ಎಡಿಟೋರಿಯಲ್

ಸಂಪಾದಕೀಯ : ಸಂಭ್ರಮದ ಜತೆಗೇ ಸಂಕಷ್ಟವನ್ನೂ ತಂದ ಸುವರ್ಣಾವತಿ ಹೊಳೆ!

ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ೨ ಬಾರಿ ಭರ್ತಿಯಾದವು. ಆಗಸ್ಟ್ ಕೊನೆಯ ಮತ್ತು ಸೆಪ್ಟೆಂಬರ್ ಮೊದಲ ವಾರಗಳಲ್ಲಿ ಜಲಾಶಯಗಳಿಂದ ಅತಿ ಹೆಚ್ಚು ನೀರು ಸುವರ್ಣಾವತಿ ಹೊಳೆಯಲ್ಲಿ ಭೋರ್ಗರೆದು ಹರಿದು ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳ ಜನರ ಬದುಕನ್ನು ತಲ್ಲಣಗೊಳಿಸಿದೆ.

ಸುಮಾರು ೧೮ ವರ್ಷಗಳ ನಂತರ ಸುವರ್ಣಾವತಿ ಜಲಾಶಯದಿಂದ ೧೮ ಸಾವಿರ ಕ್ಯೂಸೆಕ್ಸ್ ಮತ್ತು ಚಿಕ್ಕಹೊಳೆ ಜಲಾಶಯದಿಂದ ೪೭೮೫ ಕ್ಯೂಸೆಕ್ಸ್ ನೀರನ್ನು ಸುವರ್ಣಾವತಿ ಹೊಳೆಗೆ ಹರಿಯ ಬಿಟ್ಟಿದ್ದು ಹೊಳೆ ದಂಡೆಯ ಜನರಿಗೆ ಅಚ್ಚರಿ ಮೂಡಿಸಿತ್ತು. ಜೊತೆಗೆ ಅನಾಹುತವನ್ನೂ ಸೃಷ್ಟಿಸಿದೆ. ಪ್ರಕೃತಿ ಮುನಿದರೆ ಏನಾಗಬಹುದು ಎಂಬುದನ್ನು ಹೊಳೆ ದಂಡೆಯ ಜನರು ಕಣ್ಣಾರೆ ಕಂಡಿದ್ದಾರೆ.
ವಿಪರ್ಯಾಸ ಎಂದರೆ ೨೦೧೬ನೇ ಸಾಲಿನಲ್ಲಿ ಮುಂಗಾರು ಮಳೆಯೇ ಬಾರಲಿಲ್ಲ. ೨೦೧೭ರಲ್ಲಿ ಹಿಂಗಾರು ಮಳೆಯೇ ಸುರಿಯಲಿಲ್ಲ; ಒಂದು ಬಗೆಯ ಕ್ಷಾಮ ತಲೆದೋರಿತ್ತು. ಆಗಾಗ ಮಳೆಯ ಕೊರತೆಯನ್ನು ಕಂಡಿದ್ದ ಜನರಿಗೆ  ಈ ಬಾರಿ ಮಹಾಮಳೆ ಕಂಡು ಸಂತೋಷಪಟ್ಟದ್ದು ಒಂದು ಕಡೆಯಾದರೆ, ಫಸಲು, ಮನೆ, ರಸ್ತೆ, ಸೇತುವೆ, ಕಟ್ಟಡಗಳಿಗೆ ಹಾನಿ, ಜನ ಜೀವನವನ್ನು ಘಾಸಿಗೊಳ್ಳಿಸಿದ್ದು ಮತ್ತೊಂದು ಕಡೆ.
ಕಳೆದ ಸೋಮವಾರ ಮತ್ತು ಮಂಗಳವಾರ ಸುವರ್ಣಾವತಿ ಹೊಳೆಯು ಭೋರ್ಗರೆದು ಹರಿದು ತನ್ನ ದಂಡೆಯಲ್ಲಿರುವ ಹೆಬ್ಬಸೂರು, ಚಂದಕವಾಡಿ, ಆಲೂರು, ಕಣ್ಣೇಗಾಲ, ಹೊಮ್ಮ, ಅಂಬಳೆ, ಕಂದಹಳ್ಳಿ, ಯಳಂದೂರು, ಗಣಿಗನೂರು, ಯರಿಯೂರು, ಮದ್ದೂರು, ಬೂದಿತಿಟ್ಟು, ಅಗರ, ಮಾಂಬಳ್ಳಿ ಗ್ರಾಮಗಳ ಬೀದಿಗಳಿಗೆ ನುಗ್ಗಿ ಜಲಾಘಾತ ನೀಡಿತ್ತು.
ಬೀದಿಗಳಿಗೆ ನುಗ್ಗಿದ ನೀರು ತಗ್ಗು ಪ್ರದೇಶದ ಮನೆಗಳಿಗೂ ನುಗ್ಗಿ ದಿನಸಿ ಪದಾರ್ಥಗಳನ್ನು ಹೊತ್ತುಕೊಂಡು ಹೋಯಿತು. ಹರಿವಿನ ರಭಸಕ್ಕೆ ಗೋಡೆಗಳನ್ನು ಕೊರೆದು ಹಾಕಿದೆ. ನೀರಿನ ಜತೆ ಸತ್ತ ಪ್ರಾಣಿಗಳ ಕಳೇಬರ ಬೀದಿಗಳಲ್ಲಿ ತೇಲಾಡಿವೆ. ನೀರು ಭತ್ತದ ಗದ್ದೆ, ತೆಂಗು, ಅಡಿಕೆ ತೋಟಗಳಿಗೆ ನುಗ್ಗಿ ಭತ್ತದ ಹೊಟ್ಲುಗಳನ್ನೇ ಕೊಚ್ಚಿ ಹಾಕಿದೆ. ತೋಟಗಳಲ್ಲಿ ಸಂಗ್ರಹಿಸಿದ್ದ ತೆಂಗಿನ ಮತ್ತು ಅಡಿಕೆ ಕಾಯಿಗಳನ್ನು ನೀರು ಸೆಳೆದುಕೊಂಡು ಹೋಯಿತು. ಈಜು ಗೊತ್ತಿದ್ದ ರೈತರು ನೀರಿಗೆ ಇಳಿದು ಕೈಗೆ ಸಿಕ್ಕಿದ್ದ ಅಲ್ಪ ಸ್ವಲ್ಪ ತೆಂಗಿನ ಕಾಯಿಗಳನ್ನು ಸಂಗ್ರಹಿಸಿದರು.
ಉಕ್ಕಿ ಹರಿದ ನೀರು ತೋಟಗಳಿಗೆ ನುಗ್ಗಿ ಬಾವಿಗಳು, ಪಂಪ್‌ಸೆಟ್ ಮೋಟಾರ್‌ಗಳನ್ನು ಮಣ್ಣು, ಕಸ, ಕಡ್ಡಿಗಳಿಂದ ಮುಚ್ಚಿ ಹಾಕಿದೆ. ಹೊಳೆ ದಂಡೆಯ ಬಹುತೇಕ ಜಮೀನುಗಳು ಕಪ್ಪು ಮಣ್ಣಿನಿಂದ ಕೂಡಿದ್ದು ಕೆಸರು ಗದ್ದೆಯಂತಾಗಿವೆ. ರೈತರು ಜಮೀನುಗಳತ್ತ ಕಾಲಿಡಲು ಸಾಧ್ಯವಾಗುತ್ತಿಲ್ಲ.
೨ ದಶಕಗಳ ಹಿಂದೆ ಇಂತಹ ಮಹಾಮಳೆ ಆಗಾಗ ಬಿದ್ದು ಸುವರ್ಣಾವತಿ ಹೊಳೆ ಉಕ್ಕಿ ಹರಿದು ಚಾಮರಾಜನಗರ ತಾಲ್ಲೂಕಿನ ೪-೫ ಗ್ರಾಮಗಳು ಮತ್ತು ಯಳಂದೂರು ತಾಲ್ಲೂಕಿನ ೯ ಗ್ರಾಮಗಳಿಗೆ ಜಲ ಗಂಡಾಂತರ ತರುತ್ತಿತ್ತು. ನಂತರ ಮಳೆ ಪ್ರಮಾಣ ಕಡಿಮೆಯಾಗಿ ೨ ಜಲಾಶಯಗಳೇ ಭರ್ತಿಯಾಗುತ್ತಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆಗೆ ನದಿಗಳು ಮತ್ತು ಜಲಪಾತಗಳು ಉಕ್ಕಿ ಹರಿದರೆ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿರುವ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳು ಮಾತ್ರ ತುಂಬುತ್ತಿರಲಿಲ್ಲ.  ಈ  ಜಲಾಶಯಗಳು ಬಿಳಿಗಿರಿರಂಗನಬೆಟ್ಟ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯಗಳ ಅಂಚಿನಲ್ಲಿವೆ. ನಿರಂತರವಾಗಿ ಅತಿ ಹೆಚ್ಚು ಮಳೆಯಾದರೆ ಬಿಳಿಗಿರಿರಂಗನಬೆಟ್ಟಗಳ ಸಾಲು, ದಿಂಬಂ ಘಾಟ್‌ನಿಂದ ನೀರು ಹರಿದು ಬಂದು ತುಂಬುತ್ತವೆ.
ಮಳೆಯ ಪ್ರಮಾಣ ಕಡಿಮೆಯಾಗಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದಾಗ ದಂಡೆಯಲ್ಲಿ ಜಮೀನು ಹೊಂದಿರುವವರು ಒತ್ತುವರಿ ಮಾಡಿದರು. ೮ ವರ್ಷಗಳ ಹಿಂದೆ ಮರಳು ತೆಗೆಯಲು ಅವಕಾಶವಿದ್ದಾಗ ಹೊಳೆಯ ಒಡಲನ್ನು ಬಗೆದು ಮರಳು ದಂಧೆ ನಡೆಸಲಾಗುತ್ತಿತ್ತು. ಜನರ ದುರಾಸೆಗೆ ಹೊಳೆಯ ವ್ಯಾಪ್ತಿ ಕಿರಿದಾಗುತ್ತ ಬಂತು. ಧಾರಾಕಾರ ಮಳೆಯಾಗಿ ಹೊಳೆ ಉಕ್ಕಿ ಹರಿಯುತ್ತಿದ್ದಂತೆ ನೀರು ತಗ್ಗು ಪ್ರದೇಶದ ತೋಟ, ಭತ್ತ, ಪಂಪ್‌ಸೆಟ್ ಜಮೀನುಗಳಿಗೆ ನುಗ್ಗಿದೆ. ಈಗಲೂ ಹೊಳೆಯ ಜಾಡನ್ನು ಹುಡುಕಿದರೆ ಯಾವುದೋ ದೊಡ್ಡ ಕಾಲುವೆಯಂತೆ ಕಾಣುತ್ತದೆ. ಅಕ್ಕಪಕ್ಕದ ಜನರು ಹೊಳೆಯ ಹಾದಿಯನ್ನು ಆಜುಬಾಜನ್ನೂ ಬಿಡದೆ ಒತ್ತುವರಿ ಮಾಡಿದ್ದಾರೆ. ಆದ್ದರಿಂದಲೇ ಫಸಲುಗಳಿಗೆ ಹಾನಿಯಾಗಿ  ಜನರು  ಸಂಕಷ್ಟ ಎದುರಿಸುತ್ತಿದ್ದಾರೆ.
ಮಳೆಯ ಪ್ರಮಾಣ ಕಡಿಮೆಯಾದ್ದರಿಂದಲೇ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹರಿದು ಕಬಿನಿ ಹೊಳೆ ಸೇರುತ್ತಿದ್ದ ಗುಂಡ್ಲು ಹೊಳೆ ನಾಪತ್ತೆಯಾಗಿದೆ. ೪೦ ವರ್ಷಗಳ ಹಿಂದೆ ಇದೇ ಗುಂಡ್ಲು ಹೊಳೆ ಗುಂಡ್ಲುಪೇಟೆ ತಾಲ್ಲೂಕಿನ ಕಸಬಾ ಮತ್ತು ಬೇಗೂರು ಹೋಬಳಿಯ ಗ್ರಾಮಗಳಲ್ಲಿ ಹರಿದು ಅಂತರ್ಜಲ ವೃದ್ಧಿಸಿ ಜನರ ಬದುಕನ್ನು ಹಸನು ಮಾಡಿತ್ತು. ಈಗ ಗುಂಡ್ಲು ಹೊಳೆ ನೆನಪು ಮಾತ್ರ. ಅಂತಹ ಸ್ಥಿತಿಯತ್ತಲೇ ಹೊರಳುತ್ತಿದ್ದ ಸುವರ್ಣಾವತಿ ಹೊಳೆ ಈ ವರ್ಷ ಭೋರ್ಗರೆದು ಹರಿದು ತನ್ನ ಜಾಡನ್ನು ವಿಸ್ತರಿಸಿಕೊಳ್ಳುತ್ತ ಸಾಗಿರುವುದು ಸಂಕಷ್ಟಗಳ ನಡುವೆಯೂ ಸಂತಸದ ಸಂಗತಿ.
andolanait

Recent Posts

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

11 mins ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

17 mins ago

ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 3 ವರ್ಷ ಜೈಲು ಜೊತೆಗೆ ದಂಡ : ಮಸೂದೆ ಮಂಡಿಸಿದ ರಾಜ್ಯ ಸರ್ಕಾರ

ಬೆಳಗಾವಿ : ಅನಿಷ್ಟ ಪದ್ಧತಿಯಾಗಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ…

25 mins ago

ಹನಗೂಡಿನಲ್ಲಿ ಹುಲಿ ದರ್ಶನ : ಭೀಮನೊಂದಿಗೆ ಕೂಂಬಿಂಗ್‌ ಆರಂಭ

ಹುಣಸೂರು : ಹನಗೋಡು ಹೋಬಳಿ ನಾಗಮಂಗಲ ಮತ್ತು ಮುತ್ತುರಾಯನಹೊಸಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ಅರಣ್ಯ ಇಲಾಖೆ ಬುಧವಾರ…

31 mins ago

ಬೋನಿಗೆ ಬಿದ್ದ ಗಂಡು ಚಿರತೆ : ಗ್ರಾಮಸ್ಥರ ಆತಂಕ ದೂರ

ತಿ.ನರಸೀಪುರ : ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಗುರುವಾರ 6 ವರ್ಷದ ಗಂಡು ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ.…

36 mins ago

ಗೋವಾ ಅವಘಡ : ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪಣಜಿ : ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್…

1 hour ago