ಎಡಿಟೋರಿಯಲ್

ಹರಿತ ನಾಲಿಗೆಯ ನುರಿತ ಹೋರಾಟಗಾರ

ಪ್ರೊ.ಅರವಿಂದ ಮಾಲಗತ್ತಿ, ಹಿರಿಯ ಸಾಹಿತಿ

ಪ.ಮಲ್ಲೇಶ್ ಅವರು ‘ಇನ್ನಿಲ್ಲ’ ಎನ್ನುವ ಸುದ್ದಿಯನ್ನು ದೂರವಾಣಿಯ ಮೂಲಕ ರಶ್ಮಿ ಕೋಟಿ ಅವರಿಂದ ಕೇಳಿ ಒಂದು ಕ್ಷಣ ನಿಶ್ಚಲವೆನಿಸಿತು. ನಾಡಿನ ಹಿರಿಯ ಹೋರಾಟ ಜೀವಿ ಈ ನೆಲದೊಂದಿಗೆ, ನಮ್ಮೊಂದಿಗೆ ಇನ್ನೂ ಬಹುಕಾಲ ಒಡನಾಡಬೇಕಿದ್ದ ವ್ಯಕ್ತಿತ್ವ. ಇವರು ಈಗಿಲ್ಲವೆನಿಸಿದಾಗ ಎದೆಯೊಳಗೆ ಘಾಸಿ ಎನಿಸಿತು.

ಇದೇ ಜನವರಿ 10 ರಂದು ಕೋರ್ಟಿನಲ್ಲಿ ನಾವು ಪರಸ್ಪರ ಭೇಟಿಯಾಗಬೇಕಿತ್ತು. ಅವತ್ತು ಅವರು ಕೋರ್ಟಿಗೆ ಬರಲಿಲ್ಲ. ಏಕೆ ಎಂದು ವಿಚಾರಿಸಲಾಗಿ ಸ.ರ.ಸುದರ್ಶನ ಅವರು, ಅವರ ಅನಾರೋಗ್ಯದ ಬಗ್ಗೆ ತಿಳಿಸಿದರು. ಈ ಕೋರ್ಟ್ ಕೇಸಿಗೆ ಸಂಬಂಧಿಸಿದಂತೆ ‘ಮೂರು ದಿನಗಳ ನಂತರ ಅವರೊಂದಿಗೆ ಎಲ್ಲರೂ ಸೇರಿ ಚರ್ಚಿಸೋಣ’ ಎಂದು ಮಾತನಾಡಿಕೊಂಡಿದ್ದೆವು. ಕೆಲ ಕಾರಣಗಳಿಂದ ಅದು ಸಾಧ್ಯವಾಗದೇ ಹೋಯಿತು.

ನೆಲ, ಜಲ, ಗಡಿ, ಭಾಷೆ, ದಲಿತ, ಮಹಿಳೆ ಇಂತಹ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಎದ್ದು ನಿಲ್ಲುವ, ಸಮಸ್ಯೆಗೆ ಸದಾಕಾಲ ಕೊರಳಾಗುವ ವ್ಯಕ್ತಿತ್ವ ಅವರದು. ದುರ್ಬಲ ಮನಸ್ಸಿಗೂ ಬಲತುಂಬಿ ಹೋರಾಟಕ್ಕೆ ಸನ್ನದ್ಧಗೊಳಿಸುವ ಮನೋಭಾವ ಅವರದು. ಯಾವುದೇ ಹೋರಾಟವಿದ್ದರೂ ಮುಂಚೂಣಿಯಲ್ಲಿ ಬಂದು ನಿಲ್ಲುವಂತಹವರು. ‘ನನಗೆ ಇಂಥವರೇ ಕರೆಯಬೇಕು’ ಎನ್ನುವ ಯಾವುದೇ ಪೂರ್ವಗ್ರಹಗಳನ್ನು ಇಟ್ಟುಕೊಳ್ಳದೆ. ತಮಗೆ ‘ಸರಿ’ ಎನಿಸಿದರೆ ಯಾರು ಕರೆದರೂ, ‘ಓ’ ಗೊಡುವ ಅಥವಾ ತಮ್ಮ ಗಮನಕ್ಕೆ ಬಂದರೆ ನೇರವಾಗಿ ಬಂದು ಭಾಗವಹಿಸುವ ಪ್ರವೃತ್ತಿ, ಆತ್ಮಪ್ರತಿಷ್ಠೆಯಿಂದ ಹೊರತಾದದ್ದಾಗಿತ್ತು. ಮೈಸೂರಿನಲ್ಲಿ ಅವರಿಲ್ಲದೆ ಯಾವ ಹೋರಾಟಗಳು ಮೈದುಂಬುತ್ತಿರಲಿಲ್ಲವೇನೋ ಎನ್ನುವ ಮನೋಭಾವವನ್ನು ನಮ್ಮೊಳಗೆ ಅವರು ರೂಪಿಸಿದವರು. ಯಾರ ಹಂಗು, ಭಿಡೆಯಿಲ್ಲದೆ ಮಾತನಾಡುವ ಪ್ರವೃತ್ತಿ ಅವರದು. ಅವರ ಮಾತಿನ ನಿಷ್ಠುರತೆಯಿಂದಾಗಿಯೇ ಅಧಿಕಾರಿಗಳೊಂದಿಗೆ ವೈಮನಸುಗಳು ಎದ್ದು ನಿಂತರೂ, ಎಂದೂ ಅಂಥವುಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಹಾಗೆಯೇ ಯಾವುದೇ ಸಮಸ್ಯೆಯ ವಿಚಾರವನ್ನು ಮನವರಿಕೆ ಮಾಡಕೊಡಬಲ್ಲ ಸಾಮರ್ಥ್ಯವೂ ಅವರಲ್ಲಿರುವುದನ್ನು ನಾನು ಕಂಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ಅವರ ಆವೇಶದ ಮಾತುಗಳು ವಾತಾವರಣವನ್ನು ಉದ್ವಿಗ್ನಕ್ಕೆ ತಂದದ್ದನ್ನು ಗಮನಿಸಿದ್ದೇನೆ ಮತ್ತು ಅಂತಹ ಸನ್ನಿವೇಶವನ್ನು ತಿಳಿಯಾಗಿಸುವ ಶಕ್ತಿಯೂ ಅವರಲ್ಲಿರುವುದನ್ನು ಮನಗಂಡಿದ್ದೇನೆ. ಅವರೊಬ್ಬ ಸಮರ್ಥ ಹೋರಾಟಗಾರರಾಗಿದ್ದು, ಒಬ್ಬ ಹೋರಾಟಗಾರನಿಗೆ ಇರಬೇಕಾದ ಎಲ್ಲಾ ಲಕ್ಷಣಗಳು ಅವರಲ್ಲಿದ್ದವು.

ನಾನು ಮಂಗಳೂರಿನಲ್ಲಿ ಇರುವಾಗಲೇ ಅವರ ಬಗ್ಗೆ, ಅವರ ಹೋರಾಟದ ಬಗ್ಗೆ ಬಲ್ಲವನಾಗಿದ್ದೆ. ಮತ್ತು ೭೦ರ ದಶಕದ ಶೂದ್ರ ಚಳವಳಿಯ ಹೋರಾಟಕ್ಕೆ ಸಂಬಂಧಿಸಿದಂತೆಯೂ ನನ್ನ ಕೃತಿಯಲ್ಲಿ ದಾಖಲಿಸಿದ್ದೆ. 1997ರಲ್ಲಿ ನಾನು ಮೈಸೂರಿಗೆ ಬಂದ ನಂತರ ಅವರೊಂದಿಗಿನ ಒಡನಾಟ ಹಾಗೂ ಹೋರಾಟದ ದಾರಿಯೊಂದಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಾಯಿತು. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ಹೋರಾಟಗಳಾಗಿರಬಹುದು, ಕನ್ನಡಕ್ಕೆ ಸಂಬಂಧಿಸಿದ, ಅದರಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯ ಬೋಧನೆಗೆ ಸಂಬಂಧಿಸಿ, ಕನ್ನಡ ಮಾಧ್ಯಮದ ಬೋಧನೆಗೆ ಸಂಬಂಧಿಸಿ, ಕಡ್ಡಾಯ ಶಿಕ್ಷಣಕ್ಕೆ ಸಂಬಂಧಿಸಿ, ಅತಿ ಹಳೆಯದಾದ ಎನ್‌ಟಿಎಂ ಕನ್ನಡ ಶಾಲೆಯನ್ನು ಉಳಿಸುವುದಕ್ಕಾಗಿ ಮಾಡಿದ ಹೋರಾಟ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆಯೇ ವಿನಾ ಕನ್ನಡಕ್ಕಾಗಿ ಮಾಡಿದ ಹೋರಾಟ ಇಲ್ಲಿಗೆ ಮುಗಿಯಿತು ಎಂದು ಹೇಳುವಂತಿಲ್ಲ. ಕನ್ನಡ ಶಾಲೆ ಹೀಗಿರಬೇಕು ಎನ್ನುವಂತೆ ಮಾದರಿಯಾಗಿ ಕಟ್ಟಿ ತೋರಿಸಿದವರು.

ಪ್ರಾಥಮಿಕ ಹಂತದಲ್ಲಿ ‘ಇಂಗ್ಲಿಷನ್ನು ಒಂದು ಭಾಷೆಯಾಗಿ ಬೋಧಿಸುವುದು ತಪ್ಪಲ್ಲ’ ಎಂದು ಆರಂಭದಲ್ಲಿ ನಾನು ಮಂಡಿಸಿದ ವಿಚಾರ ಸಂಚಲನವನ್ನೇ ಸೃಷ್ಟಿ ಮಾಡಿತು. ಆಗ ಪ.ಮಲ್ಲೇಶ್, ಜಿ.ಎಚ್.ನಾಯಕ ಅವರಂತಹ ಹಿರಿಯರು ಹಾಗೂ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳನ್ನು ಕಟ್ಟಿಕೊಂಡು ನಮ್ಮೊಳಗೆ ನಾವು ಮುಖಾಮುಖಿಯಾದ ಸಂದರ್ಭಗಳೂ ಇವೆ. ಕನ್ನಡ ಶಾಸ್ತ್ರೀಯ ಭಾಷೆಗೆ ಸಂಬಂಽಸಿದಂತೆ ನಡೆದ ಹೋರಾಟದ ಸಂದರ್ಭದಲ್ಲಿ ನಾನು ದೇ.ಜವರೇಗೌಡ ಅವರೊಂದಿಗೆ ಹೆಚ್ಚು ನಿಕಟವಾಗಿದ್ದೆ. ಆಗ ಕೆಲ ಸ್ನೇಹಿತರು ನನಗೆ ‘ಪಂಥ ಬದಲಾಯಿಸಿದ’ ಎಂದು ವ್ಯಂಗ್ಯ ಮಾಡಿದವರೂ ಇದ್ದಾರೆ. ಆದರೆ ಎನ್‌ಟಿಎಂ ಕನ್ನಡ ಶಾಲೆಗೆ ಸಂಬಂಧಿಸಿದ ಹೋರಾಟದಲ್ಲಿ ನಾನು ಜವರೇಗೌಡರ ಪರವಾಗಿ ನಿಲ್ಲದೆ ಪ.ಮಲ್ಲೇಶ್ ಅವರ ಜೊತೆಗೂಡಿ ನಿಂತೆ. ಆಗ ಇರುಸು-ಮುರುಸಿನ ಸಂದರ್ಭಗಳಲ್ಲಿ ಕಸಿವಿಸಿಗಳನ್ನು ಎದುರಿಸಿದ್ದೇನೆ. ಆದರೆ ಈ ಸಂದರ್ಭದಲ್ಲಿ ಕೆಲವರು ನೇರವಾಗಿ ಮಾತಿನಿಂದ, ಇನ್ನು ಕೆಲವರು ತಮ್ಮ ವರ್ತನೆಯಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದರು. ಈ ಸಂದರ್ಭಗಳಲ್ಲಿ ಪ.ಮಲ್ಲೇಶ್ ಅವರ ಇರುವಿಕೆ ತಟಸ್ಥವಾಗಿತ್ತು. ಅವರ ಇರುವಿಕೆಯಲ್ಲಿ ಯಾವ ಬದಲಾವಣೆಗಳೂ ಆಗುತ್ತಿರಲಿಲ್ಲ. ಇಂಥವುಗಳನ್ನು ಅವರು ತುಂಬಾ ಸಹಜವಾಗಿ ಸ್ವೀಕರಿಸುತ್ತಿದ್ದರು. ಮತ್ತು ಅಷ್ಟೇ ಸಲೀಸಾಗಿ ‘ಏನ್ರೀ ಬಂದ್ರಾ ಬನ್ನಿ’ ಎಂದು ಸಹಜತೆಯಿಂದ ಒಂದಾಗಿ ಬಿಡುತ್ತಿದ್ದರು. ಒಬ್ಬ ಹೋರಾಟಗಾರನಿಗೆ ಇರಬೇಕಾದ, ಒಳಗೊಳ್ಳಬೇಕಾದ ಹಾಗೂ ಇಂತಹ ಸಂದರ್ಭ ಸನ್ನಿವೇಶಗಳನ್ನು ಹೇಗೆ ನೋಡಬೇಕು, ಹೇಗೆ ಗ್ರಹಿಸಬೇಕು ಮತ್ತು ಭಿನ್ನಾಭಿಪ್ರಾಯಗಳೊಂದಿಗೂ ಇರುವಿಕೆಯನ್ನು ಹೋರಾಟದ ಪಥವನ್ನು ಹೇಗೆ ಮುನ್ನಡೆಸಬೇಕು ಎನ್ನುವುದನ್ನು ಬಲ್ಲವರಾಗಿದ್ದರು. ಒಬ್ಬ ಹೋರಾಟಗಾರನಿಗೆ ಇರಬೇಕಾದ ಈ ‘ಸಂಚಲನ ಗುಣ‘ ಅವರಲ್ಲಿ ನಾನು ವಿಶೇಷವಾಗಿ ಕಂಡಿದ್ದೇನೆ. ಅವರು ಹರಿತ ನಾಲಿಗೆಯ ನುರಿತ ಅನುಭವದ ಹೋರಾಟಗಾರರು ಎನ್ನುವುದನ್ನು ಇಂಥ ಸನ್ನಿವೇಶಗಳು ನನಗೆ ಸ್ಪಷ್ಟಪಡಿಸಿವೆ.

ಪ.ಮಲ್ಲೇಶ್ ಅವರು ನನಗೆ ತೀರಾ ಹತ್ತಿರವಾದದ್ದು ಕೋರ್ಟ್ ಕೇಸಿಗೆ ಸಂಬಂಧಿಸಿದ ಸನ್ನಿವೇಶದಲ್ಲಿ, ಇದು ಪ್ರಾಥಮಿಕ ಶಿಕ್ಷಣ ಹಂತದ ಮಾತೃಭಾಷಾ ಬೋಧನೆಗೆ ಸಂಬಂಧಿಸಿದಂತೆ ದೇವರಾಜ ಪೊಲೀಸ್ ಸ್ಟೇಷನ್ ಮೂಲಕ ದಾಖಲಾದದ್ದು. ಈ ಕೇಸಿನಲ್ಲಿ ‘ದೇವರಾಜ ಪೊಲೀಸ್ ಸ್ಟೇಷನ್ / ಪ.ಮಲ್ಲೇಶ’ ಎಂದೇ ಇದೆ. ಇದರಲ್ಲಿ ಒಟ್ಟು 21 ಜನ ಆರೋಪಿಗಳಿದ್ದೇವೆ. 2015ರಿಂದ ಈ ಕೇಸು ನಡೆಯುತ್ತಲಿದೆ. ತಿಂಗಳಿಗೆ /ಎರಡು ತಿಂಗಳಿಗೊಮ್ಮೆ ಎಡತಾಕುವ ಸಂದರ್ಭದಲ್ಲಿ ಪ.ಮಲ್ಲೇಶ್ ಅವರು ತುಂಬಾ ಹತ್ತಿರವಾದರು.

ಈ ಕೇಸಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ನಡೆದ ಒಂದು ಸ್ವಾರಸ್ಯಕರ ಸನ್ನಿವೇಶವನ್ನು ಇಲ್ಲಿ ಹಂಚಿಕೊಳ್ಳಬಹುದು ಎನಿಸುತ್ತಿದೆ. 2021ರ ಆರಂಭದ ಅವಧಿಯಲ್ಲಿ ಕೋರ್ಟಿಗೆ ಎಡತಾಕುವ ಕುರಿತು, ಕೇಸಿನ ಬೆಳವಣಿಗೆ ಆಗದೆ ಕುಂಠಿತವಾಗುತ್ತಿರುವ ಕುರಿತು ನಾವು ನೇರವಾಗಿ ನ್ಯಾಯಾಧಿಶರೊಂದಿಗೆ ಮಾತನಾಡಿ ಮನವಿ ಮಾಡಿಕೊಳ್ಳುವುದು ಸೂಕ್ತ ಎಂದು ಮಾತನಾಡಿ ಕೊಂಡೆವು. ಆಗ ನಮ್ಮ ವಕೀಲರು ಆರೋಪಿಗಳಾದವರು ನೇರವಾಗಿ ಹೀಗೆ ಮಾತನಾಡಲಾಗದು, ಹಾಗೆ ಮಾಡುವುದು ಸರಿಯಲ್ಲ ಎಂದು ಸೂಚಿಸಿದರು. ‘2015ರಿಂದ ಈ ಕೇಸಿಗಾಗಿ ಕೋರ್ಟಿಗೆ ಎಡತಾಕುತ್ತಿದ್ದೇವೆ, 21 ಜನ ಆರೋಪಿಗಳಲ್ಲಿ ಇಬ್ಬರು ತೀರಿಕೊಂಡರು. ಆದರೆ ಈ ಕೇಸಿನ ಅವಧಿ ಇನ್ನೂ ಎಷ್ಟು ದಿನ ಮುಂದುವರಿಯಬಹುದೋ…’ ಎಂದು ನ್ಯಾಯಾಧಿಶರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಂತೆ ಅವರು ನೇರವಾಗಿ ‘ನೀವೆಲ್ಲ ಏಕಕಾಲಕ್ಕೆ ಎಲ್ಲರೂ ಬಂದರೆ ನಾನು ಬೇಗ ಮುಗಿಸಬಹುದು….’ ಎನ್ನುವುದರೊಂದಿಗೆ ಕೆಲವು ಸಲಹೆಗಳನ್ನು ಕೊಟ್ಟರು. ಆಗಲೇ ಗೊತ್ತಾಗಿದ್ದು ನಮ್ಮ ಕೇಸಿನಲ್ಲಿದ್ದ ಕೊರತೆಗಳೇನು ಎನ್ನುವುದು. ನ್ಯಾಯಾಧಿಶರು ಮಹಿಳೆಯರಾದರೆ ತೋರುವ ಮಾತೃತ್ವದ ಹೃದಯ ಇದೆನಿಸಿತು. ಕೋರ್ಟಿನಲ್ಲಿ ಪ.ಮಲ್ಲೇಶ್, ನಾವು ಎಲ್ಲಾ ಹೋಗಿ ನ್ಯಾಯಾಧಿಶರ ಎದುರು ನೇರ ನಿಂತು ಮಾತನಾಡಿದ್ದು ಅಪರೂಪದ ಸನ್ನಿವೇಶವಾಗಿತ್ತು.

ಮಲ್ಲೇಶ್ ಅವರು ಹೋರಾಟದ ಗಾಥೆಗಳನ್ನು ಕೋರ್ಟಿನ ಬಿಡುವಿನ ಸಮಯದಲ್ಲಿ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ತುರ್ತು ಪರಿಸ್ಥಿತಿ-ಜೆಪಿ ಚಳವಳಿ ಹೋರಾಟದ ಸಂದರ್ಭ ಅವರ ಪ್ರಿಂಟಿಂಗ್ ಪ್ರೆಸ್‌ನ ಸನ್ನಿವೇಶಗಳು, ಮೌಢ್ಯ ವಿರೋಧಿ ಹೋರಾಟಗಾರ ನರಸಿಂಹಯ್ಯನವರು ಹಾಗೂ ಸಾಯಿಬಾಬಾ ಪ್ರಕರಣದ ಸಂಘರ್ಷದ ಸಂದರ್ಭ, ಗೋಕಾಕ್ ಚಳವಳಿಯ ಸಂದರ್ಭಗಳು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸ್ನೇಹ ಹಾಗೂ ಒಡನಾಟದ ಸಂದರ್ಭಗಳು ಹೀಗೆ ಒಂದಲ್ಲ, ಹತ್ತಾರು ಸಂಗತಿಗಳನ್ನು ಸಹಜವಾಗಿ ಮಾತಿನ ನಡುವೆ ಹಂಚಿಕೊಂಡಿದ್ದಾರೆ.

ಅವರಿಗೆ ನಾನು ಹಲವು ಬಾರಿ ಈ ಹೋರಾಟದ ಗಾಥೆಯನ್ನು ನೀವೇ ಬರೆಯಿರಿ ಎಂದು ಹೇಳಿದ್ದಿದೆ. ಗಾಂಧೀಜಿಯವರ ಕುರಿತು ಬರೆಯಬೇಕೆಂದಿದ್ದೆ, ಅದರ ಕೆಲಸ ಎಲ್ಲ ಮುಗಿದು ಹೋಗಿದೆ, ಇನ್ನು ಮುಂದೆ ಬರೆಯುತ್ತೇನೆ ಎಂದು ಹೇಳುತ್ತಿದ್ದರು. ಮತ್ತೆ ಸಿಕ್ಕಾಗ ನೆನಪಿಸಿದರೆ ಬರೆಯುತ್ತಿದ್ದೇನೆ ಎಂದು ಹೇಳಿದ್ದೂ ಇದೆ. ಅವರು ಬರೆದಿದ್ದಾರೋ, ಇಲ್ಲವೋ ಗೊತ್ತಿಲ್ಲ, ಬರೆದಿದ್ದರೆ ಅದು ಮಹತ್ವದ ಸ್ವಾತಂತ್ರೋತ್ತರ ಹೋರಾಟಗಾರನ ಕಥನವಾಗುವುದರಲ್ಲಿ ಸಂದೇಹವಿಲ್ಲ.

ಸಾಹಿತಿಗಳ ಸಾಧನೆಯ ಕುರಿತು ಅಭಿನಂದನಾ ಗ್ರಂಥಗಳು ವ್ಯಕ್ತಿ ಚಿತ್ರಗಳು ಪ್ರಕಟವಾಗುತ್ತವೆ. ಆದರೆ ಇಂಥ ಹೋರಾಟಗಾರರ ಹೋರಾಟದ ಕಥನಗಳು, ಗಾಥಾಗಳು, ವ್ಯಕ್ತಿ ಚಿತ್ರಗಳು, ಗ್ರಂಥ ರೂಪದಲ್ಲಿ ಹೊರಬರುವ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂಥ ಹೋರಾಟಗಾರರ ಅನನ್ಯ ಅನುಭವದ ಗ್ರಂಥಗಳನ್ನು ಹೊರ ತರಲು ಕಂಕಣ ಬದ್ಧವಾಗುವ ಅಗತ್ಯವಿದೆ. ಪ್ರಾಧಿಕಾರ ಇಂತಹ ಕಾರ್ಯ ಯೋಜನೆಯೊಂದನ್ನು ರೂಪಿಸಿ ಹೊಸ ಹೆಜ್ಜೆ ಇಡಬೇಕು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

34 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago