ಅಂಕಣ

ಆಂದೋಲನ ವಿಶೇಷ | ವಿಪಕ್ಷ ಮುಕ್ತ ಭಾರತ ; ಬಿಜೆಪಿ ಕನಸು?

ಐಟಿ, ಇಡಿ ಬಳಸಿಕೊಂಡು ಬೆದರಿಸುವ ತಂತ್ರ.

ಬಿಜೆಪಿ ಸೇರ್ಪಡೆಯಾದ ನಂತರ ಎಲ್ಲ ಆರೋಪಿಗಳಿಂದ ಮುಕ್ತಿ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಪಕ್ಷಾಂತರ.

ಆಮ್ ಆದ್ಮಿ ಪಾರ್ಟಿಯ ಹತ್ತು ರಾಜ್ಯಸಭಾ ಸದಸ್ಯರ ಪೈಕಿ ಏಳು ಮಂದಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆ ಆಗಿದ್ದಾರೆ. ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದತ್ತು ಪುತ್ರನಂತಿದ್ದ ರಾಘವ್ ಛಡ್ಡಾ ಈ ಏಳು ಪಕ್ಷಾಂತರಿಗಳ ಗುಂಪಿನ ನೇತೃತ್ವ ವಹಿಸಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ‘ನನ್ನಂಥ ರಾಜಕೀಯ ಹಿನ್ನೆಲೆ ಇರದ ಯುವಕನೊಬ್ಬನನ್ನು ಕೈ ಹಿಡಿದು ರಾಜಕೀಯದಲ್ಲಿ ಬೆಳೆಸಿದ, ಕೇವಲ 27ನೇ ವಯಸ್ಸಿನಲ್ಲಿ ಪಕ್ಷದ ರಾಷ್ಟ್ರೀಯ ಖಜಾಂಚಿ ಸ್ಥಾನ ಕೊಟ್ಟು ನನ್ನ ಮೇಲೆ ಅಪಾರ ನಂಬಿಕೆ ಇರಿಸಿದ ಹಾಗೂ ಶಾಸಕ, ರಾಜ್ಯಸಭಾ ಸದಸ್ಯ ಹಾಗೂ ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದ ಕೇಜ್ರಿವಾಲ್ ನನಗೆ ತಂದೆಯ ಸಮಾನ’ ಎಂದು ರಾಘವ್ ಛಡ್ಡಾ ತೀರ ಇತ್ತೀಚಿನವರೆಗೆ ಹೇಳುತ್ತಿದ್ದರು. ಅಂಥ ರಾಘವ್ ಛಡ್ಡಾ ಈಗ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ತಿಣುಕಾಡುತ್ತಿದ್ದಾರೆ. ʼI Was Right Person in Wrong Party’ ಎಂಬ ಅವರ ಹೇಳಿಕೆ ಒಬ್ಬ ಅವಕಾಶವಾದಿಯ ಹೇಳಿಕೆಯಂತೆ ಭಾಸವಾಗುತ್ತಿದೆ. ಏಕೆಂದರೆ, ಆಮ್ ಆದ್ಮಿ ಪಾರ್ಟಿ ಬಿಡಲು ಛಡ್ಡಾ ಆಂಡ್ ಟೀಂ ನೀಡಿರುವ ಕಾರಣಗಳನ್ನು ಒಂದು ಕ್ಷಣ ಒಪ್ಪಬಹುದಾದರೂ ಬಿಜೆಪಿ ಸೇರ್ಪಡೆಗೆ ಅವರು ನೀಡುತ್ತಿರುವ ಕಾರಣಗಳನ್ನು ಜೀರ್ಣಿಸಿಕೊಳ್ಳಲು ಮಾತ್ರ ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಮತ್ತು ವಿವಿಧ ರಾಜಕೀಯ ಪಕ್ಷಗಳನ್ನು ಬಿಟ್ಟು ಭಾರತೀಯ ಜನತಾ ಪಾರ್ಟಿ ಸೇರ್ಪಡೆ ಆಗಿರುವ, ಸೇರ್ಪಡೆ ಆಗುತ್ತಿರುವ ಮತ್ತು ಮುಂದೆ ಸೇರ್ಪಡೆ ಆಗುವ ರಾಜಕಾರಣಿಗಳ ಪಟ್ಟಿ ಹನಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಅದೊಂದು ನಿರಂತರ ಪ್ರಕ್ರಿಯೆಯೇನೋ ಎಂಬಷ್ಟು ಸಹಜವಾಗಿದೆ ಮತ್ತು ನಿತ್ಯದ ಸುದ್ದಿಯಾಗಿದೆ.

ಛಡ್ಡಾ ಪ್ರಕರಣದ ವಿಶೇಷವೇನು?
ಆದರೆ, ರಾಘವ್ ಛಡ್ಡಾ ಮತ್ತು ಉಳಿದ ಆರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆ ಆಗಿರುವ ಸುದ್ದಿ ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಚರ್ಚೆಯಾಗುತ್ತಿದೆ. ಹಲವಾರು ಪ್ರಶ್ನೆಗಳನ್ನೂ ಅದು ಹುಟ್ಟಿಹಾಕಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯದ ಬಗ್ಗೆ ಚಿಂತೆ, ಕಾಳಜಿ, ಆತಂಕಕ್ಕೂ ಈ ಪಕ್ಷಾಂತರ ಕಾರಣವಾಗಿದೆ. ಈ ಪಕ್ಷಾಂತರಕ್ಕೂ ಮೊದಲು ನಡೆದಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲವೂ ಪೂರ್ವಯೋಜಿತವಾಗಿಯೇ ನಡೆದಿದೆ ಎಂದು ಯಾರಿಗಾದರೂ ಅರ್ಥವಾಗುತ್ತದೆ. ಭಾರತೀಯ ಜನತಾ ಪಾರ್ಟಿ ವರ್ಷದಿಂದಲೇ ಇಂಥದೊಂದು ಪಕ್ಷಾಂತರಕ್ಕೆ ವೇದಿಕೆಯನ್ನು ರೂಪಿಸುತ್ತಿತ್ತು ಎಂಬ ವಿವರಗಳು ಲಭ್ಯವಾಗುತ್ತಿವೆ. ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿಯ ಮೊದಲ ಸಾಲಿನ ಮುಖಂಡರೆಲ್ಲರೂ ಅಬಕಾರಿ ಹಗರಣದ ಅರೋಪ ಹೊತ್ತು ಜೈಲಿಗೆ ಸೇರಿದಾಗ ರಾಘವ್ ಛಡ್ಡಾ ಒಂದೇ ಒಂದು ಹೇಳಿಕೆಯನ್ನೂ ಕೊಡಲಿಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆಯ ನೆಪ ಮಾಡಿಕೊಂಡು ಲಂಡನ್‌ಗೆ ಹೋಗಿ ಹಲವು ತಿಂಗಳುಗಳ ಕಾಲ ಭಾರತಕ್ಕೆ ವಾಪಸ್ ಬರಲೇ ಇಲ್ಲ. ನಿಧಾನಕ್ಕೆ ಆಮ್ ಆದ್ಮಿ ಪಾರ್ಟಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದರು. ಹಲವಾರು ವಿಷಯಗಳಲ್ಲಿ ಆಮ್ ಆದ್ಮಿ ಪಾರ್ಟಿ ಸಂಸತ್ ಕಲಾಪ ಬಹಿಷ್ಕರಿಸಿದಾಗ ರಾಘವ್ ಛಡ್ಡಾ ಪಕ್ಷದ ನಿರ್ದೇಶನ ಧಿಕ್ಕರಿಸಿ ಸಂಸತ್ ಕಲಾಪದಲ್ಲಿ ಭಾಗವಹಿಸುತ್ತಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪಕ್ಷದ ಎಲ್ಲ ಸದಸ್ಯರೂ ಸಹಿ ಮಾಡಿದರೂ ರಾಘವ್ ಸಹಿ ಮಾಡಿರಲಿಲ್ಲ. ಬಿಜೆಪಿ ನಿರ್ದೇಶನದಂತೆ ರಾಘವ್ ಛಡ್ಡಾ ಈ ರೀತಿ ನಿಲುವು ತಳೆದಿದ್ದರು, ಪಕ್ಷದಲ್ಲಿದ್ದುಕೊಂಡೇ ಉಳಿದ ರಾಜ್ಯಸಭಾ ಸದಸ್ಯರನ್ನೂ ಪಕ್ಷಾಂತರಕ್ಕೆ
ಅಣಿಗೊಳಿಸುತ್ತಿದ್ದರು ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಪಕ್ಷಾಂತರಕ್ಕೆ ತತ್ವ, ಸಿದ್ಧಾಂತ, ನೀತಿ, ಕಾರ್ಯಕ್ರಮಗಳು ಕಾರಣವೂ ಅಲ್ಲ. ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ಸ್ವಾತಿ ಮಾಲಿವಾಲ್, ವಿಕ್ರಂಜೀತ್ ಸಿಂಗ್ ಸಾಹ್ನಿ ಮತ್ತು ರಾಜಿಂದರ್ ಗುಪ್ತಾ ಒಬ್ಬೊಬ್ಬರನ್ನೂ ಒಂದೊಂದು ವಿಷಯದಲ್ಲಿ ಕಟ್ಟಿ ಹಾಕಲಾಗಿತ್ತು. ಕೆಲವರ ದೌರ್ಬಲ್ಯ ಬಳಸಿಕೊಳ್ಳುವುದು, ಕೆಲವರನ್ನು ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಆದಾಯ ತೆರಿಗೆ ಇಲಾಖೆಯಂಥ ಕೇಂದ್ರ ಸರ್ಕಾರದ ಏಜೆನ್ಸಿಗಳನ್ನು ಬಳಸಿಕೊಂಡು ಬೆದರಿಸುವುದು, ಇನ್ನೂ ಕೆಲವರಿಗೆ ಅಧಿಕಾರ, ಮತ್ತಿತರ ಸೌಲಭ್ಯಗಳ ಆಮಿಷ ಒಡ್ಡುವುದು. ಹೀಗೆ ಅತ್ಯಂತ ಯೋಜಿತವಾಗಿ ಈ ಪಕ್ಷಾಂತರಕ್ಕೆ ವೇದಿಕೆ ಸಿದ್ಧಗೊಳಿಸಲಾಗಿತ್ತು ಎಂಬ ಆರೋಪಗಳಿವೆ.

ಬಿಜೆಪಿ ವಾಷಿಂಗ್ ಮಷಿನ್
ಪಕ್ಷಾಂತರಿಗಳ ಈ ಏಕಮುಖ ಸಂಚಾರಕ್ಕೆ ಕಾರಣಗಳೇನಿರಬಹುದು ಎಂದು ಯೋಚಿಸಿದರೆ ತಿಳಿಯುವುದು ಎರಡೇ ಎರಡು ವಿಚಾರಗಳು. ಮೊದಲನೆಯದು ‘ಅಧಿಕಾರದಾಸೆ’, ಎರಡನೆಯದು ‘ಏಜೆನ್ಸಿಗಳ ಭಯ’. ಭಾರತೀಯ ಜನತಾ ಪಾರ್ಟಿಯಲ್ಲಿರುವ ಅಥವಾ ಆ ಪಕ್ಷವನ್ನು ಸೇರ್ಪಡೆಯಾಗಲು ಸಿದ್ಧವಿರುವ ರಾಜಕಾರಣಿಗಳು ಯಾವುದೇ ಭ್ರಷ್ಟಾಚಾರ, ಹಗರಣಗಳ ಆರೋಪಗಳು ಅಥವಾ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಭಯಪಡುವ ಅಗತ್ಯವಿಲ್ಲ ಎಂಬುದು ಈಗ ಅಲಿಖಿತ ನಿಯಮ. ಪೊಲೀಸರು, ತನಿಖಾ ಏಜೆನ್ಸಿಗಳು ಬಿಜೆಪಿ ರಾಜಕಾರಣಿಗಳ ಹತ್ತಿರವೂ ಸುಳಿಯುವುದಿಲ್ಲ ಎಂಬುದು ಗೋಡೆ ಬರಹದಷ್ಟೇ ಸ್ಪಷ್ಟ. ವಿರೋಧ ಪಕ್ಷಗಳ ರಾಜಕಾರಣಿಗಳು ಮಾತ್ರ ಕೇಂದ್ರ ಸರ್ಕಾರದ ಏಜೆನ್ಸಿಗಳಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಎಷ್ಟೋ ಪ್ರಕರಣಗಳಲ್ಲಿ ಮಾಡದ ತಪ್ಪಿಗೂ ಇಡಿ, ಸಿಬಿಐ ಅಧಿಕಾರಿಗಳು ವಿರೋಧ ಪಕ್ಷಗಳ ನಾಯಕರ ಬಾಗಿಲು ತಟ್ಟುತ್ತಾರೆ, ಕೇಸು ದಾಖಲಿಸುತ್ತಾರೆ, ದಿನಗಟ್ಟಲೇ ವಿಚಾರಣೆಗೆ ಒಳಪಡಿಸುತ್ತಾರೆ, ಜೈಲಿಗೂ ಕಳಿಸುತ್ತಾರೆ, ಎಲ್ಲ ರೀತಿಯ ಕಿರುಕುಳವನ್ನೂ ನೀಡುತ್ತಾರೆ. ಈ ಆರೋಪಗಳು ಸಾಬೀತಾಗದೇ ಇದ್ದರೂ ವಿರೋಧ ಪಕ್ಷಗಳ ನಾಯಕರ ವ್ಯಕ್ತಿತ್ವಕ್ಕೆ ಕಳಂಕ ಅಂಟಿಸುವಲ್ಲಿ ಮಾತ್ರ ಈ ಏಜೆನ್ಸಿಗಳು ಯಶಸ್ವಿಯಾಗುತ್ತವೆ. ಆದರೆ, ಅದೇ ಕಳಂಕಿತ ನಾಯಕರು ಬಿಜೆಪಿ ಸೇರ್ಪಡೆಯಾದರೆ ಮರು ಕ್ಷಣವೇ ಅವರ ವಿರುದ್ಧದ ಎಲ್ಲ ವಿಚಾರಣೆಗಳು, ತನಿಖೆಗಳು ತೆವಳಲು ಆರಂಭಿಸುತ್ತವೆ. ಕೆಲವು ತಿಂಗಳುಗಳಲ್ಲಿ ಆ ಎಲ್ಲ ಆರೋಪಗಳಿಂದ ಅವರು ಮುಕ್ತವಾಗಿ ಕ್ಲೀನ್ ಚಿಟ್ ಸಹ ಪಡೆಯುತ್ತಾರೆ. ಅದಕ್ಕೇ ಬಿಜೆಪಿಯನ್ನು ‘ವಾಷಿಂಗ್ ಮೆಷಿನ್’ ಎಂದೂ ಈ ‘ವಾಷಿಂಗ್ ಮೆಷಿನ್’ ಮೂಲಕ ಹೊರ ಬಂದರೆ ಎಲ್ಲ ಆರೋಪಗಳಿಂದ ಮುಕ್ತವಾಗನಹುದು ಎಂದೂ ವ್ಯಂಗ್ಯವಾಗಿ ಹೇಳುತ್ತಾರೆ. ಈ ರೀತಿ ಬಿಜೆಪಿಯ ‘ವಾಷಿಂಗ್ ಮೆಷಿನ್’ ಮೂಲಕ ತಮ್ಮ ಕಳಂಕವನ್ನು ತೊಳೆದುಕೊಂಡ ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ಮಹಾರಾಷ್ಟ್ರದ ದಿ.ಅಜಿತ್ ಪವಾರ್, ಅಸ್ಸಾಂ ಮುಖ್ಯಮಂತ್ರಿ ಹಿಮಂತಬಿಸ್ವ ಶರ್ಮಾ, ಪಶ್ಚಿಮ ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ, ಏಕನಾಥ್ ಶಿಂಧೆ, ಛಗನ್ ಭುಜಬಲ್, ಅಶೋಕ್ ಚವ್ಹಾಣ್, ಮುಕುಲ್ ರಾಯ್, ಜ್ಯೋತಿರಾದಿತ್ಯ ಸಿಂಧ್ಯ, ಮಿಲಿಂದ್ ದೇವೊರಾ ಕೆಲವು ಪ್ರಮುಖ ಹೆಸರುಗಳು ಮಾತ್ರ. ಈ ಎಲ್ಲ ನಾಯಕರ ವಿರುದ್ಧ ಮೊದಲು ಬಿಜೆಪಿಯೇ ಗಂಭೀರ ಆರೋಪಗಳನ್ನು ಮಾಡುತ್ತಿತ್ತು. ಈ ರೀತಿ ಏಜೆನ್ಸಿಗಳ ದುರುಪಯೋಗ ಮಾಡಿಕೊಂಡು ‘ವಿರೋಧ ಪಕ್ಷ ಮುಕ್ತ’ ರಾಜಕೀಯ ಮಾಡುವ ಬಿಜೆಪಿಯ ಕನಸು ನನಸಾಗುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

5 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

5 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

5 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

5 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

5 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

5 hours ago