ಆಂದೋಲನ ವಿ4: 29 ಸೋಮವಾರ 2022

ಅವಳಿ ಕಟ್ಟಡಗಳನಾಶ!

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಸೇರಿದ ಅವಳಿ ಕಟ್ಟಡಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡಲಾಗಿದೆ. ೩೦ ಅಂತಸ್ತುಗಳ ಈ ಕಟ್ಟಡವನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ್ದರಿಂದ ಕಟ್ಟಡವನ್ನೇ ಹೊಡೆದುರುಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶವನ್ನು ಈಗ ಅನುಷ್ಠಾನ ಮಾಡಲಾಗಿದೆ. ಇಂತಹದ್ದೊಂದು ಬೃಹತ್ ಕಟ್ಟಡವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು. ಸುತ್ತಮುತ್ತಲೆಲ್ಲ ವಸತಿ ಪ್ರದೇಶಗಳಿವೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಕಟ್ಟಡ ನಾಶ ಮಾಡಲಾಗಿದೆ. ೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಅವಳಿ ಗೋಪುರಗಳ ನಾಶ ಮಾಡಲಿಕ್ಕೆ ಆಗಿರುವ ವೆಚ್ಚ ಸುಮಾರು ೨೦ ಕೋಟಿ ರೂಪಾಯಿಗಳು. ಈ ಪೈಕಿ ೫ ಕೋಟಿ ರೂಪಾಯಿಗಳನ್ನು ಅಕ್ರಮ ಎಸಗಿದ ಸೂಪರ್ ಟೆಕ್ ಕಂಪೆನಿಯೇ ನೀಡುತ್ತಿದೆ. ಉಳಿದ ೧೫ ಕೋಟಿ ರೂ.ಗಳನ್ನು ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿ ಸಂಗ್ರಹಿಸಲಾಗುತ್ತದೆ.


ಮೇಕಪ್ ಇಲ್ಲದ ಮೊದಲ ಸುಂದರಿ!

ಮೇಕಪ್ಪಿಲ್ಲದೇ ಮನೆಯಿಂದ ಹೊರಗೆ ಬರಲು ಅಳುಕುವ ಈ ಕಾಲದಲ್ಲಿ, ಸೌಂದರ್ಯ ಸ್ಪರ್ಧೆಗೆ ಹೋಗುವುದು ಸಾಧ್ಯವೇ? ಅಂತಹದ್ದೊಂದು ಅದ್ಭುತ ನಡೆದಿದೆ! ಇದು ನಡೆದಿದ್ದು ಲಂಡನ್‌ನಲ್ಲಿ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಪಾಲ್ಗೊಂಡ ೨೦ ವರ್ಷದ ಯುವತಿ ಮೇಕಪ್ಪೇ ಇಲ್ಲದೇ ಕ್ಯಾಟ್ ವಾಕ್ ಮಾಡಿ ತೀರ್ಪುಗಾರರ ಮನಗೆದ್ದು ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ. ಆಕೆ ಹೆಸರು ಮೆಲಿನಾ ರವೂಫ್. ಸಿಎನ್‌ಎನ್ ವರದಿ ಪ್ರಕಾರ, ಮೆಲಿನಾ ರವೂಫ್ ಸೆಮಿಫೈನಲ್ ಸ್ಪರ್ಧೆಯಲ್ಲಿ ಮೇಕಪ್ಪಿಲ್ಲದೇ ಹೆಜ್ಜೆ ಹಾಕಿದ್ದಾಳೆ. ಅಕ್ಟೋಬರ್ ತಿಂಗಳಲ್ಲಿ ಮಿಸ್ ಇಂಗ್ಲೆಂಡ್ ಅಂತಿಮ ಸ್ಪರ್ಧೆ ನಡೆಯಲಿದೆ. ಆ ಸ್ಪರ್ಧೆಯಲ್ಲೂ ಆಕೆ ಮೇಕಪ್ಪಿಲ್ಲದೇ ಕ್ಯಾಟ್ ವಾಕ್ ಮಾಡುತ್ತಾಳೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಆದರೆ, ಶತಮಾನದಷ್ಟು ಇತಿಹಾಸ ಇರುವ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಮೆಲಿನಾ ರಪೂಫ್ ಮೇಕಪ್ಪಿಲ್ಲದೇ ಸ್ಪರ್ಧಿಸಿ ಹೊಸ ಇತಿಹಾಸ ಬರೆದಿದ್ದಾಳೆ! ಆಕೆಯ ಸೌಂದರ್ಯಕ್ಕಿಂತ ಆಕೆಯ ಆತ್ಮವಿಶ್ವಾಸಕ್ಕೆ ಬಹಳಷ್ಟು ಜನರು ಮನಸೋತಿದ್ದಾರೆ. ಮೇಕಪ್ ಸುಂದರಿಯರಿಗೆ ಈರ್ಷೆ ಆಗಿದ್ದರೆ ಅದು ಅಸಹಜವೇನಲ್ಲ ಬಿಡಿ!


ಟಿಆರ್‌ಎಸ್- ಬಿಜೆಪಿ ಜಿದ್ದಾ ಜಿದ್ದಿ!

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮತ್ತು ಬಿಜೆಪಿ ನಡುವೆ ಮಾತಿನ ಯುದ್ಧ ಮುಗಿಯುತ್ತಲೇ ಇಲ್ಲ. ಆರೋಪ ಪ್ರತ್ಯಾರೋಪಗಳ ಸರಣಿ ಮುಂದುವರಿದೇ ಇದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ ನಂತರ ಬಿಜೆಪಿ ಪ್ರತಿದಾಳಿ ಆರಂಭಿಸಿದೆ. ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಉಭಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇವೆ. ಇದು ಪರಸ್ಪರ ನಿಂದನೆಯ ಮಟ್ಟಕ್ಕೂ ಇಳಿದಿದೆ. ಇತ್ತೀಚಿನ ಆರೋಪ ಎಂದರೆ, ಟಿಆರ್‌ಎಸ್ ಸರ್ಕಾರವು ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಅಭಿವೃದ್ಧಿಗೆ ಬಳಸದೇ ಬೇರೆ ಉದ್ದೇಶಕ್ಕೆ ಬಳಸುತ್ತಿದೆ ಎಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಬಿಜೆಪಿ ದೇಶದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ, ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿದೆ. ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ಆರೋಪ – ಪ್ರತ್ಯಾರೋಪ ನಿರೀಕ್ಷಿಸಬಹುದು.


ಸಾಲದ ಸುಳಿಯಲ್ಲಿ ಮೋದಿ ಆಪ್ತ ಉದ್ಯಮಿ

ಎಂಟು ವರ್ಷಗಳ ಹಿಂದೆ ಶ್ರೀಮಂತರ ಪಟ್ಟಿಯಲ್ಲಿ ಹೆಸರೇ ಇಲ್ಲದ ಅದಾನಿ ಸಮೂಹದ ಗೌತಮ್ ಅದಾನಿ ಈಗ ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಇವರ ಸಂಪತ್ತು ಕ್ಷಿಪ್ರವೇಗದಲ್ಲಿ ವೃದ್ದಿಸಿದೆ. ಮೋದಿ ಸರ್ಕಾರ ಅವಧಿಯಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಸಿಕ್ಕಸಿಕ್ಕದ್ದನ್ನೆಲ್ಲ ಖರೀದಿ ಮಾಡಿದ್ದಾರೆ. ಭಾರತ ಸರ್ಕಾರದ ಹಲವು ವಿಮಾನ ನಿಲ್ದಾಣಗಳೀಗ ಅದಾನಿ ಸಮೂಹಕ್ಕೆ ಸೇರಿವೆ. ಇಂತಹ ಗೌತಮ್ ಅದಾನಿ ಅವರ ಕಂಪೆನಿಗಳು ತೀವ್ರವಾದ ಸಾಲ ಮಾಡಿವೆ. ಈ ಬೃಹತ್ ಸಾಲ ತೀರಿಸುವುದು ಕಷ್ಟವೆಂದು ಎಸ್‌ಅಂಡ್‌ಪಿ ಜಾಗತಿಕ ರೇಟಿಂಗ್ ಏಜೆನ್ಸಿ ತಿಳಿಸಿದೆ. ೨,೧೮,೨೭೧ ಕೋಟಿ ರೂಪಾಯಿ ಸಾಲದ ಹೊರೆ ಅದಾನಿ ಕಂಪೆನಿಗಳ ಮೇಲಿದೆ. ದೇಶದ ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪೆನಿಗಳೂ ಸಾಲ ಮಾಡುತ್ತವೆ, ತೀರಿಸುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಅದಾನಿ ಸಮೂಹದ ಕಂಪೆನಿಗಳು ಮಾಡಿರುವ ಸಾಲ ತೀರಿಸಲು ಕಷ್ಟ ಸಾಧ್ಯ ಅಥವಾ ತೀರಿಸಲು ಸಾಧ್ಯವೇ ಆಗುವುದಿಲ್ಲ ಎಂಬುದು ರೇಟಿಂಗ್ ಏಜೆನ್ಸಿಯ ಅಂದಾಜು. ಸಾಲ ತೀರಿಸಲಾಗದಿದ್ದರೆ, ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ ಎಂಬ ವಿಶ್ವಾಸ ಅದಾನಿ ಸಮೂಹಕ್ಕೆ ಇದ್ದಿರಬಹುದೇನೋ?

andolana

Recent Posts

ಮೈಸೂರು | 21 ರಂದು ಪಲ್ಸ್ ಪೋಲಿಯೋ ಅಭಿಯಾನ

ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…

8 mins ago

ವೈದ್ಯ, ನರ್ಸ್‌ ಹುದ್ದೆ ಭರ್ತಿಗೆ ಒಂದು ತಿಂಗಳೊಳಗೆ ಕ್ರಮ : ಆರೋಗ್ಯ ಸಚಿವ ಗುಂಡೂರಾವ್‌

ಬೆಳಗಾವಿ : ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ…

32 mins ago

ಸುಪ್ರೀಂಕೋರ್ಟ್‌ನಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನಡೆ

ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ…

1 hour ago

ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ: ಸಚಿವ ಕೆ.ಎಚ್.ಮುನಿಯಪ್ಪ

ಬೆಳಗಾವಿ: ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…

2 hours ago

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

3 hours ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

3 hours ago