ನಮ್ಮ ನೀತಿ ಆಯೋಗವು (ಹಿಂದಿನ ಯೋಜನಾ ಆಯೋಗ) ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (united nations development programme undp ) ಮತ್ತು ಆಕ್ಸ್ -ರ್ಡ್ ಪವರ್ಟಿ ಆಂಡ್ ಹ್ಯೂಮನ್ ಡೆವಲಪ್‌ಮೆಂಟ್ ಇನೀಶಿಯೇಟಿವ್ (ಓಪಿಎಎಚ್‌ಡಿಐ) ಸಹಯೋಗದಲ್ಲಿ ತಯಾರಿಸಿರುವ ರಾಷ್ಟ್ರೀಯ ಬಹುವಿಧ ಮಾನದಂಡಗಳಾಧಾರಿತ ಬಡತನ ಸೂಚ್ಯಂಕದಂತೆ (national multidimentional poverty index ) ಭಾರತದಲ್ಲಿ 2015-16 ಮತ್ತು 2020-21ರ ನಡುವೆ 135 ಮಿಲಿಯನ್ ಜನರನ್ನು ಬಹುವಿಧ ಕಾರಣಗಳ ಬಡತನದಿಂದ ಮೇಲೆತ್ತಲಾಗಿದೆ. ಅಂದರೆ ಈ ಅವಧಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಬಹುವಿಧ ಕಾರಣಗಳಿಂದ ಬಡವರಾಗಿದ್ದವರ ಪ್ರಮಾಣ ಶೇ.24.85ರಿಂದ ಶೇ.14.96ಕ್ಕೆ ಇಳಿದಿದೆ. ಇದನ್ನು ಒಂದು ಉತ್ತಮ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.
ಯುಎನ್‌ಡಿಪಿ ಮಾದರಿಯನ್ನು ನಮ್ಮ ದೇಶದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿಕೊಂಡಿರುವ ನೀತಿ ಆಯೋಗವು 12 ಮಾನದಂಡಗಳನ್ನು ಹೊಂದಿರುವ ಮೊದಲ ಸೂಚ್ಯಂಕದ (ಎನ್‌ಎಂಪಿಐ) ವಿವರಗಳನ್ನು 2015-16ರಲ್ಲಿ ಪೂರ್ಣಗೊಂಡ ನಾಲ್ಕನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (national family health survey nfhs ) ಆಧಾರದ ಮೇಲೆ ಪ್ರಕಟಿಸಿತು. ನಂತರ ಐದನೇ ಎನ್‌ಎಫ್‌ಎಚ್‌ಎಸ್ ಅಂಕಿಸಂಖ್ಯೆಗಳ ಆಧಾರದಂತೆ ಎರಡನೆಯ ಸೂಚ್ಯಂಕ ವಿವರಗಳನ್ನು 2020-21ರಲ್ಲಿ ಪೂರ್ಣಗೊಂಡ ಸಮೀಕ್ಷೆ) ಇತ್ತೀಚೆಗೆ ಪ್ರಕಟಿಸಿದೆ. ಸಮೀಕ್ಷೆಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ 707 ಜಿಲ್ಲೆಗಳಲ್ಲೂ ನಡೆಸಲ್ಪಟ್ಟಿವೆ.
ಎನ್‌ಎಂಪಿಐನಂತೆ ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 2015-16ರಲ್ಲಿ ಇದ್ದ ಬಡವರ ಸಂಖ್ಯೆ ಶೇ.32.59 ಆಗಿದ್ದರೆ ಅದು 2020-21ರಲ್ಲಿ ಶೇ.19.23ಕ್ಕೆ ಇಳಿದಿದೆ. ಇದೇ ಸಂಖ್ಯೆ ನಗರಗಳಲ್ಲಿ ಶೇ.8.65ರಿಂದ ಶೇ.5.27ಕ್ಕೆ ಇಳಿದಿದೆ. ನಗರಗಳಿಗಿಂತ ಹಳ್ಳಿಗಳಲ್ಲಿ ಬಡತನದಲ್ಲಿರುವವರ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ರಾಜ್ಯಗಳ ವಿಷಯಕ್ಕೆ ಬಂದರೆ ಕೇರಳದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಜನಸಂಖ್ಯೆಯ ಶೇ.0.55ರಷ್ಟು ಬಡವರಿದ್ದಾರೆ. ಬಿಹಾರದಲ್ಲಿ ವೇಗವಾಗಿ ಕಡಿಮೆಯಾಗುತ್ತಿದ್ದರೂ ಇನ್ನೂ ಶೇ.೩೪ರಷ್ಟು ಬಡವರಿದ್ದಾರೆ. ಹೆಚ್ಚು ಕಡಿಮೆ ಇದೇ ಸ್ಥಿತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳಗಳಲ್ಲಿಯೂ ಇದ್ದು, ಸರ್ಕಾರಗಳ ಬಡತನ ನಿರ್ಮೂಲನೆ ಯೋಜನೆಗಳು ಹಳ್ಳಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದು ಕಂಡುಬಂದಿದೆ. ಬಡವರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿರುವುದು ಇದಕ್ಕೆ ಒಂದು ಕಾರಣವಾಗಿರಬಹುದು.
ಎಂಪಿಐ ಮತ್ತು ಅದರ ಅವಶ್ಯಕತೆ
ಭಾರತದಲ್ಲಿ ಬಡತನದ ವಿರುದ್ಧ ಹೋರಾಟ ಆರಂಭವಾದಾಗಿನಿಂದಲೂ ಆದಾಯವೇ ಮಾನದಂಡವಾಗಿರುತ್ತದೆ. ಒಬ್ಬ ವ್ಯಕ್ತಿ ಮತ್ತು ಕುಟುಂಬ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಂಡು ಐಷಾರಾಮಿ ಅಥವಾ ಕೊರತೆ ಎರಡೂ ಇಲ್ಲದಂತೆ ಬದುಕಲು (subsistence level ) ಬೇಕಾಗುವಷ್ಟು ಅಂದಿನ ಬೆಲೆಗಳಲ್ಲಿ ಲೆಕ್ಕ ಹಾಕಿದ ಆದಾಯವನ್ನು ಕನಿಷ್ಠ ಆದಾಯವೆಂದು ಪರಿಗಣಿಸಿ ಅದಕ್ಕಿಂತ ಕೆಳಗಿನ ಆದಾಯದವರು ಬಡವರು ಎಂದು ಹೇಳಲಾಗುತ್ತಿತ್ತು. ಇದು ಇತರ ಬಡ ಮತ್ತು ಅಭಿವೃದ್ಧಿಶೀಲ ದೇಶಗಳಿಗೂ ಅನ್ವಯಿಸುತ್ತಿತ್ತು. ಇವರನ್ನು ಮೇಲೆತ್ತಲು ಸರ್ಕಾರಗಳು ಯೋಜನೆಗಳನ್ನು ರೂಪಿಸುವುದು ನಡೆದುಬಂದಿದೆ. ಅಲ್ಲಿ ಉಳಿದುಕೊಂಡವರು ಬಡತನ ರೇಖೆಯ ಕೆಳಗಿನವರು ಎನ್ನಲಾಗುತ್ತಿತ್ತು.
ದಿನ ಕಳೆದಂತೆ ಬಡತನವನ್ನು ಗುರುತಿಸಲು ಮತ್ತು ಅಳೆಯಲು ಆದಾಯ ಒಂದೇ ಮಾನದಂಡ ಸಾಲದು ಎನ್ನುವುದು ಸ್ಪಷ್ಟವಾಗತೊಡಗಿತು. ಯುಎನ್‌ಡಿಪಿ ಹಲವು ಅಧ್ಯಯನಗಳನ್ನು ಕೈಗೊಂಡು ಬೇರೆ ಬೇರೆ ದೇಶಗಳಲ್ಲಿ ಬಡತನದ ಬಹುವಿಧ ಕಾರಣಗಳನ್ನು ಗುರುತಿಸಿ ಅವುಗಳನ್ನೇ ಮಾನದಂಡಗಳಾಗಿ ಪರಿವರ್ತಿಸಿ ಬಹುವಿಧ ಮಾನದಂಡಗಳ ಬಡತನ ಸೂಚ್ಯಂಕ ರಚಿಸಿತು. ಆದಾಯ ಅವುಗಳಲ್ಲಿ ಒಂದಾಯಿತು. ಅದೇ ಮಲ್ಪಿಡೈಮೆನ್ಶನಲ್ ಪವರ್ಟಿ ಇಂಡೆಕ್ಸ್ (ಎಂಪಿಐ). ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕೊರತೆ, ಆಹಾರದಲ್ಲಿ ಪೋಷಕಾಂಶಗಳ ಕೊರತೆ, ವಾಸದ ಮನೆ ಇಲ್ಲದಿರುವಿಕೆ, ಸುರಕ್ಷಿತ ಇಂಧನ ಅಲಭ್ಯತೆ, ಅವಕಾಶಗಳು ಮತ್ತು ಸೌಲಭ್ಯಗಳ ಮಾಹಿತಿ ಕೊರತೆ ಮುಂತಾದ ಹಲವು ಕಾರಣಗಳು ಆದಾಯದ ಮೇಲೆ ಪರಿಣಾಮ ಬೀರುವುದಲ್ಲದೆ ಬಡತನದಲ್ಲಿಯೇ ಇರುವಂತೆ ಮಾಡುತ್ತವೆ ಎಂಬುದನ್ನು ಅರಿತ ಯುಎನ್‌ಡಿಪಿ, ಇವೆಲ್ಲ ಮಾನದಂಡಗಳನ್ನು ಸೇರಿಸಿ ಈ ಸೂಚ್ಯಂಕ ತಯಾರಿಸಿದೆ. ಜಾಗತಿಕವಾಗಿ ಬಡವರ ಸಂಖ್ಯೆ ಗುರುತಿಸುವುದಲ್ಲದೆ ಸುಧಾರಣೆಯ ಸಲಹೆಗಳನ್ನೂ ಕೊಡುತ್ತದೆ.
ಯಾವ ಮಾನದಂಡದಲ್ಲಿ ಯಾವ ದೇಶದಲ್ಲಿ ಎಷ್ಟು ಜನ ಬಡವರಿದ್ದಾರೆ ಮತ್ತು ಒಟ್ಟಾರೆ ಎಷ್ಟು ಬಡವರಿದ್ದಾರೆ ಎಂಬುದನ್ನು ಯುಎನ್‌ಡಿಪಿ ಹೇಳುತ್ತದೆ. ಇದರಿಂದ ಯಾವ ದೇಶ ಯಾವ ಮಾನದಂಡದಲ್ಲಿ ಮುಂದಿದೆ ಎಂಬುದೂ ತಿಳಿಯುತ್ತದೆ. ಹಿಂದುಳಿದ ದೇಶ ಸೂಕ್ತ ಕ್ರಮಗಳನ್ನೂ ಕೈಗೊಳ್ಳಬಹುದು. ಹೆಚ್ಚು ಬಡವರಿದ್ದ ದೇಶದಲ್ಲಿ ಹಲವು ಕಾರಣಗಳಿಂದ ಮಾನವ ಸಂಪನ್ಮೂಲದ ಉತ್ಪಾದಕತೆ (productivity) ಕಡಿಮೆಯಾಗಿ ಆ ದೇಶದ ಅಭಿವೃದ್ಧಿ ಕುಂಠಿತವಾಗಬಹುದು. ಆಗ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಇತರೆ ದೇಶಗಳು ಇದನ್ನು ಸರಿಪಡಿಸಲು ಸೂಕ್ತ ರೀತಿಯಲ್ಲಿ ಸಹಾಯ ಮಾಡಬೇಕಾಗುತ್ತದೆ. ಬಡತನ ಎಲ್ಲಿದ್ದರೂ ಅದು ಎಲ್ಲರಿಗೂ ಅಪಾಯಕಾರಿ. ಅಂತಾರಾಷ್ಟ್ರೀಯ ಸಹಕಾರ ಅಗತ್ಯ.
ಭಾರತದಲ್ಲಿಯೂ ಇಂಥದೊಂದು ಬಹುತೇಕ ಕಾರಣಗಳನ್ನು ಒಳಗೊಂಡ ಸೂಚ್ಯಂಕದ ಅವಶ್ಯಕತೆ ಇತ್ತು. ನೀತಿ ಆಯೋಗ ಆ ಕೊರತೆಯನ್ನು ತುಂಬಿದೆ. ಈಗಿರುವ ೧೨ ಮಾನದಂಡಗಳು ಬಹುತೇಕ ಸಮಸ್ಯೆಗಳನ್ನು ಒಳಗೊಂಡಿವೆ. ಇದು ಇನ್ನೂ ಸುಧಾರಿಸುತ್ತ ಹೋಗಬೇಕಾದದ್ದು ಅಗತ್ಯವಾಗಿದೆ. ಅಲ್ಲದೆ ಗುಣಾತ್ಮಕ (qualitative) ಅಂಶಗಳನ್ನೂ ಸೇರಿಸಬೇಕಾಗುತ್ತದೆ. ಉದಾಹರಣೆಗೆ, ಶಿಕ್ಷಣ ವಿಷಯದಲ್ಲಿ ಎಷ್ಟು ವರ್ಷ ಶಿಕ್ಷಣ ಪಡೆದಿದ್ದಾರೆ ಎಂಬ ಅಂಶವನ್ನು ಅಭಿವೃದ್ಧಿಯ ಸಂಕೇತವಾಗಿ ಸೇರಿಸಲಾಗಿದೆ. ಆದರೆ ಅದರಿಂದ ಎಷ್ಟು ಜ್ಞಾನ ಮತ್ತು ಉದ್ಯೋಗ (ವೃತ್ತಿ)ಕ್ಕಾಗಿ ಬೇಕಾಗುವ ಕೌಶಲಗಳನ್ನು ಪಡೆದಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಅದೇ ರೀತಿ ಮಕ್ಕಳಿಗೆ ಪೌಷ್ಟಿಕಾಂಶಗಳನ್ನು ಮತ್ತು ರೋಗ ನಿರೋಧಕ ಲಸಿಕೆ (ಚುಚ್ಚುಮದ್ದು)ಗಳನ್ನು ಒದಗಿಸಿರುವ ಅಂಕಿಸಂಖ್ಯೆಗಳಿದ್ದರೆ ಸಾಲದು. ಅವುಗಳು ಎಷ್ಟು ಜನ ಅವಶ್ಯವಿದ್ದವರಿಗೆ ತಲುಪಿವೆ ಮತ್ತು ಅದರಿಂದ ಎಷ್ಟು ಜನ ಸದೃಢ ಮಕ್ಕಳು ಬೆಳೆಯುತ್ತಾರೆ ಎಂಬುದೂ ಇಲ್ಲಿ ಅವಶ್ಯವಾಗುತ್ತವೆ.
ಇನ್ನೊಂದು ಅಂಶವೆಂದರೆ ಸಾಮಾಜಿಕ ಸಮಸ್ಯೆಗಳಾದ ಜಾತಿಭೇದ, ಲಿಂಗಭೇದ ಮತ್ತು ಬಣ್ಣ (ಪಾಶ್ಚಿಮಾತ್ಯ ದೇಶಗಳಲ್ಲಿ) ಮುಂತಾದವುಗಳೂ ಬಡತನಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಅವುಗಳನ್ನೂ ಸೂಚ್ಯಂಕದಲ್ಲಿ ಗಣನೆಗೆ ತೆಗೆದುಕೊಂಡು ಇನ್ನಷ್ಟು ಉಪಯುಕ್ತಗೊಳಿಸಬೇಕು.
ನಮ್ಮ ರಾಜ್ಯ ಸರ್ಕಾರಗಳು ತಮ್ಮಲ್ಲಿ ಯಾವ ಪ್ರದೇಶಗಳಲ್ಲಿ ಯಾವ ಮಾನದಂಡದಲ್ಲಿ ಹಿಂದುಳಿಯುವಿಕೆ ಇದೆಯೋ ಅದನ್ನು ಸರಿಪಡಿಸಲು ಸೂಕ್ತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಕೇಂದ್ರ ಸರ್ಕಾರವೂ ಒಟ್ಟಾರೆ ಅಭಿವೃದ್ಧಿಯ ಭಾಗವಾಗಿ ರಾಜ್ಯಗಳಲ್ಲಿ ಯಾವ ಮಾನದಂಡಗಳಲ್ಲಿ ಪ್ರಗತಿ ಕಡಿಮೆ ಇದೆಯೋ ಅವುಗಳಿಗೆ ಸಹಾಯ ಹಸ್ತದೊಡನೆ ಮಾರ್ಗದರ್ಶನವನ್ನೂ ಒದಗಿಸಬೇಕು. ಅಂತೂ ಎನ್‌ಎಂಪಿಐ ಬಡತನ ನಿರ್ಮೂಲನೆಯಲ್ಲಿ ಮುಖ್ಯ ಸಾಧನವಾಗಲಿದೆ.
ಟಿ.ನರಸೀಪುರ: ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಟಿ.ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ…
ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…
ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…