• ಹಾ.ರಾ.ಬಾಪು ಸತ್ಯನಾರಾಯಣ
ನಾನು ನಿವೃತ್ತಿಯಾಗಿ 24 ವರ್ಷಗಳು ಕಳೆದದ್ದು ಗೊತ್ತಾಗಲೇ ಇಲ್ಲ. ಈಗ ನನ್ನ ವಯಸ್ಸು 83. ಓದುವುದು ಮತ್ತು ವಿವಿಧ ಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಬರೆಯುವುದು ನನ್ನ ಹವ್ಯಾಸವಾಗಿತ್ತು. ಒಂದು ವಿಚಾರ ಹೇಳಬಯಸುತ್ತೇನೆ. ನನ್ನ ತಂದೆ ಅಠಾಣಾ ರಾಮಣ್ಣನವರು 105 ವರ್ಷಗಳ ತುಂಬು ಜೀವನ ನಡೆಸಿದವರು. ಅವರ ದೀರ್ಘ ಆಯಸ್ಸಿನ ಗುಟ್ಟೆಂದರೆ ಅವರು ಜೀವನದಲ್ಲಿ ಪಾಲಿಸಿದ ಮೂರು ಮಂತ್ರಗಳು. ಆ ಮೂರು ಮಂತ್ರಗಳೇ ಅದಮ್ಯ ಜೀವನೋತ್ಸಾಹ, ವರ್ಣಮಯ ದೃಷ್ಟಿಕೋನ ಮತ್ತು ಇಚ್ಛಾಶಕ್ತಿ. ಅವರಿಂದ ನನಗೆ ದಿನಕ್ಕೆ 5 ರಿಂದ 10 ಕಿ.ಮೀ. ನಡೆಯುವುದು, ಎಲ್ಲರೊಂದಿಗೆ ಬೆರೆತು ಮಾತಾಡುವುದು ಅವರಂತೆ ಅಚ್ಚಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪತ್ರಿಕೆಗಳಿಗೆ ಬರೆಯುವುದೆಲ್ಲ ಬಳುವಳಿಯಾಗಿ ಬಂದಿದ್ದು ಎಂದರೆ ತಪ್ಪಾಗಲಾರದು
ನಾನು 1954ರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ, ನಾನಾ ಸಂಸ್ಥೆಗಳಲ್ಲಿ ಕೆಲಸ ಮಾಡಿ ಕೊನೆಗೆ ಭಾರತ ಸರ್ಕಾರದ ರಸ್ತೆ ಮತ್ತು ಸೇತುವೆ ವಿಭಾಗದ ಮುಖ್ಯ ಇಂಜಿನಿಯರ್ ಆಗಿ 1991ರಲ್ಲಿ ನಿವೃತ್ತಿ ಪಡೆದು ನೆಚ್ಚಿನ ಮೈಸೂರಿಗೆ ಬಂದು ನೆಲೆಸಿದೆ. ಆಗ ನನ್ನ ವಯಸ್ಸು 60ರ ಆಸುಪಾಸಿನಲ್ಲಿತ್ತು.
ನಾನು ಬರೆದ ರಸ್ತೆ ಮತ್ತು ಸೇತುವೆಗಳ ಬರವಣಿಗೆ, ಸರ್ ಎಂ.ವಿಶ್ವೇಶ್ವರಯ್ಯರ ಬಗ್ಗೆ, ನಾನು ಪತ್ರಿಕೆಗಳಿಗೆ ಬರೆದ 250 ಆಯ್ದ ಸಂಗ್ರಹ (ನನ್ನಲ್ಲಿ ಸುಮಾರು 4000 ಪತ್ರಗಳ ಸಂಗ್ರಹವಿದೆ), ಮೈಸೂರು ಅಜೆಂಡಾ ಟಾಸ್ಕ್ ಫೋರ್ ವರದಿ, ಅಮೆರಿಕಾದ ಬ್ಲಾಗ್‌ನಲ್ಲಿ ಅಚ್ಚಾದ ನನ್ನ ಬರವಣಿಗೆಗಳು, ನನ್ನ ಗುರು ಮಾತಾ ಅಮೃತಾನಂದರವರ ಬಗ್ಗೆ, ನಮ್ಮ ಮನೆಯ ಸದಸ್ಯರ ಜೀವನದ ಅಚ್ಚರಿಯ ಘಟನೆಗಳು, ನನ್ನ ತಾಂತ್ರಿಕ ಬರವಣಿಗೆಗಳ ಸಂಗ್ರಹ, ಕನ್ನಡದಿಂದ ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದು, ಪತ್ರಿಕೆಯಲ್ಲಿ ಅಚ್ಚಾದ ಸಂಭಾವಿತರ ಮೃತ್ಯು ಲೇಖನಗಳು, ಸಮಾಜದ ಗಣ್ಯ ವ್ಯಕ್ತಿಗಳ ಶ್ಲಾಘನೆಯ ಬರವಣಿಗೆಗಳು, ಸುಧಾಕರ್ ಚತುರ್ವೇದಿಯವರ ಪುಸ್ತಕದಿಂದ ಆಯ್ದ ವಿಷಯಗಳ ಆಂಗ್ಲ ಭಾಷಾಂತರ, Freedom First Magazine ರಾಜಕೀಯ ವಿಷಯದ ಬಗ್ಗೆ ಬರೆದ ನನ್ನ 47 (Published in Mumbai), ಬೇರೆ ಬೇರೆ ವಿಷಯಗಳ ಬಗ್ಗೆ
ಬರೆದ ಸಂಗ್ರಹ. ಈ ಮೇಲೆ ಹೇಳಿದ ಸಂಗ್ರಹಗಳನ್ನು ನನ್ನ ಆಪ್ತರ ಜೊತೆ ಹಂಚಿಕೊಂಡಿದ್ದೇನೆ. ಇದ್ಯಾವುದೂ ಪ್ರಕಟವಾಗಿಲ್ಲ. ಇದಲ್ಲದೆ ಬೇರೆ ಬೇರೆ ವಿಷಯಗಳ ಬಗ್ಗೆ ಬರೆದಿದ್ದೇನೆ. ಅದು ಪುಸ್ತಕ ರೂಪದಲ್ಲಿ ಅಚ್ಚಾಗಿಲ್ಲ.
ಇನ್ನು ನನ್ನ ದಿನಚರಿಯ ವಿಚಾರವಾಗಿ ಹೇಳಬೇಕೆಂದರೆ, ಬೆಳಿಗ್ಗೆ ಸಾಮಾನ್ಯವಾಗಿ 4:30ಕ್ಕೆ ಎದ್ದು ವಜ್ರಾಸನದಲ್ಲಿ ಕುಳಿತು 40 ನಿಮಿಷ ನನ್ನದೇ ಆದ ರೀತಿ ಧ್ಯಾನ ಇತ್ಯಾದಿ ಮಾಡುತ್ತೇನೆ. ಬೆಳಿಗ್ಗೆದ್ದರೆ ಮೊದಲು ಕಾಫಿ ಫಿಲ್ಟರ್‌ನಲ್ಲಿ ಹಾಕುವ ಅಭ್ಯಾಸ. ಧ್ಯಾನ ಆದ ಮೇಲೆ ನನ್ನ ಹೆಂಡತಿಯ ಜೊತೆ ಕಾಫಿ ಕುಡಿದು 45 ನಿಮಿಷಗಳ ಕಾಲ ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳನ್ನು ತಪ್ಪದೇ ನಾವಿಬ್ಬರೂ ಕೇಳುತ್ತೇವೆ. ಆ ಮೇಲೆ ನಮ್ಮ ತಾರಸಿಗೆ ಹೋಗಿ ಅಳಿಲು ಮತ್ತು ಹಕ್ಕಿಗಳಿಗೆ ಬ್ರೆಡ್ ಚೂರನ್ನು ಕೊಡುವ ವಾಡಿಕೆ. ಆ ಮೇಲೆ ವಾಯುವಿಹಾರಕ್ಕೆ ಮಾನಸಗಂಗೋತ್ರಿಗೆ ಹೋಗುತ್ತೇನೆ. ದಾರಿಯಲ್ಲಿ ನನ್ನ ಕೆಲವು ಸ್ನೇಹಿತರು ಪ್ರತಿದಿನ ಭೇಟಿ ಆಗುತ್ತಾರೆ. ಶೇಖ್ ಅಲಿಯವರು ನಿಧನ ಆಗುವುದಕ್ಕೆ ಮುಂಚೆ ನನ್ನ ಮನೆಗೆ 6:30ಕ್ಕೆ ಬರುತ್ತಿದ್ದರು. ಅವರ ಕೈ ಹಿಡಿದುಕೊಂಡು ಹೋಗುತ್ತಿದ್ದೆ. ಹೀಗೆ ಬಹಳ ವರ್ಷಗಳೇ ಕಳೆದವು. ಅಲ್ಲಿಗೆ ನಮ್ಮ ಇನ್ನೊಬ್ಬ ಸ್ನೇಹಿತರು ಡಿ.ವಿ.ಗೋಪಿನಾಥ್ ಬರುತ್ತಿದ್ದರು. ನಾವು ಮೂವರೂ ಸೇರಿ ಅಧ್ಯಾತ್ಮದಿಂದ ಸಮಾಜದ ಘಟನೆಗಳು, ರಾಜಕೀಯ ಎಲ್ಲವನ್ನೂ ಚರ್ಚಿಸುತ್ತಿದ್ದೆವು. ಜೊತೆಯಲ್ಲಿ ಹಾಡು, ಶ್ಯಾಯರಿ ಇತ್ಯಾದಿ ನಡೆಯುತ್ತಿತ್ತು. ಈ ಮಧ್ಯೆ ಬಂಧುಗಳು ಸ್ನೇಹಿತರು ಬರುತ್ತಲೇ ಇರುತ್ತಾರೆ. ಇತ್ತೀಚಿನವರೆಗೂ ಬೆಂಗಳೂರಿಗೆ ಮದುವೆ, ಮುಂಜಿ ಮತ್ತು ಇತರ ಸಮಾರಂಭಗಳಿಗೆ ಬೆಳಗಿನ ಟ್ರೈನ್ ನಲ್ಲಿ ಹೊರಟು ಸಾಯಂಕಾಲ ವಾಪಸ್ಸು ಬರುತ್ತಿದ್ದೆವು. ಈಚೆಗೆ ಹೋಗುತ್ತಿಲ್ಲ.
ಇನ್ನು ಆರೋಗ್ಯದ ವಿಚಾರ ಹೇಳಬೇಕೆಂದರೆ, ನನಗೆ 43 ವರ್ಷಗಳಿಂದ ಡಯಾಬಿಟೀಸ್ ಇದೆ. ಬರೀ ಮಾತ್ರೆಯಲ್ಲಿ ಅದನ್ನು ತಡೆಗಟ್ಟಿದ್ದೇನೆ. ಈ ಮಧ್ಯೆ 2002ರಲ್ಲಿ ನನಗೆ ತೀವ್ರ ಹೃದಯಾಘಾತವಾಯಿತು. ಅದಲ್ಲದೆ ನನ್ನ ಎಡಭಾಗದಲ್ಲಿ ಲಕ್ವಾ ಹೊಡೆಯಿತು. 2006ರಲ್ಲಿ ನನಗೆ ಬೈಪಾಸ್ ಶಸ್ತ್ರಚಿಕಿತ್ಸೆ ಆಯಿತು. ಎಲ್ಲದರಿಂದಲೂ ಚೇತರಿಸಿಕೊಂಡಿದ್ದೇನೆ.
ನನಗೆ ಸಂಗೀತ ಅಂದರೆ ಬಹಳ ಆಸೆ. ಮೊದಲಿನಿಂದಲೂ ನನಗೆ ಇಂಗ್ಲಿಷ್ ಗೀತೆಗಳನ್ನು ಹಾಡುವ ಹವ್ಯಾಸ. ಅದರ ಜೊತೆಗೆ ಸುಗಮ ಸಂಗೀತ, ಚಿತ್ರಗೀತೆಗಳೂ ನನಗೆ ಮುದ ತರುತ್ತೆ. ಇದಲ್ಲದೆ ಕ್ರಿಕೆಟ್ ಅಂದರೆ ನನಗೆ ಬಹಳ ಪ್ರೀತಿ, ಸಾಮಾನ್ಯವಾಗಿ ಎಲ್ಲ ಸ್ಪೋರ್ಟ್ಸ್ ಅನ್ನು ನೋಡುತ್ತಿರುತ್ತೇನೆ. ಅಂತೂ ಜೀವನ ಸುಗಮವಾಗಿ ಸಾಗುತ್ತಿದೆ.
(what_option@yahoo.co. in)
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ನಿವಾಸವನ್ನು ಸ್ಮಾರಕ ಮತ್ತು ಮ್ಯೂಸಿಯಂ ಮಾಡಲು ಸರ್ಕಾರ…