ಅಂಕಣ

ಭಾರತ ಉಳಿಯಲು ಹಿಂದುತ್ವದ ಬಿಜೆಪಿ ಸೋಲಲೇಬೇಕು…

• ದೇವನೂರ ಮಹಾದೇವ

ಕರ್ನಾಟಕದಲ್ಲಿ- ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ ಯುವ ಜನ, ಮಹಿಳಾ ಸಂಘಟನೆಗಳು ಒಂದು ಸಮನ್ವಯ ಸಮಿತಿ ರೂಪಿಸಿ ಕೊಂಡು- ‘ಸಂಯುಕ್ತ ಹೋರಾಟ- ಕರ್ನಾಟಕ’ ಜನ್ಮ ತಾಳಿದ್ದು ಇದೆಯಲ್ಲಾ, ಇದು ಭಾರತದ ಇತರ ರಾಜ್ಯಗಳಿಗೂ ಮಾದರಿ ಆಗಬಹುದಾದ ಒಂದು ಬೆಳವಣಿಗೆ.

ಹೀಗೆಯೇ, ನೊಂದು ಬೆಂದು ದಿನನಿತ್ಯ ಬೇಯುತ್ತಿರುವ ರೈತ, ರೈತ ಕಾರ್ಮಿಕ ಮತ್ತು ಕಾರ್ಮಿಕರ ಸಂಕಷ್ಟಕ್ಕೆ ರಾಷ್ಟ್ರ ಮಟ್ಟದಲ್ಲಿ ದನಿಯಾದ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಡೆಸಿದ ವರ್ಷಾನುಗಟ್ಟಲೆಯ ಧೀರೋದಾತ್ತ ಹೋರಾಟವು ಈಗಾಗಲೇ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಈ ಹೋರಾಟದ ಕಾವನ್ನು ಎದುರಿಸಲಾಗದ ಕೇಂದ್ರ ಸರ್ಕಾರವು, ಅನಿವಾರ್ಯವಾಗಿ ಆ ಹೋರಾಟದ ಬೇಡಿಕೆಗಳನ್ನು ಈಡೇರಿಸುವುದಾಗಿ ಮಾತು ಕೊಟ್ಟಿತು. ಆದರೆ ಮಾತು ತಪ್ಪಿತು. ಕೇಂದ್ರ ಸರ್ಕಾರದ ಈ ದ್ರೋಹದ ವಿರುದ್ದ ಇಂದು ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ದೇಶಾದ್ಯಂತ 72 ಗಂಟೆಗಳ ಮಹಾಧರಣಿಗೆ ಕರೆ ನೀಡಿದೆ. ಈ ಕರೆಗೆ ನಮ್ಮ ರಾಜ್ಯದ ‘ಸಂಯುಕ್ತ ಹೋರಾಟ- ಕರ್ನಾಟಕ’ವು ಜೊತೆಗೂಡುತ್ತಿದೆ. ಹೀಗೆ ಹೋರಾಟದ ಎಲ್ಲಾ ಸಂಘಟನೆಗಳೂ ತಾವು ವಿಶಾಲವಾಗುತ್ತಾ ಜೊತೆ ಜೊತೆಗೆ ಹೆಜ್ಜೆಗಳನ್ನಿಡುವುದೇ ಭಾರತದ ಉಳಿವಿಗೆ ಇರುವ ಏಕೈಕ ಮಾರ್ಗ ಅನ್ನಿಸುತ್ತಿದೆ.

ನಾನೀಗ ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನರ ಬವಣೆಗಳ ಬಗ್ಗೆ ಮಾತ ನಾಡಲು ಹೋಗುವುದಿಲ್ಲ. ಈಗ ನನ್ನ ಚಿಂತೆ ಏನೆಂದರೆ, ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವೇ, ಧರ್ಮ- ಧರ್ಮಗಳ ನಡುವೆ, ಬಡವ- ಬಲ್ಲಿದರ ನಡುವೆ, ಜಾತಿ- ಜಾತಿಗಳ ನಡುವೆ ಕಂದಕ ತೋಡುತ್ತಾ ಉಲ್ಬಣಗೊಳಿಸುತ್ತಿದೆ. ಹೌದು, ಇಂದು ಸಂಘ ಪರಿವಾರದ ಚಾತುರ್ವಣ್ರ ಹಿಂದುತ್ವವು, ಬಹುತ್ವ ಭಾರತದ ಮೇಲೆಯೇ ಯುದ್ಧ ಸಾರಿದಂತೆ ಕಾಣಿಸುತ್ತಿದೆ. ಚಾತುರ್ವರ್ಣ ಹಿಂದುತ್ವದ ದಾಂದಲೆಗೆ ಸಿಲುಕಿ, ವಿಶಾಲ ಹಿಂದೂ ಧರ್ಮ ಮತ್ತಿತರ ಧರ್ಮಗಳು, ಪಂಥಗಳು,ನಂಬಿಕೆಗಳು ತತ್ತರಿಸುತ್ತಿವೆ. ಆಳ್ವಿಕೆಯ ದಬ್ಬಾಳಿಕೆಗೆ ಸಿಲುಕಿ ನ್ಯಾಯಾಂಗವೂ ಸೇರಿದಂತೆ ಸ್ವಾಯತ್ತ ಸಂಸ್ಥೆಗಳೂ ಅರೆಜೀವವಾಗಿ ಒದ್ದಾಡುತ್ತಿವೆ.

ಈ ರೀತಿಯಾಗುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರವು 10% ಇರುವ ಮೇಲ್ವಾತಿ/ ಮೇಲ್ವರ್ಗದ ಹಿತ ರಕ್ಷಿಸುತ್ತ ಉಳಿದ 90% ಜನಸ್ತೋಮವನ್ನು ಉಸಿರೆತ್ತದಂತೆ ತುಳಿಯುತ್ತಿದೆ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಬಾಯಿಗೆ ಹಾಕುತ್ತಿದೆ. ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಾರ್ಪೊರೇಟ್ ಕುಳಗಳ ಬಾಯಿಗೆ ಹಾಕುತ್ತಿದೆ. ಈ ಆಳ್ವಿಕೆಯು- ಕೃಷಿ, ಕಾರ್ಮಿಕ, ಅರಣ್ಯ, ಶಿಕ್ಷಣ ಕಾಯ್ದೆ ಗಳನ್ನು ಜನವಿರೋಧಿಯಾಗಿ ತಿರುಚಿಬಿಟ್ಟಿದೆ. ಈ ಆಳ್ವಿಕೆಗೆ ಸಿಲುಕಿ, ನ್ಯಾಯಾಂಗವೂ ಸೇರಿದಂತೆ ಸ್ವಾಯತ್ತ ಸಂಸ್ಥೆಗಳು ಅರೆಜೀವವಾಗಿ ಒಡ್ಡಾಡುತ್ತಿವೆ.

ಇದೆಲ್ಲದರ ಪರಿಣಾಮವಾಗಿ, ಕೃಷಿಕರು ಇದ್ದಬದ್ಧ ಭೂಮಿಯನ್ನೂ ಕಳೆದುಕೊಂಡು ಹೊಟ್ಟೆಯ ಪಾಡಿಗೆ ನಗರಗಳ ಬೀದಿಗೆ ಬೀಳುತ್ತಿದ್ದಾರೆ. ಮಾನವ ಸಂಪತ್ತಾಗ ಬೇಕಿದ್ದ ಯುವಜನತೆಯು ನಿರುದ್ಯೋಗದಿಂದ ಬಳಲುತ್ತ Waste Bodyಗಳಾಗುತ್ತಿದ್ದಾರೆ. ಕಾರ್ಮಿಕರ ರಕ್ಷಣೆ ಗಿದ್ದ ಕಾನೂನುಗಳೂ ಕಣ್ಮರೆಯಾಗುತ್ತಿವೆ. ಇನ್ನು ದಲಿತರು ಆದಿವಾಸಿಗಳು ಮಹಿಳೆಯರು ಹೊಸ ಹೊಸ ಶೋಷಣೆಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ.

ಭಾರತವನ್ನು ಇಲ್ಲಿಗೆ ತಂದಿಟ್ಟಿದ್ದಾರೆ- ಮನ್‌ ಕಿ ಬಾತ್‌ನನಮ್ಮ ಪ್ರಧಾನಿಗಳು! ಇವರು ತಮ್ಮ ಪರಮಾಪ್ತರಾದ ಅದಾನಿ, ಅಂಬಾನಿ ಮುಂತಾದ ಶತಕೋಟಿ ಮೇಲೆ ಕುಳಿತಿರುವ ಕುಟುಂಬಗಳಿಗೆ ಎಷ್ಟೆಷ್ಟು ಲಕ್ಷ ಲಕ್ಷ ಕೋಟಿ Write off, ಅಂದರೆ ಹೆಚೂ ಕಮ್ಮಿ ಸಾಲಮನ್ನಾ ಮಾಡಿದರು ಹಾಗೂ ಮತ್ತಿತರ ರಿಯಾಯಿತಿಗಳನ್ನು ನೀಡಿದರು, ಯಾವ ಯಾವ ಸಾರ್ವಜನಿಕ ಸಂಪತ್ತುಗಳನ್ನು ಅವರ ಬಾಯಿಗೆ ಹಾಕಿದರು ಎಂಬುದನ್ನು ಒಂದು ಸಲ ನೋಡಿದರೆ ಸಾಕು; ಮೋದಿಯವರ ನಿಜವಾದ ಮನಸ್ಸು ಏನು ಎಂದು ಅರ್ಥವಾಗುತ್ತದೆ.

ಇದು ಇನ್ನೂ ಅರ್ಥವಾಗಲು ಇನ್ನೊಂದು ಉದಾ ಹರಣೆ- ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್‌ಗೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ ಮಾದಿಗ ದಂಡೋರ ನಾಯಕ ಕೃಷ್ಣ ಮಾದಿಗ ಅವರು ಆಯೋಜಿಸಿದ್ದ ಬೃಹತ್ ಸಭೆಗೆ ಪ್ರಧಾನಿಯವರು ಬಂದರು. ಕೃಷ್ಣ ಮಾದಿಗ ಅವರು, ಚಕ್ರವರ್ತಿ ಮುಂದೆ ಕಳೆದ ಮುವತ್ತು ವರ್ಷಗಳಿಂದಲೂ ಹೋರಾಡುತ್ತಿರುವ ಒಳಮೀಸಲಾತಿ ವೇದನೆಗೆ ಕಣ್ಣೀರಿಟ್ಟರು. ಚಕ್ರವರ್ತಿ ಮೋದಿಯವರು ಕೃಷ್ಣ ಅವರನ್ನು ಆಲಂಗಿಸಿ, ಸಂತೈಸಿ ಒಳಮೀಸಲಾತಿಗೆ

‘ವರದಿ’ ತಯಾರಿಸುವಂತೆ ಆದೇಶ ನೀಡಿ ನಿರ್ಗಮಿಸಿದರು. ಆದರೆ ಇನ್ನೊಂದು ಕಡೆ, ಮೇಲ್ವಾತಿಗೆ 3 ದಿನಗಳಲ್ಲೇ EWS ಮೀಸಲಾತಿಯನ್ನು ಕುರುಡಾಗಿ ನೀಡಿಬಿಟ್ಟರು. ಇದು ಮೋದಿಯವರ ಮನಸ್ಸಿನ ಮರ್ಮ. ಹೀಗಿದೆನಮ್ಮ ಪ್ರಧಾನಿಗಳ ನಡೆ ಮತ್ತು ನುಡಿ. ಹೀಗೆ ಎಷ್ಟು ದಿನ ನಮ್ಮ ಪ್ರಧಾನಿಯವರಮಾತುಗಳನ್ನು ತಿಂದು ಉಂಡು ಅನುಭವಿಸೋಣ? ಸಾಕು ಅನಿಸುತ್ತಿದೆ. ಸಂಘ ಪರಿವಾರದ ಹಿಂದುತ್ವದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ. ಈಗ 2024ರ ಚುನಾವಣೆ ನಮ್ಮ ಮುಂದಿದೆ. ಈಗಲಿಂದಲೇ ಜನಾಂದೋಲನಗಳು ಅರಳಿ ಮರದ ಕೆಳಗೆ, ಚಾವಡಿಯಲ್ಲಿ ಮಾತುಕತೆ ಆರಂಭಿಸ ಬೇಕಾಗಿದೆ. ಭಾರತ ಉಳಿಯಬೇಕು ಅಂದರೆ ಹಿಂದುತ್ವದ ಬಿಜೆಪಿ ಸೋಲಲೇಬೇಕಾಗಿದೆ.

ಕೊನೆಯದಾಗಿ, ನಮ್ಮ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತನ್ನ ಹಿಂದಿನ ಬಿಜೆಪಿ ಸರ್ಕಾರದ ಜನವಿರೋಧಿ ಕೃಷಿ ಕಾಯ್ದೆ ಮುಂತಾದವುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಂತು ನನಗೆ
ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ಕಡೆ ಕಣ್ಣೆತ್ತಿ ನೋಡಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈಗ ಬಿಜೆಪಿಗೆ ಹೇಳುತ್ತಿರುವ ಮಾತನ್ನೇ ಕಾಂಗ್ರೆಸ್‌ ಸರ್ಕಾರಕ್ಕೆ ಹೇಳಬೇಕಾಗಿ ಬರುತ್ತದೆ.

ಹೋರಾಟದ ಗೆಳೆಯರಿಗೆ ಒಂದು ಕಿವಿಮಾತು : ಭಾರತದ ಸುಪ್ತಮನಸ್ಸಲ್ಲಿ ನೆಲೆಸಿರುವ ಗಾಂಧಿ, ಅಂಬೇಡ್ಕ‌ರ್ ಮತ್ತು ಸಂವಿಧಾನವನ್ನು ನಿರ್ನಾಮ ಮಾಡಲು ಚಾತುರ್ವಣ್ರ ಹಿಂದುತ್ವದ ನೂರಾರು ಸಂಘಗಳು ಹಾಗೂ ಬಿಜೆಪಿ ಸರ್ಕಾರ ದಿನನಿತ್ಯ ಪ್ರಯತ್ನಿಸುತ್ತಿದ್ದವು. ಆದರೂ CAA ಅಂದರೆ ಪೌರತ್ವ ಕಾಯ್ದೆ ಬದಲಾವಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ಹೋರಾಟಗಳಲ್ಲಿ ಈ ಗಾಂಧಿ, ಅಂಬೇಡ್ಕರ್, ಸಂವಿಧಾನ ಈ ಮೂವರು ಜೀವಂತ ಎಂಬಂತೆ ಎಲ್ಲ ಪ್ರತಿಭಟನಾ ಸಭೆಗಳಲ್ಲೂ ಪ್ರತ್ಯಕ್ಷರಾದರು; ಕತ್ತರಿಸಿದರೂ ಮತ್ತಷ್ಟು ಚಿಗುರುವ ಬೃಹತ್ ವೃಕ್ಷಗಳಂತೆ! ಈ ಸೋಜಿಗವು ಚಾತುರ್ವಣ್ರದ ಹಿಂದುತ್ವದ ಪರಿವಾರ ಮತ್ತು ಸರ್ಕಾರವನ್ನು ಬೆಚ್ಚುವಂತೆ ಮಾಡಿತು. ಭಾರತದ ಎಲ್ಲ ಜನಾಂದೋಲನಗಳೂ ಈ ಮೂರು ಶಕ್ತಿಗಳನ್ನು ಗಮನಿಸಿ ಮುನ್ನಡೆಯಬೇಕು ಎಂದು ನನಗೆ ಅನ್ನಿಸುತ್ತಿದೆ.

lokesh

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

1 hour ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

2 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

3 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

3 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

4 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

11 hours ago