ಸರಳತೆಯ ಶ್ರೇಷ್ಠ ವ್ಯಕ್ತಿ
ಈ ಸಲದ ನಮ್ಮ ನಾಡ ಹಬ್ಬ ದಸರಾ ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬರುತ್ತಿರುವುದು ತುಂಬಾ ಸಂತಸದ ಸಂಗತಿ. ನಮ್ಮ ರಾಷ್ಟ್ರಪತಿಯವರು ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿ. ಸರಳತೆಯಲ್ಲಿ ಇರುವ ಶ್ರೇಷ್ಠತೆ ಆಡಂಬರದಲ್ಲಿ ಇಲ್ಲ ಎಂಬ ಮಾತಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ ನಮ್ಮ ರಾಷ್ಟ್ರಪತಿಯವರದು. ಮುಂದಿನ ದಿನಗಳಲ್ಲೂ ವಿವಿಧ ತರಹದಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ನಮ್ಮ ನಾಡ ಹಬ್ಬ ದಸರಾವನ್ನು ಉದ್ಘಾಟನೆ ಮಾಡಿಸುವ ಮೂಲಕ ನಮ್ಮ ಸರ್ಕಾರಗಳು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.
ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ
ಮೈಸೂರಿನ ಜಯನಗರದ ಗ್ರಂಥಾಲಯ ಮತ್ತು ಸಾರ್ವಜನಿಕ ಆಸ್ಪತ್ರೆ ಬಳಿ ಮುಖ್ಯ ರಸ್ತೆಯ ಎತ್ತರದ ಸಮಕ್ಕೆ ಪೇವ್‌ಮೆಂಟ್ ಬ್ಲಾಕ್‌ಗಳನ್ನು ಅಳವಡಿಸಿ ಪಾದಚಾರಿ ಮಾರ್ಗ ನಿರ್ಮಾಣವಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಯಾವುದೇ ಉಪಯೋಗವಾಗುವುದಿಲ್ಲ. ಕಾರಣ, ರಸ್ತೆಯ ವಾಹನಗಳು ಪಾದಚಾರಿ ಮಾರ್ಗದ ಮೇಲೆ ಯಾವುದೇ ತಡೆಯಿಲ್ಲದೆ ಸರಾಗವಾಗಿ ಚಲಿಸಬಹುದು. ಹಾಗೆಯೇ ಪಾದಚಾರಿಗಳಿಗೆಂದು ನಿರ್ಮಿಸಿರುವ ಪಥವನ್ನು ವಾಹನಗಳ ನಿಲ್ದಾಣವಾಗಿ ಬಳಸಿಕೊಳ್ಳುತ್ತಾರೆ. ರಸ್ತೆಯಿಂದ ಸ್ವಲ್ಪ ಎತ್ತರಕ್ಕೆ ಪಾದಚಾರಿ ಪಥವನ್ನು ನಿರ್ಮಾಣ ಮಾಡಬೇಕೆಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದ ಅಧಿಕಾರಿಗಳು ನಮ್ಮ ಪಾಲಿಕೆಯಲ್ಲಿ ಇದ್ದಾರೆಂಬುದು ನಮ್ಮ ದುರದೃಷ್ಠ. ಸಾಮಾನ್ಯರು ನೋಡಿದರೂ ಇದು ಅವೈಜ್ಞಾನಿಕ ಕಾಮಗಾರಿ ಎಂಬುದು ವೇದ್ಯವಾಗುತ್ತದೆ. ಆದ ಕಾರಣ ಮುಂದಿನ ಕಾಮಗಾರಿಗಳನ್ನು ಸರಿಯಾಗಿ ಮಾಡಿ. ಈಗಾಗಲೇ ಆಗಿರುವ ತಪ್ಪನ್ನು ಸರಿಪಡಿಸತಕ್ಕದ್ದು. ಇಲ್ಲವಾದಲ್ಲಿ ಪಾದಚಾರಿ ಮಾರ್ಗವೆಂದು ಪಾದಚಾರಿಗಳು ಚಲಿಸಿದರೆ ವಾಹನಗಳಿಂದ ಅಪಘಾತಕ್ಕೀಡಾಗುವುದು ಖಂಡಿತ.
-ಎಸ್.ರವಿ, ವಕೀಲ,ಮೈಸೂರು.
ನೇಮಕಾತಿ ಅನ್ಯಾಯ ಸರಿಪಡಿಸಿ
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪ್ರಸ್ತುತ ನಡೆಯುತ್ತಿರುವ ನೇಮಕಾತಿಯಲ್ಲಿ ಮೂಲ ರಾಜ್ಯಶಾಸ್ತ್ರ ವಿಷಯದ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುವಂತಹ ಆತಂಕವಿದೆ. ಕೆಲವು ಅಭ್ಯರ್ಥಿಗಳು ಪದವಿಯ ಹಂತದಲ್ಲಿ ಬಿ.ಇ ಮತ್ತು ಬಿ.ಎಸ್ಸಿ ವಿಷಯಗಳನ್ನು ಅಧ್ಯಯನ ಮಾಡಿ ನಂತರ ಸ್ನಾತಕೋತ್ತರ ಪದವಿಯನ್ನು ರಾಜ್ಯಶಾಸ್ತ ವಿಷಯದಲ್ಲಿ ಪಡೆದು ಬಳಿಕ ಕೆ.ಸೆಟ್ ಅಥವಾ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯನ್ನು ಬರೆದು ಆಯ್ಕೆಯಾಗುತ್ತಿದ್ದಾರೆ. ಇದರಿಂದ ಮೂಲ ರಾಜ್ಯಶಾಸ್ತ್ರ ವಿಷಯದಲ್ಲಿ ಆಳವಾದ ಜ್ಞಾನ ಪಡೆದು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಂತದಲ್ಲಿ ರಾಜ್ಯಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿರುವವರಿಗೆ ಅನ್ಯಾಯವಾಗುತ್ತಿದೆ. ಇದೇ ರೀತಿ ಆದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿರುವ ಸಾವಿರಾರು ಆಕಾಂಕ್ಷಿಗಳಿಗೆ ಹುದ್ದೆಗಳು ಕೈ ತಪ್ಪುವ ಅಪಾಯವಿದೆ.
-ಹುದ್ದೆ ವಂಚಿತ ಅಭ್ಯರ್ಥಿಗಳು.
‘ಗ್ರಾಹಕರಿಗೆ ಹೊರೆಯಾಗದಂತೆ’ ಅಂದ್ರೆ?!
ಕೆಲ ದಿನಗಳ ಹಿಂದಷ್ಟೇ ಕಹಾಮ ಅಧೀನದ ಹಾಲು ಒಕ್ಕೂಟಗಳು ಹೈನೋತ್ಪನ್ನಗಳಾದ ಪೇಡಾ, ಮೈಸೂರು ಪಾಕ್, ತುಪ್ಪ ಮತ್ತಿತರವುಗಳ ದರವನ್ನು ತೀವ್ರವಾಗಿ ಏರಿಸಿವೆ. ಇದೀಗ ಮತ್ತೊಮ್ಮೆ ಕಹಾಮ ಹಾಲಿನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಲು ನಿರ್ಧರಿಸಿದೆ. ಹಾಲು ಉತ್ಪಾದಕರ ಹಿತವನ್ನೇ ಮುಂದಿಟ್ಟುಕೊಂಡು, ‘ಗ್ರಾಹಕರಿಗೆ ಹೊರೆಯಾಗದಂತೆ’ ಎಂದು ಹೇಳುವ ಕಹಾಮ ಮತ್ತು ಸರ್ಕಾರ ಬೆಲೆ ಏರಿಕೆಯಲ್ಲಿ ಯಾವುದೇ ವ್ಯತ್ಯಯವಾದರೂ ಅದರಿಂದ ಗ್ರಾಹಕನಿಗೆ ಹೊರೆ ಎಂಬುದನ್ನೇ ಮರೆತಿವೆ. ಹಾಲಿನ ಬೆಲೆ ಲೀಟರಿಗೆ ನಾಲ್ಕೋ ಅಥವಾ ಮೂರೋ ರೂಪಾಯಿ ಜಾಸ್ತಿಯಾದರೂ, ಮತ್ತೊಮ್ಮೆ ಒಕ್ಕೂಟಗಳು ಉಪ ಉತ್ಪನ್ನಗಳ ಬೆಲೆ ಜಾಸ್ತಿಯಾಗುವುದಿಲ್ಲವೇ? ಈಗಾಗಲೇ
ಒಂದು ಕಪ್ ಕಾಫಿ, ಟೀಗೆ ಹದಿನೈದರಿಂದ ಇಪ್ಪತ್ತು ರೂ. ಇದೆ. ಹಾಲನ್ನು ಆಧರಿಸಿ ಮಾಡುವ ಸಿಹಿ ಖಾದ್ಯಗಳು, ತಿಂಡಿಗಳ ಬೆಲೆಯನ್ನು ಖಾಸಗಿ ಹೋಟೆಲ್‌ನವರು ಮತ್ತೆ ಜಾಸ್ತಿ ಮಾಡುವುದಿಲ್ಲವೇ? ಹೀಗೆ ಒಂದರ ಹಿಂದೆ ಮಗದೊಂದು ಏರಿಕೆಯಾಗುತ್ತಿದ್ದರೆ, ಇದು ಗ್ರಾಹಕರಿಗೆ ಹೊರೆಯಾಗುವುದಿಲ್ಲವೇ? ಕಹಾಮ ತನ್ನ ಅಧೀನ ಸಂಸ್ಥೆಗಳಿಗೆ ತಾನೇ ಸೂಚನೆ ಮತ್ತು ಠರಾವಿನ ಮಾದರಿ ಕಳುಹಿಸಿ, ನಂತರ ಹಾಲು ಉತ್ಪಾದಕರ ಒತ್ತಾಯ ಎಂದು ಹೇಳುತ್ತಾ, ಮತ್ತೊಂದೆಡೆ ‘ಗ್ರಾಹಕರಿಗೆ ಹೊರೆಯಾಗದಂತೆ’ ಎನ್ನುವುದು ಎಷ್ಟರ ಮಟ್ಟಿಗೆ ಸರಿ?
-ವಿಜಯ್ ಹೆಮ್ಮಿಗೆ, ಮೈಸೂರು