ಎಡಿಟೋರಿಯಲ್

ಸಂಪಾದಕೀಯ : ಕುಂಭಮೇಳ, ದಸರಾಗೆ ಜಿಲ್ಲಾಡಳಿತ ಆಸಕ್ತಿ; ಮಳೆ ಹಾನಿ ಪರಿಹಾರ ಕಾಮಗಾರಿಗಳಿಗೆ ನಿರಾಸಕ್ತಿ

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ವರುಣಾರ್ಭಟಕ್ಕೆ ಬಹುತೇಕ ಗ್ರಾಮೀಣ ರಸ್ತೆಗಳು ಛಿದ್ರಗೊಂಡಿವೆ. ರಸ್ತೆ ಸಂಪರ್ಕ ಸೇತುವೆಗಳು ಕುಸಿದಿವೆ. ಲಾರಿಗಳು ಎತ್ತಿನಗಾಡಿಗಳು ಓಡಾಡಲಾಗದ ಸ್ಥಿತಿಯಲ್ಲಿವೆ. ಇದರಿಂದ ಕಬ್ಬು ಸಾಗಣೆಗೆ ರೈತರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುವ ಕೆಲಸವೂ ಜಿಲ್ಲಾಡಳಿತದಿಂದ ನಡೆಯುತ್ತಿಲ್ಲ. ಸರ್ಕಾರವೂ ರಸ್ತೆಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವನ್ನೂ ನೀಡುತ್ತಿಲ್ಲ. ಇರುವ ಹಣವನ್ನು ಬಳಸಿಕೊಂಡು ರಸ್ತೆಗಳನ್ನು ಸರಿಪಡಿಸಲು ಜಿಲ್ಲಾಡಳಿತ ಆಸಕ್ತಿ ತೋರಿಸುತ್ತಿಲ್ಲ. ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ ನಡೆಸಲು ಉದ್ದೇಶಿಸಿರುವ ಕುಂಭಮೇಳ, ಶ್ರೀರಂಗಪಟ್ಟಣ ದಸರಾ ಕಡೆಗೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಇಲಾಖಾ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ, ಆಸಕ್ತಿ ವಹಿಸಿರುವುದು ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿವೆ. ಕಟಾವಿಗೆ ಬಂದಿರುವ ಕಬ್ಬನ್ನು ಸಾಗಣೆ ಮಾಡುವುದು ರೈತರಿಗೆ ದೊಡ್ಡ ತಲೆನೋವಾಗಿದೆ. ಕೆಲವು ಕೆಡೆಗಳಲ್ಲಿ ಗದ್ದೆಗಳ ಬಳಿಗೆ ಲಾರಿಗಳು, ಎತ್ತಿನಗಾಡಿ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಖಾಲಿ ಲಾರಿ ಮತ್ತು ಎತ್ತಿನಗಾಡಿ ಹೋದರೂ ಮಣ್ಣಿನಲ್ಲಿ ಹೂತುಕೊಳ್ಳುತ್ತಿವೆ. ಹೀಗಾಗಿ ಕಬ್ಬು ಸಾಗಣೆ ಮಾಡುವುದು ದುಸ್ತರವಾಗಿದೆ. ಕಬ್ಬು ಕಟಾವು ಮಾಡಿದ ಸ್ಥಳದಿಂದ ರಸ್ತೆಗಳು ಸುಸ್ಥಿತಿಯಲ್ಲಿರುವ ಕಡೆಗೆ ಕಬ್ಬನ್ನು ಹೊತ್ತು ತರಬೇಕಿದೆ. ಅದಕ್ಕಾಗಿ ಎತ್ತಿನ ಗಾಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅರ್ಧ ಟನ್‌ನಿಂದ ಒಂದು ಟನ್‌ವರೆಗೆ ಕಬ್ಬನ್ನು ತುಂಬಿಕೊಂಡು ಬಂದು ಹಾಕಬೇಕಿದೆ. ಅಲ್ಲಿಂದ ಲಾರಿಗಳಿಗೆ ಕಬ್ಬನ್ನು ತುಂಬಿಸಿಕೊಂಡು ಕಾರ್ಖಾನೆಗಳಿಗೆ ಸಾಗಿಸಬೇಕು. ಇದರಿಂದ ರೈತರಿಗೆ ಹೆಚ್ಚು ಖರ್ಚಾಗುತ್ತಿದೆ.
ಹಲವು ಕಡೆ ಸಂಪರ್ಕ ರಸ್ತೆಗಳು ಕುಸಿದುಬಿದ್ದಿವೆ. ಹೀಗಾಗಿ ಹಲವು ಕಿ.ಮೀ. ಬಳಸಿಕೊಂಡು ಬರಬೇಕಾದಂತಹ ಸ್ಥಿತಿ ಇದೆ. ಇದೂ ಸಹ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಸಾಗಣೆ ಬಾಡಿಗೆ ಏರಿದ್ದು, ಕಬ್ಬು ಬೆಳೆ ಉತ್ತಮವಾಗಿ ಬಂದರೂ ವೆಚ್ಚ ಹೆಚ್ಚಾಗಿರುವುದರಿಂದ ಲಾಭ ನೋಡಲಾಗದಂತಹ ದೌರ್ಭಾಗ್ಯ ರೈತರದ್ದಾಗಿದೆ.
ಹಿಂದೆ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಮಾರಾಟದಿಂದ ಬರುತ್ತಿದ್ದ ಹಣದಲ್ಲಿ ಶೇ.೨ರಷ್ಟು ಹಣವನ್ನು ಆಯಾ ಕಾರ್ಖಾನೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ನೀಡುತ್ತಿದ್ದವು. ಈ ಹಣ ನೇರವಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಣೆಗೊಳ್ಳುತ್ತಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಸಾಗಣೆಗೆ ತೊಂದರೆಯಾಗಿರುವ ರಸ್ತೆಗಳು, ಸಂಪರ್ಕ ರಸ್ತೆಗಳು, ಎತ್ತಿನಗಾಡಿ ರಸ್ತೆಗಳ ಬಗ್ಗೆ ರೈತರಿಂದ ಬಂದ ಮನವಿಗಳನ್ನು ಪರಿಗಣಿಸಿ ಆದ್ಯತೆಯ ಮೇರೆಗೆ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಈ ರಸ್ತೆಗಳ ಅಭಿವೃದ್ಧಿಗೆ ಸರ್ಕಾರವನ್ನು ಎದುರುನೋಡಬೇಕಾದ ಪರಿಸ್ಥಿತಿಯೇ ಇರಲಿಲ್ಲ.
ಇದೀಗ ಸಕ್ಕರೆ ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿ ವಿಧಿಸಿರುವುದರಿಂದ ಸೆಸ್ ಹಣ ಸಿಗದಂತಾಗಿದೆ. ಇದರೊಂದಿಗೆ ಕಬ್ಬು ಸಾಗಿಸುವ ರಸ್ತೆಗಳ ಅಭಿವೃದ್ಧಿಗೆ ಸಿಗುತ್ತಿದ್ದ ಹಣವೂ ಸಿಗದಂತಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳಿಲ್ಲದೆ ಒಂದು ವರ್ಷವಾಗಿದೆ. ಜಿ.ಪಂ., ತಾ.ಪಂ. ಚುನಾವಣೆ ನಡೆಯುವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಬಿಡುಗಡೆಯಾಗುತ್ತಿದ್ದ ಅನುದಾನವೂ ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಗೆ ನೀಡುತ್ತಿದ್ದ ಅನುದಾನದಿಂದ ಒಂದಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದವು. ಒಂದು ವರ್ಷದಿಂದ ಆಡಳಿತಾಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದು, ಹಳ್ಳಿ ರಸ್ತೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ಕೊರೊನಾ ಬಂದ ಸಮಯದಿಂದಲೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ಜನಪ್ರತಿನಿಧಿಗಳಿಲ್ಲದೆ ಗ್ರಾಮೀಣ ರಸ್ತೆಗಳ ದುಸ್ಥಿತಿಯ ಬಗ್ಗೆ ಹಳ್ಳಿ ಜನರು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ. ಶಾಸಕರ ಅನುದಾನವಿದ್ದರೂ ಎಲ್ಲವನ್ನೂ ರಸ್ತೆಗಳ ಅಭಿವೃದ್ಧಿಗೆ ನೀಡಲು ಅವಕಾಶವಿಲ್ಲ. ವರುಣಾರ್ಭ ಟದಿಂದ ಬಹುತೇಕ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮೀಣ ರಸ್ತೆಗಳೇ ಹಾನಿಗೊಳಗಾಗಿವೆ. ಆದರೂ, ಈ ರಸ್ತೆಗಳ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಸೊಲ್ಲೆತ್ತುತ್ತಿಲ್ಲ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ಮಳೆಯಿಂದ ಸಂಪೂರ್ಣ ಗುಂಡಿಮಯವಾಗಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಇಲಾಖೆ ಅಧಿಕಾರಿಗಳು ಯಾವ ಕಾಮಗಾರಿಯನ್ನೂ ಕೈಗೊಳ್ಳುತ್ತಿಲ್ಲ. ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಸಚಿವರು, ಸರ್ಕಾರದ ಉನ್ನತಾಧಿಕಾರಿಗಳು ವೀಕ್ಷಿಸಿಕೊಂಡು ಹೋಗುತ್ತಿದ್ದಾರೆಯೇ ವಿನಾ ಹಣ ಬಿಡುಗಡೆಗೊಳಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ. ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ತಡೆಯುವ ಕಡೆಗೆ ಆಸಕ್ತಿ ತೋರಬೇಕಾದ ಅಧಿಕಾರಿಗಳು ಕುಂಭಮೇಳ, ಶ್ರೀರಂಗಪಟ್ಟಣ ದಸರಾ ವಿಜೃಂಭಣೆಯಿಂದ ಆಚರಿಸಲು ಮುತುವರ್ಜಿ ವಹಿಸುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅಂಬಿಗರಹಳ್ಳಿ ಕುಂಭಮೇಳ ಕಳೆದ ಏಳೆಂಟು ವರ್ಷಗಳಿಂದ ನಡೆದಿಲ್ಲ. ಅದನ್ನು ಈಗ ನಡೆಸುತ್ತಿರುವ ಉದ್ದೇಶ, ಅನಿವಾರ್ಯತೆ ಏನೆಂಬುದು ಯಾರಿಗೂ ಗೊತ್ತಿಲ್ಲ. ಶ್ರೀರಂಗಪಟ್ಟಣ ದಸರಾವನ್ನು ಸರಳವಾಗಿ ಆಚರಿಸಿಕೊಂಡು ಅದಕ್ಕೆ ಖರ್ಚು ಮಾಡುವ ಕೋಟ್ಯಂತರ ರೂ. ಹಣದಿಂದ ಒಂದಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಕೆರೆಗಳನ್ನು ಸುಭದ್ರಗೊಳಿಸಿದ್ದರೆ ಎಷ್ಟೋ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ, ಮೇಳಗಳ ಮೇಲಾಟದಲ್ಲಿ ರೈತರು, ಕಬ್ಬು ಬೆಳೆಗಾರರ ಸಮಸ್ಯೆಗಳು ಗೌಣವಾಗಿವೆ.

andolanait

Share
Published by
andolanait

Recent Posts

10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು: ಗೊ.ರು.ಚ ಹಕ್ಕೊತ್ತಾಯ

ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…

10 mins ago

ಕಾರು ಪಲ್ಟಿ; ಇಬ್ಬರಿಗೆ ಗಾಯ

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…

24 mins ago

ಸಂವಿಧಾನ ವಿಧಿ 371(ಜೆ) ಅಡಿಯಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ: ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ‌ ಹಾಗೂ…

1 hour ago

ಕಾಂಗ್ರೆಸ್ ಸರ್ಕಾರದಲ್ಲಿ ಅಕ್ಷರಶಃ ಕರ್ನಾಟಕ ರೌಡಿಗಳ ರಾಜ್ಯವಾಗಿದೆ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು…

2 hours ago

ಸಿ.ಟಿ.ರವಿ ಬಂಧನ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ ಎಂದು…

3 hours ago

87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಜಗದ ಮೂಲೆ ಮೂಲೆಗೂ ಕನ್ನಡ ವಾಣಿ ಹರಡಲಿ: ಚಲುವರಾಯಸ್ವಾಮಿ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ…

3 hours ago