ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 14 ಶನಿವಾರ 202

SBI ಶಾಖೆಯಲ್ಲಿ ಮಂದಗತಿ ವ್ಯವಹಾರ

ಮೈಸೂರಿನ ಕನಕದಾಸನಗರ ಮುಖ್ಯ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆ- ಇಂಡಿಯಾ ಶಾಖೆಯಲ್ಲಿ ಸಾರ್ವಜನಿಕರ ವ್ಯವಹಾರಗಳು ತುಂಬಾ ಮಂದಗತಿಯಲ್ಲಿ ಸಾಗುತ್ತಿವೆ. ಗ್ರಾಹಕರು ಸಣ್ಣ ಸಣ್ಣ ವಿಷಯವನ್ನು ಕೇಳಲು ಬಂದರೂ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇತ್ತೀಚೆಗೆ ನಾನು ಹೊಸ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ 20 ದಿನಗಳೇ ಕಳೆದು ಹೋಗಿವೆ. ಆದರೂ ಕಾರ್ಡ್ ಲಭ್ಯವಾಗಿಲ್ಲ. ಅಲ್ಲಿಗೆ ಹೋಗಿ ವಿಚಾರಿಸಿದಾಗ, ಮಣಿಪಾಲ್‌ನಿಂದ ಕಾರ್ಡ್ ಬರಬೇಕು. ಹಾಗಾಗಿ ಇನ್ನೂ 15 ದಿನಗಳವರೆಗೆ ಕಾಯಬೇಕು ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸಿದರು. ಬೇರೆ ಬ್ಯಾಂಕುಗಳಲ್ಲಿ ಎಟಿಎಂ ಕಾರ್ಡ್‌ನ್ನು ತಕ್ಷಣ ವಿತರಿಸುತ್ತಾರೆ. ಗ್ರಾಹಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಇನ್ನು ವಯೋಸಹಜ ಕಾಯಿಲೆಯಿಂದ ಬಳಲುವ ವಯೋವೃದ್ಧರು ಪೆನ್ಷನ್‌ಗೆ ಸಂಬಂಧಪಟ್ಟ ಅಥವಾ ಇನ್ಯಾವುದೇ ವಿಷಯ ಕೇಳಲು ಬಂದರೂ ಗಂಟೆಗಟ್ಟೆಲೇ ಕಾಯಬೇಕಾದ ಅನಿವಾರ್ಯತೆ ಈ ಬ್ಯಾಂಕಿನಲ್ಲಿ ಎದುರಾಗಿದೆ. ಗಣಕ ಯಂತ್ರ ವಿಭಾಗದಲ್ಲಿ ಸಾಕಷ್ಟು ಸಿಬ್ಬಂದಿ ಇದ್ದರೂ ಕೆಲಸ ಮಾತ್ರ ತ್ವರಿತ ಗತಿಯಲ್ಲಿ ಸಾಗದೇ ನಿಧಾನವಾಗಿ ಸಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದರೂ ಬ್ಯಾಂಕಿನಲ್ಲಿ ಯಾವುದೇ ರೀತಿ ಬದಲಾವಣೆ ಸಾಧ್ಯವಾಗಿಲ್ಲ. ಮುಂದಾದರೂ ಬ್ಯಾಂಕಿನ ಸಿಬ್ಬಂದಿ ಚುರುಕಾಗಿ, ಹೆಚ್ಚು ಸಮಯ ಕಾಯಿಸದೆ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು.


ವಿದೇಶಿ ವಿವಿಗಳಿಗೆ ಭಾರತದಲ್ಲಿ ಅವಕಾಶ ಸಲ್ಲದು

ತಕ್ಷಶಿಲಾ ವಿಶ್ವವಿದ್ಯಾನಿಲಯವು ವಿಶ್ವದ ಮೊದಲ ವಿಶ್ವವಿದ್ಯಾನಿಲಯವಾಗಿದೆ. ಪ್ರಪಂಚಕ್ಕೆ ಇಂತಹ ವ್ಯವಸ್ಥೆಯನ್ನು ಪರಿಚಯಿಸಿದಂತಹ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಹೀಗಿರುವಾಗ ವಿದೇಶಿ ವಿಶ್ವವಿದ್ಯಾನಿಲಯಗಳ ಅವಶ್ಯಕತೆ ನಮ್ಮ ದೇಶಕ್ಕೆ ಇಲ್ಲ. ವಿಶ್ವದ ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಸಾಲಿನಲ್ಲಿ ನಿಲ್ಲುವ ಭಾರತೀಯ ವಿಜ್ಞಾನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಂತಹ ಅನೇಕ ವಿಶ್ವವಿದ್ಯಾಲಯಗಳನ್ನು ಭಾರತ ಹೊಂದಿದೆ. ಈ ವಿಶ್ವವಿದ್ಯಾನಿಲಯಗಳು ನಮ್ಮ ದೇಶದಿಂದ ವಿದೇಶಗಳಲ್ಲಿಯೂ ಹೋಗಿ ಕ್ಯಾಂಪಸ್ ತೆರೆಯಲು ಸರ್ಕಾರ ಪೂರಕ ವ್ಯವಸ್ಥೆ ಮತ್ತು ಅವಕಾಶವನ್ನು ಮಾಡುವುದನ್ನು ಬಿಟ್ಟು, 2021ರಲ್ಲಿ 4.5 ಲಕ್ಷ ಜನರು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎಂಬ ಕಾರಣ ನೀಡಿ ನೂತನ ಶಿಕ್ಷಣ ನೀತಿ 2020ರ ಅಡಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್ ತೆರೆಯಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ. 2012ರಲ್ಲಿ ಅಂದಿನ ಮನಮೋಹನ್ ಸಿಂಗ್ ಸರ್ಕಾರ ವಿದೇಶಿ ವಿವಿಗಳಿಗೆ ಭಾರತದಲ್ಲಿ ಕ್ಯಾಂಪಸ್ ತೆರೆಯಲು ಅವಕಾಶ ಕೊಟ್ಟಾಗ ವಿಪಕ್ಷ ಸ್ಥಾನದಲ್ಲಿದ್ದ ಇದೇ ಬಿಜೆಪಿ ವಿರೋಧಿಸಿದ್ದು ಗಮನಾರ್ಹ. ಅಂದು ವಿರೋಽಸಿದ ಬಿಜೆಪಿ ಸರ್ಕಾರ ಇಂದು ಅವುಗಳನ್ನು ಸ್ವಾಗತಿಸಲು ಮುಂದಾಗಿದೆ. ನಮ್ಮ ಸಾಕಷ್ಟು ವಿಶ್ವವಿದ್ಯಾನಿಯಲಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸಿವೆ. ವಿದೇಶಗಳಿಂದಲೂ ನಮ್ಮಲ್ಲಿಗೆ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೀಗಿರುವಾಗ ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ತಮ್ಮ ಕ್ಯಾಂಪಸ್ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ.

ಹೃತೀನ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ, ಮೈಸೂರು.


ಗ್ರಂಥಾಲಯದ ಸಮಯ, ಸೌಲಭ್ಯ ಹೆಚ್ಚಿಸಿ

ಕೊಳ್ಳೇಗಾಲದಲ್ಲಿ ನಗರ ಕೇಂದ್ರ ಗ್ರಂಥಾಲಯವು ಪೀಸ್‌ಪಾರ್ಕ್ ಆವರಣದಲ್ಲಿ ಸ್ಥಾಪನೆಯಾಗಿ ದಶಕವೇ ಕಳೆದಿದೆ. ಇಲ್ಲಿ ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿದಿನ ವಿದ್ಯಾರ್ಥಿಗಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಓದುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ, ಗ್ರಂಥಾಲಯದಲ್ಲಿ ಮಾತ್ರ ಕುಡಿಯವ ನೀರಿನ ಸೌಲಭ್ಯವನ್ನು ಹೊರತು ಪಡಿಸಿ ಉಳಿದ ಯಾವುದೇ ಸೌಲಭ್ಯಗಳೂ ಓದುಗರಿಗೆ ಲಭ್ಯವಿಲ್ಲ. ಈ ಗ್ರಂಥಾಲಯದಲ್ಲಿ ಕುಳಿತು ಓದಲು ಆಸನಗಳ ಸಂಖ್ಯೆ ತೀರಾ ಕಡಿಮೆ ಇದೆಯಲ್ಲದೇ, ಓದಲು ಕೇವಲ ವಾರ್ತಾ ಪತ್ರಿಕೆಗಳು ಮಾತ್ರ ಇರುತ್ತವೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ಆಕಾಂಕ್ಷಿಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು ಇಲ್ಲಿ ಯಾವುದೇ ಸೂಕ್ತ ಪುಸ್ತಕಗಳು ಲಭ್ಯವಿಲ್ಲ. ಬದಲಿಗೆ ಬಹುತೇಕ ಎಲ್ಲ ಪುಸ್ತಕಗಳೂ 2-3 ವರ್ಷಗಳಷ್ಟು ಹಳೆಯವು. ಇದರ ಬಗ್ಗೆ ಗ್ರಂಥಪಾಲಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಂಥಾಲಯದ ಮತ್ತೊಂದು ಬಹುದೊಡ್ಡ ಸಮಸ್ಯೆ ಎಂದರೆ ಸಮಯದ ಕೊರತೆ. ತಾಲ್ಲೂಕು ಕೇಂದ್ರದ ಗ್ರಂಥಾಲಯದ ಸಮಯ ಬೆಳಿಗ್ಗೆ 8 ರಿಂದ 11 ಹಾಗೂ ಸಾಯಂಕಾಲ 4 ರಿಂದ ರಾತ್ರಿ 8 ಗಂಟೆಗೆ ಮಾತ್ರ ಸೀಮಿತವಾಗಿದೆ. ಇದರೊಂದಿಗೆ ಪ್ರತಿ ಸೋಮವಾರ ರಜೆ, ತಿಂಗಳ ಮೊದಲ ಮಂಗಳವಾರ ರಜೆ ಹಾಗೂ ೪ನೇ ಶನಿವಾರವು ರಜೆ ನಿಗದಿ ಮಾಡಿದ್ದು, ಓದುಗರಿಗೆ ಸೂಕ್ತ ಸಮಯವೇ ಸಿಗದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಬಗ್ಗೆ ಓದುಗರು ಅನೇಕ ಬಾರಿ ಸಂಬಂಧಪಟ್ಟ ಅಽಕಾರಿಗಳಿಗೆ ದೂರು ನೀಡಿ, ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಗ್ರಂಥಾಲಯ ತೆರೆಯುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಓದುಗರ ಅನುಕೂಲಕ್ಕೆ ತಕ್ಕಂತೆ ಕ್ರಮಕೈಗೊಳ್ಳಬೇಕು.

ದಿಲೀಪ್ ವೆಂಕಟೇಶ್, ಮುಡಿಗುಂಡಂ, ಕೊಳ್ಳೇಗಾಲ ತಾ.


ಯುವಪೀಳಿಗೆಗೆ ವಿವೇಕಾನಂದರು ಆದರ್ಶ

ಪುರಾತನ ಧರ್ಮಜ್ಞಾನವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿ ಕೊಡುವುದಕ್ಕಾಗಿ ಒಮ್ಮೆ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋಗೆ ಹೋಗುತ್ತಾರೆ. ಭಾರತದ ಧರ್ಮಸಾರ ದೊಂದಿಗೆ ಜಗತ್ತಿಗೆ ಭಾರತದ ಹಿರಿಮೆಯನ್ನು ಸಾರಿದರು. ಅವರಿಗೆ ಅಲ್ಲಿನ ಪತ್ರಕರ್ತರು ಪ್ರಶ್ನೆ ಕೇಳುತ್ತಾರೆ ‘ನಿಮ್ಮ ಹೆಸರಿಗೆ ಏನಾದರೂ ಅರ್ಥ ಇದೆಯೇ?’ ಅದಕ್ಕೆ ಸ್ವಾಮೀಜಿಯವರ ಉತ್ತರ, ‘ಈಗ ಜನ ನನ್ನನ್ನು ಕರೆಯುವುದು ಸ್ವಾಮಿ ವಿವೇಕಾನಂದ ಎಂದು. ಅಂದರೆ ಎಲ್ಲವನ್ನೂ ತ್ಯಜಿಸಿದವನು ಎಂದರ್ಥ. ವಿವೇಕಾನಂದ ಎಂಬುದು ನಾನಿಟ್ಟುಕೊಂಡ ಹೆಸರು. ಮನೆ ಬಿಟ್ಟ ಮೇಲೆ ಸನ್ಯಾಸಿಗಳು ಬೇರೆ ಹೆಸರನ್ನು ಇಟ್ಟುಕೊಳ್ಳುತ್ತಾರೆ’ ಎಂದು ಹೇಳುತ್ತಾರೆ. ಇದು ವಿವೇಕಾನಂದರದು ದೇಶಕ್ಕೋಸ್ಕರ ಸರ್ವಸ್ವವನ್ನೂ ತ್ಯಾಗ ಮಾಡಿದಂತಹ ಬದುಕು. ಇವರ ಮಾರ್ಗದರ್ಶನದ ಅನುಸರಣೆ ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ. ಯುವಪೀಳಿಗೆ ಸ್ವಾಮಿ ವಿವೇಕಾನಂದರ ಬದುಕಿನ ಸೂತ್ರದ ಒಂದಿಷ್ಟು ಭಾಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ದೇಶದ ಸಂಸ್ಕೃತಿ, ಪರಂಪರೆಗೆ ಕೊಡುಗೆ ನೀಡಬೇಕು.

ತೇಜಸ್ವಿನಿ ಹೆಗಡೆ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಹಲವು ತಿಂಗಳುಗಳ ಬಳಿಕ ಕನ್ನಡ ಚಿತ್ರಕ್ಕೆ ಚಿಂದಿ ರೇಟಿಂಗ್ಸ್‌

ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…

11 hours ago

ಮಂಡ್ಯ: ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…

12 hours ago

ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆ: ಶಾಸಕ ರವಿಕುಮಾರ್‌

ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್‌ ತಿಳಿಸಿದರು. ಮಂಡ್ಯ ತಾಲ್ಲೂಕಿನ…

12 hours ago

ನಾನು ಸಾಮಾಜಿಕ‌ ಬಹಿಷ್ಕಾರದ ಕ್ರೂರತೆ ನೋಡಿ ಬೆಳೆದವನು: ಪರಿಷತ್ ಸದಸ್ಯ ಕೆ ಶಿವಕುಮಾರ್

ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್‌ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…

12 hours ago

ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ: ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…

13 hours ago

2028ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…

13 hours ago