂ.ನಟರಾಜು ಹಾನವಾಡಿ
ಕಾವ್ಯ-ಕಲೆಯ ಅನುಸಂಧಾನದ ದಾಖಲೆಯನ್ನು ಸಂಪಾದಿಸಿ ಗ್ರಂಥರೂಪಕ್ಕಿಳಿದ ಡಾ.ಕೆ.ಸಿ.ಶಿವಾರೆಡ್ಡಿ
ಸಾಹಿತ್ಯ ಮತ್ತು ಚಿತ್ರಕಲೆಯ ನಡುವಿನ ಸಂಬಂಧ ಬುದ್ಧಿ ಭಾವಗಳ ಸಮ್ಮಿಲನ. ಭಾಷೆಯ ಮೂಲಕ ಕಾವ್ಯ ಧ್ವನಿ ರಮ್ಯತೆಯನ್ನು ಪಡೆದರೆ ರೇಖೆ ಮತ್ತು ಬಣ್ಣಗಳ ಮೂಲಕ ಚಿತ್ರವು ಕಾವ್ಯವಾಗಿ ಹೊರಹೊಮ್ಮುತ್ತದೆ. ಈ ಎರಡರ ಉದ್ದೇಶವೂ ಕಲಾಸಂವಹನವೇ ಆಗಿದೆ. ಸಾಹಿತ್ಯ ಮತ್ತು ಚಿತ್ರಕಲೆಗಳು ಬೇರೆ ಬೇರೆಯಾದರೂ ಅವುಗಳ ಅನುಸಂಧಾನದಿಂದ ನಡೆಯುವ ಸೃಷ್ಟಿಕ್ರಿಯೆಯು ಕಲಾಕೌತುಕವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ರಾಷ್ಟ್ರಕವಿ ಕುವೆಂಪು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಆರ್.ಕೆ.ಲಕ್ಷ್ಮಣ್ ಅವರು ಸಾಕ್ಷಿಗಳಾಗಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ಸಿ.ಶಿವಾರೆಡ್ಡಿ ಅವರು ಸಂಗ್ರಹಿಸಿರುವ ರಾಷ್ಟ್ರಕವಿ ಕುವೆಂಪು ಅವರ ಕವಿತೆಗಳಿಗೆ ಆರ್.ಕೆ.ಲಕ್ಷ್ಮಣ್ ಅವರು ಬರೆದಿರುವ ರೇಖಾಚಿತ್ರಗಳ ಸಂಗ್ರಹ ‘ಲಕ್ಷ್ಮಣ ರೇಖೆ’ ಕೃತಿ ಅದನ್ನು ಸಾಬೀತುಪಡಿಸಿದೆ.
ಕುವೆಂಪು ಅವರ ಕಾವ್ಯ ಹೆಚ್ಚಾಗಿ ಮಲೆನಾಡಿನ ಸೌಂದರ್ಯ, ಪಶ್ಚಿಮ ಘಟ್ಟಗಳ ಪ್ರಕೃತಿ ವೈಭವ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಲಕ್ಷ್ಮಣ್ ಅವರು ಕೇವಲ ವ್ಯಂಗ್ಯಚಿತ್ರಕಾರರಷ್ಟೇ ಅಲ್ಲದೆ, ಗಂಭೀರ ರೇಖಾ ಚಿತ್ರಗಳನ್ನು ಬಿಡಿಸುವುದರಲ್ಲೂ ಸಿದ್ಧಹಸ್ತರಾಗಿದ್ದರು ಎಂಬುದಕ್ಕೆ ಕುವೆಂಪು ಅವರ ಕಾವ್ಯ ಕೃತಿಗಳಿಗೆ ಅವರು ಬಿಡಿಸಿರುವ ರೇಖಾಚಿತ್ರಗಳು ಸಾಕ್ಷಿ ನುಡಿಯುತ್ತವೆ.
ಕುವೆಂಪು ಅವರ ಕವಿತೆಗಳಿಗೆ ಲಕ್ಷ್ಮಣ್ ಅವರು ಬಿಡಿಸಿದ ಚಿತ್ರಗಳು ಕವಿತೆಯ ಆಶಯವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಕೇವಲ ಕೆಲವು ಕಪ್ಪು ಬಿಳುಪು ರೇಖೆಗಳನ್ನು ಬಳಸಿ, ಮಲೆನಾಡಿನ ಮಂಜು, ಹಕ್ಕಿಗಳ ಹಾರಾಟ, ಕಾಡಿನ ನಿಗೂಢತೆ ಹಾಗೂ ಮನುಷ್ಯನ ಅಂತರಂಗದ ಭಾವನೆಗಳನ್ನು ಲಕ್ಷ್ಮಣ್ ಸಶಕ್ತವಾಗಿ ಮೂಡಿಸಿದ್ದಾರೆ.
ಮೈಸೂರಿನ ಪ್ರಕಾಶನ ಸಂಸ್ಥೆ ‘ಕಾವ್ಯಾಲಯ’ದ ಮೂಲಕ ಪ್ರಕಟಗೊಂಡ ಕುವೆಂಪು ಅವರ ಕಾವ್ಯ ಕೃತಿಗಳು ಆ ಸಂಸ್ಥೆಯ ರೂವಾರಿಯಾದ ಕೂಡಲಿ ಚಿದಂಬರಂ ಅವರ ಕಲಾ ಚಿಂತನೆಯ ನೆಲೆಯಿಂದ ಲಕ್ಷ್ಮಣ್ ಅವರ ಕುಂಚದ ಅಭಿವ್ಯಕ್ತಿಗೆ ಒಳಗಾಗಿ ಒಡಮೂಡಿದ ಪರಿ ಕಲಾಲೋಕದ ಅನನ್ಯ ಸಂಗತಿ.
ಲಕ್ಷ್ಮಣ್ ಅವರು ಮೈಸೂರಿನಲ್ಲಿ ಓದುತ್ತಿದ್ದ ದಿನಗಳಲ್ಲಿ, ಕುವೆಂಪು ಅವರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಲಕ್ಷ್ಮಣ್ ಅವರ ಅಣ್ಣ, ಪ್ರಸಿದ್ಧ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರು ಕುವೆಂಪು ಅವರಿಗೆ ಆಪ್ತ ಸ್ನೇಹಿತರಾಗಿದ್ದರು. ಈ ಒಡನಾಟದ ದಿನಗಳಲ್ಲಿ, ಕುವೆಂಪು ಅವರ ಕವಿತೆಗಳ ಭಾವಕ್ಕೆ ತಕ್ಕಂತೆ ರೇಖಾಚಿತ್ರಗಳನ್ನು ರಚಿಸುವ ಜವಾಬ್ದಾರಿ ತರುಣ ಲಕ್ಷ್ಮಣ್ ಅವರ ಹೆಗಲೇರಿತು.
ಕುವೆಂಪು ಕವನ ಸಂಕಲನಗಳಾದ ‘ಕೊಳಲು’, ‘ಪಕ್ಷಿಕಾಶಿ’, ‘ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’, ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಸೇರಿದಂತೆ ಹಲವು ಕಾವ್ಯ ಸಂಕಲನಗಳ ಮುಖಪುಟ ಹಾಗೂ ಒಳಗಿನ ಪುಟಗಳನ್ನು ಅಲಂಕರಿಸಿದ ಲಕ್ಷ್ಮಣ್ ಅವರ ರೇಖಾಚಿತ್ರಗಳು, ಕೃತಿಯ ಸಾಹಿತ್ಯಿಕ ಮೌಲ್ಯಕ್ಕೆ ಅನುಸಾರವಾಗಿ ಮತ್ತಷ್ಟು ಪ್ರತಿಫಲನಗೊಂಡು ಅವು ಗಳನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾ ಯಿತು. ಅದರಲ್ಲೂ ಕಿಂದರಿ ಜೋಗಿ’ಯ ಚಿತ್ರಗಳು ಓದುಗರ ಮನಸ್ಸಿಗೆ ಮುದ ನೀಡಿವೆ. ಓದುಗನಿಗೆ ಕವಿತೆಯನ್ನು ಓದುವಾಗ ಸಿಗುವ ಆನಂದ, ಈ ಚಿತ್ರಗಳನ್ನು ನೋಡಿದಾಗ ಇಮ್ಮಡಿಯಾಗುತ್ತದೆ. ಇದು ಕಣ್ಣಿಗೆ ಮತ್ತು ಮನಸ್ಸಿಗೆ ಏಕಕಾಲದಲ್ಲಿ ಸಿಗುವ ರಸದೌತಣ.
ಕುವೆಂಪು ಅವರ ಕಾವ್ಯಗಳಿಗೆ ಲಕ್ಷ್ಮಣ್ ಬಿಡಿಸಿದ ರೇಖಾಚಿತ್ರಗಳು ಕೇವಲ ಒಂದು ಪುಸ್ತಕದ ಅಲಂಕಾರಿಕ ಚಿತ್ರಗಳಾಗಿ ಉಳಿಯದೆ, ಕಾವ್ಯ ಮತ್ತು ಕಲೆಯ ನಡುವಿನ ಅದ್ಭುತ ಸಾಮರಸ್ಯಕ್ಕೆ ಸಾಕ್ಷಿ ನುಡಿದಿವೆ. ಈ ಇಬ್ಬರೂ ಮಹನೀಯರ ಈ ಕಲಾ ಕೌತುಕದ ಜುಗಲ್ ಬಂದಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದಾಗಿದೆ. ಹೀಗೆ ಬಿಡಿಬಿಡಿಯಾಗಿ ಕುವೆಂಪು ಅವರ ಅನೇಕ ಕಾವ್ಯ ಕೃತಿಗಳಿಗೆ ಮುಖಪುಟ ರಚಿಸಿದ ಲಕ್ಷ್ಮಣ್ ಅವರ ರೇಖಾಚಿತ್ರಗಳನ್ನು ಕುವೆಂಪು ಕಾವ್ಯದೊಂದಿಗೆ ಒಂದೆಡೆಗೆ ಇಡಿಯಾಗಿ ಸಂಗ್ರಹಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ಸಿ.ಶಿವಾರೆಡ್ಡಿ ಅವರ ಶ್ರಮ ಅನುಕರಣೀಯ. ಶಿವಾರೆಡ್ಡಿ ಅವರು ವಿಶಿಷ್ಟ ಆಸಕ್ತಿಯುಳ್ಳ ಪುಸ್ತಕ ಸಂಗ್ರಹಕಾರರು. ಅವರ ಬಳಿ ಕುವೆಂಪು, ಬೇಂದ್ರೆಯಾಗಿ ಕನ್ನಡ ನಾಡಿನ ಕವಿಗಳ ಮೊದಲ ಮುದ್ರಣದ ಪುಸ್ತಕಗಳಿಂದ ಹಿಡಿದು ಒಟ್ಟು ಮುದ್ರಣದ ಕೃತಿಗಳು ಅವರ ಕಪಾಟಿನಲ್ಲಿ ಜೋಪಾನವಾಗಿ ಸಂಗ್ರಹಗೊಂಡಿವೆ.
ಕನ್ನಡ ಕಾವ್ಯವನ್ನು ಧ್ಯಾನಸ್ಥ ಸ್ಥಿತಿಯಿಂದ ಅವಲೋಕಿಸಬಲ್ಲ ಶಿವಾರೆಡ್ಡಿ ಅವರು, ಕುವೆಂಪು ಅವರ ಒಟ್ಟಾರೆ ಬರಹಗಳನ್ನು ೧೨ ಸಂಪುಟಗಳಲ್ಲಿಯೂ, ಪೂರ್ಣಚಂದ್ರ ತೇಜಸ್ವಿ ಅವರ ಒಟ್ಟಾರೆ ಬರಹಗಳನ್ನು ೧೪ ಸಂಪುಟಗಳಲ್ಲಿಯೂ ಸಂಗ್ರಹಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ದಕ್ಕಿಸಿರುವುದು ಮುಖ್ಯ ಸಂಗತಿ. ಅವರು ಈಗ ಕುವೆಂಪು ಮತ್ತು ಲಕ್ಷ್ಮಣ್ ಅವರ ಕಾವ್ಯ ಮತ್ತು ಕಲಾ ಕುಂಚದ ಸಂಯೋಗವನ್ನು ಒಂದೆಡೆಗೆ ತಂದು ‘ಲಕ್ಷ್ಮಣ ರೇಖೆ‘ ಕೃತಿಯ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದಾರೆ.
ನಾಡಿನ ಶ್ರೇಷ್ಠ ಕಲಾವಿದರಾದ ಎಂ.ಎಸ್.ಮೂರ್ತಿಯವರು ಕೃತಿಯ ಮುನ್ನುಡಿಯಲ್ಲಿ ‘ನೋಟದ ಸಂವಿಧಾನಶೀಲತೆಯನ್ನು ಪರಿಭಾವಿಸಿ ಜೀವನದ ಹಾದಿಯಲ್ಲಿ ಘನತೆಯಿಂದ ಪಯಣ ಮಾಡಿದ ಇಬ್ಬರು ಮಹನೀಯರ ಸಾಕ್ಷಿ ಪ್ರಜ್ಞೆಯ ದೃಶ್ಯಕಾವ್ಯ‘ ಎಂದಿದ್ದಾರೆ. ಇಂತಹ ದೃಶ್ಯಕಾವ್ಯವು ಎಂ.ಮುನಿಸ್ವಾಮಿ ಅಂಡ್ ಸನ್ಸ್ ಟ್ರಸ್ಟ್‌ನ ಎಂ.ಸಿ.ನರೇಂದ್ರ ಅವರ ಸಾಹಿತ್ಯ ಪ್ರೀತಿಯಿಂದ ‘ಲಕ್ಷ್ಮಣರೇಖೆ‘ ಕೃತಿಯಾಗಿ ಪ್ರಕಟಗೊಂಡಿದೆ. ಭಾರತೀಯ ವ್ಯಂಗ್ಯಚಿತ್ರಕಾರರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಗಳಾದ ವಿ.ಜಿ.ನರೇಂದ್ರ ಅವರು ಕೃತಿಯ ಆರಂಭದಲ್ಲಿ ನುಡಿದಿರುವ ‘ಈ ಪ್ರಕಟಣೆಯು ಕೌತುಕದ ಹಿನ್ನೆಲೆಯಲ್ಲಿ ಓದುಗರಿಗೆ ರಸದೌತಣವಾದರೆ, ಸಾಹಿತ್ಯಾಸಕ್ತರಿಗೆ ಹೇಳಿ ಮಾಡಿಸಿದ ಭೂರಿ ಭೋಜನ’ಎಂಬ ನುಡಿಯಂತೆ ಕನ್ನಡದ ಇಬ್ಬರೂ ದೈತ್ಯ ಪ್ರತಿಭೆಗಳು ಸಿದ್ಧಪಡಿಸಿದ ಈ ರಸದೌತಣದ ಭೂರಿ ಭೋಜನವನ್ನು ಶಿವಾರೆಡ್ಡಿ ಅವರು ಕನ್ನಡಿಗರ ಕೈಗಿತ್ತಿದ್ದಾರೆ. ಬನ್ನಿ ಎಲ್ಲರೂ ಆಸ್ವಾದಿಸೋಣ.
” ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಕುವೆಂಪು ಕಾವ್ಯಾಧ್ಯಯನ ಪೀಠ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕನ್ನಡ ಸಂಘ ಮಹಾರಾಜ ಕಾಲೇಜು ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ಸಿ.ಶಿವಾರೆಡ್ಡಿ ಅವರು ಸಂಗ್ರಹಿಸಿರುವ ರಾಷ್ಟ್ರಕವಿ ಕುವೆಂಪು ಅವರ ಕವಿತೆಗಳಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಆರ್.ಕೆ.ಲಕ್ಷ್ಮಣ್ ಅವರು ಬರೆದಿರುವ ರೇಖಾಚಿತ್ರಗಳ ಸಂಗ್ರಹ ‘ಲಕ್ಷ್ಮಣರೇಖೆ’ ಪುಸ್ತಕ ಬಿಡುಗಡೆ ಮತ್ತು ‘ಸಾಹಿತ್ಯ ಮತ್ತು ಕಲೆಯ ಅನುಸಂಧಾನ‘ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಇಂದು ಮೇ ೨೨ರ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ.”
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಆತ್ಮಹತ್ಯೆ ಹಾಟ್‌ಸ್ಪಾಟ್ ಆಗುತ್ತಿದ್ದು, ಸೇತುವೆ ಮೇಲಿಂದ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ…
ನವದೆಹಲಿ: ಆಫ್ರಿಕಾದ ಹಲವು ಭಾಗಗಳಲ್ಲಿ ಕೋವಿಡ್‌ಗಿಂತಲೂ ಡೆಡ್ಲಿಯಾದ ಎಬೋಲಾ ವೈರಸ್ ಹಾವಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ.…
ನವದೆಹಲಿ: ಕರ್ನಾಟಕ ನಾಲ್ಕು ಸೇರಿದಂತೆ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಈರಣ್ಣ ಕಡಾಡಿ,…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…
ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯಲ್ಲಿ ನಡೆದಿದೆ. ಚಾಮರಾಜನಗರ…
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಖಾಸಗಿ ಹೋಟೆಲ್‌ಗಳಲ್ಲಿ ಕಾಫಿ,ತಿಂಡಿ, ಹಣ್ಣಿನ ಪಾನೀಯ ದರ ದುಬಾರಿಯಾಗಿದ್ದು, ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಬರುವ…