ಅಂಕಣ

ರಾಜ್ಯ ಸರ್ಕಾರದ ವಿರುದ್ದ ಆರೋಪ ; ಬಿಜೆಪಿಗೆ ತಿರುಗುಬಾಣ

  • ಆರ್.ಟಿ. ವಿಠ್ಠಲಮೂರ್ತಿ

ಕಳೆದ ವಾರ ಬಿಜೆಪಿಯ ಹಿರಿಯ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳ ಮೇಲೆ ಗಂಭೀರ ಆರೋಪ ಮಾಡಿದರು.

ಮುಖ್ಯಮಂತ್ರಿಗಳು ಐಸಿಸ್ ಉಗ್ರಗಾಮಿ ಸಂಘಟನೆಯ ಜತೆ ಸಂಪರ್ಕವಿರುವ ಮೌಲ್ವಿಯೊಬ್ಬರ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬುದು ಈ ಆರೋಪ. ತಮ್ಮ ಈ ಆರೋಪಕ್ಕೆ ಪೂರಕವಾಗಿ ಅವರು ಯಾವ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದರೂ, ಎರಡು ದಿನಗಳ ನಂತರ ಮುಖ್ಯಮಂತ್ರಿಗಳು ಆ ಮೌಲ್ವಿಯವರ ಮನೆಗೆ ಹೋಗಿದ್ದ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದರು.

ಆದರೆ ಅವರು ವಿಡಿಯೋ ತುಣುಕು ಬಿಡುಗಡೆ ಮಾಡಿದ ಬೆನ್ನಲ್ಲೇ ಎರಡು ಪ್ರತಿಬಾಣಗಳು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧವೇ ತೂರಿ ಬಂದವು. ಮೊದಲನೆಯದು, ಯತ್ನಾಳ್ ಅವರು ಐಸಿಸ್ ಉಗ್ರಗಾಮಿ ಸಂಘಟನೆಯ ಜತೆ ಸಂಬಂಧವಿದೆ ಎಂದು ಯಾರ ಬಗ್ಗೆ ಹೇಳಿದ್ದರೋ? ಅದೇ ಮೌಲ್ವಿಯ ಜತೆ ವ್ಯಾವಹಾರಿಕ ಪಾಲುದಾರಿಕೆ ಹೊಂದಿದ್ದಾರೆ ಎಂಬುದು.

ಎರಡನೆಯದು, ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿನಿಧಿಸುವ ಬಿಜೆಪಿ ಪಕ್ಷದ ಉನ್ನತ ನಾಯಕ ಪ್ರಧಾನಿ ನರೇಂದ್ರಮೋದಿಯವರ ಜತೆಗೂ ಸದರಿ ಮೌಲ್ವಿ ಸಭೆಯೊಂದರಲ್ಲಿ ಭಾಗವಹಿಸಿದ್ದರು ಎಂಬುದು.

ಅಂದ ಹಾಗೆ ಮೊದಲನೆಯ ಬಾಣಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಉತ್ತರಿಸಬೇಕಾದದ್ದು ಸಹಜ. ಆದರೆ ಎರಡನೆಯ ಬಾಣಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಮಾತ್ರವಲ್ಲ, ಅವರು ಪ್ರತಿನಿಧಿಸುತ್ತಿರುವ ಬಿಜೆಪಿಯೇ ಉತ್ತರಿಸಬೇಕಾದ ಅನಿವಾರ್ಯತೆಗೆ ಸಿಲುಕಿತು.

ಪರಿಣಾಮವಾಗಿ ಯತ್ನಾಳ್ ಅವರ ಆರೋಪದಿಂದ ಇಡೀ ಬಿಜೆಪಿ ಮುಜುಗರಕ್ಕೆ ಸಿಲುಕಿಕೊಂಡಿತು. ಯತ್ನಾಳ್ ಅವರು ಐಸಿಸ್ ಉಗ್ರಗಾಮಿ ಸಂಘಟನೆಯ ಜತೆ ಸಂಪರ್ಕವಿಟ್ಟುಕೊಂಡಿರುವ ಮೌಲ್ವಿಯವರ ಜತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಟೀಕಿಸಿದಾಗ ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರು ಅತಿ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದರು.

ಮುಖ್ಯಮಂತ್ರಿಗಳು ಯಾವ ಮೌಲ್ವಿಯ ಜತೆ ಕಾಣಿಸಿಕೊಂಡಿದ್ದಾರೋ? ಆ ಮೌಲ್ವಿಯವರಿಗೆ ಐಸಿಸ್ ಸಂಪರ್ಕವಿರುವುದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ತನಿಖೆ ನಡೆಯಲಿ, ಹೀಗಾಗಿ ಈ ಕುರಿತು ತನಿಖೆಗಾಗಿ ಎನ್ ಐಎ ಗೆ ವಹಿಸಲಿ ಎಂಬುದು ಅವರ ಬುದ್ದಿವಂತಿಕೆಯ ಮಾತಾಗಿತ್ತು.

ಆದರೆ ಯಾವಾಗ ಸದರಿ ಮೌಲ್ವಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಭಾಗವಹಿಸಿದ ಫೋಟೋ ಬಹಿರಂಗವಾಯಿತೋ? ಇದಾದ ನಂತರ ಇಡೀ ಎಪಿಸೋಡು ರಾಜ್ಯದ ಜನರಿಗೆ ಭ್ರಮನಿರಸನ ಉಂಟು ಮಾಡಿತು. ಅಷ್ಟೇ ಅಲ್ಲ, ಇಂತಹ ಅನಗತ್ಯ ವಿವಾದದ ಮಾತುಗಳನ್ನು ಬಿಟ್ಟು ನಾಡಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡಲು ಇವರಿಗೇನಾಗಿದೆ? ಎಂಬ ಕೂಗು ಕೇಳಿ ಬಂತು. ಅರ್ಥಾತ್, ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪ ರಾಜ್ಯ ಬಿಜೆಪಿಯ ಪಾಲಿಗೆ ತೀವ್ರ ಮುಜುಗರದ ಸಂಗತಿಯಾಗಿ ಪರಿಣಮಿಸಿದೆ. ಅಂದ ಹಾಗೆ ತಮ್ಮ ಆರೋಪಕ್ಕೆ ದಾಖಲೆಗಳಿವೆ. ಅದನ್ನು ಕೇಂದ್ರದ ತನಿಖಾ ಸಂಸ್ಥೆಗೆ ನೀಡಿದ್ದೇನೆ ಅಂತ ಯತ್ನಾಳ್ ಹೇಳುತ್ತಿದ್ದರೂ, ಅದುಸಾಬೀತಾಗುವವರೆಗೂ ಅವರು ಮಾತನಾಡಬಾರದಿತ್ತು ಎಂಬ ಅಭಿಪ್ರಾಯ ಮಾತ್ರ ಸಾರ್ವತ್ರಿಕವಾಗಿದೆ.

ಅಶೋಕ್‌ ಎದುರಿಸಿದ ಮುಜುಗರ : ಈ ಮಧ್ಯೆ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಅವರ ಹೆಜ್ಜೆಯೊಂದು ನಾಡಿನ ಜನರ ಗಮನ ಸೆಳೆಯಿತು. ಬಿಜೆಪಿ ಕಾರ್ಯಕರ್ತರಾದ ಪೃಥ್ವಿಸಿಂಗ್ ಮತ್ತಿತರರ ಮೇಲೆ ಕಾಂಗ್ರೆಸ್ ಪಕ್ಷದವರು ಹಲ್ಲೆ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆ ನಡೆದ ವೇಳೆ, ಇದನ್ನು ತಾರಕಕ್ಕೆ ತೆಗೆದುಕೊಂಡು ಹೋಗಲು ಬಿಜೆಪಿ ಶಾಸಕರು ಬಯಸಿದ್ದರು. ಏಕೆಂದರೆ ಪೃಥ್ವಿಸಿಂಗ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದವರ ಬೆನ್ನ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದವರ ಸಹೋದರ ಇದ್ದಾರೆ ಎಂಬುದು ಬಿಜೆಪಿ ನಾಯಕರ ನೇರ ಆರೋಪ.

ಹೀಗಾಗಿ ವಿಧಾನಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಸದನದಲ್ಲಿ ಧರಣಿ ಆರಂಭಿಸಿ, ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವುದು ಬಿಜೆಪಿಯ ಬಹುತೇಕ ಶಾಸಕರ ಲೆಕ್ಕಾಚಾರವಾಗಿತ್ತು. ಆದರೆ ವಿಷಯ ಚರ್ಚೆಗೆ ಬಂದು ಒಂದಷ್ಟು ಹೊತ್ತು ಕಳೆಯುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಅವರು, ಈ ವಿಷಯದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಬಿಟ್ಟರು. ಅಷ್ಟೇ ಅಲ್ಲ, ಸದನದಿಂದ ಹೊರ ನಡೆದುಬಿಟ್ಟರು.

ಈ ಹಂತದಲ್ಲಿ ಸದನದ ಸದಸ್ಯರಾಗಿರುವ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರಿಗೆ ಅಚ್ಚರಿಯಾಯಿತು. ವಿಷಯವನ್ನು ಮುಂದಿಟ್ಟುಕೊಂಡು ಧರಣಿ ನಡೆಸಿದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದಂತಾಗುತ್ತದೆ. ಆದರೆ ಅದನ್ನು ಬಿಟ್ಟು ಸಭಾತ್ಯಾಗ ಮಾಡಿದರೆ ಏನಾಗುತ್ತದೆ? ಇಡೀ ವಿಷಯ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗುತ್ತದೆ ಎಂಬುದು ಅವರ ಯೋಚನೆ.

ಹಾಗಂತಲೇ ಅಶೋಕ್‌ ರವರ ಸಭಾತ್ಯಾಗದ ನಿರ್ಧಾರಕ್ಕೆ ಅಪ್ರತಿಭರಾದರೂ ಹಲವರು ವಿಧಾನಸಭೆಯಿಂದ ಹೊರ ನಡೆದರು. ಆದರೆ ಕೆಲ ಶಾಸಕರು ಸದನದಲ್ಲೇ ಉಳಿದುಕೊಂಡರು. ಇದಾದ ಸ್ವಲ್ಪ ಹೊತ್ತಿನಲ್ಲೇ ಬಿಜೆಪಿಯ ಶಾಸಕರೊಬ್ಬರು ಅಶೋಕ್‌ ಅವರ ಕುರಿತು, ಇವರು ಅಡ್ಡಸ್ಟ್‌ಮೆಂಟ್ ಗಿರಾಕಿ ಎಂದು ಗೊಣಗಿಕೊಂಡಿದ್ದೂ ಆಯಿತು.

ಯಾವಾಗ ಈ ಬೆಳವಣಿಗೆ ನಡೆಯಿತೋ ತಕ್ಷಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಶೋಕ್ ಅವರಿಗೆ ಫೋನು ಮಾಡಿ ಇಂತಹ ವಿಷಯದಲ್ಲಿ ಹೋರಾಟಕ್ಕಿಳಿಯುವ ಮುನ್ನ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಬೇಕು. ಪಕ್ಷದ ಅಧ್ಯಕರಿಗೆ ವಿಷಯ ತಿಳಿಸಿರಬೇಕು. ಹಾಗೆ ಮಾಡದೆ ಇದ್ದರೆ ನಮ್ಮಲ್ಲೇ ಭಿನ್ನಾಭಿಪ್ರಾಯವಿದೆ ಎಂಬ ಸಂದೇಶ ರವಾನೆ ಆಗುತ್ತದೆ. ಇದು ಸರಿಯಲ್ಲ ಎಂದರಂತೆ.

ಏನೇ ಆಗಲಿ, ಒಟ್ಟಿನಲ್ಲಿ ಅಶೋಕ್ ಅವರು ತೆಗೆದುಕೊಂಡ ನಿರ್ಧಾರ ಬಿಜೆಪಿಯ ಪಾಲಿಗೆ ದುಬಾರಿಯಾಯಿತು ಎಂಬುದು ಮಾತ್ರ ಸುಳ್ಳಲ್ಲ. ಅಷ್ಟು ಮಾತ್ರವಲ್ಲ, ಪ್ರತಿಪಕ್ಷವಾಗಿ ಬಿಜೆಪಿಯಲ್ಲೇ ಒಗ್ಗಟ್ಟಿಲ್ಲ ಎಂಬ ಸಂದೇಶ ನಾಡಿಗೆ ರವಾನೆಯಾಗುವಂತಾಯಿತು. ಅಷ್ಟೇ ಅಲ್ಲ, ನಾಡಿನ ಜನರಿಗಾಗಿ ಹೋರಾಡಬೇಕಾದವರು ತಮ್ಮದೇ ಸಮಸ್ಯೆಯಲ್ಲಿ ಮುಳುಗಿಕೊಂಡಿರುವುದನ್ನು ಅಸಹಾಯಕರಾಗಿ ನೋಡುವಂತಾಯಿತು.

ಬೆಟ್ಟ ಅಗೆದು ಇಲಿ ಹಿಡಿದರು : ಅಂದ ಹಾಗೆ ಮೇಲಿನ ಎರಡು ಬೆಳವಣಿಗೆಗಳನ್ನು ಏಕೆ ನೋಡಬೇಕು ಎಂದರೆ, ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ಬೇರೆ ವಿಷಯಗಳು ಬೆಟ್ಟದಷ್ಟಿವೆ. ಆದರೆ ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ನಡೆದ ಇಂತಹ ಘಟನೆಗಳು ಬೆಟ್ಟ ಅಗೆದು ಇಲಿಯನ್ನು ಹಿಡಿದಂತಿದೆ.

ಇವತ್ತು ರಾಜ್ಯದಲ್ಲಿ ಭೂ ಮಾಫಿಯಾ ಹಿಡಿತ ದಿನದಿಂದ ದಿನಕ್ಕೆ ಎಷ್ಟು ಬಿಗಿಯಾಗುತ್ತಿದೆ ಎಂದರೆ ನಾಡಿನ ಯಾವುದೇ ಮೂಲೆಗೆ ಹೋದರೂ ಬಡವರು ಸಣ್ಣದೊಂದು ಮನೆ ಕಟ್ಟಿಕೊಳ್ಳುವುದು ಕಷ್ಟದ ಕೆಲಸವಾಗುತ್ತಿದೆ.

ಸರ್ಕಾರದಲ್ಲಿರುವ ಹಿರಿಯ ಸಚಿವರೊಬ್ಬರ ಪ್ರಕಾರ, ಕರ್ನಾಟಕದಲ್ಲಿ ಭೂಮಿಯ ಬೆಲೆ ಏರುತ್ತಿರುವ ರೀತಿಯನ್ನು ನೋಡಿದರೆ ಮುಂದಿನ ಕೆಲ ವರ್ಷಗಳಲ್ಲಿ ಕನ್ನಡಿಗರು ಒಂದು ನಿವೇಶನ ಖರೀದಿಸಲೂ ಅಸಾಧ್ಯವಾಗುತ್ತದೆ.

ಅರ್ಥಾತ್, ಭೂ ಮಾಫಿಯಾ ದಿನದಿಂದ ದಿನಕ್ಕೆ ಪ್ರಬಲವಾಗಿ ನಾಡಿನ ಭೂಮಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ದುಡ್ಡಿದ್ದವರು ಮಾತ್ರ ಬದುಕುವಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ. ಅವರ ಜತೆ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ವ್ಯವಸ್ಥೆಯನ್ನು ನಡೆಸುವವರು ಕೈ ಜೋಡಿಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದಾರೆ. ಆದರೆ ನಾಡು ಎದುರಿಸುವ ಈ ಸಮಸ್ಯೆಯ ಮೂಲದ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸುವವರೇ ಇಲ್ಲ. ಇದೇ ರೀತಿ ಜಾಗತೀಕರಣದ ಫಲವಾಗಿ ಕನ್ನಡಿಗರ ಬದುಕು ಸಂಕಷ್ಟಕ್ಕೆ

ಸಿಲುಕುತ್ತಾ, ಹೊರ ರಾಜ್ಯಗಳಿಂದ ವಲಸೆ ಬಂದವರ ಕೈ ಮೇಲಾಗುತ್ತಾ ಹೋಗುತ್ತಿರುವ ಅಪಾಯವೂ ಕಣ್ಣೆದುರಿಗಿದೆ. ಆದರೆ ಅದರ ಬಗ್ಗೆ ಚರ್ಚಿಸುವ ಶಾಸಕರೇ ಅತ್ಯಪರೂಪವಾಗಿದ್ದಾರೆ. ಹೀಗೆ ಹೇಳಲು ಹೋದರೆ ನಾಡಿನ ಬದುಕು ಅತಂತ್ರವಾಗುತ್ತಿರುವ ಹಲವು ವಿಪರ್ಯಾಸಗಳು ಕಣ್ಣೆದುರಿಗಿದ್ದರೂ ವಿಧಾನಮಂಡಲದ ಸದಸ್ಯರಾಗಿರುವ ಬಹುತೇಕರು ಅದನ್ನೊಂದು ಅಜೆಂಡಾ ಆಗಿಸಿಕೊಳ್ಳದೆ ಜಾಳು ಜಾಳು ವಿಷಯಗಳನ್ನು ಹಿಡಿದುಕೊಂಡು, ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ರಾಜ್ಯದ ಜನರ ತೆರಿಗೆ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ಇದನ್ನು ವಿಪರ್ಯಾಸವೆನ್ನದೇ ವಿಧಿಯಿಲ್ಲ.

lokesh

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

2 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

3 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago