ಅಂಕಣ

ಜಪಾನ್: ಅಬೆ ಹತ್ಯೆಯ ಹಿಂದೆ ಧರ್ಮ ದ್ವೇಷದ ನೆರಳು

ಜಪಾನ್ ಮುಂದುವರಿದ ದೇಶ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಾದರಿಯಾಗಿದೆ. ಆಧುನಿಕ ಆವಿಷ್ಕಾರಗಳನ್ನು ಬಳಸಿಕೊಂಡು ವೇಗದಲ್ಲಿ ಬೆಳೆಯುತ್ತಿದೆ. ಏಷ್ಯಾದ ಇತರ ದೇಶಗಳಲ್ಲಿ ಕಂಡುಬರುವಂಥ ರಾಜಕೀಯ ಹತ್ಯೆಯ ಸಂಸ್ಕೃತಿಯಿಂದ ಬಹುಪಾಲು ದೂರ ಉಳಿದಿದೆ.

ಧಾರ್ಮಿಕವಾಗಿಯೂ ಸಮಸ್ಯೆಯಿಲ್ಲದ ದೇಶವೆಂದೇ ಭಾವಿಸಲಾಗುತ್ತದೆ. ಆದರೆ ಈ ವಿಚಾರದಲ್ಲಿ ಪ್ರಚಲಿತವಿರುವ ಆಭಿಪ್ರಾಯ ಸತ್ಯಕ್ಕೆ ದೂರವಾದುದು ಎಂದು ಹೇಳಬಹುದಾದಂಥ ಪುರಾವೆಗಳು ಈಗ ಬಯಲಾಗುತ್ತಿವೆ.

ಜಪಾನ್‌ನ ಜನಪ್ರಿಯ ನಾಯಕ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ (ಜುಲೈ ೮)ದೇಶದ ರಾಜಕೀಯ ಸಂಸ್ಕೃತಿ ಮತ್ತು ಮಿಲಿಟರಿ ನೀತಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ. ಜೊತೆಗೆ ಧರ್ಮ ಮತ್ತು ರಾಜಕೀಯದ ನಡುವಣ ಸಂಬಂಧಗಳಲ್ಲಿಯೂ ತಲ್ಲಣ ಉಂಟಾಗಲಿದೆ. ಅಬೆ ಎರಡು ಬಾರಿ ಪ್ರಧಾನಿಯಾಗಿ ಸಾಕಷ್ಟು ಅನುಭವ ಉಳ್ಳವರು. ಭಾರತಕ್ಕಂತೂ ಅವರ ಸಾವು ಭಾರಿ ನಷ್ಟ. ಅವರು ಅಧಿಕಾರದಲ್ಲಿರಲಿ ಬಿಡಲಿ ಭಾರತದ ಸ್ನೇಹಿತರಾಗಿದ್ದರು. ನಾಗರಿಕ ಪರಮಾಣು ಒಪ್ಪಂದ ಶೀಘ್ರ ಜಾರಿಗೆ ಒತ್ತಾಯ ಮಾಡುತ್ತಿರುವವರಲ್ಲಿ ಅವರೂ ಒಬ್ಬರಾಗಿದ್ದರು. ದೇಶದಲ್ಲಿ ಅತಿ ವೇಗದರೈಲು ಆರಂಭಿಸುವ ನೆರವು ಯೋಜನೆಗೆ ಷರತ್ತುಗಳನ್ನು ಸಡಿಲಗೊಳಿಸಿದ್ದರು. ಏಷ್ಯಾ ನಾಯಕತ್ವದಲ್ಲಿ ಅಭಿವೃದ್ಧಿಗಾಗಿ ಉನ್ನತ ವೇದಿಕೆ, ಆಫ್ರಿಕಾ ಅಭಿವೃದ್ಧಿ ವಲಯ ರಚನೆ, ಭೂಕಂಪ, ಪ್ರವಾಹಗಳಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಪುನರ್ನಿರ್ಮಾಣಕ್ಕಾಗಿ ಸಂಬಂಧಿಸಿದ ದೇಶಗಳ ನಡುವೆ ಹೊಂದಾಣಿಕೆ ವ್ಯವಸ್ಥೆ ರೂಪುಗೊಳ್ಳುವಲ್ಲಿ ಅವರ ಪಾತ್ರ ದೊಡ್ಡದು.

ಜಪಾನ್ ದೇಶದಲ್ಲಿಯೂ ಅವರು ಜನಪ್ರಿಯ ನಾಯಕರಾಗಿದ್ದರು. ಅಬೆ ಹತ್ಯೆಯ ಹಿಂದೆ ಧರ್ಮ ದ್ವೇಷ ಇರಬಹುದಾದ ಸಾಧ್ಯತೆಗಳು ಈಗ ಕಾಣತೊಡಗಿವೆ. ಹತ್ಯೆಯ ಆರೋಪಿ ತೇಟ್ಸುಯಾ ಯಮಗಾಮಿ ಅವರು ತನಿಖಾ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ ಅವರ ತಾಯಿ ತಮ್ಮಲ್ಲಿದ್ದ ಅಪಾರ ಹಣವನ್ನೆಲ್ಲಾ ಅವರು ಸದಸ್ಯರಾಗಿದ್ದ ಯೂನಿಫಿಕೇಷನ್ ಚರ್ಚ್‌ಗೆ ದಾನಮಾಡಿದ್ದಾರೆ. ಎಲ್ಲ ಹಣವನ್ನೂ ದಾನವಾಗಿ ಕೊಡುವಂತೆ ಅವರ ತಾಯಿಯ ಮೇಲೆ ಪ್ರಭಾವ ಬೀರಿದವರು ಯೂನಿಫಿಕೇಷನ್ ಚರ್ಚ್‌ನ ನಾಯಕರು ಎಂಬುದು ಯಮಗಾಮಿಯ ಆರೋಪ.

ತಾವು ನಿರುದ್ಯೋಗಿಯಾಗಿದ್ದು ತಾಯಿಯ ಹಣದಲ್ಲಿ ಸ್ವಲ್ಪವಾದರೂ ತಮಗೆ ಸಿಕ್ಕಿದ್ದರೆ ಬದುಕಿಕೊಳ್ಳಬಹುದಿತ್ತು. ಆದರೆ ತಮ್ಮ ತಾಯಿಯನ್ನು ಧರ್ಮದ ಭ್ರಮೆಗೆ ಒಳಗು ಮಾಡಿ ಎಲ್ಲ ಹಣವನ್ನೂ ಚರ್ಚ್ ನಾಯಕರು ಪಡೆದಿದ್ದಾರೆ ಎಂದು ಯಮಗಾಮಿ ಹೇಳಿರುವುದರಿಂದ ಅಬೆ ಹತ್ಯೆ ಪ್ರಕರಣ ಭಿನ್ನ ತಿರುವನ್ನೇ ಪಡೆದುಕೊಂಡಿದೆ. ತಮಗೆ ಹಣ ಸಿಗದಂತೆ ಮಾಡಿದ್ದಕ್ಕೆ ಯಮಗಾಮಿ ಚರ್ಚ್‌ನ ನಾಯಕರನ್ನು ಮೊದಲು ಕೊಲ್ಲಲು ಯೋಚಿಸಿದ್ದನಂತೆ. ಆದರೆ ಅವರು ಸಿಗುವ ಮೊದಲೇ ಚರ್ಚ್‌ಗೆ ಸಾಕಷ್ಟು ಬೆಂಬಲ ನೀಡುತ್ತ ಬಂದಿದ್ದ ಶಿಂಜೊ ಅಬೆ ಸಿಕ್ಕಿದ್ದಾರೆ. ಅವರ ಕೊಲೆಯೇ ಮೊದಲು ಆಗಿದೆ. ಈ ಹತ್ಯೆ ಜಪಾನ್‌ನ ರಾಜಕೀಯ ಹಾಗೂ ಸಾಮಾಜಿಕ ಬದುಕನ್ನು ಭೀತಿಗೆ ಒಳಗುಮಾಡಿದೆ.

ಜಪಾನ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣಗಳಲ್ಲಿ ಬಹುಪಾಲು ನಿರುದ್ಯೋಗಿ ಯುವಕರೇ ಭಾಗವಹಿಸಿರುವುದು ಕಂಡುಬಂದಿದೆ. ಯಾವ ಯಾವುದೋ ಕಾರಣಗಳಿಂದ ಮನೆಗಳಿಂದ ಹೊರಬಂದವರು ದಿಕ್ಕುತಪ್ಪಿದವರಾಗಿದ್ದಾರೆ. ನೆಮ್ಮದಿ ತಂದುಕೊಡುವಲ್ಲಿ ವಿಫಲವಾದ ಧಾರ್ಮಿಕ ಸಂಸ್ಥೆಗಳಿಂದ ಹೊರಬಂದವರು, ನಿರುದ್ಯೋಗಿಗಳು, ಆಸರೆ ಇಲ್ಲದವರು ಏನು ಮಾಡಬೇಕು? ಅವರ ಮನೆಯೂ ಒಡೆದು ಹೋಗಿದ್ದರೆ ಅವರು ಯಾರ ಬಳಿ ನೆರವು ಕೇಳಬೇಕು? ಅವರಿಗೆ ಸರ್ಕಾರ ಉದ್ಯೋಗ ಮತ್ತು ರಕ್ಷಣೆ ಒದಗಿಸಬೇಕಲ್ಲವೇ? ಉದ್ಯೋಗ ಒದಗಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಏನೂ ಮಾಡುತ್ತಿಲ್ಲ. ಇಂಥ ಯುವಕರನ್ನು ಸದುಪಯೋಗ ಮಾಡಿಕೊಳ್ಳುವ ದಿಕ್ಕಿನಲ್ಲಿ ಯೋಚಿಸಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಈಗ ಕೇಳಿಬರುತ್ತಿದೆ.

ಜಪಾನ್ ದೇಶದ ಮುಕ್ಕಾಲು ಭಾಗ ಜನರು ಬೌದ್ಧ ಧರ್ಮದ ಅನುಯಾಯಿಗಳು. ಇಲ್ಲಿ ಶಿಂಟೋ, ಕ್ರೈಸ್ತರು ಅಲ್ಪಸಂಖ್ಯಾತರು. ಅಬೆ ಅವರು ಶಿಂಟೋ ಧರ್ಮಕ್ಕೆ ಸೇರಿದವರು. ರಾಜಕಾರಣಿಗಳು ಅಧಿಕಾರಕ್ಕೆ ಬರಬೇಕೆಂದರೆ ಬಹುಸಂಖ್ಯಾತರ, ಅಷ್ಟೇಅಲ್ಲ ಅಲ್ಪಸಂಖ್ಯಾತರ ನೆರವು ಬೇಕೇಬೇಕು. ಅಬೆ ಸೇರಿದಂತೆ ಎಲ್ಲ ರಾಜಕೀಯ ಪ್ರಮುಖರು ಚುನಾವಣೆ ಗಮನದಲ್ಲಿಟ್ಟುಕೊಂಡು ಸಹಜವಾಗಿ ಕ್ರೈಸ್ತ ಜನರಿಗೆ ಸಹಾಯ ಮಾಡುತ್ತ ಬಂದಿದ್ದಾರೆ. ಅಬೆ ಅವರಿಗೆ ಕ್ರೈಸ್ತ ಧರ್ಮದಲ್ಲಿ ಎಷ್ಟು ನಂಬಿಕೆ ಇದೆಯೋ ಗೊತ್ತಿಲ್ಲ. ಆದರೆ ಚರ್ಚ್‌ಗೆ ಬೆಂಬಲವಾಗಿಯಂತೂ ನಿಂತಿದ್ದಾರೆ.

ಅವರ ತಾತನ ಕಾಲದಿಂದಲೂ ಅವರು ಯೂನಿಫಿಕೇಷನ್ ಚರ್ಚ್‌ಗೆ ನೆರವಾಗುತ್ತ ಬಂದಿದ್ದಾರೆ. ಇದನ್ನು ಚರ್ಚ್ ಮುಖಂಡರೂ ಒಪ್ಪುತ್ತಾರೆ. ಬಹುಶಃ ಚೀನಾ ಮತ್ತು ಕಮ್ಯುನಿಸ್ಟ್ ವಿರೋಧಿ ಸಂಘಟನೆಯೆಂಬ ಕಾರಣಕ್ಕೆ ಬೆಂಬಲ ನೀಡುತ್ತಿರಬಹುದು. ಜಪಾನ್ ಮತ್ತು ಚೀನಾ ನಡುವೆ ದ್ವೇಷ ತುಂಬಾ ಹಳೆಯದು. ರಾಜಕೀಯವಾಗಿ ಜಪಾನಿನ ಯಾರೇ ಆದರೂ ಚೀನಾ ವಿರೋಧಿ ನಿಲುವು ತಳೆಯುವುದು ರಾಷ್ಟ್ರೀಯತೆಯ ಭಾಗವಾಗಿದೆ.
ಮೂಲಭೂತವಾಗಿ ಯೂನಿಫಿಕೇಷನ್ ಚರ್ಚ್ ಸಂಘಟನೆ ದಕ್ಷಿಣ ಕೊರಿಯಾದ ಧಾರ್ಮಿಕ ಮುಖಂಡ ಸನ್ ಮೈಂಗ್ ಮೂನ್ ೧೯೫೪ರಲ್ಲಿ ಸ್ಥಾಪಿಸಿದ್ದಾರೆ.

ಎರಡೂ ಕೊರಿಯಾಗಳ ವಿಲೀನ ಮತ್ತು ಹೊಸ ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ಈ ಸಂಘಟನೆಯನ್ನು ಅವರು ಸ್ಥಾಪಿಸುುತ್ತಾರೆ. ಈ ಸಂಘಟನೆಯ ಸದಸ್ಯರನ್ನು ಮೂನಿಗಳು ಎಂದು ಕರೆಯುತ್ತಿದ್ದರು. ಅಬೆ ಅವರ ಮುತ್ತಾತ ಮತ್ತು ಮಾಜಿ ಪ್ರಧಾನಿ ನೊಬುಸುಕಿ ಕಿಷಿ ಅವರು ದಕ್ಷಿಣ ಕೊರಿಯಾದ ಈ ಸಂಘಟನೆಯನ್ನು ಜಪಾನಿನಲ್ಲಿ ೧೯೬೦ರಲ್ಲಿ ಆರಂಭಿಸಲು ನೆರವಾಗುತ್ತಾರೆ. ೧೯೭೦ರ ಸುಮಾರಿನಲ್ಲಿ ಅಮೆರಿಕದಲ್ಲಿಯೂ ಈ ಸಂಘಟನೆ ಆರಂಭವಾಗುತ್ತದೆ. ಕೆಲವೇ ವರ್ಷಗಳಲ್ಲ ಸಾಕಷ್ಟು ಹಣಮಾಡಿ ಪತ್ರಿಕೆಯೊಂದನ್ನು ನಡೆಸುತ್ತಿದೆ. ಅನೇಕ ಉದ್ಯಮ ಮತ್ತು ವ್ಯವಹಾರ ಸಂಸ್ಥೆಗಳನ್ನು ಕಟ್ಟಲಾಗಿದೆ. ಅತ್ಯಂತ ಶ್ರೀಮಂತ ಸಂಸ್ಥೆಯಾಗಿ ಮಾರ್ಪಟ್ಟಿದೆ. ಯೂನಿಫಿಕೇಷನ್ ಚರ್ಚ್ ಎಂಬುದು ಒಂದು ಚಳವಳಿ ಎಂದು ಅದರ ಬೆಂಬಲಿಗರು ಹೇಳುತ್ತಾರೆ.

ಚೀನಾದ ವಿರುದ್ಧವಾದ ನೀತಿಗಳುಳ್ಳ ಸಂಘಟನೆ ಇದು. ಧಾರ್ಮಿಕವಾಗಿ ಹೊಸ ಕ್ರೈಸ್ತನ ಜನನವಾಗಿ ಈ ಚಳವಳಿ ಹುಟ್ಟಿಕೊಂಡಿದೆ ಎಂದು ಅದರ ಸಂಸ್ಥಾಪಕ ಮೂನ್ ಹೇಳುತ್ತಾರೆ. ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಹೊಸ ತಲೆಮಾರನ್ನು ಸೃಷ್ಟಿಸುವ ಉದ್ದೇಶ ಈ ಸಂಘಟನೆಗೆ ಇದೆ.

೧೯೯೬ರಲ್ಲಿ ಫೆಡರೇಷನ್ ಆಫ್ ವರ್ಲ್ಡ್‌ಪೀಸ್ ಎಂಬ ಮತ್ತೊಂದು ಸಂಘಟನೆಯನ್ನು ಮೂನ್ ಜಪಾನ್‌ನಲ್ಲಿ ಸ್ಥಾಪಿಸುತ್ತಾರೆ. ಇದು ಕೂಡಾ ಕಮ್ಯುನಿಸಂ ವಿರೋಧಿ ನೀತಿಗಳನ್ನು ಒಳಗೊಂಡಿರುತ್ತದೆ. ಯೂನಿಫಿಕೇಷನ್ ಚರ್ಚ್‌ನ ಸೋದರ ಸಂಸ್ಥೆ ಎಂದು ಹೇಳಿಕೊಳ್ಳಲಾಗಿದೆ. ಸಹಜವಾಗಿಯೇ ಈ ಸಂಘಟನೆಯನ್ನು ನೊಬುಸುಕಿ ಕಿಷಿ ಅವರು ಚುನಾವಣೆಗೆ ಬಳಸಿಕೊಂಡಿದ್ದರು. ಇದೇ ಸಂಪ್ರದಾಯ ಈಗಲೂ ಮುಂದುವರಿದಿದ್ದು ಅಬೆ ಅವರೂ ಇದೇ ಕಾರಣಕ್ಕಾಗಿ ಈ ಸಂಘಟನೆಯ ಜೊತೆಯೂ ಕ್ರಿಯಾತ್ಮಕ ಸಂಬಂಧ ಇಟ್ಟುಕೊಂಡಿದ್ದರು. ಅಬೆ ಅವರು ಈ ಸಂಘಟನೆಗಳ ಸದಸ್ಯರಾಗಿಲ್ಲದಿರಬಹುದು. ಆದರೆ ಸಂಘಟನೆಯ ಕಾರ್ಯಕ್ರಮಗಳಿಗೆ ಅವರ ಭಾಷಣವುಳ್ಳ ವಿಡಿಯೋ ಅನ್ನು ಕಳುಹಿಸುತ್ತಿದ್ದರು. ಧನ ನೆರವು ಸಿಗುವಂತೆ ಮಾಡುತ್ತಿದ್ದರು.

ಯಾವ ಧಾರ್ಮಿಕ ಸಂಘಟನೆ ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಯಲಾರಧಂಥ ಸನ್ನಿವೇಶ ಈಗ ಬಂದಿದೆ.
ಎಷ್ಟೋ ಧಾರ್ಮಿಕ ಸಂಘಟನೆಗಳು ಹಣ ಸಂಗ್ರಹಿಸುವ ಸಂಘಟನೆಗಳಾಗಿವೆ. ಕೆಲವು ಸಂಘಟನೆಗಳು ಧರ್ಮದ ಹೆಸರಿನಲ್ಲಿ ಜನರನ್ನು ಒಂದು ಕಡೆ ಸೇರಿಸಿ ಅವರ ತಲೆ ಕೆಡಿಸುವ ಕೆಲಸ ಮಾಡುತ್ತಿವೆ. ಈ ಜಗತ್ತು ತಮ್ಮ ಜೊತೆ ಅಂತ್ಯವಾಗುತ್ತದೆ ಎಂದು ಹೆದರಿಸಿ ತಾವೇ ಪ್ರಾಣ ಕಳೆದುಕೊಳ್ಳಲು ಪ್ರೇರೇಪಿಸುವಂಥ ಮತ್ತು ಹಾಗೆ ಆರಾಧನೆ ಮಾಡಿಸುವಂಥ ಜನರೂ ಇದ್ದಾರೆ. ಟೋಕಿಯೂ ಸಬ್ ವೇನಲ್ಲಿ ವಿಷಾನಿಲ ಹರಿಬಿಡುವಂಥ ದುಷ್ಟ ಕೃತ್ಯ ಮಾಡಿದವರು ಈಗ ಕಂಬಿ ಎಣಿಸುತ್ತಿದ್ದಾರೆ.

ಜಪಾನಿನಲ್ಲಿ ಧಾರ್ಮಿಕ ಸ್ವತಂತ್ರ್ಯ ಇದೆ. ಎಂಥ ಸಂದರ್ಭದಲ್ಲಿಯೂ ರಾಜಕೀಯ ಹಸ್ತಕ್ಷಪ ಇರುವುದಿಲ್ಲ. ಇದನ್ನು ಬಳಸಿಕೊಂಡು ಕೆಲವರು ವಿಚಿತ್ರ ಮತ್ತು ಅತ್ಯುಗ್ರವಾದ ತತ್ವಾದರ್ಶಗಳನ್ನು ಪ್ರಚುರ ಪಡಿಸುತ್ತಿದ್ದಾರೆ. ಜಪಾನಿನ ಜನರಲ್ಲಿ ಮೂರು ರೀತಿಯ ಹತಾಶೆಯನ್ನು ಕಾಣಬಹುದು. ಚೆನ್ನಾಗಿ ದುಡಿದು ಸಂಪಾದನೆಮಾಡಿರುವವರ ಗುಂಪು ಒಂದು, ಇನ್ನೊಂದು ಜೀವನದಲ್ಲಿ ಸ್ವಾರಸ್ಯ ಕಾಣದೆ ಇರುವವರು. ಮತ್ತೊಂದು ಗುಂಪು ಆಧ್ಯಾತಿಕ ಶಾಂತಿಯನ್ನು ಬಯಸುವವರದ್ದು. ಇವುಗಳಲ್ಲಿ ಕೆಲವರು ಧಾರ್ಮಿಕ ಉಗ್ರರು. ಇವರು ಕೆಲವು ಬಾರಿ ಸದಸ್ಯರನ್ನು ಸಾವಿನ ದವಡೆಗೆ ಸಿಲುಕಿಸಿದ ನಿದರ್ಶನಗಳಿವೆ. ವಿಷಾನಿಲ ತಯಾರಿಸಿ ರೈಲ್ವೆ ಸಬ್ವೇನಲ್ಲಿ ಹರಿ ಬಿಟ್ಟು ಜನರನ್ನು ಸಾಯಿಸಿದಂಥ ಧರ್ಮಗುರುಗಳು ಮರಣ ದಂಡನೆಗೆ ಒಳಗಾಗಿದ್ದಾರೆ. ಅಬೆ ಹತ್ಯೆಯ ನಂತರ ಧಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಇರುವ ಸಂಬಂಧಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಈಗ ಆದೇಶ ಹೊರಡಿಸಿದೆ.

 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

5 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

7 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago